ಉದಯಗಿರಿ, ಕಂದಗಿರಿಯ ಪ್ರವಾಸ ಕೇವಲ ಮೋಜಿನದ್ದಲ್ಲ, ಇದು ಧಾರ್ಮಿಕ ಮತ್ತು ಆಧ್ಯಯನದ ಪ್ರವಾಸವೂ ಹೌದು. ಇಲ್ಲಿರುವ ಗುಹೆಗಳು ಅಜಂತಾ, ಎಲ್ಲೋರದ ಗುಹೆಗಳನ್ನು ನೆನಪಿಸುತ್ತದೆ. ಇಲ್ಲಿನ ಪ್ರವಾಸದ ಅನುಭವವನ್ನು ಲೇಖಕಿ ಗೀತಾ ಕುಂದಾಪುರ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ತಪ್ಪದೆ ಮುಂದೆ ಓದಿ…
ನಮ್ಮ ಇತಿಹಾಸಕ್ಕೆ ಸಾಕ್ಷಿಯಾಗಿ, ಭಾರತದ ಶಿಲ್ಪಕಲೆ, ಸಂಸ್ಕೃತಿ, ಪರಂಪರೆಗೆ ಧ್ವನಿಯಾಗಿ, ರಾಜನ ಧರ್ಮ ಮತ್ತು ಶ್ರದ್ಧೆಗೆ ಉದಾಹರಣೆಯಂತಿವೆ ಉದಯಗಿರಿ ಮತ್ತು ಖಂಡಗಿರಿ ಗುಹೆಗಳು. ಇದು ಒಡಿಶಾದ ರಾಜಧಾನಿ ಭುವನೇಶ್ವರದ ಏರ್ಪೋರ್ಟಿನಿಂದ 6-7ಕೀಮಿ ದೂರದಲ್ಲಿ ಅದೇ ಹೆಸರಿನ ಬೆಟ್ಟಗಳ ಮೇಲಿವೆ. ಬೆಟ್ಟಗಳೆರಡೂ ಕುಮಾರಿ ಪರ್ವತಶ್ರೇಣಿಯ ಭಾಗ. ಎದುರು ಬದುರಿನಲ್ಲಿರುವ ಉದಯಗಿರಿ ಮತ್ತು ಖಂಡಗಿರಿ ಬೆಟ್ಟಗಳ ಮಧ್ಯೆ ಈಗ ಹೆದ್ದಾರಿ ಹಾದು ಹೋಗುತ್ತಿದೆ. ಎರಡು ಸಾವಿರ ವರ್ಷಗಳು ಸಂದರೂ ಜೈನ ಭಕ್ತರನ್ನು, ಸಾವಿರಾರು ಪ್ರವಾಸಿಗರನ್ನೂ ತನ್ನೆಡೆಗೆ ಸೆಳೆಯುತ್ತಿದೆ. ಈಗೀನ ಒಡಿಶಾ ರಾಜ್ಯ ಹಿಂದೆ ಕಳಿಂಗ ರಾಜ್ಯ ಎಂದೂ ಕರೆಯಲ್ಪಡುತ್ತಿತ್ತು, ಮೌರ್ಯ ಸಾಮ್ರಾಟ್ ಅಶೋಕನೊಡನೆ ಮಾಡಿದ ಕಳಿಂಗ ಯುದ್ಧ ಇತಿಹಾಸ ಪ್ರಸಿದ್ಧ.
ಇದರಲ್ಲಿರುವ ಹೆಚ್ಚಿನ ಗುಹೆಗಳು ಮಾನವ ನಿರ್ಮಿತ, ಕೆಲವು ನೈಸರ್ಗಿಕ. ಅಜಂತಾ, ಎಲ್ಲೋರಾಗೆ ಹೋಲಿಸಿದರೆ ಇಲ್ಲಿ ರೋಮಾಂಚನಗೊಳ್ಳುವಂತಹ ಅಲಂಕಾರದ ಕೆತ್ತನೆಗಳಾಗಲಿ, ಮೂರ್ತಿಗಳಾಗಲಿ ಇಲ್ಲ; ವೈಭವವಿಲ್ಲ, ಬದುಕಲು ಎಷ್ಟು ಬೇಕೋ ಅಷ್ಟು, ಭಗವಂತನನ್ನು ಧ್ಯಾನಿಸಲು ಅನುಕೂಲವಿರುವಂತಹ ಗುಹೆಗಳಿವು. ಕ್ರಿಸ್ತಪೂರ್ವ ಮೊದಲು ಮತ್ತು ಎರಡನೆ ಶತಮಾನದ ಕಾಲಘಟ್ಟದಲ್ಲಿ ನಿರ್ಮಿಸಿದ ಗುಹೆಗಳನ್ನು ಮಹಾಮೇಘವಾಹನ ರಾಜವಂಶದ ರಾಜ ಕರವೇಲನ ನೇತೃತ್ವದಲ್ಲಿ ನಿರ್ಮಿಸಲಾಯಿತು. ಎಲ್ಲವನ್ನು ತ್ಯಾಗ ಮಾಡಿ ಸದಾ ತಿರುಗಾಟದಲ್ಲಿರುವ ಜೈನ ಮುನಿಗಳಿಗೆ ಆಸರೆ ಕೊಡಲು ಇದನ್ನು ನಿರ್ಮಿಸಿದರು.

ಗುಹೆಗಳು ನೆಲದಿಂದ ಸುಮಾರು 150 ಅಡಿ ಎತ್ತರದಲ್ಲಿದೆ. ಮೊದಲಿಗೆ 117 ಗುಹೆಗಳನ್ನು ನಿರ್ಮಾಣವಾದರೂ 33 ಗುಹೆಗಳನ್ನು ಮಾತ್ರ ನೋಡಬಹುದೀಗ. ಉದಯಗಿರಿ ಬೆಟ್ಟದಲ್ಲಿ 18 ಗುಹೆಗಳಿದ್ದರೆ, ಖಂಡಗಿರಿಯಲ್ಲಿ 15 ಗುಹೆಗಳಿವೆ. ಗುಹೆಗಳು ಒಂದು ಕಾಲದಲ್ಲಿ ಕಳಿಂಗ ರಾಜ್ಯವಾಳಿದ, ಶಕ್ತಿಯುತ, ಶ್ರೀಮಂತ, ಪ್ರಸಿದ್ಧ ಗುಪ್ತ, ಮಹಾಮೇಘವಾಹನ, ಮೌರ್ಯ, ರಾಜವಂಶದವರ ಏಳು ಬೀಳನ್ನು ಕಂಡಿದೆ. ಇದು ಕೇವಲ ಕಲ್ಲುಗಳ ರಾಶಿಯಲ್ಲ, ಇದು ಇತಿಹಾಸದ ಪುಟವನ್ನು ತಿರುವಿ ಆ ಕಾಲದ ಇತಿಹಾಸ, ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತದೆ.
ಜೈನ ಮುನಿಗಳಿಗಾಗಿ ನಿರ್ಮಿಸಿದ ಗುಹೆಯ ಮುಚ್ಚಿಗೆ ಬಹಳ ಕೆಳಮಟ್ಟದಲ್ಲಿದ್ದು ಮನುಷ್ಯ ತಗ್ಗಿ, ಬಗ್ಗಿ ನಡೆಯಬೇಕು ಎನ್ನುವಂತಿದೆ. ಪ್ರತಿ ಗುಹೆಯಲ್ಲಿ ಕುಡಿಯುವ ನೀರು ಬರುವ ವ್ಯವಸ್ಥೆಯಿದೆ. ಮುನಿಗಳ ಮಧ್ಯೆ ಸಂವಹನಕ್ಕಾಗಿ ತೂತುಗಳು, ದೀಪವಿಡಲು ಕಿಂಡಿಗಳಿವೆ. ಕೆಲವೊಂದು ಗುಹೆಗಳಲ್ಲಿ ಎರಡು ಅಂತಸ್ತಿದ್ದು ಮೇಲಿನಂತಸ್ತು ಮುನಿಗಳಿಗೆ ಧ್ಯಾನ ಮಾಡಲು ಇರಬಹುದು. ಹೆಚ್ಚಿನ ಗುಹೆಗಳು 4-6 ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡದಿದ್ದರೆ ಕೆಲವೊಂದು 10-12 ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡದಿದೆ. ಜೈನರ 24ನೇ ತೀರ್ಥಕರನಾದ ಮಹಾವೀರ ಈ ಕುಮಾರಿ ಪರ್ವತ ಶ್ರೇಣಿಗೆ ಬಂದು ಭೋದಿಸನೆಂದು ಹೇಳಲಾಗಿದ್ದರಿಂದ ಜೈನರಿಗಿದು ಪವಿತ್ರ ಯಾತ್ರಾಸ್ಥಳ.
ಕ್ರಿಸ್ತಪೂರ್ವ ಕಾಲಘಟ್ಟದಲ್ಲಿ ನಿರ್ಮಿಸಿದರೂ ಕಾಲಚಕ್ರ ತಿರುಗಿದಂತೆ ನಿದಾನವಾಗಿ ನೇಪತ್ಯಕ್ಕೆ ತೆರಳಿ, ಜನ-ಮನದಿಂದ ದೂರವಾಯಿತು. ಮತ್ತೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಫೀಸರ್ ಆಂಡ್ರ್ಯೂ ಸ್ಟೆರ್ಲಿಂಗ್ ಕಣ್ಣಿಗೆ ಕಾಣಿಸಿ ಜನಪ್ರಿಯವಾಯಿತು. ಈಗ ಭುವನೇಶ್ವರಕ್ಕೆ ಪ್ರವಾಸ ಬಂದವರು ಅಗತ್ಯವಾಗಿ ನೋಡುವ ಸ್ಥಳವಾಗಿದೆ.

ಉದಯಗಿರಿ ಗುಹೆಗಳು – ಇಲ್ಲಿರುವ 18 ಗುಹೆಗಳಲ್ಲಿ ಅತ್ಯಂತ ದೊಡ್ಡದು ಹಾಗೂ ಮುಖ್ಯವಾದದ್ದು ʻರಾಣಿ ಗುಂಪʼ (ರಾಣಿ ಗುಹೆ) ಇದು ಎರಡಂತಸ್ತಿನಲ್ಲಿದ್ದು ಮೂರು ವಿಭಾಗದಲ್ಲಿದೆ, ಮಧ್ಯದ ವಿಭಾಗವು ದೊಡ್ಡದಾಗಿದ್ದು ಕೆಳ ಅಂತಸ್ತಿನಲ್ಲಿ 7 ಪ್ರವೇಶದ್ವಾರ ಮತ್ತು ಮೇಲಿನಂತಸ್ತಿನಲ್ಲಿ 9 ಕಂಬಗಳಿವೆ. ಗೋಡೆಗಳ ಮೇಲೆ, ಬಾಗಿಲಿನ ತೊಲೆಯ ಮೇಲೆ ವಾದ್ಯಯಂತ್ರವನ್ನು ನುಡಿಸುತ್ತಿರುವ ಮಹಿಳೆ, ಮಾನವ ಗೋಪುರ, ಮರಗಿಡಗಳು, ಪ್ರಾಣಿಗಳ ಕೆತ್ತನೆಯಿದೆ. ಇದು ಸಾಕಷ್ಟು ಎತ್ತರವೂ ಇದೆ. ʻಗಣೇಶ ಗುಂಪʼ, ಇದು ಇಲ್ಲಿರುವ ಮತ್ತೊಂದು ಆಕರ್ಷಕ ಗುಹೆ, ಗುಹೆಯ ಹಿಂಭಾಗದ ಗೋಡೆಯ ಮೇಲೆ ಗಣೇಶನ ಕೆತ್ತನೆಯಿದೆ, ಹಾರವನ್ನು ಸೊಂಡಿಲಲ್ಲಿ ಹಿಡಿದಿರುವ ಆನೆ ಮತ್ತು ದ್ವಾರಪಾಲಕನ ಮೂರ್ತಿಗಳಿವೆ. ಉದಯಗಿರಿಯಲ್ಲಿರುವ ಗುಹೆಗಳು ಅಡ್ಡಡ್ಡಕ್ಕೆ ಹರಡಿಕೊಂಡಿದ್ದು ಹೆಚ್ಚಿನವು ಒಂದಕ್ಕೊಂದು ಜೋಡಿಸಿಕೊಂಡಿವೆ. ಪ್ರತಿಯೊಂದು ಗುಹೆಗೂ ನಂಬರ್ ಮತ್ತು ಹೆಸರಿದೆ, ʻಚೋಟಾ ಹಾತಿ ಗುಂಪʼ, ʻಹಾತಿ ಗುಂಪʼ, ʻಅಲಕಪುರಿ ಗುಂಪʼ, ʻಜಯ, ವಿಜಯ ಗುಂಪʼ, ʻಟಕುರಾನಿ ಗುಂಪʼ, ʻಏಕಾದಶಿ ಗುಂಪʼ, ʻಸರ್ಪ ಗುಂಪʼ ಮುಂತಾದವು, ಸ್ಥಳೀಯ ಭಾಷೆಯಲ್ಲಿರುವ ಈ ಹೆಸರುಗಳನ್ನು ಇತ್ತೀಚೆಗೆ ಕೊಟ್ಟಿರಬಹುದೇನೋ, ಇಲ್ಲಿ ಗುಂಪ ಎಂದರೆ ಗುಹೆ ಎಂದರ್ಥ. ಕೆಲವೊಂದು ಗುಹೆಯ ಹೊರಗೆ ಹೆಸರನ್ನು ಸೂಚಿಸುವ ಬೋರ್ಡುಗಳನ್ನೂ ಕಾಣಬಹುದು. ಗುಹೆಗಳು ಒಂದೇ ಆಕಾರದಲ್ಲಿಲ್ಲ, ಇಲ್ಲಿರುವ ಕೆತ್ತನೆಗಳೂ, ಮೂರ್ತಿಗಳೂ ಬೇರೆ, ಬೇರೆ ರೀತಿಯಲ್ಲಿದೆ. ಗುಹೆಯೊಂದರ ಮುಂಭಾಗದಲ್ಲಿ 6 ಚಿಕ್ಕ ಆನೆಗಳ ಮೂರ್ತಿ ಮತ್ತು ಕಾವಲುಗಾರನ ಮೂರ್ತಿಯಿದೆ. ಮತ್ತೊಂದು ಗುಹೆಯ ಮುಂಭಾಗದಲ್ಲಿ ತನ್ನ ಆಹಾರವನ್ನು ಬಾಯಲ್ಲಿ ಕಚ್ಚಿಕೊಂಡಿರುವ ಸಿಂಹದ ಮೂರ್ತಿಯಿದೆ.
ಅಗಲವಾದ ರಾಂಪ್ ಮತ್ತು ಮೆಟ್ಟಿಲುಗಳಿದ್ದು ಗುಹೆಯನ್ನು ಸುಲಭದಲ್ಲಿ ತಲುಪಬಹುದು. ಬೆಟ್ಟದ ತುದಿ ತಲುಪಿದಾಗ ಸುತ್ತಮುತ್ತಲಿರುವ ಹಳ್ಳಿ, ಮರ-ಗಿಡಗಳಿರುವ ಸುಂದರ ದೃಶ್ಯ ನಮ್ಮದಾಗುತ್ತದೆ. ಉದಯಗಿರಿ ಗುಹೆಗಳು ಹೆಚ್ಚು ಸುಂದರ, ಸ್ವಚ್ಛ ಮತ್ತು ಮನಸೆಳೆಯುತ್ತದೆ.

ಖಂಡಗಿರಿ ಗುಹೆಗಳು –
ಖಂಡಗಿರಿಯಲ್ಲಿವೆ 15 ಗುಹೆಗಳು, ʻತೋತ್ವ ಗುಂಪʼ, ʻಅನಂತ ಗುಂಪʼ, ʻಖಂಡಗಿರಿ ಗುಂಪʼ, ʻನವಮುನಿ ಗುಂಪʼ, ʻಬಾರಾಭುಜಿ ಗುಂಪʼ, ʻತ್ರುಶುಲಾ ಗುಂಪʼ, ʻಅಂಬಿಕಾ ಗುಂಪʼ ಮುಂತಾದವು, ಎಲ್ಲವೂ ಸ್ಥಳಿಯ ಭಾಷೆಯಲ್ಲಿರುವ ಹೆಸರುಗಳು.
ಬೆಟ್ಟವೇರುತ್ತಿದ್ದಂತೆ ಮೊದಲಿಗೆ ಸಿಗುವ ಗುಹೆಯೇ ʻತೋತ್ವ ಗುಂಪʼ, ಎದುರಿನಲ್ಲಿರುವ ಕಮಾನಿನಲ್ಲಿ ಎರಡು ಗಿಳಿಗಳ ಕೆತ್ತನೆಯಿದೆ, ಗುಹೆಯ ಎರಡೂ ಕಡೆ ದ್ವಾರಪಾಲಕರು, ಸಿಂಹ ಮತ್ತು ಎತ್ತಿನ ಚಿತ್ರಣವಿದೆ. ಇಲ್ಲಿನ ಕೆಲವೊಂದು ಗುಹೆಯ ಗೋಡೆಗಳಲ್ಲಿ ಜೈನ ತೀರ್ಥಂಕರರ ಮೂರ್ತಿಗಳಿವೆ. ಮತ್ತೊಂದು ಗುಹೆಯ ಹೊರಗಡೆ ಎರಡು ಹಾವುಗಳು, ಆಟಗಾರ, ಹೆಂಗಸಿನ ಕೆತ್ತನೆಗಳಿವೆ.
ಖಂಡಗಿರಿ ಬೆಟ್ಟದ ಮೇಲೆ ಜೈನ ಮಂದಿರವೂ ಇದೆ. ನಾವು ಇಲ್ಲಿಗೆ ಭೇಟಿ ಕೊಟ್ಟಾಗ ಉತ್ಸವ ನಡೆಯುತ್ತಿದ್ದು ಹೆಚ್ಚಿನ ಗುಹೆಗಳಲ್ಲಿ ತಾಂತ್ರಿಕರು ಕುಳಿತಿದ್ದರು, ಅಲ್ಲಲ್ಲಿ ಬಳೆ, ಸರ ಮಾರಾಟ ಮಾಡುವವರಿದ್ದರು. ಹಾಗೆಯೇ ಹೋಮ, ಹವನಗಳೂ ಅಲ್ಲಲ್ಲಿ ನಡೆಯುತ್ತಿದ್ದವು. ಹಾಗಾಗಿ ಖಂಡಗಿರಿ ಬೆಟ್ಟದ ಎಲ್ಲಾ ಗುಹೆಗಳನ್ನು ಸಮೀಪದಿಂದ ನೋಡಲಾಗಲಿಲ್ಲ. ಇಲ್ಲಿ ಮೇಲೆ ಹತ್ತಿ ಹೋಗಲು ಸರಿಯಾದ ಮೆಟ್ಟಿಲುಗಳೂ ಇಲ್ಲ.

ಶಾಸನಗಳು ಮತ್ತು ಬರಹಗಳು – ಕೆಲವೊಂದು ಗುಹೆಯ ಮೇಲೆ ಶಾಸನಗಳು ಮತ್ತು ಬರಹಗಳು ಕಂಡು ಬಂದವು. ಬರಹಗಳೆಲ್ಲವೂ ರಾಜ ಕರವೇಲನ ಕಾಲದ್ದು ಹಾಗೂ ಅವನಿಗೆ ಸಂಬಂಧಿಸಿದ್ದೇ. ಇಲ್ಲಿನ ಬರಹವೊಂದು ರಾಜ ಕರವೇಲ ಮತ್ತು ಅವನ ಎರಡನೆಯ ಹೆಂಡತಿಯ ಮೇಲಿರುವ ಪ್ರೀತಿಯ ಬಗ್ಗೆ ಅಂತೆ. ಮತ್ತೊಂದು ಅಲೆಕ್ಸಾಂಡರ್ ದಿ ಗ್ರೇಟ್ ನೊಂದಿಗಿರುವ ಸಂಭಾಷಣೆಯಂತೆ. ಇಂತಹ ಬರವಣಿಗೆಗಳು, ಶಾಸನಗಳು ಇತಿಹಾಸಕ್ಕೆ ಸಾಕ್ಷಿಯಾಗುತ್ತವೆ. ಇಲ್ಲಿ ಬರೆದು ದಾಖಲಾಗಿರುವ ಘಟನೆಗಳು ಕಾಲಾನುಕ್ರಮವಾಗಿದೆ. ಹಾಗೆಯೇ ಒಡಿಶಾದಲ್ಲಿ ನಡೆದಿರುವ ಅಶೋಕ ಮತ್ತು ಕಳಿಂಗ ಯುದ್ಧದ ದಾಖಲೆಯೂ ಇದೇ ಗುಹೆಯಲ್ಲಿ ಸಿಗುತ್ತದೆ. ಇಲ್ಲಿ ಬರೆಯಲು ಬ್ರಾಹ್ಮಿ ಲಿಪಿಯನ್ನು ಉಪಯೋಗಿಸಲಾಗಿದೆ, ಬ್ರಾಹ್ಮಿ ಲಿಪಿಯೇ ದೇವನಾಗರಿ ಭಾಷೆಗೆ ಮೂಲ, ಹಾಗೆಯೇ ದೇವನಾಗರಿ ಸಂಸ್ಕೃತ ಭಾಷೆಗೆ ಲಿಪಿ. ಸಂಸ್ಕೃತ ಗೊತ್ತಿದ್ದರೂ ಇಲ್ಲಿರುವ ಬರಹಗಳನ್ನು ಓದಲಾಗದು, ಲಿಪಿಯಲ್ಲೂ ಆವಿಷ್ಕಾರವಾಗಿದೆ, ಬದಲಾವಣೆಯಾಗಿದೆ.
ಇಲ್ಲಿರುವ ಗುಹೆಗಳು ಅಜಂತಾ, ಎಲ್ಲೋರದ ಗುಹೆಗಳನ್ನು ನೆನಪಿಸುತ್ತದೆ. ಅಜಂತಾ, ಎಲ್ಲೋರದ ಗುಹೆಗಳ ಎತ್ತರ ಜಾಸ್ತಿ, ಅಲ್ಲಿರುವ ಗುಹೆಗಳ ವಾಸ್ತುಶಿಲ್ಪ ನಾಜೂಕಿನದ್ದು, ಹಾಗೂ ಹೆಚ್ಚಿನ ಗುಹೆಗಳು ಬೌದ್ಧ ಬಿಕ್ಷುಗಳಿಂದ ಮತ್ತು ಬೌದ್ಧ ಧರ್ಮದ ಅನುಯಾಯಿಗಳಿಂದ ಕಟ್ಟಿದ್ದು, ಹಾಗಾಗಿ ಹೆಚ್ಚಿನ ಕೆತ್ತನೆಗಳು, ಮೂರ್ತಿಗಳು ಬುದ್ಧ ಮತ್ತು ಬೋಧಿಸತ್ವನ ಬಗ್ಗೆಯೇ ಇದೆ.

ಇಲ್ಲಿಗೆ ಸಂದರ್ಶಿಸಬೇಕೆಂದರೆ ಬೆಳಿಗ್ಗೆ ಸೂಕ್ತ ಸಮಯ, ಮಧ್ಯಾಹ್ನದ ಹೊತ್ತು ತಲೆ ಸುಡುವ ಬಿಸಿಲು ಮತ್ತು ಕಾದಿರುವ ಬಂಡೆಗಳು ಹೆಚ್ಚು ಹೊತ್ತು ಅಲ್ಲಿರಲು ಬಿಡಲಾರದು. ಪ್ರವೇಶ ಸಮಯ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ.
ಇಲ್ಲಿಯೂ ಟಿಕೆಟ್ ಇದ್ದು, ಎರಡೂ ಗುಹೆಗಳಿಗೂ ಒಟ್ಟಿಗೆ ಟಿಕೆಟ್ ತೆಗೆದುಕೊಳ್ಳಬೇಕು, ಪ್ರವೇಶ ದರ ರೂ 15.
ಉದಯಗಿರಿ, ಕಂದಗಿರಿಯ ಪ್ರವಾಸ ಕೇವಲ ಮೋಜಿನದ್ದಲ್ಲ, ಇದು ಧಾರ್ಮಿಕ ಮತ್ತು ಆಧ್ಯಯನದ ಪ್ರವಾಸವೂ ಹೌದು, ಎಲ್ಲವನ್ನು ತಿಳಿದುಕೊಳ್ಳಲು ಮನಸ್ಸನ್ನು ತೆರೆದಿಡಬೇಕಷ್ಟೇ.
- ಗೀತಾ ಕುಂದಾಪುರ
