‘ಚೌಚೌ ಬಾತ್’ ಅಂಕಣ (ಭಾಗ – ೩)

ಪಿಳಿಪಿಳಿ ಕಣ್ಣು ಬಿಡುತ್ತಾ ನಗು ಸೂಸಿ ಟಾಟಾ ಹೇಳುವ ಬಣ್ಣ ಬಣ್ಣ ರಂಗಿನ, ಕಣ್ಣಿಗೆ ಕಾಣೋ ಹೂವುಗಳ ಕುರಿತು ಸರ್ವ ಮಂಗಳ ಜಯರಾಮ್ ಅವರು ಈ ವಾರದ ‘ಚೌಚೌ ಬಾತ್’ ಅಂಕಣದಲ್ಲಿ ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…

ಪ್ರತಿ ದಿನ ಬೆಳಿಗ್ಗೆ ನಾನು ಶಾಲೆಗೆ ರೆಡಿಯಾಗಿ ಮನೆಯಿಂದ ಹೊರಗಡಿ ಇಟ್ಟೆನೆಂದರೆ ಸಾಕು ಮನೆಯಂಗಳದ ಮೂಲೆಯ ಪಾಟ್ ನಲ್ಲಿ ಮುದುರಿ ಕುಳಿತ ವಾಟರ್ ಲಿಲ್ಲಿ ಮೈ ಕೊಡವಿ ಎದ್ದು ಹಾಯ್…. ಎಂದು ಕೈಬೀಸಿ ಮುಗುಳ್ನಗುತ್ತದೆ. ಅದನ್ನೊಮ್ಮೆ ನೋಡಿ ನಕ್ಕು ಮೈದಡವಿ ಮುದ್ದಿಸಿ…ಮುಂದಡಿ ಇಟ್ಟರೆ …ಅಲ್ಲೇ ಗೇಟ್ನಲ್ಲೇ ನಮ್ಮ ಮನೆಯ ಸ್ವಾಗತಕಾರಿಣಿ ಪಿಂಕಿ (ದಾಸವಾಳ) ತಂಗಾಳಿಯ ತಂಪಿಗೆ ಮೈದೂಗುತ್ತ ಬೈ ಬೈ ಎನ್ನುತ್ತಾ ನಸು ನಗುತ್ತಾಳೆ. ಅವಳನ್ನೊಮ್ಮೆ ನವಿರಾಗಿ ಸ್ಪರ್ಶಿಸಿ ರಮಿಸಿ ಮುಂದೆ ಸಾಗುತ್ತೇನೆ.

ಹಾಗೇ ಸ್ವಲ್ಪ ಮುಂದಕ್ಕೆ ಚಲಿಸಿ ಬಲಗಡೆಯ ರಸ್ತೆ ತಿರುವಿನಲ್ಲಿ ಹೆಜ್ಜೆ ಇಟ್ಟಾಗ ಅಲ್ಲೇ ಪಕ್ಕದ ಮನೆಯ ಮುಂದೆ ಮುಖವರಳಿಸಿ ಕೊರಳು ಕೊಂಕಿಸಿ ಶುಭ್ರ ನಗೆ ಬೀರುವ ಶ್ವೇತ ಸುಂದರಿ ನಂದಿ ಬಟ್ಟಲು ಹೂವನ್ನು ಮಾತನಾಡಿಸದೆ ಮುಂದೆ ಹೋಗಲು ಮನಸ್ಸೇ ಬಾರದು.

ಫೋಟೋ ಕೃಪೆ : google

ಮುಂದೆ ಮತ್ತೊಂದು ರಸ್ತೆ ತಿರುವಿನ ಅಂಚಿನಲ್ಲಿಯೇ ಮುದ್ದಾಗಿ ನಗುತ್ತಾ ದಾರಿ ಹೋಕರನ್ನೆಲ್ಲ ಸ್ವಾಗತಿಸುವ ಚೆಂಡು ಹೂವಿನ ನಗುವಿಗೆ ಪ್ರತಿಯಾಗಿ ಮಂದಹಾಸ ಬೀರಿ ಹಾಗೇ ಮುನ್ನಡೆದರೆ ಮುಂದಿನ ಮತ್ತೊಂದು ಮನೆಯ ಅಂಗಳದ ಮುಂಭಾಗದ ಬಳ್ಳಿಯೊಂದರಲ್ಲಿ ಅರಳಿ ಸೌಗಂಧದ ಘಮಲನ್ನು ಉಣಿಸಿ ನಸು ನಾಚುವ ಜಾಜಿ ಮಲ್ಲಿಗೆಯ ಸೊಬಗಿಗೆ ಮನಸೋತು ಮೆಲುನಗೆ ಬೀರಿ ಮುಂದೆ ನಡೆದಾಗ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಸಾಲಾಗಿ ನಿಂತು ಶಿಸ್ತಿನಿಂದ ನಗೆ ಬೀರುವ, ಏನೋ ಹೇಳಲು ತವಕಿಸುವ ನವ ಯುವತಿಯರಂತೆ ಕಂಗೊಳಿಸುವ ಕಡು ಗೆಂಪಿನ ಕಣಗಿಲೆ ಹೂವಿನ ಮಾದಕತೆಗೆ ಮನಸೋಲದಿರದೆ.

ಮುಂದೆ ಸಾಗಿದಾಗ ಅಚ್ಚ ಹಸುರಿನ ಗುಚ್ಚದ ಒತ್ತಾದ ಪೊದೆಯಲ್ಲಿ ಬೆಚ್ಚಗೆ ಕುಳಿತು ಪಿಳಿಪಿಳಿ ಕಣ್ಣು ಬಿಡುತ್ತಾ ನಗು  ಸೂಸಿ ಟಾಟಾ ಹೇಳುವ ರಂಗು ರಂಗಿನ ಚಿತ್ತಾಕರ್ಷಕ
ಲಂಟಾನ ಹೂವಿಗೆ ಸಲಾಂ ಹೇಳಿ ನಕ್ಕು ಹಾಯ್ ಎಂದು ಮನದಲ್ಲೇ ಹೇಳಿಕೊಂಡು ಮುಂದೆ ಗಮ್ಯ ತಲುಪುತ್ತೇನೆ.ಇಷ್ಟೆಲ್ಲಾ ಪುರಾಣ ಯಾಕೆ ಹೇಳುತ್ತಿದ್ದೇನೆಂದರೆ

“ಬದುಕು ಸುಂದರ ಅಂದುಕೊಂಡರೆ ಮಾತ್ರ “.

ಹೌದು …….

ನಾವು ಪ್ರಕೃತಿಯಲ್ಲಿ ಕಾಣುವ ಗಿಡ ಮರ ಹೂ ಬಳ್ಳಿ ಬೆಟ್ಟ ಗುಡ್ಡ ನದಿ ಪರ್ವತ ಕಣಿವೆ ಎಲ್ಲವೂ ಸುಂದರವಾಗಿ ಕಾಣಬೇಕೆಂದರೆ ಮೊದಲು ನಾವು ನೋಡುವ ನೋಟವು ಸುಂದರವಾಗಿರಬೇಕು. ಇತರರನ್ನು ಗೌರವಿಸುವ ಪ್ರೀತಿಸುವ ಸುಂದರ ಮನಸ್ಸಿರಬೇಕು.ಪ್ರತಿಯೊಂದು ವಸ್ತುವಿನಲ್ಲೂ, ವ್ಯಕ್ತಿಯಲ್ಲೂ ಸಕಾರಾತ್ಮಕ ಅಂಶವನ್ನೇ ಗುರುತಿಸುವ ಮನವಿರಬೇಕು.ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪ್ರಬುದ್ಧತೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ತಾನು ಮೋಹಿಸುವ ಸ್ವಪ್ರೀತಿ ಇರಬೇಕು. ಏಕೆಂದರೆ ಸ್ವಪ್ರೀತಿಗಿಂತ ಮಿಗಿಲಾದ ಒಲವಿಲ್ಲ. ತಾನು ಹೇಗೇ ಇದ್ದರೂ ವಾಸ್ತವವನ್ನು ಒಪ್ಪಿಕೊಂಡು ಮನವನ್ನು ಅಪ್ಪಿಕೊಂಡು ಉತ್ಸಾಹದಿಂದ ಬದುಕಬೇಕು. ಬದುಕು ಬಂದಂತೆ ಸ್ವೀಕರಿಸಿ ಸದಾ ಚೈತನ್ಯದ ಚಿಲುಮೆ ಆಗಿರಬೇಕು. ಇವಿಷ್ಟೇ ನಾನು ಕಂಡುಕೊಂಡ ಸರಳ ಹಾಗೂ ಯಶಸ್ವಿ ಬದುಕಿನ ಸೂತ್ರಗಳು.

ಫೋಟೋ ಕೃಪೆ : google

ಮೇಲೆ ನಾ ಹೇಳಿದ ಹೂವುಗಳೆಲ್ಲ ಪ್ರತಿನಿತ್ಯ ನಕ್ಕು ನಸುನಾಚಿ ಸ್ವಾಗತಿಸುವಂತೆ ಕಲ್ಪಿಸಿಕೊಳ್ಳುತ್ತೇನೆ. ನಿಜಕ್ಕೂ ನೀವು ಹೂವುಗಳನ್ನು ಪ್ರೀತಿಯಿಂದ ಸ್ಪರ್ಶಿಸಿ ನೋಡಿ ಅವು ತಮ್ಮದೇ ಆದ ಭಾಷೆಯಲ್ಲಿ ನಿಮ್ಮನ್ನು ಮಾತನಾಡಿಸುತ್ತವೆ. ಆ ಮಧುರ ಭಾವವನ್ನು ಅರಿಯುವ ಮನಸಿರಬೇಕಷ್ಟೇ. ಇದು ಕೇವಲ ನನ್ನ ಊಹೆ ಆಗಿರಬಹುದು. ಆದರೆ ಅವುಗಳೊಂದಿಗಿನ ಒಡನಾಟ ಮಧುರಾತಿ ಮಧುರ. ಅದೊಂದು ಸುಂದರ ಅನುಭೂತಿ.ಇಂತಹ ಸುಂದರ ಹೂಗಳನ್ನು, ನಯನ ಮನೋಹರ ತಾಣಗಳನ್ನು ಕೊಡುಗೆಯಾಗಿ ನೀಡಿದ ಪ್ರಕೃತಿ ಮಾತೆಯನ್ನು ನಿತ್ಯವೂ ಧನ್ಯತೆಯಿಂದ ಸ್ಮರಿಸಲೇಬೇಕು. ಈಗಲೂ ನನಗೆ ಅಂತಹ ಸುಂದರವಾದ ಹೂಗಳನ್ನು ಕಂಡಾಗಲೆಲ್ಲ ನೆನಪಾಗುವುದು ಸದ್ಯದ ಸೆನ್ಸೇಷನಲ್ ಸಾಂಗ್ ……ಕಣ್ಣಿಗೆ ಕಾಣೋ ಹೂವುಗಳೆಲ್ಲಾ…. ಏನೋ ಹೇಳುತಿವೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW