‘ಕುದಿ ಎಸರು’ ಆತ್ಮಚರಿತ್ರೆ ಪರಿಚಯ : ಸುಜಾತಾ ರವೀಶ್

ಖ್ಯಾತ ಪತ್ರಕರ್ತೆ, ಲೇಖಕಿ ಡಾ. ವಿಜಯಾ ಅವರ ಆತ್ಮಚರಿತ್ರೆ ‘ಕುದಿ ಎಸರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಈ ಕೃತಿಯ ಕುರಿತು ಲೇಖಕಿ ಸುಜಾತಾ ರವೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಲೇಖಕಿ : ಕುದಿ ಎಸರು ಆತ್ಮಚರಿತ್ರೆ
ಲೇಖಕಿ : ಡಾ. ವಿಜಯಾ
ಪ್ರಥಮ ಮುದ್ರಣ : ೨೦೧೭
ಐದನೆಯ ಮುದ್ರಣ ಮಾರ್ಚ್ ೨೦೨೧
ಪ್ರಕಾಶಕರು : ನಾಕು ತಂತಿ ಪ್ರಕಾಶನ ಬೆಂಗಳೂರು

ಡಾ. ವಿಜಯಾ ಅವರ ಜನನ ಮಾರ್ಚ್ ೧೯೪೭ ರಲ್ಲಿ ದಾವಣಗೆರೆಯಲ್ಲಾಯಿತು. ಕನ್ನಡ ಎಂ. ಎ ಮತ್ತು ಶ್ರೀರಂಗರ ನಾಟಕಗಳ ಕುರಿತಾದ ಸಂಶೋಧನಾ ಪ್ರಬಂಧ ಪ್ರಬಂಧಕ್ಕೆ ಪಿ ಎಚ್ ಡಿ ಗಳಿಸಿದವರು. ಖ್ಯಾತ ಪತ್ರಕರ್ತೆ ಲೇಖಕಿಯಾಗಿ ಇವರು ಸಲ್ಲಿಸಿದ ಸಾಹಿತ್ಯ ಸೇವೆ ಗಮನಾರ್ಹ. ಪ್ರಬುದ್ಧ ಚಿಂತಕಿ ಹಾಗೂ ಸಮಾಜ ಪರ ಹೋರಾಟಗಳಲ್ಲಿ ಗುರುತಿಸಿಕೊಂಡ ಧೀಮಂತೆ. ೧೯೬೮ರಿಂದ ೧೯೯೯ ರವರೆಗಿನ ಅವಧಿಯಲ್ಲಿ ಕನ್ನಡದ ಖ್ಯಾತ ಪ್ರಜಾಮತ, ಮಲ್ಲಿಗೆ, ತುಷಾರ, ರೂಪತಾರ, ಉದಯವಾಣಿ, ಅರಗಿಣಿ, ಬೆಳ್ಳಿ ಚುಕ್ಕಿ, ಸಂಕುಲ, ನಕ್ಷತ್ರಲೋಕ, ಕರ್ಮವೀರ, ನಮ್ಮ ಮಾನಸ, ಹೊಸತು ಇತ್ಯಾದಿ ಮಾಸ ಪಕ್ಷ ತಿಥಿ ವಾರ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಮೆ ಇವರದು. ನಾಟಕ ನಾಡು ನುಡಿಗಾಗಿ ದುಡಿದವರ ಪರಿಚಯ ಮುಂತಾಗಿ ಇವರದ್ದು ಸುಮಾರು ಇಪ್ಪತ್ತೆರಡು ಪ್ರಕಟಿತ ಸ್ವತಂತ್ರ ಕೃತಿಗಳು . ಲೇಖನ ಪ್ರಬಂಧ ವಿಮರ್ಶೆಗಳ ಸಂಪಾದಿತ ಕೃತಿಗಳು ಇಪ್ಪತ್ತೆರಡು. 2ಅನುವಾದಿತ ಕೃತಿಗಳು. ಇದಷ್ಟೇ ಅಲ್ಲದೆ ಸುಮಾರು ಮೂವತ್ತು ಸಂಘಸಂಸ್ಥೆಗಳಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದವರು. ಇವರ ಬಹುಮುಖ ಆಸಕ್ತಿ ಸೇವೆಗಳಿಗೆ ಸಂದಿರುವ ಪುರಸ್ಕಾರಗಳೂ ಅನೇಕ. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಸಮಾಜಸೇವೆಗೆ ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಬಂದರೋ ಬಂದರು (ಬೀದಿ ನಾಟಕ) ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂಕುಲ ಲೇಖನ ಗೀತಾ ದೇಸಾಯಿ ಪ್ರಶಸ್ತಿ ಸಂದೇಶ ಪ್ರಶಸ್ತಿ ಪತ್ರಿಕಾ ರಂಗಸೇವೆಗಾಗಿ, ಆರ್ ಎನ್ ಆರ್ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಾಶ್ವತಿ ಸಮೋದಿತಾ ಪ್ರಶಸ್ತಿ , ಪ್ರಕಾಶಕರ ಸಂಘದ ಪ್ರಶಸ್ತಿ ವಿಸೀ ಸಂಪದ ಪ್ರಶಸ್ತಿ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಭಾರತ ಕಮ್ಯೂನಿಸ್ಟ್ ಪಕ್ಷದ ಇಪ್ಪತ್ತೊಂದನೇ ರಾಜ್ಯ ಸಮ್ಮೇಳನದ ಗೌರವ ಇತ್ಯಾದಿ. ಯಾವುದೇ ಸರ್ಕಾರಿ ಪ್ರಶಸ್ತಿಗಳ ನಗದು ಹಣ ಸ್ವೀಕರಿಸಿಲ್ಲ. ರಾಜ್ಯೋತ್ಸವ ಮತ್ತು ದಾನ ಚಿಂತಾಮಣಿ ಪ್ರಶಸ್ತಿ ಗಳನ್ನು ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ. ಪ್ರಸ್ತುತದ ಕುದಿ ಎಸರು ಕೃತಿಗೆ ೨೦೧೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

“ಕುದಿ ಎಸರು” ಶೀರ್ಷಿಕೆಯೇ ತುಂಬ ಅರ್ಥಪೂರ್ಣ. ಒಲೆಯ ಮೇಲೆ ಎಸರಿಗಾಗಿಟ್ಟ ಕುದಿ ಆಗಾಗ ಹನಿ ಎಗರಿ ಎದುರಿಗಿರುವವರ ಮೇಲೆ ಬೀಳುತ್ತದೆ. ಕುದಿಯುವ ನೀರಿನ ಶಾಖ ಜತೆಗೆ ಎರಗುವ ರಭಸ ಎರಡೂ ಸೇರಿ ಅದು ಕೊಡುವ ನೋವು ಅಪರಿಮಿತ. ಹೊರಗೇನೂ ಕಾಣದಿದ್ದರೂ ಒಳಗಿನ ಆ ಸುಟ್ಟ ನೋವು ಚುರುಕ್ ಎಂದು ತನ್ನಿರುವ ತೋರಿಸುತ್ತಲೇ ಇರುತ್ತದೆ. ತಮ್ಮ ಬದುಕಿನ ಅನುಭವಗಳನ್ನು ಕುದಿ ಎಸರಿನ ಹನಿಯ ಸಂಕಟಕ್ಕೆ ಹೋಲಿಸಿರುವುದರಲ್ಲಿಯೇ ಅದರ ತೀಕ್ಷ್ಣತೆಯ ಆಳ ಅರಿಯಬಹುದು.

ಕುದಿ ಎಸರು ತಿಟ್ಹತ್ತಿ ತಿರುಗಿ ನೋಡಿದಾಗ ಬದುಕಿನ ಅನೇಕ ಸಂದರ್ಭಗಳಲ್ಲಿ ಹೀಗೆ ತಿರುಗಿ ನೋಡಿ ಹಿಂದಿನ ಜೀವನವನ್ನು ನಮಗೆ ನಾವೇ ವೀಕ್ಷಿಸುವ ಅನಿವಾರ್ಯತೆ ಉಂಟಾಗುತ್ತದೆ. “ನೆನಪುಗಳ ಮಾತು ಮಧುರ” ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವುದಿಲ್ಲ . ಹಾಗೆಯೇ “ಸಾಕಪ್ಪ ಬದುಕು” ಎಂಬಂಥ ಕ್ಷಣಗಳು ನಂತರದ ಪರಾಮರ್ಶೆಯಲ್ಲಿ ಬದುಕಿನ ಪಾಠಗಳೇ ಅನ್ನಿಸುತ್ತದೆ. ಮೊಟ್ಟಮೊದಲಿಗೆ ಲೇಖಕಿ ಹೇಳುತ್ತಾರೆ “ನೆನಪುಗಳನ್ನು ದಾಖಲಿಸುವುದು ಸುಲಭವಲ್ಲ”. ತುಂಬಿದ ಮನೆ ಪೌರೋಹಿತ್ಯದ ಉದ್ಯೋಗ, ತನ್ನ ತಾಯಿಗೆ ಸಿಗುತ್ತಿದ್ದ ನಿರ್ಲಕ್ಷ್ಯ ಅನಾದಾರಣೆ ಜತೆಗೆ ತಾಯಿಯ ಅನಾರೋಗ್ಯ ಆ ಪುಟ್ಟ ಬಾಲೆಗೆ ಸುಂದರ ಬಾಲ್ಯ ದೊರಕದ್ದನ್ನು ಬಿಚ್ಚಿಡುತ್ತವೆ . ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪ್ರೀತಿಸಿದರೂ ಸಾಂಪ್ರದಾಯಿಕ ನೆಮ್ಮದಿಯ ಬದುಕು ನೀಡಲಾಗದ ಬೇಜವಾಬ್ದಾರಿತನ ಆ ಚಿಕ್ಕ ಹುಡುಗಿಯ ಸುಖದ ಬಾಲ್ಯ ಕಸಿದು ತಬ್ಬಲಿತನವನ್ನು ಖಾಯಂಗೊಳಿಸುತ್ತದೆ. ನಂತರದ ದಿನಗಳಲ್ಲಿನ ಚಿಕ್ಕಪ್ಪ ಚಿಕ್ಕಮ್ಮರ

ಕೈಕೆಳಗಿನ ಪರಾಧೀನತೆ ಅವರ ಮಾತಿನಲ್ಲೇ ಹೇಳುವುದಾದರೆ “ದೀನಾತಿದೀನ ಹೇಳಿದ್ದಕ್ಕೇ ಹಸಾದ” ಎನ್ನುವ ಪರಿಸ್ಥಿತಿ ತಂದೊಡ್ಡುತ್ತದೆ. ಮದುವೆಯಂತೂ “ಕುದಿವ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ”. ಕಡುಬಡತನ, ಮೈಮುರಿಯ ದುಡಿತಗಳ ಜೊತೆಗೆ ರಾತ್ರಿಗಳ ಚಿತ್ರಹಿಂಸೆ . ಬದುಕು ಬೇಡವೆನಿಸಿ ಸಾಯಲು ಹೊರಟಿದ್ದು ಎಷ್ಟು ಬಾರಿಯೋ? ಎಲ್ಲವುಗಳ ಪರಮಾವಧಿಯಾಗಿ ನೈತಿಕತೆಯನ್ನೇ ಪ್ರಶ್ನಿಸಿ ದೂರವಾದ ಪತಿಯ ಕಾಲು ಹಿಡಿದು ಅಂಗಲಾಚ ಹೋಗದೆ ಎರಡು ಮಕ್ಕಳ ಜತೆ ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಾರೆ. ಮಕ್ಕಳಾದ ಮೇಲೆ ಮುಂದುವರಿಸಿದ ಶಿಕ್ಷಣ, ಬರವಣಿಗೆ ತಂದುಕೊಟ್ಟ ಜೀವನೋಪಾಯದ ದಾರಿ ಬದುಕನ್ನು ಬೆಳೆಸುತ್ತದೆ. ಆತ್ಮವಿಶ್ವಾಸ ಪ್ರತಿಭೆಯ ಸ್ವಯಂಪ್ರಭೆಯಲ್ಲಿ ಮಿಂಚುತ್ತಾರೆ.

ಆದರೆ ಈ ಸುದೀರ್ಘ ಪಯಣ ಮೇಲೆ ಹೇಳಿದ ಪದಗಳಷ್ಟೇ ಸರಳ ಸುಗಮವಿರಲಿಲ್ಲ. ಎಂತೆಂಥ ಪರೀಕ್ಷೆಯ ಗಳಿಗೆಗಳು, ಅಡೆತಡೆಗಳು ಎದುರಾದವು, ಬಗೆಹರಿಸಿದ ಬಗೆಗಳನ್ನು ಪುಸ್ತಕ ಓದಿಯೇ ತಿಳಿಯಬೇಕು. ಅಷ್ಟೇ ಅಲ್ಲದೆ ಐವತ್ತು ವರ್ಷ ಹಿಂದಿನ ಸಮಾಜದ ಹೆಣ್ಣಿನ ಸ್ಥಾನಮಾನಗಳ ಹಿನ್ನೆಲೆಯಲ್ಲಿ ಯೋಚಿಸಬೇಕು. ಎಲ್ಲಕ್ಕಿಂತ ಹೆಚ್ಚಿಗೆ ಇವರ ಕಥಾನಕ ಓದುಗನಲ್ಲಿ ಮೂಡಿಸುವ ಆ ಒಂದು ನಿರ್ವಾತ ಸ್ಥಿತಿ, ಯೋಚನೆಯೇ ಸ್ತಬ್ಧವಾಗುವ ಸಂವೇದನೆ ಇವುಗಳನ್ನು ಯಾವುದೇ ವಿವರಣೆಯೂ ಕಟ್ಟಿಕೊಡಲಾಗದು. ಬೆನ್ನುಡಿಯಲ್ಲಿ ಜಯಶ್ರೀ ಕಾಸರವಳ್ಳಿ ಅವರು ನುಡಿದಂತೆ “ಅಸಹಾಯಕತೆಯಲ್ಲು ಎದ್ದು ನಿಲ್ಲುವ ಛಲ ಮತ್ತು ಎದ್ದು ನಿಲ್ಲುವ ಬಗೆ, ಓದಿ ಮುಗಿಸಿದ ಮೇಲೆ ನಮ್ಮಲ್ಲಿ ಉಳಿಸುವುದು ಗಾಢವಾದ ವಿಷಾದ ಮತ್ತು ಧೀರ್ಘ ನಿಟ್ಟುಸಿರು ಮಾತ್ರ .”

ಪುಸ್ತಕದ ಆರಂಭದಲ್ಲಿ ಅವರ ಪತಿ ಟ್ಯಾಕ್ಸಿ ಸ್ಟಾಂಡಿನಲ್ಲಿ ಥಳಿಸಿ ಆ ತುದಿಯಿಂದ ಈ ತುದಿಯವರೆಗೆ ಬೂಟ್ಸ್ ಕಾಲಿನಲ್ಲಿ ಒದೆಯುವ ದೃಶ್ಯ ಹೇಳುತ್ತಾರೆ ಸುತ್ತ ನೆರೆದ ಜನರ ಎದುರಿಗೆ ಇವರ ಚಾರಿತ್ರ್ಯವಧೆ ಮಾಡುವುದು ಬೇರೆ. ಈ ದೈಹಿಕ ಮಾನಸಿಕ ಹಲ್ಲೆ ಓದಿಯೇ ಎದೆ ತಲ್ಲಣಿಸಿಹೋಯಿತು ಅನುಭವಿಸಿದ ಅವರು ಅದೆಷ್ಟು ಜರ್ಜರಿತರಾಗಿ ಇರಬೇಕು. ಆದರೆ ಇಡೀ ಕಥಾನಕದುದ್ದಕ್ಕೂ ನಿರ್ಭಾವುಕ ತನದಿಂದ ಯಾರೊಬ್ಬರ ಮೇಲೂ ದೋಷಾರೋಪಣೆ ಗೈಯದೆ ಬದಲಿಗೆ ಬೇರೆಯವರ ತಪ್ಪು ನುಡಿಗಳಿಗೆ ನಡೆಗಳಿಗೆ ಕೆಲವೊಮ್ಮೆ ಸ್ಪಷ್ಟೀಕರಣ ಕೊಡುತ್ತಾ ತಮ್ಮ ದೌರ್ಬಲ್ಯಗಳನ್ನು ಮುಚ್ಚಿಡದೆ ಎಲ್ಲಿಯೂ ತಮ್ಮನ್ನು ತಾವು ವೈಭವೀಕರಿಸಿ ಕೊಳ್ಳದೇ ಇರುವ ಈ ನಿರೂಪಣೆ ಮನಸ್ಸಿಗೆ ಅತ್ಯಾಪ್ತ ವಾಯಿತು . ಅಂದಿನ ತಮ್ಮ ಹಠಮಾರಿತನ ಚಾಡಿಕೋರತನ ಗಂಡುಬೀರಿ ಪ್ರವೃತ್ತಿಗಳು ಅಟೆನ್ಷನ್ ಸೀಕಿಂಗ್ ನಡವಳಿಕೆ ಗಳಾಗಿರಬಹುದು ಎನ್ನುತ್ತಾ ತಮ್ಮ ಮೇಲೆ ದೈವಿ ದೆವ್ವಗಳು ಆ ವಾಸಿಸುತ್ತಿದ್ದ ಬಗ್ಗೆಯೂ ಮುಚ್ಚುಮರೆ ಇಲ್ಲದೆ ಹೇಳಿಕೊಳ್ಳುತ್ತಾರೆ ಪೀಚಲು ದೇಹದ ಕಪ್ಪು ಬಣ್ಣದ ತಮ್ಮ ದೇಹವನ್ನು ಟೀಕಿಸಿಕೊಳ್ಳುತ್ತಾ ಸ್ತ್ರೀಸಹಜ ನಯನಾಜೂಕು ಅಲಂಕಾರ ಆಡಂಬರಗಳು ಮನೆಯಲ್ಲಿ ಹೆಣ್ಣು ದಿಕ್ಕು ಇಲ್ಲದಿದ್ದರಿಂದ ತಮ್ಮಲ್ಲಿ ಕಂಡು ಬರಲಿಲ್ಲವೇನೋ ಎಂದು ವಿಶ್ಲೇಷಿಸಿಕೊಳ್ಳುವಾಗ ಕಣ್ಣು ತುಂಬಿ ಬರುತ್ತದೆ ಒಳ್ಳೆಯ ಮಾತು ಪ್ರಶಂಸೆಗೆ ಹಪಹಪಿಸುವ ಆ ಮುಗ್ಧ ಮನಸ್ಸನ್ನು ತವರಿನಲ್ಲಾಗಲಿ ಅತ್ತೆ ಮನೆಯವರಾಗಲಿ ಗಂಡನಾಗಲೀ ಅರ್ಥೈಸಿಕೊಳ್ಳಲೇ ಇಲ್ಲ ಎಂಬ ಗಾಢ ವಿಷಾದ ಆವರಿಸುತ್ತದೆ ಕನಿಕರವಿಲ್ಲದೆ ದುಡಿಸಿಕೊಳ್ಳುವ ತವರು ಅತ್ತೆಯ ಬಳಗ ಕಾಮದ ಗೊಂಬೆಯಂತೆ ಆಡಿಸುವ ಗಂಡ ಬಿಟ್ಟು ಬರುವ ಧೈರ್ಯ ಬೆಂಬಲ ಇರದೆ ಅಲ್ಲದೆ ಹಾಗೆ ಮಾಡಿದರೆ ತನ್ನ ಅತ್ತೆಯರಂತೆ ಕೆಟ್ಟಹೆಸರು ಹೊರುವ ಭಯದಿಂದ ಬದುಕು ದೂಡುವ ಆ ಬವಣೆ ಇಲ್ಲಿ ಅಕ್ಷರ ರೂಪ ತಳೆದಿದೆ.

ಬದುಕಿನ ರಹಸ್ಯಗಳನ್ನೆಲ್ಲ ಈ ರೀತಿ ಬಟಾಬಯಲು ಮಾಡಿಕೊಳ್ಳಬೇಕೆ? ಖಾಸಗಿತನ ಎಲ್ಲಿ ಉಳಿಯುತ್ತದೆ? ಎನ್ನುವವರು

“ಬದುಕಿನ ಬಗೆಯನ್ನು ಬರೆಯುವುದು ಎಂದರೆ ಮತ್ತೊಮ್ಮೆ ಆ ಕ್ಷಣಗಳನ್ನು ಅನುಭವಿಸುವುದು. ಮರೆತೇ ಬಿಡಬೇಕೆಂದುಕೊಂಡವಳಿಗೆ ಮತ್ತೆ ಅದನ್ನೇ ಅನುಭವಿಸಿ ದಾಖಲಿಸುವುದು ಮತ್ತೆ “ನರಕದರ್ಶನ” ಎನ್ನಿಸಿತೇ ವಿನಾ ಈ ಬರಹದಿಂದ ಮನದ ಒಜ್ಜೆ ಬಿಡುಗಡೆಯಾಗಲಿಲ್ಲ”

ಎನ್ನುವ ಇವರ ಮಾತು ಅರ್ಥ ಮಾಡಿಕೊಳ್ಳಬೇಕು. ಕತ್ತಲ ಗರ್ಭದಲ್ಲಿ ಹೂತು ಹೋದ ಅದೆಷ್ಟೋ ಅಂತಹ ಸಹಸ್ರಾರು ಹೃದಯಗಳ ಪ್ರತಿನಿಧಿಯಾಗಿ ಮುಂದಾದರೂ ಧೈರ್ಯ ತಂದುಕೊಂಡು ದನಿ ಎತ್ತಲು ಮಾದರಿಯಾಗುತ್ತದೆ ಸ್ಫೂರ್ತಿಯಾಗುತ್ತದೆ ಇವರ ಬರಹ. ಆದರೂ ಮಕ್ಕಳ ಹಿತೈಷಿಗಳ ಒತ್ತಾಸೆ ಒತ್ತಾಯದಿಂದ ಬರೆದಿದ್ದಾರೆ ತಮ್ಮ ಅಂತರಂಗದ ಈ ಆಲಾಪವನ್ನು .

೨೨ ರ ವಯಸ್ಸಿನಲ್ಲೇ ಅನಾರೋಗ್ಯದಿಂದ ಸತ್ತೇ ಹೋಗುವ ಸ್ಥಿತಿಯಲ್ಲಿದ್ದವರು ಮತ್ತೆ ಮನೋಬಲ ಒಗ್ಗೂಡಿಸಿಕೊಂಡು ಮಕ್ಕಳಿಗಾಗಿ ಜೀವನ್ಮುಖಿಯಾದರು. ತಾವು ಅನುಭವಿಸಿದ ಖಾಲಿತನ ಅನಾಥಪ್ರಜ್ಞೆ ತಮ್ಮ ಮಕ್ಕಳಿಗೆ ಬೇಡ ಎನ್ನುವ ಅಮ್ಮನ ಅದಮ್ಯ ಚೈತನ್ಯ ಅದು. ಮನೆಯಲ್ಲಿನ “ರಾತ್ರಿಗಳ” ಭಯಾನಕತೆ ಮರೆಯಲು ಮನೆಯ ವಿಳಾಸವನ್ನೇ ಇವರ ಮನ ಮರೆಯುತ್ತಿತ್ತೆಂದರೆ ಅವರು ಅನುಭವಿಸಿದ ನೋವು ಸಂಕಟಗಳ ಆಗಾಧತೆಯ ಕಿಂಚಿತ್ ಅರಿವಾದರೂ ಮೂಡಬಹುದು.

“ಬದುಕನ್ನು ಅಕ್ಷರಕ್ಕೆ ಇಳಿಸುವುದು ಕಷ್ಟ” ಎನ್ನುತ್ತಲೇ ತಮ್ಮ ಜೀವನದ ಪದರುಗಳನ್ನು ಬಿಡಿಸಿಡುವ ವಿಜಯಮ್ಮ ತಮ್ಮ ಕಷ್ಟಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ ಅವರ ಭಾವನೆಗಳನ್ನು ನೋಡಿದರೆ ಡಿವಿಜಿಯವರ ಈ ಕಗ್ಗ ನೆನಪಿಗೆ ಬರುತ್ತದೆ .

ಎಲ್ಲರಿಗಮೀಗ ನಮೊ_ ಬಂಧುಗಳೇ ಭಾಗಿಗಳೇ ಉಲ್ಲಾಸವಿತ್ತವರೆ, ಮನವ ತೊಳೆದವರೇ ಟೊಳ್ಳು ಜಗ ಸಾಕುಬಾಳ್_ ಎನಿಸಿ ಗುರುವಾದವರೇ

ಕೊಳ್ಳಿರೀ ನಮನವನು _ ಮಂಕುತಿಮ್ಮ

ಬಾಲ್ಯದಿಂದಲೂ ಜೊತೆಯಲ್ಲೇ ಬೆಳೆದು ಕಷ್ಟಸುಖಗಳಿಗೆ ನೆರವಾಗಿರುವ ಓರಿಗೆಯ ವಯಸ್ಸಿನ ಚಿಕ್ಕಪ್ಪ ಬಾಣಂತಿತನಕ್ಕೆ ಮಾಡಿದ ದುಡ್ಡಿನ ಲೆಕ್ಕಾಚಾರ ಹಾಕುವುದು, ಕಷ್ಟ ತಿಳಿಸಿ ಪತ್ರ ಬರೆದರೂ ಕರಗದ ಚಿಕ್ಕಮ್ಮ ಅಲ್ಲಿಯೇ ಸಹಿಸಿ ಬಾಳು ಎನ್ನುವುದು ಸ್ವಾರ್ಥಪರ ಜನರ ಮುಖ ತೋರುತ್ತದೆ. ಕರುಣೆ ಎಂದರೆ ತಿಳಿಯದ ಅವರ ಅತ್ತೆಯಮನೆಯವರು ಪತಿಯ ಸ್ವಭಾವ ಹೀಗೂ ಇರುತ್ತಾ ಪ್ರಪಂಚ ಎಂಬ ಆಶ್ಚರ್ಯ ಮೂಡಿಸುತ್ತದೆ .ಊರಿನ ಎಲ್ಲಾ ಸೂಳೆಯರ ಬಳಿ ಹೋಗುವ ಕಡೆಗೆ ಕೆಲಸದವರನ್ನು ಬಿಡದ ಇವರ ತಂದೆ, ಗಂಡನನ್ನು ಬಿಟ್ಟು ಬೇರೆ ಮದುವೆಯಾದ ತಂಗಿಯ ಮುಖ ನೋಡಲು ಇಷ್ಟಪಡದಿರುವುದು ಗಂಡಸರ ದ್ವಿಮುಖ ವ್ಯಕ್ತಿತ್ವದ ಪರಿಚಯ ಮಾಡಿಸುತ್ತದೆ. ಕಷ್ಟ ಸುಖಗಳಿಗೆ ಸ್ಪಂದಿಸಿ ಮಾನವೀಯತೆ ತೋರಿದ ಮಿತ್ರರನ್ನು ಹಿರಿಯ ಸಾಹಿತಿಗಳನ್ನು ಸ್ಮರಿಸಿದ್ದಾರೆ. ಬರಹದಷ್ಟೆ ಅಲ್ಲದೆ ಬದುಕಿನಲ್ಲೂ ಧೀಮಂತತೆ ತೋರಿದವರಿಗೆ ಕೈಯೆತ್ತಿ ಮುಗಿಯಬೇಕೆನಿಸುತ್ತದೆ.

ಹಾಗೆಂದು ಅವರ ವೃತ್ತಿಬದುಕೇನೂ ಹೂವಿನ ಹಾದಿಯಾಗಿರಲಿಲ್ಲ ಎಂಬುದು ಈ ಮಾತುಗಳಿಂದ ವೇದ್ಯ “ಒಂದು ಹೆಣ್ಣುಮಗುವಿನ ಬರವಣಿಗೆಯೂ ಅದು ಅವಳದೇ ಎಂದು ಸಾಬೀತು ಮಾಡುವಂತಹ ಅನಿವಾರ್ಯತೆಗಳ ಮಧ್ಯೆ ಬರವಣಿಗೆಯನ್ನೇ ನಂಬಿಕೊಂಡ ನನ್ನ ಬದುಕು ನಡೆಯಬೇಕಿತ್ತು”.

ಇಂದಿನ ಈ ಕಾಲದಲ್ಲೇ ಗಂಡನನ್ನು ಬಿಟ್ಟು ಬದುಕುವ ಹೆಣ್ಣಿಗೆ ಎಷ್ಟೆಲ್ಲಾ ಸಮಸ್ಯೆಗಳು. ಆಗಲೂ ವಿಜಯಮ್ಮ ಅವರು ಅದನ್ನೆಲ್ಲ ಎದುರಿಸಿ ಗಟ್ಟಿಯಾದವರು. ಹೀಗೆ ಹೇಳುತ್ತಾರೆ

“ಬಂಧನಗಳ ಹಂಗಿಲ್ಲದ ಹಾಡುಹಕ್ಕಿಗೆ ಮುಗಿಲಿಗೆ ಲಗ್ಗೆಯಿಡುವ ಬಯಕೆ. ಬಂಧನ ರಾಹಿತ್ಯ ಸ್ಥಿತಿಯನ್ನೇ ಬಳಸಿಕೊಂಡು ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಲು, ಹಾಡುಗೊರಳ ಸೀಳಿ ಬಿಡಲು ಹೊಂಚುಹಾಕಿದ ಧೂರ್ತತನಕ್ಕೆ ತಾನು ಮಾಡುತ್ತಿರುವುದು ತಪ್ಪು ಅನ್ಯಾಯ ಎಂಬ ಅರಿವು ಇರಲಿಲ್ಲ. ಅದನ್ನೆಲ್ಲ ನಾಜೂಕಾಗಿ ನಿವಾರಿಸಿಕೊಳ್ಳುತ್ತ ನನ್ನದೇ ಗೂಡು ನನ್ನದೇ ಪುಟ್ಟ ಮರಿಗಳ ಜತೆಗೆ ಬದುಕುವ ಸಾಹಸ.”

ಆ ಪುಟ್ಟ ಗುಬ್ಬಿ ಗೂಡು ಆಲದಮರವಾಗಿ ಹಲವಾರು ಮರಿ ಗುಬ್ಬಿಗಳನ್ನು ಬೆಳೆಸಿದ್ದು ಈಗ ಇತಿಹಾಸ. ಅಡೆತಡೆಗಳನ್ನು ಮೆಟ್ಟಿಲು ಮಾಡಿಕೊಂಡು ಹೆಸರಿಗೆ ಅನ್ವರ್ಥವಾಗಿ ಬರೀ ವ್ಯಕ್ತಿಯಾಗದೆ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು ವಿಶೇಷ. ವಿಧಿಯ ಅಟ್ಟಹಾಸದುರಿಗೆ ಬೂದಿಯಾಗಿಯೂ ಫೀನಿಕ್ಸ್ ನಂತೆ ಎದ್ದು ಬಂದವರು ವಿಜಯಮ್ಮ. ಬದುಕಿನ ಕರಾಳ ಅಧ್ಯಾಯಗಳ ಅಗ್ನಿದಿವ್ಯದಲ್ಲಿ ಮತ್ತೆ ಹೊಳಪಾದವರು, ಬೆಳಕಾದವರು, ಮಾದರಿಯಾದ ವ್ಯಕ್ತಿತ್ವವಾದವರು.

ಕಷ್ಟಗಳಿಗೆ ಅಂಜಿ ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಪರಿಭಾವಿಸಿ ಕಡ್ಡಿಯನ್ನು ಗುಡ್ಡ ಮಾಡಿಕೊಳ್ಳುವ ಮನಸ್ಥಿತಿಯವರೆಲ್ಲ ಖಂಡಿತವಾಗಿಯೂ ಓದಲೇಬೇಕಾದ, ತಿಳಿದು ಅಳವಡಿಸಿಕೊಳ್ಳಲೇಬೇಕಾದ ಪುಸ್ತಕವಿದು .


  • ಸುಜಾತಾ ರವೀಶ್ – ಮೈಸೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW