ಮಹಿಳೆಯ ಗರ್ಭಾಶಯ ಒಪ್ಪಿಗೆಯಿಲ್ಲದೆ ತಗೆಯುವಂತಿಲ್ಲ…

ಸರ್ವೋಚ್ಚ ನ್ಯಾಯಾಲಯವು ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ‘ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ನೀಡುತ್ತಾರೆ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರಾದ ಅಂಜಲಿ ರಾಮಣ್ಣ ಅವರು, ತಪ್ಪದೆ ಮುಂದೆ ಓದಿ…

ಕೋರ್ಟಿನ ದಾಖಲೆಯೊಂದಕ್ಕೆ ತುರ್ತಾಗಿ ರೇವತಿಯ ಸಹಿ ಬೇಕಾಗಿತ್ತು. ಇಂದು ನಾಳೆ ಎನ್ನುತ್ತಲೇ ಎರಡು ತಿಂಗಳಾದರೂ ಬರದವಳಿಗೆ ಗಟ್ಟಿಯಾಗಿ ಹೇಳೋಣವೆನ್ನಿಸಿ ಫೋನ್ ಮಾಡಿದಾಗ ಅವಳೆಂದಳು ‘ಒಂದೂವರೆ ತಿಂಗಳಿನಿಂದ ಮುಟ್ಟು ನಿಲ್ಲುತ್ತಲೇ ಇಲ್ಲ ಹಾಗಾಗಿ ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ’. ಸುಸ್ತಾಗಿ ಮಲಗಿ ಬಿಟ್ಟಿದ್ದಳು. ಅವಳತ್ತೆ ಮನೆ ಔಷಧಿಯನ್ನು ಮಾಡಿದರೂ ಸರಿಯಾಗುತ್ತಿಲ್ಲ. ಡಾಕ್ಟರ್ ಬಳಿ ತೋರಿಸಲು ಹೇಳಿದರೆ ‘ಅತ್ತೆ ಬಿಡುವುದಿಲ್ಲ. ನೆಂಟರ ಹುಡುಗಿಯೊಬ್ಬಳಿಗೆ ಹೊಟ್ಟೆ ನೋವು ಅಂತ ಹೋಗಿದ್ದಕ್ಕೆ ಗರ್ಭಾಶಯವನ್ನೇ ತೆಗೆದುಬಿಟ್ಟರಂತೆ’ ಎಂದಳು. ಆಗತಾನೆ ನಲ್ವತ್ತಕ್ಕೆ ಹೊರಳಿದ್ದ ರತ್ನಾಳಿಗೂ DnC ಮಾಡಬೇಕು ಎಂದಿದ್ದ ಡಾಕ್ಟರ್ ಏಕಾಏಕಿ ಗರ್ಭಕೋಶವನ್ನು ತೆಗೆದು ಹಾಕಬೇಕೆಂದು ಹೇಳಿದಾಗ ಮನೆಯವರೆಲ್ಲಾ ಹೌಹಾರಿದ್ದರು. ಗರ್ಭಾಶಯವೆಂದರೆ ಕೇವಲ ಮಕ್ಕಳನ್ನು ಹೆರಲು ಇರುವ ಯಂತ್ರವಲ್ಲ. ಸ್ತ್ರೀಯ ಒಟ್ಟಾರೆ ಆರೋಗ್ಯವನ್ನು ಸಮತೋಲನದಲ್ಲಿಡಲು ಸಾಮಾನ್ಯ ಪರಿಸ್ಥಿತಿಯಲ್ಲಿ ಅವಶ್ಯಕವಾದ ಒಂದು ಅಂಗವೆಂದು ಎಲ್ಲರಿಗೂ ತಿಳಿದಿದೆ. ಸಾಲಾಗಿ ಹೆಣ್ಣು ಮಕ್ಕಳು ಹುಟ್ಟಿತು ಅಂತಲೋ, ಮುಟ್ಟು ಬಂದರೆ ಹೊಟ್ಟೆನೋವು ಕಿರಿಕಿರಿ ಕೆಲಸಕ್ಕೆ ರಜೆ ಹಾಕಲಾಗುವುದಿಲ್ಲ ಇಂತಹ ಹಲವಾರು ಕಾರಣಗಳಿಗೆ ಗರ್ಭಕೋಶವನ್ನೇ ತೆಗೆಸಿಕೊಂಡ ಮಹಿಳೆಯರು ಇದ್ದಾರೆ.

ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಯುವತಿಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಪಡೆದುಕೊಂಡ ಉದಾಹರಣೆಗಳಿವೆ. 2015ರಲ್ಲಿ ನಮ್ಮ ರಾಜ್ಯದಲ್ಲಿ ಅನಾವಶ್ಯಕವಾಗಿ ಮಾಹಿತಿಯನ್ನೂ ನೀಡದೆ ಗರ್ಭಾಶಯವನ್ನು ಕಿತ್ತು ಕೈಗಿಡುತ್ತಿದ್ದ ದಂಧೆ ನಡೆದದ್ದು ಮರೆಯುವ ಹಾಗಿಲ್ಲ. 2008ರಲ್ಲಿ ಸಮೀರಾ ಕೋಹ್ಲಿ Vs ಡಾ.ಪ್ರಭಾ ಮನ್ಚಂದಾ ಮತ್ತು ರಿಟ್ ದಾವೆ ಸಂಖ್ಯೆ 131/2013 ಡಾ. ನರೇಂದ್ರ ಗುಪ್ತ Vs ಭಾರತ ಸರ್ಕಾರ ಎನ್ನುವ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ‘ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ 21, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳಡಿಯಲ್ಲಿ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.

ಫೋಟೋ ಕೃಪೆ :google

ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು 1972 ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರೂಪಿಸಿರುವ ನಿಯಮಾವಳಿಗಳಿಗೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಮಂಡಳಿಯು ವೈದ್ಯರುಗಳಿಗೆ ನಿರ್ದೇಶನ ನೀಡಿದೆ. ಅದರ ಪ್ರಕಾರ ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, 1927 (ತಿದ್ದುಪಡಿ 1975) ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು 2002 ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವ ಸಂದರ್ಭ ಬಂದರೆ ಗರ್ಭಿಣಿಯ ಅಥವಾ ಆ ಹೆಂಗಸಿನ ಒಪ್ಪಿಗೆಯನ್ನು ನಿಚ್ಛಳ, ನಿಖರ, ಸ್ಪಷ್ಟ ಮತ್ತು ಲಿಖಿತ ರೂಪದಲ್ಲಿ ಪಡೆದಿರಬೇಕಿರುತ್ತದೆ. ಕೊನೆಯ ಘಳಿಗೆಯಲ್ಲಿ ಇಂತಹ ಪರಿಸ್ಥಿತಿ ಎದುರಾದರೂ ಸಹ ಆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳ ಗರ್ಭಾಶಯವನ್ನು ತೆಗೆಯುವುದು ಅಪರಾಧವಾಗಿರುತ್ತದೆ. ಮಹಿಳೆಯು 18 ವರ್ಷಕ್ಕೂ ಮೇಲ್ಪಟ್ಟವಳಾಗಿರಬೇಕು. ಬುದ್ಧಿಸ್ಥಿಮಿತವಾಗಿರಬೇಕು. ಯಾವುದೇ ಭಯ, ಒತ್ತಡ ಮತ್ತು ಆಮಿಷಕ್ಕೆ ಒಳಗಾಗಿ ಕೊಟ್ಟಿರಬಹುದಾದ ಒಪ್ಪಿಗೆಯನ್ನು ಕಾನೂನು ರೀತ್ಯದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ವೈದ್ಯರು ಶಿಕ್ಷಾರ್ಹ ಅಪರಾಧಿಯಾಗುತ್ತಾರೆ.

ಘನತೆಯುಳ್ಳ ಬಾಳು ಮತ್ತು ದೈಹಿಕ ಸಮಗ್ರತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ಮಹಿಳೆಯ ಒಪ್ಪಿಗೆಯಿಲ್ಲದೇ ವೈದ್ಯರುಗಳು, ಯಾವುದೇ ಆಪತ್ಕಾಲದಲ್ಲೂ ಉಲ್ಲಂಘಿಸುವಂತಿಲ್ಲ. ಅಪರಾಧಕ್ಕೆ 3 ರಿಂದ 10 ವರ್ಷಗಳ ಕಾಲದ ಕಠಿಣ ಜೈಲು ಶಿಕ್ಷೆ ಇದೆ. ಮಹಿಳೆಯೇ ಕೇಳಿಕೊಂಡಳು ಎನ್ನುವ ಕಾರಣವನ್ನೂ ಮಾನ್ಯ ಮಾಡಲಾಗುವುದಿಲ್ಲ. ಯಾವುದೇ ವೈದ್ಯರು ಮಹಿಳೆಯ ಗರ್ಭಾಶಯವನ್ನು ತೆಗೆಯಲು ವೈದ್ಯಕೀಯ ಮೇಲ್ವಿಚಾರಣ ಮಂಡಳಿಯಿಂದ ಲೈಸೆನ್ಸ್ ಹೊಂದಿರುವುದು ಕಡ್ಡಾಯ.


  • ಅಂಜಲಿ ರಾಮಣ್ಣ – ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading