“ಅಪ್ಪು” ಅಪ್ಪಿಕೊಂಡಿದ್ದು – ಒಪ್ಪಿಕೊಂಡಿದ್ದು…..!



ವಿಧಿಗೂ ಅಪ್ಪುವಿನ‌ ಮುಗ್ಧ ನಗುವನ್ನು ಬಿಟ್ಟಿರಲಾಗಲು ಸಾಧ್ಯವಾಗದೇ ಸ್ವಾರ್ಥಿಯಾಗಿ ಬಹುಬೇಗ ತನ್ನತ್ತ ಸೆಳೆದುಕೊಂಡು ಅನಾಮತ್ತಾಗಿ ಅಪ್ಪಿಕೊಂಡು ಬಿಟ್ಟಿತೇನೋ ! ಅಪ್ಪು … ನೀವಿಲ್ಲ ಎಂಬುದು ಮಿಥ್ಯ..! ಎಲ್ಲಾ ಸುವಿಚಾರ ಸದ್ಗುಣಳಲ್ಲಿ ನೀವಿದ್ದೀರಿ ಎಂಬುದೇ ನಿತ್ಯ ಸತ್ಯ. – ಹಿರಿಯೂರು ಪ್ರಕಾಶ್, ಮುಂದೆ ಓದಿ…

ಅಪ್ಪು ಎಂದರೆ…..

ನಮ್ಮೆಲ್ಲರ ಬದುಕಿನ ವಿವಿಧ ಮಜಲುಗಳಲ್ಲಿ ಹಲವನ್ನು- ಹಲವರನ್ನು ಒಪ್ಪುತ್ತೇವೆ , ಕೆಲವನ್ನು- ಕೆಲವರನ್ನು ಅಪ್ಪುತ್ತೇವೆ . #ಅಪ್ಪು ಎಂಬ ಅಪ್ಪಟ ರಾಜರತ್ನವೊಂದು ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಅಕಾಲಿಕವಾಗಿ ಭೌತಿಕ ಪ್ರಪಂಚದಿಂದ ಕಣ್ಮರೆಯಾಗಿ ಇಂದಿಗೆ ಬರೋಬ್ಬರಿ ನೂರಾ ಹತ್ತು ದಿನಗಳು ಉರುಳಿವೆ. ಜೀವನದಲ್ಲಿ ಒಪ್ಪಬೇಕಾದದ್ದು ಅಪ್ಪಬೇಕಾದದ್ದನ್ನು ಕೇವಲ ತನ್ನ ಮಂದಹಾಸದಿಂದ ಮುಗುಳುನಗೆಯಿಂದಲೇ ಎಲ್ಲರಲ್ಲೂ ಯಶಸ್ವಿಯಾಗಿ ಬಿತ್ತಿ ಹೋಗಿದ್ದು ಇತಿಹಾಸದಲ್ಲಿ ದಾಖಲಾದ ಅಚ್ಚರಿಯ ವಿದ್ಯಮಾನಗಳಲ್ಲೊಂದು.ಹಾಗಾದರೆ ಅಪ್ಪು ವಿನ ಅವತಾರದಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರೆಗೆ ಅಪ್ಪು ಎನ್ನುವ ಸರಳತೆಯ ರಾಯಭಾರಿ ಅಪ್ಪಿಕೊಂಡಿದ್ದು ಏನನ್ನು ? ಯಾವುದನ್ನು ? ಎಂಬ ವಿಷಯದ ಬಗೆಗೆ ಬೆಳಕಿನ ಕಿರಣವೊಂದನ್ನು ಚೆಲ್ಲಿದಾಗ ಕಂಡದ್ದು….‌.

ಫೋಟೋ ಕೃಪೆ : google

ಅಪ್ಪು ಅಪ್ಪಿಕೊಂಡದ್ದು…….

ಮೊಗದಲ್ಲಿ ಎಂದೂ ಮಾಸದ ನಿಷ್ಕಲ್ಮಶ ನಗುವನ್ನು..,
ರಕ್ತಗತವಾಗಿ ಬಂದ ಕಲಾಪ್ರತಿಭೆಯನ್ನು..,
ಎಲ್ಲರೂ ಚೆನ್ನಾಗಿರಲಿ ಎಂಬ‌ ಹೃದಯವಂತಿಕೆ ಯನ್ನು..,
ಅಪರೂಪದ ಮಾನವ ಪ್ರೀತಿಯನ್ನು..,
ಒಗ್ಗಟ್ಟಿನ ಕೌಟುಂಬಿಕ ಪರಿಸರವನ್ನು…,.
#ಅಭಿಮಾನಿಗಳ ನಿರ್ಮಲ ಅಭಿಮಾನವನ್ನು…,
ಹಿರಿಯರ- ತಂದೆ ತಾಯಿಯ ಆಶೀರ್ವಾದವನ್ನು..,
ನಲ್ಲೆ ಮೇಲಿನ ಪರಿಶುದ್ಧವಾದ ಪ್ರೀತಿ- ಪ್ರೇಮವನ್ನು..,
ಮಕ್ಕಳಿಗೆ ತೋರಿದ ಮನದುಂಬಿದ ಮಮಕಾರವನ್ನು..,
ಸ್ನೇಹವೆಂಬ ಪವಿತ್ರ ಬಂದವನ್ನು…,
ಚಿಕ್ಕಮಕ್ಕಳ ಮೇಲಿನ ಅಂತಃಕರಣಭರಿತ ಪ್ರೀತಿಯನ್ನು..,
ವೃದ್ಧರ ಆಶ್ರಯಕ್ಕೆರಗುವ ಪ್ರಾಮಾಣಿಕ ಸೇವೆಯನ್ನು..,
ಪಶುಪಕ್ಷಿಗಳ ಮೇಲಿನ ಮುಗ್ಧ ಮಮತೆಯನ್ನು..,
ಅನಾಥರ ಮೇಲಿನ ನೈಜ ಕಾಳಜಿಯನ್ನು…,
ಕೆರೆಯ ನೀರನು ಕೆರೆಗೆ ಚೆಲ್ಲುವ ನೈಜ ಆಚರಣೆಯನ್ನು..,
ವೃತ್ತಿ ಬಗೆಗಿನ ಶ್ರದ್ಧೆ ಭಕ್ತಿಯನ್ನು- ಪೂಜ್ಯತೆಯನ್ನು.,
ಅನ್ನದ ಮಹತ್ವವನ್ನು , ಆಹಾರದ ಶ್ರೇಷ್ಠತೆಯನ್ನು..,
ಸೇವೆಯಲ್ಲಿ ದೇವರನ್ನು ಕಾಣುವ ರೀತಿಯನ್ನು…,
ನಾಡು ನುಡಿಗಾಗಿ ಸ್ಪಂದಿಸುವ ಕಾಳಜಿಯನ್ನು…,
ಯಾರನ್ನೂ ದ್ವೇಷಿಸದ ಪರಿಶುದ್ಧ ಹೃದಯವನ್ನು…,
ಕೀರ್ತಿ ಶನಿಯಿಂದ‌ದೂರವೇ ಇದ್ದ ಬಗೆಯನ್ನು…,
ಸರಳತೆಯ ಸಹವಾಸ, ಸಜ್ಜನಿಕೆಯ ಸಾಂಗತ್ಯವನ್ನು…,
ವಿನಯ -ವಿಧೇಯತೆಯೆಂಬ ವಿದ್ವತ್ತನ್ನು…,
ವಿವೇಕವೆಂಬ ವೈಚಾರಿಕತೆಯನ್ನು…,
ಪ್ರಾಮಾಣಿಕತೆಯೆಂಬ ಪರಮ ಪೂಜ್ಯತೆಯನ್ನು…,
ಆರೋಗ್ಯದ ಮೇಲಿನ ಕಾಳಜಿಯನ್ನು…,
ಸಾಮಾಜಿಕ ಆರೋಗ್ಯವನ್ನು- ಸಾಮರಸ್ಯದ ಬದುಕನ್ನು.,
ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕುವ ಬಗೆಯನ್ನು.,
ದುರಹಂಕಾರವನ್ನು ದೂರವಿಟ್ಟ ರೀತಿಯನ್ನು..,
ಕರುನಾಡ ಮಣ್ಣಿನ ಋಣವನ್ನು- ಜನರ
ಪ್ರೀತಿಯನ್ನು..,
ಎಲ್ಲರೊಳಗಾಗಿ ಬದುಕುವ ಬಗೆಯನ್ನು…,
ಅಜಾತಶತ್ರುವಾಗಿ ಬಾಳುವ ಪರಿಯನ್ನು……,
ಪ್ರಚಾರದ ಹಿಂದೆ ಬೀಳದ ಅಂತರಾತ್ಮವನ್ನು…,
ಒಟ್ಟಾರೆಯಾಗಿ ಭೇಧವೆಣಿಸದ ಇಡೀ ಮನುಜಮತವನ್ನು,
ಹಾಗೆಯೇ…..
ವಿಧಿಯನ್ನೂ ಸಹ ಆಪ್ಯಾಯತೆಯಿಂದ ಅಪ್ಪಿಕೊಂಡ ಬಗೆಯನ್ನು…..
ಅದಾದ ನಂತರ…

ಫೋಟೋ ಕೃಪೆ : google

ಉಸಿರು ನಿಂತ ಮೇಲೂ ಸಮಾಜಕ್ಕೆ ಬೆಳಕಾಗುತ್ತಿರುವ ಅನನ್ಯ ರೀತಿಯನ್ನು…. ಇವೆಲ್ಲವೂ ಕೇವಲ ಅಪ್ಪು ಅಪ್ಪಿಕೊಂಡಿದ್ದು ಅಥವಾ ಅವುಗಳೇ ಅಪ್ಪುವನ್ನು ಅಪ್ಪಿಕೊಂಡಿದ್ದು ಮಾತ್ರವಲ್ಲ, ಅವರ ಉಸಿರು ನಿಂತ ಕ್ಷಣದಿಂದಲೂ ಇವೆಲ್ಲವೂ ಸಮಾಜದಲ್ಲಿ ಮಾನವಪ್ರೀತಿಯುಳ್ಳ ಎಲ್ಲರಲ್ಲೂ ಸಾಮೂಹಿಕ ಸನ್ನಿಯಾಗಿ ಮೇಳೈಸುತ್ತಾ ಸಾಗಿವೆ. ಅಪ್ಪುವನ್ನು ಈ ಮೊದಲು ಅಪ್ಪಿಕೊಂಡವರೂ, ಒಪ್ಪಿಕೊಂಡವರೂ, ಒಪ್ಪಿಕೊಳ್ಳದೇ ಇರುವವರಲ್ಲೂ ಸಹ ಅವರ ಸರಳತೆ, ವಿನಯ, ನಿಷ್ಕಲ್ಮಶ ನಗು, ಸಾಮಾಜಿಕ ಸೇವೆ, ಪ್ರಚಾರ ಬಯಸದ ಗುಣ…. ಎಲ್ಲವೂ ಸಾಕಷ್ಟು ಪ್ರಭಾವ ಬೀರಿ ಒಂದು ರೀತಿಯ ಅವ್ಯಕ್ತ ಸುಗುಣ ಭಾವವನ್ನು ಅವರಿಗರಿವಿಲ್ಲದಂತೆಯೇ ಮೂಡಿಸಿವೆ.

ನಾವೇಕೆ ಈ ಮನುಷ್ಯನನ್ನು ಈ ಪರಿ ಇಷ್ಟಪಡುತ್ತಿದ್ದೇವೆ..? ಏನಿದೆ ಅಂಥಾದ್ದು ಇವರಲ್ಲಿ ? ಚಲನಚಿತ್ರ ರಂಗದಲ್ಲಿ ಇವರಿಗಿಂತಲೂ ಹೆಚ್ಚಾಗಿ ಸಾಧಿಸಿರುವ ಅನೇಕರಿಗಿಂತಲೂ ಅಪ್ಪು ಅತಿಹೆಚ್ಚು ಆಪ್ಯಾಯನಾಗಿದ್ದು ಹೇಗೆ ? ಈ ಪರಿಯ ಪ್ರೀತಿಗೆ , ಈ‌ ಮಟ್ಟದ ಅಭಿಮಾನಕ್ಕೆ ಈ ತೆರನಾದ ಜನಪ್ರಿಯತೆಗೆ ಕಾರಣವಾವುದು ? ರಾಜ್ಯ, ಭಾಷೆ ,ಗಡಿ ,ನುಡಿ ಜಾತಿ, ಮತ ಧರ್ಮ, ರಾಜಕೀಯ ಗಳೆಲ್ಲವನ್ನು ಮೀರಿ ತೋರುತ್ತಿರುವ ಈ ಅಭಿಮಾನದ ಪ್ರವಾಹಕ್ಕೆ ಮೂಲ ಯಾವುದು ?

ಇವೆಲ್ಲವೂ ಉತ್ತರಕ್ಕೆ ಸಿಲುಕಲಾಗದ ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಫೋಟೋ ಕೃಪೆ : google

ಮಹಾತ್ಮ ಗಾಂಧಿಯವರ ಅಂತಿಮ ದರ್ಶನಕ್ಕೆ ಸೇರಿದ ಜನಸಾಗರದ ನಂತರದ ಅತಿಹೆಚ್ಚು ಜನಸಾಗರ ಅಪ್ಪುವಿನ ಅಂತಿಮ ದರ್ಶನಕ್ಕೆ ಸಾಕ್ಷಿಯಾಗಿದ್ದ ವಿದ್ಯಮಾನ, ಅವರ ದೇಹ ಮಣ್ಣಲ್ಲಿ ಮಣ್ಣಾಗಿ ಸೇರಿ ಸುಮಾರು ಐದು ತಿಂಗಳಾಗುತ್ತಾ ಬಂದರೂ ಅವರ ಸಮಾಧಿಯ ಮುಂದೆ ನಿತ್ಯ ಸಾವಿರಾರು ಮಂದಿ ನೂರಾರು ಮೈಲಿ ದೂರದಿಂದ ಬಂದು ಅಭಿಮಾನದ ನಮನಗಳನ್ನು ಸಲ್ಲಿಸುತ್ತಿರುವ ವಿಸ್ಮಯತೆ, ಅಭಿಮಾನಿಗಳೇ ತಮ್ಮ ತಮ್ಮ ಖರ್ಚಿನಲ್ಲಿ ಅಪ್ಪು ಹೆಸರಿನಲ್ಲಿ ಕೈಗೊಳ್ಳುತ್ತಿರುವ ಸೇವಾ ಕಾರ್ಯಗಳು, ನಭೂತೋಃ ನ ಭವಿಷ್ಯತಿಃ ಎನ್ನುವಂತೆ ಪುನೀತ್ ರಿಂದ ಪ್ರೇರಿತರಾಗಿ ನೇತ್ರದಾನಕ್ಕಾಗಿ ಮುಗಿಬಿದ್ದು ನೊಂದಣಿ ಮಾಡಿಸುತ್ತಿರುವ ಜನತೆ, ಪರೋಪಕಾರದಲ್ಲೂ ಸಾರ್ಥಕತೆ ಮೆರೆಯುವ ಪರಿ, ಅಪ್ಪುವಿನ ಕೊನೆಯ‌ ಚಿತ್ರ ” ಜೇಮ್ಸ್ ” ಗಾಗಿ ಕಳೆದ ಎರಡು ಮೂರು ತಿಂಗಳಿಂದ ಕಾತರಿಸುತ್ತಿರುವ ಅಭಿಮಾನದ ಉತ್ಕಟತೆ, ದಾಖಲೆಯ ಕಟೌಟ್ ಗಳು, ಬ್ಯಾನರ್ ಗಳು, ಪೋಸ್ಟರ್ ಗಳು, ಇಡೀ ಚಿತ್ರರಂಗ ಕಿರುತೆರೆ ಅವರನ್ನು ನೆನೆ ನೆನೆದು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಇವೆಲ್ಲವನ್ನೂ ನೋಡಿದಾಗ….

ಅಪ್ಪು ನಮ್ಮೊಂದಿಗಿಲ್ಲ ಎನ್ನಲು ಬಾಯಿ ಬರುವುದೇ..?

ಫೋಟೋ ಕೃಪೆ : google

** ಮರೆಯುವ ಮುನ್ನ **

ಒಡಲಾಳದ ನೋವು, ಕಡಲಾಳದ ಪ್ರೀತಿ, ಎದೆಯಾಳದ ಅಭಿಮಾನ, ಮನದಾಳದ ಮೆಚ್ಚುಗೆ ಇವೆಲ್ಲವೂ ಜಾತಿ, ಮತ, ಧರ್ಮ ಭಾಷೆ ಎಲ್ಲವನ್ನೂ ಮೀರಿ ಎಲ್ಲರಲ್ಲೂ ತಾನೇ ತಾನಾಗಿ ರೂಪುಗೊಂಡು ಜೊತೆಗಿರದ ಜೀವವೊಂದನ್ನು ಅನುಕ್ಷಣವೂ ಜೀವಂತವನ್ನಾಗಿರಿಸಿದ ಶತಮಾನದ ವಿಸ್ಮಯಕಾರಿ ವಿದ್ಯಮಾನಕ್ಕೆ ನಾವಿಂದು ಸಾಕ್ಷಿಯಾಗಿದ್ದೇವೆ. ನಮ್ಮ ಸಾವು ಹಾಗೂ ಆನಂತರ ಜನ ನಮ್ಮನ್ನು ನೆನಪು ಮಾಡಿಕೊಳ್ಳುವ ರೀತಿ ಸಹಾ ಹೀಗೆಯೇ ಇರಬೇಕೆಂದು ಬಯಸುವಂತಹಾ ಮನಸ್ಥಿತಿಯನ್ನು ಮನುಜಮತದಲ್ಲಿ ಬಿತ್ತಿದ ಅಪರೂಪದ ಸಾಮಾಜಿಕ ಪಲ್ಲಟವನ್ನು ಕರುನಾಡು ಕಂಡಾಯಿತು.
ವಿಧಿಗೂ ಅಪ್ಪುವಿನ‌ ಮುಗ್ಧ ನಗುವನ್ನು ಬಿಟ್ಟಿರಲಾಗಲು ಸಾಧ್ಯವಾಗದೇ ಸ್ವಾರ್ಥಿಯಾಗಿ ಬಹುಬೇಗ ತನ್ನತ್ತ ಸೆಳೆದುಕೊಂಡು ಅನಾಮತ್ತಾಗಿ ಅಪ್ಪಿಕೊಂಡು ಬಿಟ್ಟಿತೇನೋ !
ಅಪ್ಪು …… ನೀವಿಲ್ಲ ಎಂಬುದು ಮಿಥ್ಯ..! ಎಲ್ಲಾ ಸುವಿಚಾರ ಸದ್ಗುಣಳಲ್ಲಿ ನೀವಿದ್ದೀರಿ ಎಂಬುದೇ ನಿತ್ಯ ಸತ್ಯ.

ಸಮಸ್ತ ಕನ್ನಡಿಗರ ಪರವಾಗಿ, ಮಾನವತೆ- ಮಾನವೀಯತೆಯನ್ನು ಪ್ರೀತಿಸುವ ಎಲ್ಲರ ಪರವಾಗಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರಿಗೆ ನಲವತ್ತೇಳನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ಗುರುರಾಯರ ದಿನದಂದು ಬಿಡುಗಡೆ ಕಾಣುತ್ತಿರುವ ಅವರ ಕೊನೆಯ ಚಿತ್ರ “ಜೇಮ್ಸ್” ಅದ್ಭುತ ಯಶಸ್ಸನ್ನು ಕಾಣಲಿ.

ಪ್ರೀತಿಯಿಂದ..


  • ಹಿರಿಯೂರು ಪ್ರಕಾಶ್  (ಲೇಖಕರು, ಚಿಂತಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading