‘ಸತ್ತಿದ್ದು ಮಾನವೀಯತೆ’ ಕವನ

ಇನ್ನೆಲ್ಲಿಯ ನಿದ್ದೆ, ಎಲ್ಲಿಯ ನೆಮ್ಮದಿ… ಈ ಬದುಕುಳಿದ ಜೀವಕೆ?…ಮುಚ್ಚಿದ ಕಂಗಳಲಿ ನುಸುಳುವ ಸಾವಿನ ದೃಶ್ಯ… ಅಚ್ಚು (ಡಾ. ಅಶ್ವಿನಿ) ಅವರ ರಚನೆಯ ‘ಸತ್ತಿದ್ದು ಮಾನವೀಯತೆ’ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಕೊರೆವ ಚಳಿಗೆ ಮೈಯೊಡ್ಡಿ
ಕೈ ಕೈ ಹಿಡಿದು ಊರ ಸುತ್ತಿ
ಕಣ್ಣ ದೀಪದಲ್ಲಿ ನೂರು ಕನಸು ಹೊತ್ತು
ನೋಡ ಹೋದ ಕನಸಿನೂರಿನಲ್ಲಿ ಉಸಿರು ತೆತ್ತು
ದಿಕ್ಕು ಕಾಣದೆ ನೆಲಕ್ಕೆ ಕುಸಿದ ಸಂಗಾತಿ
ಎದೆ ನಡುಗಿ…ದುಃಖದ ಕಟ್ಟೆ ಒಡೆದು
ಮೂಡಿದೆ ಆಕ್ರಂದನ…

ಚೀರಿ ಹೇಳುತ್ತಿದೆ ಬದುಕುಳಿದ ಜೀವ
ನಿನ್ನ ಒಂದು ಉಸಿರಿಗೆ ನನ್ನೆಲ್ಲ ಉಸಿರ ನೀಡಿ ಬಿಡುವೆ
ನಿನ್ನ ದನಿಯಲಿ ಒಮ್ಮೆ ನನ್ನ ಹೆಸರ ಕರೆಯುವೆಯಾ?
ನಿಶ್ಚಲವಾಗಿ ಬಿದ್ದಿರುವ ನಿನ್ನ ಅಪ್ಪಿ ಮುತ್ತಿಡುವೆ
ಕೋಟಿ ಮುತ್ತಿಗೆ ಬದಲಾಗಿ ಒಂದು ಮುತ್ತು ನೀಡುವೆಯಾ?
ನನ್ನ ಆಲಿಂಗನಕೆ ಬದಲಾಗಿ
ಒಮ್ಮೆ ತಬ್ಬಿ ಹಿಡಿಯುವೆಯಾ?

ಇನ್ನೆಲ್ಲಿಯ ನಿದ್ದೆ
ಎಲ್ಲಿಯ ನೆಮ್ಮದಿ…
ಈ ಬದುಕುಳಿದ ಜೀವಕೆ?
ಮುಚ್ಚಿದ ಕಂಗಳಲಿ ನುಸುಳುವ ಸಾವಿನ ದೃಶ್ಯ
ಕಿವಿಗಪ್ಪಳಿಸುವ ನೋವಿನ ಚೀರಾಟ
ಎದೆ ನಡುಗಿ ಬೆವೆತು ಚಕ್ಕನೆದ್ದು ಕುಳಿತರೆ
ಕಾಡುವ ಕರಾಳ ರಾತ್ರಿಯ ನೀರವ ಮೌನ

ದಿನಗಳು ವಾರಗಳಾಗಿ,
ಮಾಸವಾಗಿ ವರ್ಷ ಕಳೆದರೂ
ಮಾಸಬಹುದೆ ನಿರಂತರ ಕಾಡುವ ಆ ದಿನದ ದುಸ್ವಪ್ನ?
ಚೀರಿ ಮನದ ದುಗುಡವ ಹೊರ ಹಾಕಬಹುದೇ?
ಕಂಬನಿಯ ಸಾಗರ ಹರಿದರೂ ದುಃಖ ಅಂತ್ಯವಾಗಬಹುದೇ
ಬಿಡುಗಡೆ ಉಂಟೆ ಆಘಾತದಿಂದ ?
ದಿನವೂ ಅನುಭವಿಸುವ ಸಾವಿನಿಂದ?

ಕೊಲ್ಲು ಎನ್ನುವ ಧರ್ಮ ಯಾವುದು?
ಹಗೆತನವ ಸಾರುವ ಜಾತಿ ಯಾವುದು?
ಭಯದಿ ಚೀರುವ ಆಕ್ರಂದನಕೆ
ಮರುಗದ ಮನ ಯಾವುದು?
ಪಿಸ್ತೂಲು ಹಿಡಿದು ಗುಂಡು ಹಾರಿಸುವ ಕ್ಷಣ
ನಡುಗದ ಕೈ ಯಾವುದು?

ನೋವಿಗೆ ಮರುಗದ
ಭಾವಕ್ಕೆ ಮಿಡಿಯದ
ಕೇವಲ ಹೃದಯ ಬಡಿತವಿರುವ
ಯಾಂತ್ರಿಕ ಗೊಂಬೆಗಳಾಗಿ ಬಿಟ್ಟರೆ
ಹರಿದು ಹೋಗುವ ರಕ್ತದ ನದಿಯ..
ತಡೆಯಲು ಸಾಧ್ಯವೇ?

ತಪ್ಪಿಲ್ಲದ ಜೀವಗಳ ನರಹತ್ಯೆಗೆ
ಧರ್ಮದ ಅಮಲಿಗೆ. ..
ಹುಚ್ಚು ಕ್ರೌರ್ಯಕ್ಕೆ…
ಅಂತ್ಯ ಉಂಟೆ?
ಎಂದಾದರೂ ಬಿತ್ತಬಹುದೇ?
ರಾಕ್ಷಸ ಮನಸುಗಳಲ್ಲಿ
ಮಾನವೀಯತೆಯ ಬೀಜ?

ಅಂತ:ಕರಣದ ಅರ್ಥ ಗೊತ್ತೇನು ಭಯೋತ್ಪಾದನೆಗೆ?
ದ್ವೇಷದ ಬಂಧೂಕಿನಿಂದ ಸಿಡಿದ ಗುಂಡು
ನೆಲಕ್ಕುರುಳಿಸಿ…ರಕ್ತದ ಕೋಡಿ ಹರಿಸಿ…
ಅಮಾನುಷವಾಗಿ ಕೊಂದದ್ದು ಮನುಷ್ಯರನ್ನುಷ್ಟೇ ಅಲ್ಲ. ..
ಮಾನವೀಯತೆಯನ್ನು…


  •  ಅಚ್ಚು (ಡಾ. ಅಶ್ವಿನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading