ಬದಲಾಗುತ್ತಿದೆ ಕಾಶ್ಮೀರ – ಡಾ.ಗುರುಪ್ರಸಾದ್ ರಾವ್ ಹವಲ್ದಾರ್

ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿ ಅಲ್ಲಿನ ಜನರು ಇತರ ರಾಜ್ಯದ ಜನರಂತೆ, ಸಾಮಾನ್ಯ ಭಾರತೀಯ ನಾಗರೀಕರಾಗಿ ಬಾಳುವಂತೆ ಆಗಲು ನಾಲ್ಕು ವರ್ಷವಾಯಿತು. ಜಮ್ಮು- ಕಾಶ್ಮೀರದ ಕುರಿತು ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರು ಬರೆದಿರುವ ಚಿಂತನ ಲೇಖನವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ….

75 ವರ್ಷಗಳ ಹಿಂದಿನಿಂದಲೂ ಸಮಸ್ಯೆಯಾಗಿ ಉಳಿದಿದ್ದ , ಪಾಕಿಸ್ತಾನ ಪ್ರೇರಿತ ಉಗ್ರ ಚಟುವಟಿಕೆ ಯಿಂದಾಗಿ ಅಸಂಖ್ಯಾತ ಯೋಧರು, ನಾಗರಿಕರು ,ಕಾಶ್ಮೀರ ಪಂಡಿತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದ ಈ ಕಾಶ್ಮೀರ ಕಣಿವೆಯ ಸಮಸ್ಯೆಗೆ ಪರಿಹಾರ ಇಲ್ಲವೇ ಎಂಬ ಸಂದರ್ಭದಲ್ಲಿ 2019 ಆಗಸ್ಟ್ 5ರಂದು ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಷಾವರು ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನುಚ್ಛೇದ 370 ಮತ್ತು 35ಎ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವ ರಾಷ್ಟ್ರಪತಿಗಳ ಆದೇಶವನ್ನು ಪ್ರಕಟಿಸಿದರು. ಸ್ವತಂತ್ರ ಬಂದಾಗಿನಿಂದಲೂ ಇರುವ ಜಮ್ಮು ಕಾಶ್ಮೀರವನ್ನು ಪ್ರತ್ಯೇಕಿಸಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಮೂಲಕ ‘ಜಮ್ಮು ಮತ್ತು ಕಾಶ್ಮೀರ ಮರುರಚನಾ ಕಾಯ್ದೆ’ಯನ್ನೂ ಜಾರಿಗೊಳಿಸಲಾಯಿತು. ಅಲ್ಲಿಗೆ ಭಾರತದ ಇತರ ರಾಜ್ಯಗಳಷ್ಟೇ ಹಕ್ಕುಗಳು ಜಮ್ಮು-ಕಾಶ್ಮೀರದವರಿಗೂ ಇರುವಂಥ ವ್ಯವಸ್ಥೆ ಜಾರಿಗೆ ಬಂತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಕೇಂದ್ರ ಸರ್ಕಾರ ಸೈನ್ಯ ಪಡೆಯನ್ನು ನಿಯೋಜಿಸಿತು,ಅಲ್ಲಿನ ರಾಜಕೀಯ ಪಕ್ಷಗಳ ಮುಖಂಡರನ್ನು, ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿರಿಸಿದರು, ಉಗ್ರರು ಇದರ ಪ್ರಯೋಜನ ಪಡೆಯಬಾರದು ಎಂದು ಇಂಟರ್​ನೆಟ್ ಸಂಪರ್ಕ ಕಡಿತಗೊಳಿಸಿತು, ಬಿಗಿ ಬಂದೋಬಸ್ತ್, ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿತು. ಅಲ್ಲದೇ ಅಲ್ಲಿನ ಜನರಲ್ಲಿ ಇದ್ದ ಭಯ ಆತಂಕ ಗಳನ್ನು ಹೋಗಲಾಡಿಸಲು ಭದ್ರತಾ ಸಲಹೆಗಾರದ ಆಜಿತ್ ದೋವೆಲ್ ಅವರು ಕಾಶ್ಮೀರಕ್ಕೆ ತೆರಳಿ ಜನರೊಂದಿಗೆ ಸಮುದಾಯಗಳೊಂದಿಗೆ ಮಾತುಕತೆ ನಡೆಸಿ ಸಹಜತೆಯತ್ತ ಬರುವಂತೆ ಮಾಡಿದರು.

ಕೇಂದ್ರ ಸರ್ಕಾರ ಜಗತ್ತಿನ ಪ್ರಮುಖ ರಾಷ್ಟಗಳಿಗೆ ಕಾಶ್ಮೀರ ದ ಸ್ಥಿತಿ ಗತಿಯನ್ನು ಅರಿಯಲು ಆಹ್ವಾನ ನೀಡಿ ಪಾಕಿಸ್ತಾನದ ಮಂಡುವಾದಕ್ಕೆ ತಿರುಗೇಟು ನೀಡಿತು. ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಿಂದ ‘ಗುಪ್ಕಾರ್’ ಎಂಬ ಮೈತ್ರಿಕೂಟ ರಚಿಸಿಕೊಂಡು ಕಾಶ್ಮೀರದ ವಿಶೇಷಾಧಿಕಾರ ಮರುಸ್ಥಾಪನೆಗೆ ಈಗಲೂ ಹೋರಾಡುತ್ತಿವೆ. ಪ್ರಧಾನಿಯವರು ಸರ್ವಪಕ್ಷ ಸಭೆಯನ್ನು ಭಾಗವಹಿಸಲು ಕರೆದ ಸಂದರ್ಭದಲ್ಲಿ ಗುಪ್ಕಾರ್ ಕೂಟದ ಪಕ್ಷಗಳ ತಮ್ಮ ಹಾಳೆ ಚಾಳಿಯನ್ನು ಮುಂದುವರೆಸಿದ್ದು ತಮ್ಮ ನಿಲುವು ಕಾಶ್ಮೀರ ಜನರ ನಿಲುವು ಎಂದು ವಾದಿಸಿದ್ದು ಇಡೀ ದೇಶವೆ ಗಮನಿಸಿತು.

ಅಲ್ಲಿನ ರಾಜಕೀಯ ಪಕ್ಷಗಳು ಯಾಕೆ ಮೊದಲು ಕಾಶ್ಮೀರ ಕಣಿವೆಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿವೆ, ಅವು ಹಾಗೆ ಹೇಳಲು ಕಾರಣವೆಂದು ತಿಳಿಯ ಬೇಕಾದರೆ ನಾವು ಸಂವಿಧಾನ ಬದ್ದ 370ನೇ ವಿಧಿಯ ಬಗ್ಗೆ ತಿಳಿಯಬೇಕು.

ಫೋಟೋ ಕೃಪೆ : google

ಸಂವಿಧಾನ ಬದ್ದ 370ನೇ ವಿಧಿ :

ಯಾವುದೇ ಒಂದು ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಲು ಭಾರತದ ಸಂವಿಧಾನದ 21ನೇ ಪರಿಚ್ಛೇದ ಅನ್ವಯವಾಗುತ್ತದೆ. ಪ್ರಾಂತೀಯ ಸರಕಾರಕ್ಕೆ ಸಾಕಷ್ಟು ಅಧಿಕಾರವನ್ನು ದಯಪಾಲಿಸುವ ವಿಧಿಯೇ 370. ಇದರ ಪ್ರಕಾರ ಒಂದು ಪ್ರಾಂತ್ಯಕ್ಕೆ ತಾತ್ಕಾಲಿಕವಾಗಿ (ಆ ಸಂದರ್ಭಕ್ಕೆ ಅಗತ್ಯವಿದ್ದಂತೆ) ವಿಶೇಷ ಸ್ಥಾನಮಾನವನ್ನು ಕಲ್ಪಿಸಬಹುದು. ಅಂತಹ ಸ್ಥಾನ ಪಡೆದ ರಾಜ್ಯ, ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಕಾನೂನಿನಿಂದ ಮುಕ್ತ. ಕೆಲವು ಕ್ಷೇತ್ರಗಳ ಹೊರತಾಗಿ ಉಳಿದೆಲ್ಲ ವಿಚಾರಗಳನ್ನು ಅಲ್ಲಿನ ವಿಧಾನಸಭೆಗೇ ಬಿಡಬೇಕು.

ಜಮ್ಮು ಕಾಶ್ಮೀರಕ್ಕೆ ಏಕೆ ನೀಡಲಾಯಿತು?

1947 ರ ಆಗಸ್ಟ್ 14, 15 ರಂದು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರಗೊಂಡವು. ಆ ವೇಳೆ ಕಾಶ್ಮೀರವನ್ನು ಒಂದು ಸ್ವತಂತ್ರ ರಾಜ್ಯವನ್ನಾಗಿ ಘೋಷಿಸಲಾಗಿತ್ತು. ಆ ರಾಜ್ಯದ ಮೇಲೆ ಎರಡೂ ದೇಶಗಳು ದಾಳಿ ಮಾಡಬಾರದೆಂಬ ನಿರ್ಣಯ ಕೈಗೊಳ್ಳಲಾಯಿತು. ಆದರೆ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕೆಂಬ ಪ್ರಯತ್ನವನ್ನು ಕೈಬಿಡಲಿಲ್ಲ. 1947 ಅ. 6ರಂದು ಪಾಕ್ ಬೆಂಬಲಿತ ‘ಆಜಾದ್ ಕಾಶ್ಮೀರ್’ ಎಂಬ ಪಡೆಯು ಪಾಕ್ ಮೇಲೆ ಮುಗಿಬಿತ್ತು. ಆಗ ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿಸಿಂಗ್ ತಮ್ಮ ರಾಜ್ಯವನ್ನು ರಕ್ಷಿಸುವಂತೆ ಭಾರತವನ್ನು ಕೋರಿದರು. ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣವಾಗಿ ಒಪ್ಪಿಸಿದರೆ ನೆರವು ನೀಡುವುದಾಗಿ ಆಗ ಭಾರತ ಸರಕಾರ ಹೇಳಿತ್ತು. ಇದಕ್ಕೆ ಹರಿಸಿಂಗ್ ಸುತರಾಂ ಒಪ್ಪಲಿಲ್ಲ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಅಂದಿನ ಪ್ರಧಾನಿ ಪಂಡಿತ್ ಜವಹರ್ಲಾಲ್ ನೆಹರೂ ಒಂದು ಒಪ್ಪಂದಕ್ಕೆ ಬಂದರು. ‘‘ಭಾರತದೊಂದಿಗೆ ಜಮ್ಮು ಕಾಶ್ಮೀರ ವಿಲೀನವಾಗಬೇಕು, ಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಕ್ಷೇತ್ರಗಳ ಹೊರತಾಗಿ ಇನ್ಯಾವುದೇ ವಿಷಯದಲ್ಲಿ ಭಾರತದ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.’’ ಆ ಕರಾರುಗಳಿಗೆ ಸಹಿ ಬಿದ್ದಾಗಿನಿಂದ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯವಾಗಿದೆ.

ಸಂವಿಧಾನದ 238ನೇ ವಿಧಿ ಬೇರೆಲ್ಲಾ ರಾಜ್ಯಗಳಿಗೆ ಅನ್ವಯವಾದರೂ ಜಮ್ಮು- ಕಾಶ್ಮೀರಕ್ಕಲ್ಲ. ಆ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಸಂಸತ್ಗಿಲ್ಲ. ಒಂದು ವೇಳೆ ಸಂಸತ್ ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸಲೇಬೇಕೆಂದಿದ್ದರೆ ಅದನ್ನು ರಾಷ್ಟ್ರಪತಿ ಮೂಲಕ ರಾಜ್ಯ ಸರಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಕೆಲವು ಕಾನೂನುಗಳನ್ನು ಅಲ್ಲಿನ ಸರಕಾರದ ಅನುಮತಿ ಪಡೆದು ಸಂಸತ್ನಲ್ಲಿ ಮಂಡನೆ ಮಾಡಬಹುದು. ಅಂದರೆ, ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ. ಅದರ ತಿದ್ದುಪಡಿಯಾಗುವುದೂ ಆ ರಾಜ್ಯದ ವಿಧಾನಸಭೆಯಲ್ಲಿ. ಅಲ್ಲಿ ಕೈಗೊಳ್ಳಲಾಗವ ನಿರ್ಧಾರಗಳನ್ನು ಆ ರಾಜ್ಯ ಸರಕಾರದ ಅನುಮತಿ ಪಡೆದು ರಾಷ್ಟ್ರಪತಿ ಸಹಿ ಹಾಕಬೇಕಾಗುತ್ತದೆ. ಈ ರೀತಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಜಮ್ಮು ಕಾಶ್ಮೀರ. 1957ರ ಜನವರಿ 26ರಂದು ಅಲ್ಲಿನ ವಿಧಾನಸಭೆ ಪ್ರತ್ಯೇಕ ಸಂವಿಧಾನವನ್ನು ಅಂಗೀಕರಿಸಿತು.

ಫೋಟೋ ಕೃಪೆ : google

ತುರ್ತು ಪರಿಸ್ಥಿತಿಯೂ ಅನ್ವಯಿಸದು :

ಸಂವಿಧಾನದ ವಿಧಿ 360ರ ಪ್ರಕಾರ ಕೇಂದ್ರ ಸರಕಾರ ದೇಶಾದ್ಯಂತ ಆರ್ಥಿಕ ತುರ್ತುಸ್ಥಿತಿ ಘೋಷಿಸುವ ವಿಶೇಷ ಅಧಿಕಾರ ಹೊಂದಿರುತ್ತದೆ. ಆದರೆ, ಆರ್ಥಿಕ ತುರ್ತುಸ್ಥಿತಿಯನ್ನು ಈ ರಾಜ್ಯದಲ್ಲಿ ಘೋಷಿಸುವಂತಿಲ್ಲ. ಹೊರ ದೇಶಗಳು ಅತಿಕ್ರಮಣ ನಡೆಸಿದಾಗ ಇಲ್ಲವೇ ಯುದ್ಧದ ಸಮಯದಲ್ಲಿ ಮಾತ್ರ ತುರ್ತುಸ್ಥಿತಿ ಘೊಷಿಸಬಹುದು. ದೇಶದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರಿದ ಸಮಯದಲ್ಲಿ ಜಮ್ಮು ಕಾಶ್ಮೀರ ತುರ್ತುಸ್ಥಿತಿಯಂತಹ ಸನ್ನಿವೇಶದಿಂದ ಮುಕ್ತವಾಗಿರುತ್ತದೆ. ಹಾಗೊಂದು ವೇಳೆ ಈ ರಾಜ್ಯದಲ್ಲಿ ತುರ್ತುಸ್ಥಿತಿ ಘೋಷಣೆಯಾಗಲೇಬೇಕೆಂದರೆ ಅದಕ್ಕೆ ಅಲ್ಲಿನ ರಾಜ್ಯ ಸರಕಾರದ ಅನುಮತಿ ಬೇಕು. ರಾಷ್ಟ್ರಪತಿಯಾದವರು ಆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಅಲ್ಲಿನ ಸರಕಾರಕ್ಕೆ ಕೋರಿಕೆ ಸಲ್ಲಿಸಬೇಕು.

ಇತರ ನಿಯಮಗಳು :

ಬೇರೆ ರಾಜ್ಯದಿಂದ ಬಂದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆದರೆ, ಈ ರಾಜ್ಯದವರು ಭಾರತದ ಬೇರೆ ರಾಜ್ಯಗಳಲ್ಲಿ ಆಸ್ತಿ ಖರೀದಿಸಬಹುದು. ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ಹಕ್ಕನ್ನು ಬಿಟ್ಟರೆ ಇನ್ಯಾವ ಹಕ್ಕೂ ಈ ರಾಜ್ಯದಲ್ಲಿ ಜಾರಿಯಾಗಿಲ್ಲ. ಮತ್ತೊಂದು ವಿಚಾರವೆಂದರೆ ಈ ರಾಜ್ಯದ ನಾಗರಿಕನಾದವನು ತೆರಿಗೆ ಕಟ್ಟಬೇಕಾಗಿಲ್ಲ. ದೇಶದ ಎಲ್ಲಾ ಹೈಕೋರ್ಟುಗಳು ಸಂವಿಧಾನದ ವಿಧಿ 226ರ ಪ್ರಕಾರ ಕಾನೂನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿವೆ. ಆದರೆ, ಜಮ್ಮು ಕಾಶ್ಮೀರ ಹೈಕೋರ್ಟ್ ಮಾತ್ರ ಇದರಿಂದ ಮುಕ್ತ. ಯಾವ ಕಾನೂನುಗಳನ್ನೂ ಅಸಾಂವಿಧಾನಿಕ ಎಂದು ಘೋಷಿಸುವ ಹಕ್ಕೇ ಇಲ್ಲಿನ ಕೋರ್ಟ್ಗೆ ಇಲ್ಲ. ಈ ರಾಜ್ಯದ ಶಾಶ್ವತ ನಾಗರಿಕರು ಮಾತ್ರ ರಾಜ್ಯ ಸರಕಾರದ ಸೇವೆಗಳಿಗೆ ಅರ್ಹರು. ಶಾಶ್ವತ ನಾಗರಿಕರಿಗೆ ಮಾತ್ರ ಆಸ್ತಿ ಖರೀದಿಸುವ ಹಕ್ಕಿದೆ. ವಿದ್ಯಾರ್ಥಿವೇತನ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಈ ಎಲ್ಲ ವಿಚಾರದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆ ನಿರ್ಣಯವೇ ಅಂತಿಮ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಬೇಕೆಂದರೂ, ರಾಷ್ಟ್ರಪತಿ ಜಮ್ಮು ಕಾಶ್ಮೀರದ ಗವರ್ನರ್ ಅನುಮತಿ ಪಡೆಯಬೇಕು.

ಫೋಟೋ ಕೃಪೆ : google

ವಿಶೇಷ ಸ್ಥಾನಮಾನ ರದ್ದಾದ ನಂತರದ ಸ್ಥಿತಿ :

ಭಾರತದ ಮುಕುಟವಾದ ಕಾಶ್ಮೀರಕ್ಕೆ ಅಭಿವೃದ್ಧಿಯ ಹೊಂಗಿರಣವ ತುಂಬಲು, ಭಾರತ ಸರ್ಕಾರ 2019ರ ಆಗಸ್ಟ್ 5ರಂದು ತಗೆದುಕೊಂಡು ಆ ಐತಿಹಾಸಿಕ ನಿರ್ಣಯವೇ 370ನೇ ವಿಧಿ ರದ್ದು.. ಕಣಿವೆಗೆ ನೀಡಿದ್ದ ವಿಶೇಷಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ಹೆಜ್ಜೆ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ನಿರ್ಮಿಸಿದ ಪಥವನ್ನು ಶುರುಮಾಡಿದೆ.

ಹೆಚ್ಚಾಗಿ ಭಯೋತ್ಪಾದಕ ಚಟುವಟಿಕೆಗಳು, ಸೇನೆಯ ಮೇಲೆ ಕಲ್ಲು ತೂರಾಟ ಮಾಡುವ ಘಟನೆಗಳಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ.ಕಾಶ್ಮೀರದಲ್ಲಿ ಶಾಂತಿಯ ಮರುಸ್ಥಾಪನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಕೆಲಸಗಳು ವೇಗವಾಗಿ ಸಾಗುತ್ತದೆ. ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ20ಯ ಟೂರಿಂಗ್ ವರ್ಕಿಂಗ್ ಗ್ರೂಪ್ನ ಸಭೆ ಕಾಶ್ಮೀರ ಬದಲಾಗುತ್ತಿದೆ ಎನ್ನುವ ಮಾತಿಗೆ ಉದಾಹರಣೆ ಎನ್ನುವಂತೆ ನಿಂತಿದೆ. ಅಂದಾಜು ಮೂರು ದಶಕಗಳ ನಂತರ ಕಾಶ್ಮೀರದಲ್ಲಿ ಸಾರ್ವಜನಿಕ ಹಾಗೂ ಸಾಮಾಜಿಕ ಜೀವನವವು ಅಡೆತಡೆಗಳಿಲ್ಲದೆ ಸಾಮಾನ್ಯ ದಿನಚರಿಗೆ ಮರಳಿದೆ.

ಭಯೋತ್ಪಾದನೆ ನಿಗ್ರಹ :

ಕಳೆದ ದಶಕಗಳಿಂದಲೂ ಭಯೋತ್ಪಾದಕ ದಾಳಿಯಿಂದ ನಲುಗುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿವೆ. ಭದ್ರತಾ ಕಾರಣಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಆಗಾಗ ಶಾಲೆಗಳು, ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಹಾಗೂ ಆಸ್ಪತ್ರೆ ಸೇರಿಂದತೆ ಸಾರ್ವಜನಿಕ ಸಂಸ್ಥೆಗಳನ್ನು ಪದೇ ಪದೇ ಮುಚ್ಚಲಾಗುತ್ತಿತ್ತು. ಎಲ್ಲೆಂದರಲ್ಲಿ ಐಇಡಿ ಸ್ಫೋಟಗಳು, ಸೇನಾಪಡೆಗಳನ್ನು ಗುರಿಯಾಗಿಸಿ ಗುಂಡಿನದಾಳಿ, ನಾಗರಿಕರ-ವಲಸಿಗರ ಹತ್ಯೆ ನಡೆಸಲಾಗುತ್ತಿತ್ತು. ಆದರೆ, ಕೇಂದ್ರಸರ್ಕಾರದ ನಿರ್ಣಯದ ಬಳಿಕ ಭದ್ರತಾ ಪರಿಸ್ಥಿತಿ ಸುಧಾರಿಸಿದ್ದು ಯಾವುದೇ ಆತಂಕವಿಲ್ಲದೇ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಗಳ ಪ್ರಕಾರ, 2018ರಲ್ಲಿ ಅಂದರೆ 370ನೇ ವಿಧಿ ರದ್ದುಗೊಳಿಸುವ ಮೊದಲು ದಾಖಲಾಗುತ್ತಿದ್ದ ಭದ್ರತಾ ಸಮಸ್ಯೆಗಳು 2022ರ ವೇಳೆಗೆ ಶೇ.97.2ರಷ್ಟು ಕಡಿಮೆಯಾಗಿದೆ. ಅದರಲ್ಲೂ ಭಯೋತ್ಪಾದಕ ಕೃತ್ಯಗಳು ಶೇ.45.2ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ. ಇನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುವವರ ಸಂಖ್ಯೆ ಕೂಡ ಇಳಿಕೆಯಾಗಿದ್ದು, 2018ರಲ್ಲಿ 199ರಷ್ಟಿದ್ದ ಸಂಖ್ಯೆ 2023ರ ವೇಳೆಗೆ 12ಕ್ಕೆ ತಲುಪಿದೆ. ಮತ್ತೂಂದು ಪ್ರಮುಖ ವಿಚಾರವೆಂದರೆ ಖುದ್ದು ಕಾಶ್ಮೀರದ ಯುವಕರೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದು, ಸೇನಾ ನೇಮಕಾತಿಗಳಲ್ಲಿ ಆಸಕ್ತಿ ವಹಿಸಿ ಸೇನೆ ಸೆರ್ಪಡೆಗೊಳ್ಳುತ್ತಿದ್ದಾರೆ.

ಈ ನಾಲ್ಕು ವರ್ಷಗಳ ಅವಧಿಯ ಸ್ಥಿತಿ ಮತ್ತು ಅದರ ಹಿಂದಿನ ಸ್ಥಿತಿ ಬಗ್ಗೆ ಹೋಲಿಕೆ ಮಾಡಿದಾಗ, ಹಿಂಸಾಚಾರ, ಗದ್ದಲಗಳು ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಗ್ರೆನೇಡ್ ದಾಳಿಗಳಂಥ ಪ್ರಕರಣಗಳು ಶೇ.15, ಐಇಡಿ ಸ್ಫೋಟಗಳಲ್ಲಿ ಮರಣ ಹೊಂದುವವರ ಸಂಖ್ಯೆ ಶೇ.57, ಹಿಟ್ ಆ್ಯಂಡ್ ರನ್ ಕೇಸುಗಳಲ್ಲಿ ಶೇ.42, ಆಯುಧಗಳ ಕಳವು ಪ್ರಕರಣಗಳಲ್ಲಿ ಶೇ.60, ಕಲ್ಲು ಎಸೆತ ಪ್ರಕರಣಗಳಲ್ಲಿ ಶೇ.92, ಹರತಾಳ ಮತ್ತು ಬಂದ್ ಕರೆಯಂಥ ಪ್ರಕರಣಗಳು ಶೇ.90, ಎನ್ಕೌಂಟರ್ಗಳು ಶೇ.32, ಭಯೋತ್ಪಾದಕರಿಂದ ನಾಗರಿಕರ ಸಾವು ಶೇ.11, ಕಾನೂನು ಮತ್ತು ಸುವ್ಯವಸ್ಥೆ ವೇಳೆ ನಾಗರಿಕರ ಸಾವು ಶೇ.100, ಪೊಲೀಸರ ಸಾವು ಶೇ.57, ಭಯೋತ್ಪಾದಕರ ನೇಮಕಾತಿ ಶೇ.58, ಅಪಹರಣ ಶೇ.58ರಷ್ಟು ಕಡಿಮೆಯಾಗಿವೆ.

ಈ ವರ್ಷ ಭದ್ರತಾ ಪಡೆಗಳು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ 35 ಉಗ್ರರು ಮೃತಪಟ್ಟಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 120 ಕ್ಕಿಂತ ಹೆಚ್ಚು. 2022ರಲ್ಲಿ, 56 ವಿದೇಶಿಯರು ಸೇರಿದಂತೆ 186 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಅಧಿಕೃತ ಅಂಕಿ ಅಂಶ ಪ್ರಕಾರ, ಈ ವರ್ಷ ಹಲವು ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಲಾಗಿದೆ ಮತ್ತು ಜುಲೈ ಅಂತ್ಯದವರೆಗೆ 12ಕ್ಕಿಂತ ಹೆಚ್ಚು ಸ್ಥಳೀಯರು ಉಗ್ರ ಸಂಘಟನೆಗೆ ಸೇರಿಲ್ಲ. ಇದು ಸಕ್ರಿಯ ಉಗ್ರರ ಸಂಖ್ಯೆಯನ್ನು ಎರಡಂಕಿಗೆ ಇಳಿಸಿದೆ.

ಹೀಗಾಗಿ 370ನೇ ವಿಧಿ ತೆಗೆದುಹಾಕಿದ್ದರಿಂದ ಕಣಿವೆ ರಾಜ್ಯದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. 2019ಕ್ಕೂ ಮುನ್ನ ಇದ್ದ ಸ್ಥಿತಿಯೂ ಈಗಿಲ್ಲ ಎಂಬುದು ಅಲ್ಲಿನ ನಾಗರಿಕರೇ ಮಾತನಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಮೊಹರಂ ಕಡೇ ದಿನದ ಮೆರವಣಿಗೆ. ಇದನ್ನು ಶಿಯಾ ಮುಸಲ್ಮಾನರು ಮಾಡುತ್ತಿದ್ದು, ಕಳೆದ 37 ವರ್ಷಗಳಿಂದ ನಿಷೇಧಿಸಲಾಗಿತ್ತು. ಕಣಿವೆ ರಾಜ್ಯದಲ್ಲಿ ಶಿಯಾ ಮುಸ್ಲಿಮರ ಸಂಖ್ಯೆ ಕಡಿಮೆ ಇದ್ದು, ಬಹುಸಂಖ್ಯಾತರು ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಜತೆಗೆ, ಮೆರವಣಿಗೆ ಮೇಲೆ ಕಲ್ಲು ಎಸೆತದಂಥ ಪ್ರಕರಣಗಳು ಹೆಚ್ಚಾಗಿದ್ದರಿಂದ ನಿಷೇಧ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ಈ ಮೆರವಣಿಗೆ ನಡೆಯಿತಲ್ಲದೇ, ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಭಾಗಿಯಾಗಿದ್ದರು.

5,502 ಮಂದಿ ಪಂಡಿತರಿಗೆ ಉದ್ಯೋಗ :

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಮಸ್ಯೆಯಿಂದಾಗಿ ಕಣಿವೆ ತೊರೆಯುತ್ತಿದ್ದ ಕಾಶ್ಮೀರಿ ಪಂಡಿತರಿಗೂ 370ನೇ ವಿಧಿ ರದ್ದುಗೊಳಿಸಿದ ಬಳಿಕ ಸುರಕ್ಷತೆ ಒದಗಿಸಲಾಗಿದ್ದು, 2019ರಿಂದ 2022ರ ವರೆಗೆ ಯಾವುದೇ ಕಾಶ್ಮೀರಿ ಪಂಡಿತರು ಕಣಿವೆಯಿಂದ ವಲಸೆ ಹೋಗಿಲ್ಲ. ದತ್ತಾಂಶಗಳ ಪ್ರಕಾರ ಜಮ್ಮು-ಕಾಶ್ಮೀರ ಸರ್ಕಾರದ ವಿವಿಧ ಇಲಾಖೆಗಳಲ್ಲೂ 5,502 ಮಂದಿ ಕಾಶ್ಮೀರಿ ಪಂಡಿತರಿಗೆ ” ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೆಜ್ (ಪಿಎಂಡಿಪಿ) ಅನ್ವಯ’ ಉದ್ಯೋಗ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಕಾಶ್ಮೀರಿ ಪಂಡಿತರು ನಿರಾಳವಾಗಿ ಜೀವಿಸುವಂತಾಗಿದೆ.

ಬಜೆಟ್ ವಿಸ್ತರಣೆ :

ಜಮ್ಮು-ಕಾಶ್ಮೀರ ಅಭಿವೃದ್ಧಿಗೆ 370 ನೇ ವಿಧಿ ರದ್ದುಗೊಳಿಸಿದ ಬಳಿಕ ಅತ್ಯಧಿಕ ಆದ್ಯತೆ ನೀಡಲಾಗಿದ್ದು, 2019-2020ರಲ್ಲಿದ ವಾರ್ಷಿಕ ಬಜೆಟ್ 80,423 ಕೋಟಿ ರೂ.ಗಳು ಗಣನೀಯವಾಗಿ ಏರಿಕೆ ಕಂಡಿದ್ದು, 2023-24 ನೇ ಅವಧಿಗೆ 1,18,500 ಕೋಟಿ ರೂ.ಗಳ ಬಜೆಟ್ ಘೋಷಿಸಲಾಗಿದೆ. ಅಲ್ಲದೇ, ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೆಜ್ (ಪಿಎಂಡಿಪಿ) ಅನ್ವಯ ಆರೋಗ್ಯ, ನೈರ್ಮಲ್ಯ, ಜಲವಿದ್ಯುತ್ ಯೋಜನೆಗಳು, ಉನ್ನತ ಶಿಕ್ಷಣ ಸೇರಿದಂತೆ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಗೆಂದು 58,477 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿ, ಹೂಡಿಕೆಗೆ ಉತ್ತೇಜನ :

ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿಯೇ 2021ರಲ್ಲಿ ಕೇಂದ್ರಸರ್ಕಾರವು 28, 400 ಕೋಟಿ ರೂ.ಗಳನ್ನು ನಿಗದಿ ಪಡಿಸಿದ್ದು, ಸ್ವತಂತ್ರ್ಯದ ಬಳಿಕ ಕವೆಯ ಅಭಿವೃದ್ಧಿಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿರುವುದು ಇದೇ ಮೊದಲು ಎಂದೂ ಸರ್ಕಾರ ತಿಳಿಸಿದೆ. ಅಲ್ಲದೇ, ದೇಶದ ಇತರೆ ಭಾಗಗಳಂತೆ ಕವೆಯಲ್ಲೂ ಹೂಡಿಕೆ ಉತ್ತೇಜಿಸಿ, ಹೊಸ ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಲು ಯೋಜನೆಗಳನ್ನು ರೂಪಿಸಲಾಗಿದೆ.

ಫೋಟೋ ಕೃಪೆ : google

ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳದೊಂದಿಗೆ ಪ್ರವಾಸೋದ್ಯಮ ಚಟುವಟಿಕೆಯೂ ಗರಿಗೆದರಿದೆ. ಕಳೆದ ವರ್ಷ ಕೇಂದ್ರಾಡಳಿತ ಪ್ರದೇಶಕ್ಕೆ 1.88 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರೆ, ಈ ವರ್ಷ ಎರಡು ಕೋಟಿ ದಾಟುತ್ತದೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚೆಗೆ ನಡೆದ ಜಿ-20 ಸಭೆಯು ಜಮ್ಮು-ಕಾಶ್ಮೀರದಲ್ಲೂ ಯಾವುದೇ ಆತಂಕವಿಲ್ಲದೇ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಕೇಂದ್ರಸರ್ಕಾರವು ಕಣಿವೆಯ ಸಂಪೂರ್ಣ ಪರಿಚಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದು, ಕಣಿವೆಯಲ್ಲಿ ಕರಕುಶಲತೆ, ಪ್ರವಾಸೋದ್ಯಮ, ಆತಿಥ್ಯವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೂಡಿಕೆಗೆ ಆಕರ್ಷಿಸಿದೆ.

  • ತಂಗ್ಮಾರ್ಗ್- ಗುಲ್ಮಾರ್ಗ್ ಪ್ರದೇಶಗಳಲ್ಲಿರುವ ಉದ್ಯಾನವನ, ಸರೋವರ, ರಸ್ತೆಗಳು ಸೇರಿದಂತೆ ಎಲ್ಲ ಸರ್ಕಾರಿ ಸಂಪತ್ತನ್ನು ಮರು ಅಭಿವೃದ್ಧಿಗೊಳಿಸಲು 1.64 ಕೋಟಿ ರೂ.ಗಳನ್ನು ಕಣಿವೆ ಸರ್ಕಾರ ವ್ಯಯಿಸಿದೆ.
  • ಕಾಶ್ಮೀರಿ ಶಾಲ್ಗಳು, ದಿರಿಸುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಸ್ಥಾಪಿಸಿ, ವ್ಯಾಪಾರ ಉತ್ತೇಜಿಸಲಾಗಿದೆ.
  • ನದಿಗಳ ಸೌಂದರ್ಯ ಅಭಿವೃದ್ಧಿ ಪಡಿಸಿ, ಪ್ರವಾಸಿಗರು ದೋಣಿಗಳಲ್ಲಿ ಸಂಚರಿಸಲು ಉತ್ತಮ ವ್ಯವಸ್ಥೆ ರೂಪಿಸಲಾಗಿದೆ.
  • ಪ್ರಖ್ಯಾತ ದಾಲ್ ಲೇಖ್ನಲ್ಲಿ ಬಣ್ಣ ಬಣ್ಣದ ದೋಣಿಗಳನ್ನು ನಿಯೋಜಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.
  • ಬಾರಾಮುಲ್ಲದಲ್ಲಿರುವ ರೆಸಾರ್ಟ್ಗಳನ್ನು ಮರು ನವೀಕರಿಸಿ, ಪ್ರವಾಸಿಗರಿಗೆ ಸುರಕ್ಷಿತ ತಂಗುದಾಣ ಕಲ್ಪಿಸಲಾಗಿದೆ.
  • ನಿರುದ್ಯೋಗ ಸಮಸ್ಯೆಯನ್ನು ಶೇ.30 ರಿಂದ ಶೇ. 23.1ಕ್ಕೆ ಇಳಿಸಲಾಗಿದ್ದು, ವ್ಯಾಪಾರಿಗಳು ನಿರ್ಭೀತಿಯಿಂದ ವ್ಯವಹರಿಸಲು ಅನುವು ಮಾಡಿಕೊಡಲಾಗಿದೆ.

ದಶಕದ ಹಿಂದೆ ಕಾಶ್ಮೀರ ಬಿಟ್ಟು ಹೋಗಿದ್ದಂತಹ ಲಕ್ಷಾಂತರ ಕಾಶ್ಮೀರ ಪಂಡಿತರಲ್ಲಿ ಸಮಾರು 3, 841 ಜನರು ತಮ್ಮ ಮೂಲ ನೆಲೆಗೆ ಹಿಂದಿರುಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ಸ್ಥಳೀಯ ನಿವಾಸಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆಗೆ ಆಯ್ಕೆ ಆಗಿದ್ದಾರೆ. ಭಾರತ ದೇಶದ ಮುಕುಟ ಮಣಿಯಾದ ಕಾಶ್ಮೀರವು ನಿಧಾನವಾಗಿ ಶಾಂತಿ, ಅಭಿವೃದ್ಧಿಯತ್ತ ಮುಖಮಾಡುತ್ತಿದೆ, ಈ ನಾಲ್ಕು ವರ್ಷಗಳಲ್ಲಿ ಕಣಿವೆ ರಾಜ್ಯ ಬದಲಾಗಿದೆ ಎಂಬುದನ್ನು ತಳ್ಳಿಹಾಕಲಾಗದು. ಹಾಗಂಥ ಮೈಮರೆತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಹಿಂಸೆಗಾಗಿ ಕಾಯುತ್ತಲೇ ಇರುತ್ತಾರೆ. ಇದರ ಮೇಲೂ ಗಮನ ಇರಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕಾಗಿದೆ.

ಸಂಪೂರ್ಣವಾಗಿ ಬದಲಾವಣೆಯಾಗಬೇಕಾದರೆ ಕೇವಲ ಕೇಂದ್ರ ಸರ್ಕಾರ, ಸ್ಥಳೀಯ ಆಡಳಿತದಂದ ಮಾತ್ರ ಸಾಧ್ಯವಿಲ್ಲ ಅಲ್ಲಿ ನೆಲೆಸಿರುವ ಕಾಶ್ಮೀರಿಗಲ್ಲದೇ ಹಿಂದೂ, ಸಿಖ್, ಬೌದ್ಧ ಮುಂತಾದ ಧರ್ಮದ ಜನರಲ್ಲಿನ ಭಯ ಆತಂಕ ದೂರಗೊಳಿಸಿ ಅವರಲ್ಲಿ ವಿಶ್ವಾಸ ಮೂಡಿಸಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ವಿರೋಧ ಪಕ್ಷಗಳು ದೇಶದ ಜನರು ಹೇಳ ಬೇಕಾಗಿದೆ ಹಾಗೆ ಆದಾಗ ಮಾತ್ರ ಕಾಶ್ಮೀರದ ಅಭಿವೃದ್ಧಿ ಸಾಧ್ಯ.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW