ಏಕಪಾತ್ರಾಭಿನಯ ನಾಟಕ : ‘ಶರ್ಮಿಷ್ಠೆ’

ಕರ್ನಾಟಕದ ಪ್ರತಿಷ್ಠಿತ ರಂಗ ತಂಡಗಳಲ್ಲಿ ಒಂದಾದ ರಂಗ ಸಂಪದ ಪ್ರಸ್ತುತಪಡಿಸಿರುವ ಏಕಪಾತ್ರಾಭಿನಯ ನಾಟಕ ‘ಶರ್ಮಿಷ್ಠ’. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ನಟಿ ಉಮಾಶ್ರೀ ಅವರ ಅಭಿನಯ ಅಮೋಘ. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ ಈ ನಾಟಕದ ಕುರಿತು ಡಾ. ಅಶ್ವಿನಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾಟಕ : ಶರ್ಮಿಷ್ಠೆ
ನಿರ್ದೇಶನ : ಚಿದಂಬರರಾವ್ ಜಂಬೆ
ಅಭಿನಯ : ಡಾ. ಉಮಾಶ್ರೀ
ತಂಡ : ರಂಗ ಸಂಪದ
ರಂಗ ರೂಪ  : ಬೇಲೂರು ರಘುನಂದನ್
ವಸ್ತ್ರ ವಿನ್ಯಾಸ : ಪ್ರಮೋದ್ ಶಿಗ್ಗಾವ್
ಬೆಳಕು ವಿನ್ಯಾಸ : ಅರುಣ್.

ಕರ್ನಾಟಕದ ಪ್ರತಿಷ್ಠಿತ ರಂಗ ತಂಡಗಳಲ್ಲಿ ಒಂದಾದ ರಂಗ ಸಂಪದ ಪ್ರಸ್ತುತಪಡಿಸಿರುವ ಏಕಪಾತ್ರಾಭಿನಯ ನಾಟಕ ಶರ್ಮಿಷ್ಠ’. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ ಈ ನಾಟಕವನ್ನು ನೋಡಿ ಆನಂದಿಸಿದ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಓದುಗರನ್ನು ಕಾಡುವ, ಚಿಂತೆಗೆ ಹಚ್ಚುವ, ಸಂಬಂಧಗಳ ನಡುವಿನ ಘರ್ಷಣೆಯನ್ನು, ಬದುಕು ತೆಗೆದುಕೊಳ್ಳುವ ಅನಿರೀಕ್ಷಿತ ತಿರುವುಗಳನ್ನು ಅದ್ಭುತವಾಗಿಯೇ ಕಟ್ಟಿಕೊಡುವ ನಾಟಕ ಯಯಾತಿ. ಈ ನಾಟಕದಲ್ಲಿ ಅತಿಯಾಗಿ ಜನರನ್ನು ಕಾಡುವ ಪಾತ್ರ ಶರ್ಮಿಷ್ಠೆಯದು. ಹೆಣ್ಣು ಪಾತ್ರಗಳ ಪಟ್ಟಿಯಲ್ಲಿ ನಮ್ಮನ್ನು ಸದಾ ಕಾಡುವ ಒಂದು ಪಾತ್ರ ಶರ್ಮಿಷ್ಠೆ’.

ಈ ನಾಟಕದ ಮೂಲಕ ಶರ್ಮಿಷ್ಠೆಯ ಅಂತರಂಗವನ್ನು ರಂಗದ ಮೇಲೆ ತರುವಲ್ಲಿ ನಿರ್ದೇಶನದ ಜವಾಬ್ದಾರಿ ಹೊತ್ತ ಚಿದಂಬರ ರಾವ್ ಜಂಬೆ ಅವರು ಯಶಸ್ವಿಯಾಗಿದ್ದಾರೆ. ಶರ್ಮಿಷ್ಠೆಯ ಬದುಕಿನ ಪ್ರಮುಖ ಕಾಲಘಟ್ಟಗಳನ್ನು ಜೋಡಿಸಿ, ಅಂದವಾಗಿ ಹೆಣೆದು ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಬಾಲಕಿಯಾಗಿ ಶರ್ಮಿಷ್ಠೆ, ದೇವಯಾನಿಯ ಗೆಳತಿಯಾಗಿ ಶರ್ಮಿಷ್ಠೆ , ಸಖಿಯಾಗಿ ಶರ್ಮಿಷ್ಠೆ ಮತ್ತು ತಾಯಿಯಾಗಿ ಶರ್ಮಿಷ್ಠೆ ಮನದ ಮಾತುಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ.

ರಾಜಕನ್ಯೆ ಯಾಗಿದ್ದವಳು ದೇವಯಾನಿಯ ದಾಸಿಯಾಗಿ ಬದುಕು ಸವೆಸುವುದು ಸುಲಭದ ಮಾತಲ್ಲ. ಬಾಲ್ಯದಿಂದಲೂ ಆಡಿಕೊಂಡು ಜೊತೆಗಿದ್ದ ಗೆಳತಿ ದೇವಯಾನಿ ರಾಣಿಯಾಗಿ ಮೆರೆಯುವಾಗ ಅವಳ ದಾಸಿಯಾಗಿ ಶರ್ಮಿಷ್ಠೆ ಅದೇ ಅರಮನೆಯಲ್ಲಿ ಕಾಲದೂಡುವುದು ಕಾಲ ಸೃಷ್ಟಿಸುವ ಅವಾಂತರಗಳಲ್ಲಿ ಒಂದು. ಶರ್ಮಿಷ್ಠೆ ಅನುಭವಿಸುವ ಅವಮಾನ, ಸಂಕಟ, ನೋವು, ಹತಾಶೆ, ಅವಳ ಕಣ್ಣೀರು, ನಿಟ್ಟುಸಿರು, ಅನಂತ ವೇದನೆ ಪಾತ್ರದ ಮಾತುಗಳ ಮೂಲಕ ಪ್ರೇಕ್ಷಕರ ಎದೆಯನ್ನು ತಲುಪುತ್ತದೆ. ಈರ್ಷ್ಯೆ, ಕಿಚ್ಚು, ಮೋಹ, ತಿರಸ್ಕಾರ, ಅವಮಾನ, ಅಧಿಕಾರದ ಹಪಾಹಪಿ ಹೇಗೆ ಮಾನವೀಯತೆಯ ಅಧ:ಪತನಕ್ಕೆ ನಾಂದಿ ಹಾಡಬಹುದು ಎಂಬುದು ಶರ್ಮಿಷ್ಠೆಯ ಮಾತುಗಳಲ್ಲಿ ಮೂಡಿಬಂದಿದೆ. ಆ ಮಾತುಗಳು ಸರ್ವಕಾಲಿಕ ಸತ್ಯ ಮತ್ತು ಪ್ರಸ್ತುತ.

ಕರ್ತವ್ಯವೆಂದು ಸ್ವೀಕರಿಸಿ ದಾಸಿಯಾಗಿ ತೆರಳಿದ ನಂತರವೂ, ಸಮಾಧಾನ ಮತ್ತು ಸಮಚಿತ್ತ ಶರ್ಮಿಷ್ಠೆಯ ಬಾಹ್ಯ ಮುಖ. ಆದರೆ ಅವಳ ಆಂತರ್ಯದ ವೇದನೆಗೆ, ನಗೆಯ ಹಿಂದಿನ ಅಳಲಿಗೆ, ಶಾಂತವಾಗಿ ಉರಿಯುವ ಹಣತೆಯಂತಿರುವ ಅವಳ ಒಳಗಿನ ಅಗ್ನಿಗೆ ಮನುಕುಲವನ್ನೇ ಸುಟ್ಟು ಬಿಡುವಷ್ಟು ಶಕ್ತಿ ಇದೆ. ರಾಜಕುಮಾರಿ ಶರ್ಮಿಷ್ಠೆ ದಾಸಿಯಾಗಿ ತೆರಳುವಾಗ ದುಃಖಿಸಿ ಸಂಕಟಪಡುವ ತಾಯಿಗೆ ತಾನೇ ಸಾಂತ್ವನ ಹೇಳುವ ಸಂದರ್ಭ, ಯಯಾತಿಯ ಸಖಿಯಾಗಿ ಅವಳ ವ್ಯಕ್ತಿತ್ವ, ತಾಯಿಯಾಗುವ ಸಂಭ್ರಮದ ಹಂತ, ಮಗನಿಂದಲೇ ಯೌವ್ವನವನ್ನು ಸ್ವೀಕರಿಸಿ ಮಗನನ್ನು ಮುಪ್ಪಿಗೆ ತಳ್ಳಿದ ಯಯಾತಿಯನ್ನು ಪ್ರಶ್ನಿಸುವ, ಧಿಕ್ಕರಿಸುವ ಅವಳ ದುಗುಡ, ಹೀಗೆ ನಾಟಕದುದ್ದಕ್ಕೂ ಶರ್ಮಿಷ್ಠೆಯ ವಿವಿಧ ಮುಖಗಳ ಪರಿಚಯವಾಗುತ್ತದೆ . ಶರ್ಮಿಷ್ಠೆಯ ಮಾತುಗಳು ಗಂಡು ಕುಲದ ಹುಚ್ಚಾಟಗಳನ್ನು, ಚಪಲಗಳನ್ನು ಬಿಚ್ಚಿಡುತ್ತದೆ. ಪುರುವಿನಿಂದ ಯೌವ್ವನವನ್ನು ಪಡೆದ ಯಯಾತಿಗೆ ಶರ್ಮಿಷ್ಠೆ ಕೇಳುವ, “ನಿಮ್ಮ ಆಸೆ ಸುಖ ಭೋಗಗಳಿಗೆ ಕಡಿಮೆ ಏನಾಗಿತ್ತು? ಎಷ್ಟು ವರ್ಷ ಬದುಕಿದರೆ ನಿಮ್ಮ ಸುಖ ಲೋಲುಪತೆಗಳು ತೀರೀತು? ” ಎಂಬ ಪ್ರಶ್ನೆ ಕೇವಲ ಯಯಾತಿಗೆ ಸೀಮಿತವಾದದ್ದಲ್ಲ. ಇವು ಮಾನವ ಕುಲವನ್ನು ಯೋಚನೆಗೆ ಹಚ್ಚುವ ಪ್ರಶ್ನೆಗಳಾಗಿವೆ. ಮನುಷ್ಯನ ಅಂತ್ಯವಿಲ್ಲದ ದುರಾಸೆಗೆ ಹಿಡಿದ ಕನ್ನಡಿಯಾಗಿದೆ.

This slideshow requires JavaScript.

 

ಇಡೀ ನಾಟಕದ ಶಕ್ತಿ ನಟಿ ಉಮಾಶ್ರೀ ಅವರ ಅಭಿನಯ. ಮೂಲತಃ ರಂಗಭೂಮಿಯ ನಟಿಯಾದ ಉಮಾಶ್ರೀ ಅವರು ವೇದಿಕೆಯ ಮೇಲೆ ನಟಿಸುವುದನ್ನು ನೋಡುವುದೇ ಹಬ್ಬ. ಪ್ರಾರಂಭದಿಂದ ಅಂತ್ಯದವರೆಗೆ ಎಲ್ಲಿಯೂ, ಕೊಂಚವೂ ಕುಗ್ಗದ ತಗ್ಗದ ಅವರ ಧ್ವನಿ ಹಾಗೂ ಚೈತನ್ಯ ನಾಟಕದ ಯಶಸ್ಸಿಗೆ ಪ್ರಮುಖ ಕಾರಣ. ಗಿಡ ನೆಟ್ಟು ಸಂಭ್ರಮಿಸುವ ಬಾಲಕಿ ಶರ್ಮಿಷ್ಠೆ ಯಾಗಿ, ಯಯಾತಿಯ ಪ್ರೇಮ ಸಾಗರವನ್ನು ಸೇರುವ ನದಿ ಶರ್ಮಿಷ್ಠೆಯಾಗಿ ಅವರ ಅಭಿನಯ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ. ಬಾಲಕಿಯಾಗಿ ಅವರು ವೇದಿಕೆಯ ಮೇಲೆ ಜಿಗಿದು, ಕುಪ್ಪಳಿಸಿ, ನೆಗೆದು ಓಡಾಡುವುದನ್ನು ಕಾಣುವುದೇ ಸಂಭ್ರಮ. ಶರ್ಮಿಷ್ಟೆಯ ಪಾತ್ರದ ಎಲ್ಲಾ ಹೊಳಹುಗಳನ್ನು, ಪ್ರೇಮ, ನೋವು, ದುಗುಡ, ಅಸಹಾಯಕತೆ ಹಾಗೂ ಅವಮಾನಗಳನ್ನು ಪ್ರೇಕ್ಷಕರ ಎದೆಗೆ ತಲುಪಿಸಿ ಬಿಡುವ ಶಕ್ತಿ ಅವರ ಅಭಿನಯಕ್ಕಿದೆ. ಒಂದು ಗಂಟೆಗೂ ಹೆಚ್ಚು ಕಾಲ ಲೀಲಾಜಾಲವಾಗಿ ಅಭಿನಯಿಸುವ, ಎಲ್ಲ ಪಾತ್ರಗಳು ತಾವೇ ಆಗಿಬಿಡುವ, ನಿರರ್ಗಳವಾಗಿ ಮಾತನಾಡುತ್ತಾ, ಭಾವಯಾನದಲ್ಲಿ ಪ್ರೇಕ್ಷಕರನ್ನು ಜೊತೆಗೆ ಕೊಂಡೊಯ್ಯುವ ಉಮಾಶ್ರೀ ಅವರ ಅಭಿನಯವನ್ನು ನೋಡಿಯೇ ಆನಂದಿಸಬೇಕು.
ನಾಟಕದ ಪೂರ್ತಿ ಕಥಾವಸ್ತುವಿಗೆ ಪೂರಕವಾಗಿ ಕೇಳಿ ಬರುವ ಸಂಗೀತ ಪ್ರೇಕ್ಷಕರ ಭಾವಯಾನಕ್ಕೆ ಸಹಕರಿಸುತ್ತದೆ. ನಾಟಕದ ಮತ್ತೊಂದು ಶ್ರೇಷ್ಠ ಅಂಶ ‘ಬೆಳಕು’. ಅತ್ಯುತ್ತಮವಾದ ಬೆಳಕು ವಿನ್ಯಾಸ ನಾಟಕದ ಮೆರಗನ್ನು ಹೆಚ್ಚಿಸುತ್ತದೆ. ಸರಳವಾದ ವಸ್ತ್ರ ವಿನ್ಯಾಸ ಸಹಜತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಕರಿಸುತ್ತದೆ. ಎಲ್ಲ ಅಂಶಗಳು ಹದವಾಗಿ ಬೆರೆತು ಪ್ರೇಕ್ಷಕರಿಗೆ ಅತ್ಯುತ್ತಮವಾದ ಕಲಾ ಔತಣವನ್ನು ಉಣಬಡಿಸುತ್ತದೆ. ನಾಟಕ ಮುಗಿದ ನಂತರವೂ ಪ್ರೇಕ್ಷಕರ ಮನಸ್ಸಲ್ಲಿ ಶರ್ಮಿಷ್ಠೆ ಅಚಲವಾಗಿ ನಿಂತು ಕಾಡುತ್ತಾಳೆ.


  • ಅಚ್ಚು (ಡಾ. ಅಶ್ವಿನಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW