ಮಣಿಮಾಲಿನಿ ‘ದ್ರೌಪದೀ ಸಮೀಕ್ಷೆ’ ಮತ್ತು ‘ಬಾಜಿರ ಕಂಬದ ಒಳಸುತ್ತು’ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಮುಂಬಯಿ ಕನ್ನಡ ಲೋಕ: ಶಿಕ್ಷಣ: ಸಂಶೋಧನೆ: ೮: ಡಾ.ಮಣಿಮಾಲಿನಿ ವಿ.ಕೆ. : ಸೋಮಯ್ಯ ಕಾಲೇಜ್ ನಲ್ಲಿ ಡಾ.ಸಂಜೀವ ಶೆಟ್ಟಿಯವರು ಸಂಶೋಧನಾ ಕೇಂದ್ರ ಸ್ಥಾಪಿಸಿದಾಗ, ಅವರ ಮಾರ್ಗದರ್ಶನದಲ್ಲಿ ಮಹಾಭಾರತದ ದ್ರೌಪದಿಯನ್ನು ಆಧುನಿಕ ಕಾಲದ ಪುನರ್ ರೊಪಣೆಗೊಂಡ ( ಕಾದಂಬರಿಗಳ ಮೂಲಕ) ದ್ರೌಪದಿಯ ಜತೆಗೆ ತೌಲನಿಕ ಅಧ್ಯಯನ ಮಾಡಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು. ಅದನ್ನು ಮತ್ತು ಇತರ ಅವರ ಕೃತಿಗಳನ್ನು ಕುರಿತು ಬರೆದ: ಭಾರತೀಯ ಮಹಿಳಾ ಪರಂಪರೆ: ಮಣಿಮಾಲಿನಿ ದೃಷ್ಟಿ ಹಾಗೂ ಸೃಷ್ಟಿ ಎಂಬ ಬರಹವನ್ನು ಮುಂದೆ ಕೊಡಲಾಗಿದೆ.

ಭಾರತೀಯ ಮಹಿಳಾ ಪರಂಪರೆ : ಮಣಿಮಾಲಿನಿ ದೃಷ್ಟಿ ಮತ್ತು ಸೃಷ್ಟಿ
ಭಾರತೀಯ ಪರಂಪರೆಯಲ್ಲಿ ಪಂಚ ಪತಿವ್ರತೆಯರನ್ನಾಗಿ ಸೀತೆ, ತಾರಾ, ದ್ರೌಪದಿ, ಮಂಡೋದರಿ, ಅಹಲ್ಯೆಯರನ್ನು ನಿತ್ಯ ಸ್ಮರಣೀಯರನ್ನಾಗಿ ಕಲ್ಪಿಸಲಾಗಿದೆ. ಅವರಲ್ಲಿ ದ್ರೌಪದಿ, ಸೀತೆ ಮತ್ತು ಅಹಲ್ಯೆಯರನ್ನು ಕುರಿತು ಮಣಿಮಾಲಿನಿಯವರು ತಮ್ಮ ಸಂಶೋದನೆ ಮತ್ತು ಕತೆಗಳ ಮೂಲಕ ಅನುಸಂಧಾನ ನಡೆಸಿ ಹೊಸ ಬಗೆಯ ದೃಷ್ಟಿ ಮತ್ತು ಸೃಷ್ಟಿಗೆ ಕಾರಣರಾಗಿದ್ದಾರೆ. ಮೊದಲನೆಯದನ್ನು ದೃಷ್ಟಿಯೆಂದೂ, ಎರಡನೆಯದನ್ನು ಸೃಷ್ಟಿಯೆಂದೂ ಇಲ್ಲಿ ನಾನು ಕರೆದಿದ್ದೇನೆ. ಮೊದಲನೆಯ ಭಾಗದಲ್ಲಿ ದೃಷ್ಟಿಯ ಕುರಿತ ವಿವೇಚನೆ ಇದ್ದರೆ, ಎರಡನೆಯ ಭಾಗಲದಲ್ಲಿ ಸೃಷ್ಟಿಯ ವೈಶಿಷ್ಟ್ಯವನ್ನು ಉಲ್ಲೇಖಿಸಲಾಗಿದ್ದು, ಮೂರನೆಯ ಭಾಗದಲ್ಲಿ ಅವರ ಕೊಡುಗೆಯನ್ನು ಸಮೀಕ್ಷಿಸಲಾಗಿದೆ.

ಭಾಗ ಒಂದು.
ದೃಷ್ಟಿ: ಇಲ್ಲಿ ದೃಷ್ಟಿ ಎಂದರೆ ಸಂಶೋಧನೆಯಲ್ಲಿ ಬಳಸಲಾಗುವ ವಸ್ತುನಿಷ್ಟ ದೃಷ್ಟಿಕೋನ ಎಂಬ ಗ್ರಹೀತವನ್ನು ಇಟ್ಟುಕೊಳ್ಳಲಾಗಿದೆ. ಏಕೆಂದರೆ ಸಂಶೋಧನೆ ಎನ್ನುವುದು ಯಾವುದರ ಪರ ಮತ್ತು ವಿರುದ್ಧಗಳಲ್ಲದೆ ಅದು ಇರುವಂತೆ ಗ್ರಹಿಸುವುದಾಗಿದೆ. ಈ ದೃಷ್ಟಿಯಿಂದ ಇದನ್ನು ವೈಜ್ಞಾನಿಕವೆಂದು ಕರೆಯಬಹುದಾಗಿದೆ. ಇದನ್ನು ಅನ್ವಯಿಸಿದಾಗ ಸಹಜವಾಗಿಯೇ ಸಂಶೋಧನೆಯಲ್ಲಿ ಅಧಿಕೃತತೆ ಪ್ರಾಪ್ತವಾಗುತ್ತದೆ.
ರಾಮಾಯಣದ ಕೆಲವು ಪಾತ್ರಗಳಲ್ಲಿ ಪ್ರಲೋಭನೆಯಿಂದಾಗಿ ಆದ ಪರಿಣಾಮಗಳನ್ನು ಕುರಿತು ಅದರ ವಿವಿಧ ಬಗೆಗಳನ್ನು ಕುರಿತು ಅವರ ‘ಪ್ರಲೋಭನೆ’ ಕೃತಿಯಲ್ಲಿ ವಿವೇಚಿಸಲಾಗಿದೆ. ಪ್ರಲೋಭನೆಯೆಂದರೆ ತೀವ್ರವಾದ ಮಹತ್ವಾಕಾಂಕ್ಷೆಯೊಂದು ಹುಟ್ಟಿಕೊಳ್ಳುವ ಸ್ಥಿತಿಯೆಂದು ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಮೂರು ಬಗೆಗಳನ್ನು ಗುರುತಿಸಲಾಗಿದೆ. ಅವು ಧರ್ಮ , ಅರ್ಥ ಮತ್ತು ಕಾಮಗಳು.
ಧರ್ಮದ ಆಚರಣೆಯ ಪ್ರಲೋಭನೆಗೆ ಸಿಕ್ಕಿದಾಗ ಅದು ಹೇಗೆ ಅನಾಹುತಕ್ಕೆ ಎಡೆಮಾಡುತ್ತದೆ ಎಂಬುದಕ್ಕೆ ಇಲ್ಲಿ ದಶರಥ ಹಾಗು ರಾಮನನ್ನು ಉದಾಹರಣೆಯಾಗಿ ನೋಡಬಹುದು. ದಶರಥ ತಾನು ಕೊಟ್ಟ ವಚನಕ್ಕೆ ಬದ್ಧನಾಗುವ ಭರದಲ್ಲಿ, ರಾಮನ ಭವಿಷ್ಯಕ್ಕೆ ಧಕ್ಕೆ ತರುವುದನ್ನು ಮರೆಯುತ್ತಾನೆ. ರಾಮನಾದರೋ ತಂದೆಗೆ ಕೊಟ್ಟ ವಚನವನ್ನು ಈಡೇರಿಸುವ ಪ್ರಲೋಭನೆಗೆ ಒಳಗಾಗಿ ಸೀತೆ ಮತ್ತು ಲಕ್ಷ್ಮಣರನ್ನು ಅನೂಹ್ಯವಾದ ಕಷ್ಟ ಪರಂಪರೆಗಳಿಗೆ ಸಿಕ್ಕಿಹಾಕಿಸುತ್ತ್ತಾನೆ. ಸೀತೆಯನ್ನು ರಾವಣನಿಂದ ಬಿಡಿಸಿದಾಗಲೂ ತನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ನೀನು ಇಷ್ಟಬಂದಲ್ಲಿಗೆ ಹೋಗು‘ ಎಂದು ನಿಷ್ಠುರನಾಗಿ ನುಡಿಯುವುದೂ ಕೂಡ ಧರ್ಮಪ್ರಲೋಭನೆಗೆ ಒಳಗಾಗಿಯೇ. ಆಗ ಆಘಾತವನ್ನು ತಡೆದುಕೊಳ್ಳಲಾರದ ಸೀತೆ ರಾಮನನ್ನು ‘ಅನಾರ್ಯ’ನೆಂದು ಕರೆಯುವುದರ ಮೂಲಕ ತನ್ನ ರಿಕ್ತತೆಯನ್ನು ವ್ಯಕ್ತಪಡಿಸುತ್ತಾಳೆ. ಇದೇ ಅನುಭವ ಅವಳನ್ನು ಕಾಡಿಗೆ ಕಳುಹಿಸುವಾಗಲೂ ಉಂಟಾಗುತ್ತದೆ.
ಸೀತೆಯಾದರೂ ಪ್ರಲೋಭನೆಯನ್ನು ಮೀರಿದವಳಲ್ಲ. ಅವಳೂ ಕೂಡ ಕಾಂಚನ ಮೃಗಕ್ಕೆ ಮರುಳಾದವಳೇ. ರಾಮನೂ ಪ್ರಲೋಭನೆಗೆ ಒಳಗಾಗಿ ಲಕ್ಷ್ಮಣ ಎಚ್ಚರಿಸಿದರೂ ಕೇಳದೇ ಅದರ ಬೆನ್ನು ಹತ್ತಿಹೋಗುತ್ತಾನೆ. ಸೀತೆಯ ಅನುಚಿತವಾದ ಮಾತಿಗೆ ನೊಂದರೂ ಲಕ್ಷ್ಮಣನು ರಾಮನನ್ನು ಹಿಂಬಾಲಿಸಬೇಕಾಗುತ್ತದೆ. ಮುಂದಿನ ಕಷ್ಟಪರಂಪರೆಗಳಿಗೆ ತಾನಾಗಿಯೇ ಇದು ಆಹ್ವಾನ ನೀಡಿದಂತಾಗುತ್ತದೆ.
ಆದರೆ ಈ ಪಾತ್ರಗಳೇ ಪ್ರಲೋಭನೆಗಳಿಗೆ ಅತೀತÀವಾಗಿ ವರ್ತಿಸುವುದೂ ಉಂಟು. ರಾಮನನ್ನು ಕಾಡಿನಿಂದ ನಾಡಿಗೆ ತರಲು ಬಗೆ ಬಗೆಯ ಆಮಿಷಗಳನ್ನು ಒಡ್ಡಿದಾಗಲೂ ಅವನು ಅವರ ಮಾತುಗಳಿಗೆ ಬಲಿಯಾಗದೇ ಗಟ್ಟಿಯಾಗಿ ನಿಲ್ಲುತ್ತಾನೆ. ಇದೇ ರೀತಿ ಸೀತೆಯು ರಾವಣ ಒಡ್ಡಿದ ಆಮಿಷಗಳಿಗೆ ಬಲಿಯಾಗದೇ ಉಳಿಯುತ್ತಾಳೆ. ಅಂದರೆ ಇಲ್ಲಿ ಏಕಕಾಲಕ್ಕೆ ಅವರ ಮಿತಿಗಳನ್ನು ಸಾಧನೆಗಳನ್ನು ಗುರುತಿಸಲಾಗಿದೆ.
ಅವರ ದ್ರೌಪದಿ ಸಮೀಕ್ಷೆಯಲ್ಲಿ, ಅವರ ವಸ್ತುನಿಷ್ಠ ದೃಷ್ಟಿಕೋನದ ಪರಿಣಾಮವಾಗಿ ದ್ರೌಪದಿಯ ಸಾಮಥ್ರ್ಯ ಮತ್ತು ಮಿತಿಗಳನ್ನು ಅನನ್ಯವಾಗಿ ವಿವೇಚನೆಗೆ ಒಳಪಡಿಸಲಾಗಿದೆ.
ಅವಳು ಐವರು ಪಾಂಡವರನ್ನು ಕುಂತಿ ಮತ್ತು ಧರ್ಮರಾಯನ ಕುಟಿಲತೆಯಿಂದಾಗಿ ಪತಿಗಳನ್ನಾಗಿ ಒಪ್ಪಿಕೊಂಡು, ಅವರಲ್ಲಿನ ಏಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಇನ್ನಿಲ್ಲದ ಅಗ್ನಿದಿವ್ಯಕ್ಕೆ ಅವಳು ತನ್ನನ್ನು ತಾನು ಒಡ್ಡಿಕೊಳ್ಳಬೇಕಾಗುತ್ತದೆ. ಆಗ ಅವಳು ಅನುಭವಿಸುವುದು ರಿಕ್ತತೆಯನ್ನೇ. ಎಲ್ಲರಿಗೂ ಸೇರಿದ ತಾನು ನಿಜವಾಗಿ ಯಾರಿಗೂ ಸೇರಿದವಳಲ್ಲ ಎಂಬುದು ಅವಳಿಗೆ ಅರಿವಾಗುತ್ತದೆ. ಅದು ಅವಳಿಗೆ ದೃಢವಾಗುವುದು, ಅವಳ ವಸ್ತ್ರಾಪಹರಣಕ್ಕೆ ದುಶ್ಯಾಸನ ಮುಂದಾದಾಗ ಯಾರೂ ಅವಳನ್ನು ರಕ್ಷಿಸುವುದಿಲ್ಲ. ಮುಂದೆ ಬಂದ
ಭೀಮನನ್ನೂ ಕೂಡ ಅರ್ಜುನ ತಡೆಯುತ್ತಾನೆ.
ಯುದ್ಧ ಮುಗಿದ ಮೇಲೆ ಐದು ಮಕ್ಕಳನ್ನೂ ಅವಳು ಕಳೆದುಕೊಂಡಾಗ ಅವಳ ದುಃಖವನ್ನು ಆರಿಸಲು, ಹಂಚಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಅದೇ ಅರ್ಜುನ ಅಭಿಮನ್ಯವನ್ನು ಕಳೆದುಕೊಂಡಾಗ ಸುಭದ್ರೆಯನ್ನು ತಬ್ಬಿ ಸಂತೈಸುತ್ತಾನೆ, ಭೀಮ ಘಟೋತ್ಕಚನನ್ನು ಕಳೆದುಕೊಂಡಾಗ, ಹಿಡಿಂಬೆಯನ್ನು ತಬ್ಬಿಕೊಂಡು ಸಂತೈಸುತ್ತಾನೆ ಆಗ ಮತ್ತೊಮ್ಮೆ ತಾನು ಯಾರಿಗೂ ಸೇರಿದವಳಲ್ಲ ಎಂಬ ರಿಕ್ತಭಾವ ಕಾಡುತ್ತದೆ. ಅದರ ಸಾಕ್ಷಾತ್ಕಾರವಾಗುವುದು ಮಹಾಪ್ರಸ್ಥಾನದಲ್ಲಿ- ಅವಳು ಬಿದ್ದಾಗ ಭೀಮನಿಗೆ ಅರ್ಜುನನ ಕುರಿತು ಅವಳಿಗೆ ಒಲವರವಿತ್ತು ಎಂದು ಹೇಳಿ ಎಲ್ಲರೂ ಅವಳನ್ನು ತಿರುಗಿ ನೋಡದೇ ಮುಂದೆ ನಡೆದಾಗ.
ದ್ರೌಪದಿಯ ರಿಕ್ತಭಾವವನ್ನು ಗುರುತಿಸುವ ಲೇಖಕಿ ಪಾತ್ರದಲ್ಲಿನ ಅಂತರ್ ವಿರೋಧಗಳನ್ನೂ ಗುರುತಿಸುತ್ತಾರೆ. ಅವಳ ಆತ್ಮಪ್ರತ್ಯಯ, ಅಹಂಕಾರ ಮತ್ತು ಎಲ್ಲರನ್ನೂ ಏಕದೃಷ್ಟಿಯಲ್ಲಿ ನೋಡಲಾರದ ಅವಳ ಅಸಮತೋಲನ ಅವಳ ವ್ಯಕ್ತಿತ್ವದಲ್ಲಿನ ಅಂತರ್ ವಿರೋಧಗಳಿಗೆ ಕಾರಣವಾಗಿದೆಯೆಂದು ನಿಷ್ಪಕ್ಷಪಾತವಾಗಿ ಗುರುತಿಸಿದ್ದಾರೆ. ಈ ಬಗೆಯ ಅಧ್ಯಯನ ವಸ್ತುನಿಷ್ಠ ದೃಷ್ಟಿಕೋನದಿಂದ ಮಾತ್ರ ಸಾಧ್ಯ.

ಭಾಗ-2: ಸೃಷ್ಟಿ :
ಇದರಲ್ಲಿ ‘ಬಾಜಿರ ಕಂಬದ ಒಳಸುತ್ತು’ ಕತೆಗಳನ್ನು ಕುರಿತು ವಿವೇಚಿಸಲಾಗಿದೆ. ಇದರಲ್ಲಿ ಎರಡು ಭಾಗಗಳಿವೆ ಒಂದು, ಪುರಾತನ ಪಾತ್ರಗಳನ್ನು ಕುರಿತದ್ದಾದರೆ, ಎರಡನೆಯದು ಸಮಕಾಲೀನ ಪಾತ್ರಗಳನ್ನು ಕುರಿತಾದ್ದು.
ಪುರಾಣ ಪಾತ್ರಗಳಾದ ಅಹಲ್ಯೆ , ಅಮೃತಮತಿ ಮತ್ತು ಊರ್ಮಿಳೆಯರ ಬದುಕನ್ನು ಇಲ್ಲಿ ಪುನರ್ ಸೃಷ್ಟಿಸಿದ್ದಾರೆ. ಇಲ್ಲಿಯೂ ಅವರು ಗುರುತಿಸುವುದು, ಮೊದಲ ಭಾಗದಲ್ಲಿನ ರಿಕ್ತ ಸ್ಥಿತಿಯನ್ನೇ. ಅಹಲ್ಯೆ, ಗೃಹಸ್ಥ ಧರ್ಮವನ್ನು ಮರೆತ ತನ್ನ ಪತಿಯಾದ ಗೌತಮನಿಂದ ತಾನು ಪಡೆಯಲಾರದ್ದನ್ನು ಇಂದ್ರನಿಂದ ತಾನು ಪಡೆದೆ ಎಂದು ಹೇಳಿಕೊಳ್ಳುತ್ತಾಳೆ. ಅದರಲ್ಲಿ ಯಾವ ಅಳುಕೂ ಅವಳಿಗೆ ಕಾಡುವುದಿಲ್ಲ. ಆದ್ದರಿಂದ ತನ್ನ ಬಳಿಗೆ ಗೌತಮನಾಗಲೀ, ರಾಮನಾಗಲೀ ಬರಬೇಕಾದ ಅವಶ್ಯಕತೆಯಿಲ್ಲ. ತಾನು ಶಿಲೆಯಾಗಿಯೇ ಉಳಿಯಬಯಸುತ್ತೇನೆಂದು ಸಾರುತ್ತಾಳೆ. ಚಲನಶೀಲವಾಗಿರಬೇಕಾದ ಹೆಣ್ಣಿನ ಬದುಕನ್ನು ಜಡಗೊಳಿಸಿದ ಗೌತಮನಿಂದಾದ ರಿಕ್ತತೆ ಇಲ್ಲಿ ವ್ಯಕ್ತವಾಗಿದೆ.
ಊರ್ಮಿಳೆಯಾದರೋ ‘ಹೋಗುವಾಗ ತನಗೆ ಹೇಳಿ ಹೋಗಬೇಕು’ ಎಂಬುದನ್ನು ಲೆಕ್ಕಿಸದೇ ಹೋದ ಆ ಲಕ್ಷ್ಮಣ ಹದಿನಾಲ್ಕು ವರುಷಗಳ ಅನಂತರ ಬಂದರೂ ಒಂದೇ ಬಾರದೇ ಇದ್ದರೂ ಒಂದೇ. ತನಗೆ ಅದರಿಂದ ಯಾವುದೇ ವ್ಯತ್ಯಾಸವಿಲ್ಲ. ಬಾರದೆಯೇ ಇರಲಿ ಎಂದು ಆಸಿಸುತ್ತಾಳೆ. ಧರ್ಮದ ಪ್ರಲೋಭನೆಗೆ ಒಳಗಾದ ಲಕ್ಷ್ಮಣ ಇಲ್ಲಿ ಕೂಡ ತನ್ನ ಗೃಹಸ್ಥ ಧರ್ಮವನ್ನು ಪಾಲಿಸದೇ ಹೋದದ್ದರ ಪರಿಣಾಮವಿದು. ಅದರಿಂದಾಗಿಯೇ ಅವಳು ರಿಕ್ತತೆಯನ್ನು ಅನುಭವಿಸಬೇಕಾಗುತ್ತದೆ.
ಅಮೃತಮತಿಯಾದರೂ ಯುದ್ಧ ಪಿಪಾಸುವಾಗಿ ತನ್ನ ಒಲವನ್ನು ಮರೆತ ಯಶೋಧರನಿಗಿಂತ ತನ್ನನ್ನು ಒಲಿಸಿದ, ಒಲಿಯುವ ಅಷ್ಟಾವಂಕನೇ ಲೇಸೆಂದು ಸಾರುತ್ತಾಳೆ.
ಹೀಗೆ ಪುರಾಣ ಪಾತ್ರಗಳನ್ನು ಮರು ಕಡೆಯುವಲ್ಲಿ ಅವರು ತಮ್ಮ ಶೋಧನ ದೃಷ್ಟಿಯನ್ನು ಬಳಸಿಕೊಂಡಿದ್ದಾರೆ.
ಸಮಕಾಲೀನ ಸಂದರ್ಭಕ್ಕೆ ಭಾಷ್ಯವಾಗಿ ಬಾಜಿರಕಂಬದ ಒಳಸುತ್ತು ಕತೆಯಲ್ಲಿ ಬರುವ ಸುಬ್ಬಕ್ಕಜ್ಜಿ “ನನ್ನ ಗಂಡ ಮಾತ್ರ ದೇಶಾಂತರ ಹೋಗಿಲ್ಲ ಇವರೆಲ್ಲರ ಗಂಡಂದಿರೂ ದೇಶಾಂತರ ಹೋದವರೇ ಎಂದು ನಾನು ಹೇಳುತ್ತೇನೆ” ನೋವುಗಳಿಗೆ ಪಡಿಮಿಡಿಯದ ಗಂಡಂದಿರು ಇದ್ದರೇನು? ದೇಶಾಂತರ ಹೋದರೇನು? ಸಮಕಾಲೀನ ಸಂದರ್ಭದಲ್ಲೂ ಹೆಣ್ಣು ಅನುಭವಿಸುವ ರಿಕ್ತತೆಯನ್ನು ಇದು ಸಮರ್ಥವಾಗಿ ಮಂಡಿಸುತ್ತದೆ.
ಭಾಗ-3 ಮಣಿಮಾಲಿನಿಯವರ ಮೇಲಿನ ಕೃತಿಗಳ ಅಧ್ಯಯನದಿಂದ ಹೊರಪಡುವುದೆಂದರೆ ಅವರ ವಸ್ತುನಿಷ್ಟ ಮತ್ತು ಆಧುನಿಕ ದೃಷ್ಟಿಕೋನಗಳು. ಮೊದಲನೆಯದಕ್ಕೆ ಅವರ ಶೋಧ ಕೃತಿಗಳು ಉದಹರಣೆಯಾದರೆ, ಎರಡನೆಯದಕ್ಕೆ ಅವರ ಕತೆಗಳು ನಿದರ್ಶನಗಳಾಗಿವೆ.
ಪ್ರಾಚೀನ ಭಾರತೀಯ ನಾರಿಯರಿಗೂ ಮತ್ತು ಆಧುನಿಕ ಕಾಲದ ಮಹಿಳೆಯರಿಗೂ ಇರುವ ಸಮಾನತೆಯೆಂದರೆ, ಅವರ ಬದುಕಿನಲ್ಲಿ ಪ್ರಕಟವಾಗುವ ರಿಕ್ತತೆ. ಅದನ್ನು ಗುರುತಿಸಿ ನಮ್ಮ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತವಾದ ಸ್ಥಾನವಿದೆಯೆಂದು ಘೋಷಿಸುವುದರ ಹಿಂದಿನ ಪೊಳ್ಳುತನವನ್ನು ಅವರು ತಮ್ಮ ಕೃತಿಗಳ ಮೂಲಕ ಬಯಲಾಗಿಸಿದ್ದಾರೆ. ಅದು ಅವರನ್ನು ಕನ್ನಡದ ಸಂದರ್ಭದಲ್ಲಿ ಅನನ್ಯವಾದ ಶೋಧಕಿ ಮತ್ತು ಕತೆಗಾರ್ತಿಯನ್ನಾಗಿಸಿದೆ.
- ರಘುನಾಥ್ ಕೃಷ್ಣಮಾಚಾರ್
