ವಿಧಿಯ ಕೆಟ್ಟದೃಷ್ಟಿ ಎಂದರೆ ಇದೇನಾ… ಸ್ಪಂದನಾ…?

ಆಡಿಸಿದಾತನ ಆಟ ಮುಗಿದ ಮೇಲೆ ಹೇಳುವಂತೆ ” ‌ಸ್ಪಂದನಾರ ಆತ್ಮಕ್ಕೆ ಶಾಂತಿ ಸಿಗಲಿ. ವಿಜಯ್ ರಾಘವೇಂದ್ರರಿಗೆ ಈ ದುಃಖವನ್ನು‌ ಭರಿಸುವ ಶಕ್ತಿ ಭಗವಂತ ನೀಡಲಿ ” ಎಂದಷ್ಟೇ ನಾವೀಗ ಹೇಳಲು ಸಾಧ್ಯ. – ಹಿರಿಯೂರು ಪ್ರಕಾಶ್

ಜೀವನವೆಂಬುದು ಕ್ಷಣಿಕ ಎನ್ನುವ ಮೂರಕ್ಷರಕ್ಕಿಂತಲೂ ವಿಚಿತ್ರವಾದ ವಿಲಕ್ಷಣವಾದ ಕ್ಷಣಿಕತೆ ತುಂಬಿರುವ ವಿಸ್ಮಯಕಾರಿ ಬದುಕು ! ಇಲ್ಲದಿದ್ದರೆ ಮತ್ತೇನು ? ಯಾವೊಂದು ಮುನ್ಸೂಚನೆಯೂ ಇಲ್ಲದೇ , ಯಾವ ರೋಗ ಲಕ್ಷಣಗಳ ಹಿನ್ನೆಲೆಯೂ ಇರದೇ ನಲವತ್ತರ ಕಿರಿಯ ವಯಸ್ಸಿನ ಮಹಿಳೆಯೊಬ್ಬರು ಸಂಜೆಗೆ ಶಾಪಿಂಗ್‌ ಮುಗಿಸಿ ರಾತ್ರಿ ಮಲಗಿ ಸೂರ್ಯೋದಯವಾಗುವ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆಂದರೆ… ಇದಕ್ಕೆ ಯಾವ ಕಾರಣ ಕೊಡುತ್ತೀರಿ, ಏನೆಂದು ಹೆಸರಿಸುತ್ತೀರಿ ಅಥವಾ ಆರೋಗ್ಯವನ್ನು ಇನ್ನೂ ಯಾವ ಮಟ್ಟದಲ್ಲಿ ಕೇರ್ ತೆಗೆದುಕೊಳ್ಳಬೇಕೆನ್ನುವಿರಿ ?

ಇಡೀ ಕನ್ನಡ ಚಿತ್ರರಂಗದ ಹೀರೋಗಳಲ್ಲೇ ಅತ್ಯಂತ ಫ಼ಿಟ್ ಅಂಡ್ ಫ಼ೈನ್ ಆಗಿದ್ದ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ನಮ್ಮೆಲ್ಲರನ್ನು ಬಿಟ್ಟು ಏಕಾಏಕಿ ಯಾವ ಮುನ್ಸೂಚನೆಯನ್ನೂ ಕೊಡದೇ ಹೃದಯಸ್ಥಂಭನದಿಂದ ಕಣ್ಮರೆಯಾದಾಗಲೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು, ಬದುಕನ್ನು ಸಂತೋಷವಾಗಿ ನಗುನಗುತ್ತಾ ಕಳೆಯುವುದು,‌ ದಿನನಿತ್ಯದ ವ್ಯಾಯಾಮದಲ್ಲಿ ತೊಡಗುವುದು , ಹಿತಮಿತವಾದ ಡಯಟ್ ಪಾಲಿಸುವುದು, ದುಶ್ಚಟಗಳಿಲ್ಲದಿರುವಿಕೆ , ನಿಯಮಿತವಾಗಿ ಆರೋಗ್ಯ ತಪಾಸಣೆ … ಇತ್ಯಾದಿಗಳ ಕುರಿತಾದ ಎಲ್ಲಾ ನಂಬಿಕೆಗಳೂ ಸುಳ್ಳು ಎನ್ನುವ ಹಂತಕ್ಕೆ ಯೋಚಿಸುವ ಸಿನಿಕತನ ಎಲ್ಲರಲ್ಲೂ ಮನೆ ಮಾಡಿತ್ತು. ಏಕೆಂದರೆ ಅಂದು ಬೆಳಿಗ್ಗೆ ಅಷ್ಟೆಲ್ಲಾ ಆರೋಗ್ಯದಿಂದ‌ ಇದ್ದು ಮನೆಯಿಂದ ಹೊರಗಡೆ ಹೊರಟ ವ್ಯಕ್ತಿ ಕ್ಷಣಾರ್ಧದಲ್ಲಿ ಹೃದಯಾಘಾತಕ್ಕೊಳಗಾಗಿ ಅಸುನೀಗುತ್ತಾನೆಂದರೆ ಅದಕ್ಕೆ ಏನಾದರೂ ಹೇಳಲು ಸಾಧ್ಯವಿತ್ತೇ …!

ಫೋಟೋ ಕೃಪೆ : news18 kannada

ಇಂದು….. ಅದೇ ಕುಟುಂಬದ ಬಂಧುಗಳ ಮನೆಯಲ್ಲಿ ಹೆಚ್ಚುಕಡಿಮೆ ಅದೇ ತರಹದ ಹೃದಯಾಘಾತವಾಗಿ ಮತ್ತೊಂದು ಸಾವು ಸಂಭವಿಸಿದೆ ಎಂದರೆ ಅದನ್ನು ಹೇಗೆ ತಡೆದುಕೊಳ್ಳುವುದು, ಏನಂತ ವಿಶ್ಲೇಷಿಸುವುದು ? ಪುನೀತ್ ರಾಜ್‍ಕುಮಾರ್ ರವರ ಸಂಬಂಧಿ, ಸಜ್ಜನ ನಟ ವಿಜಯ ರಾಘವೇಂದ್ರರ ಧರ್ಮಪತ್ನಿ ಕೇವಲ ಮುವ್ವತ್ತೇಳು ವರ್ಷ ವಯಸ್ಸಿನ ಶ್ರೀಮತಿ ಸ್ಪಂದನಾ ರವರು ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಕಣ್ಮುಚ್ಚಿದರು ಎಂಬ ಕೆಟ್ಟ ಸುದ್ದಿ ಎಲ್ಲರಲ್ಲೂ ದಿಘ್ಭ್ರಮೆ ಮೂಡಿಸಿ ಕಣ್ಣಂಚುಗಳನ್ನು ತೇವಗೊಳಿಸಿದೆ.
ಇದೆಂತಹಾ ಸಾವು ಸ್ಪಂದನಾರಿಗೆ ? ನೋಡಲು ಯಾವ ಸಿನಿಮಾ ತಾರೆಗೂ ಕಡಿಮೆಯಿಲ್ಲದಂತಹಾ ಲಕ್ಷಣವಾದ, ಸಂಸ್ಕಾರವಂತ ಹೆಣ್ಣುಮಗಳು, ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸುವ ಪತಿ, ಮುದ್ದಾದ ಮಗು, ಸುಖೀ ಕುಟುಂಬ, ಸಜ್ಜನರ ಸ್ನೇಹ, ಅಕ್ಕರೆ ತೋರುವ ಬಂಧುಗಳು, ದೊಡ್ಮನೆಯ ಭಾಂದವ್ಯ, ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಪರಿಚಯವಿರುವವರ ಎಲ್ಲರ ಅಗಾಧ ಪ್ರೀತಿ…. ಇವೆಲ್ಲದರ ಸವಿ ಸವಿ ಪ್ರೀತಿಯ ಸಮೂಹದೊಳಗಿದ್ದು ಬಾಳನ್ನು ನಗುನಗುತ್ತಲೇ ಬೆಳಗುತ್ತಿದ್ದ ಸ್ಪಂದನಾಗೆ ವಿಧಿಯ ಅದಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಅದೆಂಥಾ ಕ್ರೂರ ಸೇಡೋ ಗೊತ್ತಿಲ್ಲ…..ಹೋಗೀ ಹೋಗೀ ಇಂತಹಾ ನಿರುಪದ್ರವಿ ಹೆಣ್ಣುಮಗಳನ್ನು ಹೀಗೆ ಯಾವ ಮುನ್ಸೂಚನೆ ನೀಡದೇ ತನ್ನೆಡೆಗೆ ಅನಾಮತ್ತು ಸೆಳೆದ ವಿಧಿಯಾಟ ನಿಜಕ್ಕೂ ಘೋರಾತಿಘೋರ , ಕ್ರೂರಾತಿಕ್ರೂರ!

ವಿಜಯ್ ರಾಘವೇಂದ್ರರನ್ನು ನೆನೆದರೇ ಸಂಕಟವಾಗುತ್ತದೆ. ಡಾ. ವಿಷ್ಣುವರ್ಧನ್ ರವರನ್ನು ಹೊರತುಪಡಿಸಿದರೆ ಕನ್ನಡ ಚಿತ್ರರಂಗದಲ್ಲಿ ಅತೀವ ಹೆಂಗರುಳನ್ನು ಹೊಂದಿದ್ದ ಕಲಾವಿದ ಎಂದರೆ ಅದು ವಿಜಯ್ ರಾಘವೇಂದ್ರ. ಹೀಗಾಗಿಯೇ ಮನಸಾರೆ ಪ್ರೀತಿಸಿ ಇಷ್ಟಪಟ್ಟು ಕೈ ಹಿಡಿದಿದ್ದ ಬಾಳ ಸಂಗಾತಿ ಬಗೆಗೆ ಅವರಿಗೆ ಇನ್ನಿಲ್ಲದ ಪ್ರೀತಿ. ಆಕೆಗೂ ಪತಿಯ ಬಗೆಗೆ ಅಷ್ಟೇ ತೆರನಾದ ಪ್ರೀತಿ. ಒಟ್ಟಾರೆ ಅನ್ಯೋನ್ಯತೆಗೆ ಅನ್ವರ್ಥವಾಗಿದ್ದ ಸುಂದರ ಜೋಡಿ ಜೀವಗಳನ್ನು ಯಾವ ಕ್ಷುದ್ರ ಶಕ್ತಿ ಬೇರ್ಪಡಿಸಿತೋ……ದೇವರೇ ಬಲ್ಲ.

ಫೋಟೋ ಕೃಪೆ : news Bugz

ಸಾಮಾನ್ಯವಾಗಿ ಗಂಡಸರಿಗೆ ಹೋಲಿಸಿದಲ್ಲಿ ಹೆಣ್ಣುಮಕ್ಕಳಲ್ಲಿ ಹೃದಯಾಘಾತ ಕಡಿಮೆ. ಅದರಲ್ಲೂ ಐವತ್ತಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಇದು ಇನ್ನೂ ಅಪರೂಪ. ಮೇಲಾಗಿ ಸದಾ ಲವಲವಿಕೆಯಿಂದ, ತುಂಬು ಕುಟುಂಬ ಹಾಗೂ ತನ್ನ ಪತಿಯ ಚಿತ್ರಗಳ ಕೆಲಸಗಳೊಂದಿಗೆ ಸಾಥ್ ಕೊಡುತ್ತಾ ಎಲ್ಲವನ್ನೂ ಖುಷಿಖುಷಿಯಾಗಿಯೇ ನಿಭಾಯಿಸುತ್ತಾ ಗಂಡನಿಗೆ ತಕ್ಕ ಹೆಂಡತಿಯಾಗಿ, ತಂದೆ ತಾಯಿಗೆ ತಕ್ಕ ಮಗಳಾಗಿ, ಅತ್ತೆ ಮಾವಂದಿರ ಮುದ್ದಿನ‌ ಸೊಸೆಯಾಗಿ, ಮುದ್ದಾಗ ಮಗನ ಅಕ್ಕರೆಯ ತಾಯಾಗಿ, ಪ್ರೀತಿಸುವ ಮೈದುನನಿಗೆ ತಾಯಿಸಮಾನ ಅತ್ತಿಗೆಯಾಗಿ , ಚಿತ್ರೋದ್ಯಮದ ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವ ಸ್ನೇಹಿತೆಯಾಗಿ ಚಟುವಟಿಕೆಯಿಂದ ಇದ್ದ ಸ್ಪಂದನಾ…. ವಿಧಿಯ ಮೊದಲ ಕರೆಗೆ ಕ್ಷಣಾರ್ಧದಲ್ಲೇ ಸ್ಪಂದಿಸಿ ಇಹಲೋಕ ತ್ಯಜಿಸಿದ್ದು ನಿಜಕ್ಕೂ ದುರಂತ. ಅಣ್ಣಾವ್ರ ಕುಟುಂಬದಲ್ಲೇ ಈ ಅವಘಡಗಳು ಪದೇ ಪದೇ ಸಂಭವಿಸುತ್ತಿರುವುದು ಇನ್ನೂ ದುರಂತ !

ಆಡಿಸಿದಾತನ ಆಟ ಮುಗಿದ ಮೇಲೆ ಹೇಳುವಂತೆ ” ‌ಸ್ಪಂದನಾರ ಆತ್ಮಕ್ಕೆ ಶಾಂತಿ ಸಿಗಲಿ. ವಿಜಯ್ ರಾಘವೇಂದ್ರರಿಗೆ ಈ ದುಃಖವನ್ನು‌ ಭರಿಸುವ ಶಕ್ತಿ ಭಗವಂತ ನೀಡಲಿ ” ಎಂದಷ್ಟೇ ನಾವೀಗ ಹೇಳಲು ಸಾಧ್ಯ.

ಇದು…….ವಿಧಿಯ ಕ್ರೂರ ಅಟ್ಟಹಾಸಕ್ಕೆ, ಪರಮ ಘಾತುಕತನದ ಘೋರ ಅನ್ಯಾಯಕ್ಕೆ ಹಾಗೂ ಬದುಕಿನ ಅನಿಶ್ಚಿತತೆಗೆ ಮತ್ತೊಂದು ಉದಾಹರಣೆ.
ಸ್ಪಂದನಾರ ಆತ್ಮಕ್ಕೆ ಸದ್ಗತಿ ದೊರೆಯಲಿ.

** ಮರೆಯುವ ಮುನ್ನ **

ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಅಧಿಕ ಕೊಬ್ಬು ಶೇಖರಣೆ, ಧೂಮಪಾನ, ಹೆಚ್ಚು ಮಾಂಸ- ಎಣ್ಣೆ ಜಿಡ್ಡು ಪದಾರ್ಥಗಳ ಸೇವನೆ, ವ್ಯಾಯಾಮವಿಲ್ಲದಿರುವುದು, ಅತಿಯಾದ ವ್ಯಾಯಾಮ, ಅಧಿಕ ತೂಕ, ಬೊಜ್ಜು, ಅತಿಯಾದ ಒತ್ತಡ, ಖಿನ್ನತೆ, ಅನುವಂಶೀಯತೆ …ಇವೆಲ್ಲವೂ ಸಾಮಾನ್ಯವಾಗಿ ಹೃದಯಾಘಾತಕ್ಕೆ ಕಾರಣಗಳು.ಆದರೆ ಇದಾವುವೂ ಇಲ್ಲದೇ ವ್ಯಕ್ತಿಯೊಬ್ಬರಿಗೆ, ಅದೂ ಸಣ್ಣ ವಯಸ್ಸಿನಲ್ಲಿಯೇ ಹೃದಯಸ್ಥಂಭನವಾಗುವುದು ಎಂದರೆ ಇದಕ್ಕೆ ಇಂತಹದೇ ಕಾರಣವಿರಬಹುದೆಂದು ಸಂಶೋಧಿಸಲಿಕ್ಕೆ ಇನ್ನೂ ಆಗಿಲ್ಲವೇನೋ ! ಕೆಲವೊಮ್ಮೆ ತಮ್ಮ ದೇಹ ತೂಕ ಇಳಿಸಿಕೊಳ್ಳಲು ತೆಗೆದುಕೊಳ್ಳುವ ಅನೈಸರ್ಗಿಕ ಚಿಕಿತ್ಸೆ ಅಥವಾ ಕೈಗೊಳ್ಳುವ ಅನಪೇಕ್ಷಿತ ಸರ್ಜರಿ ಕೂಡಾ ಹೃದಯಾಘಾತಕ್ಕೆ ಕಾರಣವಾದರೂ ಆಗಬಹುದು.

ವಿಸ್ಮಯವೆಂದರೆ ಈ ಮೇಲೆ ತಿಳಿಸಿದ ಯಾವ ವರ್ಗೀಕರಣದಲ್ಲೂ ನಮಗೆ ತಿಳಿದಂತೆ ಸ್ಪಂದನಾರವರು ಇಲ್ಲ. ಹೀಗಿದ್ದೂ ವಿಧಿಯೆಂಬುದು ಹೃದಯಾಘಾತದ ರೂಪದಲ್ಲಿ ಅವರನ್ನೇ ಅರಸಿಕೊಂಡು ಬಂದು ಅರೆಕ್ಷಣದಲ್ಲೇ ಪ್ರಾಣಪಕ್ಷಿಯನ್ನು ವಿದೇಶದಲ್ಲಿ ಕೊಂಡೊಯ್ದಿರುವುದಕ್ಕೆ ಸಕಾರಣವೂ ಇಲ್ಲ ಸಮರ್ಥನೆಯೂ ಇಲ್ಲ….ಮುಖ್ಯವಾಗಿ ವಿಧಿಯೆಂಬ‌ ಕ್ರೂರಿಗೆ ಅದಾವುದೂ ಬೇಕಾಗಿಯೂ ಇಲ್ಲ…!

ಸ್ಪಂದನಾರ ಮೃತದೇಹ ಬ್ಯಾಂಕಾಕ್ ನಿಂದ ಇನ್ನೂ ಬೆಂಗಳೂರಿಗೆ ಬಂದಿಲ್ಲ. ಆದರೆ ಅಷ್ಟರಲ್ಲಾಗಲೇ ಕಾರಣಗಳ ಸಂಶೋಧನೆಗಿಳಿದಿರುವ ನಮ್ಮ ಕೆಲ ದೃಶ್ಯ ಮಾಧ್ಯಮಗಳು ಅವರ ಸಾವಿಗೆ ತೂಕ ಇಳಿಸಿಕೊಳ್ಳಲು ಮಾಡಿಸಿದ ಸರ್ಜರಿ, ಕಿಟೋ ಡಯಟ್ ಮಣ್ಣು ಮಸಿ ಅಂತೆಲ್ಲಾ ಅನಗತ್ಯ ಚರ್ಚೆ ನಡೆಸಿ ಬಾಯಿ ಚಪಲ ತೀರಿಸಿಕೊಳ್ಳಲು ಶುರುಮಾಡಿದ್ದಾರೆ. ಅವರ ದೇಹ ಮಣ್ಣು ಸೇರುವವರೆಗಾದರೂ ಸುಮ್ಮನಿದ್ದಲ್ಲಿ ಅದುವೇ ಅವರು ಮೃತರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

ಸದಾ ನಗುನಗುತ್ತಾ ಅಕ್ಕರೆಯಿಂದ ಮುದ್ದಿಸುತ್ತಿದ್ದ ಅಂದದ ಮೊಗದ ತಾಯಿಯತ್ತ ಮುಗ್ಧ ನೋಟ ಬೀರುತ್ತಿರುವ ಮಗ ಒಂದೆಡೆಯಾದರೆ , ಪತ್ನಿಯ ಸುಂದರವಾದ ನಿಷ್ಕಲ್ಮಶ ಹೃದಯಕ್ಕೆ ಆಘಾತವಾದರೂ ಆಗಿದ್ದು ಹೇಗೆಂದು ಚಿಂತಿಸುತ್ತಾ ಬಾರದ ಲೋಕಕ್ಕೆ ತೆರಳಿದ ಮನದನ್ನೆಯತ್ತ ಬಾರದ ನೋಟ ಹರಿಸಿ ಹೃದಯವನ್ನು ಆರ್ದ್ರಗೊಳಿಸಿಕೊಂಡು ಸಂಕಟಪಡುತ್ತಿರುವ ಪತಿ ಮತ್ತೊಂದೆಡೆ……..

ಇದಾವುದರ ಪರಿವೇ ಇಲ್ಲದೇ ಶಾಂತಚಿತ್ತಳಾಗಿ‌ ಚಿರನಿದ್ರೆಗೆ ಸ್ಪಂದಿಸಿ ಮಲಗಿರುವ ಸ್ಪಂದನಾ……!

ಇದುವೇ ಜೀವನ……. ಇದೇ ಜೀವನ ….!

ಓಂ ಶಾಂತಿ.


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW