ಕೊರೋನಾ ಕಾಲಘಟ್ಟದಲ್ಲಿ ಮದುವೆಗೆ ಒಳ್ಳೆಯ ಸುವರ್ಣಾವಕಾಶ, ಕಡಿಮೆ ಖರ್ಚಿನಲ್ಲಿ ಸರಳ ಮದುವೆಗೆ ದಾರಿ ಮಾಡಿಕೊಟ್ಟಿದೆ ಈ ಕರೋನಾ, ಈ ಕಾರಣಕ್ಕೆ ಕರೋನಾಗೆ ಧನ್ಯವಾದ ಹೇಳಲೇಬೇಕು. ಹಿರಿಯೂರು ಪ್ರಕಾಶ್ ಅವರ ಸುಂದರ ಲೇಖನ, ತಪ್ಪದೆ ಓದಿ…
ನನ್ನೆದುರಿಗೆ ಮಾತನಾಡುತ್ತಿದ್ದವನ ಮೊಗದಲ್ಲಿ ಖುಷಿಯಿತ್ತು, ಗೆಲುವಿತ್ತು, ಜೊತೆಗೆ ಏನನ್ನೋ ಪಡೆದ ಅಥವಾ ಉಳಿಸಿದ ತೃಪ್ತಿಯಿತ್ತು . ಮುಂದಿನ ತಿಂಗಳು ಮದುವೆಯಾಗಲಿರುವ ಆತನ ಕಂಗಳಲ್ಲಿನ ಹೊಳಪು ಹಾಗೂ ಉತ್ಸಾಹ ಎಷ್ಟೇ ಹತ್ತಿಕ್ಕಿದರೂ ತಾಜಾತನದಿಂದ ಹೊತ್ತಿ ಪ್ರಜ್ವಲಿಸುತ್ತಲಿತ್ತು ! ಸಾಮಾನ್ಯವಾಗಿ ವಿವಾಹ ಬಂಧನಕ್ಕೊಳಗಾಗುವ ಯುವ ಮನಸುಗಳ ಪ್ರಫುಲ್ಲತೆಯೇ ಹಾಗೆ ತಾನೇ ! ಇಡೀ ಜಗತ್ತೇ ತಮ್ಮದೆಂಬ ಸಂಭ್ರಮ ಸಂತಸ ಹಾಗೂ ಸಡಗರದಲ್ಲಿ ತೇಲಾಡುತ್ತಿರುತ್ತವೆ.
ಇವನೂ ಹಾಗೇಯೇ ಅಲ್ಲವೇ….. ಎಂದುಕೊಂಡಿದ್ದ ನನ್ನಲ್ಲಿ ಆತನ ಮಾತುಗಳ ಹಿಂದೆ ಅವಿತ ಅವಿರತವಾದ ಖುಷಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಖುಷಿಗೆ ಕಾರಣ ಮದುವೆ ಮಾತ್ರವೇ ಅಲ್ಲದೇ ಬೇರೇನೋ ಇರಬಹುದು ಎಂದುಕೊಂಡು ಕೇಳಿದೆ. ” ಅಲ್ಲಾ ಗುರು , ನಿನ್ನ ಮದುವೆ ಈಗಾಗಲೇ ಮೂರು ತಿಂಗಳ ಹಿಂದೆಯೇ ನಿರ್ಧಾರವಾಗಿದ್ದಲ್ಲವೇ…. ಅದರ ಸಂತಸವನ್ನು ಈಗಾಗಲೇ ಹಂಚಿಕೊಂಡಿದ್ದೀಯ, ಆದರೆ ಇಂದೇನೋ ನಿನ್ನ ಮಾತುಗಳಲ್ಲಿ ಒಂಥರಾ ಡಿಫ಼ರೆಂಟ್ ಟೋನ್ ಕೇಳಿಸುತ್ತಿದೆಯಲ್ಲಪ್ಪಾ…..?
ಹೌದು ಸಾರ್… ನಿಮ್ಮ ಮಾತು ನಿಜ. ನನ್ನ ಈ ಖುಷಿಗೆ ಕಾರಣ…. ಕೊರೋನಾ…!!!
ಎಂದಾಗ ,ಅಚ್ಚರಿಗೊಳ್ಳುವ ಸರದಿ ನನ್ನದಾಗಿತ್ತು.! ಖುಷಿಗೆ ಕರೀನಾ ಕಾರಣ ಎಂದಿದ್ದರೂ ನನಗೆ ಇಷ್ಟು ಆಶ್ಚರ್ಯವಾಗುತ್ತಿರಲಿಲ್ಲ. ಆದರೆ ಕರೀನಾ ಬದಲಿಗೆ ಇವನೇನು ಕೊರೋನಾ ಅಂದುಬಿಟ್ಟನಾ ಎಂದು ಸ್ವಲ್ಪ ಗಾಬರಿಯಾಗಿ ಕೇಳಿದೆ .

ಫೋಟೋ ಕೃಪೆ : The Indian express
” ಅಲ್ಲಯ್ಯಾ… ಕೋವಿಡ್ ನಿಂದಾಗಿ ಸ್ನೇಹಿತರೊಂದಿಗೆ ,ಬಂಧುಗಳೊಂದಿಗೆ ಯಾವ ಸಂಭ್ರಮವನ್ನೂ ಹಂಚಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇವಲ್ಲಾ ಎಂದು ಎಲ್ಲರೂ ಕೊರಗಿದರೆ ನೀನು ಮಾತ್ರ ನಿನ್ನ ಖುಷಿಗೆ ಕೊರೋನಾ ಕಾರಣ ಅಂತೀಯಲ್ಲಾ..? ತಲೆ ನೆಟ್ಟಗಿದೆ ತಾನೇ..? ಇಂತಹಾ ಭಯಂಕರ ವೈರಸ್ ನಿಂದ ಇಡೀ ವಿಶ್ವವೇ ಪತರುಗುಟ್ಟಿ ಪಲ್ಟಿ ಹೊಡೆಯುತ್ತಿರುವಾಗ ಅದರ ಇರುವಿಕೆಯಿಂದ ಖುಷಿ ಕಂಡುಕೊಂಡವ ನೀನು ಮಾತ್ರವೇ ! ಅದಿರಲಿ, ಅದು ಹೇಗೆ ಕೊರೋನಾ ನಿನ್ನಲ್ಲಿ ಸಂತಸವನ್ನುಂಟು ಮಾಡಿತು ? ಎಂದೆ !
” ಸಾರ್ ನಿಮಗೂ ಗೊತ್ತು , ಕೆಲವೇ ದಿನಗಳಲ್ಲಿ ನಾನು ಮದುವೆಯಾಗುತ್ತಿರುವ ಹುಡುಗಿ ನಮಗಿಂತ ಹೆಚ್ಚು ಅನುಕೂಲವುಳ್ಳವರು, ಅವಳೂ ಒಳ್ಳೆಯ ಹುದ್ದೆಯಲ್ಲಿದ್ದಾಳೆ. ಅವರ ಮನೆಯ ಕಡೆ ನಮಗಿಂತಲೂ ಹೆಚ್ಚು ಮಂದಿ ಸ್ವಲ್ಪ ಸ್ಟಾಂಡರ್ಡ್ ಆಗಿಯೇ ಲೈಫ಼್ ಲೀಡ್ ಮಾಡ್ತಾ ಇದ್ದಾರೆ. ನಮ್ಮ ಎಂಗೇಜ್ ಮೆಂಟ್ ಅನ್ನು ತುಂಬಾ ಅದ್ದೂರಿಯಿಂದಲೇ ಮಾಡಿ ಮುಗಿಸಿದರು. ನನಗೂ ಅನಿರೀಕ್ಷಿತವಾಗಿ ಬಟ್ಟೆ- ಬರೆ, ಒಡವೆ ಅಂತೆಲ್ಲಾ ಸಾಕಷ್ಟು ಖರ್ಚು ಮಾಡಿದ್ದಾರೆ. ಹೀಗಾಗಿ ಮದುವೆಯೆಂದ ಮೇಲೆ ನಾವು ಸುಮ್ಮನಿರಲಾದೀತೇ…?
ಕೊನೇಪಕ್ಷ ಅವರ ಲೆವೆಲ್ ಗೆ ಅಲ್ಲದಿದ್ದರೂ
” ನಾವೇನೂ ಕಡಿಮೆಯಿಲ್ಲ” ಎನ್ನುವಂತಾದರೂ ಮದುವೆಯಲ್ಲಿ ಖರ್ಚು ಮಾಡಬೇಕು ಹಾಗೂ ರೆಸಿಪ್ಷನ್ ನಮ್ಮೂರಿನಲ್ಲಿ ಗ್ರಾಂಡಾಗಿಯೇ ಇಟ್ಟುಕೊಳ್ಳಬೇಕು, ನಮ್ಮವರಿಗೆಲ್ಲಾ ಒಳ್ಳೆಯ ಬಟ್ಟೆ, ಸೀರೆ ಒಡವೆ , ಗಿಫ಼್ಟು ಅಂತೆಲ್ಲಾ ಕೊಡಬೇಕು, ಊರಿನವರಿಗೆ ಊಟ ಹಾಕಿಸಬೇಕು. ಇದಕ್ಕೆಲ್ಲಾ ಏನಿಲ್ಲವೆಂದರೂ ಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ತೆಗೆದಿಡಬೇಕಿತ್ತು. ಇದಕ್ಕಾಗಿಯೇ ಆ ಲೋನು ಈ ಲೋನು ಅಂತ ಕಳೆದ ತಿಂಗಳೇ ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಗುಜರಾಯಿಸಿದ್ದೆ. .
ಆದರೆ ಈಗ ಸಧ್ಯ ಓಮೈಕ್ರಾನ್ ಎಂಬ ವರದಿಂದ ನಮ್ಮ ರಾಜ್ಯದಲ್ಲಿ ಸರ್ಕಾರ ಲಾಕ್ ಡೌನ್ ಮಾಡಿ ಅನೇಕ ಕೋವಿಡ್ ನಿರ್ಬಂಧಗಳನ್ನು ಹೇರಿದೆ. ಮದುವೆಗೆ ಇಪ್ಪತ್ತರಿಂದ ಐವತ್ತು ಜನರಿಗಿಂತ ಹೆಚ್ಚಿಗೆ ಸೇರಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಹೀಗಾಗಿ ಲೋನ್ ಮಂಜೂರಾದ ಮೇಲೆ ಛತ್ರಕ್ಕೆ, ಡೆಕೋರೇಷನ್ ಗೆ, ಕಾಸ್ಟ್ಲೀ ಅಡಿಗೆಗೆ, ಬಂಧುಗಳಿಗೆ ಬೆಲೆ ಬಾಳುವ ಸೀರೆ ತೆಗೆಯಲಿಕ್ಕೆ ಸಾಲದ ಹಣ ಖರ್ಚು ಮಾಡುವಂತಿಲ್ಲ. ಈ ಕೊರೋನಾದಿಂದ ನನಗೆ ಕಡಿಮೆಯೆಂದರೂ ಹತ್ತು- ಹದಿನೈದು ಲಕ್ಷ ಉಳಿತಾಯ ಆದಂತಾಯ್ತು. ಹುಡುಗಿ ಕಡೆಯವರೂ ಸಹಾ ಇದೇ ಮುಹೂರ್ತ ದಲ್ಲೇ ಮದುವೆ ಮುಗಿಸೋಣ. ಆದರೆ ಸಿಂಪಲ್ಲಾಗಿ ನಮ್ಮ ಕಡೆ ಹತ್ತು , ನಿಮ್ಮ ಕಡೆ ಹತ್ತು ಮಂದಿ ಮಾತ್ರ ಬರಲಿ ಎಂದಿದ್ದಾರೆ.
ಸೋ….. ನನ್ನಷ್ಟು ಅದೃಷ್ಟ ವಂತ ಯಾರಿರಲು ಸಾಧ್ಯ ? ನನ್ನನ್ನು ಮದುವೆಗೆ ಮುನ್ನವೇ ಸಾಲಗಾರನಾಗುವುದರಿಂದ ತಪ್ಪಿಸಿದ ಓಮೈಕ್ರಾನ್ ಎಂಬ ಕೊರೋನಾ ರೂಪಾಂತರ ತಳಿಗೆ ಕೃತಜ್ಞತೆ ಹೇಳಬೇಕೋ ಬೇಡವೋ ನೀವೇ ಹೇಳಿ ಮತ್ತೆ ? ನನಗೆ ಸುಮಾರು ಹದಿನೈದು ಲಕ್ಷ ದುಡ್ಡೂ ಉಳೀತು , ಸಾಲಗಾರನಾಗೋದೂ ತಪ್ಪಿತು, ಜೊತೆಗೆ ದುಡ್ಡು ಖರ್ಚು ಮಾಡಲಿಲ್ಲವೆಂಬ ನೆಂಟರಿಷ್ಟರ ಅಪವಾದವೂ ತಪ್ಪಿತು…!
ಹೀಗಾಗಿ ಇದೇ ಖುಷಿಯಲ್ಲಿ ನಿಮಗೆ ಜೆ.ಪಿ.ನಗರದ ಬಾರ್ಬೆಕ್ಯೂ ನೇಷನ್ ನಲ್ಲಿ ದೊಡ್ಡ ಪಾರ್ಟಿ ಕೊಡ್ತೀನಿ ಸರ್ ! ಎಂದು ಒಂದೇ ಉಸಿರಿಗೆ ಎದೆಯಾಳದ ಸಂತಸವನ್ನು ಹೊರ ಹಾಕುತ್ತಿದ್ದ.
ಹಾಗೇ ಯೋಚಿಸಿದೆ…. ಹೌದಲ್ಲವೇ….! ಈ ಬಡ್ಡಿಮಗ ಹೇಳೋದರಲ್ಲೂ ಸಕತ್ ಅರ್ಥ ಇದೆ. ಕೊರೋನಾ ಪರಿಸ್ಥಿತಿ ಗಿಂತ ಮುಂಚೆ ತನ್ನ ಮದುವೆಗೆ ಮಿನಿಮಮ್ ಇಪ್ಪತ್ತು ಲಕ್ಷವಾದರೂ ಖರ್ಚಾಗುವುದೆಂದು ಈ ಮೊದಲೇ ನನ್ನಲ್ಲಿ ಅವಲತ್ತುಕೊಂಡಿದ್ದ . ದೊಡ್ಡ ಸಾಲಗಾರನಾಗು ವೆನೆಂದೂ ಭಯ ವ್ಯಕ್ತಪಡಿಸಿದ್ದ. ಆದರೆ ಕೋವಿಡ್ ಮೂರನೇ ಅಲೆಯ ಆತಂಕಕ್ಕಿಂತಲೂ ಇವನ ಸಂಭ್ರಮದ ಅಲೆ ಜೋರಾಗಿಯೇ ಸದ್ದು ಮಾಡಿತ್ತು. ಕೊನೆಗೆ ಅವನಿಗೆ ಶುಭ ಹಾರೈಸಿದೆ.
ಅಂತೂ ಓಮೈಕ್ರಾನ್ ನಿಂದಾಗಿ ಇವನು ಮೈತುಂಬಾ ಕ್ರೆಡಿಟ್ ತಗೋಂಡು ಎಡವಟ್ಟಾಗೋದು ತಪ್ಪಿದ ಅವನ ಖುಷಿಯಲ್ಲಿ ನಾನೂ ಭಾಗಿಯಾಗಿದ್ದೆ.
** ಮರೆಯುವ ಮುನ್ನ **
ಕೊರೋನಾ ಕಾಲಘಟ್ಟದಲ್ಲಿ ಮದುವೆಯಾಗೋದು ಒಂಥರಾ ಒಳ್ಳೆಯದೇ ಕಣ್ರೀ ! ಮದುವೆ ಅಂದ್ರೇನೇ ಖರ್ಚು. ಅದರಲ್ಲೂ ಅನಗತ್ಯ ಖರ್ಚು, ಅಸಂಬದ್ದದ ಖರ್ಚು, ಅಂಕೆಗೆ ಸಿಗದ ಖರ್ಚು. ನಮ್ಮ ಸಂತೋಷಕ್ಕಿಂತಲೂ ಬೇರೆಯವರು ಏನಂದು ಕೊಂಡಾರೋ ಎಂಬ ಆತಂಕ ಹಾಗೂ ಪ್ರತಿಷ್ಠೆಗಾಗಿಯೇ ಹಣವನ್ನು ನೀರಿನಂತೆ ಖರ್ಚು ಮಾಡುವ ಸುಂದರವಾದ ಈವೆಂಟ್ ಇದು. ಹೀಗಾಗಿಯೇ ತೀರಿಸುವ ತಾಕತ್ತಿಗಿಂತಲೂ ಮೀರಿ ಹಿಗ್ಗಾಮುಗ್ಗಾ ಸಾಲ ಸೋಲ ಮಾಡಿ ಅದ್ದೂರಿ ಯಾಗಿಯೇ ಮದುವೆ ಮಾಡಲು ಎಲ್ಲರೂ ಯತ್ನಿಸುತ್ತಾರೆ. ತಮ್ಮ ಬಂಧು, ನೆಂಟರಿಷ್ಟರು, ಸ್ನೇಹಿತರು , ಶತ್ರುಗಳು…. ಇವರೆಲ್ಲರಿಗಿಂತಲೂ ತಮ್ಮ ಮದುವೆ ಅದ್ದೂರಿಯಾಗಿ ಎಲ್ಲರ ಕಣ್ಣುಕುಕ್ಕುವಂತೆ ಮಾಡಬೇಕೆಂಬ ಇನ್ನರ್ ಫ಼ೀಲಿಂಗು ಹೈ ಪಿಚ್ ನಲ್ಲಿರುತ್ತದೆ.
ಆದರೆ ಎಷ್ಟೇ ಖರ್ಚು ಮಾಡಿದರೂ ಬಂಧು ಬಳಗದವರ ನಿಷ್ಠುರ ಮಾತ್ರ ತಪ್ಪೋಲ್ಲ. ಅಕಸ್ಮಾತ್ ಯಾರನ್ನಾದರೂ ಹತ್ತಿರದವರನ್ನು ಕರೆಯೋದು ಮರೆತಿರೆಂದರೆ ಮುಗೀತು ! ನಿಮ್ಮ ನೆಮ್ಮದಿ ಕೊನೆ ಉಸಿರಿನವರೆಗೂ ಹಾಳು ! ಅದ್ದೂರಿಯಾಗಿ ಮಾಡಿದರೆ ” ನೋಡಿದ್ರಾ … ಇವನ ದೌಲತ್ತು. ಎಲ್ಲೋ ಬಿಟ್ಟಿ ದುಡ್ಡು ಸಿಕ್ಕಿರಬೇಕೆಂಬ ಗುಸುಗುಸು ! ತೀರಾ ಹಿಡಿತದಲ್ಲಿ ಮದುವೆ ಮಾಡಿದರೆ
” ಎಂಥಾ ಕಂಜೂಸ್ ರೀ ಈ ಬಡ್ಡಿಮಗ ! ಒಂದು ಸಾರಿ ಮಾಡೋ ಮದುವೆಗೆ ಈ ಪಾಟೀ ಜುಗ್ಗತನ ಮಾಡ್ತಾನಲ್ಲ…ಎಂಬ ತಿವಿತದ ಮಾತುಗಳು. ನೀವು ಹೇಗೇ ಮದುವೆ ಮಾಡಿದರೂ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ, ಸಾಲದ ಜೊತೆಗೆ ನಿಷ್ಠುರ ಹೊತ್ತುಕೊಳ್ಳುವುದೂ ತಪ್ಪಲ್ಲ! ಆದ್ದರಿಂದ ಕೊರೋನಾ ಎಂಬ ಭಯಾನಕ ವೈರಸ್ ಸಹಾ ನಮಗರಿವಿಲ್ಲದಂತೆಯೇ ನಮಗೆ ಕೆಲವು ವಿಷಯದಲ್ಲಿ ಅನುಕೂಲ ಮಾಡಿದೆ.

ಫೋಟೋ ಕೃಪೆ : bloombergquint
ಆದರೆ ಅದ್ದೂರಿ ಮದುವೆಯಂತಹ ಸಂಭ್ರಮ ಗಳನ್ನೇ ಉದ್ಯೋಗಕ್ಕೆ ದಾರಿ ಮಾಡಿಕೊಂಡಿರುವವರಿಗೆ ಹೀಗೆ ಇಪ್ಪತ್ತು ಜನರ ಸಮ್ಮುಖದಲ್ಲಾಗುವ ಸರಳ ಕೊರೋನಾ ಮದುವೆಗಳು ಆರ್ಥಿಕವಾಗಿ ಭರ್ಜರಿ ಏಟು ಕೊಡುತ್ತವೆಯಲ್ಲವೇ ! ಸರಳ ಮದುವೆಗಳಿಂದ ಅವರ ಉದ್ಯೋಗಕ್ಕೆ ಕಲ್ಲು ಬೀಳೋದಂತೂ ಗ್ಯಾರಂಟೀ.
ಆದರೂ ಬೇರೆಯವರ ಉದ್ಯೋಗಕ್ಕೆ ಕಲ್ಲು ಬೀಳುತ್ತೇ ಅಂತ ತಾನು ಮದುವೆಗಾಗಿ ಲಕ್ಷಾಂತರ ರೂಪಾಯಿಯ ದೊಡ್ಡ ಸಾಲಗಾರನಾಗೋದೂ ಸಹ ಸರಿಯಲ್ಲ……ವೈಭವದ ವಿವಾಹಗಳಲ್ಲಿ ಉಳಿಸಿದೇ ದುಡ್ಡನ್ನೇ ಬಂಡವಾಳ ಮಾಡಿಕೊಂಡು ಹತ್ತಾರು ಜನಕ್ಕೆ ಉದ್ಯೋಗ ಕೊಡಬಹುದಲ್ಲವೇ.?.
ಅಂತೂ ಕೊರೋನಾ ಕಾಲದ ಮದುವೆ ಕುರಿತಾದ ನನ್ನ ಕಿರಿಯ ಸಹೋದ್ಯೋಗಿ ಸ್ನೇಹಿತನ “ಲಾಜಿಕ್” , ಒಂದರ್ಥದಲ್ಲಿ ಅನಾಮತ್ತಾಗಿ ದುಡ್ಡು ಉಳಿಸುವ “ಮ್ಯಾಜಿಕ್” ಥರಾನೇ ಕಾಣುತ್ತದೆಯೆಲ್ಲವೇ….???
- ಹಿರಿಯೂರು ಪ್ರಕಾಶ್
