‘ಎಂಟನೆಯ ಕನಸು’ ಕವನ – ಡಾ. ಅಜಿತ್ ಹರೀಶಿ

ದ್ವಾರಕೆಯ ಕಟ್ಟಿ ರುಕ್ಮಿಣಿಯ ವರಿಸಿ…ಕನಸು ಕಂಗಳ ತೆರೆಸಿ…ಡಾ. ಅಜಿತ್ ಹರೀಶಿ ಅವರ ಲೇಖನಿಯಲ್ಲಿ ಅರಳಿದ ಶ್ರೀಕೃಷ್ಣನ ಲೀಲೆಯನ್ನು ತಪ್ಪದೆ ಮುಂದೆ ಓದಿ…

ಕನಸ ಕೊಲ್ಲುತ್ತ ಹೋದ
ಕಂಸ
ಬಂಧನದಲ್ಲಿದ್ದ ದೇವಕಿಯ
ನನಸೊಂದು ನಡುರಾತ್ರಿ ದಿಗ್ಬಂಧನವ ದಾಟಿ
ಕಡಲ ಬದಿ ಸರಿಸಿ
ಗೋಕುಲ ತಲುಪಿತು
ವಾಸುದೇವ ನಿಮಿತ್ತ

ಯಶೋದೆಗೆ ಪಡಿಪಾಟಲು
ಸಾಧನೆಯ ಶಿಖರದಂಕುರದ
ಕನಸ ಸೈರಿಸಲು
ಕಟ್ಟಿಹಾಕಿದಳು ಒಲ್ಲದ ಮನಸ್ಸಿನಿಂದ
ತಿಂದಳು ಬೈಗುಳವ ನವನೀತ ಕಾರಣದಿಂದ

ಬಾಲ ಲೀಲೆ ಕೊಳಲ ನೀಲ
ಗೋಪಿಕೆಯರ ಆರಾಧನೆ
ಪ್ರೇಮಕ್ಕೆ ವಿರಹಕ್ಕೆ ರಾಧೆ
ನಂದಗೋಕುಲಕೆ ತೆರೆ
ಕರ್ಮಮಥುರೆಗೆ ನಡೆ
ದ್ವಾರಕೆಯ ಕಟ್ಟಿ ರುಕ್ಮಿಣಿಯ ವರಿಸಿ
ಕನಸು ಕಂಗಳ ತೆರೆಸಿ

ದ್ರೌಪದಿಯ ವಸ್ತ್ರಾಪಹರಣ
ಮಾನದ ಆಶಾಕಿರಣ ಅಂಬರಾವತಾರ
ಬಾಯಿಯಲ್ಲಿ ಬ್ರಹ್ಮಾಂಡ
ಗುರು ನಾಲಿಗೆ ಹೊರಳಿ ಭಗವದ್ಗೀತೆ

ಪಾಂಡವರ ಗತಿ ಹಸ್ತಿನಾವತಿ
ಎದುರಿನ ಹನ್ನೊಂದು ಅಕ್ಷೋಹಿಣಿ ಸೇನೆಯ
ಹನನಕೆ ತಂತ್ರ
ತಿರುತಿರುಗಿ ಬರುವ ಭರವಸೆ

ಸವಿ ಕನಸೊಂದು ನೋವು ನಿವಾರಕ
ಕನಸಿನಾರಾಧನೆ ಭವದ ಬಿಡುಗಡೆ
ಭ್ರಮೆ ಸಾಕು ಬದುಕಲು
ಸುದಾಮನ ಮನದಿಂಗಿತ ನನಸು
ನನಸಾಗಿಸಿದ ಕನಸಿನ ಬಣ್ಣ ನೀಲಿ
ಬರುತಿದೆ ಕೇಳಿ ಮುರುಳಿ
ನಂಬಿಕೆಯ ಕನಸಿನ ದನಿ ತೇಲಿ ತೇಲಿ


  • ಡಾ. ಅಜಿತ್ ಹರೀಶಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading