ಗಂಡ ಸತ್ತಾಗ ಎದೆ ಬಡಿದುಕೊಂಡು ಅಳಲಿಲ್ಲ, ದೊಡ್ಡ ಬಬ್ಬಾಟ ಮಾಡಲಿಲ್ಲ. ಎದೆಯಲ್ಲಿ ನೋವಿಟ್ಟುಕೊಂಡು, ಆ ಎರಡು ಕಂದಮ್ಮಗಳನ್ನು ಸಂತೈಸಿದ ಆ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ದೊಡ್ಡ ನಮನ…
ಸಾವಿನ ನಂತರ ಸುಖವೋ,
ಕಷ್ಟವೋ ಗೊತ್ತಿಲ್ಲ.
ನನ್ನಂತಹವರ ಪ್ರಕಾರ
ಅದು ಮುಕ್ತಾಯ,
ಪೂರ್ಣ ವಿರಾಮ.
ನಿಜವಾದ ಕಷ್ಟ
ನಮ್ಮ ನಿಮ್ಮದ್ದಲ್ಲ,
ಸತ್ತವರದ್ದೂ ಅಲ್ಲ..
ಅವರ ಜೊತೆಯಲ್ಲಿ ಬದುಕಿ
ಈಗಲೂ ಜೀವಂತವಾಗಿ
ಇರುವವರದ್ದು.
ನಿನ್ನೆ ರಾಘಣ್ಣ
ಮತ್ತು
ಶಿವಣ್ಣ ಅವರ ದುಃಖದ ಸಾಗರದ
ಕಟ್ಟೆ ಒಡೆದುದನ್ನು
ಲೋಕ ನೋಡಿದೆ.
ಫೋಟೋ ಕೃಪೆ : wikibio
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚು ಭಾವುಕರಾಗಿರುತ್ತಾರೆ. ಮೌನರೋದನೆ ಕಡಿಮೆ. ಬಾಯಿಕೊಟ್ಟು ಅಳುವುದು, ಎದೆ ಬಡಿದುಕೊಳ್ಳುವುದು, ಕೂಗುವುದು, ಕರೆಯುವುದು ಮಾಡುತ್ತಾರೆ. ಆದರೆ ಅಪ್ಪುಗೆ ಅಂಟಿಕೊಂಡಿದ್ದ ಮೂರು ಜೀವಗಳು ಕಳೆದ ೨೨ ದಿನಗಳಿಂದ ಮೌನವನ್ನೇ ಬದುಕುತ್ತಿವೆ.
ಪರಸ್ಪರ ಕೈಹಿಡಿದು, ತಬ್ಬಿಕೊಂಡು ಕೂತಿದ್ದ ಎರಡು ಎಳೆಯ ಮಕ್ಕಳು ಮತ್ತು ತಾಯಿ ಇಷ್ಟು ದಿನಗಳದರೂ ಗೋಳಾಡಲಿಲ್ಲ,ಚೀರಾಡಲಿಲ್ಲ, ಕನಿಷ್ಠ ಬಿಕ್ಕಿಬಿಕ್ಕಿ ಅಳಲಿಲ್ಲ. ಟಿವಿ ಚಾನೆಲ್‌ಗಳು ಹಟಕ್ಕೆ ಬಿದ್ದವರಂತೆ ಮತ್ತೆ ಮತ್ತೆ ಮುಖ,ಕಣ್ಣುಗಳನ್ನು ಪೋಕಸ್ ಮಾಡಿದರೂ ಸಣ್ಣಗೆ ಕಣ್ಣಲ್ಲಿ ಜಿನುಗುತ್ತಿದ್ದ ಕಣ್ಣೀರಿನ ಪಸೆ ಬಿಟ್ಟರೆ ಬೇರೇನೂ ಕಾಣಸಿಗಲಿಲ್ಲ.
ಅಗಲಿ ಹೋದ ಗಂಡ-ಅಪ್ಪ ಸಾಮಾನ್ಯ ವ್ಯಕ್ತಿ ಅಲ್ಲ… ಉಸಿರು ನಿಂತ ಮೇಲೆಯೂ ಬೆಳೆಯುತ್ತಲೇ ಇರುವ, ಇಡೀ ಜಗತ್ತು ಕೊಂಡಾಡುತ್ತಿರುವ ಅಸಾಮಾನ್ಯ ಮನುಷ್ಯ. ಮರೆಯಲು ಸಾಧ್ಯವೇ ಇಲ್ಲದಂತೆ ಜನ ಹರಿಸುತ್ತಿರುವ ನೆನಪುಗಳ ಸರಮಾಲೆ.. ಇಂತಹ ಪರಿಸ್ಥಿತಿಯಲ್ಲಿ ಈ ಅಶ್ವಿನಿ ಎಂಬ ಗಟ್ಟಿಗಿತ್ತಿ, ಸ್ವಾಭಿಮಾನಿ ಹೆಣ್ಣು ಮಗಳು ಎದೆ ಒಡೆದು ಚೂರಾಗುವಂತಹ ದು:ಖವನ್ನು ನುಂಗಿಕೊಂಡು, ಎಲ್ಲಿಯೂ ನೋವನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ, ಚಾನೆಲ್‌ಗಳ ನಿರ್ದಯಿ ಕಣ್ಣುಗಳಿಗೆ ಆಹಾರವಾಗದೆ ಸಾರ್ವಜನಿಕವಾಗಿ ಘನತೆ-ಗಾಂಭಿರ್ಯದಿಂದ ನಡೆದುಕೊಂಡ ರೀತಿ ಮಾದರಿಯಾದುದು.
ಪುನೀತ್ ಎಂಬ ಪುಣ್ಯಾತ್ಮ ವೈಯಕ್ತಿಕ ಬದುಕಿನಲ್ಲಿಯೂ ಎಡವಲಿಲ್ಲ, ಸರಿಯಾದ ಬಾಳಸಂಗಾತಿಯ ಆಯ್ಕೆಯನ್ನು ಮಾಡಿದ್ದಾರೆ.ಈ ಹೆಣ್ಣು ಮಗಳು ಅಕಸ್ಮಾತ್ ಎಲ್ಲಿಯಾದರೂ ಸಿಕ್ಕಿದರೆ ಒಮ್ಮೆ ತಲೆಬಾಗಿ ನಮಸ್ಕಾರ ಮಾಡಬೇಕು.
- ದಿನೇಶ್ ಅಮಿನ್ ಮಟ್ಟು (ಲೇಖಕರು, ಖ್ಯಾತ ಪತ್ರಕರ್ತರು, ಪ್ರಜಾವಾಣಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ್ದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದವರು)