ಸ್ನೇಹಿತರೆಂದರೆ ಪಬ್ ಬಾರ್ ರೆಸ್ಟೋರೆಂಟ್ ಗಳಲ್ಲಿ ಮೋಜು ಮಸ್ತಿ ಮಾಡೋದಕ್ಕೆ ಅಲ್ಲ, ಸುಖ ಇದ್ದಾಗ ಸುಖದಲ್ಲಿ, ಕಷ್ಟ ಬಂದಾಗ ಕಷ್ಟಕ್ಕೆ ಹೆಗಲು ಕೊಡೋದು ನಿಜವಾದ ಸ್ನೇಹ. ಸ್ನೇಹದ ಮಹತ್ವದ ಕುರಿತು ಶೋಭಾ ಅವರು ಬರೆದಿರುವ ಒಂದು ಸುಂದರ ಬಾಂಧವ್ಯದ ಲೇಖನ ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ….
ಸ್ನೇಹವೆಂಬುದು ಒಂದು ಅಮೂಲ್ಯವಾದ ಸಂಪತ್ತು, ಸ್ನೇಹಿತರಿಲ್ಲದ ಮನುಜನೇ ಇಲ್ಲ ಎನ್ನಬಹುದು, ಇದು ಒಂದು ಭಾವನಾತ್ಮಕ ಸಂಬಂಧ, ಪ್ರತಿಯೊಬ್ಬರೂ ಜೀವನದಲ್ಲಿ ಒಬ್ಬ ಸ್ನೇಹಿತರನ್ನಾದರೂ ಹೊಂದಿರುತ್ತಾರೆ. ಈ ಸ್ನೇಹವೆಂಬ ಅಮೂಲ್ಯ ಸಂಪತ್ತನ್ನು ಕಾಪಾಡಿಕೊಳ್ಳುವ ಬಗೆ ಹೇಗೆ? ತುಂಬಾ ಸುಲಭ ನಂಬಿಕೆ, ಸ್ನೇಹ ಮತ್ತು ಸ್ನೇಹಿತರ ಮೇಲೆ ಬಲವಾದ ನಂಬಿಕೆಯಿರಬೇಕು ಮತ್ತು ಅವರ ಏಳಿಗೆಯನ್ನು ಕಂಡು ಅವರ ಅಭ್ಯುದಯವನ್ನು, ಯಶಸ್ಸನ್ನು ಕಂಡು ಕರುಬದೆಯಿರುವಂತ ನಿಷ್ಕಲ್ಮಶ ಮನಸ್ಸಿನ ಸ್ನೇಹವಿದ್ದಾಗ ಸ್ನೇಹದ ಭಾಂದವ್ಯ ಚಿರಕಾಲ ಉಳಿಯುವುದರಲ್ಲಿ ಸಂಶಯವಿಲ್ಲ. ಹಾಗಂತ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದಿಲ್ಲ ಅಂತೇನಿಲ್ಲ, ಹಾಗೆ ಮೂಡಿದ ಭಿನ್ನಾಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ನೇರವಾಗಿ ಚರ್ಚಿಸಿ ಮನದ ಗೊಂದಲಗಳನ್ನು ದೂರ ಮಾಡಿಕೊಂಡಾಗ ಎಲ್ಲವೂ ಸರಿಯಾಗುವುದು.
ಸುಖದಲ್ಲಿ ಜೊತೆ ನಿಲ್ಲದೆ ಇದ್ದರೂ ಚಿಂತೆಯಿಲ್ಲ, ಆದರೆ ಕಷ್ಟದಲ್ಲಿ ಜೊತೆ ನಿಂತು ಹೆಗಲಿಗೆ ಹೆಗಲಾಗಿ ಅವನ ಅಥವಾ ಅವಳ ಬೇಕು ಬೇಡಗಳನ್ನು ಗಮನಿಸಿ ಧೈರ್ಯ ಭರವಸೆಗಳನ್ನು ತುಂಬುತ್ತಾ ಬದುಕಿನ ಭರವಸೆಯ ಕಳೆದುಕೊಳ್ಳದಂತೆ ಸ್ಫೂರ್ತಿಯ ಮಾತುಗಳನ್ನಾಡಿ ಅವರನ್ನು ದುಃಖದಿಂದ ಹೊರತರುವ ಕಾರ್ಯ ಮಾಡುವುದು ನಿಜವಾದ ಸ್ನೇಹಿತನ ಕೆಲಸ.
ಫೋಟೋ ಕೃಪೆ : google
ತಂದೆಯಂತೆ ತಿದ್ದಿ ತೀಡಿ, ತಾಯಿಯಂತೆ ಮಮತೆ ವಾತ್ಸಲ್ಯ ತೋರುವ ಸ್ನೇಹಿತರಿದ್ದರೆ ನಮ್ಮಷ್ಟು ಪುಣ್ಯವಂತರು ಯಾರಿಲ್ಲ ಅನ್ನಬಹುದು, ನಮ್ಮೊಳಗಿನ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಹಾಗೂ ನಮ್ಮಾತ್ಮಬಲದ ಅರಿವನ್ನು ಮೂಡಿಸಿ, ಹಿತ ಶತ್ರುಗಳಂತೆ ನಮ್ಮ ಬಗ್ಗೆ ಬೆನ್ನ ಹಿಂದೆ ಮಾತನಾಡದೆ ನಮ್ಮ ತಪ್ಪುಗಳನ್ನು ನಮಗೆ ನೇರವಾಗಿ ತಿಳಿಸುವ ಹಾಗೂ ನಮ್ಮ ನಕಾರಾತ್ಮಕ ಭಾವನೆಗಳಿಗೆ ಸಕಾರಾತ್ಮಕತೆಯ ಸುಂದರ ಭಾವ ತುಂಬಿ ನಮ್ಮ ಜೀವನವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯೊಲು ಸಹಕರಿಸುವ ವ್ಯಕ್ತಿಯೇ ನಿಜವಾದ ಸ್ನೇಹಿತ ಅಥವಾ ಸ್ನೇಹಿತೆ ಎನ್ನಬಹುದು.
ಸ್ನೇಹಿತರೆಂದರೆ ಪಬ್ ಬಾರ್ ರೆಸ್ಟೋರೆಂಟ್ಗಳಲ್ಲಿ ಮೋಜು ಮಸ್ತಿ ಮಾಡಲಿಕ್ಕಷ್ಟೇ ಸೀಮಿತವಲ್ಲ, ಅದನ್ನೂ ಮೀರಿದ ಒಂದು ಭಾವೈಕ್ಯತೆಯ ಭಾಂದವ್ಯ, ಈ ಸ್ನೇಹ ಎನ್ನುವುದು ಎಲ್ಲ ಸಂಬಂಧಗಳನ್ನು ಮರೆಸುವ ಶಕ್ತಿಯೂ ಹೌದು, ಎಲ್ಲ ಸಂಬಂಧಗಳನ್ನು ಬೆಸೆಯುವ ಶಕ್ತಿಯೂ ಹೌದು. ಸ್ನೇಹ-ಪ್ರೀತಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸ್ನೇಹವಿದ್ದಲ್ಲಿ ಪ್ರೀತಿ, ಪ್ರೀತಿಯಿದ್ದಲ್ಲಿ ಸ್ನೇಹವಿದ್ದೇ ಇರುತ್ತದೆ.
ಸ್ನೇಹವೆಂಬುದು ಒಂದು ಕೈಯಿಂದ ಹೊಡೆಯುವ ಚಿಟಿಕೆಯಲ್ಲ, ಅದು ಎರಡೂ ಕೈ ಸೇರಿ ಹೊಡೆಯುವ ಚಪ್ಪಾಳೆಯಾಗಬೇಕು, ಸ್ನೇಹದ ಮಹತ್ವ ಅರಿತವರು ಈಗೋ ಇಂದ ದೂರವಿರುತ್ತಾರೆ ಮತ್ತು ಸ್ನೇಹಿತನ ಹಿತ ಬಯಸುವ ಸಹೃದಯಿಗಳಾಗಿರುತ್ತಾರೆ, ತನ್ನದೇ ನಡೆಯಬೇಕೆಂಬ ಧೋರಣೆಯಿದ್ದರೆ ಸ್ನೇಹತ್ವವನ್ನು ಕಾಪಾಡಿಕೊಳ್ಳುವುದು ಕಷ್ಟ ಸಾಧ್ಯ. ಒಬ್ಬರು ಮಾತ್ರ ಸ್ನೇಹದ ಮಹತ್ವ ಅರಿತಿದ್ದರೆ ಸಾಲದು ಸ್ನೇಹ ಉಳಿಸಿಕೊಳ್ಳಬೇಕೆಂಬ ಮನಸ್ಥಿತಿ ಇಬ್ಬರಲ್ಲೂ ಇದ್ದಾಗ ಎಂತಹ ಪರಿಸ್ಥಿತಿ ಬಂದರೂ ತಾಳ್ಮೆಯಿಂದ ಸಮಸ್ಯೆಯನ್ನು ಬಗೆಹರಿಸಿ ಸ್ನೇಹವನ್ನು ಉಳಿಸಿಕೊಳ್ಳುತ್ತಾರೆ, ಇಲ್ಲವಾದಲ್ಲಿ ಆ ಸ್ನೇಹ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಂತೆಯೇ.
ಫೋಟೋ ಕೃಪೆ : google
ಸ್ನೇಹಿತರೆಂದು ಒಮ್ಮೆ ಅವರನ್ನು ಒಪ್ಪಿ ಅಪ್ಪಿದ ಮೇಲೆ ಅವರ ಒಳಿತು ಕೆಡುಕುಗಳ ಬಗ್ಗೆಯೂ ಯೋಚಿಸಬೇಕಾದ್ದು ಒಬ್ಬ ನಿಜವಾದ ಸ್ನೇಹಿತೆ ಅಥವಾ ಸ್ನೇಹಿತನ ಕರ್ತವ್ಯವೂ ಹೌದು, ಒಂದೊಮ್ಮೆ ನಮ್ಮ ಸ್ನೇಹಿತರು ತಪ್ಪು ದಾರಿಯಲ್ಲಿ ನಡೆದು ಅದರಿಂದ ಅವರಿಗೇನಾದರೂ ತೊಂದರೆಯಾದರೆ ಅಥವಾ ಅವರಿಗೆ ಕೆಟ್ಟ ಹೆಸರು ಬಂದರೆ ಎನ್ನುವ ಮುಂದಾಲೋಚನೆಯಿಂದ ಸ್ನೇಹಿತರ ಒಳಿತನ್ನು ಬಯಸಿ ಸಲಹೆ ನೀಡುವುದು ತಪ್ಪಿನ ಕೆಲಸವಲ್ಲ, ನಿಜವಾದ ಸ್ನೇಹಿತರಾದರೆ ಅದನ್ನು ಒಪ್ಪಿಕೊಳ್ಳುತ್ತಾರೆ ಇಲ್ಲವೇ ಅದು ಹಾಗಲ್ಲ ಹೀಗೆ ಎನ್ನುವ ಕಾರಣವನ್ನಾದರೂ ಕೊಡುತ್ತಾರೆ, ಇಲ್ಲ ಹೆಚ್ಚೆಂದರೆ ಅವರ ಇಗೋಗೆ ಅಥವಾ ಅಹಂಕಾರಕ್ಕೆ ನೋವಾಯಿತು ಎಂದು ನಮ್ಮನ್ನು ನಿರ್ಲಕ್ಷ್ಯ ಮಾಡಬಹುದು, ಅವರು ನಿರ್ಲಕ್ಷ್ಯಮಾಡಿಯಾರು ಎಂಬ ಭಯದಿ ಅವರ ತಪ್ಪುಗಳನ್ನು ತಿದ್ದದೆ ಅದನ್ನೇ ಸಮರ್ಥಿಸಿ ನಡೆದರೆ ನಿಜವಾದ ಸ್ನೇಹಕ್ಕೆಲ್ಲಿದೆ ಅರ್ಥ. ಯಾವ ಬಂಧವಾದರೂ ಋಣ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಉಳಿಯುವುದೆಂಬ ಮಾತನ್ನು ಅರ್ಥೈಸಿಕೊಂಡು ಒಳಿತನ್ನು ಬಯಸುವುದಷ್ಟೇ ಒಬ್ಬ ಸಹೃದಯಿ ಸ್ನೇಹಿತನ ಕೆಲಸವಾಗಬೇಕು.
ನಮ್ಮ ಅಂತರಾತ್ಮದ ನೋವಿಗೆ ಸ್ಪಂದಿಸುವ ಗೆಳೆಯ ಅಥವಾ ಗೆಳತಿ ಸಿಗುವುದು ಅಪರೂಪದಲ್ಲಿ ಅಪರೂಪ, ಅಂತಹ ಅಪರೂಪದ ಮಾಣಿಕ್ಯವೇನಾದರೂ ನಮ್ಮ ಪಾಲಿಗೆ ದೊರಕಿದರೆ ಅದೊಂದು ಸುಕೃತವೇ ಸರಿ.
ಆದರೆ ಇತ್ತೀಚೆಗೆ ನಿಷ್ಕಲ್ಮಶ ಸ್ನೇಹ ಸಿಗುವುದೇ ಅತಿ ವಿರಳ, ಎಲ್ಲದರಲ್ಲೂ ಲಾಭವನ್ನೇ ಹುಡುಕುವ ಜನರ ಮಧ್ಯೆ ನಮ್ಮ ನಂಬಿಕೆಗೆ ಅರ್ಹವಾದ ವ್ಯಕ್ತಿ ಸ್ನೇಹಿತರಂತೆ ಸಿಕ್ಕಿದರೆ ಅದು ನಮಗೆ ನಿಧಿ ದೊರೆತಂತೆಯೇ ಸರಿ. ಇಂತಹ ಅಮೂಲ್ಯ ರತ್ನವ ಕಾಪಾಡಿಕೊಳ್ಳುವ ಹೊಣೆಯೂ ಕೂಡ ಇನ್ನೊಬ್ಬ ಸ್ನೇಹಿತನದಾಗಿರುತ್ತದೆ. ಎಲ್ಲರ ಜೀವನದಲ್ಲೂ ಅಮೂಲ್ಯ ರತ್ನದಂತಹ ಸ್ನೇಹಿತರು ಸಿಗಲೆಂದು ಆಶಿಸುವೆ ಹಾಗೆ ಸಿಕ್ಕ ಅಮೂಲ್ಯ ರತ್ನದಂತ ಸ್ನೇಹಿತರನ್ನು ನೀವು ಕೂಡಾ ಜೋಪಾನವಾಗಿ ಕಾಪಿಟ್ಟುಕೊಳ್ಳಿ ಎಂದು ಹೇಳಲಿಚ್ಚಿಸುವೆ.
- ️ಶೋಭಾ ಆರ್