‘ಅಜ್ಜಿಕಥೆ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ಮೊಡದ ತೆರೆಯಲ್ಲಿ ತೇಲುತ ಬರುವನು ಚಂದಿರನು ಎನ್ನುತ ಅಜ್ಜಿಯು…ಅಜ್ಜಿ, ಮೊಮ್ಮಗಳ ನಡುವಿನ ಬಾಂಧವ್ಯದ ಕುರಿತು ಕವಿಗಳಾದ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಅಜ್ಜಿಯು ತೋರಿದಳಲ್ಲಿಯೆ ಮುಗಿಲೊಳು
ಮಿನುಗುತ ಬರುತಿಹ ಚಂದಿರನ
ಮೊಮ್ಮಗಳಲ್ಲಿಯೆ ಬೆರಗಲಿ ನೋಡುತ
ಬೀಸುತ ಕರೆದಳು ಸುಂದರನ

ಹೆಜ್ಜೆಯನಿಕ್ಕದೆ ನಡೆಯಲು ಸಾಧ್ಯವೆ
ಎನ್ನುತ ಕೇಳಲು ಅಜ್ಜಿಯನು
ಸಜ್ಜಿಗೆಯುಣ್ಣಿಸಿ ನುಡಿದಳು ಅಜ್ಜಿಯು
ತೇಲುತ ಬರುವನು ಚಂದಿರನು

ನದಿಕಡಲೆಲ್ಲಿವೆ ತೇಲಲು ಮುಗಿಲೊಳು
ಮೊಮ್ಮಗಳಾಕ್ಷಣ ಕೇಳಿದಳು
ಸಾಗರದೆಡೆಯೊಳು ಆವಿಯು ಆಗುತ
ಗುಟ್ಟಾಗಡಗಿವೆ ಎಂದಿಹಳು

ಗಾಳಿಯ ಬಿರುಸಿಗೆ ಮೊಡದ ತೆರೆಗಳು
ಅಲೆಯಲೆಯಾಗುತ ಬಂದಿರಲು
ಅವುಗಳ ನಡುವಲಿ ಚಂದಿರ ತೇಲುವ
ಎನ್ನುತ ಅಜ್ಜಿಯು ನುಡಿದಿಹಳು

ಚಂದಿರನೆದುರಿರೆ ತಟ್ಟೆಯೊಳುಳಿದಿಹ
ಊಟವು ಖಾಲಿಯು ಆಗಿತ್ತು
ಮೊಮ್ಮಗಳುಣ್ಣಲು ಅಜ್ಜಿಯ ಮನದೊಳು
ನೀತಿಯ ಕಥೆಯು ಮುಗಿದಿತ್ತು.


  • ಚನ್ನಕೇಶವ ಜಿ ಲಾಳನಕಟ್ಟೆ – ಕವಿಗಳು, ಲೇಖಕರು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading