ನಿಮ್ಮ ಪೇರೆಂಟಿಂಗ್ ಶೈಲಿ ಯಾವುದು??

ಅತಿಯಾದ ಪ್ರೀತಿ, ಕಾಳಜಿ, ಮಮತೆ ಅದು ತಾಯಿಯಿಂದಲೇ ಆಗಿರಲಿ, ಉಸಿರು ಕಟ್ಟಿಸುತ್ತದೆ. ಹಾಗಾಗಿ ಸಮತೋಲನ ಅತ್ಯಗತ್ಯ. ಇಂದಿನ ಪಾಲಕತ್ವದ ಕುರಿತು ಲೇಖಕಿ ರಶ್ಮಿ ಉಳಿಯಾರು ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ನಾನು ವರ್ಷಗಳ ಕೆಳಗೆ ಹಿಂದಿಯ “ಹೆಲಿಕಾಪ್ಟರ್ ಇಳಾ” ಎಂಬ ಸಿನಿಮಾ ನೋಡಿದ್ದೆ. ಸಾಮಾನ್ಯವಾಗಿ ಒಳ್ಳೆಯ ಸಿನಿಮಾ ನೋಡಿದರೆ ನನ್ನ ವ್ಯಾಟ್ಸಪ್ ಅಥವಾ ಫೇಸ್ಬುಕ್ ಅಲ್ಲಿ ಒಂದೆರಡು ಸಾಲು ಹಾಕುವುದು ಅಭ್ಯಾಸ. ಅದು ನಾನು ನೋಡಿದೆ ಅನ್ನುವುದನ್ನು ಸಾರಿಕೊಂಡು ಬರಲು ಅಲ್ಲ. ಬದಲಾಗಿ ನನ್ನ ಸ್ನೇಹಿತ/ತೆಯರ ವಲಯದಲ್ಲಿ ಇರುವ ಬೆರಳೆಣಿಕೆಯ ಸಮಾನ ಆಸಕ್ತರೂ ನೋಡಲಿ ಎಂಬ ಕಾರಣಕ್ಕೆ. ಹಾಗೆಯೇ ಅವರಿವರು ಶೇರ್ ಮಾಡಿದ್ದರೆ ನಾನೂ ಹುಡುಕಿ ನೋಡುವ ಅಭ್ಯಾಸ ಇದೆ.

ಈ ಸಿನಿಮಾವನ್ನು ತಾಯಂದಿರು ಹಾಗೂ ಅವರ ಕನಸುಗಳಿಗೆ ಅರ್ಪಣೆ ಮಾಡಿದ್ದಾರೆ. ಮಾಮೂಲಿ ಪ್ರೇಮ, ಪ್ರಣಯದ ಮಸಾಲೆ ಚಿತ್ರಗಳಂತಲ್ಲದೇ ಇದಕ್ಕೆ ಒಂದು ಗಟ್ಟಿಯಾದ ಕಥಾವಸ್ತು ಇದೆ. ತನ್ನ ಮಗುವಿಗಾಗಿ ಪ್ರತಿಭಾವಂತ ಹಿನ್ನಲೆ ಗಾಯಕಿಯಾಗುವ ಅವಕಾಶ ಕೈ ಬಿಟ್ಟ ಹೆಣ್ಣಿನ ಕಥೆಯಿದು. ಹಿಂದಿ ನಟಿ ಕಾಜೊಲ್ ಅವರ ಲವಲವಿಕೆಯ ಸುಂದರ ಅಭಿನಯ ಇದಕ್ಕಿದೆ. ಅವರು ಈ ಇಳಾ ಪಾತ್ರದಲ್ಲಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹಾಗೆಯೇ ಅವರ ಬೆಳೆದ ಮಗ ವಿವಾನ್ ಎಂಬ ಪಾತ್ರದಲ್ಲಿನ ರಿದ್ಧಿ ಸೇನ್ ಎಂಬ ನಟನ ಅಭಿನಯ ಕೂಡ ಅದ್ಭುತ. ನೇಹಾ ದೂಪಿಯಾ ಮಾಡಿರುವ ಕಾಲೇಜಿನ ನಾಟಕದ ನಿರ್ದೇಶಕಿ ಪದ್ಮಾ ಪಾತ್ರ ಕೂಡ ಇಳಾಳಿಗೆ ಪ್ರೇರಣೆ ನೀಡುವಂತದ್ದು.

ಸುಮಾರು ತೊಂಬತ್ತರ ದಶಕದಲ್ಲಿ ಆಲ್ಬಮ್ ಹಾಡುಗಳ ಮೂಲಕ ನಿಧಾನವಾಗಿ ಬಾಲಿವುಡ್ ಸಂಗೀತ ಪ್ರಪಂಚದಲ್ಲಿ ಕಾಲೂರುವ ಮಹತ್ವಾಕಾಂಕ್ಷೆಯ ಇಳಾ ಹಾಡಿದ ರುಕ್ ರುಕ್ ರುಕ್ ಎನ್ನುವ ರಿಮಿಕ್ಸ್ ಹಾಡು ಸೂಪರ್ ಹಿಟ್ ಆಗಿ ಆಕೆ ಎಮ್ ಟಿವಿ ಮ್ಯೂಸಿಕ್ ಲಾಂಚ್’ಗೆ ಆಹ್ವಾನಿತಳಾಗುತ್ತಾಳೆ. ಅಲ್ಲಿ ಹಲವು ದಿಗ್ಗಜರ ಪರಿಚಯವಾಗುತ್ತದೆ. ಈ ವಿಷಯದಲ್ಲಿ ಅವಳಿಗೆ ಗೆಳೆಯ/ಪ್ರೇಮಿ ಅರುಣನ ಸಂಪೂರ್ಣ ಸಹಕಾರ ಇರುತ್ತದೆ. ಈ ಮಧ್ಯೆ ಅವಳು ನಟಿಸುತ್ತಿದ್ದ ಆಲ್ಬಂ ಒಂದು ನಿರ್ದೇಶಕರಿಗೆ ಬಂದ ಭೂಗತ ಕರೆಯಿಂದ ಅರ್ಧದಲ್ಲೇ ನಿಲ್ಲಿಸಲ್ಪಡುತ್ತದೆ. ಆ ನಂತರ ಇಳಾ ಅರುಣ್ ಇಬ್ಬರೂ ಮದುವೆಯಾಗಿ ಅವರಿಗೆ ವಿವಾನ್ ಎಂಬ ಪುಟ್ಟ ಮಗ ಇರುತ್ತಾನೆ. ಅತ್ತೆ ಹಾಗೂ ಕುಟುಂಬದೊಡನೆ ಅವಳು ಸುಖಿ. ಅರುಣ್ ತನ್ನ ಕುಟುಂಬ ಫ್ಯಾಮಿಲಿ ಟ್ರೀ ಅನ್ನು ತಮ್ಮ ಮನೆಯ ಗೋಡೆಯ ಮೇಲೆ ಬಿಡಿಸಿರುತ್ತಾನೆ.

 

ಒಂದು ದಿನ ಅರುಣ್ ಸಂಬಂಧಿಕ ಸುಧೀರ್ ಮೂವತ್ತೇಳರ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಿಂದ ಸತ್ತ ಸುದ್ದಿ ಬರುತ್ತದೆ. ಅರುಣ್ ಸಂಕಟಪಡುತ್ತಾನೆ. ಆಗ ಬೇಸರಗೊಂಡ ಇಳಾಗೆ ಒಂದು ಸತ್ಯ ಗೋಚರಿಸುತ್ತದೆ. ಏನೆಂದರೆ ಅವನ ಕುಟುಂಬದಲ್ಲಿ ಹೆಚ್ಚಿನ ಗಂಡಸರು ನಲವತ್ತರ ಮೇಲೆ ಬದುಕಿಲ್ಲ ಎನ್ನುವುದು. ಹಾಗೂ ಅದಕ್ಕೆ ಕಾರಣ ಹೆಚ್ಚಾಗಿ ಹೃದಯದ ತೊಂದರೆ ಎನ್ನುವ ವಿಷಯ ಅವಳಿಗೆ ಸೋಜಿಗವುಂಟು ಮಾಡಿ ಅದನ್ನು ಅರುಣನಿಗೆ ಹೇಳುತ್ತಾಳೆ. ಆಮೇಲೆ ಕ್ಷಮೆ ಕೇಳುತ್ತಾಳೆ. ಮುಂದೆ ಹಗಲು ರಾತ್ರಿ ಅರುಣನನ್ನು ಇದೇ ವಿಷಯ ಕಾಡಿಸುತ್ತದೆ. ಅದಾಗಲೇ ಮೂವತ್ತೊಂಬತ್ತು ವರ್ಷದ ಅವನಿಗೆ ತಾನಿನ್ನು ಒಂದೇ ವರ್ಷ ಬದುಕಿರುವುದು ಎಂಬ ದಿಗಿಲು. ಅದನ್ನೇ ಮನೆಯಲ್ಲಿ ಹಂಚಿಕೊಂಡು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿಬಿಡುತ್ತಾನೆ. ಭಾರವಾದ ಮನಸ್ಸಿನಿಂದ ಇಳಾ ಅವನ ವಿಷಯವನ್ನು ತನ್ನ ಹಾಗೂ ತನ್ನ ಮಗನ ವಿಚಾರದಲ್ಲಿ ಮುಕ್ತಾಯ ಮಾಡುತ್ತಾಳೆ. ಮಗನನ್ನು ತಾನೊಬ್ಬಳೇ ಬೆಳೆಸುತ್ತಾಳೆ. ಶುರುವಿಗೆ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡುವ ಆಕೆ ಮಗುವಿನ ಮೇಲಿನ ಅತೀ ಕಾಳಜಿಯಿಂದ ಗಮನ ಕೇಂದ್ರೀಕರಿಸಲಾಗದೇ ಅದನ್ನು ಬಿಟ್ಟು ಮನೆಯಿಂದಲೇ ಕೇಟರಿಂಗ್ ಸೇವೆ ಶುರು ಮಾಡುತ್ತಾಳೆ. ಅತ್ತೆಯಿಂದ ದೂರವಿದ್ದರೂ ಆಪ್ತ ಬಂಧ ಇಟ್ಟುಕೊಂಡಿರುತ್ತಾಳೆ.

ಗಂಡನಿಲ್ಲದೇ ಒಂಟಿತನ ಕಾಡಿದ ಕಾರಣ ಹಾಗೂ ಮುಂದೆ ಮಗನಿಗೂ ಸದ್ದಿಲ್ಲದೇ ಹೃದಯದ ಕಾಯಿಲೆ ಬರಬಹುದೇನೋ ಎಂಬ ದಿಗಿಲಲ್ಲಿ ಆಕೆ ಹೆಲಿಕಾಪ್ಟರ್ ತಾಯಿಯಾಗಿ ಅರಿವಿಲ್ಲದೇ ಬದಲಾಗುತ್ತಾಳೆ. ತನ್ನ ಮಗನಿಗೆ ಯಾವ ರೀತಿಯಲ್ಲೂ ತೊಂದರೆ, ನೋವು ಆಗಬಾರದು. ಅವನ ಜೊತೆಗೆ ತಾನೂ ಸದಾ ಇರಬೇಕು. ಅವನ ಸುರಕ್ಷತೆ ತನಗಷ್ಟೇ ಗೊತ್ತು, ಅವನು ಯಾವುದೇ ತಪ್ಪು ಮಾಡಬಾರದು, ತಾಯಿಯಾದ ತನಗೆ ಹೆಚ್ಚು ತಿಳಿದಿದೆ… ಎಂಬ ಕಾರಣಗಳಿಂದ ಸದಾ ಅವನ ಬೆನ್ನ ಹಿಂದೆಯೇ ಇರುವುದು, ಅವನ ಮೊಬೈಲ್, ಕೋಣೆ, ಬ್ಯಾಗ್ ಸದಾ ಚೆಕ್ ಮಾಡುವುದು… ಇದೆಲ್ಲವೂ ಅವನಿಗೆ ಕಿರಿಕಿರಿಯಾದರೂ ಗಮನ ಕೊಡದೇ ಇರುವುದು, ಅವನು ಪ್ರತಿಯೊಂದನ್ನೂ ತನ್ನ ಬಳಿ ಹೇಳಬೇಕು ಎಂದು ಬಯಸುವುದು…ಹೀಗೆ ಅವಳ ಪಾಲನೆಯ ರೀತಿ. ಮಗ ಅವಳ ಮೇಲೆ ಅವಲಂಬಿತನಾಗದೇ ಸ್ವತಂತ್ರವಾಗಿರುವುದು ಅವಳಿಗೆ ಇಷ್ಟವಿಲ್ಲ. ಆಕೆ ಭಾವನಾತ್ಮಕವಾಗಿ ಅರಿವಿಲ್ಲದಂತೆ ಅವನ ಮೇಲೆಯೇ ಸಂಪೂರ್ಣ ಅವಲಂಬಿಸಿರುತ್ತಾಳೆ.

ಶುರುವಿಗೆ ಕಾಳಜಿ, ಪ್ರೀತಿ ಎನ್ನಿಸಿದ ಅಮ್ಮನ ವರ್ತನೆಗಳು ಬರಬರುತ್ತಾ ವಿವಾನ್ ಗೆ ಉಸಿರುಗಟ್ಟಿಸುತ್ತವೆ. ಮುಂದೆ ಅವನು ಅಮ್ಮಾ ನೀನು ಬರಿಯ ಅಮ್ಮ ಆಗಿ ಉಳಿದು ಬಿಟ್ಟಿದೀಯ… ನೀನು ಇಳಾ ಆಗಿ ಏನಾದರೂ ಮಾಡು. ನಿನಗಾಗಿ ನೀನು ಬದುಕು. ಓದು ಅಥವಾ ಸಂಗೀತದಲ್ಲಿ ಕೆರಿಯರ್ ಮುಂದುವರೆಸು ಎಂದು ಹೇಳಿದಾಗ ಗಪ್ಪಕ್ಕನೇ ಆಕೆ ಅವನದೇ ಕಾಲೇಜಿನಲ್ಲಿ ತನ್ನ ದಾಖಲಾತಿ ಮಾಡಿಸಲು ಹೇಳುತ್ತಾಳೆ. ವಿವಾನ್ ಗೆ ಇದು ಕೊಂಚವೂ ಇಷ್ಟವಾಗುವುದಿಲ್ಲ. ಇಳಾ ತನ್ನ ಮಗನ ಮೇಲೆ ಸದಾ ಕಣ್ಣಿಡಬಹುದು ಹಾಗೂ ಜೊತೆಯಿರಬಹುದು ಎಂಬ ಒಂದೇ ಕಾರಣಕ್ಕೆ ಆಕೆ ಹಠ ಮಾಡಿ ಈ ನಿರ್ಧಾರ ಮಾಡುತ್ತಾಳೆ. ಮುಂದೆ ಅವನದೇ ತರಗತಿಯಲ್ಲಿ ಕುಳಿತರೂ ನಲವತ್ತೈದರ ಮಧ್ಯ ವಯಸ್ಕಳಾದ ಆಕೆಗೆ ಏನೂ ಅರ್ಥವಾಗದೇ ಸುಮ್ಮನಿರಬೇಕಾಗುತ್ತದೆ. ವಿವಾನ್ ನ ಸ್ನೇಹಿತ/ತೆಯರೆಲ್ಲರನ್ನೂ ಒಂದು ರೀತಿಯಲ್ಲಿ ಒತ್ತಾಯದಿಂದಲೇ ಪರಿಚಯ ಮಾಡಿಕೊಂಡು ಅವರ ಜೊತೆಗೆ ಮಿಂಗಲ್ ಆಗಲು ಪ್ರಯತ್ನಪಡುತ್ತಾಳೆ. ವಿವಾನ್ಗೆ ಅವಮಾನ ಅನ್ನಿಸುತ್ತದೆ. ಈ ಮಧ್ಯೆ ನನ್ನ ಹಿಂದೆಯೇ ಸದಾ ತಿರುಗುವ ಬದಲಾಗಿ ನೀನು ಕಾಲೇಜಿನ ಯಾವುದಾದರೂ ಕ್ಲಬ್ ಗೆ ಸೇರಿಕೋ ಎಂದು ವಿವಾನ್ ಹೇಳಿದಾಗ ಇಳಾ ಅವನಿದ್ದ ಕ್ಲಬ್ಬಿಗೆ ಸೇರಿಕೊಳ್ಳಲು ಪ್ರಯತ್ನಪಡುತ್ತಾಳೆ. ಅಲ್ಲಿ ಅವಳು ಗಾಯಕಿ ಅನ್ನುವುದು ತಿಳಿದು ಮುಂಬರುವ ಈವೆಂಟಲ್ಲಿ ಗಾಯಕಿಯಾಗಿ ಅವಕಾಶ ಸಿಗುತ್ತದೆ.

ವಿವಾನ್’ನ ಗೆಳೆಯನ ಪ್ರೇಮದ ಬದುಕಲ್ಲಿ ಇಳಾ ಒಂದು ಸಮಸ್ಯೆ ತಂದಿಟ್ಟಾಗ ಸಹನೆ ಮೀರಿದ ವಿವಾನ್ ಜಗಳವಾಡಿ ಮನೆ ಬಿಟ್ಟು ಹೋಗುತ್ತಾನೆ. ಅತಿಯಾಗಿ ವಿಹ್ವಲಗೊಳ್ಳುವ ಇಳಾ ತಲ್ಲಣಿಸುತ್ತಾಳೆ. “ನನ್ನ ಹೊರತಾಗಿ ನಿನಗೊಂದು ಬದುಕಿದೆ ಅಮ್ಮಾ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ. ನೀನು ನಿನ್ನನ್ನು ಗಾಯಕಿಯಾಗಿ ಮತ್ತೆ ಕಂಡುಕೊಳ್ಳುವವರೆಗೆ ನಾನು ಬರುವುದಿಲ್ಲ” ಎನ್ನುತ್ತಾನೆ. ಅವನು ಕಾಲೇಜಿನಲ್ಲಿ ಕೂಡ ಅವಳೊಂದಿಗೆ ಮಾತನಾಡುವುದಿಲ್ಲ. ಬಹಳ ನೊಂದರೂ ಇಳಾಗೆ ನಿಧಾನವಾಗಿ ಅರ್ಥವಾಗುತ್ತದೆ. ಪದ್ಮಾ ಕೂಡ ಇಳಾಗೆ ಸಾಂತ್ವನ ನೀಡುತ್ತಾಳೆ.

ಮುಂದೆ ಇಳಾ ಅಂತರ ಕಾಲೇಜು ಸಮಾರಂಭದಲ್ಲಿ ಹಾಡುತ್ತಾಳಾ….??? ತಾಯಿ ಇಳಾ ಹಾಗೂ ಮಗ ಇವಾನ್ ಮತ್ತೆ ಒಂದಾಗುತ್ತಾರಾ? ಇಳಾ ಗಂಡ ಅರುಣ್ ಕಥೆ ಏನಾಯಿತು? ಅವನು ಸತ್ತನೇ ಅಥವಾ ಮರಳಿ ಮನೆಗೆ ಬಂದನೇ? ಅವನನ್ನು ತಾಯಿ ಮಗ ಒಪ್ಪುತ್ತಾರೋ!!? ಎಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಚಿತ್ರವನ್ನು ತಪ್ಪದೇ ವೀಕ್ಷಿಸಿ.

ಈ ಚಿತ್ರ ಪ್ರತಿಯೊಬ್ಬ ತಾಯಿಯನ್ನೂ ಖಂಡಿತವಾಗಿ ಪ್ರಭಾವಿಸುತ್ತದೆ. ಸರಿಯಾದ ಪಾಲನೆಯ ಜೊತೆ ಜೊತೆಗೆ ನಮ್ಮನ್ನು ನಾವು ಮರೆಯಬಾರದು ಎಂಬುದನ್ನು ಸೊಗಸಾಗಿ ನಿರೂಪಿಸುತ್ತದೆ. ಮಗುವೇ ಮುಂದೆ ತಾಯಿಯನ್ನು ತಿದ್ದುವ ಮನೋಜ್ಞ ತಿಳುವಳಿಕೆ ಇದೆ.

ನೋಡುಗರನ್ನು ತನ್ನದು ಇಳಾ ರೀತಿಯ ಹೆಲಿಕಾಪ್ಟರ್ ಪೇರೆಂಟಿಂಗ್ ಹೌದೇ ಎಂಬ ವಿಶ್ಲೇಷಣೆಗೆ ಒಳಪಡಿಸುತ್ತದೆ. ನಾನೂ ಕೂಡ ನನ್ನ ಮಗು ಒಂದು ಕ್ಷಣ ಕಣ್ಣಿಂದ ಮರೆಯಾದರೆ ತಲ್ಲಣಿಸುತ್ತೇನೆ. ಇಳಾ ತರಹವೇ ಅವಳು ರಸ್ತೆಯಲ್ಲಿ ಆಡುತ್ತಿದ್ದರೂ ಅವಳ ಸುತ್ತಮುತ್ತ ಇರುತ್ತೇನೆ. ಕಾಲ ಸರಿಯಿಲ್ಲ ಎಂಬ ಕಾರಣವನ್ನು ಕೊಟ್ಟುಕೊಂಡಿರುತ್ತೇನೆ. ಇದು ತಪ್ಪಲ್ಲವಾದರೂ ಅವಳನ್ನು ಸ್ವತಂತ್ರವಾಗಿರಿಸುವ ಪ್ರಯತ್ನ ಮಾಡಬೇಕಿದೆ. ನನ್ನ ಹೃದಯವನ್ನು ಗಟ್ಟಿ ಮಾಡಿಕೊಳ್ಳಬೇಕಿದೆ. ಎಂದಿಗೂ ನನ್ನನ್ನು ಬಿಟ್ಟು ಅವಳು ಇದ್ದಿಲ್ಲ. ನನ್ನ ತಾಯಿ ಮನೆಯಲ್ಲೂ ಅವಳು ಒಬ್ಬಳೇ ಇಲ್ಲಿಯವರೆಗೆ ಇರಲಿಲ್ಲ. ಈಗ ನಾನು ಬಯಸಿದರೂ ಅವಳು ಬಿಟ್ಟಿರಲು ಅಳುತ್ತಾಳೆ.

ಬಹುಶಃ ಬಹಳ ಸಲ ನಾವು ತಾಯಂದಿರು ನಮ್ಮ ಮಕ್ಕಳನ್ನು ಅತಿಯಾಗಿ ಹಚ್ಚಿಕೊಂಡು ನಮ್ಮ ನಿಜವಾಗಿ ಗುರುತನ್ನು ಮರೆತು ಬಿಡುತ್ತೇವೆ. ಬರಿದೇ ಅಮ್ಮನಾಗಿ ಉಳಿದು ಬಿಡುತ್ತೇವೆ. ಅದರ ಹೊರತಾಗಿ ನಮಗೊಂದು ಅಸ್ತಿತ್ವ ಇದೆ. ಬರವಣಿಗೆ, ಓದು, ಕರಕುಶಲ ಕಲೆ, ಅರೆಕಾಲಿಕ ಅಥವಾ ಪೂರ್ಣಕಾಲಿಕ ಕೆಲಸ ಹೀಗೆ… ನಮ್ಮ ಎಲ್ಲ ವೃತ್ತಿ ಹಾಗೂ ಪ್ರವೃತ್ತಿಗಳನ್ನು ಮರೆತು ಬಿಡುತ್ತೇವೆ. ಆದರೆ ಮಕ್ಕಳು ಬೆಳೆದ ಹಾಗೆ ಅವರಿಗೆ ನಮ್ಮ ಅಗತ್ಯ ಹಾಗೂ ಅವಲಂಬನೆ ಕಡಿಮೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅವರದೇ ಆದ ಖಾಸಗಿ ಜಾಗ ಬೇಕಿರುತ್ತದೆ. ಮಕ್ಕಳು ನಾವಾಡಿಸುವ ಸೂತ್ರದ ಬೊಂಬೆಗಳಲ್ಲ. ಅವರಿಗೂ ಸ್ವಂತಿಕೆ ಇದೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬೇಕು. ಮಕ್ಕಳು ಅಂಗೈ ಯಲ್ಲಿರುವ ಚಿಟ್ಟೆಯ ತರಹ. ಗಟ್ಟಿಯಾಗಿ ಅಮುಕಿದರೆ ಒದ್ದಾಡುತ್ತವೆ. ಸಡಿಲವಾಗಿ ಬಿಟ್ಟರೆ ಹಾರಿ ಹೋಗುತ್ತವೆ. ಅತಿಯಾದ ಪ್ರೀತಿ, ಕಾಳಜಿ, ಮಮತೆ ಅದು ತಾಯಿಯಿಂದಲೇ ಆಗಿರಲಿ, ಉಸಿರು ಕಟ್ಟಿಸುತ್ತದೆ. ಹಾಗಾಗಿ ಸಮತೋಲನ ಅತ್ಯಗತ್ಯ. ಅದೆಷ್ಟು ಅನ್ನುವುದಕ್ಕೆ ಅಡುಗೆಗೆಷ್ಟು ಉಪ್ಪು ಹಾಕಬೇಕು ಅನ್ನುವ ನಮ್ಮ ಆ ತಿಳುವಳಿಕೆಯನ್ನು ಬಳಸಿ ಅರಿಯಬೇಕು. ಅದು ಪ್ರತೀ ತಾಯಿ ಹಾಗೂ ಮಗುವಿಗೂ ವೈಯಕ್ತಿಕ.

ಅಂದ ಹಾಗೆ ನಿಮ್ಮದು ಹೆಲಿಕಾಪ್ಟರ್ ಪಾಲಕತನವೇ…!!?


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW