ಅತ್ತೆಮ್ಮ ಬಂದಾಗಲೆಲ್ಲ ನಮ್ಮಪ್ಪ ಟ್ರಂಕ್ನ ದೊಡ್ಡ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ಬೀಗದ ಕೈನ ಉಡಿದಾರಕ್ಕೆ ಕಟ್ಟಿಕೊಳ್ಳುತ್ತಿದ್ದ ಕೇಶವ ರೆಡ್ಡಿ ಹಂದ್ರಾಳ ಅವರ ನೆನಪಿನ ಸುರಳಿಯಲ್ಲಿ ಟ್ರಂಕ್ ನೊಂದಿಗಿನ ಬಾಂಧವ್ಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…
ನಾಲ್ಕು ದಿನಗಳ ಹಿಂದೆ ನಾನು ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದ ತಪಾಸಣೆ ಸಾಲಿನಲ್ಲಿ ನಿಂತಿದ್ದೆ. ನನ್ನ ಮುಂದೆ ನಡು ವಯಸ್ಸು ದಾಟಿದ ದಂಪತಿಗಳು ನಿಂತಿದ್ದರು. ಗಂಡಸಿನ ಕೈಯಲ್ಲಿ ದೊಡ್ಡ ಟ್ರಂಕ್ ಇತ್ತು. ಬೆಂಗಳೂರಿನಲ್ಲಿ ಟ್ರಂಕ್ ನೋಡಿ ಬಹಳ ದಿನಗಳಾಗಿತ್ತು.Scaning ಬೆಲ್ಟ್ ಮೇಲೆ ಟ್ರಂಕ್ ಹಿಡಿಸದ ಕಾರಣ ಸೆಕ್ಯುರಿಟಿಯವರು ತಪಾಸಣೆ ನಡೆಸಲು ಟ್ರಂಕ್ ಓಪನ್ ಮಾಡಲು ಹೇಳಿದ್ದರು. ಹೆಣ್ಣು ಮಗಳು ಮುಜುಗರದಿಂದಲೇ ” ಸಾಹೇಬ್ರ ಏನ್ ನೋಡ್ಲಿಕತ್ತಿರಿ ಬಿಡ್ರಿ, ಬಡವರು ನಾವು ಬೆಳ್ಳಿ ,ಬಂಗಾರ ಇಡೊ ಪೈಕಿ ಅಲ್ರಿ..”ಎಂದು #ಟ್ರಂಕ್ ತೆರೆದಿದ್ದಳು.ಕುತೂಹಲದಿಂದ ನಾನೂ ಇಣುಕಿದ್ದೆ.ಟ್ರಂಕ್ನಲ್ಲಿ ಸೀರೆ, ಕುಬುಸ, ಶರಟು, ಪಂಚೆ ಮುಂತಾದ ಬಟ್ಟೆಯೊಂದಿಗೆ ಪ್ಲಾಸ್ಟಿಕ್ ಕವರ್ನಲ್ಲಿ ಜೋಳದರೊಟ್ಟಿ,ಚಟ್ನಿಪುಡಿಯೂ ಇದ್ದವು. ಬಹುಶಃ ಅವರು ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ರಾಯಚೂರಿನಿಂದಲೋ ,ಗುಲ್ಬರ್ಗದಿಂದಲೋ ಬಂದಿದ್ದವರಿರಬೇಕು.
ಫೋಟೋ ಕೃಪೆ : thehindustangazette
ನನ್ನನ್ನು ಚಿಕ್ಕಂದಿನಲ್ಲಿ ಅದರಲ್ಲೂ ಪ್ರೈಮರಿ, ಮಿಡ್ಲಿಸ್ಕೂಲ್ಗಳಲ್ಲಿ ಓದುವಾಗ ಟ್ರಂಕುಗಳು ರೋಮಾಂಚನಗೊಳಿಸುತ್ತಿದ್ದವು.ನಮ್ಮ ಬಯಲು ಸೀಮೆಯ ಹಳ್ಳಿಗಳ ಪ್ರತಿ ಮನೆಯಲ್ಲೂ ಎಂಥದ್ದಾದರೂ ಒಂದು ಟ್ರಂಕು ಇದ್ದೇ ಇರುತ್ತಿತ್ತು. ಹೆಂಗಸರ ಅರ್ಧ ಪ್ರಪಂಚ ಟ್ರಂಕುಗಳಲ್ಲೆ ಇರುತ್ತಿತ್ತು. ಹೆಂಗಸರು ತಾವು ಕೂಡಿಟ್ಟ ದುಡ್ಡು ,ಬೆಲೆ ಬಾಳುವ ಬಟ್ಟೆ ,ಟೇಪು, ಸರ ,ಸ್ನೊ , ಪೌಡರ್ ಮುಂತಾದುವುಗಳೊಂದಿಗೆ ಚೆಕ್ಕುಲಿ, ಕರ್ಚಿಕಾಯಿ, ರವೆ ಉಂಡೆ, ಸಕ್ಕರೆ ಇತ್ಯಾದಿಗಳನ್ನು ಕಾಣದಂತೆ ಟ್ರಂಕುಗಳಲ್ಲಿ ಜೋಪಾನ ಮಾಡುತ್ತಿದ್ದರು.
ಫೋಟೋ ಕೃಪೆ : pinterest
ಮದುವೆ ಟೈಮಿನಲ್ಲಿ #ಗಂಡನ_ಮನೆಗೆ ಹೋಗುವಾಗ ಹೆಣ್ಣು ಮಕ್ಕಳಿಗೆ ಹೊಸ ಟ್ರಂಕನ್ನು ಕಳುಹಿಸಿ ಕೊಡುತ್ತಿದ್ದರು. ಒಳ್ಳೆಯ ,ಗಟ್ಟಿಯಾದ ಟ್ರಂಕ್ ಕೊಡದಿದ್ದರೆ ಗಂಡಿನ ಕಡೆಯವರು ” ತೌರ್ ಮನೆಯೋರ್ಗೆ ಅರಾಸ ಇಲ್ವ ಮಗಳ್ಗೆ ಇಂಥಾ ಲಡ್ಕಸ್ವಿ ಟ್ರಂಕ್ ಕೊಟ್ಟವ್ರೆ. ನಮ್ಮಪ್ಪಯ್ಯ ಕುಂತ್ರೆ ಒಂದೇ ಏಟಿಗೆ ಲಟುಕ್ನ ಮುರ್ಕಂಡೋಗ್ತೈತೆ..”ಎಂದು ತಮಾಷೆ ಮಾಡುತ್ತಿದ್ದರು. ಮಕ್ಕಳಿಗೆ ಈ ಟ್ರಂಕುಗಳು ಒಮ್ಮೊಮ್ಮೆ ಅಲ್ಲಾವುದ್ದೀನನ ಅದ್ಬುತ ದೀಪದಂತೆಯೂ, ಕಿನ್ನರಲೋಕದ ಮಾಯಾ ಸಂದೂಕದಂತೆಯೂ ಆಕರ್ಷಿಸುತ್ತಿದ್ದವು. ಹೆಂಗಸರು ಟ್ರಂಕು ತೆರೆದರೆ ಸಾಕು ಮಕ್ಕಳೆಲ್ಲ ಸುತ್ತಲೂ ಮುಸುರಿಕೊಳ್ಳುತ್ತಿದ್ದರು.ನಾನಂತೂ ಯಾರೂ ಇಲ್ಲದ ಟೈಮ್ ನೋಡಿಕೊಂಡು ಟ್ರಂಕ್ನೊಳಕ್ಕೆ ಮೆಲ್ಲನೆ ಕೈ ತೂರಿಸಿ ತಿಂಡಿಗಳನ್ನು ಎಗರಿಸಿಬಿಡುತ್ತಿದ್ದೆ. ಒಂದು ಸಾರಿ ನಮ್ಮ ಬೆಂಗಳೂರು ಅತ್ತೆಮ್ಮನ ಟ್ರಂಕ್ ತೆಗೆಯಲು ಮಚ್ಚಿನ ಕೊನೆ ತೂರಿಸಿ ಎತ್ತಿ ಅತ್ತೆಮ್ಮನ ಟ್ರಂಕಿನ ಒಂದು ರೆಕ್ಕೆ ಮಡಚಿಕೊಂಡಿತ್ತು. ಅತ್ತೆಮ್ಮ “ಅಯ್ಯೋ , ಯಾವ್ ನನ್ ಗಡ್ಡೇನೊ ಬಂಗಾರದಂಥ ಟ್ರಂಕ್ನ ಮುರ್ದು ತಿಕ್ಕಿಟ್ಕಂಡ್ನಲ್ಲಪ್ಪ.ಕೇಳಿದ್ರೆ ಬಾಳೆಹಣ್ಣು ಕೊಡ್ತಿರ್ಲಿಲ್ವೆ ..” ಎಂದು ಗೋಳಾಡಿದ್ದಳು. ಅವತ್ತಿಂದ ಅತ್ತೆಮ್ಮ ಬಂದಾಗಲೆಲ್ಲ ನಮ್ಮಪ್ಪ ಟ್ರಂಕ್ನ ದೊಡ್ಡ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ಬೀಗದ ಕೈನ ಉಡಿದಾರಕ್ಕೆ ಕಟ್ಟಿಕೊಳ್ಳುತ್ತಿದ್ದ.
ನಾನು ನಾಲ್ಕನೇ ಕ್ಲಾಸಿನಲ್ಲಿ ಇದ್ದಾಗ ನಮ್ಮಮ್ಮ ಚೆಕ್ಕುಲಿ ,ರವೆ ಉಂಡೆಯನ್ನು ತನ್ನ ಟ್ರಂಕ್ನಲ್ಲಿಟ್ಟು ಮರೆತು ಬಿಟ್ಟಿದ್ದಳು. ಹದಿನೈದು ದಿನ ಬಿಟ್ಟು ಟ್ರಂಕ್ ತೆಗೆದಾಗ ಇಲಿಗಳು ಚೆಕ್ಕುಲಿ, ರವೆ ಉಂಡೆಯನ್ನು ಕೆರೆದಿದ್ದವಲ್ಲದೆ ಇದ್ದ ನಮ್ಮಮ್ಮನ ಒಂದೇ ಒಂದು ರೇಷ್ಮೆ ಸೀರೆಯನ್ನೂ ಕಡಿದು ಹಾಕಿದ್ದವು. ನಮ್ಮಪ್ಪ “ಇವುನವ್ವುನ್ ಟ್ರಂಕ್ನ ಕೇಯಾ ” ಎಂದು ಕಲ್ಲು ಎತ್ತಿ ಹಾಕಿ ಬಣವೆಯಲ್ಲಿ ಬಿಸಾಕಿದ್ದ. ನಮ್ಮಮ್ಮ ” ತೌರು ಮನೇದು ಅಂತ ಅದೊಂದಿತ್ತು.ಅದ್ನೂ ನುಂಗಿ ನೀರು ಕುಡುದ್ ಬಿಟ್ಟಾ” ಎಂದು ಕಣ್ಣೀರು ಹಾಕಿದ್ದಳು. ನಾವು ಒಂದಷ್ಟು ದಿನ ಆಟವಾಡಲು ಬಳಸಿಕೊಂಡು ಪಾಕಂಪಪ್ಪು ಸಾಬಿ ಬಂದಾಗ ಅದನ್ನು ಹಾಕಿ ಅಂಗೈ ಅಗಲ ಪಾಕಂಪಪ್ಪು ಕೊಂಡು ತಿಂದಿದ್ದೆ .ನಮ್ಮ ಕೇರಿಯ ಸಿಕ್ಕಮ್ಮಜ್ಜಿ ಒಂದು ಸಾರಿ ಬಾಡಿನ ಸಾರು ಮಾಡಿದ್ದಾಗ ಸೊಸೆಗೆ ಕಾಣದಂತೆ ಟಿಫಿನ್ ಕ್ಯಾರಿಯರ್ಗೆ ಹಾಕಿ ಟ್ರಂಕ್ನಲ್ಲಿಟ್ಟು ಮರೆತು ಮಗಳ ಊರಿಗೆ ಹೋಗಿಬಿಟ್ಟಿದ್ದಳು. ನಾಲ್ಕು ದಿನಕ್ಕೆ ಮನೆಯೆಲ್ಲ ದುರ್ನಾತ ಸುತ್ತಿಕೊಂಡು ಕಡೆಗೆ ಟ್ರಂಕಿನ ಮರ್ಮ ಗೊತ್ತಾಗಿ ಸೊಸೆ ಟ್ರಂಕನ್ನು ತಿಪ್ಪಗೆ ಬಿಸಾಕಿದ್ದಳು. ನಾಯಿಗಳು ಟ್ರಂಕನ್ನು ದರದರಾ ಎಳೆದಾಡಿದ್ದವು.ಸಿಕ್ಕಮ್ಮಜ್ಜಿ ಊರಿಂದ ಬಂದ ಮೇಲೆ ಬಿಸಾಕಿದ್ದ ಟ್ರಂಕನ್ನು ಸೇದೊ ಬಾವಿಯ ಹತ್ತಿರ ತಗಂಡೋಗಿ ಉಪ್ಪು ಹುಣಿಸೆ ಹಣ್ಣು ಹಾಕಿ ತೊಳೆದು ಮನೆಗೆ ತಂದಿದ್ದಳು. ನಾನು 1971 ರಲ್ಲಿ ಹೈಸ್ಕೂಲು ಓದಲೆಂದು ಬೆಂಗಳೂರಿಗೆ ಬಂದಾಗ ಇಲ್ಲೂ ಟ್ರಂಕುಗಳ ಬಳಕೆ ಸಾಕಷ್ಟು ಇತ್ತು. ಸಿಟಿ ಮಾರುಕಟ್ಟೆ ಬಳಿ ಇದ್ದ ಟ್ರಂಕಿನ ಅಂಗಡಿಯಿಂದ ಅನೇಕ ಸಾರಿ ಊರಿನವರಿಗೆ ನಾನೇ ಟ್ರಂಕು ಕೊಡಿಸಿ ಕೊಟ್ಟಿದ್ದೂ ಇದೆ. ನಮ್ಮ ಮೋಟತ್ತೆಮ್ಮನ ಮಾಯ್ಕಾರ ಟ್ರಂಕಿನ ಬಗ್ಗೆ ಈಗಾಗಲೇ ನನ್ನ ಒಕ್ಕಲ ಒನಪು ಪುಸ್ತಕದಲ್ಲಿ ಹೇಳಿದ್ದೇನೆ.
ಈಗ ಪಟ್ಟಣಗಳಲ್ಲಿರಲಿ ಹಳ್ಳಿಗಳ ಕಡೆಯೂ #ಟ್ರಂಕುಗಳು ಮಾಯವಾಗಿವೆ. ಥರಾವರಿ ಬ್ಯಾಗುಗಳು , ಸೂಟ್ಕೇಸುಗಳು ಎಲ್ಲೆಲ್ಲೂ ವಿಜೃಂಭಿಸುತ್ತಿವೆ. ಆದರೆ ಆ ಕಾಲದಲ್ಲಿ ಟ್ರಂಕುಗಳು ಉಂಟುಮಾಡುತ್ತಿದ್ದ ರೋಮಾಂಚನ ಈ ಕಾಲದ ಬ್ಯಾಗ್ ,ಸೂಟ್ಕೇಸುಗಳು ಉಂಟುಮಾಡುವುದಿಲ್ಲ.ತಲೆ ಮಾರುಗಳು ಉರುಳಿದಂತೆ ಜನರಲ್ಲಿ ಮುಗ್ಧತೆ, ಸಂಭ್ರಮ, ಸಡಗರ ಎಲ್ಲವೂ ಮರೆಯಾಗುತ್ತಿರುವುದು ಸಂಕಟದ ಸಂಗತಿ.
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)