ಲೇಖಕರಾದ ನವೀನಕೃಷ್ಣ ಅವರ ಮೊದಲ ಪುಸ್ತಕವಾದ “ಹೆಜ್ಜೆ ಊರುವ ತವಕ” ಪಕ್ಷಿಗಳ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಪರಿಸರದ ಸೌಂದರ್ಯವನ್ನು ತೆರೆದಿಡುತ್ತದೆ. ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಕೃತಿಯ ಕುರಿತು ಲೇಖಕಿ ಆಶ್ರಿತ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹೆಜ್ಜೆ ಬರುವ ತವಕ
ಲೇಖಕರು : ನವೀನಕೃಷ್ಣ ಎಸ್. ಉಪ್ಪಿನಂಗಡಿ
ಖರೀದಿಗಾಗಿ : 8762118946
ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ನಾನು ಮೇಲೆ ಹೇಳಿದ ಮೂರು ವಿಷಯಗಳು ಮೂರು ಭಾಗದ ಲೇಖನಗಳ ವಿಷಯವಾಗಿದೆ. ಮೊದಲ ಭಾಗದಲ್ಲಿ ಒಟ್ಟು 10 ಲೇಖನಗಳಿದ್ದು ಲೇಖಕರು ತಮ್ಮ ಅಜ್ಜಿಯ ಮನೆಯಲ್ಲಿ ಕಂಡ ಕೆಲವು ಪಕ್ಷಿಗಳ ಬಗ್ಗೆ ತಿಳಿಸಿದ್ದಾರೆ. ಬರಹದ ಶೈಲಿ ಎಷ್ಟು ಸೊಗಸಾಗಿದೆಯೆಂದರೆ ಲೇಖಕರ ಜೊತೆಗೆ ನಾವು ನಿಂತು ಆ ಪಕ್ಷಿ ನೋಡಿ ಫೋಟೋ ತೆಗೆದಂತನಿಸುತ್ತದೆ.
ಎರಡನೇ ಭಾಗದಲ್ಲಿ 3 ಲೇಖನಗಳಿವೆ. ಸಿರಿಮನೆ ಜಲಪಾತ, ಅಂಬಾತೀರ್ಥ, ಚೆಂಧಮಂಗಲಮ್ ವೆಟ್ ಲ್ಯಾಂಡ್ಸ್ ಬಗ್ಗೆ ತಿಳಿಸಿದ್ದಾರೆ. ಅಲ್ಲಿನ ರಮಣೀಯ ತಾಣವನ್ನು ಒಮ್ಮೆ ನೋಡಿ ಕಣ್ತುಂಬಿಕೊಳ್ಳಬೇಕು ಎನ್ನುವ ಹಂಬಲ ಮೂಡದೆ ಇರದು. ಅಷ್ಟು ಸೊಗಸಾಗಿ ವಿವರಿಸಿದ್ದಾರೆ. ಆ ಸ್ಥಳಗಳ ಬಗ್ಗೆ ಚಾರಣ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಮೂರನೇ ಭಾಗದಲ್ಲಿ 4 ಲೇಖನಗಳಿವೆ. ಈ ಲೇಖನಗಳು ಬಹಳಾ ಶಕ್ತಿಯುತವಾಗಿದೆ. ಈ ಭಾಗ ಪುಸ್ತಕ ಪ್ರಿಯರಿಗೆ ಆಪ್ತವೆನಿಸುವ ವಿಭಾಗ ಎಂದರೆ ಅತಿಶಯೋಕ್ತಿಯಲ್ಲ. ಪರಿಸರಕ್ಕೆ ಸಂಬಂಧಪಟ್ಟ ಪುಸ್ತಕಗಳ ಬಗ್ಗೆ ಇಲ್ಲಿ ವಿಮರ್ಶೆ ಮಾಡಿದ್ದಾರೆ. ಶಿವಾನಂದ ಕಳವೆಯವರ “ಕಾನುಘಟ”, ಡಾ.ಶ್ರೀಧರ್ ಎಚ್. ಜಿ ಅವರ ” ಪ್ರಸ್ಥಾನ” , ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” , ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಸರಕ್ಕೆ ಸಂಬಂಧಿಸಿದ ಕೃತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ.

ಪ್ರಕೃತಿಯನ್ನು ಪ್ರೀತಿಸುವವರಿಗೆ, ಪರಿಸರದ ಬಗ್ಗೆ ತಿಳಿಯಬೇಕು ಎನ್ನುವವರಿಗೆ ಪರಿಸರದ ಬಗ್ಗೆ ಬಂದಿರುವ ಪುಸ್ತಕಗಳ ಅಧ್ಯಯನ ಮಾಡಬೇಕೆಂದಿರುವವರಿಗೆ ” ಹೆಜ್ಜೆ ಬರುವ ತವಕ ” ಖಂಡಿತ ಖುಷಿ ಕೊಡುತ್ತದೆ. ದಿನದ ಒಂದಿಷ್ಟು ಸಮಯ ಮನೆಯ ಅಂಗಳದಲ್ಲಿ ನಿಂತು ಪ್ರಕೃತಿಯ ಸೊಬಗನ್ನು ಸವಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದನಿಸುವಂತೆ ಪುಸ್ತಕದ ಮೊದಲ ಭಾಗದ ಲೇಖನಗಳು ಮಾಡುತ್ತವೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ ಬಾಲ್ಯದ ದಿನಗಳನ್ನು, ಮನೆಯ ಮುಂದಿನ ಮರದಲ್ಲಿ ಕುಳಿತು ಕೂಗುತ್ತಿದ್ದ ಪಕ್ಷಿಗಳನ್ನು ನೆನಪಿಸುತ್ತದೆ.
ಬದುಕಿನ ಜಂಜಾಟದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳನ್ನು ನೋಡುವಷ್ಟು ಸಮಯ ನಮಗೆ ಇಲ್ಲವಾಗಿದೆಯೇ? ಅಥವಾ ಪಕ್ಷಿ ಜಗತ್ತು, ಪ್ರಕೃತಿ ಸೌಂದರ್ಯವನ್ನು ಸವಿಯುವ ಮನಸ್ಸನ್ನು ಕಳೆದುಕೊಂಡಿದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಇದರ ಜೊತೆಗೆ ನೋಡಲು ಮೊದಲಿನಂತೆ ಪಕ್ಷಿಗಳು ಈಗ ಸಿಗುತ್ತಿಲ್ಲ, ಅದಕ್ಕೆ ಮನುಜರ ಕೊಡುಗೆ ಅಪಾರ ಎನ್ನುವುದನ್ನು ನೆನೆದಾಗ ಬೇಸರವಾಗುತ್ತದೆ. ಪಕ್ಷಿಗಳನ್ನು ಪುಸ್ತಕದಲ್ಲಿ ನೋಡಿ ಖುಷಿ ಪಡುವ ಕಾಲಘಟ್ಟ ತಲುಪಿದ್ದೇವಾ ಎಂಬ ಪ್ರಶ್ನೆ ಮೂಡಿದಾಗ ಆತಂಕವಾಗುತ್ತದೆ.

ಪ್ರಕೃತಿಯ ಮಡಿಲಿನಲ್ಲಿ ಬೆಳೆದು ಪಟ್ಟಣದಲ್ಲಿ ವಾಸಿಸುತ್ತಿರುವವರಿಗೆ ಪರಿಸರವನ್ನು ಆಸ್ವಾದಿಸುವ ಮನಸ್ಸಿದ್ದರೂ ಕಾಂಕ್ರೀಟ್ ಕಾಡಿನಲ್ಲಿ ಬದುಕುವ ಅನಿವಾರ್ಯತೆ ಇರುವುದರಿಂದ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಜೀವಿಸುವಂತಾಗಿದೆ. ಅಪರೂಪಕ್ಕೆ ಕಣ್ಣಿಗೆ ಕಾಣುವ ಪಕ್ಷಿಗಳನ್ನು ನೋಡಿ ಸಂತೋಷ ಪಡುವ ದುಸ್ಥಿತಿ ಪಟ್ಟಣ ವಾಸಿಗಳದ್ದು. ಆದರೆ ಹಳ್ಳಿಗಳಲ್ಲಿ ಪಕ್ಷಿಗಳ ಕಲರವವನ್ನು ಮನೆಯ ಮುಂದೆ ನಿಂತು ಆಸ್ವಾದಿಸಬಹುದು. ಈ ಪುಸ್ತಕದಲ್ಲಿ ಮನೆಯ ಆಸುಪಾಸಿನಲ್ಲಿ ಕಂಡ ಕೆಲವು ವಿಭಿನ್ನ ಪಕ್ಷಿಗಳ ಬಗ್ಗೆ ತಿಳಿಸಿದ್ದಾರೆ. ತಾವು ನೋಡಿದ ವಿಶೇಷ ಪಕ್ಷಿಗಳ ಸಂಪೂರ್ಣ ಮಾಹಿತಿ ನೀಡುವ ಮೂಲಕ ಓದನ್ನು ಸುಲಭವಾಗಿಸಿದ್ದಾರೆ.
ಒಂದು ವಿಶೇಷ ಅನುಭವ ನೀಡುವ ಒಂದೊಳ್ಳೆ ಪುಸ್ತಕ. ಇದು ಲೇಖಕರ ಮೊದಲ ಕೃತಿ ಎನಿಸುವುದಿಲ್ಲ..ಭಾಷೆಯ ಬಳಕೆ ಬರಹದ ಶೈಲಿ ಮನಸ್ಸನ್ನು ಚಂಚಲವಾಗದಂತೆ ಹಿಡಿದಿಡುತ್ತದೆ. ಇನಷ್ಟು ಕೃತಿಗಳು ನಿಮ್ಮಿಂದ Naveena Krishna Bhat ಬರಲಿ ಓದಲು ನಾವು ಕಾತುರರಾಗಿದ್ದೇವೆ.
- ಆಶ್ರಿತ ಕಿರಣ್
