‘ಹಾಲ್ ಮಾರ್ಕ್ ಕಾರ್ಡ್’ ತಯಾರಕರಾಗಿದ್ದ “ಜೊಯ್ಸ್ ಹಾಲ್” ಎಂಬವರು ಮೊದಲಿಗೆ “ಸ್ನೇಹಿತರ ದಿನ” ಆರಂಭಿಸಿದರು. ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ಸೂಚಿಸಲು ಅಗಸ್ಟ್ ಮೊದಲ ವಾರದಲ್ಲಿ “ಸ್ನೇಹಿತರ ದಿನವನ್ನು” ಆಚರಿಸುತ್ತಾರೆ. ಸ್ನೇಹದ ಮಹತ್ವದ ಕುರಿತು ಸೌಮ್ಯ ಸನತ್ ಅವರು ಬರೆದಿರುವ ಲೇಖನವನ್ನು ಓದಿ, ನಿಮ್ಮ ಗೆಳೆತನವನ್ನು ಗಟ್ಟಿಗೊಳಿಸಿ, ತಪ್ಪದೆ ಓದಿ ಮತ್ತು ಶೇರ್ ಮಾಡಿ…
ಸ್ನೇಹ ಒಂದು ಅತ್ಯದ್ಭುತ ಅನುಭವ. ಸ್ನೇಹ ಎಂಬುದು ಜೀವನದಲ್ಲಿ ದೇವರು ಕೊಟ್ಟ ಮಾನವ ಸಂಬಂಧಗಳಲ್ಲಿ ಅಮೂಲ್ಯವಾದ ಬಂಧನ. ದೇಶ,ಗಡಿ,ಭಾಷೆ,ಜಾತಿ ಧರ್ಮ ಎಲ್ಲಾ ಕಟ್ಟುಪಾಡುಗಳನ್ನು ಮೀರಿನಿಂತ ಪವಿತ್ರವಾದ ಸಂಬಂಧ. ಪವಿತ್ರ ಸ್ನೇಹದಲ್ಲಿ ಕಪಟವಿಲ್ಲ, ಸ್ವಾರ್ಥವಿಲ್ಲ. ಸ್ನೇಹವಿಲ್ಲದ ಜೀವವಿಲ್ಲವೆನ್ನಬಹುದು.ಅದರಲ್ಲೂ ಭಾರತೀಯರು “ವಿಶ್ವಕ್ಕೆ ವಸುದೈವ ಕುಟುಂಬ” ಎಂದರೆ ವಿಶ್ವವೇ ಒಂದು ಕುಟುಂಬವಿದ್ದಂತೆ ಎಂದು ಹೇಳಿದವರು.
ಮೊದಲ ನೋಟದಲ್ಲಿ ಪ್ರೀತಿ ಹುಟ್ಟಬಹುದು.ಆದರೆ ಮೊದಲ ನೋಟದಲ್ಲೇ ಸ್ನೇಹ ಹುಟ್ಟುಲು ಸಾಧ್ಯವಿಲ್ಲ.ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹದ ಹುಟ್ಟಾಗುತ್ತದೆ.ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹವೆನ್ನುವುದು ಸಿಗುವುದು.ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಹಾಗೆ ಸ್ನೇಹಿತರಾಗಿ ಉಳಿಯುವರು.
ಫೋಟೋ ಕೃಪೆ : google
ಸ್ನೇಹಿತರ ದಿನ ಮೊದಲ ವಿಶ್ವಯುದ್ಧದ ಬಳಿಕ ಅಂದರೆ 1930ರ ಬಳಿಕ ಶಾಂತಿ ಅಭಿಯಾನ ಮತ್ತು ಜನರು ಪರಸ್ಪರ ಬೆರೆಯಲು ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ “ಜೊಯ್ಸ್ ಹಾಲ್” ಎಂಬವರು ಮೊದಲಿಗೆ “ಸ್ನೇಹಿತರ ದಿನ” ಆರಂಭಿಸಿದರು. ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ಸೂಚಿಸಲು ಅಗಸ್ಟ್ ಮೊದಲ ವಾರದಲ್ಲಿ “ಸ್ನೇಹಿತರ ದಿನವನ್ನು” ಆಚರಿಸುವರು.
“ವ್ಯಸನೇ ಕ್ಲಿಶ್ಯಮಾನಂ ಹಿ ಯೋ ಮಿತ್ರಂ ನಾಭಿಪದ್ಯತೇ
ಅನುನೀಯ ಯಥಾಶಕ್ತಿಂ ತಂ ನೃಶಂಸಂ ವಿದುರ್ಬುಧಾಃ”
ಸ್ನೇಹಿತನ ಕಷ್ಟಕ್ಕೆ ಸ್ಪಂದಿಸದ, ಅವನಿಗೆ ಸಹಾಯವನ್ನು ನೀಡದ ‘ಸ್ನೇಹಿತ’ ಎಂಬ ವ್ಯಕ್ತಿಯನ್ನು ಈ ಮೇಲಿನ ಸುಭಾಷಿತ ಕ್ರೂರಿ ಎಂದು ಹೇಳುತ್ತದೆ. ಕಷ್ಟದಲ್ಲಿ ಸಿಕ್ಕಿರುವ ಮಿತ್ರನಿಗೆ ಸಮಾಧಾನವನ್ನು ಹೇಳಿ, ಅವನಿಗೆ ಯಥಾಶಕ್ತಿ ಸಹಾಯವನ್ನು ಯಾರು ಮಾಡುವರೋ ಅವರೇ ನಿಜವಾದ ಸ್ನೇಹಿತರು ಯಾರು ಸಹಾಯ ಮಾಡುವುದಿಲ್ಲವೋ ಅಂಥವನನ್ನು ಕ್ರೂರಿ ಎಂಬುದು ಮಹಾಭಾರತದಲ್ಲಿ ಬರುವ ಈ ಮಾತುಗಳು ನಿಜವಾದ ಸ್ನೇಹದ ಲಕ್ಷಣವನ್ನು ಬಹು ಅರ್ಥಪೂರ್ಣವಾಗಿ ನಿರೂಪಿಸುತ್ತಿದೆ.
ಮುಳುಗುತ್ತಿರುವ ವ್ಯಕ್ತಿಯೊಬ್ಬನನ್ನು ಕಾಪಾಡುವುದು ಮನುಷ್ಯಧರ್ಮ. ಹೀಗಿರುವಾಗ ಸ್ನೇಹದ ಲಕ್ಷಣವೇ ಹೊಣೆಗಾರಿಕೆ, ಪ್ರೀತಿ, ಕಾಳಜಿಗಳು ಆಗಿರುವಾಗ, ಸ್ನೇಹಿತನ ನೆರವಾಗಿ ಧಾವಿಸದ ಸ್ನೇಹಕ್ಕೆ ಅರ್ಥವಾದರೂ ಹೇಗೆ ಉಳಿದೀತು? ಪ್ರತೀ ವ್ಯಕ್ತಿಯ ಬದುಕಿನಲ್ಲಿ ಸ್ನೇಹ ಎನ್ನುವುದು ಜೀವನದ ಒಂದು ಭಾಗ. ಕಣ್ಣೀರೊರೆಸುವ ಕೈಗಳಾಗಿ, ಬಿದ್ದಾಗ, ಸೋತಾಗ ಬೆನ್ನು ತಟ್ಟುವ ಶಕ್ತಿಯಾಗಿ, ನಗುವಲ್ಲಿ ಜೊತೆಯಾಗುವವರೇ ನಿಜವಾದ ಸ್ನೇಹಿತರು.
ನಾವು ಯಾವಾಗಲಾದರೂ ಬೇಜಾರಲ್ಲಿದ್ದಾಗ ಮೊದಲು ಫೋನ್ ಮಾಡಿ ಮಾತನಾಡುವುದು ಬೆಸ್ಟ್ ಫ್ರೆಂಡ್ ಬಳಿಯೇ. ಸಮಸ್ಯೆಗೆ ಪರಿಹಾರ ಸಿಗುತ್ತೋ ಬಿಡುತ್ತೋ ಅದು ಸೆಕೆಂಡರಿ ಆದರೆ ಬೇಸರದಲ್ಲಿ ಫೋನ್ ಮಾಡಿದಾಗ ಕೊನೆಯಲ್ಲಿ ಮುಖದ ಮೇಲೆ ನಗು ಮಾತ್ರ ಮೂಡಿರುತ್ತದೆ ಅಲ್ಲವೇ. ಅದೇ ಸ್ನೇಹಕ್ಕಿರುವ ಶಕ್ತಿ.
ಉತ್ತಮ ಸ್ನೇಹದಿಂದ ಮನಸ್ಸು ಧನಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ. ನನ್ನುಭವಕ್ಕೆ ಬಂದ ಹಾಗೆ ಅದು ಎಷ್ಟೋ ಸಲ ನಿಜಕ್ಕೂ ಹೌದು.
“Sometimes, Being with your best friend is all the therapy you need “ಎನ್ನುವ ಮಾತಿದೆ. ಸ್ನೇಹ ಎನ್ನುವುದು ಮಾನಸಿಕ ಆರೋಗ್ಯಕ್ಕೆ ಎಷ್ಟೋ ಸಲ ಅದಮ್ಯ ಚೈತನ್ಯ ನೀಡಿ ಒಂದು ಉತ್ತಮ ಚಿಕಿತ್ಸೆಯಾಗುವುದಕ್ಕೆ ಕಾರಣವಾಗುತ್ತದೆ.
ಫೋಟೋ ಕೃಪೆ : google
ಸ್ನೇಹ ಬೆಲೆ ಕಟ್ಟಲಾಗದ ಸಂಪತ್ತು, ಅದನ್ನು ಕಷ್ಟ ಪಟ್ಟು ಸಂಪಾದನೆ ಮಾಡಿಕೊಳ್ಳುವಂತದ್ದು.ಸ್ನೇಹ ಒಂದು ಜವಾಬ್ದಾರಿ, ಜೀವನದುದ್ದಕ್ಕೂ ನಿಭಾಯಿಸಿಕೊಂಡು ಹೋಗುವಂತದ್ದು. ಉತ್ತಮ ಸ್ನೇಹಿತರನ್ನು ಕೈ ಮತ್ತು ಕಣ್ಣಿಗಳಿಗೆ ಹೋಲಿಸಬಹುದು. ಕೈಗೆ ಗಾಯವಾಗಿ ನೋವು ಉಂಟಾದಾಗ ಕಣ್ಣು ನೀರು ಸುರಿಸುತ್ತದೆ. ಕಣ್ಣು ನೀರು ಸುರಿಸಿದರೆ ಕೈ ಅದನ್ನು ಒರೆಸುತ್ತದೆ. “ಕೈ – ಕಣ್ಣು” ಎಂಥಹಾ ಅದ್ಭುತ ಜೋಡಿ.ಇದಕ್ಕಿಂತ ಸುಂದರ ವ್ಯಾಖ್ಯಾನ ಸ್ನೇಹಕ್ಕೆ ಬೇರೇ ಇದೆಯೇ ಇಲ್ಲವೇ ಇಲ್ಲ. ಹಾಗೆಯೇ “ಸ್ನೇಹವೆಂದರೆ ಎರಡು ಶರೀರಗಳಲ್ಲಿ ವಾಸಿಸುವ ಒಂದೇ ಆತ್ಮ” ಎಂಬ ಅರಿಸ್ಟಾಟಲ್‌ನ ಮಾತು ಈ ಅನ್ಯೋನ್ಯತೆಯನ್ನು ಕುರಿತಾಗಿಯೇ ಹೇಳಿರಬೇಕು ಅಲ್ಲವೇ.
ಸ್ನೇಹವು ಸಾಗರದಂತೆ ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ. ಒಂದು ಮಧುರ ಅನುಭವ. ಆದರೆ ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ. ಇದು ಅನೇಕ ವರುಷಗಳ ಫಲ. ನನ್ನ ಪ್ರಕಾರ ಸ್ನೇಹವು ಹೇಗೆ ಅತೀ ಮಧುರವೋ ಹಾಗೆ ಜಾಗ್ರತೆವಹಿಸಿ ಕಾಪಾಡುವುದು ಬಹುಮುಖ್ಯ. ಅತ್ಯಮೂಲ್ಯವೆನಿಸಿದ ಸ್ನೇಹವನ್ನು ಕಾಪಾಡಿಕೊಳ್ಳಲು, ಸ್ನೇಹ ಉಳಿಸಿಕೊಳ್ಳುಲು….
* ಸ್ನೇಹದಲ್ಲಿ ನಂಬಿಕೆ, ಹಾಗೂ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಬೇಕು.
* ತೋರ್ಪಡಿಕೆಯ ಸ್ನೇಹಕ್ಕಿಂತ ನೈಜ ಸ್ನೇಹ ದೀರ್ಘಕಾಲ ಉಳಿಯವ ಹಾಗೆ ನೋಡಿಕೊಳ್ಳಬೇಕು.
* ಸ್ನೇಹವನ್ನು ಪಡೆಯಲು, ದಕ್ಕಿಸಿಕೊಳ್ಳಲು ತಾಳ್ಮೆ ಬಹಳ ಮುಖ್ಯ.
* ಅತಿಯಾದ ನಿರೀಕ್ಷೆ ಇಟ್ಟುಕೊಂಡಾಗ ನಿರಾಸೆ ಹೆಚ್ಚಾಗುತ್ತದೆ. ನಿರಾಸೆ ಅತಿಯಾದರೆ ಒದ್ದಾಟ ಹೆಚ್ಚಾಗುತ್ತದೆ.
* ಸ್ನೇಹವನ್ನು ಉಳಿಸಿಕೊಳ್ಳಬೇಕಾದರೆ ಮೊದಲು ನಾವು ನಾವಾಗಿರಬೇಕು. ಕೆಲ ಬದಲಾವಣೆಗಳಿಗೆ ನಮ್ಮನ್ನು ನಾವು ಬದಲಿಸಿಕೊಂಡರೆ ಅಲ್ಲಿ ಸ್ನೇಹದ ತಾಳ ತಪ್ಪುತ್ತದೆ.ಅತೀ ಜಾಗರೂ ಕತೆಯಿಂದ ಸ್ನೇಹವನ್ನು ಮಾಡಿ ಉಳಿಸಿಕೊಳ್ಳುವುದು ಅಷ್ಟೇ ಮುಖ್ಯವಲ್ಲವೇ.
- ಸೌಮ್ಯ ಸನತ್