ಹೆಣ್ಣು ಎಂದರೆ ಮಾಯೆ ಎನ್ನುವ ಪರಿಕಲ್ಪನೆ ಮೇಲುಗೈಯಾಗಿದ್ದ ಕಾಲದಲ್ಲಿ ಅಂತಹ ನೂರಾರು ಹೆಣ್ಣುಮಕ್ಕಳನ್ನು ತನ್ನ ಬೌದ್ಧ ಸಂಘಕ್ಕೆ ಸೇರಿಸಿಕೊಂಡು ಅವರನ್ನು ಮೋಕ್ಷದ ಮಾರ್ಗದತ್ತ ಒಯ್ಯುತ್ತಾನೆ ಬುದ್ಧ. ಆಶ್ಚರ್ಯವೆಂದರೆ ಅವರಲ್ಲಿ ಅದ್ಧಕಾಶೀ, ಅಂಬಪಾಲಿಯರಂತಹ ವೇಶ್ಯೆಯರೂ ಇರುವುದು. ಬುದ್ಧನ ಹೊಸ ನೋಟದ ಕುರಿತು ಲೇಖಕಿ ಡಾ.ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಎರಡುಸಾವಿರದೈನೂರು ವರುಷಗಳ ಆನಂತರವೂ ಬುದ್ಧ ಚರ್ಚೆಯಲ್ಲಿದ್ದಾನೆ. ಕೆಲವರು ಯಶೋಧರೆಯ ಪರವಾಗಿ ನಿಂತು ಬುದ್ಧನನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿದರೆ ಇನ್ನು ಕೆಲವರು ಅವನ ತಾತ್ವಿಕ ನೆಲೆಗಳಿಗೆ ಮಹತ್ವಕೊಟ್ಟು, ಮನುಷ್ಯ ಪ್ರೀತಿಯನ್ನು ಸಾರುವ ಅವನ ಸಿದ್ಧಾಂತಗಳಿಗೆ ಬೆಲೆಕೊಟ್ಟು ಅವನನ್ನು ಎತ್ತಿಹಿಡಿದಿದ್ದಾರೆ.
ಈ ಎರಡೂ ನೆಲೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದರೆ ಬುದ್ಧ ಬದುಕಿದ ಕಾಲದ ಸಾಮಾಜಿಕ ಸಂದರ್ಭವನ್ನು ಗಮನಿಸಬೇಕಾಗಿದೆ. ಬಲವಾಗಿ ಬೇರೂರಿದ್ದ ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಂದು ಹೊಸ ಧರ್ಮವನ್ನು ರೂಪಿಸುವಲ್ಲಿ ಬುದ್ಧ ಎದುರಿಸಿದ ಸಾಮಾಜಿಕ ಸಮಸ್ಯೆಗಳು, ರೂಢಿಗತ ನಂಬಿಕೆಗಳು, ಅನಿವಾರ್ಯಗಳು, ಕಣ್ಣಿಗೆ ಕಾಣದ (ಇನ್ವಿಸಿಬಲ್) ಪಾಖಂಡಿತನದ ಆಚರಣೆಗಳು – ಇವುಗಳ ವಿರುದ್ಧ ತೆಗೆದು ಕೊಳ್ಳಬೇಕಾದ ನಿಲುವುಗಳು – ಇವೆಲ್ಲವನ್ನು ಅಖಂಡವಾಗಿ ಗ್ರಹಿಸಿದರೆ ಮಾತ್ರ ಬುದ್ಧನ ಹತ್ತಿರಕ್ಕೆ ಹೋಗಬಹುದೇನೋ. (ಬುದ್ಧನಿಗೂ ಮೊದಲೇ ಜೈನಧರ್ಮದ ಅವತರಣಿಕೆಯಿಂದಾಗಿ ಬುದ್ಧನ ತತ್ವಗಳನ್ನು ಗ್ರಹಿಸಲು ಜನರಿಗೆ ಸುಲಭವಾಗಿರಬಹುದು.( ಶೈಲಜಾ)
ಇತ್ತೀಚಿನ ದಿನಗಳಂತೂ ನಾವು ಬೈನರಿಗಳಲ್ಲೇ ಮಾತನಾಡುತ್ತಿದ್ದೇವೆ. ಅವುಗಳ ನಡುವಿನ ಸುವರ್ಣ ಮಧ್ಯಮ (ಗ್ರೇ ಏರಿಯಾ) ದ ಸಂಕೀರ್ಣ ಒಳನೋಟ ದಕ್ಕುವುದು ಒಂದು ಜವಾವ್ದಾರಿಯುತ ಸೂಕ್ಷ್ಮ ಕಾಣ್ಕೆಗೆ ಮಾತ್ರ. ಈ ಮಧ್ಯಮ ಮಾರ್ಗದಲ್ಲಿ ಪರಿಪೂರ್ಣತೆ ಎನ್ನುವುದು ಇರುವುದೇ ಇಲ್ಲ. ಎಲ್ಲವೂ ಪ್ರಯೋಗಶೀಲ ನೆಲೆಯಲ್ಲಿ ಅನೇಕ ವೈರುಧ್ಯಗಳನ್ನು ಒಳಗೊಂಡ, ಪೂರ್ಣತೆಯ ಎಡೆಗೆ ಚಲಿಸುವುದಷ್ಟೇ ಗುರಿಯಾಗಿರುತ್ತದೆ. ಇಂತಹ ಒಂದು ಜವಾಬ್ದಾರಿಯುತ ಒಳ ನೋಟವನ್ನು , ಅದಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಸಂಶೋಧನಾತ್ಮಕವಾಗಿ ವಿಶ್ಲೇಷಿಸುವ , ಶೈಲಜಾ ಅವರ ಅನನ್ಯ ಕೃತಿ ‘ಥೇರೀಗಾಥಾ ಕಾಣಿಸಿದ ಹೆಣ್ಣು- ಬೌದ್ಧ ಧರ್ಮದಲ್ಲಿ ಮಹಿಳೆ.
ಭಿಕ್ಕುಣಿಯರ ವಿಷಯದಲ್ಲಿ ಬುದ್ಧ ತೆಗೆದುಕೊಳ್ಳುತ್ತಿದ್ದ ಪ್ರಗತಿಶೀಲ ನಿಲುವುಗಳು ಹೊರಗಿನ ಸಮಾಜದ ನಿಷ್ಠುರು ನಿಲುವುಗಳಿಗೆ ಹೇಗೆ ವಿರುದ್ಧವಾಗಿದ್ದವು ಈ ನೆಲೆಯಲ್ಲಿ ಬುದ್ಧ ಎದುರಿಸಿದ, ಹೊಂದಾಣಿಕೆ ಮಾಡಿಕೊಂಡ ವಿಷಯಗಳು ಚರ್ಚಿತವಾಗಿದೆ. ಬುದ್ಧನಿಗೆ ಪ್ರಾರಂಭದಲ್ಲಿ ಭಿಕ್ಕುಣಿಯರನ್ನು ಸಂಘಕ್ಕೆ ಸೇರಿಸಿಕೊಳ್ಳುವುದರಲ್ಲಿ ವಿರೋಧವಿರುತ್ತದೆ. ಸ್ವತಃ ತನ್ನ ಚಿಕ್ಕ ತಾಯಿ ಗೌತಮಿಯೇ ಇದಕ್ಕೆ ಅಸ್ತಿವಾರ ಹಾಕುವವಳು. ಅವಳ ಬೇಡಿಕೆಯನ್ನೂ ಬಹಳ ಸಲ ನಿರಾಕರಿಸಿ ಆನಂತರ ಆನಂದನ ಸಲಹೆಯ ಮೇರೆಗೆ ಭಿಕ್ಕುಣಿಯರ ಸಂಘ ರೂಪುಗಳ್ಳೊಲು ತನ್ನ ಪರವಾನಗಿಯನ್ನು ಕೊಡುತ್ತಾನೆ.

ಫೋಟೋ ಕೃಪೆ : google
ಒಂದು ಕಾಲದ ನಾಡಿ ಮಿಡಿತವನ್ನು ಹಿಡಿಯಬೇಕಾದರೆ ಆಯಾ ಕಾಲದ ಬದಲಾಗುವ ಸಾಮಾಜಿಕ ಮಿಡಿತಗಳನ್ನು ಗ್ರಹಿಸುವುದು ಅಗತ್ಯ. ಈ ಮಿಡಿತವೆನ್ನುವುದು ಎಲ್ಲಾ ಕಾಲಕ್ಕೂ ಒಂದೇ ಆಗಿರುವುದಿಲ್ಲ. ಅವು ಆಯಾ ಸಂದರ್ಭ, ಸನ್ನಿವೇಶಗಳಿಗೆ ಬದಲಾಗುತ್ತಲೇ ಇರುತ್ತವೆ. ಹೀಗಾಗಿ ಅವು ವೈರುಧ್ಯಗಳಿಂದ ಕೂಡಿರುವುದು ಸಹಜ. ಯಾಕೆಂದರೆ ಅಲ್ಲಿ ಬದಲಾವಣೆಯೇ ಶಾಶ್ವತ. ಬದಲಾವಣೆಗಳನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸುತ್ತಾ ಚಲಿಸುವ ನಡೆಯೇ ಸುವರ್ಣ ಮಧ್ಯಮ ಮಾರ್ಗ.
ಹೆಣ್ಣು ಎಂದರೆ ಮಾಯೆ ಎನ್ನುವ ಪರಿಕಲ್ಪನೆ ಮೇಲುಗೈಯಾಗಿದ್ದ ಕಾಲದಲ್ಲಿ ಅಂತಹ ನೂರಾರು ಹೆಣ್ಣುಮಕ್ಕಳನ್ನು ತನ್ನ ಬೌದ್ಧ ಸಂಘಕ್ಕೆ ಸೇರಿಸಿಕೊಂಡು ಅವರನ್ನು ಮೋಕ್ಷದ ಮಾರ್ಗದತ್ತ ಒಯ್ಯುತ್ತಾನೆ ಬುದ್ಧ. ಆಶ್ಚರ್ಯವೆಂದರೆ ಅವರಲ್ಲಿ ಅದ್ಧಕಾಶೀ, ಅಂಬಪಾಲಿಯರಂತಹ ವೇಶ್ಯೆಯರೂ ಇರುವುದು.
“ಹೆಣ್ಣಿನ ಸ್ಥಿತಿಯೇ ನೋವು” – ಈ ನೋವೇ ಗಂಡುಗಳ ಪಳಗಿಸಬಲ್ಲ ತರಬೇತುದಾರ ಎಂಬ ಘೋಷ ವಾಕ್ಯ ಬರುತ್ತದೆ. ಈ ನೋವು ಗಂಡುಗಳನ್ನು ಮಾತ್ರವಲ್ಲ ಅನುಭವಿಸುವ ಸಾಧಕಿಯರನ್ನೂ ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ ಎನ್ನುವುದು ತಿಳಿದು ಬರುತ್ತದೆ.
ಇದು ಥೇರಿಯರ ಬದುಕಿನ ಗಾಥೆ. ಮಹಾಪ್ರಜಾಪತಿ ಗೌತಮಿ, ಖೇಮಾ, ಬದ್ಧಾ ಕುಂಡಲಕೇಶೀ, ಕಿಸಾಗೌತಮಿ ಮುಂತಾದ ಹನ್ನೆರಡು ಭಿಕ್ಕುಣಿಯರ ಸಾಹಸ, ಸಾಧನೆಗಳ ಕಥೆಯ ಜೊತಗೆ, ಭಿಕ್ಕುಣಿಗಳ ಸಂಘದಲ್ಲಿ ಬದಲಾಗುತ್ತಲೇ ಬಂದ ಸಾಮಾಜಿಕ ಸಂದರ್ಭಗಳಲ್ಲಿ ಹೆಣ್ಣಿನ ಸ್ಥಾನಮಾನ, ಅವರ ಸಮಸ್ಯೆಗಳು, ಅವರ ಸಂಘರ್ಷಗಳು, ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆಗಳು, ಸೋದರೀತ್ವದ ಪರಿಕಲ್ಪನೆ, ಭಿಕ್ಕುಗಳು ಮತ್ತು ಭಿಕ್ಕುಣಿಯರ ನಡುವಿನ ಕಾನೂನಾತ್ಮಕ ಭೇಧಗಳು, ಭಿಕ್ಕುಗಳು ಹಾಗೂ ಸ್ವತಃ ಬುದ್ಧನಲ್ಲೇ ಇದ್ದ ವೈರುಧ್ಯಗಳು, ಅನೇಕ ವೇಳೆ ಭಿಕ್ಕುಣಿಯರ ವಿರುದ್ಧವಾಗಿ ತೆಗೆದುಕೊಳ್ಳುತ್ತಿದ್ದ ನಿಲುವುಗಳು, ಬುದ್ಧ ಅವುಗಳನ್ನು ಪರಿಹರಿಸಿದ ಬಗೆ, ದಾಂಪತ್ಯದಲ್ಲಿ ಪತ್ನಿ ಪತಿಯ ಅನುವರ್ತಿಯಲ್ಲ ಸಹವರ್ತಿಯಾಗಬೇಕು ಎನ್ನುವುದನ್ನು ಸೂಚಿಸುತ್ತಿದ್ದ ಬಗೆ ಆ ಮೂಲಕ ಸಮಾಜದಲ್ಲಿ ಸದ್ದಿಲ್ಲದೇ ಕುಟುಂಬದಲ್ಲಿ ಲಿಂಗಸಮಾನತೆಯನ್ನು ಸೂಚಿಸುತ್ತಿದ್ದ ರೀತಿ, ಭಿಕ್ಕುಣಿಯರ ಮಾನಸಿಕ ಧೃಡತೆ, ಧಮ್ಮಕ್ಕೆ ಅವರಿಗಿರುವ ಬದ್ಧತೆ, ಅಲ್ಲದೇ ಅವರ ವೇಷಭೂಷಗಳು ಅವರ ಮುಟ್ಟಿನ ಸಮಸ್ಯೆಗಳು, ಭಿಕ್ಕುಗಳ ಮುಂದೆ ಸಂದರ್ಶನಕ್ಕೆ ಹಾಜರಾಗುವಾಗ ಅವರು ಅನುಭವಿಸುತ್ತಿದ್ದ ಮುಜುಗರ ಅದಕ್ಕೆ ಬುದ್ಧ ಸೂಚಿಸಿದ ಪರಿಹಾರ, ಹೀಗೆ ಸಂಘವನ್ನು ರೂಪಿಸಿ ಬೆಳೆಸುವಲ್ಲಿ ಉಂಟಾದ ಸಂಘರ್ಷಗಳು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ.
೨೫೦೦ ವರ್ಷಗಳ ಹಿಂದೆ ಹೆಣ್ಣುಮಕ್ಕಳ ಬಗ್ಗೆ ಇಂತಹ ಒಂದು ಚರ್ಚೆ ನಡೆದದ್ದು ವಿಸ್ಮಯವೇ ಸರಿ. ಮಹಿಳೆಯರ ವಿಷಯದಲ್ಲಿ, ಯುಗಪರಿವರ್ತನೆಯ ಸಂಧಿಕಾಲದ ತಲ್ಲಣಗಳನ್ನು, ಬುದ್ಧ ಮತ್ತು ಅವನ ಅನುಯಾಯಿಗಳು ನಿರ್ವಹಿಸಿದ ರೀತಿಯ ಬಗೆಗೆ ಹೊಸದೊಂದು ನೋಟವನ್ನೇ ಈ ಕೃತಿ ಪ್ರದಾನ ಮಾಡುತ್ತದೆ.
“ಬಹುಶಃ ಬೌದ್ಧಗ್ರಂಥಗಳನ್ನು ಹೊರತು ಪಡಿಸಿದರೆ ಮಹಿಳೆಯರ ದಿನನಿತ್ಯ ಬದುಕಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.ಅನೇಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಉಲ್ಲೇಖ ಮಾಡುವುದಲ್ಲದೇ ಸಾರ್ವಜನಿಕ ಬದುಕಿನಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು” ಎಂಬುದನ್ನು ಅನೇಕ ಗ್ರಂಥಗಳ ಆಧಾರದಿಂದ ಲೇಖಕಿ ಸಿದ್ಧಪಡಿಸುತ್ತಾರೆ.
“ಗಣಿಕೆಯರು ಮತ್ತು ವೇಶ್ಯೆಯರನ್ನು ಕೀಳಾಗಿ ಪರಿಭಾವಿಸಿರುವುದು ಆರಂಭದ ಪಾಲಿ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ”.
“ಬುದ್ಧನಿಗೆ ಬಹುಶಃ ಗಾಬರಿ ಇದ್ದದ್ದು ಭಿಕ್ಕುಣಿಯರ ಬಗ್ಗೆ ಅಲ್ಲ. ತನ್ನದೇ ಭಿಕ್ಕುಗಳ ಬಗ್ಗೆ.ಅವರು ಬಹುಬೇಗ ಭ್ರಷ್ಟರಾಗಬಲ್ಲರು ಎಂಬುದು ಅವನಿಗೆ ಗೊತ್ತಿತ್ತು”
ಬುದ್ಧ ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಪ್ರವಾಹಕ್ಕೆ ಎದುರಾಗಿ ಹೀಗೆ ಈಜುತ್ತಿದ್ದ ಎನ್ನುವುದಕ್ಕೆ ಲೇಖಕಿ ಕೊಡುವ ಕೆಲವು ಉದಾಹರಣೆಗಳು ವಿಸ್ಮಯಕಾರಕವಾಗಿವೆ.
ಉದಾಹರಣೆಗೆ : ಕಾರ್ಮಿಕರು ಹಾಗೂ ಸೇವಕರು ಖತ್ತಿಯ (ಕ್ಷತ್ರಿಯ), ಬ್ರಾಹ್ಮಣ ಮತ್ತು ಗಹಪತಿಗಳಿಗಂತ ಕೀಳು….ಎಂಬ ನಂಬಿಕೆ ಆಗಿನ ಸಮಾಜದಲ್ಲಿತ್ತು. ಆದರೆ ಆ ಕಾರಣಕ್ಕೆ ಅವರಿಗೆ ಸಂಘಕ್ಕೆ ಸೇರುವ ಅವಕಾಶವನ್ನು ಬುದ್ಧ ನಿರಾಕರಿಸಿರಲಿಲ್ಲ. ಕ್ಷೌರಿಕರು, ಕದುರೆ ತರಬೇತುಗಾರರು, ಬೆಸ್ತರ ಮಕ್ಕಳು ಚಂಡಾಲನೊಬ್ಬನ ಮಗ ಕೂಡ ಸಂಘಕ್ಕೆ ಸದಸ್ಯನಾಗಿದ್ದ”
“ಮುಟ್ಟಾದ ಭಿಕ್ಕುಣಿಯರು ಕುಳಿತಡೆ, ನಿಂತೆಡೆ ಅವರು ಓಡಾಡಿದ ಕಡೆಯೆಲ್ಲಾ ರಕ್ತದ ಕಲೆಗಳಾಗುತ್ತಿವೆ ಎಂದು ಮಹಾಪ್ರಜಾಪತಿ ಗೌತಮಿ, ಬುದ್ಧನಿಗೆ ಹೇಳುತ್ತಾ ” ಹೆಂಗಸರು ಬಟ್ಟೆಯ ಚೂರುಗಳನ್ನು ಹೊಸೆದು ಮಾಡಿದ ಅಣಿಕೋಲಕ ಅಂದರೆ ಕಡಾಣಿ ಅಥವ ಕಡಗೀಲಿನಂತಹ ಬಟ್ಟೆಯನ್ನ ಧರಿಸಬಹುದೇ? ” ಎಂದು ಕೇಳುತ್ತಾಳೆ. ಅದಕ್ಕೆ ಅವನು ಒಪ್ಪಿ ಯೋನಿಯಲ್ಲಿ ಅದನ್ನು ಎಷ್ಟು ಆಳಕ್ಕೆ ತುರುಕಿಕೊಳ್ಳಬಹುದು? ಎಂಬೆಲ್ಲಾ ಚರ್ಚೆಗಳು ನಡೆದ ನಂತರ ಕೊನೆಗೆ ಬುದ್ಧ ಅವರಿಗೆ ಸೊಂಟದ ಸುತ್ತ ಒಂದು ಉಡುದಾರದಂತಹ ದಾರವನ್ನು ಕಟ್ಟಿಕೊಂಡು ಒಂದು ಬಟ್ಟೆಯ ತುಂಡನ್ನು ಕೌಪೀನದಂತೆ ಧರಿಸುವಂತೆ ಹೇಳುತ್ತಾನೆ.
“ಆ ಕಾಲದಲ್ಲಿ ಬಟ್ಟೆ ಸುಲಭವಾಗಿ ಲಭ್ಯವಿರಲಿಲ್ಲ. ಬಳಕೆಯಾದ ಮೇಲೆ ಬಟ್ಟೆಯನ್ನು ಒಗೆದು ಸಂಘಕ್ಕೆ ವಾಪಸ್ಸು ಕೊಡಬೇಕಿತ್ತು. ಏಕೆಂದರೆ ಆ ಬಟ್ಟೆ ಸಂಘದ ಆಸ್ತಿಯಾಗಿತ್ತು.
ಇದು ಓದುಗರನ್ನು ಅವಾಕ್ಕಾಗಿಸುವ ಸಂಗತಿ. ಮುಟ್ಟು ಎನ್ನುವುದು ಮೈಲಿಗೆಯಾಗಿರದಿದ್ದರೂ ಕೆಲವು ಕಡೆ ಆಚರಣೆಯಲ್ಲಿ ಇರಲಿಲ್ಲ. ಮುಟ್ಟಾದ ಭಿಕ್ಕುಣಿಯರು ಸ್ತೂಪಕ್ಕೆ ಪ್ರದಕ್ಷಿಣೆ ಬರುವುದನ್ನು ನಿಷೇಧಿಸಲಾಗಿತ್ತು,” ಎಂದು ಹೇಳುತ್ತಾ ಹಿಂದು ಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು ಎನ್ನುವ ಲೇಖಕಿಯ ಸಮದಂಡಿಯಾದ ದೃಷ್ಟಿಯನ್ನು ಮೆಚ್ಚಲೇಬೇಕು.
ಈ ಎಲ್ಲ ವಿಚಾರಗಳು ಬುದ್ಧನನ್ನು ಅರ್ಥಮಾಡಿಕೊಳ್ಳುವಲ್ಲಿ ಹೊಸ ನೋಟವೊಂದನ್ನು ದಯಪಾಲಿಸುತ್ತವೆ. ಇಂಗ್ಲಿಷ್ ಪಾಲಿ ಮುಂತಾದ ಭಾಷೆಗಳಲ್ಲಿ ದೊರಕುವ ಹಲವಾರು ಗ್ರಂಥಗಳ ಆಧಾರದ ಮೇಲೆ ಇಂತಹ ಒಂದು ಅದ್ಭುತ ಕೃತಿಯನ್ನು ನೀಡಿದ ಲೇಖಕಿ ಶೈಲಜಾ ಅವರಿಗ ಅಭಿನಂದನೆಗಳು.
- ಡಾ.ಗಿರಿಜಾ ಶಾಸ್ತ್ರಿ
