ಎರಡು ಚಕ್ರಗಳು ಹೊರಳಿಯುರುಳುವವು ಭಾರಿ ಮೂಟೆಯ ಭಾರ ಹೇರಿ…ಸೌಮ್ಯ ಗುರು ಕಾರ್ಲೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಉರುಳಿ ಹೋಗದಿಹ ಕೊರಳ ಹಾರವಿದು
ಸುರುಳಿ ಸುತ್ತಿಹುದು ಹೆಗಲನೇರಿ
ಸರಳವಲ್ಲ ಬಲು ಭಾರವೀ ಬದುಕು
ದೂರದೂರ ಗುರಿ ಬಾಳ ದಾರಿ
ಎರಡು ಚಕ್ರಗಳು ಹೊರಳಿಯುರುಳುವವು
ಭಾರಿ ಮೂಟೆಯ ಭಾರ ಹೇರಿ
ಪಾರುಗಾಣುವ ದಾರಿ ದೂರವಿದೆ
ಬರಿಯ ಚಿಂತೆಗಳೆ ಸಂತೆ ಸೇರಿ
ನೂರು ತಿರುವುಗಳು ಸಾರ ಹೀರುವವು
ತೀರ ಕಾಣಿಸದು ಕನಸೆ ಹೂತು
ಏರುದಾರಿ ಎಳೆದಾಡಿ ಏದುಸಿರು
ಜಾರಹತ್ತಿಹುದು ಜೀವ ಸೋತು
ತಿರುತಿರುಗಿ ಬಳಲಿಹೆನು ಇಳಿಯಲರಿಯದೆ
ನೆರಿಗೆಟ್ಟಿಹುದು ತನುವ ತೊಗಲು
ಮೆರುಗು ಮರೆಯಾಗಿ ಮುಪ್ಪು ಅಡರಿಹುದು
ಹೊರೆಯಾಗಿ ನಾಳೆಗಳು ಮನದಿ ದಿಗಿಲು
- ಸೌಮ್ಯ ಗುರು ಕಾರ್ಲೆ
