ಒಂದು ಮರ ಹಣ್ಣು ಎಲೆ, ಹೂವುಗಳನ್ನೆಲ್ಲ ಎಲ್ಲರಿಗೂ ಕೊಡುತ್ತದೆ.ಅದರಲ್ಲಿ ಯಾವುದೇ ಸಂಕುಚಿತ ಭಾವವಿರುವುದಿಲ್ಲ.ಆದರೆ ಬುದ್ದಿಜೀವಿ ಎನ್ನಿಸಿಕೊಂಡ ಮನುಷ್ಯನಲ್ಲಿ ಸಂಕುಚಿತತೆ ಸಾಕಷ್ಟಿದೆ. ಸಂಕುಚಿತತೆ ಮನುಷ್ಯನನ್ನು ಹಾಳು ಮಾಡುತ್ತದೆ ಎನ್ನುವುದಕ್ಕೆ ಉತ್ತಮ ಲೇಖನದೊಂದಿಗೆ ಪ್ರೊ.ರೂಪೇಶ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…
ಈ ಪ್ರಕೃತಿಯ ಸಕಲ ಚರಾಚರಗಳು ಒಂದಲ್ಲಾ ಒಂದು ರೀತಿಯಲ್ಲಿ ಭೂಮಿಯ ಮೇಲೆ ತನ್ನ ಉಪಸ್ಥಿತಿಯ ಸಮಯದಲ್ಲಿ ಅಸ್ಥಿತ್ವ ತೋರುತ್ತದೆ.
ಒಂದೇ ಮಾವಿನ ಗೊರಟೆಯಿಂದ ಮೊಳಕೆ ಹೊಡೆದ ಎಲ್ಲಾ ಮಾವು, ವಸಂತಕಾಲದಲ್ಲಿ ಹಣ್ಣುಗಳನ್ನು ಕೊಡುತ್ತದೆ. ಒಂದಾ ಕೆಲ ಮರದ ಹಣ್ಣು ಬೇಗ ಬಿಡುತ್ತದೆ, ಕೆಲವು ಬಹಳ ಸಿಹಿ ಆಗಿರುತ್ತದೆ, ಕೆಲವು ನೋಡಲು ದಪ್ಪವಾದರೂ ರುಚಿ ಇಲ್ಲದವುಗಳಾಗಿರುತ್ತದೆ. ಎಲ್ಲವೂ ಅದರ ಮಣ್ಣು, ಗಾಳಿ…ಹೀಗಿರುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ- ಅಲ್ಲದೆ. ತಾನು ಗೊರಟೆಯಾಗಿ ಬಂದ ಮರದಿಂದ ಮಾತ್ರ ಹಣ್ಣು ಬರಬೇಕು, ಅದರ ಗೆಲ್ಲುಗಳು ಮಾತ್ರ ಪಸರಿಸಬೇಕು, ತನ್ನಿಂದ #ಹಣ್ಣು ಬರಬಾರದು ಎಂಬ ಸಂಕುಚಿತತೆ ಯಾವುದೇ ಮರಕ್ಕೂ ಬರುವುದಿಲ್ಲ.ಯಾಕೆಂದರೆ ಮರಗಳು ಚಿಂತಿಸುವುದಿಲ್ಲ, ಮರಗಳಿಗೆ ಬುದ್ದಿ ಇಲ್ಲ ….ಎಂಬ ಎಷ್ಟೋ ಕಾರಣಗಳಿರಬಹುದು. ಅದರಲ್ಲಿ ಒಂದು ಕಾರಣ ತನ್ನದೇ ಆದ ನೆಲ – ಆಗಸದಲ್ಲಿ ತನ್ನದೇ ಆದ ಬೆಳವಣಿಗೆ. ಆ ಬೆಳವಣಿಗೆಯಲ್ಲಿ ಅದು ತನ್ನ ಆಳವಾದ ಬೇರು, ಸಮರ್ಪಿಸುವ ಹಣ್ಣು, ವಿಶಾಲತೆಯೊಳಗಿನ ಎಲೆ-ಕೊಂಬೆಯನ್ನು ಬೆಳೆಸಿದಂತೆ, ನೆರಳನ್ನು ಕೊಡುಗೆಯಾಗಿಸುತ್ತದೆ. ಅಂದರೆ ಕಾಲಾನಂತರ ಆ ಮರವನ್ನು ಹಲವಾರು ರೀತಿಯಲ್ಲಿ ಬಳಸಲೂ ಬಹುದು.
ಆದರೆ ಮನುಷ್ಯ ಎಂಬ ಪ್ರಾಣಿಗೆ ಯೋಚನಾ ಶಕ್ತಿ, ಬುದ್ದಿ … ಎಲ್ಲಾ ಇದೆ. ಆದರೆ #ಸಂಕುಚಿತತೆ ಅವನಿಂದ ಯಾವುದೇ ಚಿಂತನೆಯ ಆಳ, ವಿಶಾಲ ಮನೋಭಾವನೆ, ಸಮರ್ಪಣೆ, ಕೊಡುಗೆಗಳಿಗೆ ಪ್ರಭಲ ಅಡ್ಡಿ ಉಂಟು ಮಾಡುತ್ತದೆ.
ಒಬ್ಬ #ಸಮಾಜ_ಸುಧಾರಕ ಹೇಳಿಕೊಟ್ಟ / ತೋರಿಸಿಕೊಟ್ಟ ಮಾರ್ಗದಲ್ಲಿ ನಾವು ಮುಂದುವರಿದಾಗ ಅವರ ಆಶಯಗಳ ತಾಣದ ಸಮಾಜೋದ್ದಾರದ ಮತ್ತೊಂದು ಕೂಡುರಸ್ತೆ(ಜಂಕ್ಷನ್) ನಮಗೆ ಕಾಣ ಸಿಗಬಹುದು. ಅದರಿಂದ ನಮ್ಮ ಮುಂದಿನ ಪೀಳಿಗೆಗೆ ನಮ್ಮಲ್ಲಿ ಯಾರಾದರೊಬ್ಬರು ಮಾರ್ಗದರ್ಶಕರೂ ಆಗಬಹುದು. ಅದು ಬಿಟ್ಟು…..
ಅದು ಬಿಟ್ಟು …..ಸಮಾಜ ಸುಧಾರಕರು ತೋರಿದ ಮಾರ್ಗದಲ್ಲೇ ಕೂತು, ತಾನೂ ಮುಂದುವರಿಯದೇ , ಪರರನ್ನೂ ಹೋಗಲು ಬಿಡದೆ, ಆ ಸಮಾಜ ಸುಧಾರಕನನ್ನು ಮಾರ್ಗದಲ್ಲಿ ಪೂಜಿಸುತ್ತಾ , ಆ ಮಾರ್ಗ ಅಲ್ಲಿಗೇ ಕೊನೆ ಮಾಡುವ ಹಲವು ಜನರನ್ನು ನಾವು ಕಂಡು ಈ ದಿನಗಳಲ್ಲಿ ಮಮ್ಮಲಯರುಗುವುದೇ ಆಯಿತು.
ಒಬ್ಬ ಹಿರಿಯ ವಿಜ್ಞಾನಿ ಬಿಟ್ಟು ಹೋದ, ಕಂಡು ಹುಡುಕಿದ … ಆವಿಷ್ಕಾರ ಇನ್ನೊಬ್ಬ ಕಿರಿಯ ವಿಜ್ಞಾನಿ ಮುಂದುವರಿಸುತ್ತಾನೆ. ಅಲ್ಲದೆ ಹಳೇ ವಿಜ್ಞಾನಿಯನ್ನು ಪೂಜಿಸುತ್ತಾ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ವಿಜ್ಞಾನ ಬೆಳೆದು ಸಮಾಜಕ್ಕೆ ಕೊಡುಗೆ ಕೊಡುತ್ತಿದೆ. ಆದರೆ ಸಮಾಜ, ಸಮಾಜ ಸುಧಾರಕರನ್ನು ವ್ಯರ್ಥ ಪೂಜಿಸಿ, ಬೈದು ಕಾಲಹರಣ ಮಾಡಿ , ಸಿಕ್ಕ ಹೊಸಾ ವಿಜ್ಞಾನವನ್ನೂ ಸರಿಯಾಗಿ ಬಳಸದೆ ಸಮಾಜ ಹಾಳು ಮಾಡುತ್ತಿದೆ.
ಎಂಬ ಅಭಿಪ್ರಾಯದೊಂದಿಗೆ…..
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
