ಮಾನಸ….ಇದು ಮನಸಿನ ಮಾತು (ಭಾಗ-೪೭)

ಮಹಾಭಾರತದಲ್ಲಿ ಅಲ್ಲಿ ಬರುವ ಪಾತ್ರಗಳನ್ನು ನೋಡಿದಾಗ ನಮ್ಮ ಜೀವನಕ್ಕೆ ಬಹಳ ಹತ್ತಿರದ ಭಾವನಾತ್ಮಕ ಸಂಬಂಧವಿದೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮಹಾಭಾರತ ಮನಸು ಭಾರದತ್ತ?’   ತಪ್ಪದೆ ಮುಂದೆ ಓದಿ…

ಮಹಾಭಾರತದಲ್ಲಿ ಅಲ್ಲಿ ಬರುವ ಪಾತ್ರಗಳನ್ನು ನೋಡಿದಾಗ ನಮ್ಮ ಜೀವನಕ್ಕೆ ಬಹಳ ಹತ್ತಿರದ ಭಾವನಾತ್ಮಕ ಸಂಬಂಧವಿದೆ. ಎಷ್ಟು ಪಾತ್ರಗಳು ಇದೆಯೋ ಅಷ್ಟೂ ಮನಸಿನ ಭಾವಗಳು, ಭಾವನೆಗಳು, ಮನಸಿನ ಸಂಘರ್ಷ, ಸಂತಸ, ಸಂತಾಪ, ಮೋಸ ವಂಚನೆ ಎಲ್ಲವೂ ಉಂಟು. ಕುರುಕ್ಷೇತ್ರದ ಯುದ್ಧದ ನಂತರ ಒಬ್ಬರಿಗೊಬ್ಬರು ದೂಷಣೆ ಮಾಡುತ್ತಾ ನಿನ್ನಿಂದಲೇ ಯುದ್ಧ ಮಾಡಬೇಕಾಯಿತು ಎಂದು ದ್ರೌಪದಿಗೆ ಯುಧಿಷ್ಠಿರ ಹೇಳಿದಾಗ, ದ್ರೌಪದಿ ಅವನದೇ ತಪ್ಪು ಅವನೇ ಕಾರಣ ಎಂದಳು. ಪಗಡೆ ಪಂದ್ಯಕ್ಕೆ ಒಪ್ಪಿದ್ದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದಳು. ನಿನ್ನಿಂದಾಗಿಯೇ ನಾನು ವೇಶ್ಯೆ ಅನ್ನಿಸಿಕೊಳ್ಳಬೇಕಾಯಿತು, ಅವಮಾನ ಹೊಂದಬೇಕಾಯಿತು, ಸಭೆಯಲ್ಲಿ ವಸ್ತ್ರಾಪಹರಣ ಆಯಿತು ಎಂದು.

ಬಲರಾಮನೂ ಸಹ ಶ್ರೀ ಕೃಷ್ಣನಿಗೆ ಅಧರ್ಮವೆಸಗಿದನೆಂದು ದೂಶಿಸಿದನು. ಅರ್ಜುನನಿಗೆ ಗಂಗೆಯೂ ದೂಷಿಸಿದಳು. ಆದರೆ ಎಲ್ಲರೂ ಅವರವರ ಪಾತ್ರಾನುಸಾರ ಸರಿ ಎಂದು ಸಮರ್ಥನೆ ನೀಡುತ್ತಾರೆ. ಯಾರೂ ತನ್ನದು ತಪ್ಪು ಎಂದು ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ಸರಿ ಎನಿಸಿದರೆ ಮತ್ತೊಮ್ಮೆ ತಪ್ಪು ಅನಿಸುತ್ತದೆ. ಹೀಗೆ ಅವರಿಂದ, ಮತ್ತೊಬ್ಬರಿಂದ ನಮಗೆ ತಪ್ಪು ಅನಿಸಿದಾಗ, ಒಪ್ಪಿಕೊಳ್ಳದಿದ್ದಾಗ ಮಾನಸಿಕ ಯುದ್ಧ ಮಾಡಲೇ ಬೇಕಾಗುತ್ತದೆ. ಸಂಘರ್ಷ, ಸಂವೇದನೆ, ಸಂತಾಪ, ಸಂತಸ ಎಲ್ಲವೂ ಯುದ್ಧದ ರೀತಿ ಮನಸಿನಲ್ಲಿ ಹೋರಾಟ ಮಾಡುತ್ತಿರುತ್ತದೆ.

ಫೋಟೋ ಕೃಪೆ : google

ನಮ್ಮ ಮನಸು ಎಂದಿಗೂ ನಮ್ಮ ತಪ್ಪನ್ನು ಒಪ್ಪುವುದಿಲ್ಲ. ಬೇರೆಯವರು ತಪ್ಪನ್ನು ತೋರಿದಾಗ ಒಪ್ಪಿಕೊಳ್ಳುವ ಬದಲು ಸಮಜಾಯಿಸಿ ಹೇಳುತ್ತೇವೆ. ಇದು ಮನುಷ್ಯನ ಸ್ವಾಭಾವಿಕ ಗುಣ. ಇದೆಲ್ಲ ನೋಡುವಾಗ ನಮ್ಮ ಮನಸಿನ ದ್ವಂದ್ವ ಯುದ್ಧದಲ್ಲಿ ಇದೆಲ್ಲಾ ವಿಚಾರಗಳು ಮೂಡಿದಾಗ, ಏಳುವ ಪ್ರಶ್ನೆ ನಾನು ಮಾಡಿದ್ದು ಸರಿಯೋ? ತಪ್ಪೋ? ಎಂದು.

ಈ ದ್ವಂದ್ವ ಇರುವಾಗ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಸಮಯ ಮೀರಿರುತ್ತದೆ. ಎಷ್ಟೋ ಸಂಬಂಧಗಳು ಕಡಿದು ಹೋಗಿರುತ್ತದೆ. ಅನರ್ಥಕ್ಕೆ, ಅನುಮಾನಕ್ಕೆ ಕಾರಣವಾಗುತ್ತದೆ. ಅವಮಾನವನ್ನೂ ಸಹಿಸಬೇಕಾಗುತ್ತದೆ. ಆದರೂ ನಾವು ಸೋಲಲು ಒಪ್ಪುವುದಿಲ್ಲ, ಅದು ನಮ್ಮ ಅಹಂ ಅಷ್ಟೇ. ಇದೇ ಅಹಂ ಮನುಷ್ಯನನ್ನು ಕೆಟ್ಟ ಯೋಚನೆಗಳಿಗೆ ಎಣೆ ಮಾಡಿಕೊಡುತ್ತದೆ. ಇಲ್ಲಿ ಒಳ್ಳೆಯ ಗುಣ ಸ್ವಭಾವಗಳು ಮನಸಿಗೆ ಬಾರದಿದ್ದರೂ ಅದು ಸಮಯೋಚಿತ ಕಾರ್ಯ ನಿರ್ವಹಿಸಲು ಎಡೆ ಮಾಡಿಕೊಡುತ್ತದೆ. ನಮಗೆ ಸರಿ ಅನಿಸಿದ್ದು ಬೇರೆಯವರಿಗೆ ತಪ್ಪಾಗಿ ಕಾಣುತ್ತದೆ. ಹೀಗೆ ನಮ್ಮ ಜೀವನದಲ್ಲಿ ಮನಸಿನಲ್ಲಿ ಅನೇಕ ಭಾವನೆಗಳು ಮೂಡಿ ನಮ್ಮ ಯೋಚನಾ ಲಹರಿ ಅನೇಕ ವಿಷಯಗಳ ಮಂಥನಕ್ಕೆ ದಾರಿ ಮಾಡಿಕೊಡುತ್ತದೆ.

ಫೋಟೋ ಕೃಪೆ : google

ಎಲ್ಲಾ ವಿಷಯದಲ್ಲೂ ದ್ವಂದ್ವ ಇದ್ದೆ ಇರುತ್ತದೆ. ಆಯ್ಕೆ ಮಾಡುವುದು ಬುದ್ಧಿವಂತಿಕೆ. ಯಾರದೋ ಮಾತಿಗೆ ಕಟ್ಟು ಬಿದ್ದು ಜೀವನವನ್ನು ಗೊಂದಲ ಮಾಡಿಕೊಳ್ಳುವ ಬದಲು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರ ಜೀವನವೂ ಒಂದೊಂದು ರೀತಿ ಇರುತ್ತದೆ ಆದರೆ ತಮ್ಮ ಜೀವನದ ಆಯ್ಕೆ ಅವರವರದು. ಕರ್ಣ ತನ್ನ ಗೆಳೆಯ ದುರ್ಯೋಧನನ್ನು ಮೆಚ್ಚಿಸಲು ಒಳ್ಳೆಯದನ್ನು ಕೆಟ್ಟದೆಂದು ಭಾವಿಸಿ ತಾನೇ ಹತನಾದ. ಬಹುಷಃ ಋಣಕ್ಕೆ ಕಟ್ಟುಬಿದ್ದೋ, ಸ್ನೇಹದ ಋಣಕ್ಕೋ ಸ್ವಾರ್ಥಿ ಆದನು. ತನ್ನ ನಿರ್ಧಾರ ತಪ್ಪಾದರೂ ತನ್ನನ್ನು ಸಮರ್ಥಿಸಿಕೊಂಡನು.

ಧೃತಾರಾಷ್ಟ್ರ ಮಕ್ಕಳ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಯುದ್ಧದಲ್ಲಿ ಬಲಿ ಕೊಟ್ಟನು ನಂತರ ಪಶ್ಚಾತ್ತಪ ಪಟ್ಟನು. ಇದನ್ನೇ ಕುರುಡು ವ್ಯಾಮೋಹ ಅನ್ನುವುದು. ದ್ರೌಪದಿ ಯೂ ಸಹ ತನ್ನ ಅಣಕು ಸ್ವಭಾವದಿಂದ ಹಗೆತನಕ್ಕೆ ಕಾರಣಳಾದಳು. ಅತೀ ವ್ಯಾಮೋಹ, ಅತೀ ಶಿಸ್ತು, ಅತೀ ಪ್ರೀತಿ ಮನುಷ್ಯನನ್ನು ಬದಲಾಯಿಸಿ ಬಿಡುತ್ತದೆ. ಹಾಗಾಗಿ ಸಾಮಾನ್ಯವಾಗಿ ಚಿತ್ತ ಚಂಚಲವಿಲ್ಲದೆ ಇರಬೇಕಾದ ತಾಳ್ಮೆ ಮತ್ತು ಇತರ ಭಾವನೆಗಳನ್ನು ಸಮವಾಗಿ ತೆಗುದುಕೊಳ್ಳಬೇಕು.

ಯಾರದೋ ಮಾತಿಗೆ ಕಟ್ಟು ಬಿದ್ದು ಯಾರನ್ನೋ ಮೆಚ್ಚಿಸಲು ಕೆಲಸ ನಿರ್ವಹಿಸುವ ಬದಲು ನಮಗೆ ಸರಿ ಅನಿಸಿದ್ದು, ಮುಂದೆ ಎಂದೂ ಪಶ್ಚಾತ್ತಾಪ ಪಡದಂತೆ ನಡೆದರೆ ಅದಕ್ಕಿಂತ ದೊಡ್ಡ ಯುದ್ಧ ಮತ್ತೊಂದಿಲ್ಲ. ನಮ್ಮ ಮನಸಿಗೆ ತೋಚಿದ್ದೆಲ್ಲಾ ಮಾಡಲು ಹೋಗದೆ ಲಗಾಮು ಹಾಕಿಕೊಂಡರೆ ಯಾವ ಯುದ್ಧವೂ ನಡೆಯುವುದಿಲ್ಲ. ಸಮಚಿತ್ತ, ಸ್ಥಿತಪ್ರಜ್ಞವೇ ಜೀವನದ ಅತ್ಯಂತ ಕಠಿಣವಾದ ಮನಸು.


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW