ಇಲ್ಲಿ ತಣ್ಣಗೆ ಮಲಗಿದ್ದಾರೆ…ಮೆರೆದವರೂ ಮಣ್ಣಾಗಿದ್ದಾರೆ… ಎಲ್ಲಾ ತೊರೆದವರೂ ಮಣ್ಣಾಗಿದ್ದಾರೆ ಸಮತೆಯನು ಸಾರುತ್ತದೆ ಮಣ್ಣು…ಕಣ್ಣ ತೆರೆಸುತ್ತದೆ ಈ ಮಣ್ಣು…ಕವಿ ಸ್ವಾಮಿ ಮಹಾಮನೆ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…
ನನಗೇನು ಮಸಣಗಳು ಹೊಸದಲ್ಲ
ಹೂತು ಬಂದಿದ್ದೇನೆ ನನ್ನವರನೇಕರನ್ನು
ಅಜ್ಜಪಿರಿಯಜ್ಜರನ್ನು ಪಿಜ್ಜರನ್ನು
ಕಣ್ಣ ತೆರೆಯವ ಮುನ್ನವೇ ಕನಸಾದವರನ್ನು
ದೊಡ್ಡವರು ಚಿಕ್ಕವರು ಹೆಣ್ಣು ಗಂಡೆಂಬ
ಭೇದ ಭಾವವಲ್ಲೀ ಮಣ್ಣಿಗೆ
ತರತಮವಿಲ್ಲ ಮೇಲು ಕೀಳೆಂಬುವುದಿಲ್ಲ ಭುವಿಗೆ
ಸೋತು ಗೆದ್ದವರು.. ಗೆದ್ದು ಸೋತವರು
ಇಲ್ಲಿ ತಣ್ಣಗೆ ಮಲಗಿದ್ದಾರೆ
ಮೆರೆದವರೂ ಮಣ್ಣಾಗಿದ್ದಾರೆ
ಎಲ್ಲಾ ತೊರೆದವರೂ ಮಣ್ಣಾಗಿದ್ದಾರೆ ಸಮತೆಯನು ಸಾರುತ್ತದೆ ಮಣ್ಣು
ಕಣ್ಣ ತೆರೆಸುತ್ತದೆ ಈ ಮಣ್ಣು
ಆದರೂ ಕತ್ತಿ ಮಸೆಯುತ್ತೇವೆ
ಕೆಣಕುತ್ತೇವೆ.. ಸೆಣೆಸುತ್ತೇವೆ..
ಸಡ್ಡೊಡೆದು ತೊಡೆ ತಟ್ಟಿ ತಟ್ಟಿ
ಅಟ್ಟಹಾಸವಗೈದು
ಜಗ್ಗುಣಕಣ ಜಗ್ಗುಣಕಣ ಜಗ್ಗೀಜಗ್ಗಿ..ಜಗ್ಗೀ
ಕುಣಿಕುಣಿದು ಝಂಕರಿಸಿ ಕೇಕೆಹಾಕುತ್ತೇವೆ
ಸರ್ವವವನೂ ನಾಶ ಮಾಡಿದವರು
ತಿಂದುಂಡು ತೇಗಿದವರು
ಬೀಡಾಡಿ ಭೋಗಿಗಳು
ಗೆದ್ದೆವೆಂದು ಗರ್ವದಿಂದ ಬೀಗಿದವರು
ಸರ್ವವವನೂ ತೊರೆದು ಬರಲೇಬೇಕಿಲ್ಲಿಗೆ
ಇಲ್ಲದವನು..ಇರುವವನು
ಮೆರೆದವನು ತಿರುದುಂಡವನು
ಬೋನಾಸಿ ಹಿಡಿದು ಬೇಡಿದವನು
ಎಲ್ಲರೂ ಇಲ್ಲಿ ಈ ಮಣ್ಣಲ್ಲಿ ಸದ್ದಿಲ್ಲದಂತೆ ಮಲಗಲೇ ಬೇಕು
ಈ ಮಣ್ಣು ಸಮತೆಯ ಸಾರುತ್ತದೆ
ನೆನಪುಗಳು ಮಣ್ಣಾಗುವಿದಿಲ್ಲ
- ಸ್ವಾಮಿ ಮಹಾಮನೆ
