“ಉದಯಪುರ” ರಾಜಸ್ಥಾನದ ರಮಣೀಯ ನಗರ

ಪ್ರಕೃತಿಯ ಮಡಿಲಲ್ಲಿ ತಲೆಯೇತ್ತಿ ನಿಂತಿರುವ ಉದಯಪುರವು ಬೇಸಿಗೆಗಾಲದಲ್ಲಿ 45°ಸಿ ತಾಪಮಾನ ಇದ್ದು ಚಳಿಗಾಲದಲ್ಲಿ 10°ಸಿ ತಾಪಮಾನವಿರುತ್ತದೆ.ಈ ಸ್ಥಳಕ್ಕೆಭೇಟಿ ಕೊಡಲು ಸೆಪ್ಟೆಂಬರ್ ಮತ್ತು ಫೆಬ್ರವರಿ ಕೊನೆಯ ವಾರಗಳು ಹಾಗೂ ಮಾರ್ಚ್ ಮೊದಲನೇ ವಾರವು ಬಹಳ ಸೂಕ್ತವಾದ ಸಮಯ. ಹೆಚ್. ವಿ. ಮೀನ ಅವರ ಉದಯಪುರದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…

ಬೇಸಿಗೆ ಕಾಲ ಹತ್ತಿರವಾಗುತಿತ್ತು…..ಉದಯಪುರಕ್ಕೆ ಹೋಗಿ ಬರೋಣ ಎಂದು ಮನಸು ಹೇಳಿತು…….

ಮಾರ್ಚ್ ಮೊದಲನೇ ದಿನ ನಾನು ನನ್ನ ಪರಿವಾರದವರೊಂದಿಗೆ ಉದಯಪುರಕ್ಕೆ ಹೊರಟೆ. ನಾವು ಮೊದಲೇ ನಮ್ಮ ಪ್ರವಾಸದ ರೂಪುರೇಖೆಗಳನ್ನು ಹಾಕಿಕೊಂಡಂತೆ ದೆಹಲಿಯಿಂದ ಬೆಳಿಗ್ಗೆ 11ಘಂಟೆಗೆ ಹೊರಡುವ ವಿಮಾನ ಹತ್ತಿದೆವು. ವಿಮಾನವು ಸರಿಯಾಗಿ ಮಧ್ಯಾಹ್ನ 12.15 ಘಂಟೆಗೆ ಉದಯಪುರಕ್ಕೆ ಬಂದು ಸೇರಿತು. ವಿಮಾನ ನಿಲ್ದಾಣದ ಹೊರಾಂಗಣದಲ್ಲಿ “ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ನವರು ಕಳುಹಿಸಿಕೊಟ್ಟ ಕಾರು ನಮಗಾಗಿ ಕಾದಿತ್ತು. ಉದಯಪುರ ವಿಮಾನ ನಿಲ್ದಾಣದಿಂದ “ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ಸುಮಾರು 23 ಕಿಲೋಮೀಟರ್ ದೂರದಲ್ಲಿ ಇದ್ದ ಕಾರಣ ನಮಗೆ ಕಾರಿನಲ್ಲಿ ಅಲ್ಲಿಗೆ ತಲುಪಲು 45 ನಿಮಿಷಗಳೇ ಬೇಕಾದವು. ಆ 45 ನಿಮಿಷಗಳನ್ನು ನಾವು ಉದಯಪುರದ ರಮ್ಯ ಮನೋಹರ ಬೆಟ್ಟ ಗುಡ್ಡಗಳ ದೃಶ್ಯಗಳನ್ನು ಸವಿಯುತ್ತಾ “ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ಗೆ ಬಂದು ಸೇರಿದೆವು. ನಂತರ ಹೊಟೇಲ್ ನಲ್ಲಿ ಊಟ ಮಾಡಿ, ಒಂದೆರಡು ಘಂಟೆಗಳ ಕಾಲ ವಿಶ್ರಮಿಸಿ, ಸಾಯಂಕಾಲ ಸುಮಾರು 5 ಘಂಟೆಗೆ ಉದಯಪುರದ ಪ್ರಸಿದ್ಧ ಸ್ಥಳಗಳನ್ನು ನೋಡಲು ಹೊರಟೆವು. ಉದಯಪುರದ ಬಗ್ಗೆ ವರ್ಣಿಸುವ ಮೊದಲು ನಾನು ನಾವು ತಂಗಿದ್ದ “ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ಬಗ್ಗೆ ಒಂದೆರಡು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ.

ಸುಮಾರು 1300 ವರುಷಗಳ ಹಿಂದಿನ “ಮೆವಾರ” ಸಾಮ್ರಾಜ್ಯದ ಶ್ರೀ “ಮಹಾರಾಣ ಫತೇ ಸಿಂಗ್” ಅವರು ಸುಮಾರು 1884-1930ರ ವರೆಗೂ ಮೇವಾರ(ಉದಯಪುರ) ಪ್ರಾಂತ್ಯದ ರಾಜರಾಗಿದ್ದರು. “ಮಹಾರಾಣ ಫತೇ ಸಿಂಗ್ ಮೇವಾರ” ಅವರು ಹಿಂದೂಧರ್ಮದ ದೊರೆ ಆಗಿದ್ದು, ಸೂರ್ಯವಂಶಿ ರಜಪೂತರ “ಸಿಸೋದಿಯ” ವಂಶದವರಾದ ಇವರು ಆತ್ಮ ಗೌರವದ ಸಾಕಾರರೂಪವಾಗಿದ್ದರು. ಇವರ ಕಾಲಘಟ್ಟದಲ್ಲಿ ರಾಜಮನೆತನದ ಕಾರ್ಯಕ್ರಮಗಳಿಗಾಗಿ ವಿಶೇಷ ಸ್ಥಳವಾದ “ಫತೇಹ್ ಪ್ರಕಾಶ್” ಎಂಬ ಬೃಹತ್ ಅರಮನೆಯನ್ನು19ನೇ ಶತಮಾನದಲ್ಲಿ ಕಟ್ಟಿಸಿದರು ಎಂದು ತಿಳಿಸಲಾಗಿದೆ.

 

ಮಾಜಿ ಮೇವಾರ ರಾಜಮನೆತನದವರಾದ ಶ್ರೀ “ಅರವಿಂದ್ ಸಿಂಗ್ ಮೇವಾರ” ಅವರು ಈ ಅರಮನೆಯ ಪಾಲನೆ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಪಡೆದಿದ್ದಾರೆ. ಇವರು “ಫತೇಹ್ ಪ್ರಕಾಶ್” ಅರಮನೆಯ ಒಂದಷ್ಟು ಜಾಗವನ್ನು 1963 ರಲ್ಲಿ “ಹೆಚ್ಆರ್ ಹೆಚ್” ಗ್ರೂಪ್ ಆಫ್ ಹೊಟೇಲ್ಗಳನ್ನಾಗಿ ಪರಿವರ್ತಸಿದರು. ಶ್ರೀ ಅರವಿಂದ್ ಸಿಂಗ್ ಮೇವಾರ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿದ್ದು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೂಡ ಆಗಿದ್ದಾರೆ. ಈ ಹೊಟೇಲ್ “ಹೆರಿಟೇಜ್ ಗ್ರ್ಯಾಂಡ್ ” ವಿಭಾಗದಲ್ಲಿ ಅತ್ಯುತ್ತಮ ಹೆರಿಟೇಜ್ ಹೊಟೇಲ್ ನಿಮಿತವಾಗಿ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪಡೆದಿದೆ. 2020 ನೇ ಇಸವಿಯಲ್ಲಿ ಶ್ರೀ ಅರವಿಂದ್ ಸಿಂಗ್ ಮೇವಾರ ಅವರ “ಹೆಚ್ಆರ್ ಹೆಚ್” ಸಂಸ್ಥೆಯು, ಈ “ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ನ ಸಮಗ್ರ ನಿರ್ವಹಣೆಯನ್ನು ಟಾಟಾರವರ ಸಂಸ್ಥೆಗಳಲ್ಲಿ ಒಂದಾದ “ಇಂಡಿಯನ್ ಹೊಟೇಲ್ಸ್ ಕಂಪನಿ ಲಿಮಿಟೆಡ್ ” ಅವರಿಗೆ ಹಸ್ತಾಂತರಿಸಿ, ಹೊಟೇಲ್ ನ ಸಂಪೂರ್ಣ ಮಾಲೀಕತ್ವವನ್ನು ತಾವೇ ನಿರ್ವಹಿಸುತ್ತಿದ್ದಾರೆ. ಈಗ ಈ ಕಂಪನಿಯು “ತಾಜ್” ಸಂಸ್ಥೆಯ ಗುಂಪಿಗೆ ಸೇರಿದ್ದು, “ತಾಜ್ ಫತೇಹ್ ಪ್ರಕಾಶ್” ಅರಮನೆ ಎಂಬ ಹೆಸರಿನಲ್ಲಿ ಕರೆಯಲ್ಪಟ್ಟಿದೆ. ಟಾಟಾ ಅವರ ತಾಜ್ ಸಂಸ್ಥೆಯ ಹಿರಿಮೆ ಅಪಾರ. ಅರಮನೆಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಂಡ ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್ ಹೊಟೇಲ್ ಸಂಪೂರ್ಣ ನ್ಯಾಯವನ್ನು ಒದಗಿಸಿದೆ. ಈ ಹೊಟೇಲ್ ನಲ್ಲಿ ತಂಗಿದ್ದ ನಾನು, ಹೊಟೇಲಿನ ಭವ್ಯತೆ ಹಾಗೂ ನನ್ನ ಅನುಭವವನ್ನು ಹಂಚಿಕೊಳ್ಳಲೇ ಬೇಕು.

ಸಿಟಿ ಪ್ಯಾಲೇಸ್

“ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್ ಹೊಟೇಲ್” :

“ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್ ಹೊಟೇಲ್ ನ ಸುತ್ತಲೂ “ಪಿಚೋಲಾ ” ಸರೋವರವು ಸುತ್ತುವರೆದಿದ್ದು, ಅರಾವಳಿ ಪರ್ವತಗಳು ಈ ಜಾಗದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಹೊಟೇಲ್ ಸುಮಾರು 65 ಹೇರಿಟೇಜ್ ಕೋಣೆಗಳನ್ನು ಹಾಗೂ 18 ಗ್ರ್ಯಾಂಡ್ ಸೂಟ್ಸ್ ಗಳನ್ನು ಹೊಂದಿದೆ. ” ಸನ್ ಸೆಟ್ ಟೆರೇಸ್ ರೆಸ್ಟೋರೆಂಟ್”, “ಸಿಟಿ ಪ್ಯಾಲೇಸ್ ವಸ್ತುಸಂಗ್ರಹಾಲಯ”, “ಸೂರ್ಯ ದರ್ಶನ್ ಬಾರ್ “ಹಾಗೂ “ದರ್ಬಾರ್ ಹಾಲ್ “ಗಳು ಐಷಾರಾಮಿಯಾಗಿದ್ದು ಇಲ್ಲಿಯ “ದರ್ಬಾರ್ ಹಾಲ್” ವಿಶ್ವದ ಅದ್ದೂರಿ ದರ್ಬಾರ್ ಸಭಾಂಗಣಗಳಲ್ಲಿ ಒಂದಾಗಿದೆ. ಸಣ್ಣ ಸಭೆಗಳು, ಕಾರ್ಪೊರೇಟ್ ಸಮ್ಮೇಳನಗಳು, ವಿವಾಹ ಸಮಾರಂಭಗಳನ್ನು ಆಚರಿಸುವ ಅವಕಾಶಗಳನ್ನು ಈ ಸ್ಥಳದಲ್ಲಿ ಮಾಡಿಕೊಡಲಾಗುತ್ತದೆ.
ತಾಜ್ ಫತೇಹ್ ಪ್ಯಾಲೇಸ್ ಹೊಟೇಲ್ ಕೊಠಡಿಗಳ ಕಿಟಕಿಗಳಿಂದ ಹಾಗೂ ಹೊರ ಅಂಗಳದಿಂದ ನಾವು “ಫಿಚೋಲಾ ಸರೋವರ”, “ಜಗಮಂದಿರ್ ದ್ವೀಪ”, “ಲೇಕ್ ಪ್ಯಾಲೇಸ್” ಹಾಗೂ “ಸಜ್ಜನ್ ಘರ್ (ಮಾನ್ಸೂನ್ ಪ್ಯಾಲೇಸ್) ಪ್ಯಾಲೇಸ್ ನ ದೃಶ್ಯಗಳನ್ನು ನೋಡಬಹುದಾಗಿದೆ. ಪ್ರತೀ ಒಂದು ಗೋಡೆಗಳು ವರ್ಣರಂಜಿತ ಚಿತ್ರಗಳಿಂದ ವಿನ್ಯಾಸಗೊಂಡಿದ್ದು ಮತ್ತು ರಾಜಮನೆತನದವರ ಚಿತ್ರ ಪಟಗಳು ನಮಗೆ ರಾಜ ಮನೆತನದವರ ಪರಿಚಯವನ್ನು ಮಾಡಿಸಿತು. ಕೊಠಡಿಗಳ ವಿನ್ಯಾಸ ಅದ್ದೂರಿಯಾಗಿದ್ದು ಹೊಟೇಲ್ ನ ಊಟ ಹಾಗೂ ಅತಿಥಿ ಸತ್ಕಾರವು ನಮಗೆ ರಾಜ ವೈಭೋಗದ ಅನುಭವವನ್ನು ನೀಡಿತು. ಹೊಟೇಲ್ ಇಂದ ಹೊಟೇಲಿನ ಪ್ರವೇಶ ದ್ವಾರದ ಬಳಿ ಹೋಗಲು ಸ್ವಲ್ಪ ಕಷ್ಟಕರ,ಇದಕ್ಕೆ ಕಾರಣ ರಸ್ತೆಯಲ್ಲಿ ಏರಿಳಿತಗಳು ಇದ್ದು, ಹೊಟೇಲ್ ಇಂದ ಪ್ರವೇಶ ದ್ವಾರವು ಸುಮಾರು ಒಂದು ಮೈಲಿ ದೂರದಲ್ಲಿದೆ. ಹಾಗಾಗಿ ಹೊಟೇಲ್ ಇಂದ ಬ್ಯಾಟರಿ ಆಪರೇಟೆಡ್ “ಬಗ್ಗಿ ಕಾರು”ಗಳ (ಓಪನ್ ಜೀಪುಗಳು) ವ್ಯವಸ್ಥೆಯನ್ನು ಮಾಡಿದ್ದಾರೆ. ಯಾರಿಗೆ ಹೊಟೇಲ್ ಇಂದ ಹೊಟೇಲ್ ನ ಪ್ರವೇಶ ದ್ವಾರದ ತನಕ ನಡೆದು ಹೋಗಲು ಕಷ್ಟವಾಗುತ್ತದೆಯೋ ಅಂತವರಿಗೆ “ಬಗ್ಗಿ ಕಾರು”ಗಳಿಂದ ಪ್ರವೇಶ ದ್ವಾರದ ಬಳಿ ಬಿಡುತ್ತಾರೆ. ಅಲ್ಲಿಂದ ಮುಂದಕ್ಕೆ ನಾವು ನಗರವನ್ನು ನೋಡಲು ಆಟೋಗಳಿಂದಲೋ ಅಥವಾ ನಡೆದುಕೊಂಡು ಹೋಗಬಹುದಾಗಿದೆ. ಉದಯಪುರವನ್ನು ನೋಡಲೆಂದು ಬಂದಂತಹ ಪ್ರವಾಸಿಗರಿಗೆ “ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್” ಹೊಟೇಲ್ ಒಂದು ಅದ್ದೂರಿ ಹೊಟೇಲ್ಗಳಲ್ಲಿ ಒಂದಾಗಿದ್ದು ಇಲ್ಲಿಯ ಸಿಬ್ಬಂದಿ ವರ್ಗದವರ ಸತ್ಕಾರ (ಹಾಸ್ಪಿಟಾಲಿಟಿ) ಬಹಳ ಆಪ್ತವಾಗಿತ್ತು. ಹೊರ ದೇಶದಿಂದ ಬಂದಂತ ಪ್ರವಾಸಿಗಳ ಮೆಚ್ಚುಗೆಯನ್ನು ಪಡೆದು ಹೆಸರುಗಳಿಸಿದೆ.

 

“ತಾಜ್ ಫತೇಹ್ ಪ್ರಕಾಶ್” ಪ್ಯಾಲೇಸ್ ಹೊಟೇಲ್ ನ ಕೋಣೆಗಳ ಒಂದು ದಿನದ ದರ ಸುಮಾರು 25,000/- 1,50,000/-.

ನಾವು ಉದಯಪುರಕ್ಕೆ ಬಂದ ನಂತರ “ತಾಜ್ ಫತೇಹ್ ಪ್ಯಾಲೇಸ್” ಹೊಟೇಲ್ನಲ್ಲಿ ಎರಡು ತಾಸು ವಿಶ್ರಮಿಸಿ, ಸಾಯಂಕಾಲ ಸುಮಾರು
5 ಘಂಟೆಗೆ ಆಟೋ ಹಿಡಿದು ಹೊಟೇಲ್ ಇಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ “ಬೊಗೋರಿ ಕಿ ಹವೇಲಿ” ಕಟ್ಟಡವನ್ನು ನೋಡಲು ಹೋದೆವು. ಈ ಕಟ್ಟಡವು ಒಂದು ವಸ್ತುಸಂಗ್ರಹಾಲಯವಾಗಿದ್ದು, ಇಲ್ಲಿ ಪ್ರತೀ ದಿನ ಸಾಯಂಕಾಲ 7 ಘಂಟೆ ಗೆ ಜರುಗುವ “ಧರೋಹರ್ ಡಾನ್ಸ್ ಶೋ” ಎಂಬ ಸ್ಥಳೀಯ ಜಾನಪದ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಲು ನಾವು ಟಿಕೆಟ್ ಗಳನ್ನು ಖರೀದಿಸಿ, ನಂತರ ಸಮಯವಿದ್ದ ಕಾರಣ ವಸ್ತುಸಂಗ್ರಹಾಲಯದ ಕಟ್ಟಡದ ಪಕ್ಕದಲ್ಲೇ ಇದ್ದ “ಗಂಗೋರಿ ಘಾಟ್” ಬಳಿ ಹೋದೆವು. ಈ “ಗಂಗೋರಿ ಘಾಟ್” ಅನ್ನು 18 ನೇ ಶತಮಾನದಲ್ಲಿ ಮೇವಾರ ಸಾಮ್ರಾಜ್ಯದ ಪ್ರಧಾನಮಂತ್ರಿಗಳಾಗಿದ್ದ ಶ್ರೀ “ಅಮರ್ ಚಂದ್ ಭದ್ವ” ಎಂಬುವರು ಕಟ್ಟಿದ್ದು, ಇವರ ನಂತರ 1878 ನೇ ಇಸವಿಯಲ್ಲಿ “ಬಗೋರ”ದ ಮಹಾರಾಜ ಶ್ರೀ ಶಕ್ತಿ ಸಿಂಗ್ ಅವರು ಈ ಸ್ಥಳವನ್ನು ವಿಸ್ತರಿಸಿದ ಕಾರಣ ಈ ಕಟ್ಟಡವನ್ನು “ಬಗೋರಿ ಕಿ ಹವೇಲಿ” ಎಂದು ಹೆಸರನ್ನು ಪಡೆಯಿತು (ದೊಡ್ಡ ಮನೆ ಅಥವಾ ಛಾವಾಣಿ ಮನೆಯನ್ನು “ಹವೇಲಿ” ಎಂದು ಕರೆಯುತ್ತಾರೆ). ಸುಮಾರು 1986 ನೇ ಇಸವಿಯಲ್ಲಿ ಸರಕಾರವು ಈ ಸ್ಥಳವನ್ನು “ವೆಸ್ಟ್ ಜೋನ್ ಕಲ್ಚರಲ್ ಸೆಂಟರ್”ಗೆ ಹಸ್ತಾಂತರಿಸಿದರು. ವೆಸ್ಟ್ ಜೋನ್ ಕಲ್ಚರಲ್ ಸೆಂಟರ್ ಅವರು ಈ ಕಟ್ಟಡದ ಶಿಲ್ಪ ವಿನ್ಯಾಸವನ್ನು ಯಾವರೀತಿಯಲ್ಲಿಯೂ ಬದಲಾಯಿಸದೆ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ವಸ್ತು ಸಾಂಗ್ರಹಾಲಯವಾಗಿ ಪರಿವರ್ತಸಿದರು. ಈ ಕಟ್ಟದಲ್ಲಿ ಬಹುದೊಡ್ಡದಾದ ಅಂಗಳ, ಕೊಠಡಿಗಳು, ಬಾಲ್ಕನಿಗಳು, ದೊಡ್ಡ ಕಿಟಕಿಗಳಿಂದ ನಗರವನ್ನು ನೋಡುವಂತಹ ಬಾಲ್ಕನಿಗಳು, ಕಾರಂಜಿ, ಗಾಜಿನ ಕಲಾಕೃತಿಗಳು, ಮುರಲ್ ಚಿತ್ರಕಲೆಗಳು ಇತ್ಯಾದಿ ಸುಂದರವಾದ ಕೆತ್ತನೆಗಳುಳ್ಳ ಈ ಕಟ್ಟಡದಲ್ಲಿ ಜರುಗುವ ಸಾಯಂಕಾಲದ 7 ಘಂಟೆ ಸಮಯಕ್ಕೆ ಜನಪದ ನೃತ್ಯದ ಕಾರ್ಯಕ್ರಮವನ್ನು ನೋಡಲು ಜನರು ಕಾತುರತೆಯಿಂದ ಕಾಯುತ್ತಿದ್ದರು. ನೃತ್ಯ ಕಾರ್ಯಕ್ರಮದ ಟಿಕೆಟ್ ಗಳನ್ನು ಕೊಂಡಿದ್ದ ನಾವು ಪಕ್ಕದಲ್ಲೇ ಹರಿಯುತ್ತಿದ್ದ ಪ್ರಶಾಂತವಾದ “ಸುರಿಯಲ್ ಲೇಕ್ ಪಿಚೋಲಾ” ಸರೋವರದ ಮೋಹಕ ದೃಶ್ಯವನ್ನು ನೋಡುತ್ತಾ ಸಮಯವನ್ನು ಕಳೆದೆವು. ಸಾಯಂಕಾಲದ ಹೊತ್ತಾಗಿತ್ತು ಸರೋವರ ಹಾಗೂ ಸುತ್ತಮುತ್ತಲಿನ ಪ್ರದೇಶ ದೀಪಗಳಿಂದ ಮಿಂಚು ಹುಳಗಳಂತೆ ಬೆಳಗುತ್ತಿದ್ದವು. ತಂಪಾದ ಗಾಳಿ ನಮ್ಮಮನವನ್ನು ಚುಂಬಿಸಿತ್ತು.

ನೀಮ್ ಚೌಕ್

ಸುಮಾರು 6.15 ಘಂಟೆಗೆ ನಾವು ಎರಡನೇ ಮಹಡಿಯ “ಧರೋಹರ್ ಡಾನ್ಸ್ ಶೋ” ಕಾರ್ಯಕ್ರಮವು ಜರುಗುವ ಸ್ಥಳವಾದ “ನೀಮ್ ಚೌಕ್” ಎಂಬ ತೆರೆದ ಮಂಟಪದ ಬಳಿ ಬಂದೇವು. ಕುಳಿತುಕೊಳ್ಳಲು ನೆಲದ ಮೇಲೆ ಹಾಸಿದ ಹಾಸಿಗೆ ಮತ್ತು ದಿವಾನಗಳು ಹಾಗೂ ಮರದ ಬೆಂಚುಗಳನ್ನು ವ್ಯವಸ್ಥೆಯನ್ನು ಮಾಡಿದ್ದರು. ನಾವು ಬೆಂಚಿನ ಮೇಲೆ ಕುಳಿತುಕೊಂಡೆವು. ಪುರಾತನ ವರ್ಣರಂಜಿತ ಮಂಟಪದ ಮಧ್ಯೆ ಒಂದು ಬೇವಿನ ದೊಡ್ಡ ಮರ ಹಾಗೂ ಆಕಾಶದ ಕಪ್ಪುಮೋಡಗಳ ದೃಶ್ಯ ನಮ್ಮ ಕಣ್ಣುಗಳಿಗೆ ಹಿತವಾಗಿತ್ತು. ಸುಮಾರು 200 ಪ್ರೇಕ್ಷಕರಿಂದ ಕಿಕ್ಕಿರಿದ ತೆರೆದ ಅಂಗಣದಲ್ಲಿ ಅನೇಕ ವಿದೇಶಿ ಪ್ರವಾಸಿಗರು ಕೂಡ ನೃತ್ಯವನ್ನು ನೋಡಲು ಬಂದಿದ್ದರು.

ಸಮಯಕ್ಕೆ ಸರಿಯಾಗಿ 7 ಘಂಟೆ ಗೆ ನೃತ್ಯ ಕಾರ್ಯಕ್ರಮವು ಪ್ರಾರಂಭವಾಯಿತು. ಶಂಖದ ನಾದದಿಂದ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕಲಾವಿದರು ವಾದ್ಯ ಹಾಗೂ ಜಾನಪದ ಗೀತೆಗಳಿಂದ ಎಲ್ಲರನ್ನೂ ಸ್ವಾಗತಿಸಿದರು. ನಂತರ ಮಹಿಳೆಯರು “ಚಾರಿ” ನೃತ್ಯದಲ್ಲಿ ತಮ್ಮ ತಲೆಯಮೇಲೆ ಬೆಂಕಿ ಹೊತ್ತಿಸಿದ ಹಿತ್ತಾಳೆ ಕುಂಡಗಳನ್ನು ಹೊತ್ತು ನೃತ್ಯವನ್ನು ಪ್ರದರ್ಶಿದರು. ನಂತರ “ತೇರ್ಹತಾಲ್ “ನೃತ್ಯದಲ್ಲಿ ಮಹಿಳೆಯರು ತಮ್ಮ ಕೈ ಕಾಲುಗಳ ಮೇಲೆ 13 ವಿಭಿನ್ನ ಮಂಜಿರಾಗಳನ್ನು ಅಂದರೆ ಹಿತ್ತಾಳೆ ತಾಳಗಳನ್ನು ಕಟ್ಟಿಕೊಂಡು ನರ್ತಿಸಿದರು. ನಂತರ “ಗೋರ್ಬಂದ್” ನೃತ್ಯದಲ್ಲಿ ಮಹಿಳೆಯರು ಬಿಳೀ ಬಣ್ಣದ ದೊಡ್ಡ ಆಕಾರದ ಬಳೆಗಳನ್ನು ಕೈತುಂಬಾ ತೊಟ್ಟು ಸರ್ಪದ ನೃತ್ಯದಂತೆ ತಾಳಕ್ಕೆ ತಕ್ಕಹಾಗೆ ದೇಹವನ್ನು ತಿರಿಗಿಸುತ್ತಾ ನರ್ತಿಸಿದರು. ನಂತರ “ಬೊಂಬೆಯಾಟ”ವು ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಮಕ್ಕಳಿಗಾಗಿಯೇ ಹಾಸ್ಯ ರೂಪದಲ್ಲಿ ಬೊಂಬೆಯಾಟವನ್ನು ಪ್ರದರ್ಶಿಸಿ ಮಕ್ಕಳ ಮನವನ್ನು ಗೆದ್ದರು. ಕೊನೆಯದಾಗಿ ಬಹಳ ಕ್ಲಿಷ್ಟಕರವಾದ “ಭವಾನಿ” ನೃತ್ಯದಲ್ಲಿ ಸುಮಾರು 40 ವರುಷದ ಓರ್ವ ನೃತ್ಯಗಾತಿಯು ತನ್ನ ತಲೆಯ ಮೇಲೆ 13 ಮಣ್ಣಿನ ಕುಂಡಗಳನ್ನು ಹೊತ್ತುಕೊಂಡು ನೃತ್ಯವಾಡುತ್ತಾ, ನೃತ್ಯದ ಮಧ್ಯೆ ತಟ್ಟೆಯ ಮೇಲೆ ನರ್ತಿಸುತ್ತಾ ಹಾಗೂ ಗಾಜಿನ ತುಂಡುಗಳ ಮೇಲೆ ನರ್ತಿಸಿ ತನ್ನ ತಲೆಯ ಮೇಲೆ ಹೊತ್ತಿದ್ದ ಮಣ್ಣಿನ ಕುಂಡಗಳು ಬೀಳದಂತೆ ನರ್ತಿಸಿದ ಆ ನರ್ತಕಿಯ ಪರಿಶ್ರಮ, ಏಕಾಗ್ರತೆಯು ಎಲ್ಲರ ಕಣ್ಮನವನ್ನು ಸೆಳೆದು ಪ್ರಶಂಸೆಯನ್ನು ಪಡೆಯಿತು. ಗಾಯಕರ ಗಾಯನ ಹೃದಯದಲ್ಲಿ ಅಲೆಗಳನ್ನು ಎಬ್ಬಿಸಿ ಜಾನಪದ ಗೀತೆಗಳ ಬಗ್ಗೆ ಇಂದಿನ ಯುವ ಜನರು ಆಸಕ್ತಿಯನ್ನು ತೋರುವಂತೆ ಮಾಡಲು ಗಾಯಕರು ಸಫಲರಾದರು. ಈ ಎಲ್ಲಾ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವು ಭಾರತದ ಪರಂಪರೆಯ ವಿಶೇಷ ಪರಿಚಯವನ್ನು ಮಾಡಿಸುತಾ, ಜಾನಪದ ಕಲೆಗಳಿಂದ ಅನೇಕ ಪ್ರಾಂತ್ಯಗಳ ಜೀವನ ಶೈಲಿ ಹಾಗೂ ಜೀವನದ ಮಹತ್ವಗಳ ಅರಿವನ್ನು ಮೂಡಿಸಿತು. “ನೀಮ್ ಚೌಕ್” ನೃತ್ಯ ಅಂಗಳದಲ್ಲಿನ ಒಂದು ಭಾಗದಲ್ಲಿ “ಶೃಂಗಾರ ಕಕ್ಷ”ವು ಅಲ್ಲಿಯ ನೃತ್ಯಗಾತಿಯರು ಅಲಂಕಾರಿಸಿಕೊಳ್ಳುವ ಕೊಠಡಿಯಾಗಿದ್ದು,ಆ ಕೊಠಡಿಯಲ್ಲಿ ರಾಣಿಯರು ಉಪಯೋಗಿಸುತ್ತಿದ್ದ ಮರದ ಪೆಟ್ಟಿಗೆಗಳು ಇದ್ದವು. ಇದರ ಜೊತೆಗೆ ಈ ಕಟ್ಟಡದ ನೆಲ ಮಹಡಿಯ ಅಂಗಳದಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ತೊಡುವ ವಿಧ ವಿಧವಾದ ಪೇಟಗಳ ಪ್ರದರ್ಶನದ ಕಪಾಟುಗಳು ನಮ್ಮ ದೇಶದ ವೈವಿದ್ಯಮಯ ಉಡುಗೆ ತೊಡುಗೆಗಳ ಪರಿಚಯವನ್ನು ಮಾಡಿಸಿತು. ಒಟ್ಟಾರೆ ಜಾನಪದ ನೃತ್ಯ ಕಾರ್ಯಕ್ರಮವು ಮನೋಹರವಾಗಿತ್ತು. ಉದಯಪುರಕ್ಕೆ ಹೋದವರು ಈ ನೃತ್ಯದ ಕಾರ್ಯಕ್ರಮಕ್ಕೆ ತಪ್ಪದೆ ಹೋಗಲೇಬೇಕು.

ಮರುದಿನ ಬೆಳಿಗ್ಗೆ ತಾಜ್ ಫತೇಹ್ ಪ್ರಕಾಶ್ ಹೋಟೆಲ್ನಲ್ಲಿ ಭರ್ಜರಿ ಉಪಹಾರವನ್ನು ಮಾಡಿ, ಸುಮಾರು 10.30 ಸಮಯಕ್ಕೆ ನಾವು “ಸಿಟಿ ಪ್ಯಾಲೇಸ್” ನೋಡಲು ಹೋದೆವು.

ಪಿಚೋಲಾ ಸರೋವರ

ಸಿಟಿ ಪ್ಯಾಲೇಸ್ :

“ಸಿಟಿ ಪ್ಯಾಲೇಸ್ “ಕಟ್ಟಡವು ಮಾಜಿ ಮೇವಾರ ರಾಜರ ಕೊಡುಗೆಯಾಗಿದ್ದು, 1553 ಇಸವಿಯಲ್ಲಿ ಕಟ್ಟಡದ ನಿರ್ಮಾಣ ಪ್ರಾರಂಭಗೊಂಡು,ಸುಮಾರು 400 ವರುಷಗಳ ಅವಧಿಯಲ್ಲಿ ಅಂದರೆ 16 ನೇ ಶತಮಾನದಲ್ಲಿ ಈ ಕಟ್ಟಡವನ್ನು ಪೂರ್ಣಗೋಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಚಕ್ರವರ್ತಿ ಅಕ್ಬರ್ ಅವರು “ಚಿತ್ತೋರ” ಪ್ರಾಂತ್ಯವನ್ನು ವಜಾಗೊಳಿಸಿದಾಗ ಅಲ್ಲಿಂದ ಮಹಾರಾಣ ಉದಯ್ ಸಿಂಗ್ ll ಅವರು ತಮ್ಮ ರಾಜಧಾನಿ ಆಗಿದ್ದ ಚಿತ್ತೋರ್ ನಿಂದ ಹೊಸ ರಾಜ್ಯವನ್ನು ಕಟ್ಟಲು “ಉದಯಪುರಕ್ಕೆ” ಸ್ಥಳಾoತರಿಸಿ ನಂತರ ಈ ಪ್ರಾಂತ್ಯದಲ್ಲಿ ಪ್ರಭಲವಾದ ರಾಜ್ಯವನ್ನು ಕಟ್ಟಿದರು. ತ್ರಿಪೋಲಿಯಾ ಮಹಾದ್ವಾರದಿಂದ ಪ್ರಾರಂಭಗೊಂಡ ಈ ಅರಮನೆಯ ಒಳಗೆ ಹಲವಾರು ಉಪ ಅರಮನೆಗಳನ್ನು ಹೊಂದಿದೆ. ಇದು ಭಾರತದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗಿದೆ. ಈ ಸ್ಥಳವು ಎಲ್ಲಾ ಕಡೆಗಳಿಂದ ಸರೋವರ, ಕಾಡು ಹಾಗೂ ಆರಾವಳಿ ಬೆಟ್ಟಗಳಿಂದ ಸುರಕ್ಷಿಸಲ್ಪಟ್ಟಿದೆ. ಅದ್ದೂರಿಯಾಗಿ ಗ್ರಾನೈಟ್ ಹಾಗೂ ಅಮೃತ ಶಿಲೆ ಇಂದ ನಿರ್ಮಿಸಿರುವ ಈ ಅರಮನೆಯ ಹಲವಾರು ಕೋಣೆಗಳು ಚತುರ್ಭುಜ ಆಕಾರದಲ್ಲಿನ ಹಾಗೂ ಚೌಕ ಆಕಾರಗಳನ್ನು ಹೊಂದಿದ ಕೊಠಡಿಗಳಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸಂಪರ್ಕ ಹೊಂದಿರುವ ಸುರಂಗ ರೀತಿಯಲ್ಲಿ ಕಟ್ಟಿದ್ದು, ಅನೇಕ ಮೆಟ್ಟಿಲುಗಳುಳ್ಳ ಈ ಕಟ್ಟಡಕ್ಕೆ ವೈರಿಗಳು ಅರಮನೆಗೆ ನುಗ್ಗಲು ಅಸಾಧ್ಯವಾಗುವಂತೆ ಎಚ್ಚರಿಕೆಯನ್ನು ವಹಿಸಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಪಿಚೋಲ ಸರೋವರದ ಪೂರ್ವದಲ್ಲಿರುವ ಅರಾವಳಿ ಪರ್ವತ ಶ್ರೇಣಿಯೊಳಗೆ ನೆಲೆಸಿರುವ ಈ ಅರಮನೆಯು ಜನಪ್ರಿಯ ಸಂಸ್ಕೃತಿಯನ್ನು ಹೊಂದಿದೆ. ಈ ಅರಮನೆಯ ಒಳಗೆ 11 ಸಣ್ಣ ಪ್ರತ್ಯೇಕ ಅರಮನೆಗಳನ್ನು ನಿರ್ಮಿಸಿದ್ದಾರೆ. ಈ ಸಮೂಹದ ವಿಶಿಷ್ಟ ವಾಸ್ತು ಶಿಲ್ಪದ ವಿನ್ಯಾಸವು ಏಕರೂಪವಾಗಿದೆ. ಈ ವರ್ಣರಂಜಿತ ಕಟ್ಟಡವು ಇಂದು “ವಸ್ತು ಸಂಗ್ರಹಾಲಯ”ವಾಗಿ ಪರಿವರ್ತನೆಗೊಂಡಿದೆ. ಅರಮನೆಯ “ಶೀಶ್ ಮಹಲ್” ದೊಡ್ಡದಾಗಿದ್ದು, ಇದರ ಗೋಡೆಗಳು ಬಣ್ಣಬಣ್ಣ ಗಾಜುಗಳ ತುಂಡುಗಳಿಂದ ಅಲಂಕಾರಿಸಲ್ಪಟ್ಟಿವೆ. ಕನ್ನಡಿಯ ಚಿತ್ರಗಳು, ಅಮೃತ ಶಿಲೆಯ ಕೆತ್ತನೆಗಳು, ಗೋಪುರಗಳು, ಬೆಳ್ಳಿ ಕೆತ್ತನೆ, ಗೋಡೆಗಳ ಮೇಲೆ ಮುರಲ್ ಚಿತ್ರಗಳು ಹಾಗೂ ವಿಧ ವಿಧವಾದ ಬಣ್ಣಗಳಿಂದ ಕೂಡಿರುವ ಚಿತ್ರಗಳು, ಗಣೇಶನ ವಿಗ್ರಹ ಹಾಗೂ ಅದರ ಸುತ್ತಲಿನ ಬಣ್ಣ ಬಣ್ಣದ ಗಾಜಿನ ಕೆತ್ತನೆಯು ಅದ್ಭುತವಾಗಿವೆ. ಅಂದಿನ ಕಾಲದ ಬೆಳ್ಳಿಯ ಪದಕಗಳು, ಬೆಳ್ಳಿಯ ಪ್ರಶಸ್ತಿ ಫಲಕಗಳು ಹಾಗೂ ಬೆಳ್ಳಿಯ ಸ್ಮರಣಿಕೆಗಳನ್ನು ಜೋಡಿಸಿಟ್ಟಿದ್ದಾರೆ. ಕೋಣೆಗಳ ಚಿಕ್ಕ ಚಿಕ್ಕ ಸಜ್ಜೆಗಳಿಂದ ಇಣುಕಿ ನೋಡಿದರೆ ಪಿಚೋಲೆ ಸರೋವರದ ದೃಶ್ಯಗಳು ಹಾಗೂ ಉದಯಪುರ ನಗರದ ಚಿತ್ರಣವು ಕಾಣಿಸುತ್ತದೆ. ಯುದ್ಧದ ಸಮಯದಲ್ಲಿ ರಾಜರುಗಳು ತೋಡುತ್ತಿದ್ದ ಕವಚಗಳು, ಆಭರಣಗಳು, ವಿಳ್ಳೇದೆಲೆ ಅಡಿಕೆ ಇಡುವ ಡಬ್ಬಿ, ಬೀಸಣಿಗೆ, ಕುದುರೇಗಾಡಿ, ಅನೇಕ ರೀತಿಯ ಆಯುಧಗಳು, ಪಲ್ಲಕಿಗಳು, ಉಯ್ಯಾಲೆ, ಹಾಸಿಗೆ, ಪಗಡೆ ಚೌಕ, ಗಣೇಶನ ವಿಗ್ರಹ, ಚಿಕ್ಕದಾದ ವಿಮಾನ, ವಸ್ತ್ರಗಳನ್ನು ಇಡುವ ಮರದ ಪೆಟ್ಟಿಗೆಗಳು,ಪಾತ್ರೆಗಳು ಹಿತ್ತಾಳೆಯ ಸೂರ್ಯದೇವನ ಮುಖವಾಡ ಹೀಗೆ ಇನ್ನೂ ಅನೇಕ ರೀತಿಯ ರಾಜ ಮನೆತನದ ವೈಭವವನ್ನು ಬಿಂಬಿಸುವ ವಸ್ತುಗಳ ಸಂಗ್ರಹವು ರಾಜ ಮನೆತನದ ವೈಭೋಗ ಹಾಗೂ ರಾಜರ ಶೌರ್ಯ ಪರಾಕ್ರಮದ ಬಗ್ಗೆ ಎಲ್ಲರಿಗೂ ಗರ್ವದಿಂದ ಹೆಮ್ಮೆಯ ಭಾವ ಮೂಡುವುದು. ಈ ಅರಮನೆಯ “ಮಾನಕ್ ಚೌಕ್” ಅಂಗಳದಲ್ಲಿ ಮೇವಾರ ರಾಜರು ಪ್ರಶಸ್ತಿ ಕಾರ್ಯಕ್ರಮಗಳನ್ನು, ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಹಾಗೂ ಮತ್ತಿತರ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎಂದು ತಿಳಿಸಲಾಗಿದೆ. ಹಾಲಿವುಡ್ ನಟರಾದ ಜೇಮ್ಸ್ ಬಾಂಡ್ ರವರ “ಅಕ್ಟೋಪಸಿ” ಚಲನಚಿತ್ರದಲ್ಲಿ ಈ ಅರಮನೆನ್ನು ಹೊಟೇಲ್ ನಂತೆ ಪರಿವರ್ತಿಸಿ ಚಿತ್ರೀಕರಿಸಿರುವುದನ್ನು ನೋಡಬಹುದು. ಸಿಟಿ ಪ್ಯಾಲೇಸ್ ನೋಡಿದ ನಂತರ ಮದ್ಯಾಹ್ನದ ಊಟವನ್ನು ಅಲ್ಲೇ ಹತ್ತಿರದಲ್ಲಿದ್ದ “ಕೆಫೆ ಬೋಹೊ “ಎಂಬ ಚಿಕ್ಕದಾದ ಕೆಫೆಯಲ್ಲಿ ಒಳ್ಳೆಯ ಊಟವನ್ನು ಮಾಡಿದೆವು. ಈ ಕೆಫೆಯ ಅನ್ನ, ಸ್ಟಫ್ಡ್ ಟೊಮೇಟೊ ಕರಿ ಹಾಗೂ ದಾಲ್, ರೋಟಿಯ ರುಚಿ 5 ಸ್ಟಾರ್ ಹೊಟೇಲ್ ಗಿಂತ ತುಂಬಾ ಚೆನ್ನಾಗಿತ್ತು. ಊಟ ಮುಗಿಸಿಕೊಂಡು ಮತ್ತೆ ನಾವು ತಾಜ್ ಫತೇಹ್ ಪ್ಯಾಲೇಸ್ ಹೊಟೇಲ್ ಗೆ ಬಂದು ಒಂದೆರಡು ತಾಸು ವಿಶ್ರಾಂತಿಯನ್ನು ಪಡೆದೆವು. ನಂತರ ಸಾಯಂಕಾಲ 4-45 ಘಂಟೆಗೆ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಸುರಿಯುತ್ತಿದ್ದ ಮಳೆಯಲ್ಲಿ ತಾಜ್ ಫತೇಹ್ ಪ್ರಕಾಶ್ ಹೊಟೇಲ್ ನ ಸಿಬ್ಬಂದಿ ವರ್ಗದವರು ನಮ್ಮನ್ನು ಅವರ ಹೊಟೇಲಿನ ಬೋಟ್ ನಲ್ಲಿ ಫಿಚೋಲೆ ಸರೋವರದಲ್ಲಿ 45 ನಿಮಿಷಗಳ ಕಾಲ ಸುತ್ತಾಡಿಸಿದರು. ಸರೋವರದ ಸುತ್ತಲೂ ಹೊಟೇಲ್ ಒಬೆರಾಯ್, ಲೀಲಾ ಪ್ಯಾಲೇಸ್ ಲೇಕ್ ಪ್ಯಾಲೇಸ್ ಹೀಗೆ ಇನ್ನು ಅನೇಕ ಬೃಹತ್ ಪ್ರತಿಷ್ಠಿತ ಹೊಟೇಲ್ ಗಳು ತಮ್ಮದೇ ಆದ ವೈಭವವನ್ನು ತೋರುತಿತ್ತು. ಮಳೆ ಜೋರಾಗಿ ಸದ್ದಿಲ್ಲದೇ ಸುರಿಯಲಾರಂಭಿಸಿತು. ಕಾರ್ಮೋಡದ ಕತ್ತಲೆಯಲ್ಲಿ ಸುರಿಯುತ್ತಿದ್ದ ಮಳೆ ಹನಿಗಳು ಸರೋವರದಲ್ಲಿ ಮುತ್ತಿನಂತೆ ಕಂಡವು. ತಂಪಾದ ಗಾಳಿಯು ಚಳಿಯನ್ನು ಹೆಚ್ಚಿಸಿತು. ಆಗ ಫಿಚೋಲೆ ಸರೋವರದ ದೃಶ್ಯವು ಸ್ವರ್ಗದಂತಿತ್ತು. ನಮ್ಮ ಆ 3 ದಿವಸದ ಪ್ರವಾಸ ಸಾರ್ಥಕವಾಯಿತು. ಮರುದಿನ ದೆಹಲಿಗೆ ಮರಳಿದೆವು. “ಉದಯಪುರ ಒಂದು ಸುಂದರವಾದ ಲೋಕ”.

ಪಿಚೋಲಾ ಸರೋವರ

ಇನ್ನು ಉದಯಪುರದ ಬಗ್ಗೆ ಹೇಳುವುದಾದರೆ ಇದು ರಾಜಸ್ಥಾನದ ಒಂದು ಜಿಲ್ಲೆಯಾಗಿದೆ. ಈ ಪ್ರಾಂತ್ಯವನ್ನು 1571ರಲ್ಲಿ ಪಿಚೋಲ ಸರೋವರದ ಪೂರ್ವ ದಂಡೆಯ ಮೇಲೆ ಸ್ಥಾಪಿಸಿ, ಇದರ ಸುತ್ತಲೂ ಭದ್ರವಾದ 30 ಮೀ. ಎತ್ತರದ ಕೋಟೆಯನ್ನು ನಿರ್ಮಿಸಲಾಗಿದೆ. ಇಲ್ಲಿರುವ ಅರಮನೆ ರಾಜಸ್ಥಾನದಲ್ಲೇ ಅತೀ ದೊಡ್ಡ ಅರಮನೆಯಾಗಿದೆ. ಈ ಸುಂದರವಾದ ನಗರವನ್ನು ಸ್ಥಾಪಿಸಿದವರು ಮೇವಾರ ಸಾಮ್ರಾಜ್ಯದ 12 ನೇ ಆಡಳಿತಗಾರರಾದ ಶ್ರೀ “ಮಹಾರಾಣಾ ಉದಯ ಸಿಂಗ್” ಅವರು, ಹಾಗಾಗಿ, ಈ ಪ್ರಾಂತ್ಯಕ್ಕೆ “ಉದಯಪುರ” ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಪ್ರಾಂತ್ಯವೂ ಅನೇಕಬಾರಿ ವಿಸ್ತಾರಗೊಂಡಿದ್ದು, ಇಲ್ಲಿನ ಕಟ್ಟಡಗಳು ಹಲವಾರು ಶಿಲ್ಪ ಶೈಲಿಗಳಿಂದ ಕೂಡಿವೆ . ಈ ಪಿಚೋಲಾ ಸರೋವರದ ಎರಡು ದ್ವೀಪಗಳ ಮಧ್ಯೆ ಇರುವ “ಜಗಮಂದಿರ “ಮತ್ತು “ಜಗನಿವಾಸ” ಅರಮನೆಗಳು ಅಮೃತಶಿಲೆಯಿಂದ ನಿರ್ಮಿತಗೊಂಡಿದೆ. ಇವುಗಳು ಜಗದ್ ಪ್ರಸಿದ್ಧವಾದ ಅರಮನೆಗಳಾಗಿವೆ. ಉದಯಪುರದ ಸುತ್ತಲೂ ಅನೇಕ ದ್ವೀಪಗಳಿಂದ ಹಾಗೂ ಕೃತಕ ಸರೋವರಗಳಿಂದ ತುಂಬಿದ್ದು ದಟ್ಟನೆಯ ಕಾಡು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದೆ.

ಅರಮನೆಯ ಹೊರಗೆ ಸಣ್ಣ ರಸ್ತೆಗಳ ಎರಡೂ ಬದಿಗಳಲ್ಲಿ ಚಿಕ್ಕ ದೇವಸ್ಥಾನಗಳು, ರಾಜಸ್ಥಾನದ ಕಲಾ ಕೃತಿಗಳು, ಬಟ್ಟೆಗಳು, ಬಳೆ, ಸರಗಳು, ಕರಕುಶಲ ಚೀಲಗಳು ಮತ್ತೆ ಇನ್ನೂ ಅನೇಕ ಕಸೂತಿ ವಸ್ತುಗಳ ಅಂಗಡಿಗಳು ಸಾಲಾಗಿ ಇದ್ದವು. ಈ ರಸ್ತೆಗಳು ವರ್ಣ- ರಂಜಿತವಾಗಿದ್ದು ನಮ್ಮ ಬೆಂಗಳೂರಿನ ಚಿಕ್ಕಪೇಟೆ, ಅವಿನ್ಯೂ ರೋಡ್ಗಳಂತೆ ಇದ್ದವು.

ಇಲ್ಲಿಯ ಆಹಾರ ಪದ್ಧತಿಯಲ್ಲಿ ಮುಖ್ಯವಾದುದು ರೋಟಿ, ದಾಲ್ ಹಾಗೂ ಬಾಸ್ಮತಿ ಅಕ್ಕಿಯ ಅನ್ನ. ಅನೇಕ ವೆರೈಟಿಯ ಬಾಸ್ಮತಿ ಅಕ್ಕಿಯಲ್ಲಿ ಅನ್ನ, ಪಲಾವ್, ಜೀರಾ ರೈಸ್ ಹೀಗೆ ಇನ್ನೂ ಹಲವಾರು ಖಾಧ್ಯಗಳು ಲಭ್ಯ. ಸೋನಾಮಸೂರಿ ಅಕ್ಕಿಯನ್ನು ಈ ನಗರದಲ್ಲಿ ಯಾರು ಹೆಚ್ಚಾಗಿ ಬಳಸುವುದಿಲ್ಲ. ಹಾಗಾಗಿ ಸರ್ವವೂ ಬಾಸ್ಮತಿಮಯವು. ಉದಯಪುರದ ಪ್ರಕೃತಿ ಸೌಂದರ್ಯವನ್ನು ಸವಿದು ದೆಹಲಿಗೆ ಬಂದವಳೇ ಮೊಟ್ಟ ಮೊದಲಿಗೆ ಮಾಡಿದ್ದು, ಸೋನಾಮಸೂರಿ ಅಕ್ಕಿಯ ಅನ್ನ, ಇಂಗು-ತೆಂಗು ಹಾಕಿ ಟೊಮೇಟೊ ಸಾರು ಹಾಗೂ ಮೊಸರನ್ನದ ಜೊತೆ ಚಪ್ಪರಿಸಿದ್ದು ನಿಂಬೆ ಹಣ್ಣಿನ ಉಪ್ಪಿನಕಾಯಿ.

ಪ್ರಕೃತಿಯ ಮಡಿಲಲ್ಲಿ ತಲೆಯೇತ್ತಿ ನಿಂತಿರುವ ಉದಯಪುರವು ಬೇಸಿಗೆಗಾಲದಲ್ಲಿ 45°ಸಿ ತಾಪಮಾನ ಇದ್ದು ಚಳಿಗಾಲದಲ್ಲಿ 10°ಸಿ ತಾಪಮಾನವಿರುತ್ತದೆ. ಈ ಸ್ಥಳಕ್ಕೆಭೇಟಿ ಕೊಡಲು ಸೆಪ್ಟೆಂಬರ್ ಮತ್ತು ಫೆಬ್ರವರಿ ಕೊನೆಯ ವಾರಗಳು ಹಾಗೂ ಮಾರ್ಚ್ ಮೊದಲನೇ ವಾರವು ಬಹಳ ಸೂಕ್ತವಾದ ಸಮಯ. ಸುಮಾರು 6.5 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಊರು ಅನೇಕ ಸುಂದರವಾದ ಸರೋವರಗಳುಳ್ಳ ಭಾರತದ ಪ್ರಸಿದ್ಧ ಪ್ರವಾಸಿತಾಣವಾಗಿದೆ.


  • ಹೆಚ್. ವಿ. ಮೀನ – ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading