‘ಬೆನಾಲಿಮ್’ ಕೃತಿ ಪರಿಚಯ : ಉಲ್ಲಾಸಿನಿ ಮಡಿಕೇರಿ

ಲೇಖಕರಾದ ಸಂತೋಷ್ ಮೆಹಂದಳೆ ಅವರ ‘ಬೆನಾಲಿಮ್’ ಅವರ ಕೃತಿಯ ಕುರಿತು ಉಲ್ಲಾಸಿನಿ ಮಡಿಕೇರಿ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ….

●’ ಮನುಷ್ಯನ ದೇಹದ ಜೊತೆಗೆ ಹೊಡೆದಾಡುವುದಕ್ಕಿಂತ ಅವನ ಭಾವನೆಗಳ ಜೊತೆಗೆ ಸಮೀಕರಿಕೊಂಡವನು ಗೆಲ್ಲುತ್ತಾನೆ ‘

●’ದುಡ್ಡು ಕೊಡೊ ದಮ್ಮು ಬೇರಾವುದೂ ಕೊಡುವುದಿಲ್ಲ ‘

●’ಅಪಾರ್ಥವಾಗದಂತೆ ಒಲವನ್ನು ವಿವರಿಸುವುದು ಹೇಗೆ? ‘

●’ಹಳೆಯ ಮನಸ್ಸುಗಳ ಕೋವೆಗಳನ್ನು ಇಣುಕುವುದು ಸಾಧ್ಯವಿಲ್ಲ ‘

●”ಎದೆಯೊಳಗಿನ ಅಗೋಚರ ಒಂಟಿತನಕ್ಕೆ ಜೊತೆಯಾದವನು ನೀನು, ನಿನ್ನೊಳಗೆ ಕರಗಿ ಮೈಯ ಕಸುವನ್ನಷ್ಟೇ ಕಳೆದುಕೊಂಡಿದ್ದರೆ, ಸುರತ ಮುಗಿದ ಮೇಲೆ ಮಗ್ಗಲು ಬದಲಿಸಿದಷ್ಟೇ ಸಲೀಸಾಗಿರುತ್ತಿತ್ತು ಸುಪನಾತಿ ಬದುಕು. ಆದರೆ ಅದ್ಯಾವುದೋ ಮನಸಿನ ಭಾರವನ್ನೂ ಇಳಿಸಿಕೊಂಡಿದ್ದೇನೆ ಗೆಳೆಯ! ಅದಕ್ಕೇ ಮನಸ್ಸು ಮಗ್ಗಲು ಬದಲಾಯಿಸುತ್ತಿಲ್ಲ. ಮತ್ತೆ ಮತ್ತೆ ನಿನ್ನೊಲವಿನ ನಿಯತ್ತಿಗೇ ಸುತ್ತಿಕೊಳ್ಳುತ್ತಿದ್ದೇನೆ. ಹಾಗೆಂದು ಜೀವಮಾನವಿಡೀ ಇದ್ದು ಬಿಡುತ್ತೇನೆ ”

●ಭೇಟಿ ಹೆಚ್ಚಾದ್ರೆ ಸಲುಗೆಯಾಗುತ್ತೆ, ಸಲುಗೆ ಹೆಚ್ಚಾದ್ರೆ ಆಪ್ತತೆ ಮೂಡುತ್ತೆ, ಆಪ್ತತೆಯಲ್ಲಿ ಕಾಳಜಿ ಇದ್ರೆ ಪ್ರೇಮವೋ ಮತ್ತೊಂದೊ ಹೆಸರಿಲ್ಲದ ಆದ್ರೆ ಬೇಕೆನಿಸುವ ಆಪ್ತಭಾವದ ಬಂಧ ಮೊಳಕೆಯೊಡೆಯುತ್ತದೆ’

●’ಅಷ್ಟಕ್ಕೂ ಆಪ್ತ ಬೆಚ್ಚನೆಯ ಭಾವವೊಂದು ಅನೈತಿಕ ಯಾಕಾಗುತ್ತದೆ?’

●’ಒಲವಂದ್ರೆ ಇಷ್ಟೇ ನೋಡು ದೊರೆ, ನನ್ನವನೆಂಬ ಖಾಸಗಿತನದ ಸಂಭ್ರಮ’

●ಗಂಡನೆಂಬುವವನ ಜೊತೆಗೆ ಏಗಬೇಕಾದ ಪರಿಸ್ಥಿತಿಯಲ್ಲಿ ಕಮರಿದ ಕನಸುಗಳಿಗೆ ನೀನು ತುಸು ಪನ್ನೀರು ಚಿಮುಕಿಸಿದ್ದೆ ಗೆಳೆಯ… ಎಂಬ ಬೆಚ್ಚನೆಯ ಭಾವವದು ‘

●ಹೆಣ್ಣಿಗೆ ಮೌನ ಮತ್ತು ಮೈಗಿಂತಲೂ ಮೊದ್ಲು ಮಾತು ಬೇಕು, ಅದ್ರಲ್ಲಿ ಪ್ರೀತಿಯ ಹನಿ ಜಿನುಗುತ್ತಿರಬೇಕು.

●” ಹೆಣ್ಣು ಭಾವುಕತೆಗೆ ಕಟ್ಟು ಬೀಳುತ್ತಾಳೆ, ಅವಳಿಗೆ ಪ್ರೀತಿ ಬೇಕು, ಕೇವಲ ಬೆಚ್ಚನೆಯ, ಆಹ್ಲಾದ ಹುಟ್ಟಿಸೋ ಮನಕ್ಕೆ ಹಿತೈವೆನ್ನಿಸೋ ರೊಮ್ಯಾಂಟಿಕ್ ಆದ ಮನಸ್ಥಿತಿ, ಅದೇ ತರಹದ ಪ್ರತಿ ಸ್ಪಂದನೆ ಗಂಡಿನಿಂದ ಬಯಸುತ್ತಾಳೆ.

ಹೀಗೆ ಹೆಕ್ಕಿ ಬರೆಯಬಲ್ಲ ನನ್ನ ಓದುಗ ಸ್ನೇಹಿತೆ ಉಲ್ಲಾಸಿನಿ ಮಡಿಕೇರಿ ಬೆನಾಲಿಮ್ ಬಗ್ಗೆ ಬರೆದದ್ದು ಇದು. ನನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಪುಸ್ತಕದ ಮುಖಪುಟ ನೋಡಿದ ನನ್ನ ಚಿತ್ರ ಕಲಾವಿದರಾದ ಮಿತ್ರರೊಬ್ಬರು ‘ ಇದು ಸಿನಿಮಾ ಪೋಸ್ಟರ?’ ಅಂತ ಕೇಳಿ ಆಕರ್ಷಕ ಮುಖ ಪುಟಕ್ಕೆ ಮೆಚ್ಚುಗೆ ಹೇಳಿದರು. ಎರಡು ರಾತ್ರಿಗಳಲ್ಲಿ ಓದಿ ಮುಗಿಸಿ ಪುಸ್ತಕ ಪಕ್ಕಕ್ಕಿಟ್ಟ ನಂತರವೂ ಬೆನಾಲಿಮ್ ನ ಮೊರೆತ ಕಾಡಿದ್ದು ಅಪಾರ.

ಸರಿಯಾಗಿ ಕೆಲಸವಿಲ್ಲದೆ ಮನೆಯಲ್ಲೇ ಲಾಕ್ ಆದ ಸಮಯಕ್ಕೆ ಸಿಕ್ಕವಳೇ ಈ ಬೆನಾಲಿಮ್. ಲೇಖಕರೇ ಹೇಳುವಂತೆ ನಿತ್ಯ ಮದುವಣಗಿತ್ತಿ. ನಶೆಯ ಲೋಕ ಗೋವಾಗೆ ಜನ ಹೋಗುವುದೇ ಮಜಾ ಉಡಾಯಿಸೋಕೆ ಅನ್ನೋ ಮಾತಿದೆ. ನಾನು ಈವರೆಗೂ ಗೋವೆಗೆ ಕಾಲಿಟ್ಟಿಲ್ಲ. ಆದರೆ ಈ ಪುಸ್ತಕ ಓದುತ್ತಾ ಓದುತ್ತಾ ನಂಗೂ ಒಂದ್ಸಲ ಗೋವಾಗೆ ಹೋಗ್ಬೇಕು, ಬೆನಾಲಿಮ್ ನ ನೊರೆ ನೊರೆಯಂತಹ ಅಲೆಗಳ ತೆಕ್ಕೆಯಲ್ಲಿ ಬೀಳಬೇಕು, ಸಕ್ಕರೆಯಂಥಾ ಮರಳ ಮಡಿಲಲ್ಲಿ ಅಂಗಾತ ಮಲಗಿ ನಕ್ಷತ್ರ ಎಣಿಸ್ಬೇಕು ಅನ್ಸಿದ್ದು ಸುಳ್ಳಲ್ಲ. ಇಷ್ಟೆಲ್ಲಾ ಆಸೆ ಹುಟ್ಟುವಷ್ಟು ಆಕರ್ಷಕವಾಗಿ ಬೀಚಿನ ಸೌಂದರ್ಯ ವರ್ಣನೆಯಾಗಿದೆ. ಆದರೆ “ಬೆನಾಲಿಮ್ ಗೆ ಎಂದೂ ತೊಡೆ, ಸೊಂಟ, ಹೊಕ್ಕುಳು ತೋರಿಸಿ ಓಡಾಡದ ಹೆಣ್ಣುಮಕ್ಕಳು ಗೋವೆಯ ರಸ್ತೆಗೆ ಕಾಲಿಡುವ ಮುನ್ನವೇ ಅರೆಬೆತ್ತಲು ದಿರಿಸಿಗೆ ಸಿದ್ಧವಾಗಿಸೋ ತಾಕತ್ತಿದೆ” ಅನ್ನೋ ವಾಕ್ಯವೇಕೋ ನಂಗೆ ಸಮ್ಮತವಾಗಲಿಲ್ಲ. ಆದ್ರೆ ಓದಿನ ಓಘ ಮಾತ್ರ ಅಮೋಘವಾಗಿ ಮುಂದುವರೆಯುತ್ತದೆ. ಹಾಲಿಗಿಂತ ಹಾಲ್ಕೋಹಾಲು ಸಮೃದ್ಧ, ಕುಡಿಯುವ ನೀರಿಗಿಂತ ಹೆಚ್ಚು ಅಲ್ಲಿಯ ಬಾಟಲ್, ಹಾಲಿನ ಪ್ಯಾಕೆಟ್ಗಿಂತ ರಬ್ಬರಿನ ಕಾಂಡೋಮ್ ಹೆಚ್ಚು ಬಿಕರಿಯಾಗುತ್ತೆ ಅನ್ನೋ ಸಾಲುಗಳು ಗೋವೆಯ ರಾತ್ರಿಯ ಜೀವನ ಮತ್ತದು ಅಪ್ಪಟ ನಶೆಯ ಲೋಕ ಎಂಬುದನ್ನು ದೃಢಪಡಿಸುತ್ತದೆ.

ಗೋವಾದ ಪ್ರಖ್ಯಾತ ಬೀಚ್ ಒಂದರ ಹೆಸರಿಟ್ಟು ಬರೆದ ಕಥೆಯ ಆರಂಭವಾಗುವುದೇ ಭಯಾನಕ ಕೊಲೆಯೊಂದರೊಂದಿಗೆ. ರಾಜ್ಯದ ಖ್ಯಾತ ಉದ್ಯಮಿಯ ಮಗನ ಶವ ದಾಬೋಲಿಮ್ ನ
ರಸ್ತೆಯಲ್ಲಿ ಶವವಾಗಿ ಸಿಕ್ಕುವ ಮೂಲಕ ಕಥಾ ಹಂದರ ಮುಂದುವರಿಯುತ್ತದೆ. ಹತ್ಯೆ ಮಾಡಿರುವ ರೀತಿ ಮತ್ತದರ ವಿವರಣೆ ಇದೆಯಲ್ಲ ಅದಂತೂ ಮೈ ಮೇಲೆ ಮುಳ್ಳುಗಳನ್ನೇಳಿಸಿ ಹೌಹಾರುವಂತೆ ಮಾಡುತ್ತದೆ. ಆರ್ಟಿಫಿಷಿಯಲ್ ಇಂಪೋಟೆನ್ಸಿ ಮುಖಾಂತರ ಪುರುಷತ್ವ ಹರಣ ಮಾಡಿ ಕೊಂದಿರುವ ವಿಧಾನ ರೋಚಕವೆನಿಸಿದರೂ, ಯಾವುದೋ ಹೆಣ್ಣಿನ ಮೇಲಾದ ದೌರ್ಜನ್ಯದ ಸೇಡಿಗಾಗಿ ಆದ ಕೊಲೆ ಎಂಬುದರ ಗುಟ್ಟು ಬಿಟ್ಟು ಕೊಡುತ್ತದೆಯಾದರೂ ಆ ಹೆಣ್ಣು ಯಾರು ಮತ್ತು ಆಕೆಗಾಗಿ ಈತನನ್ನು ಕೊಂದವರಾರು ಎಂಬ ಕುತೂಹಲವನ್ನು ಪುಸ್ತಕದ ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಲೇಖಕರು ಯಶಸ್ವಿಯಾಗುತ್ತಾರೆ. ಇನ್ನು ಕೊಲ್ಲುವ ವಿಷಯಕ್ಕೆ ಬಂದರೆ ಸೇಡು ತೀರಿಸಿಕೊಂಡ ಪರಿ ಮಾತ್ರ ಬೆಚ್ಚಿ ಬೀಳಿಸುತ್ತದೆ. ” ಬಯಕೆಗಳ ಹಾರ್ಮೋನು ಮೆದುಳಿನಲ್ಲಿ ಕೆಲಸ ಮಾಡುತ್ತದೆಯಾದರೂ ದೇಹ ಸ್ಪಂದಿಸದೆ ಅವನನ್ನು ಕೆಡವಿ ಹಾಕುತ್ತದೆ” ಎಂಬ ಸಾಲೇ ಸಾಕು ಅದರ ಕ್ರೌರ್ಯ ವಿವರಿಸಲು. ಕಿವಿಯ ಹಿಂಬದಿಯಲ್ಲೊಂದು ಚಿಕ್ಕ ರಂದ್ರ ಮಾಡಿ ಅದರ ಮೂಲಕ ಇಷ್ಟಿಷ್ಟೇ ರಕ್ತ ಹೊರ ಹೋಗುವಂತೆ ಮಾಡಿ ಸಾಯುವ ಹಂತಕ್ಕೆ ತಲುಪಿಸಿ, ಮತ್ತೆ ಸಾಯದಂತೆ ರಕ್ತಸ್ರಾವ ನಿಲ್ಲಿಸಿ ಇಷ್ಟಿಷ್ಟೇ ನರಕ ದರ್ಶನ ಮಾಡಿಸಿ ಹತ್ಯೆಗೈದ ವಿವರ ಓದುತ್ತಿದ್ದರೆ ಹಣೆಯಲ್ಲಿ ಬೆವರೊಡೆಯುತ್ತದೆ. ಆಗಿರುವ ಆಪರೇಷನ್ ವಿವರಣೆ ಅಗತ್ಯ ವೈದ್ಯಕೀಯ ತಜ್ಞರಿಂದ ಮಾಹಿತಿ ಪಡೆದೇ ಬರೆದಿರಬಹುದೇ ಹೊರತು ಕಲ್ಪನೆಯಂತೂ ಖಂಡಿತ ಅಲ್ಲ. ಹಾಗೆಯೇ ಇನ್ನೊಂದು ಕೊಲೆಯ ವಿಧಾನ ರಿವಾಲ್ವಿಂಗ್ ರಿವಾಲ್ವರ್ ನ ಕಲ್ಪನೆ ಮತ್ತು ಅದನ್ನು ಅನಾವರಣಗೊಳಿಸುವ ವೈಖರಿ ಅದ್ಭುತ.

ಬಾರ್ ಸಪ್ಲೈಯರ್ ಆಗಿ ಬಂದ ಸಾಮಾನ್ಯ ಹುಡುಗನೊಬ್ಬ ಭೂಗತ ಲೋಕದ ದೊರೆಯಾಗಿ ಬೆಳೆದ ಪರಿ, ಪೊಲೀಸರಿಂದ ತಲೆ ತಪ್ಪಿಸಿಕೊಳ್ಳುವ ಸಲುವಾಗಿ ಬೆನಾಲಿಮ್ ಗೆ ಕಾಲಿಟ್ಟವನು ಅದ್ಭುತ ಚೆಲುವೆ ಡಯಾನಾಳ ಹೃದಯದರಸನೂ ಆಗುತ್ತಾನೆ. ಆನಂತರ ನಡೆಯೋದೆಲ್ಲ ಕೇವಲ ಮಿಲನ ಮಹೋತ್ಸವ. ಅದನ್ನು ಮೆಹಂದಳೆಯವರು ‘ದೇವರೂಪಿ ಗಂಧರ್ವ ಜೋಡಿಯ ದಾಂಪತ್ಯ ‘ ಎನ್ನುತ್ತಾರೆ. ನಾಯಕ ನಾಯಕಿಯರ ಸ್ವಗತದೊಂದಿಗೆ ಸಾಗುವ ಕಥೆ ಬಲು ರೋಚಕ ಮಾತ್ರವಲ್ಲ ರೊಮ್ಯಾಂಟಿಕ್ ಕೂಡ. ಅಪ್ರತಿಮ ಚೆಲುವೆ ಡಯಾನ ಮತ್ತು ಆ ಅಗಾಧ ಸೌಂದರ್ಯದೊಡೆಯ ದೊರೆಯ ನವಿರು ಪ್ರೇಮದ ಘಮಲು ಇಡೀ ಕಾದಂಬರಿಯುದ್ದಕ್ಕೂ ಹರಡಿ ನಿಲ್ಲುತ್ತದೆ. ಡಯಾನಳ ಅಂಗವರ್ಣನೆ ಮತ್ತು ದೊರೆಯ ಗಂಡಸುತನದ ವಿವರಣೆ ಅಲ್ಲಲ್ಲಿ ಪುನರಾವರ್ತನೆಯಾಗಿದೆ ಅನ್ನಿಸುವುದರ ಜೊತೆಗೆ ಸ್ವಪ್ರಶಂಸೆ ತುಸು ಹೆಚ್ಚಾಗಿಯೇ ಇದೆ. ಶೃಂಗಾರ ತುಸು ಜಾಸ್ತಿಯೇ ಅನಿಸಿದರೂ (ಇದು ನನ್ನ ಅನಿಸಿಕೆ ಮಾತ್ರ! ಸಸ್ಪೆನ್ಸ್, ಥ್ರಿಲ್ಲರ್, ಕಥೆಗಳಿಗೆ ಇದು ಅಗತ್ಯವೋ ಅನಿವಾರ್ಯವೋ ಅರಿಯೆ) ಅಶ್ಲೀಲತೆಯ ಅಣುವೂ ನುಸುಳದಂತೆ ಬರೆದಿರೋದು ಲೇಖಕರ ಹೆಗ್ಗಳಿಗೆ. ಇಡೀ ಬೆನಾಲಿಮ್ ತೀರವನ್ನು ಮೋಹಕ ಮೋಡಿಯ ಚೆಲುವೆ ಎಂಬಂತೆ ಚಿತ್ರಿಸಿರುವ ಪರಿ ಅನನ್ಯ.

ಕಥೆ ಮೂರು ಹಂತದಲ್ಲಿ ಮುಂದುವರೆಯುತ್ತದೆ, ಒಂದು ಡಯಾನಾಳ ಸ್ವಗತ, ಮತ್ತೊಂದು ದೊರೆಯ ಹಿನ್ನೆಲೆಯ ವಿವರಗಳ ಸ್ವಗತ, ಮತ್ತೊಂದು ಕೊಲೆಯ ತನಿಖಾಧಿಕಾರಿ ಕರ್ನಲ್ ಉರಿಸಾಗಿಯ ಕಾರ್ಯ ವೈಖರಿ. ಇಡೀ ಗೋವೆಯನ್ನು ಭೋಗೋಳಿಕವಾಗಿ ಅಚ್ಚು ಕಟ್ಟಾಗಿ ಗೂಗಲ್ ನಂತೆ ಪರಿಚಯ ಮಾಡಿದ ಪರಿಗೊಂದು ಸಲಾಂ ಸಲ್ಲಲೇ ಬೇಕು. ಅಲ್ಲಿಯ ಚರ್ಚು, ಬೀಚು, ಏರ್ ಪೋರ್ಟ್, ಅಲ್ಲಿಯ ಜನರ ಆಚರಣೆ, ಆಹಾರ ಪದ್ಧತಿ, ರಸ್ತೆಗಳ ಗಲ್ಲಿಗಲ್ಲಿಗಳು ತಿರುವುಗಳು, ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು, ತೊಡುವ ದಿರಿಸು, ಜೀವನ ಶೈಲಿಗಳ ಮೇಲೂ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇದನ್ನೆಲ್ಲಾ ಓದುತ್ತಿರುವಾಗ ಕನಸಲ್ಲೂ ಗೋವೆಯನ್ನು ನೋಡದ ನನ್ನಂಥವರಿಗೂ ಪ್ರತಿ ದೃಶ್ಯವೂ ಕಣ್ಮುಂದೆ ಸಿನಿಮಾ ರೀಲುಗಳಂತೆ ಪ್ರತಿ ಚಿತ್ರವೂ ಗಿರಕಿ ಹೊಡೆಯುತ್ತಿತ್ತು. ಇನ್ನು ವಿದೇಶಗಳಲ್ಲಿ ನಡೆಯುವ ಬ್ಲೂ ಫಿಲಂ ಚಿತ್ರೀಕರಣ, ಅದನ್ನು ನೇರವಾಗಿ ಅಂದ್ರೆ ಲೈವ್ ಆಗಿ ನೋಡಲು ಹಪಹಪಿಸುವ ಕಾಮಾಂಧರ ರಾಕ್ಷಸತನ, ಅದಕ್ಕಾಗಿ ಚೆಲ್ಲುವ ಹಣದ ರಾಶಿಗಳು ಅಚ್ಚರಿಯ ಕೂಪಕ್ಕೆ ದೂಡುತ್ತವೆ. ಭೂಗತ ಜಗತ್ತಿನ ಕ್ರೌರ್ಯ ಓದಿ ಎದೆ ನಡುಗಿದರೆ , ಕತ್ತಲ ಕೂಪದ ಪಾಪದ ಕಥೆಗಳು ಜೀವ ಝಲ್ ಎನಿಸುತ್ತದೆ.

ಸುಧೀರ್ಘ ಹದಿಮೂರು ವರ್ಷಗಳ ಅಪ್ರತಿಮ ಪ್ರೇಮವೊಂದು ಕ್ಷುಲ್ಲಕ ಕಾರಣಕ್ಕೆ ಸುರುಟಿ ಹೋಗೋದು ವಿಷಾದನೀಯ. ಸಣ್ಣ ಅನುಮಾನದ ಚುಕ್ಕೆಯೊಂದು ಇಬ್ಬರ ನಡುವೆ ಅಗಾಧ ಅಂತರವನ್ನು ಹುಟ್ಟಿಸಿಬಿಡುತ್ತದೆ. ಮೂರೂವರೇ ವರ್ಷಗಳ ನಿರಂತರ ವಿರಹದುರಿಗೆ ಸಿಲುಕಿ ತತ್ತರಿಸಿದ ಇಬ್ಬರೂ, ಸಾಕಷ್ಟು ಆತ್ಮಾವಲೋಕನ ಮಾಡಿಕೊಂಡು ಮತ್ತೆ ಒಂದಾಗಬೇಕೆಂಬ ಧಾವಂತದಲ್ಲಿ ಒಡಲ ತುಂಬ ಪ್ರೇಮದ ಪನ್ನೀರು ಚಿಮುಕಿಸಿಕೊಂಡು ಬರುತ್ತಿರುವಾಗಲೇ ಕಾಮುಕರ ಸಂಚಿಗೆ ಬಲಿಯಾಗುತ್ತಾಳೆ ಡಯಾನ. ಅತಿಯಾದ ಟ್ರಾಫಿಕ್ ಇಂದಾಗಿ ದೊರೆ ಬರುವುದು ತಡವಾದಾಗ ಡಯಾನ ಬೇರೆಯೇ ತಂತ್ರದಿಂದ ಶೀಲಾ ರಕ್ಷಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಳಾದರೂ ಜೀವನವೇ ಮುಗಿದು ಹೋಗುತ್ತದೆ. ಹೃದಯವೇ ಚೂರಾದರೂ ಚೇತರಿಸಿಕೊಂಡು ಇಂಚಿಂಚಾಗಿ ಸೇಡು ತೀರಿಸಿಕೊಳ್ಳುವ ಪರಿಯನ್ನು ಓದಿಯೇ ತಿಳಿಯಬೇಕಷ್ಟೆ.

ತುಂಬಾ ಪ್ರಭಾವ ಬೀರುವ ಪಾತ್ರ ಮತ್ತು ಮನಕ್ಕೆ ಅತ್ಯಂತ ಆಪ್ತ ಅನಿಸುವುದು ಗೆಳತಿ ಎಲಿನಾಳದು. ಸ್ನೇಹದ ತಾಕತ್ತೇ ಅಂಥಾದ್ದು. ಪ್ರತಿ ನಲಿವು, ಪ್ರತಿ ಸಂತಸದಲ್ಲೂ ಜೊತೆ ಇದ್ದು ತಪ್ಪಾದಾಗ ತಿದ್ದಿ ಗೆಳೆಯರ ಸಮಾಗಮಕ್ಕೆ ಅಣಿ ಮಾಡುವ ಎಲಿನ ತುಂಬಾ ಕಾಡುತ್ತಾಳೆ. ಕೊನೆಗೆ ಗೆಳತಿಗಾದ ಅನ್ಯಾಯಕ್ಕೆ ಸೇಡಿನಲ್ಲೂ ಜೊತೆಗೂಡಿ ದೊರೆಯ ಪ್ರತಿ ಕೆಲಸಕ್ಕೂ ಬೆನ್ನೆಲುಬಾಗಿ ನಿಂತು ಪೊರೆಯುತ್ತಾಳೆ.

ದೊರೆಯನ್ನು ಹಿಡಿಯಬೇಕೆಂದು ಅಷ್ಟೆಲ್ಲಾ ಎಚ್ಚರವಹಿಸಿದ ಉರಿಸಾಗಿ ಒಂದು ವಿಷಯದಲ್ಲಿ ಮಾತ್ರ ಎಡವುತ್ತಾರೆ. ಮೂರೂ ಕಡೆ ಸುಭದ್ರಾ ಕೋಟೆ ಕಟ್ಟಿದ್ದ ಉರಿಸಾಗಿ ನಾಲ್ಕನೇ ದಿಕ್ಕಾದ ಸಮುದ್ರದ ಬಗ್ಗೆ ಮರೆತರಾ? ಅಬ್ಬರಿಸೋ ಕಡಲ ಅಲೆಗಳ ನಡುವೆಯೂ ಲೀಲಾಜಾಲವಾಗಿ ಸರ್ಫಿಂಗ್ ಮಾಡೋ ನುರಿತ ಈಜುಗಾರ ಎಂಬ ಮಾಹಿತಿಯೇ ಗೊತ್ತಿರಲಿಲ್ಲ. ಯಾಕೆಂದರೆ ದೊರೆ ಅದನ್ನು ಮೊದಲೇ ಡಿಲೀಟ್ ಮಾಡಿರುತ್ತಾನೆ.

ಪುಸ್ತಕದ ಮತ್ತೊಂದು ಪ್ರಮುಖ ಅಂಶ, ಅಲ್ಲಲ್ಲಿ ಕಾಣ ಸಿಗುವ ಒಲವಧಾರೆ. ಇಡೀ ಕಾದಂಬರಿಯ ತುಂಬಾ ಆಗಾಗ ಅರಳುವ ಕವನದ ಘಮಲು ಮೈಮನವನ್ನೆಲ್ಲಾ ಸೂರೆಗೊಳ್ಳುತ್ತದೆ. ಜೊತೆಗೆ ಮನಸ್ಸಿಗೆ ತುಂಬಾ ಆಪ್ತ ಅನಿಸೋ ಕೆಲವು ಸಾಲುಗಳು ಮತ್ತು ಪದಗಳು.

ಜೊತೆಗೆ ನಮ್ಮ ಲೇಖಕರು “ಓದುಗರಿಗೆ ಪುಸ್ತಕ ಹಿಡಿಸದಿದ್ದರೆ ಹಣ ಹಿಂದಿರುಗಿಸುತ್ತೇನೆ ಎಂಬ ಸವಾಲನ್ನು ಹಾಕುತ್ತಾರೆ. ಓದುಗರಿಗೆ ಇಷ್ಟವಾಗದ್ದನ್ನು ಕೊಡಲಾರೆ ಎಂಬುದವರ ಸಾತ್ವಿಕ ಅಹಂಕಾರ ಎಂದು ನಾನಂದುಕೊಳ್ಳುತ್ತೇನೆ. ಒಟ್ಟಾರೆ ಇಡೀ ಪುಸ್ತಕ ತುಂಬಾ ರುಚಿ ಮತ್ತು ಶುಚಿಯಾದ ಫುಲ್ ಮೀಲ್ಸ್! ಕೊಟ್ಟ ಇನ್ನೊರೈವತ್ತು ರೂಪಾಯಿಗೆ ಪೈಸಾ ವಸೂಲ್!!
ಓದು ನನ್ನ ನಿರಂತರ ಹಸಿವು. ನಾನು ಎಲ್ಲಾ ಲೇಖಕರ ಎಲ್ಲಾ ಪ್ರಾಕಾರದ ಪುಸ್ತಕಗಳನ್ನೂ ಓದುತ್ತೇನೆ. ಒಬ್ಬೊಬ್ಬರ ಬರಹ ಒಂದೊಂದು ಕಾರಣಕ್ಕೆ ಇಷ್ಟವಾಗುತ್ತದೆ. ರವಿ ಬೆಳಗೆರೆಯವರ ಬರಹದ ನಂತರ ನಾನು ತುಂಬಾ ಇಷ್ಟಪಡುವ ಲೇಖಕರೆಂದರೆ ಅದು ಸಂತೋಷ್ ಮೆಹಂದಳೆ ಮಾತ್ರ.

ಒಂದೊಳ್ಳೆ ಪುಸ್ತಕ ಕೊಡ ಮಾಡಿದ್ದಕ್ಕೆ ಧನ್ಯವಾದಗಳು ಹೀರೋ


  •  ಉಲ್ಲಾಸಿನಿ ಮಡಿಕೇರಿ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading