‘ಅರಳಿದ ಕಾವ್ಯದ ಮೊಗ್ಗು’ ಕೃತಿ ಪರಿಚಯ

ಹಳಿಯಾಳದ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಸುರೇಶ ಜಿ ಕಡೇಮನಿಯವರ ಎರಡನೇ ಕೃತಿ ‘ಮೊಗ್ಗೊಂದು ಅರಳಿದಾಗ’ ಹೈಕುಗಳು ಮತ್ತು ಹನಿಗವನ ಸಂಕಲನದ ಕುರಿತು ದೀಪಾಲಿ ಸಾಮಂತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ಮೊಗ್ಗೊಂದು ಅರಳಿದಾಗ
ಪ್ರಕಾರ : ಹೈಕುಗಳು ಮತ್ತು ಹನಿಗವನ ಸಂಕಲನ
ಲೇಖಕರು : ಸುರೇಶ ಜಿ ಕಡೇಮನಿ
ಪ್ರಕಾಶಕರು : ಜೈ ಜವಾನ್ ಜೈ ಕಿಸಾನ್ ಪ್ರಕಾಶನ ಸವದತ್ತಿ

ಹೈಕುಗಳು ಒಂದು ಜಪಾನಿ ಸಾಹಿತ್ಯ ಪ್ರಕಾರವಾಗಿದ್ದು  ಕೇವಲ  5-7-5 ರಂತೆ ಹದಿನೇಳು ಅಕ್ಷರದ ಮೂರು ಸಾಲಿನಲ್ಲಿ  ಚುಟುಕಾಗಿ  ಹೇಳಬೇಕಾದ ವಿಷಯ  ಪ್ರಸ್ತುತಪಡಿಸುವುದು.  ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲೂ ಹುಲುಸಾಗಿ ಬೆಳೆಯುತ್ತಿದೆ. ಹಾಗೂ ಹನಿಗವನಗಳು ಯಾವುದೇ ಪ್ರಾಸದ  ಕಟ್ಟುಪಾಡುಗಳಿಲ್ಲದ ಅರ್ಥಪೂರ್ಣವಾದ   ಕಿರಿದಾದ ಕಾವ್ಯ ಪ್ರಕಾರವಾಗಿದೆ. ಇಂತಹ ಒಟ್ಟು 255 ‌ಹೈಕುಗಳು ಹಾಗೂ 232 ಹನಿಗವನಗಳನ್ನು ಒಳಗೊಂಡ ಪ್ರಸ್ತುತ ಕೃತಿಯಲ್ಲಿ ದೇಶಪ್ರೇಮ ,ಪ್ರಕೃತಿ, ಸಮಾಜದಲ್ಲಿ ಕಾಣುವ ತಪ್ಪು ಒಪ್ಪುಗಳು ಹಾಗೂ ಆಧುನಿಕತೆಯ ಅಮಲೇರಿಸಿಕೊಂಡ ಯುವಜನತೆಯ ನಡವಳಿಕೆಗಳನ್ನು ನಿರ್ದಾಕ್ಷಿಣ್ಯ ಬರಹದ ಮೂಲಕ ಖಂಡಿಸಿದ್ದಾರೆ. ಉತ್ತಮ ಮಾರ್ಗದರ್ಶನದ ನುಡಿಗಳನ್ನೂ ಅಡಕಗೊಳಿಸುವ ಸಂದೇಶಗಳನ್ನು  ಸಾರುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಈ ಕೃತಿಗೆ ಉಪನ್ಯಾಸಕ ಬಸವರಾಜ ಜಗಜಂಪಿಯವರು ಮುನ್ನುಡಿ ಬರೆದು ಹಾರೈಸಿದರೆ ಆನಂದ ಬಿಂಗೆಯವರು ಬೆನ್ನುಡಿ ಬರೆದು ಇವರ ಸಾಹಿತ್ಯ ಕೃಷಿಗೆ ಇನ್ನಷ್ಟು ಬಲ ತುಂಬಿದ್ದಾರೆ.

ಸಿದ್ಧನಾಗುವ,ತನ್ನ ತಾನರಿತೊಡೆ ,ಮುಕ್ತನಾಗುವ/ ಹೈಕುವಿನಲ್ಲಿ   ತನ್ನನ್ನು ತಾನು ಮೊದಲು ಅರಿತುಕೊಳ್ಳಬೇಕು. ಆಗ ಮಾತ್ರ ಸಾಧಕನಾಗಲು ಸಾಧ್ಯ ಮತ್ತು ಎಲ್ಲ ಬಂಧನದಿಂದ ಮುಕ್ತನಾಗಲು ಸಾಧ್ಯವೆಂಬ ಮಾತು ಧ್ವನಿಸಿದ್ದಾರೆ.

ನಾನು ಬಡವ, ನನ್ನ ಶುಭಹಾರೈಕೆ, ಬಡವಾಗದು/ ಹೈಕು ತುಂಬಾ ಸರಳವಾಗಿ ಮನಸ್ಸಿನ ಸಿರಿವಂತಿಕೆ ದೊಡ್ಡದು ಎಂಬ ನಿತ್ಯ ಸತ್ಯವನ್ನು ಸಾರುವಂತಿದೆ.
ಬರೆಯುತಿರೆ, ಭಾಷೆ ಬೆಳೆಯುವುದು, ಹೆಮ್ಮರದಂತೆ/ ಹೈಕುವಿನಲ್ಲಿ ಕವಿಯ ಭಾಷಾ ಪ್ರೇಮ ಸ್ಪುರಿಸುತ್ತದೆ.

ಎಲ್ಲೆಡೆ ನಾನು, ಇರಬೇಕೆಂಬುದಕ್ಕೆ ,ಸೆಲ್ಫಿಯೇ ಸಾಕ್ಷಿ/ ಹೈಕುವಿನ ಮೂಲಕ ಯುವಜನತೆಯ ಸೆಲ್ಫಿ ಗೀಳನ್ನು ಉದಾರೀಕರಿಸಿದ್ದಾರೆ. ನಮ್ಮಲ್ಲಿರುವ, ಅಹಂಕಾರವೇ ನಮ್ಮ,ಕೇಡಿನ ಮೂಲ/ಈ ಸಾಲುಗಳು ಅಹಂನಿಂದ ನಮ್ಮದೇ ವಿನಾಶಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಭಾವ ಸೂಸುತ್ತವೆ.

ಅಮೃತಧಾರೆ, ಕನ್ನಡ ಕವಿ ಕಾವ್ಯ, ಸುಜ್ಞಾನ ಸುಧೆ/ ಸಾಲುಗಳು ಕವಿಯ ಕನ್ನಡ ಪ್ರೀತಿಗೆ ಕನ್ನಡಿಯಾಗಿವೆ.
ಒಟ್ಟಾರೆಯಾಗಿ ಈ ಕೃತಿಯಲ್ಲಿ ಮೂಡಿಬಂದ ಎಲ್ಲ ಹೈಕುಗಳು ಉತ್ತಮವಾಗಿ ಹಾಗೂ ಸೊಗಸಾಗಿವೆ.

ಇವರ ಹನಿಗವನಗಳು ಜೀವನದ ಎಲ್ಲ ಮಜಲುಗಳನ್ನು ಬಿಂಬಿಸುವ ಸದ್ವಿಚಾರಗಳ ಭಂಡಾರದಂತಿವೆ. ಅವುಗಳಲ್ಲಿ ಕೆಲವು ಆಪ್ತವೆನಿಸಿದ್ದು ಸದಾ ಓದುಗನ ಮನದಂಗಳದಲ್ಲಿ ನಿಲ್ಲುವಂತಿವೆ.

ಅನ್ನವೇ ಔಷಧವಾಗಬೇಕು,
ಪ್ರೀತಿಯೇ ಉಸಿರಾಗಬೇಕು,
ಸಹನೆಯೇ ಶಕ್ತಿಯಾಗಬೇಕು,
ವಿರಕ್ತಿಯೇ ಮುಕ್ತಿಯ ಮಾರ್ಗವಾಗಬೇಕು //

ಈ ಹನಿಗವನದಲ್ಲಿ  ಉತ್ತಮ ಆಹಾರ ಆರೋಗ್ಯ ತರುವುದು , ಪ್ರೀತಿಯ ನಡೆನುಡಿಗಳು ಜೀವನದ ನಾಲ್ಕು ದಿನ ಹೆಚ್ಚಿಸುವುದು ಹಾಗೆಯೇ ಸಹನೆಯಿಂದ ಎಂಥಹ ಕಷ್ಟ ಬಂದರೂ ಸಹಿಸುವ ಶಕ್ತಿ ಮೈಗೂಡುವುದು ಏನನ್ನೂ ಬಯಸದೇ ವಿರಕ್ತಿ ಹೊಂದಿದಲ್ಲಿ ಮುಕ್ತಿಯ ಮಾರ್ಗ ದೊರಕುವುದು ಎಂಬ ಅದ್ಭುತವಾದ ಜೀವನ ಪಾಠವನ್ನು  ಸಾರಿದ್ದಾರೆ.

ಜೀವನ ಒಂದು ಪರೀಕ್ಷೆಯಿದ್ದಂತೆ,
ಪ್ರಶ್ನೆಗಳನ್ನೆಲ್ಲ ಉತ್ತರಿಸಬೇಕಿಲ್ಲ,
ಆಯ್ದ ಪ್ರಶ್ನೆಗಳಿಗೆ ಕೊಟ್ಟ ಉತ್ತರ,
ಏನೆಲ್ಲವನ್ನೂ ಒಳಗೊಂಡಿರಬೇಕು//

ಈ ಸಾಲುಗಳಲ್ಲಿ ಕವಿಯ ಭಾಷಾ ಪ್ರೌಢಿಮೆಯನ್ನು ಕಾಣಬಹುದು. ಬದುಕಿನಲ್ಲಿ  ವಿವಿಧ ಪರೀಕ್ಷೆಗಳು ಎದುರಾಗುತ್ತವೆ ಆದರೂ ಎಲ್ಲವನ್ನೂ ಸುಲಲಿತವಾಗಿ ಪಾರುಗುತ್ತೇವೆ ಎನ್ನುವುದು ಕಷ್ಟ. ಆದರೆ ಸಿಕ್ಕ ಅವಕಾಶ ಬಳಸಿ ಕಷ್ಟ ನಷ್ಟಗಳ ಅರಿವು ಒಳಿತು ಕೆಡುಕಿನ ಜ್ಞಾನ ಹೊಂದುವುದು ಬಹುಮುಖ್ಯವಾಗುತ್ತದೆ ಎಂಬ ಆಶಯ  ಈ ಹನಿಗವನದಲ್ಲಿ ಬಿಂಬಿತವಾಗಿದೆ.

ಮನುಷ್ಯರೆಲ್ಲ ಬರಿದಾದರೆ ,
ಭೂಮಿಗೇನೂ ಚಿಂತೆಯಿಲ್ಲ ,
ಭೂಮಿ ಬರಿದಾದರೆ
ಮನುಷ್ಯ ಬದುಕುವಂತಿಲ್ಲ //

ಈ ಹನಿಗವನದಲ್ಲಿ ಮಾನವನ ಕುಕೃತ್ಯಗಳಿಂದ ಭೂಮಿಯ ವಿನಾಶ ಸ‌ನ್ನಿಹಿತವಾಗುತ್ತಿದೆ. ಜೀವಿಗಳು ಅಳಿದರೆ ಭೂಮಿ ತನ್ನ ಪಾಡಿಗೆ ತಾನಿರುವುದು ಖಚಿತ ಆದರೆ ಜೀವನಕ್ಕೆ ಆಸರೆಯಾದ ಭೂಮಿಯೇ ಅಳಿದರೆ  ಮನುಷ್ಯನ ಬದುಕು ಅನಿಶ್ಚಿತ. ಹಾಗಾಗಿ ಈ ಭೂಮಿ ಹಾಗೂ ಪ್ರಕೃತಿಯ ರಕ್ಷಣೆಗಾಗಿ ಮನುಜ ನಿಲ್ಲಲೇ ಬೇಕಾಗಿದೆ. ಇದರಲ್ಲಿಯೇ ನಮ್ಮ ಒಳಿತು ಅಡಗಿದೆ ಎಂಬ ಸಂದೇಶವನ್ನು ಜಗಕ್ಕೆ ನೀಡಿದ್ದಾರೆ.

ಹೀಗೆ ಹತ್ತು ಹಲವು ವಿಚಾರಗಳನ್ನು  ತಮ್ಮ ಕಾವ್ಯ ವಸ್ತುವಾಗಿ‌ಸಿದ  ಅರ್ಥಪೂರ್ಣ ಹನಿಗವನಗಳು  ಕವಿಯ ಲೇಖನಿಯಿಂದ ಮೂಡಿಬಂದಿವೆ. ಆದರೆ ಹನಿಗವನಗಳಿಗೆ  ಶೀರ್ಷಿಕೆ ನೀಡಿದ್ದರೆ  ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ. ಒಟ್ಟಾರೆಯಾಗಿ ಈ ಕೃತಿಯು ಓದುಗನ ಮನದಲ್ಲಿ  ಛಾಪು ಮೂಡಿಸಬಲ್ಲದು ಎಂದು ಹೇಳಬಹುದಾಗಿದೆ. ಇಂತಹ ಇನ್ನೂ ಹತ್ತಾರು ಕೃತಿಗಳು ಸುರೇಶ ಜಿ ಕಡೇಮನಿಯವರು ರಚಿಸುವಂತಾಗಲಿ , ತನ್ಮೂಲಕ ಇವರ ಹೆಸರು ಸಾಹಿತ್ಯ ಲೋಕದಲ್ಲಿ ಸ್ಥಾಯಿಯಾಗಲಿ ಎಂಬ ಸದಾಶಯ ದೊಂದಿಗೆ


  • ದೀಪಾಲಿ ಸಾಮಂತ, ದಾಂಡೇಲಿ.

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading