‘ಕಂಡಷ್ಟೂ ಪ್ರಪಂಚ’ ಕೃತಿ ಪರಿಚಯ

ಲೇಖಕಿ ಅಂಜಲಿ ರಾಮಣ್ಣ ಅವರು ಸ್ತ್ರೀ ಪರ ನಿಲುವುಗಳನ್ನು ಹೊಂದಿರುವ ಮಹಿಳೆ. ಹಾಗೆಂದು ಅವರು ಪುರುಷರ ವಿರೋಧಿಯಲ್ಲ. ಅವರ ಕಂಡಷ್ಟೂ ಪ್ರಪಂಚ ಕೃತಿಯ ಕುರಿತು ಹಿರಿಯ ಸಾಹಿತಿಗಳಾದ ಉದಯ ಕುಮಾರ್ ಹಬ್ಬು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕಂಡಷ್ಟೂ ಪ್ರಪಂಚ
ಲೇಖಕರು: ಅಂಜಲಿ ರಾಮಣ್ಣ
ಪ್ರಕಾಶಕರು : ಸೀಮಾ ಪಬ್ಲಿಷರ್ಸ್

ಅಂಜಲಿ ರಾಮಣ್ಣ ಅವರು ಬರೆದ “ಕಂಡಷ್ಟು ಪ್ರಪಂಚ” ಒಂದು ವಿಶಿಷ್ಟ ಬಗೆಯ ಪ್ರವಾಸ ಕಥನ. ದೇಶ ಸುತ್ತು- ಕೋಶ ಓದು‌, ನೀ ಮನುಷ್ಯ ಬದುಕನ್ನು ಸಾರ್ಥಕಗೊಳಿಸು” ಈ ಸಿದ್ಧಾಂತದಲ್ಲಿ ಗಾಢವಾದ ನಂಬಿಕೆಯಿರವ ಲೇಖಕಿ ತುಂಬ ಸೊಗಸಾದ, ಆಕರ್ಷಕ ಶೈಲಿಯಲ್ಲಿ ದೇಶ- ವಿದೇಶಗಳ ಪ್ರವಾಸ ಕಥನವನ್ನು ಬರೆದಿದ್ದಾರೆ.

ಪ್ರವಾಸ ಕಥನದ ಲಾಭ ಏನೆಂದರೆ ಪ್ರವಾಸಿಗ ತಾನು ಹೋದ ದೇಶ ವಿದೇಶಗಳ ಆಕರ್ಷಕ ಪ್ರವಾಸಿ ತಾಣಗಳ ಬಗ್ಗೆ, ಅಲ್ಲಿನ ಜನಜೀವನದ, ಸಂಸ್ಕೃತಿಯ ಬಗ್ಗೆ ಇತಿಹಾಸ ಭೂಗೋಲದ ಬಗ್ಗೆ ಮಾಹಿತಿ ಕೊಡುವುದರಿಂದ ಓದುಗನಿಗೂ ಆ ಸ್ಥಳಕ್ಕೆ ಹೋಗಬೇಕೆಂಬ ಪ್ರೇರಣೆ ಸಿಗುತ್ತದೆ‌.

ಅಂಜಲಿ ಯಾವುದೊ ಪ್ರವಾಸವನ್ನು ಕೈಕೊಳ್ಳುವಾಗ ಕೆಲವು ನಿರ್ದಿಷ್ಟವಾದ ಉದ್ದೇಶಗಳನ್ನಿಟ್ಟುಕೊಂಡು ಗಮ್ಯಸ್ಥಾನಕ್ಕೆ ಪ್ರವಾಸ ಕೈಕೊಳ್ಳುತ್ತಾರೆ. ಆ ಮೊದಲೇ ನಿರ್ಧರಿಸಿದ ಉದ್ದೇಶಗಳನ್ನು ಈಡೇರಿಸುವಾಗ ಕೆಲವು‌ ಆನುಷಂಗಿಕ ಉದ್ದೇಶಗಳು ಅಥವಾ ನೋಡಬೇಕಾದ ಹೊಸ ತಾಣಗಳು ಗೋಚರಿಸುತ್ತವೆ‌.

ಮತ್ತು ಪ್ರವಾಸದ ಪೂರ್ವ ತಯಾರಿಯಲ್ಲಿ ತುಂಬ ನಿಗಾ ವಹಿಸುತ್ತಾರೆ. ಅವರು ನೋಡಿದ ಪ್ರವಾಸಿ ತಾಣಗಳ ಕುರಿತು ಅವರ ಅನುಭವಗಳನ್ನು ಸ್ವಾರಸ್ಯಕರವಾಗಿ ನಿರೂಪಿಸುತ್ತಾರೆ.‌

ನಮಗೆ ಲಂಡನ್ ಪ್ಯಾರಿಸ್, ಗ್ರೀಸ್ ಮಾರಿಷಸ್, ವಾಷಿಂಗ್ಟನ್, ಎಡಿನಬರ್ಗ್,ಶ್ರೀಲಂಕಾ, ಕಾರ್ಡಿಫ್ ವೇಲ್ಸ್ ಟೆಹ್ರಾನ್, ಇರಾನ್, ಯು.‌ಕೆ ಯ ಸರಸ್ವತಿ ನಗರ ಕೆಂಬ್ರಿಜ್, ವಾಷಿಂಗ್ಟನ್ ಡಿ ಸಿ, ದ್ರಾಕ್ಷಾರಸದ ಸ್ವರ್ಗ- ಗ್ರೀಸ್ ಇವು ಅವರು ಭೇಟಿ ಕೊಟ್ಟಿರುವ ಅನೇಕ ಪ್ರದೇಶಗಳಲ್ಲಿ ಕೆಲವು ಮಾತ್ರ

ಎಡಿನ್ ಬರ್ಗ್ನಲ್ಲಿ ವ್ಯಾಲೆಂಟೈನ್ ಎನ್ನುವ ಲೇಖನ ನಾಯಿಯೊಂದರ ಅಮರ ಪ್ರೇಮದ ಕಥೆ ಹೇಳುತ್ತದೆ. ಜರ್ಮನಿಯ ವರ್ಜಿನ್ ಮೇರಿ ಮತ್ತು ಕ್ರಿಸ್ತ ನಾಟಕದ ಪಾತ್ರಕ್ಕಾಗಿ ಹೇಗೆ ನಟರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ವಿಶಿಷ್ಟ ವಿವರಗಳನ್ನು ನೀಡುತ್ತಾರೆ.‌ ಮೇರಿ ಪಾತ್ರ ಮಾಡಲು ಜರ್ಮನಿಯ ಹೆಮ್ಮಕ್ಕಳಲ್ಲಿ ಪೈಪೋಟಿ ಇರುತ್ತದೆ. ಆ ಪಾತ್ರ ಮಾಡಲು ಹಾಕಿರುವ ನಿಯಮಗಳನ್ನು ನೋಡುವಾಗ ನಮಗೆ ದಂಗಾಗುತ್ತದೆ.

ಲೇಖಕಿಯು ಸ್ತ್ರೀ ಪರ ನಿಲುವುಗಳನ್ನು ಹೊಂದಿರುವ ಮಹಿಳೆ. ಹಾಗೆಂದು ಪುರುಷ ವಿರೋಧಿಯಲ್ಲ. ಯುದ್ಧದಲ್ಲಿ ಭಾಗವಹಿಸಿದ ಮಹಿಳೆಯರು ಹೇಳಹೆಸರಿಲ್ಲದೆ ಅನಾಮಿಕರಾಗಿದ್ದುದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. “ಯುದ್ಧ ಮತ್ತು ಮಹಿಳೆ” ಲೇಖನದಲ್ಲಿ‌.‌ ಲಂಡನ್, ಸ್ಯಾಂಟೋರಿನಿ, ಕೆಂಬ್ರಿಜ್, ಆಕ್ಸ್‌ಫರ್ಡ್‌, ಟೆಲ್ ಅವಿವ್ ಗ್ರಂಥಾಲಯಗಳ ವಿಶಿಷ್ಟತೆಗಳ ಕುರಿತು ಅಲ್ಲಿದ್ದ ಸೌಲಭ್ಯಗಳ ಕುರಿತು ಅತ್ಯಂತ ಆಕರ್ಷಕ ಮಾಹಿತಿಗಳು ಪುಸ್ತಕ ಪ್ರಿಯರನ್ನು ಮುದಗೊಳಿಸುತ್ತವೆ‌‌. ಶ್ರೀಲಂಕಾದ ಆನೆಗಳ ಅನಾಥಾಶ್ರಮ ಜಗತ್ತಿನಲ್ಲೆ ಇದ್ದ ಒಂದೆ ಆನೆಗಳ‌ ಆಶ್ರಮದ ಸೊಗಸಾದ ವರ್ಣನೆ ಇದೆ‌.

ಮಹಾತ್ಮಾ ಗಾಂಧಿಯನ್ನು ಪ್ರಪಂಚಾದ್ಯಂತ ಕಂಡು ಮುಕವಿಸ್ಮಿತರಾಗುತ್ತಾರೆ‌.‌ ಗುಜರಾತ್, ವೇಲ್ಸ್, ಜಿನಿವಾ, ಕೌಸಾನಿ, ಲಂಡನ್, ವಾಷಿಂಗ್ಟನ್ ಇಲ್ಲೆಲ್ಲ ಗಾಂಧಿಜೀಯವರ ಪುತ್ಥಳಿಗಳು ಗಾಂಧಿಜೀಯವರ ವಿಶ್ವಮಾನ್ಯತೆಯನ್ನು ತೋರಿಸುತ್ತದೆ.

ಹಾಲ್ ಆಫ್ ಫೇಮ್ ಲಡಾಕ್ ಲೇಹ್ ನಲ್ಲಿರುವ ಕಾರ್ಗಿಲ್ ವಿಜಯ ಆಪರೇಷನ್ ನ ಮ್ಯೂಸಿಯಂ ನಮ್ಮ ದೇಶದ ಸೈನಿಕರಿಗೆ ಸಲಾಮ್ ಕೊಡುವಂತೆ ದೇಶ ಭಕ್ತಿ ಉಕ್ಕಿ ಹರಿಯುವ ಸ್ಥಳ. ಇವೆಲ್ಲ ಲೇಖಕಿಯ ಅನುಭವದ ಮಾತುಗಳು ತುಂಬ ಕುತೂಹಲಕಾರಿಯಾಗಿ ನಿರೂಪಿಸಲ್ಪಟ್ಟಿದೆ‌.

ಅಂಜಲಿ ಪ್ರವಾಸದಲ್ಲಿ ಭೇಟಿಯಾದ ಅನೇಕ ಸಾಧಕರ ಚಿತ್ರಣ ನಮ್ಮ ಸೆರೆ ಹಿಡಿಯುತ್ತದೆ‌. ಧರ್ಮಗುರು ದಲಾಯಿ ಲಾಮಾರ ಭೇಟಿ, ಪುಟ್ಟಪರ್ತಿ ಸಾಯಿಬಾಬಾರ ದರ್ಶನ, ತೇನ್ ಸಿಂಗ್ ನ ಸೊಸೆಯ ಭೇಟಿ ಡಾರ್ಜಿಲಿಂಗ್ನಲ್ಲಿ, ಗೌಹಾತಿಯಲ್ಲಿ ಭುಪೇನ್ ಹಜಾರಿಕಾ ಸಮಾಧಿಯ ಭೇಟಿ, ಲಕ್ನೋದಲ್ಲಿ ಕಥಕ್ ಮಾಷ್ಟರ್ ಬಿರ್ಜು ಮಹಾರಾಜ್ ಅವರ ಒಡನಾಟ, ಇಟಾ ನಗರ ಅರುಣಾಚಲ ಪ್ರದೇಶ ದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಯ ಬೇಟಿ ಮತ್ತು ಸಂದರ್ಶನ ತುಂಬ ಮಹತ್ವಪೂರ್ಣ.

ಕೆಲಿಂಪಾಂಗ್ ಟ್ಯಾಗೋರ್ ಗೀತಾಂಜಲಿ ಬರೆದ ಮನೆ, ಈಗ ಅದರ ಜೀರ್ಣಾವಸ್ಥೆಯ ಚಿತ್ರಣ, ಫ್ಲಾರೆನ್ಸ್ ನೈಟಿಂಗೇಲ್, ಲಂಡನ್ನಿನಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಇವನನ್ನು ವಾಷಿಂಗ್ಟನ್ ಡಿಸಿಯಲ್ಲಿ ಕಂಡಿದ್ದು, ಬಂಗಾಲ ಕೊಲ್ಲಿಯ ಮೂಗುಬಟ್ಟಿನ ವಜ್ರ -ಅಂಡಮಾನ್, ಅಲ್ಲಿನ ಸಾವರ್ಕರ್ ಜೈಲಿನ‌ ಸೆಲ್ಲು, ಪುಟ್ಟ ಪುಟ್ಟ ದ್ವೀಪಗಳು, ಮೂಲನಿವಾಸಿಗಳ ದರ್ಶನ, ಹಲವಾರು ಉತ್ತರ ಭಾರತದ ದೇವಸ್ಥಾನಗಳು ಇವೆಲ್ಲದರ ಬಗ್ಗೆ ಅನನ್ಯ ವಿವರಣೆ ಇದೆ ಈ ಪುಸ್ತಕದಲ್ಲಿ.

ವಿಮಾನ ಪಯಣದಲ್ಲಿ ಹೃದಯಾಘಾತವಾದ ಹೆಣ್ಣಿನ suffering, ತುಂಬ ದುಃಖವಾಗುತ್ತದೆ ಯಾವುದೊ ವಿದೇಶಿ ಆಸ್ಪತ್ರೆಯಲ್ಲಿ ಮರಣ ಪಟ್ಟಾಗ. ಇಂತಹ ಸನ್ನಿವೇಶಗಳು ನಿಜಕ್ಕೂ ಕಣ್ಣಾರೆ ಕಂಡಾಗ ಆಗುವ ನೋವು, ವಿಮಾನದ ಏರ ಹಾಸ್ಟೆಸ್ ಗಳಿಗೆ ಆಗುವ ಭಯ ಗೊಂದಲ ಓದುಗನ ಹೃದಯ ಹಿಂಡುತ್ತದೆ.

ಪ್ರವಾಸದ ವೇಳೆಯಲ್ಲಿ ಸಿಗುವ ಒಲಿವಿಯಾ ಎಂಬ ೯ ವರ್ಷದ ಪುಟ್ಟ ಹುಡುಗಿಯ ಚತುರತೆ ಮತ್ತು ಬುದ್ಧಿವಂತಿಕೆಯನ್ನು ಮುಗ್ಧತೆಯನ್ನು ಕಂಡು ಅಂಜಲಿ ಆಕರ್ಷಿತರಾಗುತ್ತಾರೆ‌,
ಸಾಯಿಬಾಬಾರ ಕುರಿತು ಅನುಮಾನ ಮತ್ತು ಸಂಶಯದ ಜೊತೆ ಪುಟ್ಟಪರ್ತಿಯ ಸ್ವಚ್ಛತೆಯ ಬಗ್ಗೆ ಆಸ್ಪತ್ರೆಯ. ನೈರ್ಮಲ್ಯದ ಬಗ್ಗೆ ಮೆಚ್ಚುಗೆ ಇದೆ‌. ಮಸ್ತಾನಿ ಎಂಬ ರಾಜನ ಪ್ರೇಯಸಿಯ ಕುರಿತು ಪಾಬಲ್, ಪೂನಾಕ್ಕೆ ಹೋದಾಗ ಅವಳ ಕಥೆ ಅವಳ ಸಮಾಧಿಯನ್ನು ಕಂಡಾಗ ವಿಷಾದ ಭಾವ ಆವರಿಸುತ್ತದೆ‌.

ಪೂರ್ಣ ಕುಂಭ ಮೇಳದ ಬಗ್ಗೆ ವಸ್ತುನಿಷ್ಠವಾಗಿ ಬರೆದ ಕುತೂಹಲಕಾರಿ ಬರಹ ಓದಲೇಬೇಕು. ಜೈಪುರದ ಅರಮನೆ ಕೇದಾರನಾಥ ಬದರಿನಾಥ ಜೈಪುರದ ಚೌಕಿದಾನಿ ಹೀಗೆ ಅನೇಕ ಪ್ರವಾಸಿ ತಾಣಗಳ ಮಾಹಿತಿ ಬರಿಯ ಮಾಹಿತಿ ಅಲ್ಲ.

ಕೊನೆಯಲ್ಲಿ ಪ್ರವಾಸ ಕೈಕೊಳ್ಳುವವರಿಗೆ ಕೆಲವು ಟಿಪ್ಸುಗಳಿವೆ. ಪ್ರವಾಸ ಮಾಡುವವರಿಗೆ ಅತ್ಯಂತ ಉತ್ತಮ ಮಾರ್ಗದರ್ಶನ ಈ ಬರಹದಲ್ಲಿದೆ‌. ಈ ಪುಸ್ತಕವನ್ನು ಓದಿದರೆ ಪ್ರಪಂಚ ಸುತ್ತಾಡಿದ ಅನುಭವ ನಮಗಾಗುತ್ತದೆ‌ ಇಂತಹ ಪ್ರವಾಸಿ ಕಥನಗಳು ಓದುಗರ ಜ್ಞಾನವನ್ನು ಹೆಚ್ವಿಸುತ್ತವೆ‌. ಯಾವೆಲ್ಲ ದೇಶ ವಿದೇಶ ಪ್ರವಾಸ ತಾಣಗಳು ನಿಜಕ್ಕೂ ನೋಡಲೇಬೇಕಾದ ತಾಣಗಳು ಎನ್ನುವ ತಮ್ಮ ಅಭಿರುಚಿಗೆ ಹೊಂದಿದ ಸ್ಥಳಗಳ ಪಟ್ಟಿ ಮಾಡಿದ್ದಾರೆ ಲೇಖಕಿ. ಇದು ಕೇವಲ ಪ್ರವಾಸಿ ಕಥನಕ್ಕಿಂತ ಹೆಚ್ಚು ಏನಬಹುದಾದ ಪುಸ್ತಕ. ಕೊಂಡು ಓದಿ.


  • ಉದಯ ಕುಮಾರ್ ಹಬ್ಬು- ಹಿರಿಯ ಸಾಹಿತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW