ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವುದಾದರೆ, ಇಂದಿನ ಮಕ್ಕಳೇ, ನಾಳೆ ರಂಗಭೂಮಿ ಮಹಾನ್ ಕಲಾವಿದರಾಗಬಹುದಲ್ಲವೇ?… ಹಾಗಿದ್ದಾಗ ಅವರನ್ನು ತಡೆಯಬೇಡಿ… ರಂಗಮಂದಿರಗಳಲ್ಲಿ ಅವರಿಗೆ ಪ್ರವೇಶಕ್ಕೆ ವಯಸ್ಸಿನ ಮಿತಿಯನ್ನು ಹಾಕಬೇಡಿ …
ಈ ನವೆಂಬರ್ 14 ಬಂದಾಗ ನನ್ನ ಬಾಲ್ಯದಲ್ಲಿ ಶಾಲೆಯಲ್ಲಿ ಆಚರಿಸುತ್ತಿದ್ದ ನೆಹರು ಹುಟ್ಟುಹಬ್ಬ ನೆನಪಿಗೆ ಬರುತ್ತದೆ. ಹಿಂದಿನ ದಿನ ಯುನಿಫಾರ್ಮ್ ಗೆ ಇಸ್ತ್ರಿ ಮಾಡಿ, ತಿಕ್ಕಿ ತೀಡಿ..ಬೆಳಗ್ಗೆ ಬೇಗ ಎದ್ದು ಚಕಾ- ಚಕ್ ಅಂತ ಶಾಲೆಗೆ ಗಡಿಬಿಡಿಯಿಂದ ಹೊಂಟ್ರೆ, ಚಾಚಾ ನೆಹರೂ ಅವರಿಗೆ ನಾವೇ ಪ್ರಿಯರು. ಅಷ್ಟು ಶಿಸ್ತು ನಮ್ಮಲ್ಲಿತ್ತು, ಇಲ್ಲವೆಂದರೂ ಅಂದಿನ ಶಿಕ್ಷಕರು ಕಲಿಸಿಕೊಡುತ್ತಿದ್ದರು. ಶಾಲೆಯ ಆವರಣದಲ್ಲಿ ಟೇಬಲ್ ಮೇಲೆ ಚಾಚಾ ಅವರ ಫೋಟೋವನ್ನಿಟ್ಟು ಹೂವಿನಿಂದ ಅಲಂಕರಿಸಿ ಅಂದು ಶಿಕ್ಶಕರ ಬಾಯಲ್ಲಿ ‘ಮುದ್ದು ಮಕ್ಕಳೇ…’ ಎಂದು ಪ್ರೀತಿಯಿಂದ ಭಾವಪೂರ್ವಕವಾಗಿ ಎಂದು ಕರೆಸಿಕೊಳ್ಳುವಾಗ ಎಲ್ಲಿಲ್ಲದ ಸಂತೋಷ. ಏಕೆಂದರೆ ಬೇರೆ ಸಮಯದಲ್ಲಿ ಛಡಿ ಚಮ್ ಚಮ್ ..ವಿದ್ಯಾ ಗಮ್ ಗಮ್ ಎನ್ನುತ್ತಿದ್ದರು ಶಿಕ್ಷಕರು.

ಫೋಟೋ ಕೃಪೆ :outlook india
ಚಾಚಾ ಅವರಿಗೆ ನಮಿಸಿದ ಮೇಲೆ ಭಾಷಣ ಸ್ಪರ್ಧೆಗಳು, ಹಾಡಿನ ಸ್ಪರ್ಧೆಗಳು ಆರಂಭವಾಗುತ್ತಿತ್ತು, ಎಲ್ಲ ಮುಗಿಯುವರೆಗೂ ಸರದಿ ಸಾಲಿನಲ್ಲಿ ಕೂತು ಶಿಕ್ಷಕರ ಕೈಯಲ್ಲಿನ ಎಂಟಾಣೆ ಚಾಕಲೇಟು ನೋಡುತ್ತಾ ಬಾಯಲ್ಲಿ ನೀರು ಬಿಡುತ್ತಾ ಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಿದ್ದೆವು. ಕೊನೆಗೆ ಸಾಲಿನಲ್ಲಿ ನಿಂತು ಶಿಕ್ಷಕರಿಂದ ಎಂಟಾಣೆ ಚಾಕಲೇಟ್ ತಗೆದುಕೊಂಡು ಬಾಯಾಡಿಸುತ್ತಾ ಮನೆಗೆ ಹೋಗುತ್ತಿದ್ದೆವು. ಅದರಲ್ಲೂ ಸಂತೋಷವಿತ್ತು,ಅಂದಿನ ವಿಶೇಷತೆ ಅರಿಯುತ್ತಿದ್ದೆವು. ಮಕ್ಕಳ ದಿನಾಚರಣೆಗಾಗಲಿ… ಶಿಕ್ಷಕರ ದಿನಾಚರಣೆಗಾಗಲಿ… ಸ್ವಾತಂತ್ರ್ಯ ದಿನಾಚರಣೆಗಾಗಲಿ… ಗಣರಾಜ್ಯೋತ್ಸವವಾಗಲಿ… ಎಂದೂ ಕೂಡಾ ನಾವಾಗಲಿ ಅಥವಾ ಶಾಲೆಯಾಗಲಿ ರಜೆ ಕೊಡುತ್ತಿರಲಿಲ್ಲ. ಪ್ರತಿಯೊಂದನ್ನು ಮನೆಯ ಹಬ್ಬದಂತೆ ಶಾಲೆಯಲ್ಲಿ ಆಚರಿಸುತ್ತಿದ್ದೆವು.
ಹೀಗಿತ್ತು ನಮ್ಮ ನವೆಂಬರ್ ೧೪ ಮಕ್ಕಳ ದಿನಾಚರಣೆ.
ಅದೇ ಇಂದು ನಮ್ಮ ಮಕ್ಕಳ ದಿನಾಚರಣೆ ವಿಶೇಷತೆಯೆಂದರೆ ಅಂದು ಶಾಲೆಗೆ ರಜೆ… ಮಕ್ಕಳಿಗೆ ವಿಶ್ರಾಂತಿ… ಆನ್ಲೈನ್ ನಲ್ಲಿ ಶಿಕ್ಷಕರಿಂದ ಒಂದು ಗ್ರೀಟಿಂಗ್ ಕಾರ್ಡ್ ಜೊತೆಗೆ ಒಂದು ಸಣ್ಣ ಶುಭಾಶಯದ ಮೆಸೇಜ್….ಇಷ್ಟೇ ಮುಗಿತು, ಅಂದಿನ ದಿನ. ಮಕ್ಕಳಿಗೆ ಬೇಸರ ವಾಗದಂತೆ ಅಪ್ಪ ಅಮ್ಮನ ಜೊತೆ ಕಾರ್ ನಲ್ಲಿ ಒಂದು ಲಾಂಗ್ ಡ್ರೈವ್ , ಇಲ್ಲ… ಹೋಟೆಲ್ ನಲ್ಲಿ ಮಸ್ತ ಭರ್ಜರಿ ಊಟ,ಇಲ್ಲ… ಮಕ್ಕಳಿಗೆ ಬೇಕಾದ್ದು ಕೊಡಿಸಿ ಮನೆಗೆ ತಂದು ಕೂಡಿಸುವ ದಿನ. ಅಂದು ಚಾಚಾ ನೆಹರೂ ಅವರ ನೆನಪು ಇಡೀ ದಿನ ಕಾಣೆ.
ಆ ತಪ್ಪು ನನ್ನಿಂದ ಆಗಬಾರದು ಎಂದು ನಾನು ಬೆಳಗ್ಗೆ ಮಕ್ಕಳಿಗೆ ಅಂದಿನ ವಿಶೇಷತೆ ಹೇಳಿದೆ. ಚಾಚಾ ಅವರನ್ನು ನೆನೆದು, ನಾಲ್ಕು ಮಾತು ಅವರ ಬಗ್ಗೆ ನೀವೇನು ತಿಳಿದಿದ್ದೀರಿ ಹೇಳಿ ಅಂದೇ. ಸದ್ಯ ನನ್ನ ಮಕ್ಕಳು ಅವರ ಬಗ್ಗೆ ಅರಿತಿದ್ದರು, ಕೇಳಿ ಸಂತೋಷವಾಯಿತು.

ಮಧ್ಯಾಹ್ನ ಒಳ್ಳೆ ಸರ್ಪ್ರೈಸ್ ಕೊಡತ್ತೀನಿ, ಈಗ ಓದ್ಕೋಳ್ಳಿ… ಎಂದೇ. ಮಕ್ಕಳು ಸರ್ಪ್ರೈಸ್ ಗೆ ಓದಿ ಮಧ್ಯಾಹ್ನ ರೆಡಿಯಾದರು…ಏನ್ ಸರ್ಪ್ರೈಸ್ ಹೇಳು… ಎಂದು ಕಾಡಿಸಿದರು, ನಾನು ಹೇಳಲಿಲ್ಲ. ಕಾರ್ ನಲ್ಲಿ ಅವರನ್ನು ಕೂರಿಸಿಕೊಂಡು ಹೊರಟೆ. ಮಕ್ಕಳಿಗೆ ಸಾಕಷ್ಟು ಕುತೂಹಲವಿತ್ತು, ಅಮ್ಮ ಏನು ಮಾಡಬಹುದು? ಏನು ಸರ್ಪ್ರೈಸ್ ಕೊಡಬಹುದು ಎನ್ನುವ ಲೆಕ್ಕಾಚಾರದಲ್ಲೇ ಇದ್ದರು. ನಾನು ಸಂತೋಷದಿಂದ ಡ್ರೈವ್ ಮಾಡಿದೆ. ಕಾರ್ ನ್ನು ರಂಗಶಂಕರ್ ದ ಮುಂದೆ ನಿಲ್ಲಿಸಿದೆ.
ಮಕ್ಕಳಿಗೆ ರಂಗಶಂಕರ್, ಕಲಾಕ್ಷೇತ್ರ ಹೊಸದಲ್ಲ. ರಂಗಭೂಮಿ ನಂಟು ಬೆಳೆಸುವ ಪ್ರಯತ್ನ ಸಾಕಷ್ಟು ಬಾರಿ ನಾನು ಮಾಡಿದ್ದೆ. ಮಕ್ಕಳು ಕಾರಿನಿಂದ ಇಳಿದು ರಂಗಶಂಕರ್ ನಾ ? ಯಾವ ನಾಟಕ ಅಮ್ಮ..ಅಜ್ಜನ ನಾಟಕನಾ ?… ಅಂದರು. ಇಲ್ಲಾ…ಇದು ಮಕ್ಕಳ ನಾಟಕ, ನಿಮಗೆ ಖಂಡಿತಾ ಇಷ್ಟವಾಗುತ್ತೆ, ನಡೀರಿ… ಎಂದು ಕಾರ್ ನ್ನು ಒಂದೆಡೆ ನಿಲ್ಲಿಸಿ, ಒಳಗೆ ನಡೆದೇ. ಸೆಕ್ಯೂರಿಟಿ ಗಾರ್ಡ್ ನಮ್ಮನ್ನು ತಡೆದು ‘ಸಾರೀ, ಮೇಡಂ…ಮಕ್ಕಳಿಗೆ ನಿಷೇಧವಿದೆ. ಕೊರೋನಾ ಅಲ್ವಾ…’ ಎಂದು ಹಲ್ಲು ಗಿಂಜಿದ.
ಅಯ್ಯೋ… ನಾನು ಒನ್ಲೈನ್ ನಲ್ಲಿ ೫ ಟಿಕೆಟ್ ಬುಕ್ ಮಾಡಿದ್ದೇನಪ್ಪಾ…above ೮ ವರ್ಷ ಅಂತ ಹಾಕಿದ್ದರು, ನನ್ನ ಮಕ್ಕಳಿಗೆ ೧೧ ವರ್ಷ… ಹಾಗಾಗಿ ನಾನು ಬುಕ್ ಮಾಡಿದೆ ಎಂದೆ…ಒಂದು ಟಿಕೆಟ್ ೨೦೦ ರೂಪಾಯಿ, ೫ ಜನಕ್ಕೆ ೧,೦೦೦ ರೂಪಾಯಿ, ಮೇಲೆ ೨೦೦ ರೂಪಾಯಿ tax ಕೂಡಾ ಕಟ್ಟಿದ್ದೆ. ನಾಟಕನೂ ಇಲ್ಲಾ, ದುಡ್ಡು ಹೋಯ್ತಲ್ಲ… ಏನು ಮಾಡೋದು ಈಗ? ಅಂತ ಸೆಕ್ಯೂರಿಟಿ ಮುಂದೆ ಗರಂ ಆದೆ. ಪಾಪ ಬಡಪಾಯಿ ಏನೆನ್ನುತ್ತಾನೆ? ‘ನೋಡಿ..ಯಾರಾದ್ರೂ ಟಿಕೆಟ್ ತಗೋದ್ರೆ, ಕೊಟ್ಟು ಬಿಡಿ… ‘ಎಂದ.
ಯಾರಿಗೆ ಕೊಡ್ಲಿ ಅಂತ ತಲೆಬಿಸಿ ಮಾಡಿಕೊಂಡು ಕೂತಾಗ, ಒಬ್ಬ ಹಿರಿಯರು ಬಂದು ‘ನೋಡೋಣಾ ಇರಿ…ಅಂದ್ರು, ಅವರ ಮಾತಿನಂತೆ ಕೊನೆಗೆ ಬ್ಲಾಕ್ ನಲ್ಲಿ ಟಿಕೆಟ್ ಮಾರಿ ಬಂದದ್ದು ಆಯ್ತು.tax ಕಟ್ಟಿದ ೨೦೦ ರೂಪಾಯಿ ವಾಪಸ್ಸಾಗಲಿಲ್ಲ. ನನ್ನಂತೆ ಸಾಕಷ್ಟು ಪಾಲಕರು ತಮ್ಮ ಮಕ್ಕಳಿಗೆ ನಾಟಕ ತೋರಿಸಲು ಬಂದು ಪೆಚ್ಚಾಗಿ, ಸಿಟ್ಟಾಗಿ ಕೂಗಾಡ ತೊಡಗಿದ್ದರು. ಅವರ ಹಣ ಏನಾಯಿತೋ ತಿಳಿಯಲಿಲ್ಲ.
ಆದರೆ ಅದು ಸರ್ಪ್ರೈಸ್ ಆಗಿದ್ದು ಮಕ್ಕಳಿಗಲ್ಲ, ನನ್ನಂತ ಅಪ್ಪ-ಅಮ್ಮಂದಿರಿಗೆ ಆಗಿದಂತೂ ನಿಜ. ಕೊನೆಗೆ ಎಲ್ಲ ಅಪ್ಪಅಮ್ಮಂದಿರಂತೆ ನನ್ನ ಕಾರ್ ಮಾಲ್ ಕಡೆಗೆ ತಿರುಗಿತು.
ಇದು ರಂಗಶಂಕರದ ಒಂದೇ ಕತೆಯಲ್ಲ…ಇದು ಒಂದು ಉದಾಹರಣೆಯಷ್ಟೇ.
ಸಿನಿಮಾ ಥಿಯೇಟರ್ ಗಳಲ್ಲಿ ಮಕ್ಕಳಿಗೆ ಇಂತಿಷ್ಟೇ ವಯಸ್ಸು ಎಂದು ಮಿತಿಯನ್ನು ಹೇರಿಲ್ಲ..ಆದರೆ ರಂಗಮಂದಿರಗಳಲ್ಲಿ ವಯಸ್ಸಿನ ಮಿತಿ ಹಾಕಿ, ಅನಿವಾರ್ಯವಾಗಿ ಮಕ್ಕಳನ್ನು ಬೇರೆ ಕಡೆ ವಾಲುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ? ಅಪ್ಪ -ಅಮ್ಮನಾ?…ಮಕ್ಕಳಾ?… ಅಥವಾ ರಂಗ ಸಂಘಟಕರಾ?…
ರಂಗಮಂದಿರಗಳು ವಯಸ್ಸಿನ ಮಿತಿಯ ಚೌಕಟ್ಟನ್ನು ಹಾಕಿಕೊಂಡರೆ, ಮಕ್ಕಳು ನಾಟಕವನ್ನು ನೋಡುವುದು ಯಾವಾಗ?… ಅವರಲ್ಲಿ ಆಸಕ್ತಿ ಮೂಡಿಸುವುದು ಯಾವಾಗ?… ೧೮ ವರ್ಷದ ನಂತರ ಎಂದು ಮಿತಿಯನ್ನು ಹಾಕಿಕೊಂಡರೆ ‘ಗಿಡವಾಗಿದ್ದು ಮರವಾಗಿ ಬಗ್ಗಿತೇ? …’ ಗಾಧೆ ನೆನಪಾಗುವುದು ಸಹಜ ಅಲ್ವವೇ?
ಮಕ್ಕಳಿಗೆ ನಾಟಕ ನೋಡಲು ಅವಕಾಶ ಕೊಡಿ…ಎಂದು ಎಲ್ಲ ರಂಗಭೂಮಿ ಆಯೋಜಕರನ್ನು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.
- ಶಾಲಿನಿ ಹೂಲಿ ಪ್ರದೀಪ್
