‘ಆಕಾಶ ಇಷ್ಟೇ ಯಾಕಿದೆಯೋ’ ಕೃತಿಯು ಪೂರ್ಣಿಮಾರ ಅನುಭವ ಕಥನವಲ್ಲದೆ, ವಾಯುಸೇನೆಗೆ ಸೇರಬಯಸುವ ಯುವಕ, ಯುವತಿಯರು, ಮತ್ತವರ ಪೋಷಕರಿಗೆ ಮಾಹಿತಿ ನೀಡುವ ಪುಸ್ತಕವಾಗಿದೆ. ಈ ಕೃತಿಯ ಕುರಿತು ಕವಿ, ಲೇಖಕರಾದ ಡಾ. ಅಜಿತ್ ಹರೀಶಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಆಕಾಶ ಇಷ್ಟೇ ಯಾಕಿದೆಯೋ
ಲೇಖಕರು : ಪೂರ್ಣಿಮಾ ಮಾಳಗಿಮನಿ
ಪ್ರಕಾಶನ : ಸಾವಣ್ಣ ಪ್ರಕಾಶನ
ಬೆಲೆ : ೨೨೫.೦೦
‘ಆಕಾಶ ಇಷ್ಟೇ ಯಾಕಿದೆಯೋ’ ಪೂರ್ಣಿಮಾ ಮಾಳಗಿಮನಿ ಅವರ ಮೊದಲ ನಾನ್ ಫಿಕ್ಷನ್ ಕೃತಿ. ಕಾದಂಬರಿ, ಕಥೆ ಮತ್ತು ಕವಿತೆಗಳ ಪ್ರಕಾರಗಳಲ್ಲಿ ಅದಾಗಲೇ ತಮ್ಮ ಛಾಪನ್ನು ಮೂಡಿಸಿರುವ ಪೂರ್ಣಿಮಾ ಒಬ್ಬರು ವಿಶಿಷ್ಟ ಬರಹಗಾರ್ತಿ. ಯಾವುದೇ ಹಿಂಜರಿಕೆಯಿಲ್ಲದೆ ಬರೆಯುವ ಛಾತಿಯನ್ನುಳ್ಳವರು. ಈ ಹೊತ್ತಿಗೆಯಲ್ಲಿ ವಾಯುಸೇನೆಯ ಅನುಭವವನ್ನು ವಿವರಿಸುವಾಗ ಅವರು ತಮ್ಮ ಸ್ವಂತ ಬದುಕಿನ ಅಂಚನ್ನು ಸೋಕಿ ಮುಂದಕ್ಕೆ ಹೋಗುವಾಗ, ಯಾವುದೇ ಸೋಗಿನ ಸೋಂಕಿಲ್ಲದೆ ವಿವರಗಳನ್ನು ದಾಖಲಿಸಿರುವುದು ಅನನ್ಯವಾಗಿದೆ.
ವೃತ್ತಿ ಬದುಕಿನ ಕುರಿತು ಮುಕ್ತವಾಗಿ, ವಿವರವಾಗಿ ಮಧ್ಯ ವಯಸ್ಕರು ಬರೆದಿದ್ದು ಕಡಿಮೆ. ಅದರಲ್ಲೂ ಭಾರತೀಯ ಸೇನೆಯಲ್ಲಿ, ವಿಶೇಷವಾಗಿ ವಾಯುಸೇನೆಯಲ್ಲಿ ಕೆಲಸ ಮಾಡಿ ಬಂದವರು ಇದನ್ನು ಕನ್ನಡದಲ್ಲಿ ಕಥನ ರೂಪಕ್ಕೆ ಒಗ್ಗಿಸಿರುವವರು ಇಲ್ಲ. ಇವೆಲ್ಲ ಕಾರಣಗಳಿಂದ ಇದೊಂದು ವಿಭಿನ್ನ ಮತ್ತು ಮಹಾತ್ವಾಕಾಂಕ್ಷಿ ಕೃತಿಯಾಗಿದೆ.

‘ನಾನೇಕೆ ಸೇನೆ ಸೇರಿದೆ’ ಎಂಬ ಭಾಗದಲ್ಲಿ ಪೂರ್ಣಿಮಾ ವೀರಾವೇಶದಿಂದ, ಉತ್ಪ್ರೇಕ್ಷೆಯಿಂದ ಏನನ್ನೂ ಹೇಳುವುದಿಲ್ಲ. ತಣ್ಣಗೆ ತಾವು ಕೆಲಸಕ್ಕೆ ಸೇರಿದ ಅನಿವಾರ್ಯತೆಯನ್ನು ನಮ್ಮ ಮುಂದಿಡುತ್ತಾರೆ. ಈ ಪ್ರಾಮಾಣಿಕತೆ ನಮಗೆ ಇಷ್ಟವಾಗುತ್ತದೆ. ಸೇನೆಗೆ ಆಯ್ಕೆಯಾಗಲು ಇದ್ದ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ತರಬೇತಿಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುವಾಗ, ನಿರೂಪಣೆಯು ರೂಕ್ಷವೆನಿಸದೆ, ತಿಳಿ ಹಾಸ್ಯದ ಲೇಪನ ಗಮನ ಸೆಳೆಯುತ್ತದೆ.
ಇದು ಪೂರ್ಣಿಮಾರ ಅನುಭವ ಕಥನವಲ್ಲದೆ, ವಾಯುಸೇನೆಗೆ ಸೇರಬಯಸುವ ಯುವಕ, ಯುವತಿಯರು, ಮತ್ತವರ ಪೋಷಕರಿಗೆ ಮಾಹಿತಿ ನೀಡುವ ಪುಸ್ತಕವೂ ಹೌದು. ವಿಶೇಷವಾಗಿ ಸೇನೆಗೆ ಸೇರಲು ಬಯಸುವ ಹೆಣ್ಣುಮಕ್ಕಳಿಗೆ ಒಂದು ಪೂರ್ವತಯಾರಿಯ ಪುಸ್ತಿಕೆಯಾಗಿ ಕೂಡ ಉಪಯುಕ್ತವಾಗಿದೆ.
‘ನೆಲದಿಂದ ನಭದೆಡೆಗೆ’ ಎಂಬ ಅಧ್ಯಾಯದಲ್ಲಿ ಬರುವ ಘಟನೆಗಳು ಓದುಗರಿಗೆ ಕಚಗುಳಿಯಿಡುತ್ತಾ, ಸರಾಗವಾಗಿ ಓದಿಸಿಕೊಂಡು ಹೋಗುವುದು ಇಲ್ಲಿನ ವಿಶೇಷ. ಇಂತಹ ಸಂದರ್ಭಗಳನ್ನು ಜನರ ಮುಂದಿಡುವುದು ಸಾಹಸದ ಕೆಲಸವೇ ಸೈ. ಎಲ್ಲಿ ಸಾರ್ವಜನಿಕ ವಲಯದಿಂದ ತಾವು ಜಡ್ಜಮೆಂಟಲ್ ಆಗಬಹುದು ಎಂಬ ಸಂಕೋಚ, ಭಯವಿಲ್ಲದೆ ಬರೆವ ಧೀರ ಮಹಿಳೆಯಾಗಿ ಪೂರ್ಣಿಮಾ ಈ ಕೃತಿಯಲ್ಲಿ ಕಾಣಸಿಗುತ್ತಾರೆ.

‘ನನ್ನೊಳಗೆ ಉಳಿದ ಸಿಪಾಯಿ’ ಭಾಗವು, ಸೈನಿಕರು ನಿವೃತ್ತರಾದ ನಂತರ ನಾಗರಿಕ ಸಮಾಜದಲ್ಲಿ ಹೊಂದಿಕೊಳ್ಳಲು ಆಗುವ ಸವಾಲುಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಶಿಸ್ತು ಮತ್ತು ಕರ್ತವ್ಯಪ್ರಜ್ಞೆ ಹೇಗೆ ಮೃದುವಾದವು ಎಂಬುದನ್ನು ಒರೆಗೆ ಹಚ್ಚುತ್ತದೆ. ಆಸಕ್ತರಿಗಾಗಿ, ಯುದ್ಧ ವಿಮಾನಗಳು, ಆಯುಧಗಳು, ಸಹಾಯಕ ಉಪಕರಣಗಳು, ಆಧುನಿಕ ತಂತ್ರಜ್ಞಾನ ಮತ್ತು ಇತರ ರಕ್ಷಣಾ ವಲಯದ ಉತ್ಪಾದನೆಯಲ್ಲಿ ಆತ್ಮ ನಿರ್ಭರತೆಯತ್ತ ಭರದಿಂದ ಸಾಗುತ್ತಿರುವ ಭಾರತವು ಜಾಗತಿಕ ಮಟ್ಟದಲ್ಲಿ ಎಲ್ಲಿದೆ ಎನ್ನುವ ಒಂದು ತುಲನಾತ್ಮಕ ಅಧ್ಯಾಯವೂ ಇಲ್ಲಿದೆ. ಒಟ್ಟಿನಲ್ಲಿ ವಾಯುಸೇನೆ ಮತ್ತು ತಮ್ಮ ವೃತ್ತಿಯ ಅನುಭವದ ದಿನಗಳನ್ನು ಸರಳವಾದ ಭಾಷೆಯಲ್ಲಿ ಪೂರ್ಣಿಮಾ ಇಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಕೆಲಸಕ್ಕೆ ಸೇರುವುದೇ ಆದ್ಯತೆಯಾಗಿದ್ದು, ಕ್ರಮೇಣವಾಗಿ ಪ್ರೀತಿಯ ಕಾರ್ಯವಾಗಿ ಬದಲಾಗುತ್ತದೆ. ಕೃತಿಯ ಅಂತ್ಯದ ವೇಳೆಗೆ, ಸೇನೆಯನ್ನು ಸೇರಿದ್ದು ಹೆಮ್ಮೆಯ ವಿಷಯವಾಗಿ ಬದಲಾಗಿ ಯುವಜನತೆಗೆ ಪ್ರೇರಣಾದಾಯಕ ವ್ಯಕ್ತಿಯಾಗಿ ಪೂರ್ಣಿಮಾ ದರ್ಶನವಾಗುತ್ತದೆ. ಕೃತಿಯೊಂದು ಸಾಮಾನ್ಯೀಕರಣಕ್ಕೆ ಒಳಗಾದ ಶ್ರೇಯಸ್ಸಿಗೆ ಪಾತ್ರವಾಗುತ್ತದೆ.
- ಡಾ. ಅಜಿತ್ ಹರೀಶಿ
