‘ಲಾಗ್ ಔಟ್’ ತಪ್ಪದೆ ನೋಡಿ…

ಜನರ ಫಾಲೋ, ಲೈಕ್, ಕಮೆಂಟ್ಸ್, ಶೇರ್’ಗಳೇ ನಿಜ ಎಂದು ನಂಬಿಕೊಂಡು ವಾಸ್ತವ ಮರೆತು ಸಂಬಂಧಗಳನ್ನು ಧಿಕ್ಕರಿಸುವ, ಫೋನ್ ಇಲ್ಲದೇ ಬದುಕೇ ಸಾಧ್ಯವಿಲ್ಲ ಎಂಬ ಚಡಪಡಿಕೆಯ ವ್ಯಸನಿ ಜನರನ್ನು ನಾವು ನೋಡಿದ್ದೇವೆ. ಆದರೆ ಅದರಿಂದ ಆಗುವ ಅನಾಹುತದ ಬಗ್ಗೆ ‘ಲಾಗ್ ಔಟ್’ ಸಿನಿಮಾದಲ್ಲಿ ಸೆರೆಹಿಡಿದ್ದಾರೆ, ಎಲ್ಲರೂ ನೋಡಲೇ ಬೇಕಾದ ಸಿನಿಮಾ, ಈ ಸಿನಿಮಾ ಕುರಿತು ಲೇಖಕಿ ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಈಗಿನ ಕಾಲಮಾನ ಹೇಗಿದೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇರುವವರೇ ಹೆಚ್ಚು ಪ್ರಸಿದ್ಧರು. ಅದರಿಂದ ಬರುವ ಗಳಿಕೆಯಿಂದಲೇ ಜೀವನ ಮಾಡುವವರೂ ಇದ್ದಾರೆ. ಇರುವ ಉದ್ಯೋಗ ಬಿಟ್ಟು ಪೂರ್ಣಾವಧಿ ಪೋಸ್ಟ್, ರೀಲ್, ಸ್ಟೋರಿ, ಕಂಟೆಂಟ್ ಮಾಡುತ್ತಾ ತಮ್ಮ ಪುಟಗಳು ಮತ್ತು ಪ್ರೊಫೈಲ್ ಅನ್ನು ಚಾಲ್ತಿಯಲ್ಲಿಡಲು ದಿನವೂ ಹೆಣಗುತ್ತಾ, ಹೊರಗೆ ತುಂಬು ನಗುತ್ತಾ, ಒಳಗೆ ಅತ್ಯಂತ ಒತ್ತಡದಲ್ಲಿರುತ್ತಾ, ಹಲವಾರು ಬ್ರಾಂಡ್’ಗಳೊಂದಿಗೆ ಕೊಲಾಬರೇಷನ್ ಮಾಡಿಕೊಂಡು, ಸ್ಪರ್ಧೆಯಲ್ಲಿ ತಾನು ಹಿಂದುಳಿಯದೇ ಸದಾ ಮೊದಲ ಸ್ಥಾನದಲ್ಲಿ ಇರಬೇಕೆಂದು, ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದೆಂದು ಹಲವು ನೂರು ಸರ್ಕಸ್ ಮಾಡುತ್ತಾ ಇರುವ ಯುವ ಜನತೆ ಇಂದಿನದು. ಎಲ್ಲ ಬಗೆಯ ಆ್ಯಪ್’ ಗಳನ್ನು ಬಳಸುತ್ತಾ ಅವುಗಳ ಪಾಸ್ವರ್ಡ್’ಗಳನ್ನು ಮರೆತು ಹೋದಿತೆಂದು ಅದರಲ್ಲೇ ಹಾಕಿಟ್ಟು, ವಿಳಾಸಗಳನ್ನು ಶಾಪಿಂಗ್ ಜಾಲತಾಣಗಳಲ್ಲಿ ನೀಡಿ, ಅಲೆಕ್ಸಾದಂತಹ ಉಪಕರಣಗಳಿಗೆ ಮನೆಯ ಲೈಟಿಂಗ್ ಇನ್ನಿತರ ಉಸ್ತುವಾರಿ ಸಹ ನೀಡಿ, ಫೋನನ್ನು ತೆರೆಯಲು ಒಂದು ಪಾಸ್ವರ್ಡ್ ಬಿಟ್ಟು ಬಾಕಿ ಎಲ್ಲವನ್ನೂ ಲಾಗ್ಡ್ ಇನ್ ಮಾಡಿಕೊಂಡು ದಿನದ ಇಪ್ಪತ್ತನಾಲ್ಕು ಗಂಟೆ ಸಹ ಬಳಸುವ ಜನಾಂಗ ಈಗಿನದು‌.

ಜನರ ಫಾಲೋ, ಲೈಕ್, ಕಮೆಂಟ್ಸ್, ಶೇರ್’ಗಳೇ ನಿಜ ಎಂದು ನಂಬಿಕೊಂಡು ವಾಸ್ತವ ಮರೆತು ಸಂಬಂಧಗಳನ್ನು ಧಿಕ್ಕರಿಸುವ, ಫೋನ್ ಇಲ್ಲದೇ ಬದುಕೇ ಸಾಧ್ಯವಿಲ್ಲ ಎಂಬ ಚಡಪಡಿಕೆಯ ವ್ಯಸನಿ ಜನರನ್ನು ನಾವು ಕಾಣಬಹುದು.

ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಜೀವವೆನ್ನಿಸಿದ ಜೀವನವೇ ಆದ ಆ ಮೊಬೈಲ್ ಕಳೆದು ಹೋದರೆ, ಅದು ಸಿಕ್ಕಿದವರು ದುರುಳರೋ ಅಥವಾ ತಲೆ ಕೆಟ್ಟವರೋ ಆಗಿ ಪಾಸ್ವರ್ಡ್ ಸಂಪಾದಿಸಿಕೊಂಡು ನಮ್ಮನ್ನೇ ನಿಯಂತ್ರಿಸುವ ಹಾಗಾದರೆ….!!!!? ಎಲ್ಲವನ್ನೂ ಮೊಬೈಲ್ ಅಲ್ಲಿ ತುಂಬುವ ನಮಗೆ ಅಪತ್ಕಾಲಕ್ಕೆ ಒಬ್ಬರ ದೂರವಾಣಿ ಸಂಖ್ಯೆ ಸಹ ನೆನಪಿಗೆ ಬಾರದೇ ಹೋದರೆ…!! ಶಾಪಿಂಗ್ ತಾಣಗಳಲ್ಲಿ ನಾವು ನಮೂದಿಸಿರುವ ಆಪ್ತರ ವಿಳಾಸಗಳ ಮೂಲಕ ಅವರಿಗೆ ಆಪತ್ತು ಎರಗಿದರೆ…!! ಖಾಸಗಿ ವಿಚಾರಗಳನ್ನು ಬಹಿರಂಗ ಮಾಡಿದರೆ…!! ಮಾಡಬಾರದ್ದನ್ನು ಮಾಡಲು ಒತ್ತಡ ಹೇರಿದರೆ…!!? ಇನ್ನೂ ಹತ್ತಾರು ಸಾಧ್ಯತೆಗಳನ್ನು ಊಹಿಸಿಕೊಳ್ಳಲೇ ಭಯವಾಗುತ್ತದೆ. ಯೋಚಿಸಿ ನೋಡಿ. ಅಂತಹ ಒಂದು ಸೈಬರ್ ಥ್ರಿಲ್ಲರ್ ಸಿನಿಮಾ #Logout. ಫೋನ್ ಮೇಲಿನ ಅತಿಯಾದ ಅವಲಂಬನೆ ಯಾವ ಹಂತಕ್ಕೆ ಕರೆದೊಯ್ಯಬಹುದು ಎಂಬ ಊಹೆಯೇ ಭಯ ತರಿಸುತ್ತದೆ. ಯಾವ ಹಾರರ್ ಸಿನಿಮಾಗೇನೂ ಕಡಿಮೆ ಇಲ್ಲ.

ಇರ್ಫಾನ್ ಖಾನ್ ಮಗ ಬಬಿಲ್ ಖಾನ್ ಪ್ರಾಟ್ಮಾನ್ ಅಥವಾ ಪ್ರತ್ಯುಷ್ ದುವಾ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಮಾಜಿಕ ‌ಜಾಲತಾಣದ ಐಕಾನ್ ಆದ ಅವರ ಜೀವನ ಬುಡಮೇಲು ಆಗುವ ಸಂದರ್ಭ ಸೃಷ್ಟಿ ಆದಾಗ ಕೊನೆಗೇನಾಗುತ್ತದೆ!!?? ನೀವೇ ನೋಡಿ‌. ಇದರ ಅಂತ್ಯ ತುಂಬಾ ಅರ್ಥಪೂರ್ಣವಾಗಿದೆ. ಬೋನಿನಲ್ಲಿ ಸಿಕ್ಕಿಬಿದ್ದ ಒಂದು ಇಲಿ ಮತ್ತು ಈ ಇನ್ಲುಫುಯೇನ್ಸರ್ ಗೆ ಯಾವ ವ್ಯತ್ಯಾಸವೂ ಇರದೇ ಎರಡೂ ಸನ್ನಿವೇಶಗಳನ್ನು ಸಮೀಕರಿಸಿದ್ದು ತುಂಬಾ ಮನ ಮಿಡಿಯುವ ಹಾಗಿದೆ. ಭಾವುಕ ಸನ್ನಿವೇಶಗಳು ತಟ್ಟುತ್ತವೆ. ಹುಡುಗಿ ಹೇಳುವ “ನನಗೇನು ಗೊತ್ತು ಸರ್? ನಾನು ನೀವು ಹೇಳಿದ್ದೆಲ್ಲ ಮಾಡಿದ್ದೇನೆ, ತೋರಿಸಿದ ಉತ್ಪನ್ನಗಳನ್ನೆಲ್ಲ ಬಳಸಿದ್ದೇನೆ. ನೀವು ಅಲ್ಲಿರುವುದು ನಿಜವಲ್ಲ, ಅದು ನೀವಲ್ಲ ಪ್ರಾಟ್ಮನ್, ಈಗ ಕ್ಯಾಮರಾ ಹಿಂದಿರುವುದು, ನನ್ನ ಜೊತೆ ಮಾತನಾಡುತ್ತಿರುವುದು ಮಾತ್ರ ನಿಜ ಎಂದರೆ ಹೇಗೆ ನಂಬಲಿ!!?” ಎನ್ನುವ ಮಾತು, ಬಬಿಲ್ ಹೇಳುವ “ಜನರಿಗೆ ಕಂಟೆಂಟ್ ಮಾಡುತ್ತಾ ಮಾಡುತ್ತಾ ನಾನೇ ಯಾವಾಗ ಕಂಟೆಂಟ್ ಆಗಿ ಬದಲಾದೆ ಎನ್ನುವುದೇ ತಿಳಿಲಿಲ್ಲ” ಎನ್ನುವ ಮಾತು ಕಾಡುತ್ತದೆ.

ದಯವಿಟ್ಟು ನೋಡಿ. Zee5 ನಲ್ಲಿದೆ ಮತ್ತು ಸುರಕ್ಷಿತವಾಗಿರಿ.


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW