ಅನ್ನದ ಜೊತೆ ಸೆಂಡಿಗೆ, ಮೆಣಸಿನಕಾಯಿ ಬಾಳಕ ತಿಂದಿರಬಹುದು. ಆದರೆ ಬೆಂಡೆ ಕಾಯಿಯನ್ನು ಊಟದಲ್ಲಿ ಜೊತೆಗೆ ಸೆಂಡಿಗೆ ರೀತಿ ಬದಿಯಲ್ಲಿ ಇಟ್ಟುಕೊಂಡು ತಿಂದಿದ್ದೀರಾ ? ತಿಂದಿಲ್ಲವೆಂದರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹೇಳಿಕೊಟ್ಟ ಬೆಂಡೆಕಾಯಿ ಕುರುಕುರೆಯನ್ನು ತಪ್ಪದೆ ಮನೆಯಲ್ಲಿ ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು :
ಬೆಂಡೆಕಾಯಿ – ಬೇಕಾದಷ್ಟು
ಮೆಣಸಿನ ಪುಡಿ – ಸ್ವಲ್ಪ
ಅರಶಿನ ಪುಡಿ – ಸ್ವಲ್ಪ
ಕಾರ್ನ್ ಫ್ಲೋರ್ – ಒಂದು ಚಮಚ
ಅಕ್ಕಿ ಹಿಟ್ಟು – ಒಂದು ಚಮಚ
ಮಾಡುವ ಸಾಮಗ್ರಿಗಳು :
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ಒರೆಸಿ, ನೀರಿನಂಶ ಹೋಗುವಂತೆ ನೋಡಿಕೊಳ್ಳಿ. ಈಗ ಸಣ್ಣಗೆ ಉದ್ದದ್ದ ಹೆಚ್ಚಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಉಪ್ಪು, ಅಚ್ಚ ಮೆಣಸಿನ ಪುಡಿ, ಅರಶಿನ, ಒಂದೆರಡು ಸ್ಪೂನ್ ಕಾರ್ನ್ ಫ್ಲೋರ್, ಒಂದೆರಡು ಸ್ಪೂನ್ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟು ಕೊಳ್ಳಿ. ನೀರು ಬೇರೆಸುವುದು ಬೇಡ.
ಒಂದು ಬಾಣಲಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಮಿಕ್ಸ್ ಮಾಡಿದ ಬೆಂಡೆಕಾಯಿ ಹಾಕಿ ಕೆಂಪಗಾಗುವ ತನಕ ಫ್ರೈ ಮಾಡಿ. ತಣ್ಣಗಾದ ನಂತರ ಗಾಳಿ ಹೋಗದ ಡಬ್ಬಿಯಲ್ಲಿ ಹಾಕಿಟ್ಟರೆ ಬೇಕಾದಾಗ ಉಪಯೋಗಿಸಬಹುದು.
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು
