ಮಗು ಬೆಳೆಯುತ್ತಿದ್ದಂತೆ ಪ್ರಶ್ನೆಗಳು ಬೆಳೆಯುತ್ತವೆ. ಆ ಮಗು ಹೆಣ್ಣಾಗಿದ್ದರೆ ಪ್ರಶ್ನೆಗಳ ವರಸೆಯೇ ಬೇರೆ.. ನಿನಗ್ಯಾಕೆ ಬೇಕು ಓದು? ನಿನಗ್ಯಾಕೆ ಕೆಲಸ? ನಿನಗ್ಯಾಕೆ ನೈಟ್ ಡ್ಯೂಟಿ? ನಿನ್ಯಾಕೆ ಬೇರೆ ಕಡೆ ಇದ್ದೀಯಾ?… ಸಾಲು ಸಾಲು ಪ್ರಶ್ನೆಗಳು. – ಆಶ್ರಿತ ಕಿರಣ್ (ಆಕೆ) ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಬದುಕಿನಲ್ಲಿ ನಮ್ಮ ಸುತ್ತಮುತ್ತ ಅನೇಕ ಜನರನ್ನು ಅನೇಕ ಕಾರಣಗಳಿಂದ ಭೇಟಿಯಾಗುತ್ತೇವೆ. ಭೇಟಿಯಾಗುವ ಜನರಲ್ಲಿ ಅನೇಕ ವರ್ಗಗಳನ್ನು ಮಾಡಬಹುದು. ಉದಾಹರಣೆಗೆ ಕೆಲವರು ಅತಿಯಾಗಿ ಮಾತನಾಡಿದರೆ ಇನ್ನು ಕೆಲವರು ಕಡಿಮೆ ಮಾತನಾಡುತ್ತಾರೆ. ಕೆಲವರು ಮೊದಲು ಮಾತನ್ನು ಆರಂಭಿಸುವುದರ ಬಗ್ಗೆ ಕಾಯುತ್ತಾರೆ. ಯಾರಾದರೂ ಮಾತನ್ನು ಶುರು ಮಾಡಿದರೆ ಅವರೊಂದಿಗೆ ಮಾತಾಡಿಕೊಂಡು ಕಾಲ ಕಳೆಯುತ್ತಾರೆ. ಇವರೆಲ್ಲರ ಪೈಕಿ ವಿಶೇಷವಾದ ಒಂದು ವರ್ಗವಿದೆ ಅವರೇ ಪ್ರಶ್ನೆ ಕೇಳುವವರು. ನಮ್ಮ ದಿನನಿತ್ಯದ ಬದುಕಿನಲ್ಲಿ ಇಂತಹ ಅನೇಕರನ್ನು ನಾವು ಭೇಟಿಯಾಗಿರುತ್ತೇವೆ. ಅವರಿಗೆ ಪ್ರಶ್ನೆಗಳೆಂದರೆ ಬಹಳ ಪ್ರೀತಿ. ಯಾರೇ ಸಿಗಲಿ ಅವರ ಬತ್ತಳಿಕೆಯಲ್ಲಿನ ಪ್ರಶ್ನೆಗಳಂತೂ ಬಾಣದಂತೆ ಹೊರಬರುತ್ತದೆ. ಉತ್ತರ ಬೇಕೆಂದಿಲ್ಲ. ಉತ್ತರಕ್ಕೆ ಕಾಯುವುದು ಇಲ್ಲ. ನೀವು ಉತ್ತರ ಹೇಳುವ ಮೊದಲೇ ಇನ್ನೊಂದು ಪ್ರಶ್ನೆ ತಯಾರಾಗಿರುತ್ತೆದೆ. ಕೆಲವರು ನಿಜವಾದ ಕಾಳಜಿಯಿಂದ ಪ್ರಶ್ನೆ ಕೇಳಿದರೆ ಇನ್ನು ಕೆಲವರು ಕುತೂಹಲದಿಂದ ಕೇಳುತ್ತಾರೆ. ಇನ್ನೂ ಕೆಲವರಿಗೆ ಬರಿ ಟೈಂಪಾಸ್ ಅಷ್ಟೇ. ಪ್ರಶ್ನೆ ಕೇಳುವಾಗ ಎದುರಿಗಿರುವವರಿಗೆ ನೋವಾಗಬಹುದು ಎಂಬ ಚಿಕ್ಕ ಯೋಚನೆಯೂ ಕೇಳುವವರಿಗೆ ಬಂದಿರುವುದಿಲ್ಲ.

ಫೋಟೋ ಕೃಪೆ : google
ಸಾಲು ಸಾಲು ಪ್ರಶ್ನೆಗಳು
ಮಗು ಹುಟ್ಟಿದ ಗಳಿಗೆಯಿಂದ ಪ್ರಶ್ನೆಗಳು ಆರಂಭ. ನಾರ್ಮಲ್ ಡೆಲಿವರಿಯಾ ?ಸಿಸೆರಿಯನ್ ಆ? ಮಗು ಎಷ್ಟು ಕೆಜಿ ಇತ್ತು? ಮಗು ಬೆಳ್ಳಗಿದ್ಯಾ? ಕಪ್ಪಗಿದ್ಯಾ? ದಪ್ಪ ಇದಿಯಾ ಸಣ್ಣ ಇದಿಯಾ? ಮಗುವಿನ ತಾಯಿಗೆ ಹಾಲು ಇದೆಯಾ? ಹಾಲು ಕುಡಿಸುತ್ತಾಳೋ ಇಲ್ಲವೋ? ಇವಿಷ್ಟು ಒಂದು ಹಂತದ ಪ್ರಶ್ನೆಗಳಾದರೆ ಐದು ತಿಂಗಳಾಯಿತು ಇನ್ನು ಮಗುಚಿ ಹಾಕಿಕೊಂಡಿಲ್ವಾ? ಏಳು ತಿಂಗಳಾಯಿತು ಇನ್ನು ಹಲ್ಲು ಬಂದಿಲ್ವಾ? 9 ತಿಂಗಳಾಯಿತು ಇನ್ನು ಅಮ್ಮ ಅಂತ ಕರಿಲಿಲ್ವಾ? ಒಂದು ವರ್ಷವಾಯಿತು ಮಗು ಇನ್ನೂ ನಡೆಯಲಿಲ್ವಾ? ಹೀಗೆ ಮಗುವಿನ ಸುತ್ತ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಥಮ ಬಾರಿ ತಾಯಿ ಆದವಳಿಗೆ ಎಲ್ಲವೂ ಹೊಸದು.ಪ್ರಶ್ನೆ ಕೇಳುವವರಿಂದ ಹೆದರಿ ತಲೆಕೆಡಿಸಿಕೊಂಡು ವೈದ್ಯರ ಬಳಿ ಹೋಗುತ್ತಾಳೆ.. ಪರಿಚಯದ ವೈದ್ಯರಾದರೆ “ನಿನಗೇನು ಅರ್ಜೆಂಟ್! ಮಗು ಆರಾಮಾಗಿ ಅದರಷ್ಟಕ್ಕೆ ಕಲಿಯುತ್ತದೆ.ಒಂದೊಂದು ಮಗು ಒಂದೊಂದು ತರ. ತಲೆ ಕೆಡಿಸಿಕೊಳ್ಳಬೇಡ ಎಂದು ಕಳುಹಿಸುತ್ತಾರೆ.. ದುಡ್ಡಿಗಾಗಿ ಕುಳಿತ ವೈದ್ಯರಾದರೆ ಇರುವ ಬರುವ ಎಲ್ಲಾ ಪರೀಕ್ಷೆಗಳನ್ನು ಬರೆದುಕೊಟ್ಟು ವಸೂಲಿ ಮಾಡುತ್ತಾರೆ. ಒಂದೊಂದು ಮಕ್ಕಳು ಎಲ್ಲವನ್ನು ವೇಗವಾಗಿ ಕಲಿತರೆ ಇನ್ನು ಕೆಲವು ನಿಧಾನವಾಗಿ ಕಲಿಯುತ್ತವೆ. ಮಗುವಿಗೆ ಇಲ್ಲದ ಅರ್ಜೆಂಟ್ ಅಥವಾ ಮನೆಯವರಿಗೆ ಇಲ್ಲದ ತಲೆಬಿಸಿ ಈ ಪ್ರಶ್ನೆ ಕೇಳುವ ಜನರಿಗೆ ಏಕೆ ಎಂಬುದು ಅರ್ಥವಾಗದ ಪ್ರಶ್ನೆ..
ಮಗು ಬೆಳೆಯುತ್ತದ್ದಂತೆ ಪ್ರಶ್ನೆಗಳು ಬೆಳೆಯುತ್ತವೆ. ಆ ಮಗು ಹೆಣ್ಣಾಗಿದ್ದರೆ ಪ್ರಶ್ನೆಗಳ ವರಸೆಯೇ ಬೇರೆ.. ನಿನಗ್ಯಾಕೆ ಬೇಕು ಓದು? ನಿನಗ್ಯಾಕೆ ಕೆಲಸ? ನಿನಗ್ಯಾಕೆ ನೈಟ್ ಡ್ಯೂಟಿ?ನಿನ್ಯಾಕೆ ಬೇರೆ ಕಡೆ ಇದ್ದೀಯ. ಹೀಗೆ ಆ ಹುಡುಗಿ ಓದಿ ಮನೆಯಲ್ಲಿದ್ದರೆ ಅದೇನು ಕೆಲಸಕ್ಕೆ ಹೋಗಿಲ್ಲ?ಮತ್ಯಾಕ್ಕೆ ಅಷ್ಟು ಓದಿದ್ದು?ಹುಡುಗಿ ಓದಿಲ್ಲವಾದರೆ ಅದ್ಯಾಕೆ ಓದಿಸಿಲ್ಲ?ಅದೇನು ಸುಮ್ಮನೆ ಮನೆಯಲ್ಲಿರುವುದು?? ಒಟ್ಟು ಹೇಗಿದ್ದರೂ ಅವರಿಗೆ ಕಷ್ಟವೆಂಬಂತೆ ಕೇಳುತ್ತಾರೆ.

ಫೋಟೋ ಕೃಪೆ : google
ಮದುವೆ ವಯಸ್ಸಿಗೆ ಬಂದಿದ್ದೇ ತಡಾ ಇನ್ನೂ ಹುಡುಗನ್ನ ನೋಡಿಲ್ವಾ?ಮದುವೆ ಮಾಡಲ್ವಾ?ಎನ್ನುವವರು ಮದುವೆಯಾದ ಮೇಲೆ ಗಂಡ ಹೆಂಡತಿ ಒಟ್ಟಿಗೆ ತಿರುಗಿದರೂ ಎಷ್ಟು ತಿರುಗುತ್ತೀರಾ?… ಎಂದು ಪ್ರಶ್ನೆ .ಎಲ್ಲಿಯೂ ಹೋಗದ ಮನೆಯಲ್ಲಿಯೇ ಇದ್ದರೆ ಅದೇನು ಸದಾ ಮನೆಯಲ್ಲಿ ಇರುತ್ತೀರ ಎಂಬ ಪ್ರಶ್ನೆ.. ಮದುವೆಯಾಗಿ ಒಂದೇ ವರ್ಷದಲ್ಲಿ ಮಕ್ಕಳಾದರೆ ಅದೇನು ಇಷ್ಟು ಬೇಗ ಎಂಬ ಪ್ರಶ್ನೆ ಮಕ್ಕಳಾಗದಿದ್ದರೆ ಅದೇನು ಇಷ್ಟು ಲೇಟು ಎಂಬ ಪ್ರಶ್ನೆ. ಒಟ್ಟಿನಲ್ಲಿ ಈ ಪ್ರಶ್ನೆಗಳಿಗೆ ಕೊನೆಯಿಲ್ಲ ಇವಿಷ್ಟು ಪ್ರಶ್ನೆಗಳಿಗೆ ನೀವು ಉತ್ತರಿಸುವಷ್ಟರಲ್ಲಿ ಅರ್ಧ ಬದುಕು ಮುಗಿದಿರುತ್ತದೆ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಬರುವ ಹೆಣ್ಣು ಮದುವೆಯಾಗಿ ಮಕ್ಕಳಾದ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಬೇಗ ಏಳು ಎಂದರೆ ನಾನು ಮಾತ್ರ ಏಳಬೇಕಾ? ಅಪ್ಪ ಇನ್ನೂ ಮಲಗಿಯೇ ಇದ್ದಾರೆ ಅವರೇಕೆ ಎದ್ದಿಲ್ಲ ಎಂಬಲ್ಲಿಂದ ಪ್ರಶ್ನೆ ಶುರುವಾಗಿ ಪ್ರತಿಯೊಂದಕ್ಕೂ ಪ್ರಶ್ನೆಗಳನ್ನು ಕೇಳುವ ಮಕ್ಕಳಿಗೆ ಉತ್ತರಿಸುವಷ್ಟರಲ್ಲಿ ಸುಸ್ತಾಗಿರುತ್ತಾಳೆ.
ಈ ಎಲ್ಲಾ ಪ್ರಶ್ನೆಗಳ ಸುಳಿಯಲ್ಲಿ ನಮ್ಮ ಜೀವನವನ್ನು ಪ್ರಶ್ನೆಗಳಿಗೆ ಸಿಲುಕಿಸದೆ ಪ್ರಶ್ನೆ ಕೇಳುವವರ ಬಗ್ಗೆ ಯೋಚಿಸದೆ ಧೈರ್ಯವಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ಮುನ್ನುಗ್ಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಪ್ರಶ್ನೆಗಳಿಗೆ ಅಂಜುತ್ತಾ, ಮನೆಯಲ್ಲಿ ಮೌನವಾದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದು. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿಯೂ ಇಂತಹ ಪ್ರಶ್ನೆ ಕೇಳುವ ಜನರನ್ನು ಒಂದಲ್ಲ ಒಂದು ಹಂತದಲ್ಲಿ ಭೇಟಿಯಾಗಿರುತ್ತೇವೆ. ಇವರಿಗೆ ಯಾಕಪ್ಪ ನನ್ನ ಬದುಕಿನ ಚಿಂತೆ ಎಂಬ ಪ್ರಶ್ನೆ ಮನದಲ್ಲಿ ಉದ್ಭವಿಸಿದರೂ ನಗುಮುಖದಿಂದ ಕೇಳಿದ ಪ್ರಶ್ನೆಗೆ ಉತ್ತರಿಸಿ ಅಲ್ಲಿಂದ ಹೊರಡುತ್ತೇವೆ. ಪ್ರಶ್ನೆಗಳಿಂದ ನೊಂದಿದ್ದರೆ ಇನ್ನೆಂದೂ ಪ್ರಶ್ನೆಗಳನ್ನು ಕೇಳದಂತೆ ಖಡಕ್ಕಾಗಿ ಉತ್ತರಿಸಿ ಹೊರಟಿರುತ್ತೇವೆ ..ಅಲ್ಲವೇ… ಏನಂತೀರಾ??
- ಆಶ್ರಿತ ಕಿರಣ್ (ಆಕೆ) – ಬೆಂಗಳೂರು.
