ಖ್ಯಾತ ಕಾದಂಬರಿಗಾರ್ತಿ ಚಿತ್ರಲೇಖಾ ಅವರ ‘ಮಿಲನ’ ಕಾದಂಬರಿ ಕುರಿತು ಮಮತಾ ವೆಂಕಟೇಶ್ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಮಿಲನ
ಲೇಖಕಿ : ಚಿತ್ರಲೇಖಾ
ಪ್ರಕಾರ : ಕಾದಂಬರಿ
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಪುಸ್ತಕದ ಮುಖಬೆಲೆ – ರೂ 210/- ಅಂಚೆ ವೆಚ್ಚ ಉಚಿತ.
ಖರೀದಿಗಾಗಿ : 99459 39436
ಚಿತ್ರಲೇಖರವರು ಸರಳವಾದ ಆದರೆ ಸೊಗಸಾದ ಕಾದಂಬರಿಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. ಇವರ ಅನುವಾದದ ಕರುಣಾ ಹತ್ಯೆ ನನಗೆ ತುಂಬಾ ಇಷ್ಟವಾಗಿದ್ದ ಕೃತಿಗಳಲ್ಲಿ ಒಂದು. ಇವರ ಬರವಣಿಗೆ ನನಗೆ ಇಷ್ಟವಾದ್ದರಿಂದ ಹಳೆಯ ಚಿನ್ನದಂಗಡಿಯಲ್ಲಿ (ಹೀಗೆಂದರೆ ನಮ್ಮ ಮನೆಯಲ್ಲಿ ಹಳೆಯ ಪುಸ್ತಕದಂಗಡಿ ಎಂದರ್ಥ) ಸಿಕ್ಕ ಈ ಪುಸ್ತಕ ಆರಿಸಿಕೊಂಡೆ.
ಈ ಕಾದಂಬರಿ ಸಹ ಸರಾಗವಾಗಿ ಓದಿಸಿಕೊಂಡು ಹೋಗುವ ಸಾಮಾಜಿಕ ಕಾದಂಬರಿ.
ವೇದಮೂರ್ತಿ ಹಾಗೂ ಸುನಂದಮ್ಮ ದಂಪತಿಗಳಿಗೆ ಬಹು ಕಾಲದ ನಂತರ ಜನಿಸಿದ ಹೆಣ್ಣುಮಗಳು ಕ್ಷಮ. ಅಪರೂಪಕ್ಕೆ ಜನಿಸಿದ ವರ ಪುತ್ರಿಯಾದ್ದರಿಂದ ತಂದೆ-ತಾಯಿಯ ಕಣ್ಣಿನ ಗೊಂಬೆಯಾಗಿದ್ದಳು. ತಂದೆಯನ್ನೇ ಹೋಲುತ್ತಿದ್ದ ಕ್ಷಮ ಅಪರೂಪದ ಸುಂದರಿ ಹೆಣ್ಣುಮಗಳು. ತಮ್ಮ ಇಳಿವಯಸ್ಸಿನಲ್ಲಿ ವೇದಮೂರ್ತಿ ಅವರಿಗೆ ಮತ್ತೊಂದು ಹೆಣ್ಣು ಮಗುವಾಗುತ್ತದೆ. ಅದಾದ ಎರಡು ವರ್ಷಗಳ ನಂತರ ಸುನಂದಮ್ಮ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ವೇದಮೂರ್ತಿ ಸಾವನ್ನಪ್ಪುತ್ತಾರೆ.

ಜಿಂಕೆಯಂತೆ ಜಿಗಿದಾಡುತ್ತಾ ಆಕಾಶವೇ ತನ್ನ ಉತ್ಸಾಹಕ್ಕೆ ಎಲ್ಲೆ ಎಂದುಕೊಂಡು ನಲಿಯುತ್ತಿದ್ದ ಕ್ಷಮಾಳ ಮೇಲೆ ಇಡೀ ಸಂಸಾರದ ಜವಾಬ್ದಾರಿ ಬೀಳುತ್ತದೆ. ಕಾಲೇಜು ಮುಗಿಸಿದ್ದ ಅವಳು ಧೈರ್ಯಗೆಡದೆ ಸಂಸಾರದ ಚುಕ್ಕಾಣಿ ಹಿಡಿದು ಉದ್ಯೋಗಸ್ಥೆಯಾಗಿ ಮುನ್ನಡೆಸುತ್ತಾಳೆ. ವೇದಮೂರ್ತಿಗಳ ಸೋದರಿ ಕಪಿಲಮ್ಮ ತಮ್ಮ ಮಗ ಗೋಪುವಿಗೆ ಅವಳನ್ನು ಮದುವೆ ಮಾಡಕೊಳ್ಳುವುದಾಗಿ ಮಾತು ಕೊಟ್ಟಿದ್ದರೂ ಸೋದರನ ನಿಧನಾ ನಂತರ ತಮ್ಮ ಮಾತು ಮುರಿದು ಶ್ರೀಮಂತರ ಮನೆ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತಾರೆ.
ಸೋದರನಿಲ್ಲದ ತವರು ಮನೆಯ ಜವಾಬ್ದಾರಿ ಹೊರಲು ಸ್ಥಿತಿವಂತರಾದರೂ ಅವರಿಗೆ ಇಷ್ಟವಿರುವುದಿಲ್ಲ..ಇದರಿಂದ ನೊಂದರೂ ಕ್ಷಮ ಲೆಕ್ಕಿಸದೇ ತನ್ನ ಕೆಲಸ ಮಾಡಿಕೊಳ್ಳುತ್ತಾ ಹೋಗುತ್ತಾಳೆ. ಅವಳ ಎದುರು ಮನೆಗೆ ಬಂದ ದಂಪತಿಗಳಾದ ವಿಶಾಲ ಮತ್ತು ಭಾಸ್ಕರ್ ದು ಅನುರೂಪವಲ್ಲದ ದಾಂಪತ್ಯ…ತನ್ನ ಹೆಂಡತಿ ರೂಪವತಿಯಲ್ಲ ಎನ್ನುವ ಅಸಮಾಧಾನ ಭಾಸ್ಕರ್ ನದ್ದು… !!
ಆದರೂ ಸಹ ಸಹಜವಾಗಿಯೇ ಗಂಡ-ಹೆಂಡತಿಯರ ಮಧ್ಯೆ ಇರಬೇಕಾದ ಅನುಬಂಧ ವಾತ್ಸಲ್ಯ,ಪ್ರೇಮ, ಪ್ರೀತಿ ಅವರ ಮಧ್ಯೆ ತಕ್ಕಮಟ್ಟಿಗೆ ಇತ್ತು..ಅದರ ಜೊತೆಗೆ ದುಸುಮುಸು.. ಕಸಿವಿಸಿ.. ಕಿತ್ತಾಟಗಳೂ ನಡೆಯುತ್ತಿದ್ದವು. ವಿಶಾಲ ಗಂಡನ ಮೇಲಿನ ಅಪರಿಮಿತ ಪ್ರೀತಿಯಿಂದ ಎಲ್ಲವನ್ನೂ ಸುಲಭವಾಗಿ ತೆಗೆದುಕೊಂಡು ಸಂಸಾರವನ್ನು ಸುಂದರವಾಗಿ ನಡೆಸಿಕೊಂಡು ಹೋಗುತ್ತಿದ್ದಳು.
ಗರ್ಭಿಣಿಯಾದ ಹೆಂಡತಿಗೆ ಭಾಸ್ಕರ್ ಪ್ರೀತಿಯನ್ನು ತೋರಿಸಿದರೂ ಸಹ ಅವನ ಮುಂಗೋಪ ಸಕಾರಣವಿಲ್ಲದೆ ಕೆರಳುತ್ತಿತ್ತು…!! ಎದುರು ಮನೆಯಲ್ಲಿ ವಾಸವಾಗಿದ್ದ ಕ್ಷಮಾಳನ್ನು ಕಂಡು ವಿಶಾಲ ಅವಳ ಬಗ್ಗೆ ಯೋಚನೆ ಮಾಡಿ ಆಗಾಗ ಕ್ಷಮಾಳ ಸ್ವತಂತ್ರಜೀವನ…ಉದ್ಯೋಗ. ರೂಪಿನ ಬಗ್ಗೆ ಕೊರಗುತ್ತಿದ್ದಳು. ತನ್ನ ಗಂಡನ ಬಳಿ ಸಹ ಕ್ಷಮಾಳ ಬಗ್ಗೆ ಆಗಾಗ ಹೇಳಿಕೊಳ್ಳುತ್ತಲೇ ಇರುತ್ತಾಳೆ.
ಇತ್ತ ಕ್ಷಮಾ ಸಹ ವಿಶಾಲಳ ಸುಖೀ ದಾಂಪತ್ಯದ ಬಗ್ಗೆ ಕಲ್ಪಿಸಿಕೊಂಡು ನನಗೆ ಅಂತಹ ನಿರಾಳವಾದ ಜೀವನ ದೊರಕುವುದಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿದ್ದಳು. ಹೀಗಿರುವಾಗಲೇ ಒಮ್ಮೆ ಅನಿರೀಕ್ಷಿತವಾಗಿ ನಡೆದ ಅಪಘಾತದಲ್ಲಿ ಕ್ಷಮಾಳಿಗೆ ಮಹೇಂದ್ರ ಎನ್ನುವವನ ಪರಿಚಯವಾಗುತ್ತದೆ.

ಪರಿಚಯ ಪ್ರೇಮಕ್ಕೆ ತಿರುಗಲು ತುಂಬಾ ಹೊತ್ತು ಹಿಡಿಯುವುದಿಲ್ಲ.ಥಿಯೇಟರ್, ಹೋಟೆಲ್ ಎಂದು ಅಲ್ಲಿ-ಇಲ್ಲಿ ಅವನೊಟ್ಟಿಗೆ ತಿರುಗಾಡಲು ಕ್ಷಮ ಆರಂಭಿಸುತ್ತಾಳೆ. ಮಹೇಂದ್ರ ಅವಳನ್ನು ತನ್ನ ಪ್ರೇಮದ ಬಲೆಯಲ್ಲಿ ಬಿಗಿಯಾಗಿ ಬಂಧಿಸಿ ಬಿಟ್ಟಿರುತ್ತಾನೆ. ಪ್ರೀತಿ-ಪ್ರೇಮದ ಅಮಲಿನಲ್ಲಿ ಕ್ಷಮ ಜಗತ್ತನ್ನೇ ಮರೆತು ಬಿಡುತ್ತಾಳೆ.ಮದ್ರಾಸಿಗೆ ಮಹೇಂದ್ರನೊಟ್ಟಿಗೆ ಮನೆಯಲ್ಲಿ ತಿಳಿಸದೆ ಹೋದ ಕ್ಷಮ ಹರೆಯದ ಬಿಸುಪಿನಲ್ಲಿ ವಿಚಕ್ಷಣ ಜ್ಞಾನವನ್ನು ಮರೆತು ತನ್ನ ಸರ್ವಸ್ವವನ್ನು ಮಹೇಂದ್ರನಿಗೆ ಒಪ್ಪಿಸಿಬಿಡುತ್ತಾಳೆ. ಅವನು ತನ್ನನ್ನು ಖಂಡಿತ ಮದುವೆಯಾಗುತ್ತಾನೆ ಎನ್ನುವ ವಿಶ್ವಾಸದಲ್ಲಿ ಜಗದ ಪರಿವೇ ಇಲ್ಲದಂತೆ ನಿಭಾಯಿಸುತ್ತಾಳೆ.
ಅಲ್ಲಿಂದ ಊರಿಗೆ ಮರಳಿ ಬಂದ ನಂತರ ಮಹೇಂದ್ರ ಅವಳನ್ನು ಭೇಟಿಯಾಗಲು ಬರುವುದಿಲ್ಲ. ಅವನ ನೆನಪಿನಲ್ಲಿ ಕ್ಷಮ ಸೋತು ಸೊರಗುತ್ತಾಳೆ. ಅವನಿಗೆ ಏನಾಗಿದ್ದಿರಬಹುದು ಎಂದು ಆತಂಕದಿಂದ ತಲ್ಲಣಿಸಿ ಅವನು ಕೊಟ್ಟಿದ್ದ ವಿಳಾಸಕ್ಕೆ ಹುಡುಕಿಕೊಂಡು ಹೋಗುತ್ತಾಳೆ. ಗರ್ಭಿಣಿಯಾಗಿದ್ದ ವಿಶಾಲ ತವರುಮನೆಗೆ ಹೆರಿಗೆಗಾಗಿ ಹೋಗುವ ಸಿದ್ಧತೆಗಳನ್ನು ಮಾಡುತ್ತಾಳೆ.ಆಗ ಭಾಸ್ಕರನ ಬೀರು ತುಂಬಾ ಗೊಂದಲಮಯವಾಗಿದ್ದುದರಿಂದ ಅವನು ಬರುವಷ್ಟರಲ್ಲಿ ಅದನ್ನು ಶುಚಿಮಾಡಿ ಜೋಡಿಸುವ ಸನ್ನಾಹದಲ್ಲಿ ಅಲ್ಲಿರುವ ಎಲ್ಲವನ್ನು ತೆಗೆಯುತ್ತಾಳೆ.
ಆಗ ಅಲ್ಲಿ ಸಿಕ್ಕ ವಸ್ತುಗಳನ್ನು ಕಂಡು ತನ್ನ ಕಣ್ಣನ್ನು ತಾನೇ ನಂಬುವುದಿಲ್ಲ.ತನ್ನ ಗಂಡನ ನಿಜಸ್ವರೂಪ ಅವಳ ಮುಂದೆ ಬಟಾ ಬಯಲಾಗಿ ಬಿಡುತ್ತದೆ!!. ವಿಶಾಲ ದಿಗ್ಭ್ರಾಂತಳಾಗಿ ಅವುಗಳನ್ನು ಪರಿಶೀಲಿಸುತ್ತಾಳೆ..!! ಮಹೇಂದ್ರನನ್ನು ಹುಡುಕಿಕೊಂಡು ಹೋದಾಗ ಕ್ಷಮಾಳಿಗೆ ಎದುರಾಗುವ ಸತ್ಯವೇನು??!! ಅದನ್ನು ಅವಳು ಹೇಗೆ ಎದುರಿಸುತ್ತಾಳೆ??!!
ಮಹೇಂದ್ರ ವಾಪಸ್ ಬರದಿರಲು ಕಾರಣವೇನು??! ವಿಶಾಲಳಿಗೆ ಗೊತ್ತಾಗುವ ನಗ್ನ ಸತ್ಯವೇನು??!! ಅದರಿಂದ ಅವಳ ಸಂಸಾರದ ಮೇಲೆ ಎಂತಹ ಪರಿಣಾಮ ಉಂಟಾಗುತ್ತದೆ??!!
ಕ್ಷಮ ಮತ್ತು ವಿಶಾಲರ ನಡುವಿನ ಸಂಬಂಧವೇನು??!! ಕ್ಷಮಾಳ ಜೀವನ ಎಂತಹ ತಿರುವು ತೆಗೆದುಕೊಳ್ಳುತ್ತದೆ ಎನ್ನುವುದಕ್ಕೆ ಈ ಸುಂದರವಾದ ಕಾದಂಬರಿಯನ್ನು ಓದಿ.
ಜೀವನ ಎನ್ನುವುದು ಸಿನಿಮಾವಲ್ಲ..!! ಮನುಷ್ಯ ತನ್ನ ಬುದ್ಧಿಯ ಮೇಲಿನ ಹಿಡಿತ ಕಳೆದುಕೊಂಡಾಗ ಉಂಟಾಗುವ ಅನಾಹುತಗಳು ಇಡೀ ಸಂಸಾರವನ್ನು ಅಡಿಮೇಲು ಮಾಡಿ ಬಿಡುತ್ತವೆ.
ಎಲ್ಲಾ ಸರಿಯಾಗಿ ಇದ್ದಾಗಲೂ ಹುಚ್ಚು ಖೋಡಿ ಮನಸ್ಸು ಎಲ್ಲೆಲ್ಲೋ ಅಲೆದಾಡುತ್ತದೆ….!! ಅದು ಸಹಜವಾದರೂ ಸಹ ಅದನ್ನು ನಿಯಂತ್ರಣದಲ್ಲಿಟ್ಟು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಅವರದ್ದೇ.
ಅವರವರ ಜೀವನಕ್ಕೆ ಅವರೇ ಜವಾಬ್ದಾರಿ.. ಕೋಪದಲ್ಲಿ ಕೊಯ್ದ ಮೂಗು ಶಾಂತವಾದಾಗ ಬಾರದು ಅಲ್ಲವೇ??!! ಹಾಗಿಲ್ಲವಾದರೆ ಏನೆಲ್ಲ ಸಂಕಷ್ಟಗಳು ಒದಗುತ್ತವೆ ಎನ್ನುವುದಕ್ಕೆ ಈ ಕಾದಂಬರಿ ಒಂದು ನಿದರ್ಶನ. ಈಗ ಈ ಕಾದಂಬರಿ ಮರುಮುದ್ರಣವಾಗಿದೆ.ಆಸಕ್ತರು ಖರೀದಿಸಬಹುದು.
- ಮಮತಾ ವೆಂಕಟೇಶ್
