ಮಕ್ಕಳ ಕವಿ ತಮ್ಮಣ್ಣ ಬೀಗಾರ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬೀಗಾರನವರು, ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಕೃತಿಗಳ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬಾಲ್ಯವೆಂದರೆ ಎಲ್ಲರಿಗೂ ಒಂದು ಖುಶಿಯ ನೆನಪು. ನಾವು ಚಿಕ್ಕವರಾಗಿದ್ದಾಗಿನ ಸುದ್ದಿಯನ್ನು ಯಾರಾದರೂ ಹಿರಿಯರು ನೆನಪಿಸಿ ಹೇಳಿದರೆ ಇಂದಿಗೂ ಒಂದುಬಗೆಯ ಸಂತೋಷ ನಮಗಾಗುತ್ತದೆ. ಅಲ್ಲವೇ?… ಇನ್ನು ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ನಾವು ಕಥೆ ಹೇಳಬೇಕು. ಅವರು ಕೇಳುವಂತ ಕಥೆಗಳನ್ನು ನಾವು ಓದಬೇಕು.
ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯ ಪುಸ್ತಕಗಳು ಸಾಕಷ್ಟಿವೆ. ಈ ಕುರಿತು ನಾನಿಂದು ಪರಿಚಯ ಮಾಡಲು ಹೊರಟಿದ್ದು ನಮ್ಮ ತಾಲ್ಲೂಕಿನ ಹೆಮ್ಮೆಯ ಮಕ್ಕಳ ಕವಿ
ಶ್ರೀ ತಮ್ಮಣ್ಣ ಬೀಗಾರ ಅವರ ಕೃತಿಗಳನ್ನು.
ಕೃತಿ : ಹಸಿರೂರಿನ ಹುಡುಗ.
ಲೇಖಕರು : ತಮ್ಮಣ್ಣ ಬೀಗಾರ
ಬಂಡಾಯ ಪ್ರಕಾಶನ ಹೊನ್ನಾವರ.
ಮುದ್ರಣದ ವರ್ಷ: ೨೦೧೦.
ಪುಟಗಳು:೬೬.
ಬೆಲೆ: ರೂ. ೪೦.
ಪರಿಚಯ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬೀಗಾರನವರಾದ ಸಾಹಿತಿ ಶ್ರೀ ತಮ್ಮಣ್ಣ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮಕ್ಕಳ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಇವರು ಉತ್ತಮ ಚಿತ್ರ ಕಲಾವಿದರೂ ಆಗಿದ್ದಾರೆ. ಇದುವರೆಗೂ ಮಕ್ಕಳಿಗಾಗಿ ಕಥೆಗಳು, ಕವನಗಳು, ಶಿಶುಪ್ರಾಸ, ಲಲಿತ ಬರಹ, ಕಾದಂಬರಿ ಮುಂತಾದ ೩೦ ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಸುಧೀರ್ಘ ವರ್ಷಗಳ ಕಾಲ ಮಲೆನಾಡಿನ ಸುಂದರ ಹಸಿರಿನ ಪರಿಸರದಲ್ಲಿ ಮಕ್ಕಳೊಂದಿಗೆ ಗುರುವಾಗಿ ಬೆರೆತು ಅವರ ಮನ ಅರಿತು ಬರೆದ ಶ್ರೀ ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಎನ್ನುವ ಮಕ್ಕಳ ಕಾದಂಬರಿಗೆ ೨೦೨೨ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.ಇನ್ನೂ ಅನೇಕ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಇವರ ಸಂದರ್ಶನಗಳು ಆಕಾಶವಾಣಿ ಹಾಗೂ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಿದೆ.

ಇದೊಂದು ೧೫ ಕಥೆಗಳ ಪುಟ್ಟ ಮಕ್ಕಳ ಕಥಾ ಸಂಕಲನ. ಇದಕ್ಕೆ ಖ್ಯಾತ ಸಾಹಿತಿ ವಿಷ್ಣು ನಾಯ್ಕ ಅವರ ಮುನ್ನುಡಿ ಇದೆ. ಸುಮಾರು ಆರರಿಂದ ಹತ್ತರ ವಯೋಮಾನದ ಮಕ್ಕಳಿಗೆ ಇಲ್ಲಿನ ಕಥೆಗಳು ಹೆಚ್ಚು ಉಪಯುಕ್ತವೆನ್ನ ಬಹುದು. ಮಕ್ಕಳಿಗೆ ಹಿರಿಯರು ಮರ ಹತ್ತಬಾರದು, ಈಜಲು ಹೋಗ ಬಾರದು, ಗುಡ್ಡ ಬೆಟ್ಟದಲ್ಲಿ ಅಲೆಯಬಾರದು ಇತ್ಯಾದಿ ಬುದ್ಧಿ ಹೇಳುತ್ತಿದ್ದರು. ಆದರೆ ಇಲ್ಲಿ ಲೇಖಕರು ಅಂಥ ಭಾವವನ್ನು ಮೀರಿ ಮಕ್ಕಳಿಗೆ ಒಂದು ಆರೋಗ್ಯ ಪೂರ್ಣ ತಿಳುವಳಿಕೆ ಹೇಳುವುದು ಹಿರಿಮೆಯೆನಿಸುತ್ತದೆ. ಇದು ಮಕ್ಕಳ ಜ್ಞಾನವನ್ನು ಭಾವ ಲೋಕವನ್ನು ವಿಸ್ತಾರ ಗೊಳಿಸುತ್ತದೆ. ಅಲ್ಲದೇ ಕಥೆಗಳೊಳಗೆ ಅಲ್ಲಲ್ಲಿ ಹಿಡಿದಿಟ್ಟ ವೈಜ್ಞಾನಿಕ- ವೈಚಾರಿಕ ಅಂಶಗಳನ್ನೂ ಕೂಡಾ ಅಲ್ಲಗಳೆಯುವಂತಿಲ್ಲ. ‘ಪ್ರೀತಿಯ ಲೋಕ- ಜೇನಿನ ಪಾಕ’ ಎನ್ನುತ್ತಾ ಬಾಲ್ಯದ ಸಂಗತಿಗಳನ್ನು ಬಿಚ್ಚಿಡುವ ಇವರ ಬರಹಗಳು ಮಕ್ಕಳನ್ನು ಓದುವಿಕೆಗೆ ಸೆಳೆಯುತ್ತವೆ.
ಒಳ್ಳೆಯ ಕಥೆಗಳ ಮೂಲಕ ಎಳೆಯರಲ್ಲಿ ನಾವು ಗುಣಾತ್ಮಕ ಅಂಶಗಳನ್ನು ಬಿತ್ತಲು ಸಾಧ್ಯವಿದೆ. ಅವರನ್ನು ಇಂದಿನ ಟಿವಿ ಮೊಬೈಲ್ ನಿಂದ ದೂರವಿಟ್ಟು ಓದುವ ಹವ್ಯಾಸವನ್ನು ಬೆಳೆಸ ಬಹುದಾಗಿದೆ.
ಈ ಕಥೆಯನ್ನು ನೋಡಿ…
ಚಳಿಗಾಲದ ಮಂಜಿನ ಹನಿಯ ಎಳೆಬಿಸಿಲ ಮುಂಜಾನೆಯಲ್ಲಿ ಶಾಲೆಗೆ ಹೊರಟಿದ್ದ ಪುಟ್ಟು ಮತ್ತವನ ಗೆಳೆಯ ತಿಮ್ಮನಿಗೆ ದೊಡ್ಡ ಜೇಡನ ಬಲೆಯೊಂದು ಕಂಡಿತ್ತು. ನೀರ ಹನಿ ಅಂಟಿ ಕೊಂಡು ಹೊಳೆಯುತ್ತಿದ್ದ ಅದರ ಮೇಲೆ ಕುಳಿತ ದಪ್ಪನೆಯ ಜೇಡ! .
ಅಷ್ಟರಲ್ಲಿ ಪುಟ್ಟ ಕಾಡುಗುಬ್ಬಿಯೊಂದು ಹಾರಿ ಬಂದು ಬಲೆಯಲ್ಲಿ ಸಿಕ್ಕಿ ಬಿದ್ದಿತ್ತು. ಅಂಟಿನ ಬಲೆ ಅದರ ರೆಕ್ಕೆಗೆ ಸಿಕ್ಕಿ ಹಾರುವ ರೆಕ್ಕೆಯನ್ನು ಕಟ್ಟಿ ಹಾಕಿತ್ತು. ಮಕ್ಕಳು ಜೇಡರ ಬಲೆಯ ದಾರವನ್ನು ಕೋಲಿನಿಂದ ತುಂಡು ಮಾಡಿ ಅದನ್ನು ಬಿಡಿಸಿದಾಗ ಅದು ‘ಚಿಂವ್ ಚಿಂವ್’ ಎಂದು ಹಾರಿ ಹೋಯಿತು. ಇದು ಅವರು ಬರೆದ “ಜೇಡನ ಬಲೆಯಲ್ಲಿ.” ಎಂಬ ಕಥೆಯ ಅಂಶವಾದರೂ ಅದನ್ನು ಅವರು ಪ್ರಸ್ತುತ ಪಡಿಸಿದ ರೀತಿ ವಿಶೇಷವೆನಿಸುತ್ತದೆ.
ಬಾಳೆ ತೋಟಕ್ಕೆ -ಗದ್ದೆಗೆ ಬರುವ ಕಾಡು ಹಂದಿಯನ್ನು ಓಡಿಸಲು ಮಾಳದ ಮನೆಯಲ್ಲಿ ಮಲಗುವ ಅಪ್ಪಯ್ಯ ನೊಂದಿಗೆ ಹೋದ ಮಕ್ಕಳ ಅನುಭವದ ‘ನಕ್ಷತ್ರ ಬಿತ್ತು’ ಎಂಬ ಕಥೆಯ ಜೊತೆಗೆ ಅಲ್ಲಿ ಕಂಡ ಹಾವಿನ ಬಗ್ಗೆಯೇ ಮತ್ತೊಂದು ಪುಟ್ಟ ಉಪಕಥೆ ಕೂಡಾ ಚೆನ್ನಾಗಿದೆ. ರಜೆಯಲ್ಲಿ ದನ ಮೇಯಿಸಲೆಂದು ಕಾಡಿಗೆ ಹೋಗುವ ಮಕ್ಕಳು ಮರದ ಕೊಂಬೆ ಹಾಗೂ ಟಿಸಿಲಿನ ಬಳ್ಳಿಯಲ್ಲಿ ಜೋತಾಡುವುದು, ಏಕೋಪಾಧ್ಯಾಯರ ಶಾಲೆಯಲ್ಲಿ ಓದುವ ಮಕ್ಕಳು ವನ ಭೋಜನಕ್ಕೆ ಹೋಗುವುದು. ಹಳ್ಳದಲ್ಲಿ ಬೆಳ್ಳಕ್ಕಿಯನ್ನು ಹಿಡಿಯುವುದು. ಮುಂತಾದ ಚೆಂದದ ಪ್ರಸಂಗಗಳ ಕಥೆಗಳಿವೆ.
ಪುಟ್ಟು ಅಜ್ಜಿಯ ಮನೆಗೆ ಹೋದಾಗ ಈಜುವುದು, ಅಲ್ಲಿ ತಿಂದ ‘ಕೆಂಪು ಕುಂಡೆ ಮಾವಿನ ಹಣ್ಣಿನ’ ಬಗ್ಗೆ ಕಥೆ, ಚವತಿ ಹಬ್ಬದ ಗಣಪನಿಗೆ ಮಂಟಪ ಕಟ್ಟುವುದು ಹೀಗೆ ಇಲ್ಲಿರುವ ಬಗೆ ಬಗೆಯ ಕಥೆಗಳು ಮಕ್ಕಳಿಗೆ ಇಷ್ಟವಾಗುತ್ತವೆ.
ಇನ್ನೊಂದು’ ಜಿಂಕೆಮರಿ’ ಎಂಬ ಮಕ್ಕಳ ಕಥಾ ಸಂಕಲನದಲ್ಲಿ ೧೫ ಕಥೆಗಳಿವೆ. ರಾಮಪ್ಪ ಕಾಡಿಗೆ ಹೋಗುವುದು ಪ್ರಾಣಿಗಳ ಬೇಟೆಗೆ ಎಂದು ಶಿವೂಗೆ ಗೊತ್ತು. ಆತ ಪುಟ್ಟ ಹಂದಿಮರಿ ತಂದು ರಾತ್ರಿ ಬೇಯಿಸಿ ತಿಂದು ಬಿಟ್ಟ ಎನ್ನುವ ಸುದ್ದಿ ಕೇಳಿ ಶಿವು ತುಂಬಾ ನೊಂದುಕೊಂಡಿದ್ದ. ಅಂದು ಆತ ತಂದ ಪುಟ್ಟ ‘ಜಿಂಕೆಮರಿ’ ಯನ್ನೂ ಕೂಡ ಅವರು ಸಾಯಿಸುತ್ತಾರೆ. ಎನ್ನುವ ವಿಷಯವೇ ಶಿವೂಗೆ ಆತಂಕ ತಂದಿತ್ತು. ಹಾಗಾದರೆ ಆ ಜಿಂಕೆ ಮರಿಯನ್ನು ಉಳಿಸಲು ಅವನೇನು ಮಾಡಿದ?…
ಇಷ್ಟು ಸಂಗತಿಯನ್ನು ಅವರು ಬರೆದ ರೀತಿ ಬಲು ಸೊಗಸಾಗಿದೆ. ಜೊತೆಗೆ ಎಲ್ಲಾ ಕಥೆಗಳಿಗೂ ಪೂರಕವಾಗಿ ಅವರೇ ಚಿತ್ರ ರಚಿಸಿದ್ದಾರೆ. ಅಜ್ಜನೊಬ್ಬ ತನ್ನ ಬಾಲ್ಯದ ಹಿನ್ನೋಟವನ್ನು ಮೆಲುಕು ಹಾಕುತ್ತಾ, ಅಂತಹ ಅನುಭವಗಳನ್ನು ಪುಟ್ಟ ಮಕ್ಕಳಿಗೆ ಕಥೆಯಾಗಿ ಹೇಳುವ ೧೪ ಪ್ರಸಂಗಗಳ ಪುಸ್ತಕ ‘ಪುಟ್ಟಜ್ಜನ ನೆನಪಿನ ಡೈರಿ.’ ಎಂಬ ಇನ್ನೊಂದು ಪ್ರಬಂಧ ಮಾದರಿಯ ಪುಸ್ತಕವಿದೆ.
ಅವರು ‘ಚಿಂವ್ ಚಿಂವ್’ ಎನ್ನುವ ಕವನ ಸಂಕಲನದಲ್ಲಿ ಮಕ್ಕಳಿಗಾಗಿ ೩೨ ಹಸಿರು ಪದ್ಯಗಳನ್ನು ಪ್ರೀತಿಯಿಂದ ರಚಿಸಿದ್ದಾರೆ. ಒಂದೆರಡು ಕವನ ನೋಡಿ….
ರೊಟ್ಟಿ :
ರೊಟ್ಟಿ ಮಾಡು ರೊಟ್ಟಿ
ಹಿಟ್ಟು ನೀನು ತಟ್ಟಿ
ರೊಟ್ಟಿ ತಿಂದು ನಾನು
ಆಗ ಬೇಕು ಗಟ್ಟಿ.

ಪುಟ್ಟ ಹಕ್ಕಿ ಮತ್ತು ಕಾಗೆ :
ಪುಟ್ಟ ಹಕ್ಕಿ ಹಣ್ಣ ಕಂಡು
ಪುಟ್ಟ ರೆಕ್ಕೆ ಬಡಿದು ಬಡಿದು
ಕುಕ್ಕಿ ಹಣ್ಣ ತಿನ್ನುತ್ತಿತ್ತು
ಕಿಚ್ ಕಿಚ್ ಕಿಚಕ್
ದುಷ್ಟ ಕಾಗೆ ಹಾರಿ ಬಂದು
ಪುಟ್ಟ ಹಕ್ಕಿ ಮರಿಯ ಒದ್ದು
ಕೆಡಗಿ ಕುಕ್ಕಿ ತಿನ್ನಲೆಂದು
ಕರ್ ಕರ್ ಕಚಕ್.
ಇನ್ನು ಮಲೆನಾಡಿನ ಕಾಡಿನಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳ ಲೋಕದ ವಿಸ್ಮಯಗಳ ‘ಬಾವಲಿ ಗುಹೆ’ ‘ಫ್ರಾಗಿ ಮತ್ತು ಗೆಳೆಯರು’ ಎಂಬ ಮಕ್ಕಳ ಕಾದಂಬರಿಗಳನ್ನೂ,
‘ಕೋಲ್ಜೇನು’ ಎನ್ನುವ ಮಕ್ಕಳ ಬಾಲ್ಯದ ಲಹರಿಯ ಪ್ರಬಂಧ ‘ಬಾಮರಿ ಚಿತ್ರ ಬರಿ’ ಎಂಬ ಚಿತ್ರ ಪುಸ್ತಕ, ಹಾಡಿನ ಹಕ್ಕಿ, ಖುಷಿಯ ಬೀಜ, ಸೊನ್ನೆ ರಾಶಿ ಸೊನ್ನೆ, ಮಿಂಚಿನ ಮರಿ, ‘ಪುಟಾಣಿ ಪುಡಿಕೆ’ ಎಂಬ ಕವನ ಸಂಕಲನವನ್ನು ರಚಿಸಿದ್ದಾರೆ.
ಗೆಳೆಯರು, ಕಾಡು- ನಾಡು ಶಾಲೆ -ಪರಿಸರ , ಉಂಡೆ-ತಿಂಡಿ , ಪ್ರಾಣಿ- ಪಕ್ಷಿ ಇವೆಲ್ಲಾ ಇವರ ಕಥೆಗಳಿಗೆ ಜೀವಾಳ. ಇವರ ಕಥೆಗಳಲ್ಲಿ ಬಾಲ್ಯದ ಮುಗ್ಧ ಸಂವೇದನೆಯ ಆಪ್ತ ಸ್ಪರ್ಶವಿದೆ. ತಮ್ಮ ಅನುಭವಕ್ಕೆ ದಕ್ಕಿದ ಎಷ್ಟೋ ಪ್ರಸಂಗಗಳನ್ನು ಸೃಜನಶೀಲ ಮನಸ್ಸಿನ ಇವರು ಮಕ್ಕಳ ಕುತೂಹಲ ಕೆರಳುವಂತೆ ಅವರ ಕಲ್ಪನೆಯನ್ನು ಅರಳಿಸುವ ದೃಷ್ಟಿಯಲ್ಲಿ ನೋಡಿ ಬರೆದಿದ್ದಾರೆ. ಇಲ್ಲಿ ಸರಳ ಸುಂದರವಾದ ಭಾವಕ್ಕೆ ತಕ್ಕ ಪದಗಳು ಚಿಕ್ಕ ಮಕ್ಕಳ ತಾಯಂದಿರಿಗೂ ಇಷ್ಟವಾಗುವಂತಿದೆ.
ಎಲ್ಲವೂ ವಿಭಿನ್ನ ಮಾದರಿಯವುಗಳಾಗಿದ್ದರಿಂದ ನನ್ನ ಸಂಗ್ರಹದಲ್ಲಿರುವ ಕೆಲವು ಕೃತಿಗಳನ್ನು ಪರಿಚಯಿಸಿದ್ದೇನೆ. ಹಿರಿಯರೂ ಬಾಲ್ಯಕ್ಕೆ ಮರಳಿ ಹೋಗುವ ಇಂತಹ ಪುಸ್ತಕಗಳನ್ನು ಎಲ್ಲರೂ ಓದುತ್ತಾ ಮಕ್ಕಳೊಂದಿಗೆ ಕುಳಿತು ಕೊಳ್ಳ ಬೇಕಾದ ಜರೂರು ಇಂದಿನ ದಿನಮಾನದಲ್ಲಿ ಬೇಕಿದೆ. ಇದರಿಂದ ದಿನದ ಬಹುಪಾಲು ದುಡಿಮೆಯೆಂದು ಹೊರಗೆ ಇರುವ ಹೆತ್ತವರು ಸ್ವಲ್ಪ ಹೊತ್ತಾದರೂ ಮಕ್ಕಳೊಂದಿಗೆ ಸಮಯ ಕಳೆಯಲು ಇದು ಸಹಕಾರಿಯಾಗಿದೆ. ಮುಂದಿನ ಎಳೆಯರಿಗಾಗಿ ಇನ್ನಷ್ಟು ಹೊಸ ಕೃತಿಗಳು ಇವರಿಂದ ಮೂಡಿ ಬರಲಿ.
ಶ್ರೀಯುತರು ದಿನಾಂಕ. ೨೩.೨.೨೦೨೫ ರಂದು ತಮ್ಮ ಹುಟ್ಟೂರು ಯಲ್ಲಾಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶಿಶುಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎನ್ನುವುದು ಸಂತೋಷದ ಸಂಗತಿ. ಅವರಿಗೆ ಈ ಮೂಲಕ ನನ್ನ ಗೌರವ ನಮನಗಳು.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು ಕೃತಿ ಪರಿಚಯ …
- ಮಾಲತಿ ರಾಮಕೃಷ್ಣ ಭಟ್
