ನಿಮ್ಮ ಜೀವನದಲ್ಲಿ ಕೆಲವರು ಅತಿರೇಕಿಗಳಾಗಿ ಕಾಣಿಸಿಕೊಳ್ಳುತ್ತಾರೆ, ಅವರಲ್ಲಿ ಕಾನ್ಫಿಡೆನ್ಶಿಯಲ್ ವಿಚಾರಗಳನ್ನು ಹಂಚಿಕೊಂಡರೆ ನಿಮ್ಮ ಗುಟ್ಟು ರಟ್ಟಾಗುತ್ತದೆ ಜಾಗೃತೆ ಇರಲಿ ಎನ್ನುತ್ತಾ ರಂಜಿತ್ ಕವಲಪಾರ ಅವರ ಸಣ್ಣ ಪುಟ್ಟ ಸಂಗತಿಗಳ ಅಂಕಣವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಕಟ್ಟಿ ಹಾಕಿ ನೀವು ಯಾವುದೇ ಪ್ರಾಣಿಗಳನ್ನು ಸಾಕಿ. ಅದನ್ನು ನೀವು ಬಿಚ್ಚಿಬಿಟ್ಟರೆ ಅಥವಾ ಅದು ಹೇಗಾದರೂ ಬಿಡಿಸಿಕೊಂಡು, ಸ್ವತಂತ್ರವಾದರೆ ನಿಮ್ಮ ಕೈಗೆ ಮತ್ತೆ ಅದು ಸಿಗಲಾರದು. ನಿಮ್ಮ ಕೈಯಿಂದ ತಪ್ಪಿಸಿಕೊಂಡು ಆಟ ಆಡಿಸಲು ನೋಡುತ್ತದೆ. ಮತ್ತೆ ನೀವು ಅದನ್ನು ಹಿಡಿದು, ಕಟ್ಟಿ ಹಾಕಲು ಬಹಳಾ ಪ್ರಯಾಸ ಪಡಬೇಕು. ಹಾಗೆ ಕಟ್ಟಿದರೂ ಅದು ನಿಮ್ಮಿಂದ ತಪ್ಪಿಸಿಕೊಳ್ಳುವುದೇ ಆದ್ಯತೆಯ ಕೆಲಸ ಎನ್ನುವಂತೆ ಒದ್ದಾಡಲು ಶುರುಮಾಡುತ್ತದೆ.

ಅದೇ ನೀವು ಒಂದಿಷ್ಟು ಸ್ವಾತಂತ್ರ್ಯ ಕೊಟ್ಟು, ಅದರ ವಿಶ್ವಾಸಗಳಿಸಿ, ಪ್ರೀತಿಯಿಂದ ಅದನ್ನು ಸಾಕಲು ತೊಡಗಿ. ಅದು ನಿಮ್ಮ ಸುತ್ತಮುತ್ತಲೇ ಸರಿದಾಡುತ್ತದೆ, ಕೈಗೆ ಸಿಗುತ್ತದೆ. ನಿಮ್ಮ ಮೈಗೆ ತನ್ನ ಮೈಯನ್ನು ಅದಾಗಿಯೇ ಬಂದು ಸವರುತ್ತದೆ. ನಿಮ್ಮ ಮುಂದೆ ಬಂದು ನಿಮ್ಮ ಗಮನ ಸೆಳೆಯಲು ನಾನಾ ಆಟವಾಡುತ್ತದೆ. ಅಂಗಾತ ಮಲಗಿ, ಕೈಕಾಲು ಅಲ್ಲಾಡಿಸುತ್ತಾ, ಬಾಲವನ್ನು ಬಡಿಯುತ್ತಾ, ಅದರದೇ ರೀತಿಯಲ್ಲಿ ಸದ್ದು ಮಾಡುತ್ತಾ ನಿಮ್ಮ ಗಮನವನ್ನು ಅದರತ್ತ ಕೇಂದ್ರಿಕರಿಸಿ ನೀವು ಅದನ್ನು ಮುದ್ದಿಸುವಂತೆ, ಪ್ರೀತಿಸುವಂತೆ, ಸಣ್ಣಗೆ ಗದರುವಂತೆ ನೋಡಿಕೊಳ್ಳುತ್ತದೆ. ನಿಮಗಾಗಿ ಕಾಯುತ್ತದೆ, ಕಾಣದೇ ಇದ್ದಾಗ ಚಡಪಡಿಸುತ್ತದೆ, ಕಂಡಾಗ ಕುಣಿದಾಡುತ್ತದೆ.
*
ಮನುಷ್ಯ ಸಂಬಂಧಗಳೂ ಅಷ್ಟೇ. ನಾವೆಷ್ಟು ಕಟ್ಟಿ ಹಾಕಿ ಜೋಪಾನ ಮಾಡಲು ನೋಡುತ್ತೇವೋ ಅಂತಹಾ ಸಂಬಂಧಗಳು ಉಸಿರುಗಟ್ಟಿಸುತ್ತವೆ. ಬಿಡಿಸಿಕೊಂಡು ನಮ್ಮಿಂದ ದೂರಾಗಲು ಅದು ಸದಾ ಯತ್ನಿಸುತ್ತಲೇ ಇರುತ್ತದೆ.
ನೀವು ಅಪರಿಚಿತ ಮಗುವೊಂದನ್ನು ಕಂಡಾಕ್ಷಣ ಆ ಮಗುವನ್ನು ಎತ್ತಿ ಮುದ್ದಾಡಲು ನೋಡುತ್ತೀರಿ. ಕೊಸರಿ, ನಿಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಆ ಮಗು ಯತ್ನಿಸುತ್ತದೆ. ಆ ಮಗುವಿಗೆ ನೀವು ಅಪರಿಚಿತ. ಆ ಮಗುವಿನ ಮುಗ್ಧತೆ, ನೋಟ, ಚಂದ ನಿಮ್ಮನ್ನು ಆ ಮಗುವಿನತ್ತ ಆಕರ್ಷಿಸಿದೆ. ಹಾಗಾಗಿ ನೀವು ಆ ಮಗುವನ್ನು ಮುಟ್ಟಲು, ಎತ್ತಿಕೊಳ್ಳಲು, ಮುದ್ದುಮಾಡಲು ಆತುರಪಡುತ್ತೀರಿ. ಆ ಮಗು ನಿಮ್ಮೆಡೆಗೆ ಆಕರ್ಷಿತರಾಗಲು ನಿಮ್ಮಲ್ಲೇನು ವಿಶೇಷತೆ ಇದೆ? ಎಂದು ನೀವು ಯೋಚಿಸುವ ಗೊಡವೆಗೇ ಹೋಗುವುದಿಲ್ಲ. ಏಕಾಏಕಿ ಮುದ್ದು ಮಾಡಲು ಆತುರ ಪಡುವ ನಾವು ಮಗುವನ್ನು ಬೆಚ್ಚಿ ಬೀಳಿಸಿ, ಭಯಪಡಿಸಿ, ಆತಂಕ ಸೃಷ್ಟಿಮಾಡಲಷ್ಟೇ ಸಾಧ್ಯ. ಆತ್ಮೀಯತೆಯನ್ನು, ಪ್ರೀತಿಯನ್ನು ಸಂಪಾದಿಸಲು ಬಹಳಾ ತಾಳ್ಮೆ ಬೇಕಾಗುತ್ತದೆ.
ಅದು ಮಕ್ಕಳೇ ಆಗಲಿ, ದೊಡ್ಡವರೇ ಆಗಲೀ ಏಕಾಏಕಿ ದಾಳಿ ಮಾಡಿದರೆ ಮತ್ತವರು ಬಳಿ ಸುಳಿಯುವುದಿಲ್ಲಾ.
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : youtube)
ಆ ಮಗುವೇ ನಿಮ್ಮತ್ತ ಬರುವ ಹಾಗೆ ನೀವು ಏನಾದರೂ ಉಪಾಯವನ್ನು ಕಂಡುಕೊಳ್ಳಬೇಕಾಗುತ್ತದೆ. ಹೀಗೆ ನಾನೊಂದು ಉಪಾಯ ಕಂಡುಕೊಂಡಿದ್ದೇನೆ. ನಾನು ನನ್ನ ಎದುರಿಗೆ ಮಗುವೊಂದು ಕಂಡಾಗ ಆ ಮಗುವಿನ ಎದುರಿಗೆ ಯಾವುದೇ ಭಾವನೆಗಳನ್ನು ತೋರ್ಪಡಿಸದೆ ಸಹಜವಾಗಿರುತ್ತೇನೆ, ಹಿತವಾಗಿ ಆ ಮಗುವಿನ ಪಾಲಕರೊಡನೆ ಮಾತನಾಡುತ್ತೇನೆ, ಆತ್ಮೀಯತೆಯನ್ನು ತೋರಿಸುತ್ತೇನೆ ಮಗು ಎಲ್ಲವನ್ನೂ ಗಮನಿಸಿ, ನಾನು ಮಗುವಿಗೆ ನಿರುಪದ್ರವಿ ಅನ್ನಿಸಲು ಸ್ವಲ್ಪ ಸಮಯ ನೀಡುತ್ತೇನೆ. ಮಗು ತಾನಾಗಿಯೇ ಬಂದು ನನ್ನ ಮಡಿಲೇರಿ ಕುಳಿತು ನನ್ನ ಗಡ್ಡ ಹಿಡಿದು ಆಟ ಆಡಲು ತೊಡಗುತ್ತದೆ. ನಂಬಿಕೆ ಹುಟ್ಟಿಸುವುದು ಅಷ್ಟು ಸುಲಭವಲ್ಲ.
**
ಕೆಲವರಿಗೆ ಕುತೂಹಲದ ಹುಚ್ಚಿರುತ್ತದೆ. ಅಂತಹವರಿಂದ ಸದಾ ಜನರು ದೂರ ಇರಲೇ ಪ್ರಯತ್ನಿಸುತ್ತಾರೆ. ಪಕ್ಕದವರ ವೈಯುಕ್ತಿಕ ವಿಚಾರಗಳಲ್ಲಿ ನಾವು ಹೆಚ್ಚು ಕುತೂಹಲಿಗಳಾಗ ಬಾರದು. ನೀವು ಬಸ್ಸಿನಲ್ಲೇ ಅಪರಿಚಿತರೊಂದಿಗೆ ಪಯಣಿಸುತ್ತಿದ್ದೀರಿ, ಅವರು ಪರಿಚಿತರೇ ಆಗಿರಲಿ. ನಿಮ್ಮ ಕೈಯಲ್ಲೂ ಮೊಬೈಲ್ ಇರುತ್ತದೆ. ಆದರೇ ಪಕ್ಕದವನ ಮೊಬೈಲ್ ಕಡೆ ನೀವು ಕಣ್ಣು ಹಾಯಿಸುತ್ತಿರುತ್ತೀರಿ, ಆತ ನೀವು ಗಮನಿಸುವುದನ್ನು ಕಂಡು ಗೊಂದಲಗೊಂಡು ನಿಮ್ಮ ಕಣ್ಣು ತಪ್ಪಿಸಿ ಮೊಬೈಲ್ ಆಪರೇಟ್ ಮಾಡಲು ನೋಡುತ್ತಾನೆ . ಇಂತಹಾ ಕುತೂಹಲ ಪ್ರವೃತ್ತಿ ಪಕ್ಕದವರಿಗೆ ಇರುಸು ಮುರುಸು ಉಂಟು ಮಾಡುತ್ತದೆ.
ನಿಮ್ಮ ಅತ್ಯಾಪ್ತರೇ ಇರಲಿ, ಅವರು ಎಲ್ಲಿಗಾದರೂ ಏಕಾಂಗಿಯಾಗಿ ಹೊರಟಾಗ ಎಲ್ಲಿಗೆ? ಎನ್ನುವ ಕುತೂಹಲ ನಮಗಿರಬಾರದು. ಅವರಿಗೆ ಅವರದೇ ಆದ ಸ್ವಂತ ಕೆಲಸಗಳು ಸಾಕಷ್ಟು ಇರುತ್ತದೆ. ಹಾಗೆ ಹೊರಟವರಿಗೆ ಸಣ್ಣದೊಂದು ಮುಗುಳು ನಗೆಯೊಂದಿಗೆ ಬೈ ಬೈ ಮಾಡಿ ಕಳುಹಿಸಿ. ನಿಮಗೆ ಹೇಳುವಂತಹದ್ದಾದರೆ ಅವರೇ ಹೇಳುತ್ತಾರೆ. ಇಲ್ಲವೋ ಇಲ್ಲ ಅಷ್ಟೇ. ಈ ವಿಚಾರ ಪೋಷಕರು ಹಾಗೂ ಮಕ್ಕಳ ನಡುವೆ ಸ್ವಲ್ಪ ಭಿನ್ನವಾಗಿರುತ್ತದೆ. ಸ್ವತಂತ್ರವಾಗಿ ಆಲೋಚನೆ ಮಾಡಲು ಶಕ್ತರಾದ ನಂತರ ಒಂದು ಮಗುವನ್ನು ಪೋಷಕರು ಅದರ ಪಾಡಿಗೆ ಯೋಚಿಸಲು, ವರ್ತಿಸಲು, ನಿರ್ಧರಿಸಲು ಬಿಡಬೇಕು. ಆದರೂ ಒಂದು ಕಣ್ಣಿಟ್ಟಿರಬೇಕು. ಹಾಗೆ ನಾವು ಗಮನಿಸುತ್ತಿರುವುದು ಮಕ್ಕಳಿಗೂ ಹಿಂಸೆ ಎಂದು ಅನ್ನಿಸಬಾರದಷ್ಟೆ.
ಇನ್ನೂ ಕೆಲ ಅಧಿಕಪ್ರಸಂಗಿ ಕುತೂಹಲಿಗಳಿರುತ್ತಾರೆ .ಅವರು ಅತ್ಯಂತ ಅಪಾಯಕಾರಿಗಳು ಅವರ ಕುತೂಹಲದ ತೀವ್ರತೆ ಎಷ್ಟಿರುತ್ತದೆ ಎಂದರೇ ಅವರ ಕೆಲಸವನ್ನು ಅಲ್ಲಿಗೆ ಬಿಟ್ಟು ನಿಮ್ಮ ಬೆನ್ನು ಬಿದ್ದು ಬಿಡುತ್ತಾರೆ. ನಿಮ್ಮ ಗುಟ್ಟು ರಟ್ಟುಮಾಡಲು ಹಪಹಪಿಸುತ್ತಾರೆ. ನಿಮ್ಮ ಬೆನ್ನ ಹಿಂದೆ ಯಾವುದೇ ಗುಪ್ತಚರ ಇಲಾಖೆಗೂ ಕಡಿಮೆ ಇಲ್ಲದ ಹಾಗೆ ಬೇಹುಗಾರಿಕೆ ಮಾಡಿಸುತ್ತಾರೆ. ನಿಮ್ಮ ಸ್ಟೇಟಸ್, ಪೋಸ್ಟ್, ಎಲ್ಲವನ್ನೂ ಗಮನಿಸುತ್ತಾ ಅವರದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ಅಪಾರ್ಥಗಳನ್ನೂ ಮಾಡಿಕೊಳ್ಳುತ್ತಾ ಒಳಗೊಳಗೆ ಕುದಿಯುತ್ತಾರೆ. ಇಂತವರು ನಿಜಕ್ಕೂ ಬಹಳಾ ಅಪಾಯಕಾರಿಗಳು. ನಾನು ಮುಖಮೂತಿ ನೋಡದೆ ಕೆಲವರನ್ನು ಇಂತಹಾ ವಿಚಾರಗಳಲ್ಲಿ ಝಾಡಿಸಿ, ದೂರವೇ ಇಟ್ಟಿದ್ದೇನೆ .ಹೀಗೆ ದೂರ ಇಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ! ಅದೇ ನನಗೆ ಚಿಂತೆ. ಇಂತವರ ಸಂಖ್ಯೆ ಕ್ಷೀಣಿಸಿದರೆ ಸಮಾಜಕ್ಕೂ ನೆಮ್ಮದಿ.
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : youtube)
ಕೆಲವರಿಗೆ ಮತ್ತೊಬ್ಬರ ಬದುಕನ್ನು ಕದ್ದು ನೋಡುವ ಚಟ ಇರುತ್ತದೆ. ಹೀಗೆ ಕದ್ದು ನೋಡುವುದರಿಂದ ಸಂಬಂಧಗಳು ಹಾಳಾಗುತ್ತದೆ. ಇಂತಹಾ ಸಣ್ಣಪುಟ್ಟ ಕುತೂಹಲಗಳನ್ನು ನಾವು ನಿಯಂತ್ರಿಸಿಕೊಂಡರೆ ಬದುಕು ಸುಂದರ ಜೊತೆಗಿರುವವರೂ ನಮ್ಮಕುರಿತು ನಿರಾತಂಕರಾಗುತ್ತಾರೆ.
ಜೊತೆಗೆ ಇರುವವರ ನಂಬಿಕೆಗೆ ನಾವು ಅರ್ಹರು ಅನ್ನಿಸಿಕೊಂಡು ಬದುಕುವುದು ಸವಾಲೇ ಸರಿ ! ಪ್ರಾಮಾಣಿಕವಾಗಿದ್ದು ನಮ್ಮ ಬದುಕನ್ನು ನಾವು ಜೀವಿಸತೊಡಗಿದರೆ ಇಂತಹಾ ಸಮಸ್ಯೆಗಳು ನಮಗೆ ಎದುರಾಗುವುದಿಲ್ಲ. ನಮ್ಮ ಬದುಕನ್ನೂ ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಲು ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ. ನಿಮಗೆ ಇಂತಹಾ ಕುತೂಹಲಗಳಿದ್ದರೆ ಅದು ನಿಮ್ಮ ಸಮಸ್ಯೆ, ನಿಮ್ಮ ಪಕ್ಕದವರಿಗೆ ಇಂತಹಾ ಕುತೂಹಲಗಳಿದ್ದರೆ ನೇರನೇರವಾಗಿ ಅವರಿಗೆ ತಿಳಿಸಿ, ಅವರು ತಿದ್ದಿಕೊಂಡರೆ ಸಂತೋಷ. ಇಲ್ಲವೋ ಅವರೇ ದೂರಾಗುತ್ತಾರೆ ನಿಟ್ಟುಸಿರು ಬಿಡಿ.
ಇನ್ನೂ ಕೆಲ ಅತಿರೇಕಿಗಳು ನಿಮ್ಮ ಜೀವನದಲ್ಲೂ ಕಾಣಿಸುತ್ತಾರೆ. ಅವರು ನಿಮ್ಮನ್ನು ಎಲ್ಲೋ ಗಮನಿಸಿ, ನಿಮ್ಮ ಆತ್ಮೀಯರಿಗೆ ಒಂದು ಕರೆ ಮಾಡಿ, ನಿಮ್ಮವರು ಇಲ್ಲಿದ್ದಾರೆ ನೀವ್ಯಾಕೆ ಜೊತೆಗೆ ಇಲ್ಲ?’ ಎಂದು ಕೇಳುವವರು. ಇಂತಹ ಜನಗಳು ಮನಸ್ಸಿನ ನೆಮ್ಮದಿ ಹಾಳುಮಾಡುತ್ತಾರೆ, ಸಂಬಂಧಗಳನ್ನೂ ಅಷ್ಟೇ. ಈ ಜಗತ್ತು ಇರುವವರೆಗೂ ಇಂತಹ ಪರಪೀಡಕರು ಇದ್ದೇ ಇರುತ್ತಾರೆ. ಇವರಿಂದೆಲ್ಲಾ ತಪ್ಪಿಸಿಕೊಂಡು ಬದುಕುವುದೇ ಹೋರಾಟ. ಒಂದಿಷ್ಟು ನಾವು ಬದಲಾದರೆ ಜೊತೆಗಿರುವವರು ಮತ್ತಷ್ಟು ಖುಷಿಯಾಗಿರಲು ಸಾಧ್ಯವಾದರೆ ಬದಲಾಗುವುದು ತಪ್ಪಲ್ಲ.
ಗುಟ್ಟು ರಟ್ಟು ಮಾಡುವವರು ಈ ಸಾಲಿಗೆ ಸೇರುತ್ತಾರೆ. ನೀವು ನಂಬಿ ಗುಟ್ಟೊಂದನ್ನು ಹೇಳಿರುತ್ತೀರಿ, ಅದು ರಟ್ಟಾದರೇ? ಕಾನ್ಫಿಡೆನ್ಶಿಯಲ್ ವಿಚಾರಗಳನ್ನು ಎದೆಯಲ್ಲಿಟ್ಟುಕೊಂಡು ಬದುಕಬೇಕು. ಸಾರ್ವಜನಿಕವಾಗಿ ಹೇಳುವಂತದ್ದು ಯಾವುದು ಅನ್ನುವುದನ್ನು ನಾವು ಪ್ರತಿ ಮಾತನಾಡುವಾಗಲೂ ಗಮನದಲ್ಲಿಟ್ಟುಕೊಳ್ಳ ಬೇಕು.
ನನ್ನ ಆಫೀಸಿಗೆ ಬರುವವರು ಕೆಲವರು ಅವರ ಸ್ನೇಹಿತರ, ಶತ್ರುಗಳ ಖಾಸಗಿ ವಿಚಾರಗಳನ್ನು ನನಗೆ ಹೇಳತೊಡಗಿದರು. ಅವರನ್ನು ನಾನು ಅವೈಡ್ ಮಾಡತೊಡಗಿದೆ. ನಾಳೆ ನನ್ನ ಕಥೆಯನ್ನೂ ಅವರು ಹೀಗೆ ಇತರರಿಗೆ ಹೇಳುವ ಅಪಾಯವನ್ನು ಮನಗಂಡು!
ಇಂತಹಾ ಸಣ್ಣಪುಟ್ಟಸಂಗತಿಗಳ ಕಡೆಗೆ ನಾವು ಯೋಚಿಸಲೇ ಬೇಕಾಗುತ್ತದೆ. ಅದು ನಮ್ಮ ಆರೋಗ್ಯಕರ ಮನಸ್ಥಿತಿಗೆ ಅಗತ್ಯವೂ ಆಗಿದೆ.ಇಂತಹ ಸಂಗತಿಗಳು ಸಣ್ಣಪುಟ್ಟವೆಂದು ನಿರ್ಲಕ್ಷಿಸದೆ ಚಿಗುರಿನಲ್ಲಿಯೇ ಚಿವುಟಿದರೆ ಮುಂದೆ ಆಗುವ ಎಷ್ಟೋ ಅವಘಡಗಳಿಂದ ಪಾರಾಗಲು ಸಾಧ್ಯ ! ಸಣ್ಣಪುಟ್ಟ ಸಂಗತಿಗಳ ಕುರಿತ ನಿಯಂತ್ರಣ ನಮ್ಮ ನೆಮ್ಮದಿಗೆ ಅತ್ಯಗತ್ಯ.
‘ಸಣ್ಣ ಪುಟ್ಟ ಸಂಗತಿಗಳು’ ಅಂಕಣದ ಹಳೆಯ ಸಂಚಿಕೆಗಳು :
- ಸಣ್ಣ ಪುಟ್ಟ ಸಂಗತಿಗಳು (ಭಾಗ ೧) – ‘ಕ್ರಾಂತಿಕಾರಿ’
- ಸಣ್ಣ ಪುಟ್ಟ ಸಂಗತಿಗಳು (ಭಾಗ ೨) – ಅವರು ಹಾಗೆ ಹೋದವರ ಪತ್ತೆಯೇ ಇಲ್ಲ
- ಸಣ್ಣ ಪುಟ್ಟ ಸಂಗತಿಗಳು (ಭಾಗ ಆಕೆ, ಆತ್ಮಸಖ ಹಾಗು ಓಡಿಹೋಗಿರುವ ಹುಡುಗ
- ರಂಜಿತ್ ಕವಲಪಾರ