ಅರಳಿರುವ ಚಂದಿರನ ತುಣುಕಿವಳ ಸುರವದನ, ಅವಳೆದುರು ನಾನೊಂದು ದುಂಡು ಸೊನ್ನೆ… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಸವಿನಗುವ ಸೂಸುತಲಿ ಅವಳೆದುರು ಬಂದಾಗ
ಹೂವರಳಿ ಬಂದಂತೆ ಕಂಪು ಚೆಲ್ಲಿ
ಕವಿಕಣ್ಣ ನೋಟದೊಳು ಕೆಂಪು ಕೆನ್ನೆಯ ಚೆನ್ನೆ
ಭಾವವಾದಳು ನಲ್ಲೆ ಮನಸಿನಲ್ಲಿ
ಇರುಳಿಳಿದ ಬಾನಿನೊಳು ಬೆಳದಿಂಗಳಿಳಿದಂತೆ
ಅವಳಂದ ಬಲುಚಂದ ಚಂದಚನ್ನೆ
ಅರಳಿರುವ ಚಂದಿರನ ತುಣುಕಿವಳ ಸುರವದನ
ಅವಳೆದುರು ನಾನೊಂದು ದುಂಡು ಸೊನ್ನೆ
ಎದೆಬನವ ಹದಗೊಳಿಸಿ ಪ್ರೀತಿ ಧಾನ್ಯವ ಬಿತ್ತಿ
ಒಲವೆರೆದು ಪೋಷಿಸುವ ಇನಿಯಳಿವಳು
ನದಿಕಡಲನರಸುತಲಿ ಬಿರುಸಿನೊಳು ಹರಿವಂತೆ
ಎನ್ನೆದೆಯಲನುದಿನವು ಬೆರೆಯುವವಳು
ಅವಳಿರದ ಗಳಿಗೆಗಳು ವಿರಹದೊಳಗುರಿದಂತೆ
ತಾಪಕೂಪದಲೆನ್ನನದ್ದಿದಂತೆ
ಅವಳಿರುವಿನಂಗಳವೆ ಸವಿಸಗ್ಗವಿಳಿದಂತೆ
ಅವಳ ಧ್ಯಾನದಿ ಮೈಯ್ಯ ಮರೆತೆನಂತೆ.
- ಚನ್ನಕೇಶವ ಜಿ ಲಾಳನಕಟ್ಟೆ
