‘ಮಾಡರ್ನ್ ಸಂಸಾರ’ ಸಣ್ಣಕತೆ – ಶುಭಾ ಶ್ರೀನಾಥ್

ಇಬ್ಬರೂ ಚಿಕ್ಕಂದಿನಿಂದ ಹಾಸ್ಟೆಲ್, ಪಿಜಿ ಅಂತ ಇದ್ದುದ್ದರಿಂದ ಇಬ್ಬರಿಗೂ ಮನೆ, ಸಂಸಾರದ ಜವಾಬ್ದಾರಿಗಳು ಅರಿತಿರಲಿಲ್ಲ, ಅವರು ಮದುವೆ ಆದಾಗ ಇಬ್ಬರ ನಡುವೆ ನಾನು ಹೆಚ್ಚು… ನಾನು ಕಮ್ಮಿ..ಅಂತ ಬರೋಕೆ ಶುರುವಾಯಿತು ಅದನ್ನು ಸುಧಾ ಹೇಗೆ ನಿಭಾಯಿಸಿದರು ತಪ್ಪದೆ ಓದಿ ವಾಸ್ತವಕ್ಕೆ ಹತ್ತಿರವಾದ ಶುಭಾ ಶ್ರೀನಾಥ್ ಅವರ ಬರಹದಲ್ಲಿ…

“ಕ್ಯಾಬ್ ಡ್ರೈವರ್ ಗೆ ದುಡ್ಡು ಆಗಲೇ ಪಾವತಿ ಮಾಡಿದ್ದೇನೆ ಅಮ್ಮ… ನೀನೇನು ಕೊಡಬೇಡ, ಜೊತೆಗೆ ನಮ್ಮ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಅವರಿಗೂ ನೀನು ಬರುತ್ತೀಯ ಅಂತ ಆ್ಯಪ್ ನಲ್ಲಿ ಕಳುಹಿಸಿದ್ದೇನೆ, ನೀನು ಫ್ಲಾಟ್ ನಂಬರ್ ಮತ್ತು ನನ್ನ ಹೆಸರು ಹೇಳು ಕಳುಹಿಸುತ್ತಾರೆ “ಎಂದು ಮಗ ಮೊಬೈಲಿನಲ್ಲಿ ಹೇಳಿದಾಗ ತನ್ನ ಬ್ಯಾಗ್ ಹಿಡಿದು ವಸುಧಾ ಕ್ಯಾಬ್ ನಿಂದ ಕೆಳಗಿಳಿದರು.

ಫೋಟೋ ಕೃಪೆ : google

ಕ್ಯಾಬ್ ಡ್ರೈವರ್ ಗೆ ಹಣ ಆಗಲೇ ಆನ್ಲೈನ್ ನಲ್ಲಿ ಕಳುಹಿಸಿದ್ದಾರೆ ಎಂದು ತಿಳಿಸಿ ಸೆಕ್ಯೂರಿಟಿ ಹತ್ತಿರ ಮನೆ ನಂಬರ್ ಮತ್ತು ಸಿದ್ಧಾರ್ಥ್ ಮನೆ ಎಂದು ತಿಳಿಸಿ ಲಿಫ್ಟ್ ಏರಿ ಮಗನ ಮನೆಗೆ ಬಂದರು. ಬಾಗಿಲಲ್ಲೇ ನಿಂತು ನಗು ಮೊಗದಿಂದ ಸ್ವಾಗತ ಮಾಡಿದ ಮಗನನ್ನು ಕಂಡು ಖುಷಿಯಾಯಿತು. ಮುಖದ ತುಂಬಾ ಬೆಳೆದ ಗಡ್ಡ – ಮೀಸೆ, ಹಾಕಿದ್ದ ತ್ರಿ ಫೋರ್ಥ ಪ್ಯಾಂಟ್ ಮೇಲೆ ಎಂತಹುದೋ ಒಂದು ಟೀ ಶರ್ಟ್, ಬಹುಶಃ ಚೆನ್ನಾಗಿ ತಿಂದುಂಡು ವಯಸ್ಸಿಗಿಂತ ಹೆಚ್ಚು ದಪ್ಪವಾಗಿದ್ದಾನೆ ಅನಿಸಿತು. ಮುಂದೆ ನೆತ್ತಿಯ ಮೇಲೆ ದಪ್ಪ ಹಿಪ್ಪಿ, ಹಿಂದೆ ಕೂದಲು ಸಣ್ಣದಾಗಿ ಬಿಟ್ಟಿದ್ದನು. ಕ್ರಿಕೆಟ್ ಮ್ಯಾಚ್ ಇದ್ದಾಗ ಟಿವಿಯಲ್ಲಿ ನೋಡುವ ಕೊಹ್ಲಿ ತರ ಕಟಿಂಗ್. ಈಗಿನ ಕಾಲದಲ್ಲಿ ಎಲ್ಲರದೂ ಹೆಚ್ಚು ಕಮ್ಮಿ ಇದೇ ವೇಷ ಅನಿಸಿತು. ” ಅಮ್ಮ ಪ್ರಯಾಣವೆಲ್ಲ ಸುಖಕರವಾಗಿ ಆಯಿತೇ, ಕ್ಯಾಬ್ ನವನು ಸರಿಯಾಗಿ ಕರೆದುಕೊಂಡು ಬಂದನೆ ಅಪ್ಪ ಹೇಗಿದ್ದಾರೆ? ” ಎಂದು ಬ್ಯಾಗ್ ತೆಗೆದು ಕೊಂಡು ಒಳಗೆ ಹೋದನು.” ಎಲ್ಲಾ ಸುಖಕರವಾಗಿ ಆಯಿತು, ನಿಮ್ಮ ಅಪ್ಪ ಚೆನ್ನಾಗಿದ್ದಾರೆ, ಎಲ್ಲಿ ಯಶಸ್ವಿ ಕಾಣಿಸುತ್ತಾ ಇಲ್ಲ” ಎಂದರು. ಅಷ್ಟರಲ್ಲಿ ಯಶಸ್ವಿ ಹೊರಗೆ ಬಂದಳು. ಭುಜದವರೆಗೆ ಕತ್ತರಿಸಿದ ಕೂದಲು, ಚಿಕ್ಕದೊಂದು ಫ್ರಾಕ್ ಹಾಕಿ ಕೊಂಡಿದ್ದಳು. ಹಣೆ, ಕಿವಿ, ಕೈ ಎಲ್ಲವೂ ಬೋಳು. ಕತ್ತಿನಲ್ಲಿ ಮಾತ್ರ ಕಂಡು ಕಾಣದ ಹಾಗಿರುವ ಬಂಗಾರದ ಚಿಕ್ಕ ಮಾಂಗಲ್ಯದ ಸರ ಇತ್ತು. ” ಹಾಯ್ ಆಂಟಿ, ಚೆನ್ನಾಗಿದಿರಾ ಅಂಕಲ್ ಹೇಗಿದ್ದಾರೆ ” ಎಂದಳು.” ಎಲ್ಲರೂ ಚೆನ್ನಾಗಿದಿವಿ , ನೀನು” ಎಂದು ಕೇಳಿದರು. ” ನಾನು ಚೆನ್ನಾಗಿದಿನಿ ಆಂಟಿ” ಎಂದಳು.

ಸಿದ್ಧಾರ್ಥ್ ಫ್ರಿಡ್ಜ್ ತೆಗೆದು ತಂಪು ಪಾನೀಯದ ಬಾಟಲ್ ಕೊಟ್ಟನು.” ಅಮ್ಮ ಫ್ರೆಶ್ ಅಪ್ ಆಗು, ತಗೋ ಜ್ಯೂಸ್ ಕುಡಿ” ಎಂದು ಕೊಟ್ಟನು. ತಣ್ಣನೆ ಜ್ಯೂಸ್ ಹೊಟ್ಟೆಗೆ ಸೇರಿತು. ಎಸಿಯ ತಣ್ಣನೆ ಗಾಳಿ ಹಿತವಾಗಿತ್ತು. ಯಶಸ್ವಿ ನನಗೆ ಕಾಲ್ ಇದೆ ಎಂದು ಒಳಗೆ ಹೋದಳು. ಸಿದ್ಧಾರ್ಥ್ ಕೂಡಾ ಅಮ್ಮ ನನಗೂ ಕಾಲ್ ಇದೆ ಎಂದು ಹೇಳಿ ಒಳಗೆ ಹೋದನು. ವಸುಧಾ ಅವರಿಗೆ ಏನು ಮಾಡಬೇಕು, ಮಗ ಸೊಸೆ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಕೊಂಡು ಬಚ್ಚಲಿಗೆ ಕೈಕಾಲು ತೊಳೆಯಲು ಹೋದರು.ಜಾರಿ ಬೀಳುವಂತೆ ಆಯಿತು.ಗೋಡೆಯನ್ನು ಹಿಡಿದು ಬೀಳುವುದನ್ನು ತಡೆದರು. ಬಚ್ಚಲು ಮತ್ತು ಟಾಯ್ಲೆಟ್ ಉಜ್ಜಿ ಯಾವ ಕಾಲವಾಯಿತೋ ತಿಳಿಯದು ಅನಿಸಿತು. ಅಲ್ಲೊಂದು ಮೂಲೆಯಲ್ಲಿ ಎರಡು ಬಕೆಟ್ ತುಂಬಾ ಬಟ್ಟೆಗಳ ರಾಶಿಯೇ ಇತ್ತು. ಕೈಕಾಲು ಮುಖ ತೊಳೆದು ಅಡುಗೆ ಮನೆಗೆ ಹೋದರು.ಅಡುಗೆ ಮನೆಯ ಕಟ್ಟೆಯ ಮೇಲೆ ಅಲ್ಲಲ್ಲಿ ಪಿಜ್ಜಾ ಬರ್ಗರ್ ತಿಂದು ಇಟ್ಟಿದ ಪೊಟ್ಟಣಗಳು, ಸಾಸ್, ಜ್ಯೂಸ್ ಬಾಟಲ್ ಬಿದ್ದಿದ್ದವು.ಅವುಗಳಿಗೆ ಒಂದಷ್ಟು ನೊಣ, ಇರುವೆ, ಚಿಕ್ಕ ಚಿಕ್ಕ ಹುಳುಗಳು ಮುತ್ತಿದ್ದವು. ಅಲ್ಲೊಂದು ಕಡೆ ಈರುಳ್ಳಿ ಸಿಪ್ಪೆ, ಕೊಳೆತ ಟಮೊಟೊ ಇದ್ದವು.ಕೆಟ್ಟ ವಾಸನೆ ಬರುತ್ತಿತ್ತು. ಸಿಂಕಿನಲ್ಲಿ ತೊಳೆಯಲು ರಾಶಿ ಪಾತ್ರೆ ಇದ್ದವು. ಅಲ್ಲಲ್ಲಿ ಸಕ್ಕರೆ, ಕಾಫಿ , ಟೀ ಚೆಲ್ಲಿ ಒಣಗಿ ಕಲೆ ಕುಳಿತಿತ್ತು. ಅಬ್ಬಾ ಎಷ್ಟು ಕೆಟ್ಟದಾಗಿ ಮನೆಯನ್ನು ಇಟ್ಟು ಕೊಂಡಿದ್ದಾರೆ ಅನಿಸಿತು. ಹಾಲಿನಲ್ಲಿ ಟೀಪಾಯಿ ಮೇಲೆ, ಚಪ್ಪಲಿ ಸ್ಟ್ಯಾಂಡ್ ಮೇಲೆ ಆನ್ಲೈನ್ ನಲ್ಲಿ ಸಾಮಾನು ತರಿಸಿದ ಕಾಗದದ ಪೊಟ್ಟಣಗಳು ಬಿದ್ದಿದ್ದವು. ಬಹುಶಃ ಎಷ್ಟೋ ದಿನದಿಂದ ಅಡುಗೆ ತಿಂಡಿ ಮಾಡಿದ ಲಕ್ಷಣಗಳು ಕಾಣಿಸಲಿಲ್ಲ.ಮನೆಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಮಾಸ್ಕ್ ಗಳನ್ನು ನೋಡಿದಾಗ ಅಂತೂ ಇಬ್ಬರೂ ಅದೆಷ್ಟು ಸೋಮಾರಿಗಳು ಅನಿಸಿತು. ಅಲ್ಲಲ್ಲಿ ಚಪ್ಪಲಿ ಸ್ಟ್ಯಾಂಡ್ ನಿಂದ ಹೊರಗೆ ಬಿದ್ದಿದ್ದ ಸಾಕ್ಸ್, ಶೂ, ಚಪ್ಪಲಿ ಎಲ್ಲಾ ನೋಡಿ ಸ್ವಲ್ಪವೂ ಓರಣ ಮಟ್ಟಸವಿಲ್ಲ ಎಂದು ಕೊಂಡರು. ಮೊದಲು ಎಲ್ಲಿಂದ ಮನೆಯನ್ನು ಸ್ವಚ್ಚ ಮಾಡುವುದು ಎಂದು ತೋಚದೇ ಹೋಯಿತು. ಸೀರೆಯನ್ನು ಎತ್ತಿ ಕಟ್ಟಿ ಅಡುಗೆ ಮನೆಯ ಕಟ್ಟೆಯ ಮೇಲಿದ್ದ ವಸ್ತುಗಳನ್ನು ತೆಗೆದು ಡಸ್ಟ್ ಬಿನ್ ನಲ್ಲಿ ಹಾಕಬೇಕು ಎಂದು ನೋಡಿದರು. ಆ ಡಸ್ಟ್ ಬಿನ್ ತೊಳೆದು ಯಾವ ಕಾಲಾವಾಗಿತ್ತೋ ತಿಳಿಯದು, ಅಷ್ಟೊಂದು ಕೆಟ್ಟದಾಗಿ ಇತ್ತು. ಮೊದಲು ಅದನ್ನು ತೊಳೆದು ಎಲ್ಲವನ್ನೂ ಅದರಲ್ಲಿ ಹಾಕ ತೊಡಗಿದರು. ಒಂದರ್ಧ ಗಂಟೆಯಲ್ಲಿ ಎಲ್ಲವನ್ನು ನಾಲ್ಕು ಡಸ್ಟ್ ಬಿನ್ ನಷ್ಟು ಕಸ ತುಂಬಿ ಇಟ್ಟರು.ಅಷ್ಟರಲ್ಲಿ ಹೊರಗೆ ಬಂದ ಸಿದ್ಧಾರ್ಥ್ ” ಅಮ್ಮ, ಏನು ಮಾಡ್ತಾ ಇದೀಯ” ಎಂದನು.” ಏನಿಲ್ಲ ನನ್ನ ಮುದ್ದು ಮಗ ಮನೆಯನ್ನು ಎಷ್ಟು ಚೆನ್ನಾಗಿ ಇಟ್ಟು ಕೊಂಡಿದ್ದಾನೆ ಅಂತ ನೋಡ್ತಾ ಇದ್ದೆ” ಎಂದು ಮುಗುಳು ನಕ್ಕರು.” ಅಮ್ಮ ಬೆಂಗಳೂರಿನಲ್ಲಿ ಇದೇ ಬೆಸ್ಟ್ ಮನೆ ಗೊತ್ತಾ, ನನ್ನ ಫ್ರೆಂಡ್ಸ್ ಎಲ್ಲಾ ಇನ್ನು ಕೆಟ್ಟದಾಗಿ ಇಟ್ಟು ಕೊಳ್ಳುತ್ತಾರೆ” ಎಂದನು. ” ನನ್ನ ಮಗ ಬಹಳ ಜಾಣ ಅಲ್ಲವಾ, ಅದಕ್ಕೆ ಇಷ್ಟು ಚೆನ್ನಾಗಿ ಇಟ್ಟು ಕೊಂಡಿದ್ದಾನೆ” ಎಂದು ನಕ್ಕರು.” ಅಮ್ಮ ಹೋಗಮ್ಮ” ಎಂದು ನಸು ಮುನಿಸು ತೋರಿಸಿದನು. “ಇನ್ನೂ ಎರಡು ತಿಂಗಳು ಹೋಗುವುದಿಲ್ಲ, ನಿಮ್ಮಿಬ್ಬರಿಗೂ ಎಲ್ಲಾ ಅಚ್ಚುಗಟ್ಟು ಮಾಡಿ ಕೊಟ್ಟೆ ಹೋಗುವುದು, ಅಲ್ಲ ನಿಮ್ಮಿಬ್ಬರಿಗೂ ಕೆಲಸ ಮಾಡಲು ಟೈಂ ಇಲ್ಲ ಅಂದರೆ ಒಬ್ಬ ಕೆಲಸದವಳನ್ನು ನೇಮಿಸಿ ಕೊಳ್ಳಬಹುದಿತ್ತಲ್ಲವೆ ” ಎಂದರು. ” ಕೆಲಸದವರು ಯಾರೂ ಸಿಗುವುದಿಲ್ಲ, ನಮ್ಮ ಮನೆಗೆ ಬಂದು ಎರಡು ದಿನ ಕೆಲಸ ಮಾಡಿ ಬಿಟ್ಟು ಬಿಡುತ್ತಾರೆ” ಎಂದನು. ” ಮತ್ತೆ ನೀವಿಬ್ಬರೂ ಮನೆಯನ್ನು ಹೀಗೆ ಇಷ್ಟು ಚೆನ್ನಾಗಿ ಇಟ್ಟು ಕೊಂಡಿದ್ದರೆ ಯಾರು ಬರುತ್ತಾರೆ? ನಾನು ಸ್ವಲ್ಪ ದಿನ ಇದ್ದು ಏನಾದರೂ ವ್ಯವಸ್ಥೆ ಮಾಡುತ್ತೇನೆ ” ಎಂದರು. ” ಸ್ವೀಟ್ ಅಮ್ಮ, ನಿನಗೆ ಮಧ್ಯಾಹ್ನಕ್ಕೆ ಏನು ಊಟ ತರಿಸಲಿ” ಎಂದು ಕೇಳಿದನು. ಈಗಂತೂ ಈ ಪರಿಸ್ಥಿತಿಯಲ್ಲಿ ಇರುವ ಮನೆಯಲ್ಲಿ ಅಡುಗೆ ಮಾಡುವುದು ಅಸಾಧ್ಯ ಎಂದು ತಿಳಿಯಿತು, ” ನೀನು ಏನು ತರಿಸಿ ಕೊಳ್ಳುತ್ತಿಯಾ” ಎಂದು ಕೇಳಿದರು.” ಪನ್ನೀರ್ ಪಿಜ್ಜಾ, ಗಾರ್ಲಿಕ್ ಬ್ರೆಡ್, ಕೊಕ್ ” ಎಂದನು.” ಮತ್ತೆ ಯಶಸ್ವಿ” ಎಂದರು.” ಅವಳಿಗೆ ಏನು ಬೇಕೋ ಅದನ್ನು ಅವಳು ತರಿಸಿ ಕೊಳ್ಳುತ್ತಾಳೆ” ಎಂದನು, ಸ್ವಲ್ಪ ಅಸಡ್ಡೆಯಿಂದ.

ಫೋಟೋ ಕೃಪೆ : google

“ನನಗೆ ಒಂದು ಊಟ ತರಿಸಿ ಬಿಡು ಸಾಕು” ಎಂದರು. ” ಆಯ್ತು” ಎಂದು ಹೇಳಿದನು. ಅರ್ಧ ಗಂಟೆಯಲ್ಲಿ ಊಟ ಬಂದಿತು. ಅಮ್ಮ ಮಗ ಇಬ್ಬರೂ ಅದು ಇದು ಮಾತನಾಡುತ್ತಾ ಊಟ ಮಾಡಿದರು. ಯಶಸ್ವಿ ಐದು ಗಂಟೆಯ ಹೊತ್ತಿಗೆ ಹೊರಗೆ ಬಂದು ಚೋಲೆ ಬತ್ತೂರೆ ಎಂದು ದೊಡ್ಡ ಪೂರಿ ಮತ್ತು ಚನ್ನ ಮಸಾಲ ತರಿಸಿ ಕೊಂಡಳು. ಅದೇನೋ ಮಗ ಸೊಸೆ ನಡುವೆ ಮಾತುಕತೆಯಾಗಲಿ ಪ್ರೀತಿ ಪ್ರೇಮವಾಗಲಿ ಕಂಡು ಬರಲಿಲ್ಲ. ಯಶಸ್ವಿ ತನ್ನ ಪಾಡಿಗೆ ತಾನು ತಿಂದು , ಕೈ ತೊಳೆದು ಮತ್ತೆ ಕೋಣೆಯಲ್ಲಿ ಹೋಗಿ ಬಾಗಿಲು ಹಾಕಿ ಕೊಂಡಳು. ಮಗನೂ ಕೂಡಾ ಇನ್ನೊಂದು ಕೋಣೆಯ ಒಳಗೆ ಕುಳಿತು ಕೆಲಸ ಮಾಡುತ್ತಿದ್ದನು. ವಸುಧಾ ಅವರು ಮನೆಯೆಲ್ಲ ಗುಡಿಸಿ, ಒರೆಸಿ , ಸಿಂಕಿನಲ್ಲಿ ಇದ್ದ ಪಾತ್ರೆ ತೊಳೆದು ರಾತ್ರಿ ಅಡುಗೆ ಮಾಡಲು ಕುಳಿತರು.ಅಕ್ಕಿ , ಬೇಳೆ ಎಲ್ಲದರಲ್ಲಿಯೂ ಹುಳಗಳು ಓಡಾಡುತ್ತಾ ಇದ್ದವು. ಹುಳ ಆರಿಸಿ ತೆಗೆದು ತರಕಾರಿ ಏನಾದರೂ ಇದೆಯೇ ಎಂದು ಫ್ರಿಡ್ಜ್ ತೆಗೆದು ನೋಡಿದರು. ಒಂದಷ್ಟು ಕೊಳೆತ ತರಕಾರಿ, ಹೂವು, ಹಣ್ಣು , ಸಾಫ್ಟ್ ಡ್ರಿಂಕ್ಸ್ ಬಾಟಲ್ ಇದ್ದವು.ಕೆಟ್ಟ ವಾಸನೆ ಮೂಗಿಗೆ ಬಡಿಯುತಿತ್ತು. ಮತ್ತೆ ಅದನ್ನು ಹಾಗೆಯೇ ಮುಚ್ಚಿ ಅನ್ನ, ತಿಳಿ ಸಾರು ಮಾಡಿದರು.

ರಾತ್ರಿ ಒಂಭತ್ತು ಗಂಟೆಯ ಹೊತ್ತಿಗೆ ಮಗ ಸೊಸೆಯನ್ನು ಊಟಕ್ಕೆ ಕರೆದರು. ಯಶಸ್ವಿ ನಾನು ಸ್ನಾನ ಮಾಡಬೇಕು ಎಂದು ಹೋದಳು.ಅಲ್ಲಾ ಬೆಳಗಿನಿಂದ ಮನೆಯಲ್ಲಿಯೇ ಇದ್ದಾಳೆ, ಇನ್ನೂ ಸ್ನಾನವಾಗಿಲ್ಲವೆ ಅನಿಸಿತು. ಯಶಸ್ವಿ ಸ್ನಾನ ಮುಗಿಸಿ ಬಂದು ಡೈನಿಂಗ್ ಟೇಬಲ್ ಹತ್ತಿರ ಕುಳಿತಳು.ಇಬ್ಬರಿಗೂ ತಟ್ಟೆಯಲ್ಲಿ ಅನ್ನ ಸಾರು ಬಡಿಸಿದರು.” ಅಮ್ಮ ಎಷ್ಟೊಂದು ಕೆಲಸ ಮಾಡಿದೀಯ ನಾಲ್ಕು ದಿನ ಆರಾಮವಾಗಿ ಇರಬಾರದೇ, ಮಗನ ಮನೆಗೆ ಅಂತ ಬಂದು ಯಾಕೆ ಕೆಲಸ ಮಾಡುತ್ತಿಯ” ಅಂದನು.ವಸುಧಾ ಮುಗುಳು ನಕ್ಕು “ನನ್ನ ಮಗನ ಮನೆಯಲ್ಲಿ ನಾನು ಕೆಲಸ ಮಾಡಿದ್ದೀನಿ, ನಾನೇನು ಬೇರೆಯವರ ಮನೆಯಲ್ಲಿ ಮಾಡಿದೀನಾ ” ಎಂದರು.ಯಶಸ್ವಿ ನಾಲ್ಕು ತುತ್ತು ತಿಂದು, ತಟ್ಟೆ ಟೇಬಲ್ ಮೇಲೆಯೇ ಬಿಟ್ಟು ಹೋದಳು. “ಇನ್ನು ಸ್ವಲ್ಪ ಅನ್ನ – ಸಾರು” ಎಂದರು.”ಬೇಡ” ಎಂದು ಚುಟುಕಾಗಿ ಅಂದಳು. “ಯಾಕಮ್ಮ ಸಾರು ಚೆನ್ನಾಗಿಲ್ಲವೆ, ಇಷ್ಟು ಬೇಗ ಕೈ ತೊಳೆದುಕೊಂಡು ಬಿಟ್ಟೆ ” ಅಂದರು.” ಚೆನ್ನಾಗಿದೆ” ಚುಟುಕಾದ ಉತ್ತರ,”ಹೋಗಲಿ ಸ್ವಲ್ಪ ಅನ್ನ ಮೊಸರು ಹಾಕಿಸಿ ಕೊಳ್ಳಮ್ಮ” ಎಂದರು. ಬೇಡ ಎಂದು ಕೈ ಸನ್ನೆಯಿಂದ ತೋರಿಸಿ ಮತ್ತೆ ಒಳಗೆ ಹೋಗಿ ಬಾಗಿಲು ಹಾಕಿ ಕೊಂಡಳು. ಸಿದ್ಧಾರ್ಥ್ ಚಿಪ್ಸ್, ಖಾರ ಬೂಂದಿ, ಲೇಸ್, ಕುರು ಕುರೆ ಹೀಗೆ ಏನೇನೋ ನಂಚಿ ಕೊಂಡು ಊಟ ಮುಗಿಸಿದನು. ವಸುಧಾ ಅವರು ಎಲ್ಲವನ್ನೂ ಎತ್ತಿಟ್ಟು, ಸ್ವಚ್ಚ ಮಾಡಿ ಸೊಸೆ ಪಾಪ ಊಟ ಸರಿಯಾಗಿ ಮಾಡಿಲ್ಲವೆಂದು ಒಂದು ಲೋಟ ಹಾಲು ತೆಗೆದುಕೊಂಡು ಸೊಸೆಯ ಕೋಣೆಯೊಳಗೆ ಇಣುಕಿದರು. ಅವಳ ಕೋಣೆಯಲ್ಲಿ ಒಂದೇ ಒಂದು ಇಂಚು ಜಾಗ ಖಾಲಿ ಇರಲಿಲ್ಲ, ಬಟ್ಟೆಗಳು, ಕವರ್ ಗಳು, ಖಾಲಿ ಸಾಫ್ಟ್ ಡ್ರಿಂಕ್ ಬಾಟಲ್ ಗಳು ಬಿದ್ದಿದ್ದವು. ಸೊಸೆ ಮಾತ್ರ ಡಬ್ಬಲ್ ಕಾಟ್ ಮಂಚದ ಮೇಲೆ ಬೀನ್ ಬ್ಯಾಗ್ ಹಾಕಿಕೊಂಡು ಐಶಾರಾಮದಿಂದ ಸರ್ಕಸ್ ನಲ್ಲಿ ಆನೆ ಕುಳಿತ ತರ ಕುಳಿತು ಮಾನಿಟರ್ ನಲ್ಲಿ ಯಾವುದೋ ಇಂಗ್ಲಿಷ್ ಸಿನಿಮಾ ಹಾಕಿ ಕೊಂಡು ಪಾಪ್ ಕಾರ್ನ್ ತಿನ್ನುತ್ತಾ, ನಡುವೆ ಸ್ವಲ್ಪ ಕೋಕ್ ಕುಡಿಯುತ್ತಾ , ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿ ಕೊಂಡು ಕುಳಿತ್ತಿದ್ದಳು.ಆಗಲೇ ಯಾರೋ ಒಬ್ಬ ಯೂನಿಫಾರ್ಮ್ ಹಾಕಿಕೊಂಡು ಬಂದು ಕೊಟ್ಟು ಹೋಗಿದ್ದು ಪಾಪ್ ಕಾರ್ನ್ ಮತ್ತು ಕೋಕ್ ಎಂದು ಗೊತ್ತಾಯಿತು. ಅನ್ನ – ಸಾರು ತಿನ್ನಲು ಹಸಿವಿಲ್ಲ ಎಂದವಳು ಹೀಗೆ ತಿನ್ನುತ್ತಾ ಕುಳಿತಿದ್ದಳು. ಏನೋ ಕಾಲಿಗೆ ಸಿಕ್ಕಿ ಹಾಕಿ ಕೊಂಡಂತೆ ಆದಾಗ ಕೆಳಗೆ ನೋಡಿದರೆ ರಾಶಿ ಕೂದಲು ಬಿದ್ದಿತ್ತು. ಎಲ್ಲಾ ಕಡೆ ಧೂಳು, ಕಸ, ಜೇಡ ಕಟ್ಟಿದ್ದವು. ಹೆಚ್ಚು ಕಡಿಮೆ ಆ ಇಂಗ್ಲೀಷ್ ಸಿನಿಮಾದಲ್ಲಿ ಭಯಂಕರವಾಗಿ ಇದ್ದ ಮನೆಯ ತರವೇ ಇತ್ತು. ಮಗನ ಕೋಣೆಯಲ್ಲಿ ಇಣುಕಿದರೆ ಸೊಸೆಯ ಕೋಣೆಗಿಂತ ಭಿನ್ನವಾಗಿ ಏನು ಇರಲಿಲ್ಲ.ಮಂಚದ ಮೇಲೆ ಸ್ನಾನದ ಟವೆಲ್, ಲ್ಯಾಪ್ ಟಾಪ್, ಮೊಬೈಲ್ ಎಲ್ಲಾ ಇಟ್ಟು ಕೊಂಡು ಎಮ್ಮೆಯ ತರ ಮಲಗಿಕೊಂಡು ಜೋರಾಗಿ ಗೊರಕೆ ಹೊಡೆಯುತ್ತಿದ್ದನು. ಇನ್ನೊಂದು ಕೋಣೆಯ ಒಳಗೆ ಹೋಗಿ ಮಲಗಿದರು. ದೇಹ ದಣಿದಿದ್ದರೂ ನಿದ್ದೆ ದೂರವಾಗಿತ್ತು. ಮಗ ಒಂದು ಕೋಣೆಯಲ್ಲಿ ಸೊಸೆ ಇನ್ನೊಂದು ಕೋಣೆಯಲ್ಲಿ ಮಲಗುತ್ತಾರೆ , ಎರಡೂ ಕೋಣೆಯಲ್ಲಿ ಡಬ್ಬಲ್ ಕಾಟ್ ಇದೆ, ಆದರೆ ಇಬ್ಬರೂ ಬೇರೆಬೇರೆ ಕೋಣೆಯಲ್ಲಿ ಮಲಗುತ್ತಾರೆ. ಇದೆಂಥ ಸಂಸಾರ ಅನಿಸಿತು. ಯಾಕೋ ಇಲ್ಲಿ ಯಾವುದು ಸರಿಯಿಲ್ಲ ಅನಿಸಿತು.ಎರಡು ದಿನಗಳಲ್ಲಿ ಮನೆಯನ್ನು ಸ್ವಚ್ಚ ಮಾಡಿ ಒಂದು ಹಂತಕ್ಕೆ ತಂದರು.

ಎರಡು ದಿನಗಳಲ್ಲಿ ಎಲ್ಲಾ ವಿಷಯವೂ ಅರ್ಥವಾಗಿತ್ತು. ಮಗ – ಸೊಸೆಯ ನಡುವೆ ಇರಬೇಕಾದ ಪ್ರೀತಿ ಪ್ರೇಮ ಏನು ಇಲ್ಲ ಅಂತ. ಇಬ್ಬರನ್ನೂ ಮೂರನೆಯ ದಿನ ಭಾನುವಾರ ಕರೆದರು.
“ನಿಮ್ಮಿಬ್ಬರ ಹತ್ತಿರ ಮಾತನಾಡಬೇಕು ” ಎಂದು ಗಂಭೀರವಾಗಿ ಹೇಳಿದರು. ” ಏನು ಹೇಳಮ್ಮ” ಎಂದು ಸಿದ್ಧಾರ್ಥ್ ಕೇಳಿದನು.

“ನೀವಿಬ್ಬರೂ ಯಾಕೆ ಹೀಗಿದಿರ, ಏನಾದರೂ ಮನಸ್ತಾಪವೆ, ಅಥವಾ ನಾನು ಬಂದಿರುವುದು ನಿಮಗೆ ಇಷ್ಟವಿಲ್ಲವೇ” ಎಂದರು. ಯಶಸ್ವಿ” ಆಂಟಿ ನಿಮ್ಮಗ ಒಂಚೂರು ಮನೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ, ಎಲ್ಲಾ ನಾನೇ ಯಾಕೆ ಮಾಡಬೇಕು, ಅದಕ್ಕೆ ಇಬ್ಬರೂ ಯೋಚನೆ ಮಾಡಿ ಒಂದು ತೀರ್ಮಾನ ತಗೊಂಡಿದಿವಿ, ವಿಚ್ಛೇದನ ಪಡಿಬೇಕು ಅಂತ” ಎಂದಳು. ಅದೇನೋ ಮಾಮೂಲಿ ವಿಷಯ ಅನ್ನುವ ಹಾಗೆ ಹೇಳಿದಳು.

ಫೋಟೋ ಕೃಪೆ : google

ವಸುಧಾ ಈಗ ಮಗನ ಕಡೆ ನೋಡಿದರು.” ಅಮ್ಮ ಕಾಫಿ ಮಾಡು ಅಂದರೆ ಬರೀ ಕಾಫಿ ಪುಡಿ, ನೀರು ಹಾಕಿ ಕೊಡ್ತಾಳೆ, ಇನ್ನೂ ಆ ದೋಸೆ ತವ ಬಿಟ್ಟು ಏಳುವುದಿಲ್ಲ, ಹರಿದು ಪುಡಿ ಪುಡಿ ಆಗಿರುತ್ತೆ ಅಂತ ದೋಸೆ, ಇಡ್ಲಿ ಅಂದರೆ ಫುಟ್ ಬಾಲ್ ತರ ಪುಟಿದು ಬೀಳುತ್ತೆ, ಸಾರು ಅಂದ್ರೆ ಕಣ್ಣಲ್ಲಿ ಹಾಕಿಕೊಂಡರೂ ನೀರು ಬರುವುದಿಲ್ಲ ಹಾಗಿರುತ್ತೆ, ಮಾತೆತ್ತಿದರೆ ಸಾಕು ನಾನು ಬಿಇ ಎಂಬಿಎ ಓದಿದಿನಿ ಅನ್ನುತ್ತಾಳೆ ” ಎಂದನು. ” ನೀನಾದರೂ ಏನು ಮಾತಿಗೆ ಮುಂಚೆ ನಾನು ಬಿಇ ಎಂ ಟೆಕ್ ಅಂತ ಹೇಳುತ್ತಾ ಇರುತ್ತೀ, ನಾನು ಯಾಕೆ ಕೆಲಸ ಮಾಡಬೇಕು, ನನಗೂ ನಿನ್ನಷ್ಟೆ ಸಂಬಳ ” ಅಂದಳು. ಇಬ್ಬರ ನಡುವೆ ವಾದ ವಿವಾದಗಳು ಪುಂಕಾನುಪುಂಖವಾಗಿ ಹರಿದು ಬಂದವು. ಇಬ್ಬರಲ್ಲೂ ಅಹಂಗೆ ಕಡಿಮೆಯಿಲ್ಲ ಅನಿಸಿತು. ನನ್ನ ಎದುರಿಗೆ ಇಷ್ಟೊಂದು ಕಿತ್ತಾಟ ನಡೆಸುವವರು ಇನ್ನು ನಾನು ಇಲ್ಲದೆ ಹೋದಾಗ ಎಷ್ಟೊಂದು ಕಿತ್ತಾಡಬಹುದು ಅನಿಸಿತು. ” ಸಾಕು ಜಗಳ ನಿಲ್ಲಿಸಿ, ನೀವಿಬ್ಬರೂ ಸಮ ಯಾರು ಹೆಚ್ಚು ಇಲ್ಲ, ಯಾರೂ ಕಡಿಮೆಯಿಲ್ಲ, ನಾನು ಹೇಳುವುದನ್ನು ಸ್ವಲ್ಪ ಕೇಳಿಸಿ ಕೊಳ್ಳಿ , ಇಬ್ಬರೂ ಇಷ್ಟೊಂದು ಓದಿದ್ದೀರಾ ಕೆಲಸದಲ್ಲಿ ಇದ್ದೀರಾ, ಇಬ್ಬರೂ ಹೊಂದಿಕೊಂಡು ಹೋಗಿ” ಅಂದರು.” ನಾನು ಗಂಡಸು ನಾನೇಕೆ ಮನೆ ಕೆಲಸ ಮಾಡಬೇಕು ” ಅಂತ ಸಿದಾರ್ಥ ಅಂದರೆ ನಾನೂ ಅವನಷ್ಟೇ ಸಂಪಾದನೆ ಮಾಡುತ್ತೇನೆ, ನಾನೇಕೆ ಅವರು ಹೇಳಿದ ಹಾಗೆ ಕೇಳಬೇಕು “ಎಂದು ಯಶಸ್ವಿಯ ವಾದ. ” “ಸಂಸಾರ ಅಂದರೆ ಒಂದು ಬಂಡಿಯಂತೆ, ಎರಡು ಚಕ್ರಗಳು ಸಮವಾಗಿ ನಡೆಯಬೇಕು, ಒಂದು ಚಕ್ರ ಸರಿಯಾಗಿಲ್ಲದಿದ್ದರೆ ಸಂಸಾರದ ರಥ ಕೂಡಾ ಮುಂದೆ ಸಾಗದು, ಹಿಂದಿನ ಕಾಲದಲ್ಲಿ ಗಂಡಸು ಹೊರಗೆ ದುಡಿಯುವುದು, ಹೆಂಗಸು ಮನೆ , ಕೆಲಸ ಮಕ್ಕಳು ಅಂತ ನೋಡಿ ಕೊಳ್ಳುವುದು ಇತ್ತು, ನಮ್ಮ ಅವಶ್ಯಕತೆಗಳು ಕಡಿಮೆ ಇದ್ದವು, ಆದರೆ ಈಗ ಹಾಗಿಲ್ಲ, ಹೆಣ್ಣು ಮಕ್ಕಳು ಓದುತ್ತಾರೆ, ಕೆಲಸಕ್ಕೆ ಹೋಗುತ್ತಾರೆ, ದುಡಿಯುತ್ತಾರೆ, ಅವಶ್ಯಕತೆಗಳು ಜಾಸ್ತಿಯಾಗಿವೆ. ಅದಕ್ಕಾಗಿ ಇಬ್ಬರೂ ದುಡಿಯುವುದು ಅನಿವಾರ್ಯವಾಗಿದೆ. ಇಬ್ಬರೂ ಹೊಂದಿಕೊಂಡು ಹೋಗಿ, ಸಿದಾರ್ಥ ನೀನು ಸ್ವಲ್ಪ ಮನೆಕೆಲಸದಲ್ಲಿ ಸಹಾಯ ಮಾಡಬೇಕು, ಕೂಡಿದರೆ ಸಂಸಾರ, ಮಾಡಿದರೆ ಮನೆ ಅಂತ ಗಾದೆಯೇ ಇದೆ, ಯಶಸ್ವಿ ಅಡುಗೆ ಮಾಡಿದರೆ ನೀನು ತರಕಾರಿ ಹೆಚ್ಚಿಕೊಡು, ಬಟ್ಟೆ ಒಗೆದರೆ ಒಣಗಿ ಹಾಕುವುದು ಹೀಗೆ ಕೆಲಸಗಳನ್ನು ಹಂಚಿಕೊಳ್ಳಿ. ಆಗ ಹೀಗೆಲ್ಲ ಜಗಳಗಳು ಬರುವುದಿಲ್ಲ.

ಮದುವೆ ಮಾಡಿರುವುದು ವಿಚ್ಛೇದನ ತೆಗೆದು ಕೊಳ್ಳುವುದಕ್ಕೆ ಅಲ್ಲ, ಒಂದಾಗಿ ಬಾಳಲು, ವಿಚ್ಛೇದನ ತೆಗೆದುಕೊಂಡು ಮತ್ತೆ ಮರುಮದುವೆ ಮಾಡಿಕೊಂಡರೆ ಎಲ್ಲಾ ಸರಿ ಹೋಗುತ್ತದೆಯೇ? ಆಗ ಇಂತಹ ಸಮಸ್ಯೆ ಬರುವುದಿಲ್ಲವೆ?… ಸ್ವಲ್ಪ ವಿವೇಚನೆ ಇರಲಿ ನಾನು ಹೆಚ್ಚು ನಾನು ಹೆಚ್ಚು ಅಲ್ಲ ಅಂತ ಜಗಳವಾಡುವುದನ್ನು ಬಿಡಿ, ಪ್ರೀತಿ ಪ್ರೇಮದಿಂದ ಇರಿ, ಒಂದು ವಾರ ಇಬ್ಬರೂ ನಾನು ಹೇಳಿದಂತೆ ಕೇಳಿ, ನಿಮ್ಮಿಬ್ಬರ ಸಂಸಾರ ಸರಿ ಹೋಗುತ್ತೆ, ಇಷ್ಟರ ಮೇಲೆ ಇಬ್ಬರೂ ಸರಿ ಹೋಗಿಲ್ಲ ಅಂದರೆ ನಿಮ್ಮಿಷ್ಟ” ಎಂದು ಇಬ್ಬರಿಗೂ ಬುದ್ಧಿವಾದ ಹೇಳಿದರು. ಜೊತೆಗೆ ಇಬ್ಬರೂ ವಸುಧಾ ಅವರು ಹೇಳಿದ ಹಾಗೆ ಕೇಳಬೇಕು ಎಂದು ಭಾಷೆ ತೆಗೆದುಕೊಂಡರು. ಇಬ್ಬರೂ ಚಿಕ್ಕಂದಿನಿಂದ ಹಾಸ್ಟೆಲ್, ಪಿಜಿ ಅಂತ ಇದ್ದುದ್ದರಿಂದ ಇಬ್ಬರಿಗೂ ಮನೆ, ಸಂಸಾರದ ಬಗ್ಗೆ ತಿಳಿದಿಲ್ಲ ಅನಿಸಿತು. ಮಾರನೆಯ ದಿನ ಇಬ್ಬರನ್ನೂ ಬೆಳಗ್ಗೆ ಆರುವರೆಗೆ ಹೋಗಿ ಏಳಿಸಿದರು. ಸೊಸೆಗೆ ಹಾಲು ಕಾಯಿಸುವುದು, ಕಾಫಿ ಮಾಡುವುದು, ಹೀಗೆ ಕೆಲಸ ಹೇಳಿ ಕೊಟ್ಟರು. ಮಗನಿಗೆ ಬಟ್ಟೆ ವಾಷಿಂಗ್ ಮೆಷಿನ್ ಗೆ ಹಾಕುವುದನ್ನು , ಒಣಗಿ ಹಾಕುವುದನ್ನು ಒತ್ತಾಯವಾಗಿ ಮಾಡಿಸಿದರು. ಯಶಸ್ವಿಯನ್ನು ಪ್ರತ್ಯೇಕವಾಗಿ ಕುಳ್ಳಿರಿಸಿ ಕೊಂಡು ಮದುವೆಯಾದ ಹೊಸದರಲ್ಲಿ ತಾನು ಇದ್ದ ಕೂಡು ಕುಟುಂಬ, ಅತ್ತೆ, ಮಾವ, ಮೈದುನ, ನಾದಿನಿಯರ ಬಗ್ಗೆ ಹೇಳಿದರು.ಆಗ ತಾನು ಹೇಗೆ ನಡೆದು ಕೊಂಡು ಒಳ್ಳೆಯ ಗೃಹಿಣಿ ಎನಿಸಿಕೊಂಡೆ ಎಂದು ತಿಳಿಸಿ ಕೊಟ್ಟರು. ನಂತರ ಸಿದ್ಧಾರ್ಥ ನನ್ನು ಪ್ರತ್ಯೇಕವಾಗಿ ಕರೆದು ನಿಮ್ಮಪ್ಪ ಮದುವೆಯಾದ ಹೊಸದರಲ್ಲಿ ನನ್ನನ್ನು ಹೀಗೆ ನೋಡಿ ಕೊಂಡರು, ಬೇರೆ ಮನೆಯಿಂದ ಬಂದು ಇಲ್ಲಿ ಹೊಂದಿ ಕೊಳ್ಳಲು ಕಷ್ಟವಾದಾಗ, ಸಾಕಷ್ಟು ಭರವಸೆ ನೀಡಿ ಒಳ್ಳೆಯ ಗೃಹಿಣಿಯಾಗಿ ಬಾಳಲು ಸಹಕಾರ ಮಾಡಿದರು ಎಂದು ತಿಳಿಸಿ ಕೊಟ್ಟರು. ನಮ್ಮಿಬ್ಬರ ನಡುವೆ ಬಹಳ ಹೊಂದಾಣಿಕೆ ಇದೆ ಎಂದು ತಿಳಿಸಿದರು. ಇಬ್ಬರಿಗೂ ಒಂದಿಷ್ಟು ಮನಸ್ಸಿಗೆ ನಾಟಿತ್ತು ಅಂದು ಕೊಳ್ಳಲು ಸಾಕ್ಷಿಯಾಗಿ ಒಂದು ವಾರದ ನಂತರ ಯಶಸ್ವಿ ಬೇಗ ಎದ್ದು ಕಾಫಿ ಮಾಡುತ್ತಾ ಇದ್ದರೆ, ಸಿದ್ಧಾರ್ಥ್ ತಿಂಡಿಗೆ ಈರುಳ್ಳಿ ಮೆಣಸಿನ ಕಾಯಿ ಹಚ್ಚುತ್ತಾ ಕುಳಿತಿದ್ದನು.ಅದನ್ನು ಕಂಡ ವಸುಧಾ ತೃಪ್ತಿಯ ನಗೆ ಚೆಲ್ಲಿದರು. ಅಂದು ರಾತ್ರಿ ಇಬ್ಬರನ್ನೂ ಒಂದೇ ಕೋಣೆಯಲ್ಲಿ ಮಲಗಲು ಕಳಿಸಿದರು.


  • ಶುಭಾ ಶ್ರೀನಾಥ್ – ಎಂ.ಎ.ಸಿ. ಬಿ.ಎಡ್, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW