ಮೊಬೈಲ್, ಟಿವಿ ಬಂದಾಗಿನಿಂದ ಆಟದ ಮೈದಾನದಲ್ಲಿ ಆಡುವವರಿಲ್ಲದೆ ಬಿಕೋ ಅನ್ನುತ್ತಿವೆ. ಹಳೆ ಆಟಗಳನ್ನು ನೆನಪಿಸುತ್ತಾ ಮೈದಾನದಲ್ಲಿ ಮತ್ತೆ ಆಟವಾಡಿ ಎನ್ನುವ ಉತ್ತಮ ಸಂದೇಶವಿರುವ ಶೋಭಾ ನಾರಾಯಣ ಹೆಗಡೆ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಮನೆಯಲ್ಲಿ ಕೂತು, ಕೂತು ತುಂಬಾ ಬೋರ್ ಆಗ್ತಾ ಇದೆ..ಸುಮ್ಮನೆ ಒಂದು ವಾಕಿಂಗ್ ಆದರೂ ಹೋಗೋಣ ಅನಿಸ್ತು. ಹಾಗೇ ಹೊರಟೆ. ಹೋಗುವಾಗ ನೆನಪಾಗಿದ್ದು, ನಾವು ಚಿಕ್ಕವರಿದ್ದಾಗ ಆಟ ಆಡ್ತಿದ್ದ ಆಟದ ಮೈದಾನ. ಅಲ್ಲಿಗೇ ಹೋದೆ. ಪಾಳು ಬಿದ್ದಿದೆ ಈಗ. ಯಾರೂ ಅಲ್ಲಿ ಆಟ ಆಡೋದೇ ಇಲ್ಲ. ನನ್ನ ನೋಡಿದ ಖುಷಿಗೆ, ಆಟದ ಮೈದಾನ ಖುಷಿಯಿಂದ ಬಿಕ್ಕಳಿಸ ತೊಡಗಿತು. ಪ್ರೀತಿಯಿಂದ ಮೈದಡವುತ್ತಾ ಕೂತೆ. ಅದರ ಖುಷಿ ಈಗ ದುಃಖವಾಗಿ ಮಾರ್ಪಟ್ಟಿತ್ತು. ಬಿಕ್ಕಿ ಬಿಕ್ಕಿ ಅಳಲು ತೊಡಗಿತು. ಏನಂತ ಸಂತೈಸಲಿ, ನಾನಾದರೂ. ಬದಲಾದ ಕಾಲಘಟ್ಟದಲ್ಲಿ ನಾನಾದರೂ ಏನು ಮಾಡಬಲ್ಲೆ..ಕೂತೆ ಹಾಗೇ ಆ ದುಃಖ ನೋಡ್ತಾನೇ ಸಂಕಟದಿಂದ..ನೋಡಿದ್ಯಾ..ನೀವೆಲ್ಲರೂ ಚಿಕ್ಕವರಿದ್ದಾಗ, ಅದೆಷ್ಟು ತರಹದ ಆಟ ಆಡ್ತಾ ಇದ್ದಿರಿ. ಕೋಕ್ಕೋ, ಕಬಡ್ಡಿ, ವಾಲಿಬಾಲ್, ಕಳ್ಳ ಪೋಲೀಸ್, ಚಿನ್ನಿ ದಾಂಡು, ಲಗೋರಿ, ಹಸು, ಮತ್ತೆ ಹುಲಿ ಆಟ..ಅಬ್ಬಬ್ಬಾ !! ಒಂದಾ ಎರಡಾ..ನೀವು ಕುಣಿಕುಣಿದು ಖುಷಿಯಿಂದ ಆಡೋದು,ಬಿದ್ದು ಅಳೋದು ಎಲ್ಲಾ ನನ್ನ ಈ ಮಡಿಲೊಳಗೆ..ಅದೆಷ್ಟು ಸಂಭ್ರಮಿಸ್ತಾ ಇದ್ದೆ ನಾನು ಗೊತ್ತಾ?ಈಗೆಲ್ಲಿದೆ ಆ ಖುಷಿ?ಆ ಹಳೆಯ ಸವಿನೆನಪಿನ ಬುತ್ತಿ, ಸವಿಯುತ್ತಲೇ,ಈಗ ತನ್ನ ಕೇಳುವವರಿಲ್ಲದ ಈ ಅಸಡ್ಡೆ ಕಾಲವ ನೆನೆದು ಮತ್ತೆ ದುಃಖಿಸತೊಡಗಿತು ಆಟದ ಮೈದಾನ.
ಇರಲಿ ಬಿಡು..ಕಾಲ ಬದಲಾದಂತೆ ಎಲ್ಲಾ ಬದಲಾಗಲೇಬೇಕು ಅಲ್ವಾ?ನಾವು ಸರಕಾರಿ ಶಾಲೆಗೆ ಹೋಗ್ತಾ ಇದ್ವಿ.ಸಮಯ ಅನ್ನೋದು ನಮ್ಮದೇ ಆಗಿತ್ತು. ಈಗ ಹಾಗಲ್ಲ. ಮಕ್ಕಳು, ಕಾನ್ವೆಂಟ್ ಗೆ ಹೋಗ್ತಾರೆ. ಅನೇಕ ರೀತಿಯ ಕ್ಲಾಸ್ ಗೆ ಸೇರಿಕೊಳ್ತಾರೆ. ಸಮಯದ ಅಭಾವ ಎಂದು ಸಂತೈಸಲು ಪ್ರಯತ್ನ ಮಾಡಿದೆ. ಅದೆಲ್ಲಿ ಅಡಗಿತ್ತೋ, ಚಿನ್ನಿ ದಾಂಡಿನ ಕೋಲು…ಪಳೆಯುಳಿಕೆಯಾಗಿ ಉಳಿದುಕೊಂಡಿತ್ತು ಅನಿಸುತ್ತೆ. ಅಲ್ಲಲ್ಲಿ ಗೆದ್ದಲು ತಿಂದ ತನ್ನ ಸವಕಲು ಶರೀರ ಹೊತ್ತು, ನನ್ನ ಹತ್ತಿರ ಬಂತು. ಉರಿಗಣ್ಣಿನಿಂದ ನನ್ನ ನೋಡುತ್ತಾ, ಸಾಕು, ಸುಮ್ಮನೆ ಇರು. ಅಲ್ಲಿ ನೋಡು ಆ ಬಸ್ ನಿಲ್ದಾಣ.. ಇವತ್ತು ರವಿವಾರ.. ಬೆಳಿಗ್ಗೆಯಿಂದ ಬಂದು ಕೂತಿವೆ ಆ ಮಕ್ಕಳು. ಕೈಯಲ್ಲಿ ಮೊಬೈಲ್.. ಆ ಸುಡುಗಾಡು ಮೊಬೈಲ್ ಕಂಡುಹಿಡಿದವ ಏನಾದರೂ, ನನ್ನ ಕಣ್ಣಮುಂದೆ ಬರಬೇಕು.. ನಮ್ಮನ್ನು ಮೂಲೆಗುಂಪು ಮಾಡಿದ ಅವನನ್ನು ಸುಮ್ಮನೆ ಬಿಡೋದಿಲ್ಲ …ಚಿನ್ನಿ ದಾಂಡಿನ ರೌದ್ರಾವತಾರ ನೋಡಿ,ನಾ ಒಂದ್ಸಲ ಹೆದರಿ ಮೈ ಅದುರಿಸಿಕೊಂಡಿದ್ದಂತೂ ಸುಳ್ಳಲ್ಲ. ಅಷ್ಟು ಕೋಪ,ಹತಾಶೆ ಆ ಕೋಲಿಗೆ.
ಸಿಗ್ನಲ್ ಅಷ್ಟು ಸಿಗದ ಹಳ್ಳಿಯಲ್ಲೇ ಈ ಕಥೆ…ರಜೆ ಬಂದ್ರೆ ಸಾಕು ಬರೀ ಮೊಬೈಲ್ ಹಿಡಿದೇ ಕೂರ್ತಾರೆ. ಇನ್ನು, ಎನೀಟೈಮ್ ಸಿಗ್ನಲ್ ಸಿಗೋ ಸಿಟಿಯಲ್ಲಿ ಹೇಗಾಗಿರಬೇಡ ಹೇಳು ಅನ್ನೋ ಗಡಸು ದನಿಯತ್ತ ತಿರುಗಿದೆ..ಯಾರು ಎಂದು..ವಾಲಿಬಾಲ್ ಅದು. ಗಾಳಿ ಇಲ್ಲದೇ ಸೊರಗಿ ಹೋಗಿ, ಬಲು ಕಷ್ಟದಿಂದಲೇ ಉರುಳುರುಳುತ್ತಾ ಬಂತು ನನ್ನ ಬಳಿಗೆ.ಹ್ಞ್ ಏನ್ ಕೇಳ್ತಿ ನಮ್ಮ ಪಾಡು.ನಮ್ಮ ಹಳೇ ಜಮಾನ ತುಂಬಾ ಮಸ್ತ್ ಇತ್ತು.. ದಿನ ಸಂಜೆ ಆದರೆ ಸಾಕು..ಮಕ್ಕಳು, ಮುದುಕರು, ಹೆಂಗಸರು, ಬೇಧ ಭಾವ ಇಲ್ದೇ ಆಟ ಆಡ್ತಾ ಇದ್ರು..ಈಗ ಅವಶೇಷವಾಗಿ ಹೇಗೆ ಬಿದ್ದಿದೀವಿ ನಾವು..ವಾಲಿಬಾಲ್ ನ ಸಂಕಟ ತುಂಬಿದ ಹತಾಶೆ ಧ್ವನಿ ,ನನ್ನ ಇನ್ನೂ ಆಧೀರಳನ್ನಾಗಿಸಿತು..ನನ್ನ ಕಣ್ಣಂಚಿನಲ್ಲೂ ತುಸು ನೀರು ಫಳ್ ಎಂದು ಹೊರ ಬಿತ್ತು.
ಹೌದಪ್ಪಾ, ವಾಲಿಬಾಲ್ ಅಪ್ಪ.. ಈಗ ನಮ್ಮ ಕೇಳೋರು, ಯಾರಿದಾರಪ್ಪಾ. ಎಲ್ಲಾ ಆ ಮೊಬೈಲ್ ಅನ್ನೋ ಮಾಯಾಂಗನೆ ಬಂದ ಮೇಲೆ.. ಅಳುತ್ತಾ, ಸೊರ್ ಸೊರ್ ಎನ್ನುವ ಸದ್ದಿನಲ್ಲೇ ಪ್ರತ್ಯಕ್ಷ ಆಗಿದ್ದು ಲಗೋರಿ ಗೆ ನಾವು ಆಗ ಬಳಸ್ತಾ ಇದ್ದಿದ್ದ ತೆಂಗಿನ ಕರಟೆ.ಒಂದು ಕಡೆ ತನ್ನ ದೇಹವೇ ಇಲ್ಲದೇ ಅರ್ಧಂಬರ್ಧ ದೇಹ ಹೊತ್ತು ,ಕಣ್ಣ ಮುಂದೆ ನಿಂತಿತು..ಲಗೋರಿ ಆಟ,ನನ್ನ ಇಷ್ಟದ ಆಟ..ಗೆಲುವು ನನ್ನದೇ ಆ ಆಟದಲ್ಲಿ.. ಹಾಗಾಗಿ, ಆ ಕರಟದ ಅವ್ಯವಸ್ಥೆ ನೋಡಿ ಕರುಳು ಕಿವುಚಿದ ತರ ಆಯಿತು.. ನಾನೂ,ಅತ್ತು ಬಿಟ್ಟೆ..ಅವರೆಲ್ಲರ ಅಸಹಾಯಕ ಪರಿಸ್ಥಿತಿ ನೋಡಿ..ನೀ ಯಾಕೆ ಅಳ್ತಿ?ನೀ ಅಳೋದ್ರಿಂದ ಏನ್ ಪ್ರಯೋಜನ ಹೇಳು ಎಂದು ಹೇಳುತ್ತಲೇ,ಅದೆಲ್ಲಿಂದಲೋ ಒಂದು ಗೋಲಿ ಉರುಳಿ ಬಂತು…ತುಂಬಾ ಚಂದದ ಗೋಲಿ ಅದು..ಚೂರು ಶಿಥಿಲಾವಸ್ಥೆಯಲ್ಲಿ ಇದ್ದರೂ, ತನ್ನ ಸೌಂದರ್ಯ ಕಾಪಾಡಿ ಕೋಂಡಿತ್ತು.. ನನ್ನ ನೋಡಿ, ಇವರೆಲ್ಲ ಹೇಳಿದಂತೆ ನಂದೂ ಕೂಡ ಅದೇ ಮಾತು. ಮೊಬೈಲ್ ಅನ್ನೋ ಮಾಯಾಂಗನೆ, ನಮ್ಮನ್ನು ಮೂಲೆಗುಂಪಾಗಿ ಮಾಡಿದೆ..ಹಾಗೇ ಇದರ ಜೊತೆಯಲ್ಲಿ ಆ ಮನೆ ಹಾಳಾದ್ದು ಟಿವಿ ,ಬೇರೆ ಸೇರಿಕೊಂಡಿದೆ..ಮನೆಯಲ್ಲಿ ಹಿರಿಯರು ಸಂಜೆ ಧಾರಾವಾಹಿ ನೋಡೋಕೆ ಕೂತು ಬಿಡ್ತಾರೆ. ಇನ್ನು ಅಪ್ಪ, ಅಮ್ಮ, ಮಕ್ಕಳು ಈ ಮೊಬೈಲ್ನಲ್ಲಿ ಮುಳುಗಿ ಹೋಗ್ತಾರೆ..ಇನ್ನು ನಮ್ಮ ಬಗ್ಗೆ ಆಸಕ್ತಿ ತಳೆದು,ಪರಿಚಯ ಮಾಡಿಕೊಟ್ಟು ಸಂಭ್ರಮ ಪಡುವ ಮನಸ್ಸು ಯಾರಲ್ಲಿ ಇದೆ ಹೇಳು? ನೀವು ಚಿಕ್ಕವರಿದ್ದಾಗ, ಮೊಬೈಲ್ ಹಾಳಾಗ್ಲಿ, ಟಿವಿ ಕೂಡ ನೆಟ್ಟಗೆ ಎಲ್ಲಾ ಮನೆಯಲ್ಲಿ ಇರ್ತಾ ಇರಲಿಲ್ಲ. ಈಗಿನ ಸೌಕರ್ಯಗಳೇ ನಮ್ಮ ಮೂಲೆಗೆ ತಳ್ಳಿದೆ ಎಂದು ಬೆಸರದಿಂದ ಗೋಗರೆಯಿತು.
ಇಲ್ಲಿ ಕೇಳಿ, ನಾನೂ ಮುಂದೊಂದು ದಿನ ಅಜ್ಜಿ ಆಗುವವಳೇ..ನನ್ನ ಮೊಮ್ಮಕ್ಕಳಿಗೆ ನಿಮ್ಮ ಪರಿಚಯ ಮಾಡಿಸಿ, ನಿಮ್ಮ ಜೊತೆಯಲ್ಲಿ ಆಟ ಆಡುವಂತೆ ಖಂಡಿತ ಆಸಕ್ತಿ ಬೆಳೆಸ್ತೀನಿ ಎಂದೆ ದೃಢವಾಗಿ..ಎಲ್ಲರೂ ಹೋ ಎಂದು ಕೂಗಿ ಖುಷಿ ಪಟ್ಟವು..ಆದರೆ ಚಿನ್ನಿ ದಾಂಡಿನ ಕೋಲು ಮಾತ್ರ, ಸ್ವಲ್ಪ ಅಪನಂಬಿಕೆಯಿಂದಲೇ ಕೇಳಿತು..ನಿನ್ನ ಮಾತನ್ನು ನಂಬಬಹುದಾ…ಅಥವಾ ರಾಜಕಾರಣಿಗಳ ತರಹ ಟೊಳ್ಳು ಭರವಸೆಯಾ?ಅಂತ ಖಾರವಾಗಿ ಕೇಳಿತು.ಇಲ್ಲ ನನ್ನ ನಂಬಿ ಪ್ಲೀಸ್. ಟೊಳ್ಳು ಭರವಸೆ ಅಲ್ಲ.ನಿಜವಾಗಿಯೂ ನಿಮಗೆ ಮಾತು ನೀಡ್ತಾ ಇದೀನಿ..ಪ್ಲೀಸ್ ನಂಬಿ ನನ್ನ, ಪ್ಲೀಸ್ ನಂಬಿ ಎಂದು ಹೇಳ್ತಾ ಇದ್ದೆ…ಅಷ್ಟರಲ್ಲಿ ಅಲಾರಾಂ ಕೂಗಿ ಕೂಗಿ ಎಚ್ಚರ ಮಾಡಿಸಿಯೇ ಬಿಡ್ತು. ಸಾಕು,ಕನಸು ಕಂಡಿದ್ದು..ಏಳು, ಬೆಳಗಾಯ್ತು..ಕಾಯಕ ನಿನಗಾಗೇ ಕಾದಿದೆ ಎಂದು…ಕನಸೇ ಆದರೂ ,ನನ್ನ ಮನಸ್ಸು ನಿರ್ಧಾರ ಮಾಡಿತ್ತು.. ಮೂಲೆಗುಂಪಾಗಿ ಹೋದವರ ಬೆಳಕಿನೆಡೆಗೆ ತರಲೇ ಬೇಕು ಎಂಬ ಗಟ್ಟಿ ನಿರ್ಧಾರ ಖಚಿತ ಆಗಿತ್ತು….
- ಶೋಭಾ ನಾರಾಯಣ ಹೆಗಡೆ. ಶಿರಸಿ