ಕಳೆಯಲಿಲ್ಲ ಅಪ್ಪನ ಚಿಂತೆಯ ಬೇನೆ, ಮನದಲ್ಲಿದ್ದ ನೋವು ನುಂಗಿದನು ತಾನೆ, ಅಪ್ಪನ ಕಷ್ಟದ ಬದುಕಾಯಿತು ಕಾಳಿಲ್ಲದ ತೆನೆ…ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳದ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಅಪ್ಪ ಬರುತ್ತಿದ್ದ ದಿನ ಕನಸಿನಲ್ಲಿ
ಅಚ್ಚೊತ್ತಿದಂತೆ ನೆಲೆಸಿದ್ದ ಮನಸಿನಲ್ಲಿ
ಅಪ್ಪನ ಕಳೆದುಕೊಂಡೆ ಚಿಕ್ಕವಯಸಿನಲ್ಲಿ.
ದಿನ ಹೊತ್ತು ತಿರುಗುತ್ತಿದ್ದ ಹೆಗಲಲ್ಲಿ
ದುಡಿದು ದಣಿದು ಬರುತ್ತಿದ್ದ ಹಗಲಲ್ಲಿ
ಅಪ್ಪ ಸುಖ ಕಾಣಲ್ಲಿಲ್ಲ ತನ್ನ ಬಡ ಬದುಕಿನಲ್ಲಿ.
ಅಪ್ಪಟ ಚಿನ್ನ ಅಪ್ಪನ ಮನಸು
ಕಾಣುತ್ತಿದ್ದ ಮಕ್ಕಳ ಬದುಕಿನ ಕನಸು
ಬೇಡುತ್ತಿದ್ದ ಮಕ್ಕಳ ಬದುಕಾಗಲೆಂದು ಸೊಗಸು.
ಗುಬ್ಬಿ ಗೂಡು ಅಪ್ಪನ ಮನೆ
ಮನೆಯಲ್ಲಿ ಮಕ್ಕಳು ಬಾಳೆ ಗೊನೆ
ಅಪ್ಪನ ಕಷ್ಟಗಳಾಗಲಿಲ್ಲ ಯಾವತ್ತು ಕೊನೆ.
ಕಳೆಯಲಿಲ್ಲ ಅಪ್ಪನ ಚಿಂತೆಯ ಬೇನೆ
ಮನದಲ್ಲಿದ್ದ ನೋವು ನುಂಗಿದನು ತಾನೆ
ಅಪ್ಪನ ಕಷ್ಟದ ಬದುಕಾಯಿತು ಕಾಳಿಲ್ಲದ ತೆನೆ.
ತುಟಿಕಚ್ಚಿ ನುಂಗಿದ ಕಷ್ಟದ ಕಣ್ಣೀರು
ಹಸಿದ ಹೊಟ್ಟೆಗೆ ಕುಡಿದು ಮಲಗಿದ ತಣ್ಣೀರು
ಅಪ್ಪನ ಆಸೆಗೆ ಪರಿಸ್ಥಿತಿ ಬಿಡುತ್ತಿತ್ತು ಎಳ್ಳುನೀರು.
ಆಸ್ತಿಯಲ್ಲಿ ಅಪ್ಪ ಹರಿದಂಗಿ ಒಡೆಯ
ಕಳೆ ತೆಗೆಯಲು ಹೊಡೆಯುತ್ತಿದ್ದ ಎಡೆಯ
ಏನೇ ಕಷ್ಟಬಂದರೂ ಬದುಕಿದ ತಟ್ಟಿ ತೊಡೆಯ.
ಅಪ್ಪನ ಮನಸು ಸುಟ್ಟರಳಿದ ಸುಣ್ಣ
ನಮ್ಮಪ್ಪನೆ ನಮಗೆ ಪ್ರೀತಿಯ ದೊಡ್ಡಣ್ಣ
ಅಪ್ಪ ಮಕ್ಕಳ ಮನಸೆಂದು ಮಾಡಲಿಲ್ಲ ಸಣ್ಣ.
ಆಕಾಶದಷ್ಟು ಎತ್ತರ ಅಪ್ಪನ ಪ್ರೀತಿ
ಸ್ಪಟಿಕದಷ್ಟು ಪರಿಶುದ್ಧ ಜೀವನ ರೀತಿ
ದುಡಿಮೆಯಲ್ಲಿ ಕಂಡುಕೊಂಡ ಬದುಕಿನ ನೀತಿ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ
