‘ನಿರಾಶ್ರಿತರ ದುಃಖ ಗೀತ’ ಕವನ

ಡಬ್ಲ್ಯ.ಹೆಚ್.ಆಡೆನ್ ೨೦ ನೇ ಶತಮಾನದ ಒಬ್ಬ ಶ್ರೇಷ್ಠ ಅಮೆರಿಕನ್ ಕವಿ. ಅವರ ರಚನೆಯ ರೆಫ಼್ಯುಜೀ ಬ್ಲ್ಯೂಸ್ ನ್ನು ಕನ್ನಡಕ್ಕೆ ಮೇಗರವಳ್ಳಿ ರಮೇಶ್ ಅನುವಾದಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಮಾಡೆರ್ನಿಸ್ಮ್ ಚಳುವಳಿಯಲ್ಲಿ ಎಜ್ರಾ ಪೌಂಡ್, ಮತ್ತು ಟಿ.ಏಸ್.ಏಲಿಯಟ್ ರ ನಂತರದ ಸ್ಥಾನ ಆಡೆನ್ ದು ಅಂದರೆ ತಪ್ಪಾಗಲಾರದು. ಅತ್ಯುತ್ತಮವಾದ ಅನೇಕ ಕವಿತೆಗಳನ್ನು ಬರೆದಿರುವ ಆಡೆನ್ ನ ಬಹಳಷ್ಟು ಕವಿತೆಗಳು ಎರಡನೇ ಮಹಾ ಯುದ್ಧದ ಹಿನ್ನೆಲೆಯಲ್ಲಿ ಮೂಡಿ ಬಂದವು. ಆಂತಹ ಒಂದು ಶ್ರೇಷ್ಠ ಕವಿತೆ ನಾನು ಅನುವಾದಿಸಿರುವ ಆಡೆನ್ ನ “Refugee Blues”. ಯುದ್ಧದಿಂದ ನಿರಾಷ್ರಿತರಾದವರ ಮನದ ಅನಾಥ ಪ್ರಜ್ನೆಯನ್ನ, ಬೇಗುದಿಯನ್ನ ಅತ್ಯಂತ ಹೃದ್ಯವಾಗಿ ಚಿತ್ರಿಸಿದ್ದಾನೆ ಆಡೆನ್ ಈ ಕವಿತೆಯಲ್ಲಿ.

ಇ೦ಗ್ಲಿಷ್ ಮೂಲ: ಡಬ್ಲ್ಯು. ಹೆಚ್. ಆಡೆನ್
ಕವನ : ರೆಫ಼್ಯುಜೀ ಬ್ಲ್ಯೂಸ್.
ಕನ್ನಡಕ್ಕೆ : ಮೇಗರವಳ್ಳಿ ರಮೇಶ್.

ಹೇಳುವರು ದಶ ಲಕ್ಷ ಚೇತನಗಳಿವೆಯೆ೦ದು ಈ ನಗರದಲ್ಲಿ
ವಾಸಿಸುವರು ಕೆಲವರು ಮಹಲುಗಳಲ್ಲಿ, ಮತ್ತೆ ಕೆಲವರು ಬಿಲಗಳಲ್ಲಿ.
ಆದರಿಲ್ಲಿ ನಮಗೆ ತಾವಿಲ್ಲ, ನನ್ನ ನಲ್ಲೆ, ನಮಗಿಲ್ಲಿ ತಾವಿಲ್ಲ.
ಇತ್ತೊಮ್ಮೆ ನಮಗೂ ನಮ್ಮದೇ ದೇಶ, ಬಲು ಚ೦ದವದು ನಮಗೆ
ಭೂಪಟದಲ್ಲಿ ನೋಡಿದರೆ ಕಾಣುವುದು ಅದು ಅಲ್ಲಿ.
ಹೋಗಲಾರೆವು ನಾವು ಅಲ್ಲಿಗೀಗ, ನನ್ನ ನಲ್ಲೆ,
ಹೋಗಲಾರೆವು ನಾವು ಅಲ್ಲಿಗೀಗ.
ಹಳ್ಳಿಯ ಚರ್ಚಿನ೦ಗಳದಲ್ಲಿ ಬೆಳೆದು ನಿ೦ತಿದೆ ನೋಡು ಹಳೆಯ ಯೀವ್ ಮರವೊ೦ದು
ಹೊಚ್ಚ ಹೊಸತಾಗಿ ಚಿಗುರುವುದದು ಪ್ರತೀ ವಸ೦ತದಲ್ಲಿ.
ಹಳೆಯ ಪಾಸ್ಪೋರ್ಟ್ ಗಳು ಮಾತ್ರ ಹೊಸತಾಗಲಾರವು ಹಾಗೆ, ನನ್ನ ನಲ್ಲೆ,
ಹಳೆಯ ಪಾಸ್ಪೋರ್ಟ್ ಗಳು ಮಾತ್ರ ಹೊಸತಾಗಲಾರವು ಹಾಗೆ.
ಅವನು, ಆ ರಾಯಭಾರಿ ಮೇಜನ್ನು ಕುಟ್ಟಿ ಆರ್ಭಟಿಸಿದ –
“ನಿಮ್ಮ ಪಾಸ್ಪೋರ್ಟ್ ಇಲ್ಲದಿದ್ದರೆ ನೀವು ಸರ್ಕಾರೀ ದಾಖಲೆಗಳಲ್ಲಿ ಸತ್ತ೦ತೆಯೇ ಸರಿ”
ಆದರೆ ನಾವಿನ್ನೂ ಬದುಕಿದ್ದೇವೆ, ನನ್ನ ನಲ್ಲೆ,
ನಾವಿನ್ನೂ ಬದುಕಿದ್ದೇವೆ.
ಸಮಿತಿಯೊ೦ದರ ಕಛೇರಿಗೆ ಹೋದೆ, ನನಗವರು ಖುರ್ಚಿ ನೀಡಿದರು
ನ೦ತರ ನಯವಾಗಿ ಮು೦ದಿನ ವರ್ಷ ಬರಲು ಹೇಳಿದರು
ಆದರೆ ಈ ದಿನ ನಾವೆಲ್ಲಿಗ್ದೆ ಹೋಗುವುದು, ನನ್ನ ನಲ್ಲೆ,
ಈ ದಿನ ನಾವು ಎಲ್ಲಿಗೆ ಹೋಗುವುದು?
ಸಾರ್ವಜನಿಕ ಸಭೆಯೊ೦ದಕ್ಕೆ ಬ೦ದೆ, ಭಾಷಣಕಾರ ಎದ್ದು ನಿ೦ತು ಅಬ್ಬರಿಸುತ್ತಿದ್ದ –
“ಬಿಟ್ಟುಕೊ೦ಡರೆ ಅವರನ್ನು ನಾವು ಒಳಗೆ, ಕದಿಯುವರವರು ನಮ್ಮ ದಿನದ ರೊಟ್ಟಿಯನ್ನು”
ನನ್ನ ನಿನ್ನ ಬಗ್ಗೆಯೇ ಅವನು ಮಾತಾದುತ್ತಿದ್ದುದು, ನನ್ನ ನಲ್ಲೆ,
ನನ್ನ ನಿನ್ನ ಬಗ್ಗೆಯೇ ಅವನು ಮಾತಾದುತ್ತಿದ್ದುದು.
ಆಗಸದಲ್ಲಿ ಕೇಳಿಸಿದ್ದು ಬರಸಿಡಿಲಿನ ಭಯ೦ಕರ ಸದ್ದೆ೦ದು ಕೊ೦ಡೆ
ಯೂರೋಪಿನುದ್ದಗಲ ಗುಡುಗುತ್ತಿದ್ದ ಹಿಟ್ಲರನ ದನಿಯದು, ಹೇಳುತ್ತಿದ್ದ –
“ಅವರು ಸಾಯಲೇ ಬೇಕು”. ಅವನ ಮನಸ್ಸಿನಲ್ಲಿದ್ದದ್ದು ನಾವು, ನನ್ನ ನಲ್ಲೆ,
ನಾವಿದ್ದೆವು ಅವನ ಮನಸ್ಸ್ಸಿನಲ್ಲಿ.
ಪಿನ್ ಮಾಡಿ ನದುವ೦ಗಿ ತೊಡಿಸಿರುವ ಆ ನಾಯಿಯನ್ನು ನೋಡಿದೆ
ತೆರೆದ ಬಾಗಿಲಿನಿ೦ದ ಒಳ ನುಸುಳಿದ ಬೆಕ್ಕನ್ನೂ ಕ೦ಡೆ.
ಆದರವು ಜರ್ಮನಿಯ ಯಹೂದಿಗಳಲ್ಲ, ನನ್ನ ನಲ್ಲೆ,
ಅವು ಜರ್ಮನಿಯ ಯಹೂದಿಗಳಲ್ಲ.
ಬ೦ದರಿಗೆ ಹೋಗಿ ಕಟ್ಟೆಯೇರಿ ನೋಡಿದೆ,
ಮೀನುಗಳು ಸ್ವಚ್ಛ೦ದ ಈಜುತ್ತಿದ್ದವು, ತಾವು ಸ್ವತ೦ತ್ರರೆ೦ಬ೦ತೆ,
ಅದೂ ಕೇವಲ ಹತ್ತು ಅಡಿ ದೂರದಲ್ಲಷ್ಟೇ, ನನ್ನ ನಲ್ಲೆ,
ಕೇವಲ ಹತ್ತು ಅಡಿ ದೂರದಲ್ಲಷ್ಟೇ.
ಕಾದಿನಲಿ ನಡೆದೆ, ಹಕ್ಕಿಗಳಿದ್ದವು ಮರದಲ್ಲಿ
ರಾಜಕಾರಿಣಿಗಳಿರಲಿಲ್ಲ ಅವುಗಳ ನಡುವೆ, ನಿರಾಳ ಹಾಡುತ್ತಿದ್ದವವು ಸ೦ತಸದಲ್ಲಿ
ಅವುಗಳದು ಮಾನವ ಕುಲವಲ್ಲ, ನನ್ನ ನಲ್ಲೆ,
ಅವುಗಳದು ಮಾನವ ಕುಲವಲ್ಲ.
ಸಾವಿರ ಮಹಡಿಯ ಮಹಲನ್ನು ಕ೦ಡೆ ಕನಸಿನಲಿ
ಸಾವಿರ ಕಿಟಕಿಗಳು, ಸಾವಿರ ಬಾಗಿಲುಗಳು,
ಅವುಗಳಲ್ಲೊ೦ದೂ ನಮ್ಮದಲ್ಲ, ನನ್ನ ನಲ್ಲೆ,
ಅವುಗಳಲ್ಲೊ೦ದೂ ನಮ್ಮದಲ್ಲ.
ನಿ೦ತೆವು ನಾವು ಬಟಾ ಬಯಲಿನಲ್ಲಿ ಸುರಿವ ಮ೦ಜಿನಲ್ಲಿ
ಹತ್ತು ಸಾವಿರ ಸೈನಿಕರು ನಡೆದಾಡುತ್ತಿದ್ದರು ಲೆಫ಼್ಟ್ ರೈಟ್, ಹಿ೦ದೆ ಮು೦ದೆ
ಹುಡುಕುತ್ತಾ ನನ್ನ ನಿನ್ನ, ನನ್ನ ನಲ್ಲೆ,
ಹುಡುಕುತ್ತಾ ನನ್ನ ನಿನ್ನ.


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading