ಮಂಜುನಾಥ್ ಚಾಂದ್ ಅವರ ‘ಅಮ್ಮ ಕೊಟ್ಟ ಜಾಜಿ ದಂಡೆ’ ಪುಸ್ತಕದಲ್ಲಿರುವ ಹನ್ನೆರಡು ಲೇಖನಗಳು ಲೇಖಕರಿಗೆ ಹೆತ್ತವರೊಂದಿಗಿದ್ದ ಬಾಲ್ಯದ ನೆನಪುಗಳು, ಯೌವ್ವನದ ಒಡನಾಟ, ಬದುಕಿಗೆ ಅವರು ನೀಡಿದ ಸಿಹಿ ಹೂರಣದ ಅನುಭವಗಳು, ಕಲಿಸಿದ ಜೀವನದ ಪಾಠಗಳು ಇತ್ಯಾದಿಗಳು ಈ ಕೃತಿಯಲ್ಲಿವೆ. ಲೇಖಕಿ ಸುಮಾ ಭಟ್ ಅವರು ಈ ಕೃತಿ ಪರಿಚಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ಅಮ್ಮ ಕೊಟ್ಟ ಜಾಜಿ ದಂಡೆ
ಲೇಖಕರು: ಮಂಜುನಾಥ್ ಚಾಂದ್
ಮುದ್ರಣ: ೨೦೧೮(ಪ್ರಥಮ)
ಪ್ರಕಾಶಕರು: ಅಕ್ಷರ ಮಂಡಲ ಪ್ರಕಾಶನ
ಬೆಲೆ: ೧೦೦
ಪುಟಗಳು:೧೦೪
ಪ್ರಪಂಚದಲ್ಲಿರುವ ಪ್ರತಿಯೊಂದು ಜೀವರಾಶಿಗಳಲ್ಲೂ ಅಮ್ಮ ಎಂಬ ಅನುಬಂಧ ಪದಗಳ ಮಿತಿಯಲ್ಲಿ ಹೇಳಲಾಗದಂತದ್ದು ಪ್ರತಿ ಜೀವಿಯು ತನ್ನನ್ನು ಈ ಭೂಮಿಗೆ ಪರಿಚಯಿಸಿದ ಸಂಬಂಧದೊಂದಿಗೆ ಜೀವನದ ಮೊದಲ ಘಳಿಗೆಯಿಂದಲೇ ಸಂಬಂಧದ ವಿಶಿಷ್ಟವಾದ ಪರಿಭಾಷೆಯನ್ನು ಹೊಂದುವುದು ಪ್ರಪ್ರಥಮವಾಗಿ ಅಮ್ಮ ಎಂಬ ವ್ಯಕ್ತಿತ್ವದೊಂದಿಗೆ ಎಂದರೆ ತಪ್ಪಾಗಲಾರದು. ಅಮ್ಮ, ತಾಯಿ, ಜನನಿ,ಮಾತೆ, ಮಾ ಹೀಗೆ ಯಾವುದೇ ಶಬ್ದಗಳ, ಮೋಡಿಯಲ್ಲಿ, ಭಾಷಾಭಿಮಾನದಲ್ಲಿ ಕರೆದರೂ ಆ ಕಂದನ ಕೂಗಿಗೆ ಮಾರ್ದನಿಯಾಗುವವಳು ತಾಯಿ. ಅಂತಹ ತಾಯಿಯೊಂದಿಗಿನ ಪುಟ್ಟ ಊರಿನ ಸಣ್ಣ ಹುಡುಗನಾಗಿದ್ದಾಗಲಿಂದ ಬೆಳೆದು ದೊಡ್ಡವನಾಗುವ ತನಕ ಆ ತಾಯಿಯೊಡನೆ ಅವನು ಕಳೆದ ಕ್ಷಣಗಳ ನೆನಪುಗಳನ್ನು…ಜೊತೆಗೆ ಅಪ್ಪನೆಂಬ ಅಂಬರದೊಂದಿಗೆ ಭಾಂದವ್ಯವಿರಿಸಿಕೊಂಡು….ಆ ತಾಯಿ ತಂದೆಯರೊಂದಿಗೆ ಬೆಳೆದ ವಾತಾವರಣದ ತುಣುಕುಗಳ ನೆನಪಿನ ಮಾಲೆಗಳ ಒಡನಾಟ…ಹೀಗೆ ಹತ್ತು ಹಲವಾರು ನೆನಪಿನ ಅಂಗಳದಿಂದ ಎತ್ತಿದ ಅನುಭವದ, ಅನುಭವಿಸಿದ ಅನುಭಾವಿಸಿದ ಅತ್ಯಮೂಲ್ಯ ಕ್ಷಣಗಳ ಕಿರು ನೋಟವಿಲ್ಲಿದೆ. ಇಲ್ಲಿ ಲೇಖಕ ಮಂಜುನಾಥ್ ಜಾಜಿಯ ದಂಡೆ ಕಂಪನ್ನು ಸೂಸುವ ಮೂಲಕ ಹಲವರನ್ನು ಸೆಳೆವಂತಹಾ ಶೀರ್ಷಿಕೆ ನೀಡಿದ್ದಾರೆ. ಓದುಗರ ಮುಂದೆ ತನ್ನ ಬಾಲ್ಯದಿಂದ ತಾಯಿಯೊಂದಿಗೆ ಇದ್ದ ಒಡನಾಟದ ನೆನಪಿನ ಬುತ್ತಿಯನ್ನು ಲೇಖನಗಳ ಮಾಲೆಯಲ್ಲಿ ಸುರಿದು ಓದುಗರ ಮುಂದಿಟ್ಟ ಪುಸ್ತಕವೇ “ಅಮ್ಮ ಕೊಟ್ಟ ಜಾಜಿ ದಂಡೆ”
ಈ ಪುಸ್ತಕದಲ್ಲಿರುವ ಹನ್ನೆರಡು ಲೇಖನಗಳು ಲೇಖಕರಿಗೆ ಹೆತ್ತವರೊಂದಿಗಿದ್ದ ಬಾಲ್ಯದ ನೆನಪುಗಳು, ಯೌವ್ವನದ ಒಡನಾಟ, ಬದುಕಿಗೆ ಅವರು ನೀಡಿದ ಸಿಹಿ ಹೂರಣದ ಅನುಭವಗಳು, ಕಲಿಸಿದ ಜೀವನದ ಪಾಠಗಳು, ಹೆತ್ತವರೊಂದಿಗೆ ಎದುರಿಸಿದ ಸಂಕಷ್ಟಗಳು, ಅವರ ನೋವಿಗೆ ಸ್ಪಂದಿಸಿದ ಮಕ್ಕಳ ಮನದ ತೊಳಲಾಟ ಹೀಗೆ ಹಲವಾರು ವಿಷಯಗಳನ್ನು ವಿವರವಾಗಿ ದಾಖಲಿಸಿಲಾಗಿದೆ. ಕುಂದಗನ್ನಡ ಭಾಷೆಯ ಸೊಗಡಿನಲ್ಲಿ ಅದ್ದಿದ ಲೇಖನಗಳನ್ನು ಅನುಭವ ಮೂಸೆಯಿಂದ ಹೊರತಂದಂತಿರುವ ಪ್ರತಿ ಲೇಖನಗಳನ್ನು ಲೇಖಕರು ಓದುಗರ ಮುಂದಿಡುತ್ತಾ ಸಾಗುತ್ತಾರೆ ಎಂಬ ಭಾವ ಮೂಡುತ್ತದೆ.

ಅಮ್ಮ ಹೆಣೆದ ಜಾಜಿ ಮಾಲೆ
ಮುಗ್ಧ ಬಾಲ್ಯದಲ್ಲಿ ತಾಯಿ ಸದಾ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದು… ಕೆಲಸದ ಸುಸ್ತನ್ನು ಮಕ್ಕಳ ಮೇಲೆ ರೇಗಾಡಿ ತೀರಿಸಿಕೊಳ್ಳುತ್ತಿದ್ದದ್ದು… ಆ ಕೆಲಸದಲ್ಲೇ ಅದೊಂದು ಬಗೆಯ ಸಂತೃಪ್ತಿ ಕಾಣುತ್ತಿದ್ದದ್ದು….ಇನ್ನು ಅಮ್ಮನ ನಿರ್ದೇಶನದಂತೆ ಹಾಡಿಯಲ್ಲಿರುತ್ತಿದ್ದ ದೆರಲೆ(ಒಣಗಿದ ಎಲೆಗಳು) ಹೆಕ್ಕಿದ್ದು…ಹಟ್ಟಿಯ ಸಗಣಿಯನ್ನೆಲ್ಲಾ ಶೇಖರಿಸಿ ಬೆರಣಿ ಮಾಡುತ್ತಿದ್ದ ಅಮ್ಮ…ಅಮ್ಮ ಮಾಡುವಂತೆ ಅವಳೊಂದಿಗೆ ಕುಳಿತು ಮಾಡಿದ ಬೆರಣಿ ತಟ್ಟುವ ಪ್ರಯತ್ನ ….ಅದನ್ನು ಒಣಗಿಸಿ ಮಳೆಗಾಲದ ಉರುವಲಿಗಾಗಿ ಅದನ್ನು ಅಟ್ಟದಲ್ಲಿ ಶೇಖರಿಸುತ್ತಿದ್ದಂತಹ ನೆನಪು… ಮಳೆಗಾಲದಲ್ಲಿ ಕೆಸರಿನಿಂದಾಗುತ್ತಿದ್ದ ಮಣ್ಣಿನ ಹೆಂಟೆಗಳ ಮೇಲೆ ಆ ಬೆರಣಿಗಳನ್ನು ಹಾಕಿ ಅದರ ಮೇಲೆ ದೆರಲೆ ತುಂಬಿ ಸುಡು ಮಣ್ಣು ತಯಾರಿಸುತ್ತಿದ್ದ ವಿಧಾನ.. ಈ ವಿಧಾನದಿಂದ ತಯಾರಿಸಿದ ಸುಡುಮಣ್ಣನ್ನು ಜಾಜಿಯ ಗಿಡದ ಬುಡಕ್ಕೆ ಹಾಕಿ ಆ ಸಾವಯುವ ಗೊಬ್ಬರದಿಂದ ಘಮಘಮ ಎನ್ನುವ ಜಾಜಿ ಹೂ ಬಿಡುವ ಗಿಡ ಬೆಳೆಸಿ ಅದರಿಂದ ಹೂ ಕಿತ್ತು ಮಾಲೆ ಕಟ್ಟಿ…. ಕಟ್ಟಿದ ಮೇಲೆ ಮಾರಿದಾಗ ಬಂದ ಹಣದಲ್ಲಿ ಮನೆಯ ಅವಶ್ಯಕತೆಯ ವಸ್ತುಗಳನ್ನು ತಾಯಿ ಕೊಳ್ಳುತ್ತಿದ್ದದ್ದು… ಆ ಹಣದ ಸದ್ವಿನಿಯೋಗವಾಗುವಂತೆ ತಾಯಿ ಉಪಯೋಗಿಸುತ್ತಿದ್ದ ನೆನಪು ಈ ಲೇಖನದಲ್ಲಿ ಲೇಖಕರು ಬಿತ್ತರಿಸಿದ್ದಾರೆ.
ಅಮ್ಮನೊಂದಿಗೆ ಕಾಡ ಹಾದಿಯ ಹೆಜ್ಜೆ
ಇಲ್ಲಿ ಲೇಖಕ ತನ್ನ ಅಮ್ಮನೊಂದಿಗೆ ಕಾಡ ಹಾದಿಯಲ್ಲಿ ಇರಿಸಿದ ಹೆಜ್ಜೆಗಳ ನೆನಪಿನ ಸರದಲ್ಲಿ ಅಮ್ಮ ಪರಿಚಯಿಸಿದ ಕೇದಗೆ ಹೂವು, ತರತರದ ಮರಗಳ ಬಗೆಗಿನ ಅಮ್ಮ ಹೇಳಿದ ಮಾತುಗಳು ಹಾಡಿಗಳ ಹಾದಿಯಲ್ಲಿ, ಕೆರೆಗಳ ಅಂಚಿನಲ್ಲಿ, ಗದ್ದೆಗಳ ಏರಿಯಲ್ಲಿ, ಹೀಗೆ ಇಲ್ಲೆಲ್ಲಾ ಓಡಾಡಿದ ಬಗ್ಗೆ ವಿವರಿಸುತ್ತಾರೆ. ಅಮ್ಮನ ಅಮ್ಮ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ಹಾಡಿ, ತೋಡು, ಗದ್ದೆಗಳು ಇನ್ನು ಅಜ್ಜಿ ತನ್ನ ಮನೆಗೆ ಬರುವಾಗ ತರುತ್ತಿದ್ದ ತಿಂಡಿಗಳ ಪಟ್ಟಿ, ಹಪ್ಪಳ, ಸಂಡಿಗೆ ಇವುಗಳ ವೈಶಿಷ್ಟತೆ ಮತ್ತು ಅಜ್ಜಿಯ ಊರಿಗೆ ಹೋಗಲು ಇದ್ದ ಮತ್ತೆ ಕೆಲವು ದಾರಿಗಳು ಆ ಹಾಡಿಯಲ್ಲಿ ಸಿಗುತ್ತಿದ್ದ ಹಣ್ಣುಗಳು ಮತ್ತೆ ಸಿಗುತ್ತಿದ್ದ ಮಾವಿನಕಾಯಿ ಅದರಲ್ಲಿ ಅಮ್ಮ ಹಾಕುತ್ತಿದ್ದ ಉಪ್ಪಿನಕಾಯಿ ಹೀಗೆ ಹಲವು ಹೆಜ್ಜೆಗಳ ಗುರುತನ್ನು ಈ ಲೇಖನದಲ್ಲಿ ಪರಿಚಯ ಮಾಡಿದ್ದಾರೆ
ಒಂದೇ ಲಾಟೀನಿನ ಕೆಳಗೆ
ವಿದ್ಯುತ್ ಸಂಪರ್ಕವೇ ಇಲ್ಲದ ಕಾಲದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದ ಅದರಲ್ಲೂ ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಉಪಯೋಗವಾಗುತ್ತಿದ್ದ ಲಾಟಿನ್ನಿನ ಜೊತೆ ಲೇಖಕರು ಮತ್ತು ಅವರ ಅಕ್ಕನೊಂದಿಗೆ ಇದ್ದ ಸುಂದರ ನೆನಪುಗಳು…ಆ ಲ್ಯಾಟಿನ್ ರಾತ್ರಿ ಹೊತ್ತು ಉರಿಯಲು ಹಗಲಲ್ಲಿ ಮಾಡುತ್ತಿದ್ದ ತಯಾರಿಗಳು….ತಂದೆ ಗದ್ದೆಗೆ ರಾತ್ರಿ ವೇಳೆ ತುರ್ತಾಗಿ ಹೋಗುವಾಗ ಬೇಕಾಗುವ ಬೆಳಕು ನೀಡುತ್ತಿದ್ದ ಲಾಟೀನ್…ಇನ್ನು ತಾಯಿ ಲಾಟಿನ್ನನ್ನು ಉಪಯೋಗಿಸಬೇಕಾದರೆ ಇರಬೇಕಾದ ಜಾಗರೂಕತೆ ಬಗ್ಗೆ ಹೇಳುತ್ತಿದ್ದ ಮಾತುಗಳು… ಇನ್ನು ಲಾಟೀನಿನ ಮಂದ ಬೆಳಕಿನಲ್ಲಿ ತಂದೆ ಹೇಳುತ್ತಿದ್ದ ಪುರಾಣ ಪ್ರಸಂಗಗಳು…ಹೀಗೆ ಎಲ್ಲಾ ರೀತಿಯಲ್ಲೂ ಉಪಯೋಗಕ್ಕೆ ಬರುತ್ತಿದ್ದ ಲಾಟೀನ್ನಿನ ನೆನಪು ಇಲ್ಲಿ ಮುಂದುವರೆಯುತ್ತಾ ಸಾಗುತ್ತದೆ.
ಹರಾಮಿ ಕಾಯ್ಲಾ ದನದ ಬಾಣಂತನ
ಅವರ ಮನೆಯಲ್ಲಿದ್ದ ಹರಾಮಿ ಹಸು ಒಂದು ಕರು ಹಾಕುವ ಸಮಯದಲ್ಲಿ ಅವರು ಕರು ಬರಲು ಕಾತುರದಿಂದ ಕಾಯುತ್ತಿದ್ದ ಕ್ಷಣಗಳು… ಕರು ಹಾಕಿದ ನಂತರ ಬಂದ ಹಾಲಿನಲ್ಲಿ ಅಮ್ಮ ತಯಾರಿಸುತ್ತಿದ್ದ ಗಿಣ್ಣು…ದೀಪಾವಳಿ ಹಬ್ಬದ ಸಮಯದಲ್ಲಿ, ಹಬ್ಬಕ್ಕೆ ಮಾಡುತ್ತಿದ್ದ ಬೆಣ್ಣೆಯ ಹಾಲೆಯಂತಿರುವ ಸಿಹಿಖಾದ್ಯವಾದ ಮಣ್ಣಿ ಇಂತಹ ಬಾಲ್ಯದ ಬೆಚ್ಚಗಿನ ನೆನಪನ್ನು ಈ ಭಾಗದಲ್ಲಿ ವಿವರಿಸಿದ್ದಾರೆ. ಇನ್ನು ದೀಪಾವಳಿ ಹಬ್ಬದ ಸಂಭ್ರಮ ಹೇಗಿರುತ್ತಿತ್ತು ಮತ್ತು ಹಬ್ಬದ ಸಮಯದಲ್ಲಿ ಕಿರಾತಕಡ್ಡಿ ಮತ್ತು ಅದರ ಬೇರಿನಿಂದ ಮಾಡಿದ ಕಷಾಯದ ಸೇವನೆ…. ಮನೆಯ ಕಟಾಂಜನದ ತುಂಬಾ ಹಣತೆ ಹಚ್ಚಿಟ್ಟು, ಬಿರುದು ಕಟ್ಟಿಗಳನ್ನು ಕಟ್ಟಿ ಮಾಡುತ್ತಿದ್ದ ಗೂಡುದೀಪ (ಆಕಾಶಬುಟ್ಟಿ) ಇವುಗಳ ತಯಾರಿ ಮಾಡುವಂತಹ ಇಂತಹಾ ಅದೆಷ್ಟೋ ಬಾಲ್ಯದ ನೆನಪುಗಳ ಹಂದರವಿಲ್ಲಿದೆ.
ದೂರ ಕುಳಿತು ಬಿಡುವ ಅಮ್ಮನ ಆ ದಿನಗಳು
ಸಾಮಾನ್ಯವಾಗಿ ಅಂದಿನ ಕಾಲದಲ್ಲಿ ತಿಂಗಳಲ್ಲಿ ಹೆಂಗಸರು ನಾಲ್ಕು ದಿವಸ ಹೊರಗೆ ಕುಳಿತುಕೊಳ್ಳುವ ಅಭ್ಯಾಸ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಇರುತ್ತಿತ್ತು. ಆ ನಾಲ್ಕು ದಿನದ ವಿಶ್ರಾಂತ ಜೀವನದಲ್ಲಿ ಅಮ್ಮ ಅಡಿಗೆ ಮನೆಗೆ ಹೋಗದಿದ್ದರೂ ಅಡುಗೆ ಮಾಡದಿದ್ದರೂ ಹೊರಗಿನ ಕೆಲಸಗಳನ್ನು ಪೂರೈಸಿ ಮನೆಗೊಂದು ಜೀವ ಕಳೆ ತರುತ್ತಿದ್ದಳೆಂದು ಲೇಖಕರು ಹೇಳಿ ಕೊಳ್ಳುತ್ತಾರೆ. ಇನ್ನು ಅಮ್ಮ ಮಾಡುತ್ತಿದ್ದ ವಿಧ ವಿಧವಾದ ತಿಂಡಿಗಳು, ಆ ನಾಲ್ಕು ದಿನದ ವಿಶ್ರಾಂತ ಬದುಕಿನ ನಂತರ ಮತ್ತಷ್ಟು ಚಟುವಟಿಕೆಯಾಗಿ ಓಡಾಡುತ್ತಿದ್ದ ತಾಯಿ, ಅವಳು ನಡೆಸುತ್ತಿದ್ದ ದೇವರ ಪೂಜೆ, ತುಳಸಿ ಪೂಜೆ ಮುಂತಾದವುಗಳ ಬಗ್ಗೆ ಸಹಾ ಲೇಖಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಹೊಸ ಸೀರೆಯ ದಾರವನೆಳೆದು
ಬಿಡುವಿನ ವೇಳೆಯಲ್ಲಿ ಯಾವೆಲ್ಲಾ ರೀತಿಯ ಮನೆ ಕೆಲಸದಲ್ಲಿ ಲೇಖಕರು ತಮ್ಮನ್ನು ತೊಡಗಿಸಿಕೊಳ್ಳುವಂತೆ ತಂದೆ ಮಾಡುತ್ತಿದ್ದರು ಮತ್ತು ಆ ವಯಸ್ಸಿನಲ್ಲಿ ಆಡುತ್ತಿದ್ದ ಗೋಲಿ ಆಟ, ಚೆನ್ನಮಣೆ… ತಾಯಿ ತೋಟದಲ್ಲಿ ಬೆಂಡೆ, ಹೀರೆ, ತೊಂಡೆ ಮುಂತಾದ ತರಕಾರಿಗಳನೆಲ್ಲಾ ಬೆಳೆದು ಅದನ್ನು ಮಾರಿ ಬಂದ ದುಡ್ಡಿನಲ್ಲಿ ಅಮ್ಮ ಕೊಳ್ಳುತ್ತಿದ್ದ ಅಪರೂಪದ ಸೀರೆಗಳು… ಸೀರೆ ಉಟ್ಟು ಅದರ ತೆರೆಗಿನ ಐದು ದಾರಗಳನ್ನು ಮೆಲ್ಲಗೆ ಎಳೆದು ಅದನ್ನು ತುಳಸಿ ಕಟ್ಟೆಗೆ ತೊಡಿಸಿ ನಮಸ್ಕಾರ ಮಾಡುತ್ತಿದ್ದ ಪರಿ…. ಇನ್ನು ಸೀರೆ ಉಟ್ಟು ಗಂಡನಿಗೆ ನಮಸ್ಕರಿಸಿ ನಂತರ ಮಗಳನ್ನು ಅದು ಹೇಗಿತ್ ಹೆಣೇ ಎಂದು ಕೇಳುವ ತಾಯಿಯ ನಡೆ ಮುಂತಾದ ಮುಖ್ಯ ಘಟನೆಗಳನ್ನು ಮೆಲುಕು ಹಾಕಿ ತನ್ನ ಎದೆಯೊಳಗೆ ಬೆಚ್ಚಗಿರುವ ಅಮ್ಮನ ನೆನಪುಗಳನ್ನು ಓದುಗರ ಮುಂದೆ ಕೊಂಚ ವೈವಿಧ್ಯಮಯವಾಗಿ ಓದುಗರಿಗೆ ಲೇಖಕರು ಈ ಭಾಗದಲ್ಲಿ ವಿವರಿಸಿದ್ದಾರೆ.
ಅಮ್ಮ ಕೊಟ್ಟ ಡೆಪಾಸಿಟ್ಟು
ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಉಳಿತಾಯದ ಪಾಠವನ್ನು ಒಂದಲ್ಲಾ ಒಂದು ರೀತಿ ಹೇಳಿಕೊಟ್ಟಿರುತ್ತಾರೆ. ಹಾಗೆ ಇಲ್ಲಿ ಈ ಲೇಖಕರ ತಾಯಿಯು ಹಲವು ಸಂದರ್ಭಗಳಲ್ಲಿ ಅವರಿಗೆ ಅದರ ಮಹತ್ವ ಹೇಗೆ ಹೇಳಿದ್ದಾರೆ ಎಂಬುದನ್ನು ಈ ಲೇಖನ ತಿಳಿಸುತ್ತದೆ. ಲೇಖಕರು ತ್ರಾಸಿಯಿಂದ ಗಂಗೊಳ್ಳಿಗೆ ಕಾಲೇಜಿಗೆ ಹಾಲಿನ ಕ್ಯಾನ್, ಜಾಜಿ ದಂಡೆ, ಕೊಡೆಯೊಂದಿಗೆ ನಡೆದುಕೊಂಡು ಹೋಗುವುದನ್ನು ಶಿಕ್ಷಕರು ಪ್ರಸನ್ನರಾಗಿ ಹೇಳಿದ ಮಾತು ಅದರಲ್ಲಿದ್ದ ವೆಂಗ್ಯವನ್ನು ತಿಳಿದು ನೊಂದುಕೊಂಡು ತಾಯಿಯ ಬಳಿ ಹೇಳಿದಾಗ, ಹೇಗೆ ಅವರ ತಾಯಿ ಅದನ್ನು ಹೇಗೆ ಧನಾತ್ಮಕವಾಗಿ ತೆಗೆದುಕೊಳ್ಳಬೇಕೆಂಬುದನ್ನು ಕಲಿಸಿದ ರೀತಿ… ತನ್ನ ಖರ್ಚಿಗಾಗಿ ಮಗ ಪೇಪರ್ ಹಾಕುವ ಹುದ್ದೆಗೆ ಸೇರಲು ನೀಡಿದ ಒಂದು ಸಾವಿರದಷ್ಟು ಠೇವಣೆ….ಇನ್ನು ಕೇಳ್ ಮಡಿಕೆ ಎಂಬ ಅವರ ಮನೆಯಲ್ಲಿದ್ದ ಉಳಿತಾಯ ಯಂತ್ರದ ವೈಶಿಷ್ಟ್ಯತೆಯನ್ನು ಮತ್ತು ಅದರಲ್ಲಿ ಏನೇನೆಲ್ಲಾ ಉಳಿಸಿ ಅಮ್ಮ ಠೇವಣೆಯಾಗಿ ಇಡುತ್ತಿದ್ದರು ಎಂಬುದನ್ನು ಲೇಖಕರು ಎಲ್ಲಿ ವಿವರಿಸುತ್ತಾರೆ.

ಪ್ರತಿ ಶನಿವಾರದ ನೋವಿನ ರಾತ್ರಿ!
ರಾತ್ರಿಯೆಲ್ಲ ಮಳೆ ಬಂದ ಕಾರಣ ಸಂಜೆ ಕಿತ್ತಲಾಗದ ಜಾಜಿಯ ಮೊಗ್ಗನ್ನು ತಾಯಿ, ಬೆಳಗಿನ ಜಾವ ಮಗ ಕಾಲೇಜಿಗೆ ಹೋಗುವುದರಲ್ಲಿ ಬಾಳೆದಿಂಡಿನಲ್ಲಿ ಕಟ್ಟಲು ಹೂ ಕೊಯ್ಯಲು ಹೋದಾಗ ಬಿದ್ದ ಕಾರಣ ಲೇಖಕರು ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯುವಂತಾಗಿತ್ತು. ಅಮ್ಮನ ಈ ಅವಸ್ಥೆಗೆ ವೈದ್ಯರು ಹೃದಯ ಕಾಯಿಲೆ ಎಂದು ಹೆಸರಿಟ್ಟಾಗ ಅವರಿಗಾದ ಆತಂಕ…ಪ್ರತಿ ಶನಿವಾರ ಅಮ್ಮನಿಗೆ ನೀಡುತ್ತಿದ್ದ ಬೆನಿಟ್ಯೂಡ್ ಎಂಬ ಇಂಜೆಕ್ಷನ್ ಹಾಕುತ್ತಿದ್ದರ ಬಗ್ಗೆ… ಅದರಿಂದ ಅಷ್ಟು ಚುರುಕಾಗಿದ್ದ ತಾಯಿ ಏನ್ ಮಾಡಲಾಗದೆ ನಿದ್ದೆಗೆ ಜಾರುತ್ತಿದ್ದು… ಆದರೆ ಮಾರನೇ ದಿನ ಅಷ್ಟೇ ಚುರುಕಾಗಿ ಕೆಲಸಕ್ಕೆ ತೊಡಗುತ್ತಿದ್ದನ್ನು ಇಲ್ಲಿ ಲೇಖಕರು ಹೆಮ್ಮೆಯಿಂದ ವಿವರಿಸಿದ್ದಾರೆ.
ಹಿಂಡಿ ಹಿಪ್ಪೆ ಮಾಡಿದ ಹೃದಯದ ಕಾಯಿಲೆ
ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ ತಾಯಿಯ ಅವಸ್ಥೆಯನ್ನು ವಿವರಿಸುತ್ತಾ, ಆ ಕಾಯಿಲೆಯ ನರಳುವಿಕೆಯಲ್ಲಿಯೂ ಅವಳು ಕೆಲಸ ಮಾಡುತ್ತಿದ್ದ ಪರಿಯನ್ನು ಲೇಖಕರು ವಿವರಿಸುತ್ತಾ ಆಕೆ ತನಗೆ ಯಾವೆಲ್ಲ ರೀತಿ ಬದುಕಿನ ಬಂಡಿ ಎಳೆಯಯಲು ಬೇಕಾದ ಕೆಲಸಗಳನ್ನು ಕಲಿಸಿದಳು ಎಂಬುದನ್ನು ವಿವರಿಸುತ್ತಾರೆ. ಸಂಬಂಧಿ ಕಾಯಿಲೆಗೆ ತುತ್ತಾದ ತಾಯಿಗೆ ಡಾಕ್ಟರ್ ಬಿ.ಎಂ ಹೆಗಡೆ ಮೂಲಕ ನಡೆಸಿದ ಚಿಕಿತ್ಸೆ… ಮದುವೆಯಾಗಿ ಅಕ್ಕ ದೂರ ಆದಂತೆ, ತಾನು ಕೆಲಸದಲ್ಲಿ ದೂರವಾದಾಗ ಮನೆಯಲ್ಲಿ ಹೆತ್ತವರಿಗೆ ಕಾಡುತ್ತಿದ್ದ ಏಕಾಂತದ ಸಮಸ್ಯೆ…ಅಲ್ಲದೆ ಅವರಿಗಿದ್ದ ಹೃದಯದ ಖಾಯಿಲೆ ತರುತ್ತಿದ್ದ ಕಣ್ಣೀರು ಇಂತಹ ದುಃಖದ ವಿಷಯವನ್ನು ಲೇಖಕರು ಹೇಳುವಾಗ ಒಂದು ಬಾರಿ ಓದುಗನ ಕಣ್ಣಂಚಿನಲ್ಲೂ ಒಂದು ಹನಿ ನೀರು ಬರುವಂತೆ ಆಗುತ್ತದೆ.
ಸಾವನ್ನು ಗೆದ್ದು ಬಂದವಳು
ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ತಾಯಿಗೆ ಆ ಕೈಯಲ್ಲಿ ಪ್ರಾಣವಿಲ್ಲದಿದ್ದರೂ ಆ ವರ್ಷದ ನವರಾತ್ರಿ ಮಾಡುವ ಹುಮ್ಮಸ್ ಇತ್ತು. ಆದರೆ ಮಹಾಲಯ ಅಮಾವಾಸ್ಯೆ ದಿನದಂದೆ ಕಾಯಿಲೆ ಉಲ್ಬಣವಾಗಿ ಅಮ್ಮ ಆಸ್ಪತ್ರೆ ಸೇರುತ್ತಾಳೆ. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಮಂಗಳೂರಿನ ವೈದ್ಯ ಹನ್ಸ್ ರಾಜರರ ಬಳಿ ಲೇಖಕರು ಮತ್ತು ಅವರ ಕುಟುಂಬದವರು ಕರೆದೊಯ್ಯಲು ಪಟ್ಟಪಾಡು, ಸಂಕಷ್ಟಗಳು… ಕೊನೆಗೂ ಆ ಅಮ್ಮನನ್ನು ಡಾಕ್ಟರ್ ಬಳಿ ಕರೆದೊಯ್ಯಬೇಕಾದರೆ ಬೊಗಸೆಯೊಂದರಲ್ಲಿ ನೀರು ತುಂಬಿಕೊಂಡಂತೆ ತೆಗೆದುಕೊಂಡು ಹೋದ ಅನುಭವ…ಆ ತಾಯಿಯನ್ನು ಕರೆದುಕೊಂಡು ಹೋಗಿ ಕೊಟ್ಟಾಗ ಅವರ ಜೀವ ಉಳಿಯಿತು ಎನ್ನುವುದಕ್ಕಿಂತ, ಆ ತಾಯಿ ಸಾವನ್ನು ಗೆದ್ದು ಸವಾಲಿನಂತೆ ಚೇತರಿಸಿಕೊಂಡಿದ್ದನ್ನು ಲೇಖಕರು ಅತ್ಯಂತ ಭಿನ್ನವಾಗಿ ಓದುಗರ ಮುಂದೆ ಇಟ್ಟಿದ್ದಾರೆ.
ಯಾವ ಜನುಮದ ಗೆಳೆಯನೋ
ಯೌವ್ವನದ ಹೊಸ್ತಿಲಿನಲ್ಲಿದ್ದಾಗ ಲೇಖಕರ ಅಪ್ಪನಿಗಿದ್ದ ಸ್ನೇಹಿತರ ಸಂಖ್ಯೆ ಅಗಾಧ ಮತ್ತು ಅವರ ಮಾತಿನ ಮೋಡಿಗಳಗಾಗಿ ಹಲವಾರು ಗೆಳೆಯರು ಬರುತ್ತಿದ್ದರು . ಆದರೆ ವಯಸ್ಸು ಮಾಗಿದ ಮೇಲೆ ಮಗನೊಂದಿಗೆ ಇದ್ದಾಗ ಮಗ ಅವರನ್ನು ಹೊರಗಡೆ ಸುತ್ತಾಡಿಸಲು ಹೋದಾಗ ನೆನಪಿನ ಶಕ್ತಿ ಮಸುಕಾಗಿದ್ದ ತಂದೆಯ ಬಳಿ ನಾನಾರೆಂದು ಲೇಖಕರು ಕೇಳಿದಾಗ ಅವರು ನನ್ನ ಗೆಳೆಯ ಎಂದು ಸಂಬೋಧಿಸಿದಾಗ ಯಾವ ಭಾವ ಮೂಡಿರಬಹುದು. ಇಷ್ಟಕ್ಕೂ ಲೇಖಕರ ತಂದೆ ಮಗನನ್ನು ಗೆಳೆಯ ಎಂದು ಅಂದುಕೊಳ್ಳಲು ಕಾರಣವಾದರೂ ಏನು ಎಂಬುದನ್ನು ತಿಳಿಯಲು ಈ ಲೇಖನ ಓದಿ ನೋಡಿ
ಸಂತ ನಂತಾ ಅಪ್ಪನ ಜೊತೆ ಹಾಕಿದ ಹೆಜ್ಜೆಗಳು
ಅಪ್ಪ ಎಂದ ಆಕಾಶದೊಂದಿಗೆ ಹೆಜ್ಜೆ ಹಾಕಿದ ಲೇಖಕರ ಜೀವನ ಪ್ರಯಾಣದ ನೆನಪಿನ ಬುತ್ತಿ ಈ ಲೇಖನದಲ್ಲಿದೆ. ಕೆಲಸದಲ್ಲಿದ್ದು ತ್ರಾಸಿಯಲ್ಲಿ ದೇವರನ್ನೇ ನಂಬದೆ ಬದುಕಿದ್ದ ತಂದೆ ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾಪಿಸಿದ್ದು… ಆ ಮಟ್ಟಕ್ಕೆ ಬೆಳೆಯಲು ಮುಂಬೈಗೆ ಹೋಗಿ ಅವರು ಎದುರಿಸಿದ ಛಲದ ಬದುಕು.. ನಂತರ ಕಷ್ಟಕಾರ್ಪಣ್ಯಗಳ ಬದುಕನ್ನು ನಾಲ್ವರು ಸೇರಿ ಎದುರಿಸಿದ ಬಗ್ಗೆ…. ತಂದೆಯ ಮನದಲ್ಲಿ ಇರುತ್ತಿದ್ದ ಧೃಢ ಸಂಕಲ್ಪಗಳು, ದೃಢ ನಿರ್ಧಾರ, ತಂದೆಯ ನಿಲುವುಗಳು ಇವುಗಳ ಬಗ್ಗೆ ವಿವರಿಸಿ ಊರು ಬಿಟ್ಟು ಬರಲು ಒಪ್ಪದಿದ್ದ ತಂದೆಯನ್ನು ತಮ್ಮೊಂದಿಗೆ ಅವರ ಜೀವನದ ಕಡೆಯ ನಾಲ್ಕು ವರ್ಷ ನನ್ನೊಂದಿಗೆ ಬೆಂಗಳೂರಿನಲ್ಲಿ ಇರಿಸಿಕೊಂಡ ನೆನಪನ್ನು ಲೇಖಕರು ಓದುಗರ ಮುಂದಿಡುತ್ತಾರೆ.
ನಕ್ಷತ್ರಗಳನ್ನು ಹಾಸಿದವಳು
ತನ್ನ ಬದುಕಲ್ಲಿ ನಕ್ಷತ್ರಗಳ ಹಾಸಿಗೆಯನ್ನು ವಿಶಾಲವಾಗಿ ಹರಡಿಟ್ಟ ತನ್ನ ತಾಯಿಯ ಬದುಕಿನ ಪ್ರತಿಯೊಂದು ನಡೆಯನ್ನು ತನ್ನ ನೆನಪಿನ ಬುತ್ತಿಯಲ್ಲಿ ಬೆಚ್ಚಗೆ ಕುಳಿತಿರುವ ಅವಳ ಕಾರ್ಯದಕ್ಷತೆಯನ್ನು ಈ ಕವನದ ಮೂಲಕ ಲೇಖಕರು ವಿವರಿಸುತ್ತಾರೆ.
ಮತ್ತೆ ಮಗುವಾಗಬೇಕು
ತುತ್ತು ಇಟ್ಟವಳು…ಜೀವಕೊಟ್ಟವಳು ಲೇಖಕರಿಗೆ ಬದುಕು ಕಟ್ಟಿಕೊಟ್ಟವಳು ಬದುಕೆಂದರೇನು ಎಂದು ತಿಳಿಸಿಕೊಟ್ಟವಳು ಅವರ ತಾಯಿ… ಆ ತಾಯಿಯ ಮಡಿಲಲ್ಲಿ ಮತ್ತೆ ಮಗುವಾಗಬೇಕೆಂಬ ಹಂಬಲವನ್ನು ಮತ್ತೊಂದು ಪುಟ್ಟ ಕವನದ ಮೂಲಕ ಲೇಖಕರು ಓದುಗರಿಗೆ ಹಂಚುತ್ತಾರೆ.
ಲೇಖಕರೇ ಹೇಳುವಂತೆ ಈ ಅಮ್ಮ ಕೊಟ್ಟ ಜಾಜಿ ದಂಡೆ ಬರಿಯ ಘಮವಲ್ಲ.. ಸುತ್ತ ಹಲವಾರು ಯೋಜನದಷ್ಟು ದೂರದಲ್ಲಿ ಪ್ರತಿಯೊಬ್ಬ ಮಕ್ಕಳು ಮನೆ…ಮನದಲ್ಲಿ.. ಮನದಾಳದಲ್ಲಿ ನಿರಂತರವಾಗಿ ಘಮ್ಮೆನಿಸುವ ನೆನಪಿನ ಬುತ್ತಿ ಎನ್ನಬಹುದೇನೋ? ಇಲ್ಲಿ ತಾಯಿಯಿಂದ ತಿಂದ ಬೈಗುಳ.. ತಾಯಿಯಿಂದ ಪಡೆದ ಅಕ್ಕರೆ… ತಾಯಿಯಿಂದ ಪಡೆದ ಮಮತೆ… ಹೀಗೆ ಹತ್ತು ಹಲವು ವಿಷಯಗಳ ಸರಮಾಲೆ ಇದೆ. ಹಾಗೆ ಅಪ್ಪನೆಂಬ ಆಕಾಶ ತೋರಿದ ಪ್ರೀತಿ ವಾತ್ಸಲ್ಯ ಆ ತಂದೆ ನೆನಪಿನ ಶಕ್ತಿಯನ್ನು ಕಳೆದುಕೊಂಡಾಗ ಆ ಮಗ ಮತ್ತೆ ಅದನ್ನು ಅವರಿಗೆ ವಾಪಸ್ ಮಾಡಿದ ರೀತಿ… ಮಗನಾಗಿ ಅಪ್ಪ-ಅಮ್ಮ ಇಬ್ಬರನ್ನು ನೋಡಿಕೊಂಡು ತಂದೆ ತಾಯಿಯ ಋಣವನ್ನು ಲೇಖಕರು ತೀರಿಸಿದ ಪರಿ ಇಂದಿನ ಯುವಜನತೆಗೆ ದಾರಿದೀಪ ಅನಿಸುತ್ತದೆ. ಪ್ರತಿಯೊಂದು ಲೇಖನವೂ ಒಂದಿಲ್ಲೊಂದು ರೀತಿಯಲ್ಲಿ ಓದುಗನ ಗಮನ ಸೆಳೆಯುತ್ತದೆ. ಅದು ಹೇಗೆ ಎಂಬುದಕ್ಕೆ ಪುಸ್ತಕದ ಪೂರ್ತಿ ಓದು ಸಹಕರಿಸುತ್ತದೆ, ಕುತೂಹಲ ಮೂಡಿದರೆ ನೀವು ಒಂದು ಬಾರಿ ಓದುತ್ತೀರಾ???
ನನ್ನಮ್ಮ ಮೂಲತಃ ಕುಂದಾಪುರದವರಾಗಿದ್ದು ಅಲ್ಲೇ ಹುಟ್ಟಿ ಬೆಳೆದವರಾದ್ದರಿಂದ ಸುಡುಮಣ್ಣು ಮಾಡುವ ವಿಧಾನ ತಿಳಿದಿದ್ದ ಕಾರಣ ಅದನ್ನು ನಾವು ಆಡಿ ಬೆಳೆದ ನಂಜನಗೂಡಿನಲ್ಲಿ ಮಾಡಿದ ನೆನಪು… ಇನ್ನೂ ಊರಿಗೆ ಹೋದಾಗ ಹಾಡಿಯಲ್ಲಿ ಗೇರುಬೀಜ ಹೆಕ್ಕಲು ಹೋಗುತ್ತಿದ್ದ ನೆನಪು…ವಿದ್ಯುತ್ ಇಲ್ಲದಾಗ ಚಿಮುಣಿ ಬುಡ್ಡಿಯ ಕೆಳಗೆ ಮೂರು ಜನರು ಕುಳಿತು ಓದುತ್ತಿದ್ದ ನೆನಪು… ಅಮ್ಮನ ರಜಾ ದಿನದ ನಮ್ಮ ಪಾಡು ಹೀಗೆ ಲೇಖಕರು ಹೇಳಿರುವ ಕೆಲವು ನೆನಪುಗಳು ನನ್ನ ಜೀವನದಲ್ಲೂ ಇದ್ದದ್ದು ಈ ಲೇಖನಗಳು ಆಪ್ತವೆನಿಸಲು ಕಾರಣವಾಯಿತು. ಲೇಖಕರು ಬರೆದಿರುವ ಹನ್ನೆರಡು ಲೇಖನಗಳ ವಿವರಣೆಯ ಸಂಕ್ಷಿಪ್ತ ವರದಿ ನನ್ನ ಈ ವಿಮರ್ಶಾ ಲೇಖನದಲ್ಲಿದೆ. ಅದರ ವಿವರಣೆ, ಅನುಭೂತಿ ಬೇಕೆಂದರೆ ನೀವೇ ಈ ಪುಸ್ತಕದ ಘಮಲನ್ನು ಆಸ್ವಾದಿಸಿ ನೋಡಿ….
- ಸುಮಾ ಭಟ್
