ಪುರುಷೋತ್ತಮ ಬಿಳಿಮಲೆಯವರ ಕನ್ನಡ ಕಥನಗಳು ಒಂದು ಸಮೀಕ್ಷೆ. ಬಹುಘನಾಕೃತಿಯಿಂದ ಏಕಘನಾಕೃತಿಯ ಕಡೆಗೆ ಚಲಿಸುತ್ತಿರುವ ಈ ವಿಷಮ ಸನ್ನಿವೇಶದಲ್ಲಿ ಪುರುಷೋತ್ತಮ ಬಿಳಿಮಲೆಯವರ ಕನ್ನಡ ಕಥನಗಳು ಬಹುತ್ವದ ಭಾರತಕ್ಕೊಂದು ಕನ್ನಡಿ ಹಿಡಿದಿದೆ. ರಘುನಾಥ್ ಕೃಷ್ಣಮಾಚಾರ್ ಅವರ ರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಈ ಕೃತಿಯನ್ನು ಅಭ್ಯಾಸದ ಅನುಕೂಲಕ್ಕಾಗಿ ಐದು ಭಾಗಗಳಾಗಿ ಸ್ಥೂಲವಾಗಿ ವಿಂಗಡಿಸಿಕೊಂಡಿದ್ದೇನೆ. ಅವು, ಒಂದು ಭಾಷಿಕ ನೆಲೆ, ಎರಡು ಸಾಹಿತ್ಯದ ನೆಲೆ, ಮೂರು. ಸಂಸ್ಕøತಿಯ ನೆಲೆ, ನಾಲ್ಕು ನಾಗರೀಕ ನೆಲೆ, ಐದು ಸಂಶೋಧನಾತ್ಮಕ ನೆಲೆ.
ಭಾಷಿಕ ನೆಲೆ: ಜಾಗತೀಕರಣದ ಈ ಸಂದರ್ಭದಲ್ಲಿ ಭಾರತೀಯ ಭಾಷೆಗಳು ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಅದರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಒಂದು ಜನಾಂಗದ ಭಾಷೆಯಾದ ಅರೆ ಭಾಷೆಯ ಉಗಮ, ವಲಸೆ, ಲಕ್ಷಣ (ಹಳೆಗನ್ನಡದ ಕೆಲವು ವೈಲಕ್ಷಣಗಳನ್ನು ಉಳಿಸಿಕೊಂಡಿರುವ) ಇತ್ಯಾದಿಗಳನ್ನು ಮತ್ತು ಅದರಲ್ಲಿ ಆಗಬೇಕಾದ ಸಂಶೋಧನೆಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಬುಡಕಟ್ಟಿನ ಭಾಷೆಗಳಾದ ಸಂತಾಲಿ ಮುಂತಾದ ಭಾಷೆಗಳಿಗೆ ದೊರೆತ ರಾಷ್ಟ್ರೀಯ ಮಾನ್ಯತೆ ತುಳುವಿನಂತಹ ಸಮೃದ್ಧ ಭಾಷೆಗೆ ದೊರೆಯದೇ ಹೋದ ಹಿಂದಿನ ರಾಜಕೀಯವನ್ನು ಮತ್ತು ನಮ್ಮ ದೌರ್ಬಲ್ಯವನ್ನು ಏಕಕಾಲಕ್ಕೆ ಬಯಲಿಗೆಳೆಯುತ್ತಾರೆ.

ಸಾಹಿತ್ಯಕ ನೆಲೆ:
ಅ) ರಾಷ್ಟ್ರೀಯ ಕಾವ್ಯಗಳೆಂದು ಹೆಸರು ಪಡೆದಿರುವ ರಾಮಾಯಣ ಮಹಾಭಾರತಗಳನ್ನು ಅವುಗಳ ಭಿನ್ನ ಪಾಠಗಳನ್ನು ಬದಿಗಿರಿಸಿ ಏಕ ಪಾಠವನ್ನಾಗಿಸಿದ ಬ್ರಿಟಿಷರ ಕೊಡುಗೆಯಾದ ಸಂಪಾದನಾ ಶಾಸ್ತ್ರದ ಮಿತಿಗಳನ್ನು ಉಲ್ಲೇಖಿಸುತ್ತ ಉತ್ತರ, ಈಶಾನ್ಯ ಮತ್ತು ದಕ್ಷಿಣದಲ್ಲಿ ಲಭ್ಯವಿರುವ ಭಿನ್ನ ಜನಪದ ಪಾಠಗಳನ್ನು ನಮ್ಮ ಗಮನಕ್ಕೆ ತರುತ್ತಾರೆ. ಅದರೊಂದಿಗೆ ಮಾತು ಬರಹವಾಗುವ, ಬರಹ ಪಠ್ಯವಾಗುವ, ಪಠ್ಯವಾಗಿ ನಿರ್ಧಿಷ್ಟಗೊಳ್ಳುವ ಅಪಾಯದ ಕಡೆಗೂ ಸಾಧಾರವಾಗಿ ನಮ್ಮ ಗಮನ ಸೆಳೆಯುತ್ತಾರೆ.
ಬ) ಹಳಗನ್ನಡ ಬಹುರೂಪಿ ಎನ್ನುವ ಪ್ರಬಂಧದಲ್ಲಿ ಹಳಗನ್ನಡ ಮತ್ತು ನಡುಗನ್ನಡದಲ್ಲಿರುವ ಶಿಷ್ಟ ಪಠ್ಯಗಳು, ಛಂದಸ್ಸು, ಗಮಕ, ಹರಿಕಥೆ, ಯಕ್ಷಗಾನ, ಶಿಲ್ಪಗಳ ಮೂಲಕ ವ್ಯಾಪಕತೆಯನ್ನು ಪಡೆದದ್ದನ್ನು ನಿರೂಪಿಸಿದ್ದಾರೆ. ಅದರಿಂದ ಹೊಸ ಆಯಾಮಗಳು ದೊರೆತವು ಎಂದು ಹೇಳಿದ್ದರೂ ಅದನ್ನು ಸಾಧಾರವಾಗಿ ವಿಶದ ಪಡಿಸಲಾಗಿಲ್ಲ. ಕನಕದಾಸರ “ನಳಚರಿತೆ” ಅಖಿಲಭಾರತದ ವ್ಯಾಪ್ತಿಯನ್ನು ಪಡೆದುಕೊಂಡಿರುವುದನ್ನು ಇಲ್ಲಿ ನಿರೂಪಿಸಿದ್ದಾರೆ.
ಕ) ‘ಭಕ್ತಿ ಪರಂಪರೆ ಮತ್ತು ಜನಪದ’ ಎಂಬ ಪ್ರಬಂಧದಲ್ಲಿ ಏಕ ದೇವೋಪಾಸನೆಯನ್ನು ಪ್ರತಿಪಾದಿಸುವ ನೆಪದಲ್ಲಿ ಜನಪದ ವಿರೋಧಿ ಧೋರಣೆಯನ್ನು ತಳೆದ ಅದರಿಂದಾಗಿ ಶಿಷ್ಟದೊಂದಿಗೆ ಬೆರೆತುಕೊಳ್ಳಬೇಕಾಗಿ ಬಂದ ದುರಂತವನ್ನು ಜೈನ ಧರ್ಮ, ಭಕ್ತಿ ಕಾವ್ಯ ಮತ್ತು ಜನಪದರ ಹಿನ್ನೆಲೆಯಲ್ಲಿ ವಿವೇಚಿಸಲಾಗಿದೆ. ಅವರ ದೈವಗಳನ್ನು ನಿರಾಕರಿಸುವ ಅದರ ಹಿಂದಿನ ಹುನ್ನಾರಗಳನ್ನೂ ಬಯಲುಗೊಳಿಸಲಾಗಿದೆ.
ಡ) ಎ.ಕೆ. ರಾಮಾನುಜನ್ರು ಮಾಡಿದ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಕೈಂಕರ್ಯದ ಹಿನ್ನೆಲೆಯಲ್ಲಿ ಅವರು ಸಂಪಾದಿಸಿದ ಭಾರತದ ಜನಪದ ಕಥೆಗಳನ್ನು ವಿವರವಾಗಿ ಪರಿಶೀಲನೆಗೆ ಒಳಪಡಿಸಿದ್ದಾರೆ. ಅಲ್ಲದೇ ಆ ಬಗೆಯ ಕಾರ್ಯವನ್ನು ಮುಂದುವೆರೆಸಬೇಕಾದ ಹೊಣೆಗಾರಿಕೆಯನ್ನು ಒತ್ತಿ ಹೇಳಿದ್ದಾರೆ.
ಸಂಸ್ಕøತಿಯ ನೆಲೆ : ಕರಾವಳಿ ತಳ ಸಂಸ್ಕತಿಯ ಕಥನವನ್ನು ಕುರಿತ ಪ್ರಬಂಧದಲ್ಲಿ ಶಿಷ್ಟ ಮತ್ತು ಜನಪದಗಳ ನಡುವೆ ಇರುವ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. ಅವರು ಆ ಸಮಾಜವನ್ನು ‘ದ್ವಿಜ’, ‘ಸಮಾಜ’ ಮತ್ತು ‘ಬಂಧುತ್ವ’ ಎಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಹಾಗೂ ಅವುಗಳ ನಡುವೆ ಇರುವ ಅಂತರವನ್ನು ಸಾಧಾರವಾಗಿ ದಾಖಲಿಸುತ್ತಾರೆ. ಮೊದ¯ನೆಯವರು ಬ್ರಾಹ್ಮಣರಾದರೆ, ಎರಡನೆಯವರು ಸಮಾಜದ ಮಧ್ಯ ತರಗತಿಗೆ ಸೇರುತ್ತಾರೆ (ಗೌಡರು), ಕೊನೆಯದಾಗಿ ಬರುವ ಬಂಧುತ್ವದಲ್ಲಿ ಅಸ್ಪøಶ್ಯರು ಬರುತ್ತಾರೆ. ಪಿತೃಕಾರ್ಯದ ಮೂಲಕ ಮೊದಲನೆಯದಕ್ಕೂ ಮತ್ತು ಕೊನೆಯದಕ್ಕೂ ಇರುವ ಅಂತರವನ್ನು ಸ್ಪಷ್ಟಪಡಿಸುತ್ತಾರೆ. ಬ್ರಾಹ್ಮಣರಲ್ಲಿ ಅದು ಮೂರು ದಿನಗಳಿಗೆ ಸೀಮಿತವಾದರೆ, ಅಸ್ಪೃಶ್ಯರಲ್ಲಿ ಹದಿನಾರು ದಿನಗಳವರೆಗೆ ನಡೆಯುತ್ತದೆ. ಅವರನ್ನು ‘ಕುಲೆ’ ಎಂದು ಕರೆಯುವುದನ್ನು ಗುರುತಿಸುತ್ತಾರೆ. ಭೂತಾರಾಧನೆಯ ಮೂಲ ಪಿತೃಗಳೇ ಎಂದು ಗುರುತಿಸುತ್ತಾರೆ.
ಜನಪದ ಸಾಹಿತ್ಯದ ನಾಯಕರ ಬದುಕು ದುರಂತದಲ್ಲಿ ಪರ್ಯವಸಾನಗೊಂಡರೆ, ಶಿಷ್ಟ ನಾಯಕರ ಬದುಕು ಸುಖಾಂತ್ಯದಲ್ಲಿ ಪರ್ಯವಸನಗೊಳ್ಳುತ್ತದೆ ಎಂಬ ಅಂತರವನ್ನೂ ದಾಖಲಿಸಿದ್ದಾರೆ.

ನಾಗರೀಕ ನೆಲೆ: ನದಿಗಳು ಪುರಾಣ, ಇತಿಹಾಸ ಮತ್ತು ವರ್ತಮಾನಗಳಲ್ಲಿ ಹರಿದು ಬಂದ ಬಗೆಯನ್ನು(ಸಿಂಧು, ಸರಸ್ವತಿ, ಗಂಗೆ) ಮತ್ತು ಅವುಗಳ ದಡಗಳಲ್ಲಿ ಬೆಳೆದ ನಗರಗಳನ್ನು (ಕುರುಕ್ಷೇತ್ರ, ಮಥುರಾ, ವಾರಣಾಸಿ), ಅವುಗಳ ಏಳುಬೀಳಿನ ಕಥೆಯನ್ನು ಕಟ್ಟಲಾಗಿದೆ. ದಕ್ಷಿಣ ಭಾರತದ ನದಿಗಳ ಕುರಿತು ಈ ಬಗೆಯ ಅಧ್ಯಯನವನ್ನು ಕೈಗೊಳ್ಳಬೇಕಾದ ಅವಶ್ಯಕತೆಯನ್ನು ಸೂಚಿಸಿದ್ದಾರೆ. ಕಾವೇರಿ ಮಹಾತ್ಮೆ ಎಂಬ ಕೃತಿಯನ್ನು ಉಲ್ಲೇಖಿಸಿದ್ದರೂ ಅದರ ವಿವರಗಳನ್ನು ಕೊಡಲಾಗಿಲ್ಲ.
ಸಂಶೋಧನಾತ್ಮಕ ನೆಲೆ : ಪ್ರತಿಯೊಂದು ಲೇಖನಗಳ ನಿರ್ಧಿಷ್ಟ ಉದ್ದೇಶವನ್ನು, ಸ್ಪಷ್ಟವಾಗಿ ಖಚಿತವಾದ ಆಧಾರಗಳ ಮೇಲೆ ನಿರೂಪಿಸಲಾಗಿದೆ. ಇಲ್ಲಿಯವರೆಗೆ ಆಗಿರುವ ಕಾರ್ಯದ ಸಮೀಕ್ಷೆಯೊಂದಿಗೆ ಮುಂದೆ ಆಗಬೇಕಾದದ್ದನ್ನು ಹೊಸ ದಾರಿ ತುಳಿಯಬೇಕಾದ ಅವಶ್ಯಕತೆಯನ್ನೂ ಮಂಡಿಸಲಾಗಿದೆ. ಕನ್ನಡ ಸಂಶೋಧನೆಯ ದುಃಸ್ಥಿತಿಯನ್ನು ಉಲ್ಲೇಖಿಸಿ ಆಗಬೇಕಾದ ಸಂಶೋಧನೆಗಳ ಕಡೆಗೆ ನಮ್ಮ ಗಮನವನ್ನು ಸೆಳೆಯಲಾಗಿದೆ. ಪ್ರತಿ ಪ್ರಬಂಧದ ಕೊನೆಗೆ ಕೊಟ್ಟಿರುವ ವಿಸ್ತøತವಾದ ವೈಜ್ಞಾನಿಕ ಆಕರಗಳು ಅವರ ತಲಸ್ಪರ್ಶಿ ಅಧ್ಯಯನಕ್ಕೆ ಸಾಕ್ಷಿಯಾಗಿದೆ.
ಸಾಧನೆಗಳು :
ಮೊದಲ ಬಾರಿಗೆ ಏಕಘನಾಕೃತಿಯ ಚಿಂತನೆಗಳ ಅಪಾಯವನ್ನು ಗುರುತಿಸಿ ಅದಕ್ಕೆ ಪರ್ಯಾಯವಾದ ಬಹುತ್ವದ ಚಿಂತನೆಯನ್ನು ನಿರೂಪಿಸಿದ್ದಾರೆ ಅಧ್ಯಯನ ಮತ್ತು ಕ್ಷೇತ್ರಾಧ್ಯಯನಗಳ ಮೂಲಕ ಪ್ರತಿ ಪ್ರಬಂಧವನ್ನು ಸಮರ್ಥವಾಗಿ ಕಟ್ಟಿದ್ದಾರೆ.
ಪಿರಮಿಡ್ಡಿನ ಆಕಾರದ ಮೇಲ್ತುದಿಯ ಅಧ್ಯಯನದ ವಿಧಾನವನ್ನು (ಬ್ರಿಟಿಷ್ ಮತ್ತು ಮೇಲು ವರ್ಣದವರು ಆರಂಭಿಸಿದ) ಬಿಟ್ಟುಕೊಟ್ಟು, ತಳದಿಂದ ಅಧ್ಯಯನ ಆರಂಭಿಸಬೇಕಾದ ಅಗತ್ಯವನ್ನು ಸಾಧಾರವಾಗಿ ಮಂಡಿಸಿದ್ದಾರೆ.
ಮಿತಿಗಳು :
ತಳ ಸಂಸ್ಕತಿಯ ಕುರಿತ ಕೆಲವು ವಿವರಗಳು ಬೇರೆ ಬೇರೆ ಲೇಖನಗಳಲ್ಲಿ ಪುನರುಕ್ತಿಗೊಂಡಿವೆ- ಅವು ಆಯಾ ಲೇಖನಗಳ ಭಾಗವಾಗಿ ಅನಿವಾರ್ಯವಾಗಿ ಬಂದಿದ್ದರೂ, ಕೃತಿಯನ್ನು ಇಡಿಯಾಗಿ ಓದುವವರಿಗೆ ಇದು ಎದ್ದು ಕಾಣಿಸುತ್ತದೆ.
ನದಿಗಳನ್ನು ಕುರಿತ ಲೇಖನದಲ್ಲಿ ಹಲವರ ದೈನಿಕದ ಭಾಗವಾದ ಸಾಂಸ್ಕøತಿಕ ಭಾರತದ ಕಲ್ಪನೆಯನ್ನು ಹೊಂದಿರುವ ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತೀ ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಪ್ರಾರ್ಥನೆಯ ಉಲ್ಲೇಖ ಬಿಟ್ಟು ಹೋಗಿದೆ.
ತಳವರ್ಗದ ಆದ್ಯಯನಗಳನ್ನು ಕುರಿತು ಉಲ್ಲೇಖಿಸುವಾಗ ವಾಣಿ ಉಚ್ಚಿಲ್ ಅವರು ಮೊಗವೀರ ಜನಾಂಗವನ್ನು ಕುರಿತು ಅಧ್ಯಯನ ಮಾಡಿದ್ದಾರೆ ಎಂದು ತಪ್ಪಾಗಿ ನಮೂದಿಸಲಾಗಿದೆ. ಅವರು ಅಧ್ಯಯನ ಮಾಡಿರುವುದು ಬೋವಿ ಜನಾಂಗವನ್ನು ಕುರಿತು.
ಈ ಬಗೆಯ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ಪುರುಷೋತ್ತಮ ಬಿಳಿಮಲೆಯವರಿಗೂ ಅದನ್ನು ಪ್ರಕಟಿಸಿದ ಪ್ರಕಾಶಕರಿಗೂ ಅಭಿನಂದನೆಗಳು. ಪುಸ್ತಕವನ್ನು ಕಳುಹಿಸಿಕೊಟ್ಟ ಲೇಖಕರಿಗೆ ಧನ್ಯವಾದಗಳು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
