ನಮ್ಮ ಬದುಕಿನಲ್ಲಿ ಏನೇನು ಇರಬೇಕು

ಬದುಕೆಂಬ ಜಾಡಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು, ಗೊಂದಲಗಳು ಮತ್ತು ಮಾಡಲೇಬೇಕಾದ ಅನಿವಾರ್ಯದ ಕೆಲಸಗಳನ್ನು ಮೊದಲು ತುಂಬಿ ಬಿಟ್ಟರೆ ಉಳಿದ ಅತ್ಯವಶ್ಯಕವಾದವುಗಳಿಗೆ ಅಲ್ಲಿ ಜಾಗ ಇರುವುದಿಲ್ಲ. ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಜೀವನಕ್ಕೊಂದು ಪಾಠ ಲೇಖನವನ್ನು ತಪ್ಪದೆ ಮುಂದೆ ಓದಿ…

ತತ್ವಶಾಸ್ತ್ರದ ತರಗತಿಯಲ್ಲಿ ಪ್ರವೇಶಿಸಿದ ಪ್ರೊಫೆಸರರ ಕೈಯಲ್ಲಿ 5 ಲೀಟರ್ ನ ಒಂದು ದೊಡ್ಡ ಗಾಜಿನ ಜಾಡಿ ಇತ್ತು. ವೇದಿಕೆಯನ್ನು ಏರಿದ ಆತ ಆ ಜಾಡಿಯನ್ನು ಅಲ್ಲಿಯೇ ಇದ್ದ ಟೇಬಲ್ನ ಮೇಲೆ ಇಟ್ಟ. ನಂತರ ತಾನು ತಂದ ಹೆಗಲ ಚೀಲದಿಂದ ದೊಡ್ಡ ಕಲ್ಲುಗಳನ್ನು ತೆಗೆದು ಜಾಡಿಯ ಮೇಲ್ಭಾಗದವರೆಗೆ ಬರುವಂತೆ ಒಂದೊಂದಾಗಿ ಆ ಜಾಡಿಯಲ್ಲಿ ತುಂಬತೊಡಗಿದ. ವಿದ್ಯಾರ್ಥಿಗಳೆಲ್ಲರೂ ಆಶ್ಚರ್ಯದಿಂದ ಈ ವಿದ್ಯಮಾನವನ್ನು ನೋಡುತ್ತಿದ್ದರು. ದೊಡ್ಡ ಕಲ್ಲುಗಳನ್ನು ತುಂಬಿದ ನಂತರ ದೊಡ್ಡದಾದ ಉಸಿರನ್ನು ಬಿಟ್ಟ ಆತ ವಿದ್ಯಾರ್ಥಿಗಳತ್ತ ತಿರುಗಿ ಈ ಜಾಡಿ ಈಗ ತುಂಬಿದೆ ಎಂದು ನಿಮಗೆ ತೋರುತ್ತದೆಯೇ? ಎಂದು ಕೇಳಿದ ತರಗತಿಯ ಎಲ್ಲ ವಿದ್ಯಾರ್ಥಿಗಳು ಒಕ್ಕೊರಳಿನಿಂದ ಹೌದು ಎಂದು ಹೇಳಿದರು.

ಮುಖದಲ್ಲಿ ಮೆಲು ನಗೆಯನ್ನು ಮೂಡಿಸಿದ ಪ್ರೊಫೆಸರ್ ಪುಟ್ಟ ಕಲ್ಲುಗಳನ್ನು ಆ ಜಾಡಿಯಲ್ಲಿ ಹಾಕಲಾರಂಭಿಸಿದ. ದೊಡ್ಡ ಕಲ್ಲುಗಳ ನಡುವಿನ ಸಂದಿಯಲ್ಲಿ ಸಿಲುಕುತ್ತಾ ಜಾರಿ ಪುಟ್ಟ ಕಲ್ಲುಗಳು ಜಾರನ್ನು ತುಂಬಿದವು. ಮತ್ತೆ ವಿದ್ಯಾರ್ಥಿಗಳತ್ತ ತಿರುಗಿದ ಆತ ಈಗ? ಎಂದು ಕೇಳಿದ. ಜೋರಾಗಿ ನಗಾಡುತ್ತಾ ನಿಜ! ಈಗ ಜಾಡಿ ಸಂಪೂರ್ಣ ತುಂಬಿದೆ ಎಂದು ಎಲ್ಲ ವಿದ್ಯಾರ್ಥಿಗಳು ಹೇಳಿದರು.

ನಸುನಗುತ್ತಾ ಆತ ಸ್ವಲ್ಪ ಉಸುಕನ್ನು ತೆಗೆದುಕೊಂಡು ಜಾಡಿಯಲ್ಲಿ ಹಾಕಲಾರಂಭಿಸಿದ. ಜಾಡಿಯಲ್ಲಿ ಅಳಿದುಳಿದ ಜಾಗವನ್ನು ಉಸುಕಿನ ಕಣಗಳು ತುಂಬಿಕೊಂಡವು. ಈ ಬಾರಿ ವಿದ್ಯಾರ್ಥಿಗಳೆಡೆ ತಿರುಗಿ ಆತ ನೋಡುವ ಮುನ್ನವೇ ಇದೀಗ ಜಾಡಿ ಸಂಪೂರ್ಣವಾಗಿ ತುಂಬಿದೆ ಎಂದು ಮತ್ತೆ ವಿದ್ಯಾರ್ಥಿಗಳು ಜೋರಾಗಿ ಕೂಗಿ ಹೇಳಿದರು. ಇದೀಗ ಆತ ಒಂದು ದೊಡ್ಡ ಗ್ಲಾಸ್ ನೀರನ್ನು ತೆಗೆದುಕೊಂಡು ಆ ಜಾಡಿಯಲ್ಲಿ ಸುರಿದ. ಜಾಡಿಯಲ್ಲಿ ನೀರು ಸಂಪೂರ್ಣವಾಗಿ ಸೇರಿಕೊಂಡಿತು. ಇದೀಗ ಆ ಜಾಡಿಯನ್ನು ತೋರಿಸುತ್ತಾ ಪ್ರೊಫೆಸರ್ “ಇದು ನಿಮ್ಮ ಜೀವನ” ಎಂದು ಹೇಳಿದ.

“ಈ ಜಾಡಿ ನಿಮ್ಮ ಜೀವನ ಎಂದು ನಾನು ಹೇಳುವುದಾದರೆ ಇದರಲ್ಲಿ ದೊಡ್ಡ ದೊಡ್ಡ ಕಲ್ಲುಗಳು ನಿಮ್ಮ ಕುಟುಂಬ, ಪ್ರೀತಿ ಪಾತ್ರರು, ಸ್ನೇಹಿತರು, ಆರೋಗ್ಯ ಮತ್ತು ಮನಃಶಾಂತಿಗಳಾಗಿರುತ್ತವೆ. ಉಳಿದ ಎಲ್ಲವೂ ನಿಮ್ಮ ಕೈಯಿಂದ ಜಾರಿ ಹೋದರೂ ಕುಟುಂಬ, ಆರೋಗ್ಯ ಮತ್ತು ಮನಃ ಶಾಂತಿಯೊಂದಿಗೆ ನೀವು ಜೀವನ ಸಾಗಿಸಬಹುದು”. ನಂತರ ಹಾಕಿದ ಪುಟ್ಟ ಕಲ್ಲುಗಳು ನಿಮ್ಮ ಕೆಲಸ, ಬದುಕಿನ ಗುರಿ ಮತ್ತು ನಿಮ್ಮ ಸ್ಥಿರತೆಯ ಪ್ರತೀಕ.

ಉಸುಕು ನಿಮ್ಮ ಬದುಕಿನಲ್ಲಿ ಬರುವ ಸಣ್ಣ ಪುಟ್ಟ ಅಡೆತಡೆಗಳು ಗೊಂದಲಗಳು ಮತ್ತು ಅನಿವಾರ್ಯವಾಗಿ ಮಾಡಲೇಬೇಕಾದ ಕೆಲಸಗಳು.

ನೋಡಿ, ನಮ್ಮ ಬದುಕೆಂಬ ಜಾಡಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಗೊಂದಲಗಳು ಮತ್ತು ಮಾಡಲೇಬೇಕಾದ ಅನಿವಾರ್ಯದ ಕೆಲಸಗಳನ್ನು ಮೊದಲು ತುಂಬಿ ಬಿಟ್ಟರೆ ಉಳಿದ ಅತ್ಯವಶ್ಯಕವಾದವುಗಳಿಗೆ ಅಲ್ಲಿ ಜಾಗ ಇರುವುದಿಲ್ಲ ಆದ್ದರಿಂದ ಅತ್ಯಂತ ಜಾಗರೂಕತೆಯಿಂದ ನಿಮ್ಮ ಬದುಕಿನಲ್ಲಿ ನಿಮ್ಮ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು, ನಿಮ್ಮ ಗುರಿ ಮತ್ತು ಸ್ಥಿರತೆಯನ್ನು ನೀವು ಕಾಯ್ದುಕೊಳ್ಳಲೇಬೇಕು ಎಂದು ಪ್ರೊಫೆಸರರು ಹೇಳಿದರು.

ಕೂಡಲೇ ಕೈಯೆತ್ತಿದ ಓರ್ವ ಯುವಕ ಹಾಗಾದರೆ ನಮ್ಮ ಬದುಕಿನಲ್ಲಿ ನೀರಿನ ಪಾತ್ರ ಏನು? ಎಂದು ಕೇಳಿದನು.

ಪ್ರೊಫೆಸರ್ ನಸು ನಗುತ್ತಾ ಉತ್ತರಿಸಿದರು…. ನಮ್ಮ ಜೀವನ ಎಲ್ಲ ರೀತಿಯ ಸಂತೃಪ್ತತೆಯನ್ನು ಹೊಂದಿದ್ದರೂ ಕೂಡ ಮತ್ತಷ್ಟು ಹೆಚ್ಚು ಸರಳವಾಗಿ ಸಂತಸಪೂರ್ಣವಾಗಿ ಮತ್ತು ಹಗುರವಾಗಿ ಜೀವನವನ್ನು ಜೀವಿಸಲು ನಾವು ನೀರಿನಂತೆ ವರ್ತಿಸಬೇಕು.

ಒಂದು ಪುಟ್ಟ ನಗು, ಒಂದು ಸಣ್ಣ ನಡಿಗೆ ಮತ್ತು ಪ್ರೀತಿ ಪಾತ್ರರೊಂದಿಗೆ ಚಹಾ ಸೇವನೆ ಹೀಗೆ ಎಲ್ಲವೂ ನಮ್ಮ ಬದುಕಿನಲ್ಲಿ ಬೇಕು. ಆದ್ದರಿಂದ ಮೊದಲು ದೊಡ್ಡ ವಸ್ತುಗಳಿಂದ ಆರಂಭಿಸಿ…ಉಳಿದೆಲ್ಲವೂ ತಂತಾನೆ ಸ್ಥಳವನ್ನು ಹೊಂದಿಸಿಕೊಳ್ಳುತ್ತವೆ, ಏನಂತೀರಾ ಎಂದು
ಪ್ರೊಫೆಸರ್ ಕೇಳಿದರು. ಎಲ್ಲ ವಿದ್ಯಾರ್ಥಿಗಳು ಹೌದು ಎನ್ನುವಂತೆ ತಲೆ ಆಡಿಸಿದರು.

ನಿಜ ಅಲ್ವೇ ಸ್ನೇಹಿತರೇ! ನಮ್ಮ ಬದುಕು ತುಂಬ ಸರಳ…. ಆದರೆ ನಾವೇ ಅದನ್ನು ಇಲ್ಲಸಲ್ಲದ ಮೌಢ್ಯಗಳಿಂದ, ಪೂರ್ವಾಗ್ರಹಗಳಿಂದ ಹಾಳು ಮಾಡಿಕೊಳ್ಳದೆ ಬದುಕನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡೋಣ. ಏನಂತೀರಾ??


  • ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading