ನಿಮ್ಮ ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದ ಬಗೆಗಿನ ಆತಂಕಗಳು, ಮಕ್ಕಳ ಹದಿಹರಯದ ತಲ್ಲಣಗಳು ಇವುಗಳ ಬಗ್ಗೆ ಸಮಗ್ರ ಮಾಹಿತಿ, ಮಾರ್ಗದರ್ಶನ ನಾಡಿನ ಹಿರಿಯ ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರು ಹಾಗೂ ವೃತ್ತಿಪರ ಆಪ್ತಸಮಾಲೋಚಕರ ಜೊತೆ ಮಾತಾಡಿದ ಅನುಭವಗಳು…
ಮಕ್ಕಳಿಗೆ ಶಿಸ್ತು ಕಲಿಸುವ ನೆಪದಲ್ಲಿ ಬೈಯುವುದು, ಹೊಡೆಯುವುದು, ಅವರಿವರಿಗೆ ಹೊಲಿಸಿಕೊಂಡು ಮಾತನಾಡುವುದು, ಕಮ್ಮಿ ಅಂಕ ಬಂದಾಗ ಗುರುಗಳಿಗೆ ಇನ್ನೂ ನಾಲ್ಕು ಪೆಟ್ಟು ಕೊಟ್ಟು ಓದಿಸಿ ಎನ್ನುವುದು ಒಳ್ಳೆಯ ಪಾಲಕತ್ವವೇ?
ಅಥವಾ
ಮಕ್ಕಳಿಗೆ ಬೈಯದೆ, ಪ್ರೀತಿಸಿ, ಮುದ್ದಿಸುವುದು. ಅಂಕ ಕಮ್ಮಿ ಬಂದಾಗ ಬೈಯದೆ ನಗುತ್ತಾ…ಮುಂದಿನ ಬಾರಿ ಸರಿ ಮಾಡು ಎಂದು ಹೇಳುವುದು. ಮಗುವಿನ ಭಾವನೆಗೆ ನೋವಾಗದಂತೆ ನಡೆದುಕೊಳ್ಳುವುದು. ಇದು ಒಳ್ಳೆಯ ಪಾಲಕತ್ವವೇ?

ಈ ಎರಡರಲ್ಲಿ ಯಾವುದು ಒಳ್ಳೆಯ ಪಾಲಕತ್ವ. ಮಕ್ಕಳ ಪಾಲನೆಯ ಬಗ್ಗೆ ಸಾಕಷ್ಟು ಗೊಂದಲಗಳು ಎಲ್ಲರಿಗೂ ಇರುವಂತೆ ನನಗೂ ಇತ್ತು. ಇದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳುವುದು ಎನ್ನುವುದಕ್ಕೆ ನಾನು ಮೊರೆ ಹೋಗಿದ್ದು ಗೂಗಲಪ್ಪನಿಗೆ… ಆದರೆ ನೇರವಾಗಿ, ದಿಟ್ಟವಾಗಿ ಮಾತಾಡುವಂತ ವ್ಯಕ್ತಿಗಳು ಬೇಕಿತ್ತು. ಆ ಸಂದರ್ಭದಲ್ಲಿ ನನಗೆ ಸಿಕ್ಕಿದ್ದೆ ಕನಕರಾಜು ಅವರ ಸಮರಸ ವೆಂಚರ್ಸ್ ಆಯೋಜನೆಯ “ನಮ್ಮ ಮಕ್ಕಳು, ನಮ್ಮ ಭವಿಷ್ಯ” ಕಾರ್ಯಾಗಾರ.
ಮೂರು ಜನ ಖ್ಯಾತ ಮನಃಶಾಸ್ತ್ರಜ್ಞರು ಹಾಗೂ ಆಪ್ತ ಸಮಾಲೋಚಕರ ಜೊತೆ ಮುಕ್ತವಾಗಿ ಮಾತಾಡುವ ಅವಕಾಶ ಸಿಕ್ಕಿತು.

ಖ್ಯಾತ ಮನಃಶಾಸ್ತ್ರಜ್ಞರಾದ ಡಾ. ವಿರೂಪಾಕ್ಷ ದೇವರಮನಿ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಮಕ್ಕಳ ಹಾಗೂ ಪಾಲಕರ ನಡುವಿನ ಬಾಂಧವ್ಯ ಹೇಗಿರಬೇಕು. ಮಕ್ಕಳ ಸೂಕ್ಷ್ಮ ಮನಸ್ಸುಗಳು ಹೇಗಿರುತ್ತೆ. ಮಕ್ಕಳ ಒಳನೋಟವನ್ನು ಚಿತ್ರದ ಮೂಲಕ ವಿವರಿಸುವಾಗ ಮನೆಯಲ್ಲಿ ಬಿಟ್ಟು ಬಂದಿದ್ದ ನನ್ನ ಮಕ್ಕಳು ಕಣ್ಮುಂದೆ ಬಂದರು. ಅವರ ಮಾತು ಅಷ್ಟು ಆಪ್ತವಾಗಿತ್ತು. ಅವರು ಬರೆದ ‘ಮಕ್ಕಳತ್ರ ಮಾತಾಡಿ ಪ್ಲೀಸ್’ ಕೃತಿಯೂ ಈಗಾಗಲೇ ೧೩ನೆಯ ಮುದ್ರಣವನ್ನು ಕಂಡಿದೆ. ಸಾಧ್ಯವಾದರೆ ದಯವಿಟ್ಟು ಓದಿ..

ವೃತ್ತಿಪರ ಆಪ್ತ ಸಮಾಲೋಚಕರಾದ ಪ್ರೊ.ಶಂಕರ್ ಬೆಳ್ಳೂರು ಅವರು ಮಾತಾಡುವಾಗ ಹೇಳಿದ ಮಾತು ಈಗಲೂ ನೆನಪಿದೆ. ನಿಮ್ಮ ಮಕ್ಕಳ ಸಾಧನೆಗೆ KASH ನ್ನು ಫಾಲೋ ಮಾಡಿ ಎಂದರು.
KASH ಅಂದರೆ :
K- Knowledge (ಜ್ಞಾನ),
A – attitude (ನಡವಳಿಕೆ)
S – skill ( ಕೌಶಲ್ಯ )
H – habits ( ಅಭ್ಯಾಸಗಳು)
ಮಕ್ಕಳಲ್ಲಿ ಮುಖ್ಯವಾಗುವುದು ಅಂಕಗಳಲ್ಲ. ಜ್ಞಾನ, ಉತ್ತಮ ನಡವಳಿಕೆ, ಪ್ರಸ್ತುತ ತಂತ್ರಜ್ಞಾನದಲ್ಲಿನ ಕೌಶಲ್ಯತೆ ಮತ್ತು ಒಳ್ಳೆಯ ಅಭ್ಯಾಸಗಳು. ಇವುಗಳಿದ್ದರೇ ಯಾವುದೇ ಮಕ್ಕಳಾದರೂ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎನ್ನುವ ಆತ್ಮವಿಶ್ವಾಸವನ್ನು ಪಾಲಕರಲ್ಲಿ ತುಂಬಿದರು.

ಇನ್ನೂ ಡಾ.ಗುರುರಾಜ್ ಕರ್ಜಗಿ ಅವರ ಮಾತುಗಳು ಎಲ್ಲರ ಗಮನವನ್ನು ಹಿಡಿದಿಟ್ಟಿತು. ಇಂದಿನ ದಿನಗಳಲ್ಲಿ ಕೂಡು ಕುಟುಂಬಗಳಿಲ್ಲ. ಮಕ್ಕಳಲ್ಲಿ ಒಂಟಿತನ ಕಾಡುತಿದೆ. ಮಕ್ಕಳಲ್ಲಿ ಕೌಟುಂಬಿಕ ವಾತಾವರಣ ಕಲ್ಪಿಸುವುದರ ಜೊತೆಗೆ ಸ್ವಾವಲಂಬಿಗಳನ್ನಾಗಿ ಮಾಡಿ. ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಆಪತ್ತು… ಎನ್ನುವ ಎಚ್ಚರಿಕೆ ನೀಡುವ ಮೂಲಕ ಸಾಕಷ್ಟು ಉದಾಹರಣೆಗಳನ್ನು, ಪ್ರಯೋಗಗಳನ್ನು ಮಾಡಿ ತೋರಿಸಿದರು.
ಕಾರ್ಯಕ್ರಮ ಮುಗಿದ ಮೇಲೂ ಮನಃ ಶಾಸ್ತ್ರಜ್ಞರು ಹಾಗೂ ಆಪ್ತ ಸಮಾಲೋಚಕರನ್ನು ಬಿಟ್ಟು ಬಿಡದೆ ಸುತ್ತುವರೆದಿದ್ದ ಪಾಲಕರನ್ನು ನೋಡಿದಾಗ ಅನಿಸಿದ್ದು ‘ಮಕ್ಕಳನ್ನು ಹಡೆಯುವುದು ಸುಲಭ… ಆದರೆ ಇಂದಿನ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯ ಕಲ್ಪಿಸುವುದು ದೊಡ್ಡ ಸವಾಲು’ … ಆ ನೊಂದು, ಬೆಂದ ಮನಸ್ಸುಗಳಿಗೆ ಔಷಧಿ ನೀಡುವ ಕೆಲಸವನ್ನು ಡಾ. ಗುರುರಾಜ್ ಕರ್ಜಗಿ ಅವರು , ಡಾ. ವಿರೂಪಾಕ್ಷ ದೇವರಮನಿ ಅವರು ಹಾಗೂ ಶಂಕರ್ ಬೆಳ್ಳೂರು ಅವರು ಮಾಡುತ್ತಿರುವುದು ಮೆಚ್ಚುವಂತದ್ದು.
ಇಂದಿನ ಒತ್ತಡದ ಬದುಕಿನಲ್ಲಿ ಒಡೆದು ಹೋಗುತ್ತಿರುವ ಕುಟುಂಬಗಳ ಮಧ್ಯೆ ಸೇತುವೆಯಂತೆ ನಿಲ್ಲುವ, ಮಾರ್ಗದರ್ಶನ ನೀಡುವ ಗುರುಗಳು, ಮನಃಶಾಸ್ತ್ರಜ್ಞರು, ಆಪ್ತಸಮಾಲೋಚಕರ ಅತ್ಯವಶ್ಯಕತೆ ಇದೆ. ಆ ಕೆಲಸವನ್ನು ಈ ಮೂವರು ಅತ್ಯಂತ ಶ್ರದ್ದೆಯಿಂದ ಜನರ ಮನಸ್ಸಿಗೆ ನಾಟುವಂತೆ ತಿಳಿಹೇಳುತ್ತಿದ್ದಾರೆ ಅವರಿಗೆ ಹೃತ್ಪೂರ್ವಕ ವಂದನೆಗಳು.
ಪಾಲಕರ ಮನಸ್ಸಿಗೆ ಕಿವಿಗೊಡುವ ಮುಕ್ತ ಕಾರ್ಯಕ್ರಮ ಇದಾಗಿತ್ತು . ಕಾರ್ಯಕ್ರಮ ಮುಗಿದಾಗ ಎಲ್ಲ ಪಾಲಕರಲ್ಲಿ ದುಗುಡಗಳು ಕಮ್ಮಿಯಾಗಿ, ಶಾಂತವಾಗಿ ಮನೆಯತ್ತ ನಡೆದರು. ಕಾಂತರಾಜು ಅವರ ಸಮರಸ ವೆಂಚರ್ಸ್ ಮೂಲಕ ಒಂದು ದಿನ ಕಾರ್ಯಾಗಾರವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದು, ಸಂತೋಷ ಜೊತೆಗೆ ಮನಸ್ಸಿಗೆ ನೆಮ್ಮದಿ ನೀಡಿತು. ಅವರಿಗೆ ಹಾಗೂ ಅವರ ತಂಡಕ್ಕೆ ಎಂದು ಆಕೃತಿಕನ್ನಡದಿಂದ ಶುಭ ಹಾರೈಸುತ್ತೇನೆ …
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಪತ್ರಿಕೆಯ ಸಂಪಾದಕಿ
