ಅರಮನೆಯಂಥ ಸೆರೆಮನೆ ರಾಜಮಂಡ್ರಿ…



ಅರಮನೆಯಂಥ ಸೆರೆಮನೆಗಳೂ, ದೇವರಂಥ ಪೊಲೀಸ್ ಆಫೀಸರೂ ರಾಜಮಂಡ್ರಿ ಕಾರಾಗೃಹ. ಖ್ಯಾತ ಕತೆಗಾರ ಹಂದ್ರಾಳ ಅವರು ರಾಜಮಂಡ್ರಿ ಕಾರಾಗೃಹದಲ್ಲಿ ಅಪರಾಧಿಯಾಗಿಯಲ್ಲ, ಲೇಖಕರಾಗಿ ಇದ್ದು, ಅನುಭವಿಸಿ ಬರೆದಂತಹ ಲೇಖನವಿದು, ಮುಂದೆ ಓದಿ…

ಮನುಷ್ಯ ಮೂಲಭೂತವಾಗಿ ಸಂಘ ಜೀವಿ. ಮನುಷ್ಯನೇ ಏನು, ಜೀವಜಗತ್ತಿನ ಎಲ್ಲಾ ಪ್ರಭೇದಗಳೂ ಸಂಘ ಜೀವಿಗಳೇ. ಮನುಷ್ಯನಿಂದ ಹಿಡಿದು ಯಾವ ಪ್ರಾಣಿ ಪಕ್ಷಿಗಳೂ ಒಂಟಿಯಾಗಿ ಜೀವಿಸಲಾರವು. ಅಷ್ಟೇಕೆ ಜೀವವಿರುವ ಸಸ್ಯಗಳು ಸಹ ಒಂಟಿಯಾಗಿ ಬದುಕಲಾರವು. ನೀವು ಒಬ್ಬ ವ್ಯಕ್ತಿಯನ್ನೋ ಅಥವಾ ಪ್ರಾಣಿ, ಪಕ್ಷಿಯನ್ನೋ ಬಂಧಿಸದೆ ಸ್ವಾತಂತ್ರ್ಯವಾಗಿ ಒಂಟಿಯಾಗಿಟ್ಟರೂ ಸಾಕು, ಅಂಥ ವ್ಯಕ್ತಿ ಅಥವಾ ಪ್ರಾಣಿ ಬಹುಕಾಲ ಜೀವಿಸುವ ತಾಕತ್ತನ್ನು ಕಳೆದುಕೊಳ್ಳುವುದು ಗ್ಯಾರಂಟಿ.

ಮನುಷ್ಯ ನಾಗರೀಕತೆಯನ್ನು ಪ್ರವೇಶಿಸುವ ಮೊದಲು ಅಂದರೆ ಅಲೆಮಾರಿಯಾಗಿದ್ದಾಗ ಕೂಡಾ ಒಬ್ಬಂಟಿಯಾಗಿ ಜೀವಿಸಿದ ಉದಾಹರಣೆಗಳಿಲ್ಲ. ಇಂಥ ಸಾಂಘಿಕ ಬದುಕನ್ನು ಮನುಷ್ಯ ಅಥವಾ ಪ್ರಾಣಿಗಳು ರೂಢಿಸಿಕೊಂಡು ಬಂದಿದ್ದು ಜೀವಜಗತ್ತಿನ ಇತರ ಪ್ರಭೇದಗಳಿಂದ ರಕ್ಷಣೆ ಪಡೆದುಕೊಳ್ಳಲು. ಆದರೆ ಕ್ರಮೇಣ ಅದು ಸಂಬಂಧ, ಸಂವೇದನೆಗಳ ಬೇರುಗಳನ್ನು ಬಿಟ್ಟುಕೊಂಡಿತು. ಕುಟುಂಬ, ಸಮುದಾಯ, ಹ಼ಳ್ಳಿ, ಪಟ್ಟಣ, ನಗರಗಳು ಬೆಳೆದಂತೆ ಪ್ರತಿಯೊಬ್ಬ ಮನುಷ್ಯನಿಗೂ ಬೇರೊಬ್ಬರ ಅವಲಂಬನೆ ಅನಿವಾರ್ಯವೇ ಆಗಿಹೋಯಿತು. ಇಂದು ಯಾವುದೇ ವ್ಯಕ್ತಿ ಒಬ್ಬಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿಯೇ all living things are parasites ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯವೇ ಆಗಿದೆ. ಹಾಗಾಗಿ ಮನುಷ್ಯನನ್ನು ಸಾಂಘಿಕ ಬದುಕಿನಿಂದ ದೂರಮಾಡಿ ಒಟ್ಟಂಟಿಯಾಗಿಟ್ಟರೆ ಅವನು ಭರಿಸಲಾರದಷ್ಟು ವೇದನೆಗೆ ಒಳಗಾಗುತ್ತಾನೆ.

ಆಧುನಿಕ ಜಗತ್ತಿನ ಸೆರೆಮನೆಯ ಪರಿಕಲ್ಪನೆ ಈ ಒಂಟಿತನದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು ಅನ್ನಿಸುತ್ತದೆ. ಮನುಷ್ಯನನ್ನು ಒಂಟಿಯಾಗಿಡುವುದಕ್ಕಿಂತಲೂ ಅತಿದೊಡ್ಡ ಶಿಕ್ಷೆ ಬೇರೆ ಇಲ್ಲವೆನಿಸುತ್ತದೆ. ತಿಂಗಳ ಕಾಲ ಒಬ್ಬ ವ್ಯಕ್ತಿ ಬೇರೆ ಯಾರ ಸಂಪರ್ಕವೂ ಇಲ್ಲದೆ ಇದ್ದುಬಿಟ್ಟರೆ ಅವನು ಖಂಡಿತವಾಗಿಯೂ ಸಂಪೂರ್ಣ ಹುಚ್ಚನಾಗದಿದ್ದರೂ ಅರೆ ಹುಚ್ಚನಾಗುವುದಂತೂ ಗ್ಯಾರಂಟಿ. ನೆಪೋಲಿಯನ್ ಬೋನಾಪಾರ್ಟೆಯಂಥ ಸಾಮ್ರಾಟರು ಕೂಡಾ ದ್ವೀಪದಲ್ಲಿ ಒಂಟಿಯಾಗಿ ಸೆರೆಮನೆ ವಾಸ ಅನುಭವಿಸಿ ಉಟ ಕೂಡಾ ಸಿಗದೆ ಕಡೆಗೆ ಕಡಲಿನಲ್ಲಿ ತೇಲಿಬಂದ ಕೊಳೆತ ಶವವನ್ನು ಕಿತ್ತು ತಿಂದು ಸಾಯುವುದು ಜಗತ್ತಿನ ಇತಿಹಾಸ ಪುಟಗಳನ್ನೂ ಅಲಂಕರಿಸಿರುವುದು ಸೆರೆಮನೆ ಎಂಬ ಪದದ ಭೀಕರತೆಯನ್ನು ತಿಳಿಸುತ್ತದೆ. ಹಿಂದಿನಿಂದ ಪ್ರಸ್ತುತದವರೆಗೂ ರಾಜ್ಯ ರಾಜ್ಯಗಳ ನಡುವೆ, ರಾಷ್ಷ್ರ ರಾಷ್ಟ್ರಗಳ ನಡುವೆ ಯುದ್ಧವಾದಾಗ ಶತ್ರು ರಾಷ್ಟ್ರಗಳ ಸೈನಿಕರಾಗಲೀ, ಗೂಢಾಚಾರರಾಗಲೀ ಸೆರೆಸಿಕ್ಕರೆ ಅಂಥವರನ್ನು ವರ್ಷಾನುಗಟ್ಟಲೆ ಸೆರೆಮನೆಗಳಲ್ಲಿ ಇಡುತ್ತಿದ್ದರು. ಕೆಲವರನ್ನು ಸೆರೆಮನೆಗಳಲ್ಲಿ ನೇಣಿಗೂ ಹಾಕಿಬಿಡುತ್ತಿದ್ದರು. ಮತ್ತೆ ಕೆಲವರು ಸರಿಯಾದ ಅನ್ನ- ನೀರು ಸಿಗದೆ ಕೊರಗಿ ಕೊರಗಿ ಪ್ರಾಣ ಬಿಡುತ್ತಿದ್ದರು.

ಅಪರಾಧಿಗಳನ್ನು ಶಿಕ್ಷಿಸಲು ಸೆರೆಮನೆಗಳು ಅಸ್ತಿತ್ವಕ್ಕೆ ಬಂದದ್ದೆಂದು ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಜ್ಞಾನವೇ ಆಗಿದ್ದರೂ ಸೆರೆಮನೆಯೆಂದರೆ ಎಂಥಾ ಮನುಷ್ಯರಾದರೂ ಭಯಭೀತರಾಗಿಬಿಡುತ್ತಾರೆ. ಸೆರೆಮನೆ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಮುಂದೆ ನಿಲ್ಲುವುದು ಸಿನಿಮಾಗಳಲ್ಲಿ ತೋರಿಸುವ ಸೆರೆಮನೆಯ ದೃಶ್ಯಗಳೇ. ಆದರೆ ಅವು ತೊಂಬತ್ತು ಭಾಗದಷ್ಟು ಸುಳ್ಳಾಗಿರುತ್ತವೆಂದು #ಸೆರಮನೆಗಳನ್ನು ನೋಡದ ಸಾಮಾನ್ಯ ಜನರನ್ನು ನಂಬಿಸಲು ಸಾಧ್ಯವಾಗುವುದಿಲ್ಲ. ನನಗೂ ಸಹ ಜೈಲಿನ ಒಳವಿನ್ಯಾಸಗಳು ಮತ್ತು ಘಟನೆಗಳು ಸಿನಿಮಾದಲ್ಲಿ ತೋರಿಸಿದಂತೆಯೇ ಇರುತ್ತವೆಂದು ಅನ್ನಿಸಿತ್ತು. ನಾನು ಸೆಂಟ್ರಲ್ ಜೈಲಿನ ಹತ್ತಿರವೇ ಇರುವ ಶ್ರೀ ರೇಣುಕಾಚಾರ್ಯ ಕಾಲೇಜಿನಲ್ಲಿ ಪಿಯುಸಿ ಇಂದ ಡಿಗ್ರಿ ಮುಗಿಯುವವರೆಗೆ ಐದು ವರ್ಷಗಳ ಕಾಲ ವಿಧ್ಯಾಭ್ಯಾಸ ಮಾಡಿದ್ದರೂ, ಸೆಂಟ್ರಲ್ ಜೈಲಿನ ಮುಂದೆ ನೂರಾರು ಸಾರಿ ಓಡಾಡಿದ್ದರೂ, ಸೆರೆಮನೆಯ ಬಗ್ಗೆ ಇನ್ನಿಲ್ಲದಷ್ಟು ಕುತೂಹಲವಿದ್ದರೂ ಸೆಂಟ್ರಲ್ ಜೈಲಿನ ಒಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಜೈಲಿನ ಹೊರಗಡೆಯ ಅಗಾಧತೆಯನ್ನು ಮತ್ತು ದಾಟಲಾಗದ ಉದ್ದನೆಯ ಜೈಲು ಗೋಡೆಯನ್ನಂತೂ ಲೆಕ್ಕವಿಲ್ಲದಷ್ಟು ಬಾರಿ ಕಣ್ಣು ತುಂಬಿಕೊಂಡಿದ್ದಿದೆ. ಖೈದಿಗಳ ಕುಟುಂಬದವರು, ಬಂಧುಗಳು, ಸ್ನೇಹಿತರು ಅವರನ್ನು ಕಾಣಲು ಸೆಂಟ್ರಲ್ ಜೈಲಿನ ಹೊರಗಡೆ ಕಾದು ನಿಂತಿರುತ್ತಿದ್ದುದ್ದನ್ನು ಅನೇಕ ಬಾರಿ ಕಣ್ಣು ತುಂಬಿಕೊಂಡಿದ್ದೇನೆ. ಇದೆಲ್ಲಾ ಈಗ ಏಕೆ ನೆನಪಾಗುತ್ತಿದೆಯೆಂದರೆ ಹೋದ ವಾರ ನಾನು ಸ್ನೇಹಿತರಾದ ಡಾ. ಎಚ್. ಆರ್. ಸ್ವಾಮಿಯವರೊಂದಿಗೆ ರಾಜಮಂಡ್ರಿಗೆ ತೆರಳಿದ್ದೆ. ಮುಖ್ಯ ಉದ್ದೇಶವಿದ್ದದ್ದು ಪೋಲಾವರಂ ಪ್ರಾಜೆಕ್ಟ್ ನಿಂದ ಶುರುವಾಗಿ ಭದ್ರಿಚಲಂ ಮುಟ್ಟುವ ಪಾಪಿಕೊಂಡಲು ಮಧ್ಯೆ ಸುಮಾರು ಎಂಬತ್ತು ಕಿಲೋಮೀಟರ್ ಗೋದಾವರಿ ನದಿಯಲ್ಲಿ ದೋಣಿ ಪ್ರಯಾಣ ಮಾಡುವುದಾಗಿತ್ತು. ಹಿಂದಿನ ದಿನ ಬೆಳಿಗ್ಗೆ ಅನ್ನವರಂ ನೋಡಿಕೊಂಡು ಮಧ್ಯಾಹ್ನ ಎರಡೂವರೆ ಗಂಟೆಗೆ ರಾಜಮಂಡ್ರಿಗೆ ತಲುಪಿದಾಗ ನಾಳೆ ಬೆಳಿಗ್ಗೆಯವರೆಗೂ ಸಮಯವಿದ್ದುದ್ದರಿಂದ ಹಾಗೂ ನಾವು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಎದುರಿನಲ್ಲಿಯೇ ಸೆಂಟ್ರಲ್ ಜೈಲು ಇದ್ದಿದ್ದರಿಂದ ಊಟ ಮಾಡಿ ತಕ್ಷಣ ರಾಜಮಂಡ್ರಿಯ ಸೆಂಟ್ರಲ್ ಪ್ರಿಸನ್ ಕಡೆಗೆ ಹೆಜ್ಜಿ ಹಾಕಿದ್ದೆವು. ತಕ್ಷಣ ಹೈದರಾಬಾದ್ ನಲ್ಲಿರುವ ನನ್ನ ಸಹಪಾಠಿ ಆತ್ಮೀಯ ಗೆಳೆಯ ಟಿ. ಕೃಷ್ಣರಾಜುಗೆ ಫೋನ್ ಮಾಡಿದ್ದೆ. ಐದೇ ನಿಮಿಷದಲ್ಲಿ ಜೈಲು ಸೂಪರಿಂಟೆಂಡೆಂಟ್ ಜೈಲಿನ ಪ್ರವೇಶ ದ್ವಾರಕ್ಕೆ ಬಂದು ನಮ್ಮನ್ನು ಲಗುಬಗೆಯಿಂದ ಸ್ವಾಗತಿಸಿದ್ದರು.

(ನಿವೃತ್ತ I P S ಅಧಿಕಾರಿ ಶ್ರೀ ಕೃಷ್ಣರಾಜ್ )

ರಾಜಮಂಡ್ರಿಯ ಜೈಲನ್ನು ನವೀಕರಿಸುವುದರೊಂದಿಗೆ ಎಂ ಎನ್ ಸಿ ಕಂಪನಿಯೊಂದನ್ನು ಹೋಲುತ್ತಿದ್ದ ಹೊಸ ಜೈಲು ಕಟ್ಟಡ ನಿರ್ಮಾಣವಾಗಿದ್ದು ನಮ್ಮ ಕೃಷ್ಣರಾಜ್ ಆಂಧ್ರಪ್ರದೇಶದ ಎ ಡಿ ಜಿ ಪಿ ಆಫ್ ಪ್ರಿಸನ್ಸ್ ಆಗಿದ್ದ ಕಾಲದಲ್ಲಿಯೇನಂತೆ. ರಾಜಮಂಡ್ರಿ ಜೈಲನ್ನು ನೋಡಿದ ಮೇಲೆ ಈ ಐದು ವರ್ಷಗಳ ಹಿಂದೆ ನಾನು ಮೊಟ್ಟ ಮೊದಲಿಗೆ ಚೆರ್ಲಪಲ್ಲಿ ಮತ್ತು ಚಂಚಲಗೂಡ ಜೈಲುಗಳನ್ನು ನೋಡಿದ್ದು ನೆನಪಾಯಿತು. ಹೈದರಾಬಾದಿನಲ್ಲಿರುವ ನನ್ನ ಇನ್ನೊಬ್ಬ ಸಹಪಾಠಿ ಗೆಳೆಯ ಪ್ರಕಾಶರ ಮಗನ ಮದುವೆಗೆಂದು ನಾವು ಮೂವರು ಸಹಪಾಠಿಗಳು ಬೆಂಗಳೂರಿನಿಂದ ಹೈದರಾಬಾದಿಗೆ ಹೋಗಿದ್ದೆವು. ಅದೇ ಸಮಯದಲ್ಲಿ ಕೃಷ್ಣ ರಾಜ್ ಆಂಧ್ರಪ್ರದೇಶದ ಡಿ ಜಿ ಪಿ ಆಫ್ ಪ್ರಿಸನ್ಸ್ ಆಗಿದ್ದರು. ಇನ್ನೊಂದು ವರ್ಷ ಸೇವೆ ಇತ್ತಷ್ಟೆ. ನಾವು ಚೆರ್ಲಪಲ್ಲಿ ಜೈಲಿನ ಪೊಲೀಸ್ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡಿದ್ದೆವು. ಹೋದ ದಿನವೇ ಗೆಳೆಯನ ಮಗನ ಮದುವೆ ಮುಗಿದಿದ್ದರಿಂದ ಎರಡು ದಿನ ಸಮಯ ಸಿಕ್ಕಿತ್ತು. ಮಾರನೆಯ ದಿನ ಕೃಷ್ಣರಾಜ್ ಚೆರ್ಲಪಲ್ಲಿ ಮತ್ತು ಚಂಚಲಗೂಡ ಎರಡೂ ಜೈಲುಗಳನ್ನು ನೋಡಲು ಏರ್ಪಾಡು ಮಾಡಿದ್ದರು. ಈಗ ಇಂದು ಅವರು ನಿವೃತ್ತಿಯಾಗಿದ್ದರೂ ರಾಜಮಂಡ್ರಿಯ ಜೈಲು ನೋಡಲು ಏರ್ಪಾಡು ಮಾಡಿದ್ದರು. ಚೆರ್ಲಪಲ್ಲಿ, ಚಂಚಲಗೂಡ ಮತ್ತು ರಾಜಮಂಡ್ರಿಯ ಮೂರೂ ಸೆಂಟ್ರಲ್ ಜೈಲುಗಳ ಬಗ್ಗೆ ಬರೆಯುವುದಕ್ಕೆ ಮೊದಲು ಕೃಷ್ಣರಾಜ್ ಎಂಬ ಗೆಳೆಯನ ಬಗ್ಗೆ ಒಂದಿಷ್ಟು ಬರೆಯದಿದ್ದರೆ ಈ ಲೇಖನ ಅಪೂರ್ಣವೇ ಸರಿ.

ಈತ ಜ್ಞಾನಭಾರತಿಯಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರದಲ್ಲಿ ನನ್ನ ಸಹಪಾಠಿ. ಶಿವಮೊಗ್ಗ ಮೂಲದ ಕಂಟ್ರಾಕ್ಟರ್ ಒಬ್ಬರ ಮಗ. ಆದರೆ ತುಂಬಾ ಸರಳವಾಗಿದ್ದ ಈತ ಯಾವುದೋ ಮಾತಿಗೆ ಅಪ್ಪನೊಂದಿಗೆ ಜಗಳವಾಡಿ ಯುಪಿಎಸ್ಸಿ ಪರೀಕ್ಷೆ ಕಟ್ಟಿ ಐಪಿಎಸ್ ಆಗಿ ಆಂಧ್ರ ಕೇಡರ್ ಗೆ ಸೆಲೆಟ್ಟಾಗಿದ್ದ. ಕೆಲಸಕ್ಕೆ ಸೇರಿದ ದಿನದಿಂದ ನಿವೃತ್ತಿಯಾದ ದಿನದವರೆಗೂ ಅತ್ಯಂತ ಪ್ರಾಮಾಣಿಕವಾಗಿಯೂ ದಕ್ಷತೆಯಿಂದಲೂ ಕೆಲಸ ಮಾಡಿ ಪೊಲೀಸ್ ಇಲಾಖೆಯಲ್ಲಿ ಟೆರರ್ ಎನಿಸಿಕೊಂಡವರು. ತಮ್ಮ ಸೇವಾವಧಿಯಲ್ಲಿ ಮುವತ್ತೆರಡು ವರ್ಗಾವಣೆಗಳನ್ನು ಕಂಡವರು. ಈ ಟಿವಿಯ ರಾಮೋಜಿರಾವ್ 100 ಕೋಟಿ ಚಿಟ್ ಫಂಡನ್ನು ಸಾಮಾನ್ಯ ಜನರಿಗೆ ಮೋಸ ಮಾಡಿದಾಗ ಆತನ ಮೇಲೆ ಎಫ್ ಐ ಆರ್ ಫೈಲು ಮಾಡಿ ವಾರದಲ್ಲಿ ಸಾರ್ವಜನಿಕರ ನೂರುಕೋಟಿ ರೂಪಾಯಿಗಳನ್ನು ಹಿಂತಿರುಗಿಸುವಂತೆ ಕ್ರಮ ಕೈಗೊಂಡವನು. ಒಂದೇ ದಿನ ಯಾವುದೋ ಕೇಸ್ ಮೇಲೆ ನಾಲ್ಕು ಜನ ಆಡಳಿತ ಪಕ್ಷದ ಎಂ ಎಲ್ ಎ ಗಳನ್ನು ಅರೆಸ್ಟ್ ಮಾಡಿಸಿದವನು. ಕಮ್ಮಂ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ನಕ್ಸಲರೊಂದಿಗೆ ಮುಖಾಮುಖಿಯಾದವನು. ಒಮ್ಮೆ ಖುದ್ದು ಗದ್ದರ್ ಅವರೊಂದಿಗೆ ಮುಖಾಮುಖಿಯಾಗಿ ಇಬ್ಬರೂ ಕ್ಷಣ ಮಾತ್ರದಲ್ಲಿ ಒಬ್ಬರು ಇನ್ನೊಬ್ಬರಿಂದ ಪ್ರಾಣಾಪಾಯದಿಂದ ಪಾರಾದವರು ! ಹಾಗಾಗಿ ಇಲಾಖೆಯಲ್ಲಿ ದೊಡ್ಡ ಹೆಸರನ್ನು ಗಳಿಸಿದವರು. ಇವರನ್ನು ಒಮ್ಮೆ Police Recruitment Cell ನ ಚೀಫ್ ಆಗಿ ನೇಮಿಸುತ್ತಾರೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕ ಕ್ರಾಂತಿಕಾರಿ ಬದಲಾವಣೆ ತರುತ್ತಾರೆ. ಆಯ್ಕೆಯ ಪ್ರತಿ ಹಂತದ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ಅಂಕ, ವಯಸ್ಸು, ಪಿಸಿಕಲ್ ಫಿಟ್ನೆಸ್ ನಲ್ಲಿ ಗಳಿಸಿದ ಅಂಕ, ಜಾತಿ ಮುಂತಾದ ಎಲ್ಲಾ ವಿಷಯಗಳನ್ನು ತಕ್ಷಣ ಕಂಪ್ಯೂಟರ್ ನಲ್ಲಿ ದಾಖಲಿಸಿ ಅದು ಯಾವ ಕಾರಣಕ್ಕೂ ಬದಲಾಗದಂತೆ ಒಂದು ಪ್ರೋಗ್ರಾಂ ಮಾಡಿದ್ದು. ಇದರಿಂದಾಗಿ ಅರ್ಹ ಅಭ್ಯರ್ಥಿಗಳು ಒಂದು ನಯಾಪೈಸೆ ಖರ್ಚಿಲ್ಲದಂತೆ ಕೆಲಸ ಗಿಟ್ಟಿಸಿಕೊಳ್ಳುವಂತಾಗಿದೆ. ಅರ್ಧ ಅಂಕದಲ್ಲಿ ಹೆಚ್ಚು ಕಡಿಮೆಯಾದರೂ ಸಂಬಂಧಪಟ್ಟ ಅಭ್ಯರ್ಥಿಗಳು ಕೋರ್ಟಿಗೆ ಹೋಗಿ ನ್ಯಾಯ ಪಡೆಯಬಹುದಾಗಿದೆ. ಆಂಧ್ರದ ಸಾವಿರಾರು ಪೊಲೀಸರು ಈಗಲೂ ಕೃಷ್ಣರಾಜರನ್ನು ದೇವರನ್ನು ನೆನೆಯುವಂತೆ ನೆನೆಯುತ್ತಾರೆ. ಇದೇ ಮಾದರಿಯನ್ನು ಇಂದು ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಪೊಲೀಸ್ ಆಯ್ಕೆಯಲ್ಲಿ ಅನುಸರಿಸುತ್ತಿವೆ. ಇಂಥ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಕರ್ನಾಟಕದವರೆಂಬುದೊಂದು ಖಂಡಿತವಾಗಿಯೂ ಹೆಮ್ಮೆಯ ವಿಷಯವೇ ಸರಿ.

This slideshow requires JavaScript.

ಕೃಷ್ಣರಾಜ್ ಗೆ ನಿವೃತ್ತಿಯಾಗಲು ಇನ್ನೂ ನಾಲ್ಕು ವರ್ಷಗಳು ಉಳಿದಿರುವಂತೆ ಅವರು ಎ ಡಿ ಜಿ ಪಿ ಪ್ರಿಸನ್ಸ್ ಆಗಿ ನೆಮಕಗೊಳ್ಳುತ್ತಾರೆ. ಮೂರು ವರ್ಷಗಳ ಸೇವೆಯ ನಂತರ ಅಲ್ಲಿಯೇ ಡಿ ಜಿ ಪಿ ಆಗಿ ಕೊನೆಯ ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಾರೆ. ಪೊಲೀಸ್ ಇಲಾಖೆಯ ಆಡಳಿತದಲ್ಲಿ ಅವರ ನಿಷ್ಷುರ ಮತ್ತು ಪ್ರಾಮಾಣಿಕತೆಯನ ಛಾಪನ್ನು ಮತ್ತು ಪ್ರಾಮುಖ್ಯತೆಯನ್ನು ತಪ್ಪಿಸಲಿಕ್ಕಾಗಿಯೇ ಸರ್ಕಾರದಲ್ಲಿ ಈ ರೀತಿಯ ರಾಜಕೀಯ ನಡೆಯುತ್ತದೆ. ಆದರೆ ಸೆರೆಮನೆಯ ಎ ಡಿ ಜಿ ಪಿ ಯಾಗಿ ಬರುತ್ತಿದ್ದಂತೆಯೇ ಅಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಾರೆ. ಅವರು ಕಾರ್ಯರೂಪಕ್ಕೆ ತಂದ ಸುಧಾರಣೆಗಳು ಜೈಲಿನ ಸ್ವರೂಪವನ್ನೇ ಬದಲಿಸಿಬಿಟ್ಟವು. ಚೆರ್ಲಪಲ್ಲಿ, ಚಂಚಲಗೂಡ ಮತ್ತು ರಾಜಮಂಡ್ರಿಯ ಸೆಂಟ್ರಲ್ ಜೈಲುಗಳನ್ನು ಪ್ರವೇಶಿಸಿದಾಗ ನಮಗೆ ಯಾವುದೋ ಪ್ರಶಾಂತವಾದ ಆಶ್ರಮವನ್ನೋ, ವಿಶ್ವವಿದ್ಯಾಲಯವನ್ನೋ ಪ್ರವೇಶಿಸಿದ ಅನುಭವವಾಗುತ್ತದೆ.

ಚೆರ್ಲಪಲ್ಲಿ ಜೈಲು (ಫೋಟೋ ಕೃಪೆ : google.com)

ಬಹುಮುಖ್ಯವಾಗಿ ಕೈದಿಗಳಿಗೆ ತಾವು ಸೆರೆಮನೆಯಲ್ಲಿರುವೆಂಬ ಭಾವನೆಯೇ ಶೂನ್ಯವಾಗಿ ಬಿಡುತ್ತದೆ. ಖೈದಿಗಳ ಮನಃಪರಿವರ್ತನೆಗೆ ಪೂರಕವಾದ ಎಲ್ಲಾ ರೀತಿಯ ವಾತಾವರಣವನ್ನು ಈ ಜೈಲುಗಳಲ್ಲಿ ನಿರ್ಮಾಣ ಮಾಡಲಾಗಿದೆ. ಚೆರ್ಲಪಲ್ಲಿ ಜೈಲು ಇಡೀ ಭಾರತದಲ್ಲಿಯೇ ಅತ್ಯುತ್ತಮ ಜೈಲೆಂದು ಹೆಸರು ಗಳಿಸಿದೆ. ಇದೇ ಮಟ್ಟಕ್ಕೆ ಚಂಚಲಗೂಡ ಮತ್ತು ರಾಜಮಂಡ್ರಿ ಜೈಲುಗಳೂ ಮುಟ್ಟಿವೆ. ಇವುಗಳನ್ನು ಓಪನ್ ಜೈಲುಗಳೆಂದು ಕರೆಯಲಾಗುತ್ತದೆ. ಇಲ್ಲಿ ಖೈದಿಗಳನ್ನು ಅವರವರ ವಯಸ್ಸು, ಆರೋಗ್ಯ, ನೈಪುಣ್ಯತೆಗೆ ತಕ್ಕಂತೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಚೆರ್ಲಪಲ್ಲಿ ಜೈಲು 117 ಎಕರೆ ವಿಸ್ತೀರ್ಣವನ್ನು , ಚಂಚಲಗೂಡ 30 ಎಕರೆ ಮತ್ತು ರಾಜಮಂಡ್ರಿಯ ಜೈಲು 196 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಚೆರ್ಲಪಲ್ಲಿ ಸೆರೆಮನೆಯಲ್ಲಿ 2400, ಚಂಚಲಗೂಡ ಸೆರೆಮನೆಯಲ್ಲಿ 1600 ಖೈದಿಗಳಿದ್ದರೆ ರಾಜಮಂಡ್ರಿಯ ಜೈಲಿನಲ್ಲಿ 1500 ಖೈದಿಗಳಿದ್ದಾರೆ. ಚೆರ್ಲಪಲ್ಲಿಯಲ್ಲಿ ಕೃಷಿಯಲ್ಲಿ ತೊಡಗಿರುವ ಖೈದಿಗಳ ಸಂಖ್ಯೆ 300 . ಇಲ್ಲಿ ಎಲ್ಲಾ ತರದ ತರಕಾರಿಗಳನ್ನು ಬೆಳೆದು ಜೈಲಿನಲ್ಲಿ ಉಪಯೋಗಿಸುವುದರ ಜೊತೆಗೆ ತರಕಾರಿ ಮಾರಾಟದಿಂದ ಜೈಲಿಗೆ ಲಕ್ಷಾಂತರ ರೂಪಾಯಿಗಳು ಬರುತ್ತದೆ. ಬಟ್ಟೆ ನೇಯ್ಗೆ, ಬೇಕರಿ ಪದಾರ್ಥಗಳ ಉತ್ಪಾದನೆ, ಮರದ ಮತ್ತು ಸ್ಟೀಲ್ ಪೀಠೋಪಕಣಗಳ ತಯಾರಿಕೆ, ನಾರು ಸರಕುಗಳ ಉತ್ಪಾದನೆ ಮುಂತಾದ ಕೈಗಾರಿಕೆಗಳನ್ನು ಈ ಎಲ್ಲಾ ಜೈಲುಗಳು ಹೊಂದಿದ್ದು ಇವುಗಳಿಂದಲೂ ಆದಾಯ ಬರುತ್ತದೆ. ಈ ಆದಾಯದಿಂದ ಬಂದ ಲಾಭಾಂಶ ಖೈದಿಗಳ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ. ಹೈದರಾಬಾದ್ ಮತ್ತು ರಾಜಮಂಡ್ರಿಯಲ್ಲಿ ಖೈದಿಗಳೇ ಪೆಟ್ರೋಲ್ ಬಂಕುಗಳನ್ನು ನಡೆಸುತ್ತಿದ್ದಾರೆ. ಸುಧಾರಣೆಗೊಂಡ ಖೈದಿಗಳು ಜೈಲಿನ ಒಳಭಾಗದಲ್ಲಿ ಓಡಾಡಿಕೊಂಡಿರುತ್ತಾರೆ.

ಇನ್ನು ಖೈದಿಗಳಿಗೆ ಕೊಡುವ ಆಹಾರ ಉತ್ಕೃಷ್ಟ ಮಟ್ಟದ್ದು. ಆಹಾರವನ್ನು ತಯಾರಿಸುವವರು ಕೂಡಾ ಖೈದಿಗಳೇ. ದಿನಕ್ಕೆ ಮೂರು ಸಾರಿ ಆಹಾರವನ್ನು ನಿಡಲಾಗುವುದಲ್ಲದೆ ವಾರಕ್ಕೊಮ್ಮೆ ಮೊಟ್ಟೆ ಮತ್ತು ಮಾಂಸದ ಊಟವನ್ನೂ ನೀಡಲಾಗುತ್ತದೆ. ಎಲ್ಲಾ ಸೆರೆಮನೆಗಳೂ ಸುಸಜ್ಜಿತ ಲೈಬ್ರರಿಗಳನ್ನು ಹೊಂದಿರುವವಲ್ಲದೆ ವಿಧ್ಯಾಭ್ಯಾಸ ಮಾಡಲು ಆಸಕ್ತಿಯುಳ್ಹ ಕೈದಿಗಳಿಗೆ ಬೋಧನೆ, ಪರೀಕ್ಷೆಗಳ ವ್ಯವಸ್ಥೆ ಇದೆ. ಅನೇಕ ಖೈದಿಗಳು ಪಿಯುಸಿ ಮತ್ತು ಡಿಗ್ರಿಗಳನ್ನು ಜೈಲಿನಲ್ಲಿರುವಾಗಲೇ ಪೂರೈಸಿದ್ದಾರೆ. ಎಲ್ಲಾ ಧರ್ಮದವರೂ ಪ್ರಾರ್ಥನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ. ಕೆಲವು ಆಟಗಳ ಮೈದಾನಗಳೂ ಜೈಲಿನಲ್ಲಿದ್ದು ಮುಖ್ಯವಾಗಿ ವಾಲಿಬಾಲ್ ಆಟದಲ್ಲಿ ಹೆಚ್ಚು ಖೈದಿಗಳು ತೊಡಗಿರುವುದು ನಮ್ಮ ಕಣ್ಣಿಗೆ ಬಿದ್ದಿತ್ತು. ಈ ಎಲ್ಲಾ ಜೈಲುಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕವಾದ ಜೈಲುಗಳಿದ್ದು ಅಂಥ ಜೈಲುಗಳಲ್ಲೂ ಮೇಲೆ ತಿಳಿಸಿದ ಎಲ್ಲಾ ಚಟುವಟಿಕೆ ಮತ್ತು ಸೌಲಭ್ಯಗಳು ಇವೆಯಲ್ಲದೆ ಮಹಿಳಾ ಖೈದಿಗಳ 3 ರಿಂದ 6 ವರ್ಷದ ಮಕ್ಕಳನ್ನು ತಮ್ಮೊಂದಿಗೆ ಇರಿಸಿಕೊಳ್ಳುವ ಸೌಲಭ್ಯವಿದ್ದು ಅಂಥ ಮಕ್ಕಳಿಗೆ ಜೈಲಿನಲ್ಲೇ ಉಚಿತವಾಗಿ ವಿಧ್ಯಾಭ್ಯಾಸ ಕಲ್ಪಸಲಾಗಿದೆ. ಈ ಜೈಲುಗಳ ಬಗ್ಗೆ ಕೇಳುವುದಕ್ಕಿಂತ ಖುದ್ದಾಗಿ ನೋಡಿದರೆ ಸಂಪೂರ್ಣ ಚಿತ್ರಣ ಮನಸ್ಸು ಮತ್ತು ಹೃದಯಗಳನ್ನು ತುಂಬಿಕೊಳ್ಳುತ್ತದೆ. ಇಂಥ ಸುಧಾರಣೆಗಳನ್ನು ತರಲು ಶ್ರಮಿಸುವ ಎಲ್ಲಾ ಸ್ತರದ ಜೈಲು ಅಧಿಕಾರಿಗಳಿಗೂ ಖೈದಿಗಳು ದೇವರಿಗೆ ಮುಗಿಯುವಂತೆ ಕೈ ಜೋಡಿಸಿ ಮುಗಿಯುತ್ತಾರೆ.


  • ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading