ಅದೋ ಮತ್ತೊಂದು ಪುಟದಲ್ಲಿ ಅವನೇ ಕೊಟ್ಟಿದ್ದ ನವಿಲುಗರಿ ಇದೀಗ ಸಿಕ್ಕೇ ಬಿಟ್ಟಿತು… ಕವಿಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನಿರ್ದಯ ನಡು ಹಗಲಿನ
ನೀರವ ಮೌನದ್ದು
ರಣಭೀಕರ ಏಕಾಂತ
ಸರಿದು ಸವೆದು ಕೈ ಜಾರುತ್ತಿರುವ
ಈ ಹರಯದ್ದು
ಬಗೆಹರಿಯದ ಬಗೆಬಗೆಯ ವೃತ್ತಾಂತ
ಅರ್ಧಂಬರ್ಧ ಬರೆದ ಕವಿತೆ
ಗರಿಗೆದರಿ ಹಾರಲಾಗದೆ
ದನಿ ತೆಗೆದು ಹಾಡಲಾರದೆ
ಹಳೇ ಡೈರಿಯ ನಡು ಪುಟಗಳಲ್ಲೆಲ್ಲೋ
ಕಾಲು ಮುರಿದ ಹಕ್ಕಿಯಂತೆ
ನರಳಾಡುತ್ತಾ ಮೊರೆಯಿಡುತ್ತಿದೆ
ಕಾಲೇಜಿನ ಕಾರಿಡಾರುಗಳಲ್ಲಿ
ಎದೆ ಇರಿಯುತ್ತಿದ್ದ ನೋಟ
ವಿಳಾಸ ಕಳೆದುಕೊಂಡು ಎದೆಯ ಉರಿಸುತ್ತಿದೆ
ಕಾಲನ ಮದ್ದಿಗೆ ಗಾಳಿ ಬೀಸಣಿಗೆ
ಬೀಸುತ್ತಿದೆಯಾದರೂ
ಮಲ್ಲಿಗೆಯ ಗಂಧ ಅದ್ಯಾಕೋ ಬೇಲಿ ದಾಟುತ್ತಿಲ್ಲ
ಅಲ್ಲಲ್ಲಿ ಬಚ್ಚಿಟ್ಟಿದ್ದ ಕನಸಿನ
ಗುರುತು ಫಲಕಗಳ ಮೇಲೆ
ಸೊಂಪಾದ ಗರಿಕೆ ಹುಲ್ಲು
ಮೂಲೆಯಲ್ಲಿ ಪೇರಿಸಿಟ್ಟ
ಹೃದಯ ವೀಣೆಯ
ತಲೆಯ ಮೇಲೆ ಕುಂತ ಜೇಡರ ಬಲೆ
ಅದೋ ಮತ್ತೊಂದು ಪುಟದಲ್ಲಿ
ಅವನೇ ಕೊಟ್ಟಿದ್ದ ನವಿಲುಗರಿ
ಇದೀಗ ಸಿಕ್ಕೇ ಬಿಟ್ಟಿತು
ಅದೇ ಬಣ್ಣ ಅದೇ ಹೊಳಪು
ಮರಿ ನನ್ನರಿವಿಗೆ ಬಾರದಂತೆ
ಹಾರಿ ಹೋಗಿರಬಹುದೇ?
- ಸುಮತಿ ಕೃಷ್ಣಮೂರ್ತಿ
