‘ಎರಡನೇಯ ಹನಿಮೂನ್’ ಕತೆ- ಎನ್. ವಿ.ರಘರಾಂ



ಈಗಿನ ಜೋಡಿಗಳಿಗೆ ಸಮಯ ಸಿಕ್ಕರೆ ಶಾಪಿಂಗ್, ಹೋಟೆಲ್ ಅನ್ನುತ್ತಾರೆ, ಆದರೆ ನಮಗೆ ಸುಂದರ ಸ್ಥಳ ಸಿಕ್ಕರೆ ಸಾಕು ಆ ಸ್ಥಳಕ್ಕೆ ಬೆಸುಗೆಯಾಗಿ ಹಳೆಯ ನೆನಪುಗಳು ಕಾಡುತ್ತವೆ. ಎನ್. ವಿ.ರಘರಾಂ ಅವರ ಲೇಖನಿಯಲ್ಲಿ ಎರಡನೇಯ ಹನಿಮೂನ್ ಕತೆ ಸುಂದರವಾಗಿ ಮೂಡಿಬಂದಿದೆ. ಮುಂದೆ ಓದಿ..

ರಾತ್ರಿ ಸಿಂಫೋನಿ ಆರ್ಕೆಸ್ಟ್ರಾ ಮುಗಿಸಿ ಬರುವಾಗ ಆಗಲೇ ತಡವಾಗಿತ್ತು. ನಾಳೆ ಬೆಳಿಗ್ಗೆ ಎಂಟಕ್ಕೆ ರೆಡಿಯಾಗಿರಿ, ಉಪಹಾರ ಮುಗಿಸಿ ಆಂಡರ್ಸನ್ ಕೆರೆಯ ಹತ್ತಿರಕ್ಕೆ ಹೊಗೋಣ. ಅದು ಊರಿನ ಪಕ್ಕ ಇರುವ ನವ ದಂಪತಿಗಳಿಗೆ ಹೇಳಿ ಮಾಡಿಸಿದ ಜಾಗ ಎಂದು ನಮ್ಮ ಗೈಡ್ ಕಣ್ಣಂಚಿನಲ್ಲಿ ನಸು ನಗುತ್ತಾ ಹೇಳಿಹೋದ. ಊಟ ಮುಗಿಸಿ ರೂಮಿಗೆ ಹೋಗಿ ಮಲಗಿದ್ದಷ್ಟೇ ಗೊತ್ತು. ಬೆಳಗ್ಗೆಯಿಂದ ಸುತ್ತಿ ಸುಸ್ತಾಗಿದ್ದ ನಮಗೆ ನಿದ್ದೆಗೆ ಜಾರಿದ್ದು ಗೊತ್ತಾಗಲಿಲ್ಲ.

ಈ ವರ್ಷ ಜನವರಿಯಲ್ಲಿ ವಿಶ್ರಾಂತಿ ಜೀವನಕ್ಕೆ ಅಡಿಯಿಟ್ಟ ನಾನು, ಕೊರೋನ ಗಲಾಟೆಯಿಂದ ಎಲ್ಲೂ ಹೋಗಲು ಆಗಿರಲಿಲ್ಲ. ಈಗ ಸಧ್ಯ ಅದೆಲ್ಲಾ ಮುಗಿಯಿತಲ್ಲಾ. ಹಳೆಯದನ್ನು ಮರೆತು ಹೊಸ ಜೀವನ ಪ್ರಾರಂಭ ಮಾಡಲು ಸಮಯ ಕೂಡಿ ಬಂದಿತ್ತು. ಈಗ “ಕನಸಿನ ರಾಜ್ಯ” ವಾದ “#ಅಮೇರಿಕಾ” ನೋಡಲು ಹೊರಟ್ಟಿದ್ದೆ ನನ್ನ ಪತ್ನಿಯ ಜೊತೆ. ಟ್ರಾವೆಲ್ ಏಜೆನ್ಸಿಯವರು ನಡೆಸುವ 18ದಿನಗಳ ಪ್ರವಾಸ. ಈಗಾಗಲೇ 8 ದಿನಗಳು ಕಳೆದಿದೆ. ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ ನಾವೇ ಹಿರಿಯರು!. ಯುವ ಜೊಡಿಗಳೇ ಜಾಸ್ತಿ. ಹಾಗಾಗಿ ಗೈಡ್ ಆಗಾಗ ನವ ದಂಪತಿಗಳಿಗೆ ಹೇಳಿದ ಜಾಗ ಎಂದು ನಮ್ಮ ಮುಖ ನೋಡಿ ಹೇಳುತ್ತಿದ್ದ!.

ಫೋಟೋ ಕೃಪೆ : TCTMD

ಬೆಳಗ್ಗೆ ಎದ್ದು ಉಪಹಾರ ಮಾಡಿ #ಬಿ_ಪಿ_ಮಾತ್ರೆ ತಿಂದು ಬಸ್ ಹತ್ತಲು ಬಂದಾಗ, ಅರ್ಧ ಮಾತ್ರ ಬಸ್ ತುಂಬಿತ್ತು. ಉಳಿದವರು ಶಾಪಿಂಗ್ ಮಾಡಲು ಅಲ್ಲೇ ಉಳಿದುಕೊಂಡರು.

“ಈಗೀನವರೇ ಹೀಗೆ…. ” ಎಂದು ಗೊಣಗಿಕೊಳ್ಳುತ್ತಾ ಎಂದಿನಂತೆ ನಮ್ಮ ಮಾತು ಪ್ರಾರಂಭ ಮಾಡಿದೆವು. ಬಸ್ ನಿಧಾನವಾಗಿ ಒಂದು ಘಾಟ್ ಸೆಕ್ಷನ್ ಹತ್ತಲು ಪ್ರಾರಂಭ ಮಾಡಿತು. ನಾವು ಪ್ರಥಮ ಬಾರಿಗೆ ಊಟಿಗೆ ಹೋದ ದಾರಿಯ ನೆನಪಲ್ಲಿ ಕಳೆದು ಹೋದೆವು!

ಆ ಗುಡ್ಡದ ಮೇಲೆ ಇರುವ ರೆಸಾರ್ಟನ ಬಳಿ ಬಸ್ ನಿಲ್ಲಿಸಿದ. ಬೆಳಗ್ಗೆ 10.30ಆಗಿದೆ. ಸೂರ್ಯ ಬಂದಿದ್ದಾನೆ. ಅದೂ ವಿಶೇಷವೇ ಇಲ್ಲಿ! ತಂಪನೆಯ ತಿಳಿಗಾಳಿ ಬೀಸುತ್ತಿದೆ. ಇಬ್ಬನಿ ಕರಗಿದೆ. ನವ ದಂಪತಿಗಳು ಕೈ-ಕೈ ಹಿಡಿದುಕೊಂಡು ಹೊರಟಿದ್ದಾರೆ.



ನಿಧಾನವಾಗಿ ನೋಡುತ್ತಾ ಅಲ್ಲಿಯೇ ಬಂಡೆಯ ಮೇಲೆ ಮಾಡಿದ್ದ ಕಲ್ಲಿನ ಕುರ್ಚಿಯ ಮೇಲೆ ನಾನು ನನ್ನ ಮನದೊಡತಿಯ ಜೊತೆ ಕೂತೆ. ಅಲ್ಲಿಯ ಪ್ರಶಾಂತತೆ ನಿಧಾನವಾಗಿ ಮನಸ್ಸಿಗೆ ಇಳಿಯಲು ಪ್ರಾರಂಭವಾಯಿತು. ಕಳೆದ ಎಂಟು ದಿನಗಳಿಂದ ಬಿಡುವಿಲ್ಲದೇ ನೋಡಿದ ಬಹುಮಹಡಿ ಕಟ್ಟಡಗಳು, ಮಾಲ್ ಗಳು, ನೂರಾರು ಕಾರುಗಳು ನಿಧಾನವಾಗಿ ಮನದಿಂದ ದೂರವಾಯಿತು. ಮನಸ್ಸಿನಲ್ಲಿ ಪ್ರಶಾಂತತೆ ನೆಲಸಿತು.

ಎದುರುಗಡೆ ಹಸಿರು ರಾಶಿ. ಮಧ್ಯದಲ್ಲಿ ಪ್ರಶಾಂತವಾದ ಕೆರೆ. ಆಗೊಮ್ಮೆ ಈಗೊಮ್ಮೆ ಕೇಳಿಸುವ ಪಾರಿವಾಳಗಳ ಸದ್ದು. ಮಧ್ಯದಲ್ಲಿ ಒಂದು “#ಹಸಿರು_ಮನೆ“! ಎಲ್ಲಾ ನೈಸರ್ಗಿಕ ಚಮತ್ಕಾರ ನೀರಿನಲ್ಲಿ ಪ್ರತಿಬಿಂಬವಾಗಿ ಗೋಚರವಾಗಿದೆ. ಎಂತಹ ರಮಣೀಯ ದೃಶ್ಯ. ಆಕಾಶದಿಂದ ಮೆಟ್ಟಿಲುಗಳನ್ನು ಕಟ್ಟಿ ಈ ಕೆರೆಯ ದಡಕ್ಕೆ ಬಿಟ್ಟಿದ್ದಾರೆ! ಕೇಳಿದೆ ಮನದೆನ್ನೆಯನು ” ಹುಣ್ಣಿಮೆಯ ರಾತ್ರಿಯಲಿ ರಂಭಾ, ಮೇನಕಾ ರಾತ್ರಿ ಇಲ್ಲಿ ಬಂದು ಈ ಕೆರೆಯಲ್ಲಿ ಮೀಯಬಹುದೇ?”. ಅವಳೆಂದಳು ನಸುನಗುತಾ “ಯಾಕೆ ನಿಮಗೆ ಸ್ವರ್ಗದ ಹುಡುಗಿಯರ ಸಹವಾಸ? ಅದೂ ಕೃತಯುಗದ ಪಳೆಯುಳಿಕೆಗಳಿಗೆ! ಕಾಣಬಾರದೇ ಕೊನೆಯ ಪಕ್ಷ ಕನಸನ್ನು ಕತ್ರೀನಾ ಬಗ್ಗೆ!” ಓಡುತ್ತಿದ್ದ ಮನಕ್ಕೆ “ತನ್ನತನ” ಸಿಕ್ಕಿದ ಆನಂದ!

ಫೋಟೋ ಕೃಪೆ : coorghomestay

ನಮ್ಮ ಮನಸ್ಸು ಕವಿಶೈಲದ ಬಳಿ ನಿಂತು ನೋಡಿದ ಸಯ್ಯಾದ್ರಿ ಪರ್ವತ ಶ್ರೇಣಿಯ ಜ್ಞಾಪಕ ತಂದಿತು. “ಮೂಡಲ ಮನೆಯ ಮುತ್ತಿನ ನೀರಿನ ….. ” ಹಾಡನ್ನು ಆ ಮನೆ ನೆನಪಿಸಿತು. ಕಾಫಿ ತೋಟದಲ್ಲಿ ಗುಡ್ಡದ ಮೇಲೆ ಆ ಮನೆ ಇದ್ದರೆ, ಇಲ್ಲಿ ಗುಡ್ಡದ ಕೆಳಗೆ ಈ ಹಸಿರು ಮನೆ ಇದೆ. ಈ ರೀತಿ ಕೆರೆ ತೀರದಲ್ಲಿ ತೋಟದ ಮಧ್ಯೆ ಮನೆ ಹೊನ್ನಾವರದ ಕಡೆ ಇದೆಯಲ್ಲ!

ಆದರೆ ನಾನು ಪ್ರಕೃತಿ ಮಧ್ಯೆ ಇದ್ದರೂ ನನ್ನ ಮನ ಪ್ರಕೃತಿಯಲ್ಲಿ ಬೆರೆತು ಪ್ರಸನ್ನಚಿತ್ತಳಾಗಿ ಮುಖದಲ್ಲಿ ಹೊಂಗಿರಣ ಬೀರುತ್ತಿರುವ ನನ್ನ ಮನದನ್ನೆಯಲ್ಲಿತ್ತು!. ಈ ಮುಖಭಾವ ನಾನು ಊಟಿಯಲ್ಲಿ ಮುವತ್ತು ವರುಷಗಳ ಹಿಂದೆ ಅವಳ ಮುಖದಲ್ಲಿ ಪ್ರಥಮ ಬಾರಿ ನೋಡಿದ ನೆನಪು. ಕಳೆದು ಹೋದ ಬಂಗಾರ ಮತ್ತೆ ಸಿಕ್ಕಿದ ಸಂತೋಷ!

ಫೋಟೋ ಕೃಪೆ : savaari blog

ಗೈಡ್ ಬಂದು ಹೊರಡಲು ಸೂಚಿಸಿದಾಗ, ಹಗುರವಾದ ಮನಸ್ಸು “#ವ್ಯಾರಿಕೋಸ್_ವೈನ್ಸ” ನಿಂದ ದಪ್ಪಗಾದ ಕಾಲುಗಳನ್ನು ಎಳೆದು ಕೊಂಡು ಹೊರಟಿತು!

ಇನ್ನೇನು ಬಸ್ ಹತ್ತ ಬೇಕು, ಅಷ್ಟರಲ್ಲಿ….ಟನ್…ಟನ್… ಜೋರಾದ ಕಾಲಿಂಗ್ ಬೆಲ್ ಸದ್ದು! ದಡಕ್ಕನೆ ಎದ್ದೆ ಮಧ್ಯಾಹ್ನದ ನಿದ್ದೆಯಿಂದ! ಪಕ್ಕದ ಮನೆಯ ಆಂಟಿ ಮನೆಯವರ ಜೊತೆ ಮಾತನಾಡಲು ಬಂದಿದ್ದಾರೆ!… ಅಂತೂ ಹನಿಯೂ ಇಲ್ಲದ ಚಂದ್ರನೂ ಇಲ್ಲದ ಎರಡನೇಯ ಹನಿಮೂನ್ ಮುಗಿದಿತ್ತು. ಮನೆಯ ಹೊಸ ರಿಕ್ಲೈನರ್ ಸೋಫಾದ ಮೇಲೆ ಒಬ್ಬಂಟಿಯಾಗಿ!!


  • ಎನ್. ವಿ.ರಘರಾಂ (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್) ಕ.ವಿ.ನಿ.ನಿ) ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW