ಮಹಿಳಾ ನೇತೃತ್ವದ ಚಳುವಳಿಗಳು

ಸ್ವಾತಂತ್ರ್ಯ ಪೂರ್ವದ ಹೋರಾಟದಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡು ಇಂದಿಗೂ ಸ್ಮರಣೀಯರಾಗಿದ್ದಾರೆ. ಮಾರ್ಚ ತಿಂಗಳಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘ ಇರುವುದರಿಂದ ಸಾಧನೆಯ ಅರ್ಥವನ್ನು ನೀಡಿದ ಮಹಿಳೆಯರ ಪರಿಚಯವನ್ನು ಲೇಖಕಿ ಶಾರದಾ ಶ್ರಾವಣಸಿಂಗ್ ರಜಪೂತ ಅವರು ಓದುಗರಿಗೆ ಮಾಡಲಿದ್ದಾರೆ.

” ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕಂತದ್ದು” ಎಂದು ಉಪ್ಪಿನ ಸತ್ಯಾಗ್ರಹದ ಕೊನೆಯಲ್ಲಿ ಮಹಾತ್ಮ ಗಾಂಧೀಜಿ ಉದ್ಗರಿಸಿದ್ದರು. ಇದಕ್ಕೆ ಕಾರಣ ಕಮಲಾದೇವಿ ಚಟ್ಟೋಪಾಧ್ಯಾಯರು! ಇವರು ಗಾಂಧೀಜಿಯವರಿಗೆ “ಮಹಿಳೆಯರಿಗೂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಕರೆ ನೀಡಿ ” ಎಂದು ಮನವಿ ಮಾಡಿಕೊಂಡಿದ್ದರು. 1930 ಎಪ್ರಿಲ್ 6 ರಂದು ಸಹಸ್ರಾರು ಸಂಖ್ಯೆಯಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ದೇಶಕ್ಕೆ ಆಶ್ಚರ್ಯದ ಮಿಂಚಿನ ಸ್ಪರ್ಷ ನೀಡಿದ್ದರು!! ಕಮಲಾದೇವಿ ಚಟ್ಟೋಪಾಧ್ಯಾಯರ ಜೊತೆಗೆ ಸರೋಜಿನಿ ನಾಯ್ಡು, ಹಂಸ ಮೆಹ್ತಾ ಮುಂತಾದವರು ಮುಂಚೂಣಿಯಲ್ಲಿದ್ದರು. ಇದು ಮಹಿಳಾ ಚಳುವಳಿಗೆ ಪ್ರಥಮ ಹೆಜ್ಜೆಯಾಗಿತ್ತು ಸ್ವಾತಂತ್ರ್ಯ ಪೂರ್ವದಲ್ಲಿ.!!

ಕಮಲಾದೇವಿ ಚಟ್ಟೋಪಾಧ್ಯಾಯರು

1917 ರಲ್ಲಿ ಮಾರ್ಗರೇಟ್ ಕಸಿನ್ಸ್ ‘ವುಮೆನ್ಸ್ ಇಂಡಿಯನ್ ಅಸೋಸಿಯೇಷನ್ ‘ ಸ್ಥಾಪಿಸಿದಾಗ ಅದರ ಅಧ್ಯಕ್ಷರು ಅನಿಬೆಸೆಂಟ್ ಆಗಿದ್ದರು. ಮಾರ್ಗರೇಟ್ ಕಸಿನ್ಸ್ ಕಾರ್ಯದರ್ಶಿಯಾಗಿದ್ದರು. ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತವಾಗುವಂತೆ ಈ ವೇದಿಕೆ ಕೆಲಸ ಮಾಡಿತು. ಇದರ ಶಾಖೆಗಳು ಶ್ರೀನಗರ, ಚೆನ್ನೈ, ಕಲ್ಲಿಕೋಟೆ, ತಂಜಾವೂರು, ವಿಜಯವಾಡ ಹಾಗೂ ಮುಂಬೈ ನಗರಕ್ಕೂ ತೆರೆಯಲ್ಪಟ್ಟವು. 1927 ರಲ್ಲಿ ಅಖಿಲ ಭಾರತ ಮಹಿಳಾ ಸಮ್ಮೇಳನ ನಡೆಯುವವರೆಗೂ ಇದು ಮಹಿಳೆಯರ ದನಿಯಾಗಿ ಕೆಲಸ ಮಾಡಿತು. 1927 ರಲ್ಲಿ ಪುಣೆಯಲ್ಲಿ ಮೊದಲ ಅಧಿವೇಶನ ನಡೆದಾಗ ಬರೋಡಾದ ಮಹಾರಾಣಿ ಚಿಮಣಾಬಾಯಿ ಗಾಯಕವಾಡ ಅಧ್ಯಕ್ಷೆ ಯಾಗಿದ್ದರು. ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ರೇಣುಕಾ ರಾಯ್, ಅಮೃತಾ ಕೌರ್,ರಾಮೇಶ್ವರಿ ನೆಹರು, ಬೇಗಂ ಹಮೀದ್ ಅಲಿ,ಡಾ. ಮುತ್ತುಲಕ್ಷ್ಮಿ ರೆಡ್ಡಿಯವರು ಈ ಸಂಘಟನೆಯ ನೇತೃತ್ವ ವಹಿಸಿದ್ದರು.ಇಲ್ಲಿ ಮುಖ್ಯವಾದ ಚರ್ಚೆ ‘ಮಹಿಳಾ ಶಿಕ್ಷಣ ‘ ಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಇತ್ತು. ಬಾಲ್ಯವಿವಾಹ ಖಂಡಿಸುವ ನಿರ್ಣಯ ಕೂಡ ಇಲ್ಲಿ ಮಂಡಿಸಲಾಯಿತು.

ಸರೋಜಿನಿ ನಾಯ್ಡು

1929 ರ ಸಂಪೂರ್ಣ ಸ್ವಾತಂತ್ರ್ಯದ ಕೆರೆಗೆ ಮಹಿಳೆಯರೂ ಪ್ರತಿಧ್ವನಿಸಿ 1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ನಂತರ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ ಮಹಿಳೆಯರು ಜಗತ್ತೇ ಬೆಚ್ಚುವಂತೆ ಮಾಡಿದರು.ದೇಶಪ್ರೇಮಕ್ಕಾಗಿ ತಮ್ಮ ಬಂಧನದ ಸಂಕೋಲೆಗಳನ್ನು ಮುರಿದು ಹೊರಬಂದು ತಾಯಿನಾಡಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತನು ಮನ ಧನ ಅರ್ಪಿಸಿದ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ.

1905 ರಲ್ಲಿ ‘ ಸ್ವದೇಶಿ ಚಳುವಳಿ ‘ ಬಂಗಾಲದ ಸರಳಾದೇವಿ ಚೌಧುರಾಣಿ ಮುಂದಾಳತ್ವದಲ್ಲಿ ಭಾಗವಹಿಸಿದ್ದರು.ಸರಳಾದೇವಿ ಅನೇಕ ವ್ಯಾಯಾಮ ಮತ್ತು ಗರಡಿ ಶಾಲೆಗಳನ್ನು ಸ್ಥಾಪಿಸಿ ಯುವಕರನ್ನು ಬ್ರಿಟಿಷರ ವಿರುದ್ಧ ಹುರಿದುಂಬಿಸುವ ಕೆಲಸ ಮಾಡುತ್ತಿದ್ದಳು.’ ಭಾರತಿ ‘ ಎಂಬ ಮಹಿಳಾ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಭಾರತ ಸ್ತ್ರೀ ಮಂಡಲ ‘ ವನ್ನು ಸ್ಥಾಪಿಸಿ ಮಹಿಳಾ ಉನ್ನತಿಗಾಗಿ ಶ್ರಮಿಸುತ್ತಿದ್ದರು.

ಸರಳಾದೇವಿ ಚೌಧುರಾಣಿ

ಈ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಕಂಡ ಮತ್ತೊಂದು ಧೀರ ಮಹಿಳೆ ಎಂದರೆ ಮೇಡಂ ಬಿಕಾಜಿ ರುಸ್ತಮ್ ಕಾಮಾ. ನವರೋಜಿಯಂತಹ ಸೌಮ್ಯವಾದಿ ವ್ಯಕ್ತಿಯ ಜೊತೆ ರಾಜಕೀಯ ಜೀವನ ಪ್ರಾರಂಭಿಸಿ ಮುಂದೆ ಕೃಷ್ಣವರ್ಮ, ಸರ್ದಾರ್ ಸಿಂಗ್ ರಾವೋಜೀ ರಾಣಾ ಮುಂತಾದ ಕ್ರಾಂತಿಕಾರಿಗಳ ಪರಿಚಯ ಬೆಳೆಸಿಕೊಂಡು ಎರಡನೇ ಅಂತಾರಾಷ್ಟ್ರೀಯ ಏಳನೇ ಸಮ್ಮೇಳನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೇಲೇರಿಸಿ, ವಿಶ್ವದ ನಕಾಶೆಯಲ್ಲಿ ಪ್ರಪ್ರಥಮವಾಗಿ ಭಾರತದ ರಾಷ್ಟ್ರೀಯ ಧ್ವಜವನ್ನು ಆರೋಹಣ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.

ಸುಭಾಷ್ ಚಂದ್ರ ಬೋಸ್ ರ ‘ರಾಣಿ ಝಾನ್ಸಿ ಬ್ರಿಗೇಡ್ ‘ನಲ್ಲಿ ಕ್ಯಾಪ್ಟನ್ ಆಗಿದ್ದ ಲಕ್ಷ್ಮೀ ಸ್ವಾಮಿನಾಥನ್ ರಾಷ್ಟ್ರಪ್ರೇಮಿ ಮಹಿಳೆಯಾಗಿ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ.
‘ಮಹಿಳಾ ಆತ್ಮರಕ್ಷಾ ಸಮಿತಿ ‘ ಎಂಬ ಸಂಘಟನೆಯೊಂದಿಗೆ ರೇಣು ಚರ್ಕವರ್ತಿ, ಕಮಲಾ ಚಟರ್ಜಿ, ಮಣಿಕುಂತಲ್ ಸೇನ್, ಇಳಾ ರೇಡ್ ಮುಂತಾದ ಅನೇಕ ಮಹಿಳೆಯರು ದೇಶದ ಸ್ವಾತಂತ್ರ್ಯ ಮತ್ತು ಮಹಿಳೆಯರ ವಿಮೋಚನೆಯೆರಡಕ್ಕೂ ಹೋರಾಡಿದರು.

ಲಕ್ಷ್ಮೀ ಸ್ವಾಮಿನಾಥನ್

1940 ರಲ್ಲಿ ನಡೆದ ಅಖಿಲ ಭಾರತ ವಿದ್ಯಾರ್ಥಿನಿಯರ ಸಮ್ಮೇಳನ ಮಹಿಳಾ ಚಳುವಳಿಯಲ್ಲಿ ಒಂದು ಮೈಲಿಗಲ್ಲು. ಲಕ್ನೋದಲ್ಲಿ ನಡೆದ ಈ ಸಮ್ಮೇಳನದಲ್ಲಿ ದೇಶದ ಹಲವಾರು ಭಾಗಗಳಿಂದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಇದರ ನಂತರ ವಿದ್ಯಾರ್ಥಿನಿಯರ ಸಂಘಟನೆಗಳು ವ್ಯಾಪಕವಾಗಿ ಬೆಳೆಯಲಾರಂಭಿಸಿದವು.

ಹೀಗೆ ಸ್ವಾತಂತ್ರ್ಯ ಪೂರ್ವದ ಹೋರಾಟದಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡು ಇಂದಿಗೂ ಸ್ಮರಣೀಯರಾಗಿದ್ದಾರೆ. ಮುಂದಿನ ಲೇಖನಗಳಲ್ಲಿ ಒಬ್ಬೊಬ್ಬ ಮಹಿಳೆಯರ ಪರಿಚಯವನ್ನು ನೀಡುವುದರ ಜೊತೆಗೆ ಈ ಮಾರ್ಚ ತಿಂಗಳಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘ ಇರುವುದರಿಂದ ಸಾಧನೆಯ ಅರ್ಥವನ್ನು ನೀಡಿದ ಮಹಿಳೆಯರ ಪರಿಚಯ ನೀಡುವ ಪ್ರಯತ್ನ ಇದಾಗಿದೆ…


  • ಶಾರದಾ ಶ್ರಾವಣಸಿಂಗ್ ರಜಪೂತ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW