ಐತಿಹಾಸಿಕ ಸ್ವಾರಸ್ಯಗಳು ಕಾಲಾಶೋಕ ಯಾರು?

ಕಾಲಾಶೋಕನ ಹೆಸರು ಕೇಳಿರುವಿರಾ? ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ. ಕಾಲಾಶೋಕನ ಕುರಿತು ಲೇಖಕರಾದ ಬಿ ಆರ್ ಸುಹಾಸ್ ಅವರು ಬರೆದ ಈ ಲೇಖನವನ್ನು ಪೂರ್ತಿಯಾಗಿ ಓದಿ… 

ಚಂಡಾಶೋಕ ಗೊತ್ತು, ಧರ್ಮಾಶೋಕ ಗೊತ್ತು, ವೀತಶೋಕ ಗೊತ್ತು. ಈ ಕಾಲಾಶೋಕ ಯಾರು?! ಚಂಡಾಶೋಕ ಎಂದರೆ ಸಮ್ರಾಟ್ ಅಶೋಕನು ಬಹಳ ಆವೇಶದ ಸ್ವಭಾವದವನಾಗಿದ್ದಾಗ ಅವನನ್ನು ಕರೆಯುತ್ತಿದ್ದ ಹೆಸರು. ಧರ್ಮಾಶೋಕ ಎಂಬುದು ಅವನು ಬೌದ್ಧ ಧರ್ಮದ ಅನುಯಾಯಿಯಾದಾಗ ಧರ್ಮವನ್ನು ಪಾಲಿಸುತ್ತಿದ್ದುದರಿಂದ ಅವನನ್ನು ಕರೆಯುತ್ತಿದ್ದ ಹೆಸರು.

ವೀತಶೋಕ ಅವನ ಸಹೋದರರಲ್ಲಿ ಉಳಿದುಕೊಂಡ ಏಕೈಕನು. ಹಾಗಿದ್ದರೆ ಕಾಲಾಶೋಕ ಯಾರು? ಕಾಲಾಶೋಕ, ಅಶೋಕನಿಗೆ ಸಂಬಂಧಿಸಿರದ ಬೇರೊಬ್ಬ ರಾಜ. ಅಶೋಕನಿಗಿಂತಲೂ ಮುಂಚಿನವನು. ಅವನು ಶಿಶುನಾಗ ವಂಶದ ಕೊನೆಯ ರಾಜ.‌ ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ಅವನಿಗೆ ಕಾಕವರ್ಣ ಎಂದೂ ಹೆಸರಿತ್ತು. ಪ್ರಾಯಶಃ ಅವನು ಕಪ್ಪಗಿದ್ದುದರಿಂದ ಈ ಹೆಸರನ್ನಿಟ್ಟಿದ್ದರೋ ಏನೋ!

ಪ್ರಾಚೀನ ಭಾರತದ ರಾಜ್ಯಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು. ಬೌದ್ಧ ಗ್ರಂಥಗಳು ಅಂಥ ಹದಿನಾರು ಮಹಾಜನಪದಗಳನ್ನು ಹೆಸರಿಸುತ್ತವೆ. ಗಾಂಧಾರ, ಮತ್ಸ್ಯ, ಕೋಸಲ, ಶೂರಸೇನ, ಕಾಂಭೋಜ, ವತ್ಸ, ಕುರು, ಪಾಂಚಾಲ, ಕಾಶಿ, ಅವಂತಿ, ಮಲ್ಲ, ವೃಜ್ಜಿ, ಅಂಗ, ಮಗಧ, ಚೇದಿ, ಅಶ್ಮಕ, ಇವೇ ಆ ಹದಿನಾಲ್ಕು ಮಹಾಜನಪದಗಳು. ಇವಲ್ಲದೆ ಇನ್ನೂ ಅನೇಕ ರಾಜ್ಯಗಳಿದ್ದವು. ಇವುಗಳಲ್ಲಿ ಮಗಧವು ದೊಡ್ಡ ಸಾಮ್ರಾಜ್ಯವಾಗಿ ಬೆಳೆಯಿತು. ಮಗಧ ದೇಶದಲ್ಲಿ ಹರ್ಯಂಕ ಸಾಮ್ರಾಜ್ಯ ಅಳುತ್ತಿತ್ತು. ಅದರ ಪ್ರಮುಖ ರಾಜ ಬಿಂಬಿಸಾರ. ಅವನು ಬುದ್ಧನ ಸಮಕಾಲೀನನಾಗಿದ್ದನು. ಅವನು ಒಳ್ಳೆಯ ರಾಜನಾಗಿದ್ದರೂ ದುರದೃಷ್ಟವಶಾತ್, ಅವನ ಮಗ ಅಜಾತಶತ್ರು ಅವನನ್ನು ಕೊಂದುಬಿಟ್ಟನು! ಅದಕ್ಕೆ ಕಾರಣ, ಬುದ್ಧನ ದಾಯಾದಿ ದೇವದತ್ತನ ದುರ್ಬೋಧೆ ಎನ್ನುತ್ತವೆ ಬೌದ್ಧ ಗ್ರಂಥಗಳು. ಆದರೆ ಜೈನ ಗ್ರಂಥಗಳ ಪ್ರಕಾರ, ಅಜಾತಶತ್ರು ಅವನನ್ನು ಬಂಧಿಸಿದ್ದು, ಕೊನೆಗೆ ತನ್ನ ತಾಯಿ ಚೆಲ್ಲನಳಿಂದ ತನ್ನ ತಪ್ಪನ್ನರಿತು, ತಂದೆಯ ಸರಪಣಿಗಳನ್ನು ಕತ್ತರಿಸಿ ಅವನನ್ನು ಬಂಧಮುಕ್ತನನ್ನಾಗಿಸಲು ಕಬ್ಬಿಣದ ದೊಣ್ಣೆ ಹಿಡಿದು ಕಾರಾಗೃಹಕ್ಕೆ ಅವನು ಓಡಿ ಬರುವಾಗ, ಅದನ್ನು ನೋಡಿ ತಪ್ಪು ತಿಳಿದು ಬಿಂಬಿಸಾರ ತಾನೇ ಆತ್ಮಹತ್ಯೆ ಮಾಡಿಕೊಂಡ! ಒಟ್ಟಿನಲ್ಲಿ ಮಗನ ದೆಸೆಯಿಂದ ತಂದೆ ಮೃತ್ಯುವಶನಾದ!


ಶಿಶುನಾಗ ಆಡಳಿತದ ಒಂದು ದೃಶ್ಯ

ಅಜಾತಶತ್ರುವಿಗೆ ಉದಯಭದ್ರ ಅಥವಾ ಉದಾಯಿನ್ ಎಂಬ ಪುತ್ರನಿದ್ದ. ಇವನೇ ಪಾಟಲಿಪುತ್ರ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನು ರಾಜಗೃಹದಿಂದ ಅಲ್ಲಿಗೆ ವರ್ಗಾಯಿಸಿದ. ದುರದೃಷ್ಟವಶಾತ್ ಇವನೂ ತನ್ನ ತಂದೆ ಅಜಾತಶತ್ರುವನ್ನು ಕೊಂದ! ಅನಂತರ ಇವನ ಮಗ ಅನುರುದ್ಧ, ಅವನು ಮಗ ಮುಂಡ, ಮತ್ತು ಅವನ ಮಗ ನಾಗದಾಸಕ, ಮಗ ಅಪ್ಪನನ್ನು ಕೊಲ್ಲುವ ಅದೇ ದಾರಿಯಲ್ಲಿ ನಡೆದರು! ಇದರಿಂದ ಪ್ರಜೆಗಳು ರೋಸಿಹೋಗಿ ನಾಗದಾಸಕನನ್ನು ರಾಜ್ಯದಿಂದಲೇ ಓಡಿಸಿ ಒಬ್ಬ ಅಮಾತ್ಯನನ್ನು ಪಟ್ಟಕ್ಕೇರಿಸಿದರು. ಅವನೇ ಶಿಶುನಾಗ.‌ ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ಗೆದ್ದು ವಶಪಡಿಸಿಕೊಂಡನು.‌ಈ ಶಿಶುನಾಗನ ಮಗನೇ ಕಾಲಾಶೋಕ. ಈ ಕಾಲಾಶೋಕ ಅಥವಾ ಕಾಕವರ್ಣ. ಕಾಲಾಶೋಕ, ತನ್ನ ರಾಜಧಾನಿಯನ್ನು ಗಿರಿವ್ರಜದಿಂದ ( ರಾಜಗೃಹ) ಪಾಟಲಿಪುತ್ರಕ್ಕೆ ಬದಲಿಸಿದ. ಆದರೆ ಆಗಾಗ ಅವನು ತನಗೆ ಪ್ರಿಯವಾಗಿದ್ದ ವೈಶಾಲಿಗೆ ಹೋಗುತ್ತಿದ್ದ. ಕಾಲಾಶೋಕ ನಮಗೆ ಏಕೆ ಮುಖ್ಯನಾಗುವನೆಂದರೆ, ಇವನ ಆಳ್ವಿಕೆಯ ಸಮಯದಲ್ಲೇ ಎರಡನೇ ಬೌದ್ಧ ಸಂಗೀತಿ ವೈಶಾಲಿಯಲ್ಲಿ ನಡೆಯಿತು. ಆಗ ಬುದ್ಧನು ಪರಿನಿರ್ವಾಣ ಹೊಂದಿ ನೂರು ವರ್ಷಗಳಾಗಿದ್ದವು. ವೃಜ್ಜಿ ಗಣದ ಕೆಲವು ಬೌದ್ಧ ಸಂನ್ಯಾಸಿಗಳು ಸಂಘದ ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಗಾದೆ ತೆಗೆದಿದ್ದರು. ಅದನ್ನು ಚರ್ಚಿಸಲೆಂದೇ ಈ ಎರಡನೆಯ ಬೌದ್ಧ ಸಂಗೀತಿಯನ್ನು ನಡೆಸಲಾಯಿತು. ನಾಲ್ಕು ಬೌದ್ಧ ಸಂಗೀತಿಗಳು ನಡೆದವೆಂದು ಇಲ್ಲಿ ಸ್ಮರಿಸಬಹುದು. ಮೊದಲನೆಯದು ಅಜಾತಶತ್ರುವಿನ ಆಳ್ವಿಕೆಯಲ್ಲಿ ರಾಜಗೃಹದಲ್ಲಿ ನಡೆಯಿತು. ಎರಡನೆಯದು ಈಗ ಹೇಳಲಾಯಿತು. ಮೂರನೆಯದು ಸಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಪಾಟಲಿಪುತ್ರದಲ್ಲಿ ನಡೆದರೆ, ನಾಲ್ಕನೆಯದು ಕಾಶ್ಮೀರದಲ್ಲಿ ಕನಿಷ್ಕ ರಾಜನ ಆಳ್ವಿಕೆಯಲ್ಲಿ ನಡೆಯಿತು.‌

ಇಂಥ ಕಾಲಾಶೋಕ ದುರಂತ ಅಂತ್ಯವನ್ನು ಕಂಡನು! ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ, ಕಾಲಾಶೋಕನ ರಾಣಿಯನ್ನು ಒಮ್ಮೆ ಆಕರ್ಷಿಸಿದ! ಇವನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ! ಅವನು ರಾಣಿಯ ಪ್ರಿಯಕರನಾಗಿ ಅವಳ ಬೆಂಬಲದಿಂದ ಅರಮನೆಗೆ ಬಂದು ರಾಜನಿಗೆ ಹತ್ತಿರವಾದ. ರಾಜನ ವಿಶ್ವಾಸಗಳಿಸಿ, ಒಂದು ದಿನ, ಅವನನ್ನು ಪಾಟಲಿಪುತ್ರದ ಬಳಿ, ಅವನ ಕುತ್ತಿಗೆಯನ್ನು ಕಠಾರಿಯಿಂದ ಸೀಳಿ ಕೊಂದುಬಿಟ್ಟ! ಅನಂತರ, ಅವನ ಹತ್ತು ಪುತ್ರರಿಗೆ ಮೇಲ್ವಿಚಾರಕನಂತೆ ನಟಿಸುತ್ತಾ ಅವರೆಲ್ಲರನ್ನೂ ನಿಧಾನವಾಗಿ ಕೊಂದುಬಿಟ್ಟ! ರಾಣಿಯನ್ನು ವರಿಸಿ ರಾಜ್ಯವನ್ನು ವಶಪಡಿಸಿಕೊಂಡ! ಇವನು ಬೇರಾರೂ ಅಲ್ಲ! ಮಹಾಪದ್ಮನಂದ! ಇವನಿಗೆ ಎಂಟು ಪುತ್ರರು ಜನಿಸಿದರು! ಇವರೆಲ್ಲರೂ ಸೇರಿ ನವನಂದರೆನಿಸಿದರು ಹಾಗೂ ಇವರಿಂದ ನಂದ ವಂಶ ಆರಂಭವಾಯಿತು! ಇವರಲ್ಲಿ ಕೊನೆಯವನೇ ಧನನಂದ! ದೊಡ್ಡ ಸೈನ್ಯವನ್ನು ಇಟ್ಟುಕೊಂಡಿದ್ದ ಈ ನಂದರು ದುರಾಸೆಯ ಪ್ರವೃತ್ತಿಯುಳ್ಳವರಾಗಿದ್ದು ಪ್ರಜೆಗಳನ್ನು ಶೋಷಣೆ ಮಾಡಿದರು! ಇದರಿಂದ ಪ್ರಜೆಗಳು ಇವರನ್ನು ಇಷ್ಟಪಡಲಿಲ್ಲ. ಮುಂದೆ, ಆಚಾರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಸಹಾಯದಿಂದ ಇವರ ದುರಾಡಳಿತವನ್ನು ಕೊನೆಗೊಳಿಸಿ, ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಸ್ಥಾಪಿಸುವುದರ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಆರಂಭಿಸಿದನು. ಅದು ಇನ್ನೊಂದು ರೋಚಕ ಕಥೆ.

ಇದು ಬೌದ್ಧ,ಜೈನ ಗ್ರಂಥಗಳು ಹಾಗೂ ನಮ್ಮ ಪುರಾಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಕಂಡುಬರುತ್ತದೆ. ನಮ್ಮ ಪುರಾಣಗಳಲ್ಲಿ ಶಿಶುನಾಗ ಮತ್ತು ಕಾಕವರ್ಣ ( ಕಾಲಾಶೋಕ) ರನ್ನು ಬಿಂಬಿಸಾರ, ಅಜಾತಶತ್ರುಗಳಿಗೂ ಮೊದಲಿನವರೆಂದು ಹೇಳಲಾಗಿದ್ದು ಈ ಪಟ್ಟಿಯಲ್ಲಿ ಕೊನೆಯದಾಗಿ ನಂದಿವರ್ಧನ ಮತ್ತು ಮಹಾನಂದಿ ಎಂಬ ರಾಜರು ಬರುತ್ತಾರೆ. ಮಹಾನಂದಿಯು ಒಬ್ಬ ಶೂದ್ರ ಸ್ತ್ರೀಯಿಂದ ಪಡೆದ ಪುತ್ರನೇ ಮಹಾಪದ್ಮಪತಿ ಅಥವಾ ಮಹಾಪದ್ಮನಂದ. ಅವನು ಎಲ್ಲಾ ಕ್ಷತ್ರಿಯರನ್ನೂ ನಾಶಮಾಡಿ ನಂದವಂಶವನ್ನು ಆರಂಭಿಸಿದ. ಜೈನ ಗ್ರಂಥ ಪರಿಶಿಷ್ಟ ಪರ್ವದ ಪ್ರಕಾರ, ಮಹಾಪದ್ಮನಂದನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ. ಕುರ್ಟಿಯಸ್ ಎಂಬ ಗ್ರೀಕ್ ಇತಿಹಾಸಕಾರನೂ ಅವನು ಒಬ್ಬ ಕ್ಷೌರಿಕ ಎಂದು ಹೇಳುತ್ತಾ ಮೇಲಿನ ಕಥೆ ಕೊಡುತ್ತಾನೆ. ಬೌದ್ಧ ಗ್ರಂಥ ಮಹಾವಂಶದ ಪ್ರಕಾರ, ಅವನು ಉಗ್ರಸೇನನೆಂಬ ಗಡಿಯಲ್ಲಿನ ಕಳ್ಳರ ದೊರೆಯಾಗಿದ್ದು ರಾಜ್ಯಗಳ ಮೇಲೆ ಆಕ್ರಮಣ ಮಾಡುತ್ತಾ ಅವುಗಳನ್ನು ಕಿತ್ತುಕೊಳ್ಳುತ್ತಿದ್ದ. ಹಾಗೆಯೇ ಮಗಧವನ್ನೂ ಆಕ್ರಮಿಸಿ ವಶಪಡಿಸಿಕೊಂಡ. ಇತರ ಎಂಟು ನಂದರು ಅವನ ಸಹೋದರರು. ‌ಹೀಗೆ ನವನಂದರ ಬಗ್ಗೆ ಪುರಾಣಗಳು, ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಾಣಭಟ್ಟನ ಹರ್ಷಚರಿತೆಯಲ್ಲಿ ಕಾಲಾಶೋಕ ಅಥವಾ ಕಾಕವರ್ಣನು ಕಠಾರಿಯ ಇರಿತದಿಂದ ಸತ್ತ ಉಲ್ಲೇಖವಿದೆ. ಅವಂತಿಯ ಪ್ರದ್ಯೋತನು ಬಿಂಬಿಸಾರನ ಸಮಕಾಲೀನನಾಗಿದ್ದು ಪ್ರದ್ಯೋತರೆಂಬ ವಂಶಾವಳಿಯನ್ನು ಆರಂಭಿಸಿದ.‌ ಇವನಿಗೂ ಬಿಂಬಿಸಾರನಿಗೂ ವೈರತ್ವವಿತ್ತು. ಅಂದರೆ ಮಗಧಕ್ಕೂ ಅವಂತಿಗೂ ವೈರತ್ವವಿತ್ತು. ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ವಶಪಡಿಸಿಕೊಂಡನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಅದೇ ಪುರಾಣಗಳ ಪ್ರಕಾರ ಅವನು ಬಿಂಬಿಸಾರನಿಗೂ ಪೂರ್ವದಲ್ಲಿದ್ದಿದ್ದರೆ ಹಾಗೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ, ಅವನು ಮತ್ತು ಅವನ ಪುತ್ರ ಕಾಲಾಶೋಕ, ಬಿಂಬಿಸಾರ, ಅಜಾತಶತ್ರುಗಳ ನಂತರ ಇರುವ ಬೌದ್ಧ ಗ್ರಂಥಗಳ ಪಟ್ಟಿಯೇ ಹೆಚ್ಚು ಸಮರ್ಪಕ ಎಂದು ಇತಿಹಾಸಕಾರರಾದ ಆರ್.ಸಿ.ಮಜುಂದಾರರು ಅಭಿಪ್ರಾಯಪಡುತ್ತಾರೆ.

ಹೀಗೆ ಕಾಲಾಶೋಕ ನಮಗೆ ಅಷ್ಟು ಪರಿಚಿತವಲ್ಲದ ಹೆಸರು. ಅವನ ಹೆಂಡತಿಯ ಮೋಸದಿಂದ ಅವಳ ಪ್ರಿಯಕರ ಮಹಾಪದ್ಮನಂದನಿಂದ ಕೊಲ್ಲಲ್ಪಟ್ಟ ಅವನಿಂದ ಶಿಶುನಾಗ ವಂಶ ಕೊನೆಯಾಗಿ ನಂದವಂಶ ಆರಂಭವಾಯಿತು.


  • ಬಿ ಆರ್ ಸುಹಾಸ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW